ಕಣ್ಣು ನೋಡುತ್ತದೆಂದರೆ ಎಷ್ಟು ಸರಿ?

ಕಣ್ಣು ನೋಡುತ್ತದೆಂದರೆ ಎಷ್ಟು ಸರಿ?

ಎಲ್ಲಾ ವಿದ್ಯುತ್ಕಾಂತೀಯ ತರಂಗಗಳ ಬಗ್ಗೆ ಚರ್ಚಿಸಿದ್ದೇವೆ. ಅತ್ಯಂತ ಶಕ್ತಿಶಾಲಿಯಾದ ಗಾಮಾಕಿರಣಗಳು ತೆಳುವಾದ ಸೀಸದ ಹಾಳೆ (led sheets) ಮತ್ತು ಕಾಂಕ್ರೀಟ್ ನ ಮೂಲಕ ಹಾಯ ಬಲ್ಲವು. ಇವು ಅಯಾನೀಕರಣವನ್ನುಂಟು ಮಾಡುವುದರಿಂದ ಜೀವ ಕೋಶಗಳನ್ನು ಸಾಯಿಸುತ್ತವೆ. ಕ್ಷ ಕಿರಣಗಳು ಮಾಂಸ ಖಂಡಗಳ ಮೂಲಕ ಹಾದು ಹೋಗುತ್ತವಾದರೂ ಭಾರ ಲೋಹಗಳ ಸಂಯುಕ್ತಗಳಾದ ಕ್ಯಾಲ್ಸಿಯಂ, ಬೇರಿಯಂ ಲವಣಗಳ ಮೂಲಕ ಹಾದು ಹೋಗಲಾರವು ಆದ್ದರಿಂದ ಮೂಳೆಗಳು ಕ್ಷ ಕಿರಣಗಳಿಗೆ ನೆರಳಾಗುತ್ತವೆ. ನೇರಳಾತೀತ ಕಿರಣಗಳು C ಕ್ಯಾನ್ಸರ್ ಕಾರಕಗಳಾದರೆ B ಚರ್ಮ ಸುಟ್ಟರೆ A ನಿಮ್ಮನ್ನು ಆಫ್ರಿಕನ್ನರನ್ನಾಗಿಸುತ್ತವೆ. ಶಾಖ ವಿಕಿರಣಗಳು (infra red) ಕಿರಣಗಳು ಚರ್ಮವನ್ನು ಚುರುಗುಟ್ಟಿಸಿದರೆ ರೇಡಿಯೋ ವಿಕಿರಣಗಳು ದೇಹದ ಯಾವ ಭಾಗದ ಮೇಲೆ ಕೂಡಾ ಪರಿಣಾಮ ಬೀರಲಾರವು. 

