ಕಣ್ಣುಗಳು ಬಣ್ಣವನ್ನು ಹೇಗೆ ಗುರುತಿಸುತ್ತವೆ?

ಕಣ್ಣುಗಳು ಬಣ್ಣವನ್ನು ಹೇಗೆ ಗುರುತಿಸುತ್ತವೆ?

ಮಾನವನ ಅಂಗಾಂಗಗಳ ಪೈಕಿ ಅತ್ಯಂತ ಅಮೂಲ್ಯವೂ, ವಿಶಿಷ್ಟವೂ ಆದ  ಅಂಗವೆಂದರೆ ನಮ್ಮ ಕಣ್ಣುಗಳು. ಕಣ್ಣಿನ ರಚನೆ ಬಹಳ ಸಂಕೀರ್ಣವಾದದ್ದು. ಹಲವು ಮಂದಿಗೆ ಕಣ್ಣುಗಳಿದ್ದರೂ ಅದಕ್ಕೆ ದೃಷ್ಟಿಯ ಭಾಗ್ಯ ಇರುವುದಿಲ್ಲ. ಕಣ್ಣಿನ ಒಳಗಿನ ರಚನೆ ಅಥವಾ ನರಗಳ ಸಮಸ್ಯೆಯಿಂದ ಅವರಿಗೆ ಕಣ್ಣು ಕಾಣಿಸುವುದಿಲ್ಲ. ನಮ್ಮ ಕಣ್ಣು ಬಣ್ಣಗಳನ್ನು ಹೇಗೆ ಗುರುತಿಸಿಕೊಳ್ಳುತ್ತದೆ? ಕೆಲವರಿಗೆ ಬಣ್ಣಗಳ ಅಂಧತ್ವ ಏಕೆ ಉಂಟಾಗುತ್ತದೆ? ಎಂಬ ವಿಷಯವನ್ನು ನಾವು ತಿಳಿದುಕೊಳ್ಳೋಣ.

ಕಣ್ಣಿನ ರೆಟಿನಾ ಎಂಬ ಅಂಗವು ಸಣ್ಣ ಕೋಶಗಳಾದ ರಾಡ್ಸ್ ಮತ್ತು ಕೋನ್ಸ್ ಗಳಿಂದ ರಚನೆಯಾಗಿದೆ. ಈ ಕೋಶಗಳಲ್ಲಿ ಬಣ್ಣಗಳ ರಚನೆಯಿದ್ದು ಅದು ಬೆಳಕು ಬಿದ್ದಾಗ ಪ್ರತಿಕ್ರಿಯೆ ನೀಡುತ್ತದೆ. ನೀವು ಗಮನಿಸಬಹುದಾದ ಸಂಗತಿ ಎಂದರೆ ಕತ್ತಲಿನಲ್ಲಿ ನಮಗೆ ಯಾವುದೇ ವಸ್ತುಗಳ ಬಣ್ಣ ಕಾಣಿಸುವುದಿಲ್ಲ. ಬೆಳಕು ಆ ವಸ್ತುಗಳ ಮೇಲೆ ಬಿದ್ದಾಗ ಮಾತ್ರ ನಮಗೆ ಬಣ್ಣಗಳ ಅರಿವಾಗುತ್ತದೆ. ಇದರ ಪರಿಣಾಮ ನಮ್ಮ ನರಕೋಶದಲ್ಲಿ ವಿದ್ಯುತ್ ಕಿಡಿ (ಇಂಪಲ್ಸ್) ಉತ್ಪತ್ತಿಯಾಗುತ್ತದೆ. ಇದರಿಂದಾಗಿ ನಮಗೆ ಬಣ್ಣಗಳ ಅರಿವಾಗುತ್ತದೆ.

ರಾಡ್ಸ್ ಗಳು ತೆಳ್ಳಗಿನ ಕೋಶಗಳಾಗಿದ್ದು ಕಪ್ಪು-ಬಿಳುಪು ಬಣ್ಣ ಗುರುತಿಸಲು ಸಹಕಾರಿಯಾಗಿದೆ. ಬೆಳಕು ತುಂಬಾ ಕ್ಷೀಣವಾದ ಪ್ರಮಾಣದಲ್ಲಿದ್ದರೂ ಇವು ಸಕ್ರಿಯವಾಗಿದ್ದು ಕಪ್ಪು ಬಿಳುಪು ವರ್ಣದಲ್ಲಿ ಬಣ್ಣವನ್ನು ಗುರುತಿಸುತ್ತದೆ. ಹಾಗಾಗಿ ನಮಗೆ ಕತ್ತಲಿನಲ್ಲೂ ಸ್ವಲ್ಪ ಮಟ್ಟಿಗೆ ಕಣ್ಣು ಕಾಣಿಸುತ್ತದೆ. 

