ಕಣ್ಣ ನೀರು ಇಂಗುವ ಮುನ್ನ…!

ಕಣ್ಣ ನೀರು ಇಂಗುವ ಮುನ್ನ…!

ಎಷ್ಟೊಂದು ಹೆಣ್ಣು ಮಕ್ಕಳು ಮತ್ತು ಯುವಕರು ಹೆಗಲ ಮೇಲೆ ಯಾವುದೋ ಒಂದು ಪಕ್ಷದ ಗುರುತಿನ ಬಣ್ಣದ ವಸ್ತ್ರ ಮತ್ತು ತಲೆಗೆ ಟೋಪಿ ಹಾಕಿಕೊಂಡು ಉರಿ ಬಿಸಿಲಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಚುನಾವಣಾ ಪ್ರಚಾರ ಮಾಡುತ್ತಿರುತ್ತಾರೆ. ಕೆಲವರು ರಾತ್ರಿ 9 ಗಂಟೆಯವರೆಗೂ ಮಾಡುತ್ತಾರೆ. ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಪ್ರಚಾರ ಮಾಡುವುದಿಲ್ಲ. ಪಾಪ ತಮ್ಮ ಹೊಟ್ಟೆ ಪಾಡಿಗಾಗಿ ದಿನಗೂಲಿ ನೌಕರರಂತೆ ಬಡ ಮತ್ತು ಮಧ್ಯಮ ವರ್ಗದ ಜನರು ದುಡಿಯುತ್ತಿದ್ದಾರೆ. ಎಷ್ಟೋ ಬಾರಿ ಒಬ್ಬರೇ ಬೇರೆ ಬೇರೆ ಪಕ್ಷಗಳಿಗೆ ಬೇರೆ ಬೇರೆ ದಿನ‌ ಪ್ರಚಾರ ಮಾಡುತ್ತಾರೆ.

ಹೊಟ್ಟೆಯೊಳಗಿನ ಕರುಳು ಸಣ್ಣಗೆ ಮಿಡಿಯುತ್ತದೆ. ಅವರ ಅಸಹಾಯಕತೆಗೆ ಮರುಗುತ್ತದೆ. ಛೇ.... ಮನುಷ್ಯನ ಹಸಿವಿನ ಅನಿವಾರ್ಯತೆ ಎಷ್ಟೊಂದು ಅಸ್ವಾಭಾವಿಕ ಮತ್ತು ಇಷ್ಟವಿಲ್ಲದ ಕೆಲಸಗಳನ್ನು ಮಾಡಿಸುತ್ತದೆ ಎಂದು ಯೋಚಿಸಿದರೆ ವಿಷಾದವಾಗುತ್ತದೆ.‌ಯಾರದೋ ಸುಖಕ್ಕಾಗಿ ನಮ್ಮ ತ್ಯಾಗ. ಕರ್ನಾಟಕದ ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಇಲ್ಲಿನ‌ ಗಾಳಿ ನೀರು ಬೆಳಕು ಭೂಮಿ ಎಲ್ಲದರಿಂದ ಮನುಷ್ಯ ನೆಮ್ಮದಿಯಾಗಿ ಸರಿ ಸುಮಾರು ನೂರು ವರ್ಷಗಳ ಆಯಸ್ಸು ಉತ್ತಮ ಗುಣಮಟ್ಟದಲ್ಲಿ ಕಳೆಯಬಹುದು.‌

ಆದರೆ ಊಟ ವಸತಿ ಬಟ್ಟೆ ಶಿಕ್ಷಣ ಆರೋಗ್ಯ ವಿದ್ಯುತ್ ನೀರು ವಾಹನ ಸಂಪರ್ಕ ಪ್ರವಾಸ ಇವುಗಳನ್ನು ಅವಶ್ಯಕತೆಗಿಂತ ಹೆಚ್ಚಾಗಿ ಪಡೆಯಲು ದುರಾಸೆ ಪಟ್ಟ ಕಾರಣದಿಂದ ಒಂದು ದೊಡ್ಡ ಸ್ಪರ್ಧೆ ಏರ್ಪಟ್ಟು ಅವುಗಳು ದೊಡ್ಡ ಉದ್ಯಮಗಳಾಗಿ ಬೆಳೆದು ಕೊನೆಗೆ ಅವುಗಳೇ ಗಗನ ಕುಸುಮಗಳಾಗಿ ಅವುಗಳನ್ನು ಪಡೆಯಲು ಇಡೀ ಬದುಕಿನ ಅತ್ಯಮೂಲ್ಯ ಸಮಯ ಆರೋಗ್ಯ ಎಲ್ಲವನ್ನೂ ಕಳೆದುಕೊಳ್ಳುವ ಹಂತಕ್ಕೆ ಆಧುನಿಕ ನಾಗರಿಕ ಸಮಾಜ ಬೆಳವಣಿಗೆ ಹೊಂದಿರುವುದು ವಿಪರ್ಯಾಸ. 

