ಕತೆಗಳ ಸ್ಪಿರಿಟ್‌ಗಳ ಸಂಚು

ಕತೆಗಳ ಸ್ಪಿರಿಟ್‌ಗಳ ಸಂಚು

ಕೊರಿಯಾ ದೇಶದಲ್ಲಿ ಹಿಂದೊಮ್ಮೆ ಶ್ರೀಮಂತ ದಂಪತಿ ವಾಸ ಮಾಡುತ್ತಿದ್ದರು. ಅವರಿಗೊಬ್ಬನೇ ಮಗ. ಅವನಿಗೆ ಕತೆಗಳೆಂದರೆ ಪಂಚಪ್ರಾಣ. ಹಾಗಾಗಿ ಅವನಿಗೆ ಕತೆ ಹೇಳಲಿಕ್ಕಾಗಿಯೇ ಒಬ್ಬ ಮುದುಕ ಸೇವಕನನ್ನು ಗೊತ್ತು ಮಾಡಿದ್ದರು. ಅವರ ಮಗನಿಗೆ ಪ್ರತಿದಿನ ಮಲಗುವ ಮುಂಚೆ ಹೊಸ ಕತೆಯೊಂದನ್ನು ಹೇಳುವುದೇ ಅವನ ಕೆಲಸ.

ಕತೆ ಹೇಳುವ ಸೇವಕ ಕೆಟ್ಟ ಭೂತಗಳು, ಡ್ರ್ಯಾಗನುಗಳು, ಹುಲಿಗಳು ಮತ್ತು ಒಳ್ಳೆಯ ಗಂಧರ್ವರು, ಕಿನ್ನರರ ಬಗ್ಗೆ ಕತೆ ಹೇಳುತ್ತಿದ್ದ. ಆ ಮಗನ ಕೋಣೆಯ ಮೂಲೆಯಲ್ಲೊಂದು ಚರ್ಮದ ಚೀಲ ನೇತಾಡಿಸಲಾಗಿತ್ತು. ಅದರ ಬಾಯಿಯನ್ನು ಬಿಗಿಯಾಗಿ ಬಿಗಿಯಲಾಗಿತ್ತು. ಪ್ರತಿಯೊಂದು ಕೆಟ್ಟ ಕತೆ ಹೇಳಿದಾಗಲೂ ಅದರಲ್ಲಿದ್ದ ಭೂತಗಳು ಮತ್ತು ಡ್ರ್ಯಾಗನುಗಳ ಸ್ಪಿರಿಟುಗಳು ಆ ಚೀಲದೊಳಗೆ ಸೇರಿಕೊಳ್ಳುತ್ತಿದ್ದವು. ಶ್ರೀಮಂತ ದಂಪತಿಯ ಮಗ ತಾನು ಕೇಳಿದ ಕತೆಗಳನ್ನು ಬೇರೆಯವರಿಗೂ ಹೇಳಿದ್ದರೆ ಹೀಗಾಗುತ್ತಿರಲಿಲ್ಲ. ಆದರೆ ಅವನು ಯಾವತ್ತೂ ತಾನು ಕೇಳಿದ ಕತೆಗಳನ್ನು ಬೇರೆಯವರಿಗೆ ಹೇಳುತ್ತಿರಲಿಲ್ಲ.

ಮಗನಿಗೆ ಇಪ್ಪತ್ತು ವರುಷಗಳಾಗುವಾಗ ಶ್ರೀಮಂತ ತಂದೆ-ತಾಯಿ ತೀರಿಕೊಂಡರು. ಆ ಸೇವಕ ಅವನಿಗೆ ಹೊಸಹೊಸ ಕತೆಗಳನ್ನು ಹೇಳುತ್ತಲೇ ಇದ್ದ. ಅದಾಗಿ ಎರಡು ವರುಷಗಳಲ್ಲಿ ಆತನ ಮಾವ ಆತನಿಗೆ ಮದುವೆ ಮಾಡಲು ತಯಾರಿ ನಡೆಸಿದ. ರೂಪವತಿಯೊಬ್ಬಳೊಂದಿಗೆ ಅವನ ಮದುವೆ ನಿಶ್ಚಯವಾಯಿತು.

