"ಕಣ್ಣೀರಜ್ಜ ಮತ್ತು ಇತರ ಕಥೆಗಳು" ಸಂಕಲನ ಲೋಕಾರ್ಪಣೆ

"ಕಣ್ಣೀರಜ್ಜ ಮತ್ತು ಇತರ ಕಥೆಗಳು" ಸಂಕಲನ ಲೋಕಾರ್ಪಣೆ

ಕನ್ನಡ ಬ್ಲಾಗ್ ಲೋಕದಲ್ಲಿ ತಮ್ಮ ನವಿರುಹಾಸ್ಯದಿಂದ ಕೂಡಿದ ಸಣ್ಣಕಥೆ, ಲೇಖನ, ಪ್ರಹಸನಗಳಿಂದ ಚಿರಪರಿಚಿತರಾಗಿರುವ ಗಿರೀಶ್ ಜಮದಗ್ನಿ ಅವರ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಸಣ್ಣಕಥಾ ಸಂಕಲನ ನವೆಂಬರ್ 9, ಶನಿವಾರ ಸಿಂಗಪುರದಲ್ಲಿ ಲೋಕಾರ್ಪಣೆಗೊಂಡಿತು.

ಮಾನವ ಸಂಬಂಧಗಳು, ತುಮುಲಗಳು, ಗೊಂದಲಗಳು, ಅನಿಶ್ಚಿತತೆಗಳು ಮತ್ತು ವಿಷಮ ಸ್ಥಿತಿಯಲ್ಲಿ ಎದುರಿಸಬೇಕಾದ ವಿಪರೀತ ಪರಿಸ್ಥಿತಿಗಳನ್ನು ಸಮರ್ಥವಾಗಿ ಬಿಂಬಿಸುವ 13 ಕಥೆಗಳನ್ನು ಒಳಗೊಂಡ ಸಂಕಲನವನ್ನು ಕನ್ನಡದ ಖ್ಯಾತ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಬಿಡುಗಡೆ ಮಾಡಿದರು.

ಸ್ಪ್ರಿಂಗ್ ಸಿಂಗಪುರ ಸಭಾಂಗಣದಲ್ಲಿ ಸಂಜೆ 5ರಿಂದ 9ರವರೆಗೆ ನಡೆದ ಗಾಯನ, ಹಾಸ್ಯ ಹಾಗೂ ಭಾವಗೀತೆಗಳ ಸಮ್ಮಿಲನ 'ಭಾವ ಸುಧೆ ದೀಪೋತ್ಸವ - 2013' ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಖ್ಯಾತ ಚುಟುಕು ಕವಿ ದುಂಡಿರಾಜ್ ಮತ್ತು ಪ್ರೇಮ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಾಸನಾ ಮೋಹನ್ ಅವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಿರೀಶ್ ಜಮದಗ್ನಿ ಕುರಿತು : ಮೂಲತಃ ಹಾಸನದವರಾಗಿರುವ ಗಿರೀಶ್ ಜಮದಗ್ನಿ ಅವರು ತೈಲ ಉದ್ಧರಣ ಮತ್ತು ಶುದ್ಧೀಕರಣ ಕ್ಷೇತ್ರದಲ್ಲಿ ಇನ್‌ಸ್ಟ್ರುಮೆಂಟೇಷನ್ ವಿಭಾಗದಲ್ಲಿ ಪರಿಣತಿಯನ್ನು ಪಡೆದಿದ್ದು, ಸಿಂಗಪುರದಲ್ಲಿ 2004ರಿಂದ ವಾಸಿಸುತ್ತಿದ್ದಾರೆ.

ಇನ್‌ಸ್ಟ್ರುಮೆಂಟೇಷನ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಅವರು, ಮುಂಬೈನಲ್ಲಿ 8 ವರ್ಷಗಳ ಕಾಲ ದುಡಿದು, ನಂತರ ಬೆಂಗಳೂರಿನಲ್ಲಿ ಕೂಡ ಕೆಲ ಕಾಲ ಇದ್ದು, ಆಮೇಲೆ ಸೀಮೋಲ್ಲಂಘನ ಮಾಡಿ ಸಿಂಗಪುರಕ್ಕೆ ತೆರಳಿದರು.

ಕನ್ನಡ ಸಂಘ (ಸಿಂಗಪುರ)ದ ಮಾಸಪತ್ರಿಕೆ "ಸಿಂಚನ"ದ ರೂವಾರಿಗಳಲ್ಲೊಬ್ಬರಾದ ಇವರು ಪ್ರಸ್ತುತ ಅದರ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಸಂಘ(ಸಿಂಗಪುರ) ಆಯೋಜಿಸುವ ಹಲವಾರು ಕನ್ನಡಪರ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸುಕೊಳ್ಳುತ್ತಾರೆ.