ಕೋನ್ ಕೋಶಗಳು ಬಣ್ಣವನ್ನು ಗುರುತಿಸಲು ನೆರವಾಗುತ್ತವೆ. ಇವು ವಿವಿಧ ಬಗೆಯ ಬೆಳಕಿನ ಗ್ರಹಣ ಶಕ್ತಿಯನ್ನು ಹೊಂದಿರುವ ತಂತುಗಳನ್ನು ಹೊಂದಿವೆ. ಕೆಂಪು, ಹಸಿರು, ನೀಲಿ ಮತ್ತು ನೇರಳೆ ಬಣ್ಣ ಗುರುತಿಸಲು ಈ ಕಣಗಳು ಸಹಕಾರಿ. ರಾಡ್ ಗಳ ಜೊತೆಗೆ ಕೋನ್ ಕೋಶಗಳ ಸಹಯೋಗದಿಂದ ನಾವು ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಕೋನ್ ಕೋಶಗಳು ಬೆಳಕಿರುವಾಗ ಮಾತ್ರ ಕಾರ್ಯನಿರ್ವಹಿಸುವುದರಿಂದ ನಮಗೆ ಕತ್ತಲಿನಲ್ಲಿ ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ನಮ್ಮ ಕಣ್ಣಿನಲ್ಲಿ ೧೨೫ ಮಿಲಿಯನ್ ರಾಡ್ ಕೋಶಗಳು ಹಾಗೂ ೭ ಮಿಲಿಯನ್ ಕೋನ್ ಕೋಶಗಳಿರುತ್ತವೆ.

ರಾಡ್ಸ್ ಮತ್ತು ಕೋನ್ ಕೋಶಗಳು ನರಮಂಡಲದೊಂದಿಗೆ ಸಂಪರ್ಕವನ್ನು ಹೊಂದಿರುವುದರಿಂದ ನಮಗೆ ಬಣ್ಣಗಳನ್ನು ಗುರುತಿಸಲು ನೆರವಾಗುತ್ತದೆ. ಇವುಗಳ ರಚನೆ ಹೇಗಿರುತ್ತದೆ ಎಂದರೆ ನಾವು ಸಮಾರಂಭಕ್ಕೆ ಹಾಕುವ ವಿದ್ಯುತ್  ದೀಪಾಲಂಕಾರದ ಮಾದರಿಯಲ್ಲಿರುತ್ತದೆ. 

ಬಣ್ಣಗಳ ಅಂಧತ್ವ (Colour Blindness): ನಿಮಗೆ ಗೊತ್ತೇ ಇರುವಂತೆ ಬಿಳಿಯ ಬಣ್ಣವು ಏಳು ಬಣ್ಣಗಳ ಸಂಯೋಜನೆಯಿಂದ ಆಗಿದೆ. ಆ ಏಳು ಬಣ್ಣಗಳಲ್ಲಿ ಮೂರು ಪ್ರಾಥಮಿಕ ಬಣ್ಣಗಳು. ಅವುಗಳೆಂದರೆ ಕೆಂಪು, ಹಸಿರು ಅಥವಾ ಬೂದು, ನೀಲಿ ಅಥವಾ ಹಳದಿ. ನೀವು ಈ ಮೂರು ಪ್ರಾಥಮಿಕ ಬಣ್ಣಗಳ ಸಹಾಯದಿಂದ ಯಾವ ಬಣ್ಣಗಳನ್ನಾದರೂ ಪಡೆಯಬಹುದಾಗಿದೆ. ಆದರೆ ಕೆಲವರು ಈ ಬಣ್ಣಗಳನ್ನು ಗುರುತಿಸಲು ಅಸಮರ್ಥರಾಗಿರುತ್ತಾರೆ. ಈ ಕೊರತೆಯನ್ನು ಬಣ್ಣಗಳ ಅಂಧತ್ವ ಅಥವಾ ಕಲರ್ ಬ್ಲೈಂಡ್ ನೆಸ್ ಎನ್ನುತ್ತಾರೆ. 