ಗಂಡ ಹೆಂಡತಿ ಇಬ್ಬರೂ ದುಡಿದರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ‌ಎಲ್ಲವೂ ದುಬಾರಿ. ಕೆಲವೇ ಕೆಲವು ದೊಡ್ಡ ವ್ಯಾಪಾರಿಗಳು ಮತ್ತು ಉದ್ಯಮಿಗಳು ಇದರ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಆಡಳಿತಗಾರರು ಕೆಲಸ ಮಾಡುತ್ತಾರೆ. ಅದರ ಪರಿಣಾಮವೇ ನಮ್ಮ ಅಕ್ಕಂದಿರ, ತಾಯಂದಿರ, ಮಕ್ಕಳ ಈ ದಿನಗೂಲಿ ಅನಿವಾರ್ಯತೆ. ಅದಕ್ಕಾಗಿಯೇ ಕಾಡುತ್ತಿದೆ ನಿರಾಸೆ ಮತ್ತೆ ಮತ್ತೆ ನನ್ನನ್ನು ಆಳವಾಗಿ,

ಪರಿಸರ ನಾಶಮಾಡುವುದು, ಮಳೆ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವುದು.

ಕಾಡಿನಲ್ಲಿ ಊರು ನಿರ್ಮಿಸುವುದು, ಕಾಡು ಪ್ರಾಣಿಗಳ ಹಾವಳಿ ಎಂದು ಕೂಗುವುದು.

ಕೆರೆ ಜಾಗದಲ್ಲಿ ಮನೆ ಕಟ್ಟುವುದು, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎಂದು ದೂರುವುದು.

ಕೆರೆಗಳನ್ನು ನುಂಗಿ ಬಿಡುವುದು, ಕುಡಿಯಲು ನೀರಿಲ್ಲ, ಅಂತರ್ಜಲ ಬತ್ತಿದೆ ಎಂದು ಬಾಯಿ ಬಡಿದುಕೊಳ್ಳುವುದು.

ವಾಯು ಮಾಲಿನ್ಯ ಮಾಡುವುದು, ಶುದ್ದ ಗಾಳಿ ಇಲ್ಲ ಎಂದು ಕೊರಗುವುದು.

ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು, ಆರೋಗ್ಯ ಸರಿಯಿಲ್ಲ ಎನ್ನುವುದು.

ಆಹಾರ ಕಲಬೆರಕೆ ಮಾಡುವುದು, ರೋಗಗಳಿಗೆ ಆಹ್ವಾನ ನೀಡುವುದು.

ದಿಡೀರ್ ಶ್ರೀಮಂತಿಕೆಯ ದುರಾಸೆ ಪಡುವುದು, ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.

ಗೊತ್ತು ಗುರಿಯಿಲ್ಲದೆ ವಾಹನಗಳನ್ನು ರಸ್ತೆಗಿಳಿಸುವುದು, ಟ್ರಾಫಿಕ್ ಜಾಮ್ ಎಂದು ಹಲುಬುವುದು.

ಸಂಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು, ಕೋಪದಲ್ಲಿ ಡೈವೋರ್ಸ ಮಾಡಿಕೊಳ್ಳುವುದು.

ಹಣ ಪಡೆದು, ಜಾತಿ ನೋಡಿ ಓಟಾಕುವುದು, ಸರ್ಕಾರ ಸರಿಯಿಲ್ಲ ಎಂದು ಟೀಕಿಸುವುದು.

ಎಚ್ಚೆತ್ತುಕೊಳ್ಳೋಣ, ಪರಿಸ್ಥಿತಿ ಕ್ಯೆ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ. ಇದೆಲ್ಲಾ ಖಂಡಿತ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ. ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ಸರ್ಕಾರಕ್ಕೆ ಮಾತ್ರ. ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ. ಹೊಸ  ನಿರೀಕ್ಷೆಗಳು ಹುಟ್ಟಲಿ ಎಂಬ ಭರವಸೆಯೊಂದಿಗೆ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