ಸಣ್ಣಕಥೆಗಳಲ್ಲದೆ, ಕವನ, ಪ್ರಹಸನ, ಭಕ್ತಿಗೀತೆ, ನಾಟಕ, ಲಘು ಲೇಖನಗಳನ್ನು ಗಿರೀಶ್ ಜಮದಗ್ನಿ ಬರೆದಿದ್ದಾರೆ. ಒನ್ಇಂಡಿಯಾ ಕನ್ನಡದಲ್ಲಿ ಗಿರೀಶ್ ಅವರ 'ಅಪಶಕುನಿಗಳು', 'ಹಂಡೆಯ ಹಗರಣ' ಹಾಸ್ಯ ಲೇಖನ ಸೇರಿದಂತೆ ಹಲವಾರು ಲೇಖನಗಳು ಪ್ರಕಟವಾಗಿವೆ. ಬರವಣಿಗೆಯ ಜೊತೆಗೆ ಫೋಟೋಗ್ರಫಿ, ಶಾಸ್ತ್ರೀಯ ಸಂಗೀತ, ನಾಟಕ ರಚನೆ, ನಟನೆ, ನಿರ್ದೇಶನದಲ್ಲಿಯೂ ತೊಡಗಿಕೊಂಡಿದ್ದಾರೆ.

ಪುಸ್ತಕ ಎಲ್ಲಿ ಲಭ್ಯ? : ಬೆಂಗಳೂರು ಜಯನಗರ 4ನೇ ಬಡಾವಣೆಯಲ್ಲಿರುವ 'ಟೋಟಲ್ ಕನ್ನಡ' ಪುಸ್ತಕ ಮಳಿಗೆಯಲ್ಲಿ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಲಭ್ಯ. ವಿಳಾಸ : ನಂ.638, 31ನೇ ಅಡ್ಡರಸ್ತೆ, 10ನೇ ಬಿ ಮುಖ್ಯರಸ್ತೆ, ಜಯನಗರ 4ನೇ ಬಡಾವಣೆ, ಬೆಂಗಳೂರು - 560 011. ವೆಬ್ ಸೈಟ್ : www.totalkannada.com. ಇದರ ಬೆಲೆ ಕೇವಲ 125 ರು.ಗಳು.

Comments

Submitted by nageshamysore Tue, 11/19/2013 - 18:13

ಗಿರೀಶ್ ರವರೆ,

ಸಿಂಗಪುರದಲ್ಲಿರುವುದರಿಂದ ಆ ಬಿಡುಗಡೆಯ ಸಮಾರಂಭದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೂ ಸಿಕ್ಕಿತು. ತಮ್ಮ ಮೊದಲ ಪುಸ್ತಕದ ಸಾಹಸಕ್ಕೆ ಮತ್ತೊಮ್ಮೆ ಅಭಿನಂದನೆಗಳು! ಹೊರನಾಡಿನಿಂದಲೆ ಕನ್ನಡ ಬಾವುಟ ಹಾರಾಡಿಸುತ್ತಿರುವ ನಿಮ್ಮ ಅಭಿಮಾನಕ್ಕೆ ನಮನಗಳು ಕೂಡ. ನಿಮ್ಮ ಪುಸ್ತಕಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಗಲೆಂದು ಮತ್ತೆ ಹಾರೈಸುವೆ :-)

ಧನ್ಯವಾದಗಳೊಂದಿಗೆ 
-ನಾಗೇಶ ಮೈಸೂರು

Submitted by girish_jamadagni Wed, 11/20/2013 - 09:43

In reply to by nageshamysore

ನಾಗೇಶ್ ಅವರೇ, ಧನ್ಯವಾದಗಳು. ಪುಸ್ತಕ ಬರೆದು, ಪ್ರಕಟಿಸುವುದು ಒಂದು ಸಾಹಸವೇ ಸರಿ. ಪುಸ್ತಕಕ್ಕೆ ಇದುವರೆಗೂ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಸಿಗೋಣ, ಗಿರೀಶ್ ಜಮದಗ್ನಿ

Submitted by H A Patil Tue, 11/19/2013 - 18:47

ಗಿರೀಶ ಜಮದಗ್ನಿ ಯವರಿಗೆ ವಂದನೆಗಳು
ಮಾನ್ಯರೆ ' ಕಣ್ಣೀರಜ್ಜ ಮತ್ತು ಇತರ ಕಥೇಗಳು ' ಕೃತಿಯ ಲೋಕಾರ್ಪಣೆಯ ಕುರಿತಾದ ಲೇಖನ ಓದಿ ಸಂತಸವಾಯಿತು. ಹೊರ ನಾಡಲ್ಲಿದ್ದರೂ ಕನ್ನಡದ ಬಗೆಗಿನ ತಮ್ಮ ಕಾಳಜಿ ಕನ್ನಡ ಬರವಣಿಗೆಯ ಹವ್ಯಾಸ ಮೆಚ್ಚುವಂತಹವು, ಇದೇ ರೀತಿ ತಮ್ಮ ಕನ್ನಡ ಕೈಂಕರ್ಯ ಮುಂದವರಿಯಲಿ ಧನ್ಯವಾದಗಳು.

ಹೆಚ್. ಎ. ಪಾಟೀಲ್ ಅವರೇ, ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ, ಉತ್ತೇಜನ ಹೀಗೇ ಇರಲಿ. ವಿಶ್ವಾಸದಿಂದ - ಗಿರೀಶ್ ಜಮದಗ್ನಿ