ಕಣ್ಣಿನಲ್ಲಿರುವ ಕೋನ್ ಮತ್ತು ರಾಡ್ಸ್ ಎಂಬ ಕೋಶಗಳು ರೆಟಿನಾ ಭಾಗದಲ್ಲಿದ್ದು ಅವು ಕೆಂಪು, ಹಸಿರು, ನೀಲಿ ಮುಂತಾದ ಬಣ್ಣಗಳಿಗೆ ಸ್ಪಂದಿಸುತ್ತಾ, ಎಲ್ಲಾ ಬಣ್ಣಗಳನ್ನು ಸ್ಪಷ್ಟವಾಗಿ ನೋಡುವ ಏರ್ಪಾಡು ಮಾಡುತ್ತದೆ. ಆದರೆ ವರ್ಣಾಂಧತ್ವ ಇರುವ ವ್ಯಕ್ತಿಗಳಿಗೆ ಈ ಬಣ್ಣಗಳನ್ನು ಗುರುತಿಸುವ ಹಾಗೂ ಸ್ಪಂದಿಸುವ ವ್ಯವಸ್ಥೆ ಇರುವುದಿಲ್ಲ. ವರ್ಣಾಂಧತ್ವ ಇರುವ ವ್ಯಕ್ತಿಯ ಕಣ್ಣಿನ ಮೇಲೆ ಕೆಂಪು ಬಣ್ಣ ಬಿದ್ದಾಗ ರೆಟಿನಾದಲ್ಲಿನ ಕೆಂಪು ವರ್ಣಕ್ಕೆ ಸಂಬಂಧಿಸಿದ ಭಾಗವೇ ಅಲ್ಲದೇ ಹಸಿರು ಭಾಗವೂ ಸ್ಪಂದಿಸುತ್ತದೆ. ಈ ಕಾರಣದಿಂದಾಗಿ ಆ ವ್ಯಕ್ತಿಗೆ ಆತ ನೋಡುವ ಬಣ್ಣವು ಯಾವುದೆಂದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಬೂದಿ ಬಣ್ಣ ಅವನಿಗೆ ಹಳದಿ ಬಣ್ಣವಾಗಿ ಕಾಣಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಕಣ್ಣಿನೊಳಗೆ ಕೆಂಪು, ಹಸಿರು ಭಾಗಗಳು ಕಲೆತು ಕೆಂಪಾಗಿ ಮಾರ್ಪಾಡಾಗುವುದೇ ಆಗಿದೆ. ವರ್ಣಾಂಧತ್ವ ಇರುವ ವ್ಯಕ್ತಿ ನೀಲಿ, ಹಳದಿ, ಬೂದು ಬಣ್ಣಗಳನ್ನು ಮಾತ್ರ ಸ್ಪಷ್ಟವಾಗಿ ನೋಡಬಲ್ಲ.

ಹೀಗಿದೆ ನಮ್ಮ ಕಣ್ಣಿನ ರಚನೆ. ಕಣ್ಣುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಅತೀ ಮುಖ್ಯ. ಹೊರಗಡೆ ಹೋಗಿ ಬಂದ ಬಳಿಕ ಶುದ್ಧ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ತೀಕ್ಷ್ಣವಾದ ಬಿಸಿಲು ಇರುವಾಗ ಹೊರಗಡೆ ಹೋಗುವುದಿದ್ದಲ್ಲಿ ಉತ್ತಮ ದರ್ಜೆಯ ತಂಪು ಕನ್ನಡಕಗಳ ಬಳಕೆ ಮಾಡಿ. ನಿಯಮಿತವಾಗಿ ನಿಮ್ಮ ಕಣ್ಣುಗಳನ್ನು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳುತ್ತಿರಿ. 

ಬಹುಮುಖ್ಯ ಸಂಗತಿ. ನಿಮ್ಮ ಮರಣಾ ನಂತರ ಕಣ್ಣುಗಳನ್ನು ದಾನ ನೀಡುವ ಮನಸ್ಸು ಮಾಡಿ. ನಿಮ್ಮ ಕಣ್ಣುಗಳು ನಿಮ್ಮ ಸಾವಿನ ಬಳಿಕವೂ ಇಬ್ಬರು ವ್ಯಕ್ತಿಗಳಲ್ಲಿ ಜೀವಂತವಾಗಿರುತ್ತವೆ. ಇತೀಚೆಗೆ ನಿಧನರಾದ ಖ್ಯಾತ ನಟ ಅದಕ್ಕಿಂತಲೂ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿ ಪುನೀತ್ ರಾಜಕುಮಾರ್ ತಮ್ಮ ಕಣ್ಣುಗಳನ್ನು ದಾನವಾಗಿ ನೀಡಿದಾಗ ಅದನ್ನು ಅಳವಡಿಸಿ ನಾಲ್ಕು ಮಂದಿ ಈ ಪ್ರಪಂಚ ನೋಡುವಂತಾಯಿತು. ಆ ಕಾರಣದಿಂದ ಪುನೀತ್ ಈಗಲೂ ನಮ್ಮ ನಡುವೆ ಜೀವಂತವಾಗಿದ್ದಾರೆ. ಸತ್ತ ಬಳಿಕ ಸುಮ್ಮನೇ ಸುಟ್ಟು ಅಥವಾ ಮಣ್ಣಾಗಿ ಹೋಗುವ ಕಣ್ಣನ್ನು ದೃಷ್ಟಿ ಹೀನರ ಬದುಕಿಗೆ ಜೀವ ನೀಡುವ ಸಂಜೀವಿನಿಯನ್ನಾಗಿ ಮಾಡುವುದು ನಮ್ಮ ಕೈಯಲ್ಲೇ ಇದೆ. ಇಂದೇ ಕಣ್ಣು ದಾನದ ಬಗ್ಗೆ ವಿಚಾರ ಮಾಡಿ.  

ಚಿತ್ರ ಕೃಪೆ- ಅಂತರ್ಜಾಲ ತಾಣ