ಮದುವೆಯ ಮುನ್ನಾ ದಿನ ಬೆಳಗ್ಗೆ ಕತೆ ಹೇಳುವ ಸೇವಕನಿಗೆ ಮದುಮಗನ ಕೋಣೆಯಲ್ಲಿ ಪಿಸುಗುಟ್ಟುವ ಸದ್ದು ಕೇಳಿಸಿತು. ಮದುಮಗ ತನ್ನ ಗೆಳೆಯರೋದಿಗೆ ಹಜಾರದಲ್ಲಿ ಇದ್ದ. ಹಾಗಾದರೆ ಇಲ್ಲಿ ಯಾರು ಮಾತನಾಡುತ್ತಿದ್ದಾರೆ ಎಂದು ಅವನು ಪಿಸುಮಾತುಗಳಿಗೆ ಕಿವಿಗೊಟ್ಟ. “ನಮ್ಮನ್ನು ಹಲವಾರು ವರುಷಗಳಿಂದ ಇಲ್ಲಿ ಉಸಿರುಗಟ್ಟುವಂತೆ ಕೂಡಿಹಾಕಲಾಗಿದೆ. ನಾವು ಸೇಡು ತೀರಿಸಿಕೊಳ್ಳಲೇ ಬೇಕು” ಎಂಬ ಮಾತು ಅವನಿಗೆ ಕೇಳಿಸಿತು. ತಕ್ಷಣವೇ ಅವನು ಕೋಣೆಯಿಂದ ಹೊರಗೆ ಹೋಗಿ ಕಿಟಕಿಯ ಬಳಿ ನಿಂತುಕೊಂಡ.

ಆ ಪಿಸುಮಾತುಗಳು ಕೋಣೆಯ ಮೂಲೆಯಲ್ಲಿ ನೇತು ಹಾಕಿದ್ದ ಚರ್ಮದ ಚೀಲದೊಳಗಿಂದ ಕೇಳಿ ಬರುತ್ತಿವೆ ಎಂದು ಮುದುಕ ಸೇವಕನಿಗೆ ಸ್ಪಷ್ಟವಾಯಿತು. “ನಾಳೆ ಮದುಮಗನು ಮದುಮಗಳ ಮನೆಗೆ ಕುದುರೆಯಲ್ಲಿ ಸವಾರಿ ಮಾಡಿಕೊಂಡು ಹೋಗುವಾಗ ಅವನಿಗೆ ಬಾಯಾರಿಕೆಯಾಗುತ್ತದೆ. ನಾನು ದಾರಿಯ ಪಕ್ಕದಲ್ಲಿ ವಿಷದ ಬಾವಿಯಾಗಿ ಕಾದಿರುತ್ತೇನೆ. ನೀರು ಕುಡಿಯಲು ಅಲ್ಲೊಂದು ತಟ್ಟೆಯಿರುತ್ತದೆ. ಮದುಮಗ ಆ ಬಾವಿಯ ನೀರು ಕುಡಿದರೆ ಅವನ ಆರೋಗ್ಯ ಕೆಡುತ್ತದೆ” ಎಂದಿತೊಂದು ಧ್ವನಿ.

“ಮದುಮಗ ಬಾವಿಯ ನೀರು ಕುಡಿಯದಿದ್ದರೆ, ನಾನು ಅದೇ ಹಾದಿಯಲ್ಲಿ ವಿಷದ ಸ್ಟ್ರಾಬೆರಿ ಹೊಲವಾಗಿ ಕಾದಿರುತ್ತೇನೆ” ಎಂದಿತು ಇನ್ನೊಂದು ಧ್ವನಿ. "ನಾನು ಅವನ ಮಲಗುವ ಕೋಣೆಯಲ್ಲಿ ಹಾಸಿಗೆಯಡಿಯಲ್ಲಿ ಒಂದು ವಿಷದ ಹಾವಾಗಿ ಕಾದಿರುತ್ತೇನೆ. ನೀವಿಬ್ಬರೂ ಅವನನ್ನು ಮುಗಿಸದಿದ್ದರೆ, ರಾತ್ರಿ ಅವನು ಮಲಗಿದಾಗ ನಾನು ಹೊರಬಂದು ಅವನನ್ನು ಕಚ್ಚಿ ಸಾಯಿಸುತ್ತೇನೆ” ಎಂದಿತು ಮತ್ತೊಂದು ಧ್ವನಿ.