ಹಾಗಾದರೆ ಬೆಳಕಿನ ವಿಕಿರಣಗಳು? ಅವುಗಳನ್ನು ಕರೆಯುವುದೇ ದೃಗ್ಗೋಚರ ಬೆಳಕು (visible light) ಅಂದರೆ ಕಣ್ಣಿಗೆ ಗೋಚರಿಸುವ ಬೆಳಕು. ಅಂದರೆ ಇದು ಕಣ್ಣಿನ ಮೇಲೆ ಬಿದ್ದಾಗ ಕಣ್ಣಿನಲ್ಲಿ ಸಂವೇದನೆಯನ್ನು ಉಂಟು ಮಾಡುತ್ತದೆ. ಅಂದರೆ ಇದು ಕಣ್ಣಿನ ಮೂಲಕ ಗ್ರಹಿಸಲ್ಪಡುತ್ತದೆ. ನೀವು ಕಣ್ಣಿನ ರಚನೆಯನ್ನು ಗಮನಿಸಿದರೆ ಅದು ಮೂರು ಪದರಗಳಿಂದಾಗಿದೆ. ಕಣ್ಣಿಗೆ ಆಕಾರವನ್ನು ಕೊಡುವ ಅತ್ಯಂತ ಹೊರ ಪದರ ಸ್ಕ್ಲೀರಾ (sclera), ಕಣ್ಣಿನ ಪೋಷಣೆ ಮಾಡುವ ನಡುವಿನ ಪದರ ಕೊರಾಯ್ಡ್ (choroid) ಮತ್ತು ಬೆಳಕಿಗೆ ಸೂಕ್ಷ್ಮವಾದ (photosensitive) ಅಕ್ಷಿಪಟಲ (retina). ಬೆಳಕಿನಲ್ಲಿರುವ ಶಕ್ತಿಯ ಸಂಚಿಗಳಾದ (energy packets) ಫೋಟಾನ್ ಗಳು. ಈ ದ್ಯುತಿ ಸೂಕ್ಷ್ಮ ಕೋಶಗಳ ಮೇಲೆ ಬಿದ್ದಾಗ ಅವುಗಳಲ್ಲಿರುವ ದ್ಯುತಿ ವರ್ಣಕಗಳು (pigments) ಫೋಟಾನ್ ಗಳನ್ನು ಹೀರಿಕೊಳ್ಳುತ್ತವೆ. ಈ ದ್ಯುತಿ ವರ್ಣಕಗಳೆಂದರೆ ಹೇಗೆ ಅನ್ನುತ್ತೀರಾ? ನೀವು ಡೇ ಎಂಡ್ ನೈಟ್ ಕನ್ನಡಕ ಹಾಕುತ್ತೀರಲ್ಲ. ಅವುಗಳು ಕಡಿಮೆ ಬಿಸಿಲಿನಲ್ಲಿ ಕಡು ಕಪ್ಪು ಬಣ್ಣದ್ದಾಗಿದ್ದರೆ ತಿಳಿ ಬೆಳಕಿನಲ್ಲಿ ತಿಳಿಯಾಗಿ ಬಿಡುತ್ತವೆ. ಅದಕ್ಕೆ ಕಾರಣ ಇವುಗಳಲ್ಲಿರುವ ದ್ಯುತಿ ವರ್ಣಕಗಳು. ಬಿಸಿಲು ಬಿದ್ದಾಗ ಇವುಗಳಲ್ಲಿ ರಾಸಾಯನಿಕ ಬದಲಾವಣೆಯಾಗುತ್ತದೆ. ಹೀಗೆ ಕಣ್ಣಿನಲ್ಲಿ ಕೂಡ ಬೆಳಕಿನ ಶಕ್ತಿಯು ದ್ಯುತಿ ವರ್ಣಗಳಲ್ಲಿ ರಾಸಾಯನಿಕ ಬದಲಾವಣೆಯನ್ನುಂಟು ಮಾಡುತ್ತದೆ. ಈ ರಾಸಾಯನಿಕ ಬದಲಾವಣೆ ವಿದ್ಯುತ್ ಸಂದೇಶವಾಗಿ ಮಾರ್ಪಡುತ್ತವೆ. ಮತ್ತು ದೃಷ್ಟಿ ನರದ (optic nerve) ಮೂಲಕ ಮೆದುಳಿನ ಹಿಂಭಾಗದಲ್ಲಿರುವ ದೃಷ್ಟಿ ಕಾರ್ಟೆಕ್ಸ್(visual cortex) ಅನ್ನು ತಲುಪುತ್ತದೆ ಮತ್ತು ಅಲ್ಲಿ ವಿಶ್ಲೇಷಿಸಲ್ಪಟ್ಟು ನಿಜವಾದ ದೃಶ್ಯ ಮೂಡುತ್ತದೆ. ನಾವು ಕಣ್ಣು ನೋಡುತ್ತದೆ ಎನ್ನುತ್ತೇವೆ. ಆದರೆ ನಿಜವಾಗಿ ನಡೆಯುವುದೇನು ಗಮನಿಸೋಣ. ಕಣ್ಣು ಬೆಳಕನ್ನು ಸ್ವೀಕರಿಸುತ್ತದೆ ಮತ್ತು ಅದನ್ನು ವಿದ್ಯುತ್ ಸಂದೇಶಗಳಾಗಿ ಮಾರ್ಪಡಿಸುತ್ತದೆ. ಆದರೆ ಅದಕ್ಕೆ ಚಿತ್ರ ರೂಪ ಮೂಡಿಸುವುದು ಮತ್ತು ಅದಕ್ಕೆ ಬಣ್ಣದ ಅಭಿಷೇಕ ಮಾಡುವುದು ಮೆದುಳೇ. ಅಂದರೆ ಕಣ್ಣು ಒಂದು ಉಪಕರಣ ಮಾತ್ರ.

-ದಿವಾಕರ ಶೆಟ್ಟಿ ಎಚ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