ಇದೆಲ್ಲವನ್ನು ಕೇಳಿ ಮುದುಕ ಸೇವಕನಿಗೆ ಆಘಾತವಾಯಿತು. ಅವನು ಉದ್ಯಾನದಲ್ಲಿ ಕುಳಿತು, ತನ್ನ ಯಜಮಾನನನ್ನು ಹೇಗೆ ರಕ್ಷಿಸುವುದೆಂದು ಸಂಜೆಯ ವರೆಗೆ ಯೋಚಿಸಿದ. ಇದೆಲ್ಲವನ್ನು ಹೇಳಿದರೆ ಯಾರೂ ನಂಬುವುದಿಲ್ಲ. ಹಾಗಾಗಿ ಅವನು ಯಾರಿಗೂ ಹೇಳದಿರಲು ನಿರ್ಧರಿಸಿದ.

ಮರುದಿನ ಬೆಳಗ್ಗೆ ಮದುಮಗನ ಮೆರವಣಿಗೆ ಮದುಮಗಳ ಮನೆಗೆ ಹೊರಡಲು ತಯಾರಾಯಿತು. ಮದುಮಗನ ಕುದುರೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಮದುಮಗಳ ಸಾರೋಟನ್ನೂ ಚಂದವಾಗಿ ಸಿಂಗರಿಸಲಾಗಿತ್ತು. "ನಾನು ಮದುಮಗನ ಕುದುರೆಯನ್ನು ಮುನ್ನಡೆಸುತ್ತೇನೆ” ಎಂದು ಮುದುಕ ಸೇವಕ ಬೇಡಿಕೊಂಡ. ಮದುಮಗನ ಮಾವ ಒಪ್ಪಿಕೊಂಡ.

ಸ್ವಲ್ಪ ದೂರ ಸಾಗಿದಾಗ, ಹಾದಿ ಬದಿಯಲ್ಲಿ ತಿಳಿನೀರಿನ ಬಾವಿಯಲ್ಲೊಂದು ತಟ್ಟೆ ತೇಲುತ್ತಿತ್ತು. “ನನಗೊಂದು ತಟ್ಟೆ ನೀರು ತನ್ನಿ” ಎಂದ ಮದುಮಗ. "ಬೇಡ, ಬೇಡ. ನೀರು ತರಲು ಹೋದರೆ ತಡವಾಗುತ್ತದೆ” ಎಂದು ಮುದುಕ ಸೇವಕ ಮೊದಲ ಅಪಾಯ ತಪ್ಪಿಸಿದ. ಮುಂದಕ್ಕೆ ಸಾಗಿದಾಗ, ಹಾದಿ ಬದಿಯಲ್ಲಿ ಸ್ಟ್ರಾಬೆರಿ ಹೊಲ ಕಾಣಿಸಿತು. “ನನಗೆ ಕೆಲವು ಸ್ಟ್ರಾಬೆರಿ ತನ್ನಿ” ಎಂದ ಮದುಮಗ. "ಬೇಡ, ಬೇಡ. ಹಾದಿ ಬದಿಯಲ್ಲಿರುವ ಅವು ನಿಮಗೆ ಒಳ್ಳೆಯದಲ್ಲ" ಎಂದ ಮುದುಕ ಸೇವಕ ಎರಡನೆಯ ಅಪಾಯವನ್ನೂ ತಪ್ಪಿಸಿದ.

ಮೆರವಣಿಗೆ ಮದುಮಗಳ ಮನೆ ತಲಪಿದಾಗ ಅಲ್ಲಿ ಹಲವಾರು ಅತಿಥಿಗಳು ನೆರೆದಿದ್ದರು. ಭೂರಿ ಭೋಜನ ಏರ್ಪಡಿಸಲಾಗಿತ್ತು. ಮದುವೆಯ ಕಟ್ಟುಕಟ್ಟಳೆಗಳು ಸಂಜೆಯ ತನಕ ಜರಗಿದವು. ಭೂರಿ ಭೋಜನದ ಬಳಿಕ ಮಲಗುವ ಹೊತ್ತಾಯಿತು.

ಮದುಮಗ ಮತ್ತು ಮದುಮಗಳು ತಮ್ಮ ಮಲಗುವ ಕೋಣೆ ಸೇರಿದೊಡನೆ ಮುದುಕ ಸೇವಕ ಖಡ್ಗವೊಂದನ್ನು ಹಿಡಿದು ಅವರ ಕೋಣೆಗೆ ನುಗ್ಗಿದ. ಮದುಮಗಳು ಹೆದರಿ ಚೀರುತ್ತಿದ್ದಂತೆಯೇ ಮುದುಕ ಸೇವಕ ಅವರ ಹಾಸಿಗೆಯನ್ನು ಮಂಚದಿಂದ ಎಳೆದು ನೆಲಕ್ಕೆ ಹಾಕಿದ. ಹಾಸಿಗೆಯ ಕೆಳಗಿತ್ತು ಒಂದು ಭೀಕರ ವಿಷದ ಹಾವು! ಮುದುಕ ಸೇವಕ ಖಡ್ಗದಿಂದ ಮತ್ತೆಮತ್ತೆ ಬಡಿದು ಹಾವನ್ನು ತುಂಡುತುಂಡು ಮಾಡಿದ.

ಇದನ್ನೆಲ್ಲ ಕಂಡು ಬೆಚ್ಚಿಬಿದ್ದ ಮದುಮಗ ಕೇಳಿದ, “ಹಾಸಿಗೆಯ ಕೆಳಗೆ ವಿಷದ ಹಾವು ಇದೆಯೆಂದು ನಿನಗೆ ಹೇಗೆ ಗೊತ್ತಾಯಿತು?” ಮುದುಕ ಸೇವಕ ಎಲ್ಲ ಸಂಗತಿಯನ್ನೂ ತಿಳಿಸಿದ. "ನಾವು ಕೇಳಿದ ಕತೆಗಳನ್ನು ಬೇರೆಯವರಿಗೂ ಹೇಳಬೇಕು. ಇಲ್ಲವಾದರೆ ಆ ಕತೆಗಳ ಸ್ಪಿರಿಟುಗಳು ನಮಗೆ ಹಾನಿ ಮಾಡುತ್ತವೆ" ಎಂದು ವಿವರಿಸಿದ ಮುದುಕ ಸೇವಕ.

ತನ್ನ ಪ್ರಾಣ ಉಳಿಸಿದ ಮುದುಕ ಸೇವಕನಿಗೆ ಕೃತಜ್ನತೆ ಸಲ್ಲಿಸಿದ ಮದುಮಗ, ಆತನಿಗೆ ಉಡುಗೊರೆಯನ್ನೂ ನೀಡಿದ. “ಇದೆಲ್ಲ ನನ್ನದೇ ತಪ್ಪಿನಿಂದಾಯಿತು. ಇನ್ನು ಮುಂದೆ ಯಾರು ನನ್ನ ಬಳಿ ಕತೆ ಹೇಳಬೇಕೆಂದರೂ ಸಂತೋಷದಿಂದ ಹೇಳುತ್ತೇನೆ. ಕತೆಗಳ ಸ್ಪಿರಿಟುಗಳನ್ನು ಬಿಡುಗಡೆ ಮಾಡದಿರುವುದು ಬಹಳ ಅಪಾಯಕಾರಿ” ಎಂದ ಮದುಮಗ.

Comments

Submitted by shreekant.mishrikoti Tue, 11/16/2021 - 04:19

ಕತೆಗಳನ್ನು ಹೇಳುವುದು ಪುಣ್ಯದ ಕೆಲಸ; ನಾವು ಕೇಳಿದ ಕತೆಗಳನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಕೂಡದು ಎಂಬುದನ್ನು ಕನ್ನಡ ಜನಪದ ಕತೆಗಳ ಸಂಗ್ರಹವೊಂದರಲ್ಲಿನ ಕತೆಯಲ್ಲಿ ಓದಿದ್ದೆ . ನೆನಪಿಸಿದ್ದಕ್ಕೆ ಧನ್ಯವಾದಗಳು,