ಕತೆಗಾರನ ಗುಪ್ತಭಯ ಕತೆಯಲ್ಲಿಯೇ ಬಯಲಾಯಿತು...!!
ನಡುರಾತ್ರಿಯ ನಿಶ್ಯಬ್ದದ ನಡುವೆ ಕಿಟಕಿಯ ಗಾಜು ಚೂರುಚೂರಾಗಿದ್ದು ನನಗೆ ಗೊತ್ತಾಗಿತ್ತು.ಏರ್ ಕಂಡಿಶನರ್ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಕಾರಣಕ್ಕೆ ಮಫ್ಲರಿನಿಂದ ಕಿವಿ ಮುಚ್ಚಿಕೊಳ್ಳದಿದ್ದ ನನಗೆ ಕಿಟಕಿಯ ಗಾಜು ನೆಲಕ್ಕಪ್ಪಳಿಸಿದ್ದ ಶಬ್ದ ಸ್ಪಷ್ಟವಾಗಿಯೇ ಕೇಳಿಸಿತ್ತು.ಮಲಗಿದ್ದವನು ಚಕ್ಕನೇ ಎದ್ದು ಕುಳಿತೆ.ಮಧ್ಯವಯಸ್ಕನಾಗಿರುವ ನನಗೆ ನನ್ನ ವಯಸ್ಸಿನ ಬಗ್ಗೆಯೇ ಕೊಂಚ ಅಸಹನೆ.ನನ್ನ ವಯಸ್ಸು ನನ್ನ ಮಗನಷ್ಟಾಗಲಿ ಅಥವಾ ನನ್ನ ತಂದೆಯಷ್ಟಾಗಲಿ ಇದ್ದಿದ್ದರೆ ಸೂಕ್ತವಾಗಿರುತ್ತಿತ್ತು ಎನ್ನುವ ಭಾವ ನನಗೆ.’ಭಯಪಡಬೇಡ,ಏನೂ ಆಗಿಲ್ಲ.ಎಲ್ಲಿದ್ದಿಯೋ ಅಲ್ಲೇ ಇರು’ಎಂದು ನನ್ನ ಹೆಂಡತಿಗೆ ಅಪನಂಬಿಕೆಯಲ್ಲಿಯೇ ನುಡಿದೆನಾದರೂ ನನ್ನ ಮಾತುಗಳನ್ನು ಆಕೆಯೂ ನಂಬುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು.ಕೆಳಮಹಡಿಯಲ್ಲಿ ಏರುದನಿಯಲ್ಲಿ ಕೂಗಾಡುತ್ತಿದ್ದ ಆಗಂತುಕರ ದನಿ ನಮ್ಮಿಬ್ಬರಿಗೂ ಕೇಳಿಸುತ್ತಿತ್ತು.’ನೀನು ಬಟ್ಟೆ ಧರಿಸಿಕೊ’ಎಂದು ಪತ್ನಿಗೆ ಹೇಳುತ್ತ ಕೋಣೆಯ ದೀಪದ ಗುಂಡಿಯನ್ನು ಒತ್ತಿದಾಗಲೇ ಮನೆಯಲ್ಲಿ ವಿದ್ಯುತ್ ಸರಬರಾಜು ನಿಂತುಹೋಗಿದೆಯೆನ್ನುವುದು ನೆನಪಾಗಿದ್ದು.ತಕ್ಷಣಕ್ಕೆ ಕೈಗೆ ಸಿಕ್ಕ ಮೊಬೈಲಿನ ಬೆಳಕನ್ನೇ ಕತ್ತಲಿನ ನಿವಾರಣೆಗಾಗಿ ಬಳಸಿಕೊಂಡೆ.ನುಗ್ಗಿರುವ ಆಗಂತುಕರು ಮೆಟ್ಟಲೇರಿ ಬರುತ್ತಿರುವ ಶಬ್ದ ನಮ್ಮ ಕಿವಿಯ ಮೇಲೆ ಬೀಳುತ್ತಿತ್ತು.ಶಯನಗೃಹದ ಬಾಗಿಲು ಭದ್ರಪಡಿಸಿ ಪಡಸಾಲೆಗೆ ಬಂದೆ.ಹಜಾರದ ಕತ್ತಲಿನುದ್ದಕ್ಕೂ ಕುಣಿದಾಡುತ್ತಿದ್ದುದು ನುಸುಳುಕೋರರ ಕೈಯಲ್ಲಿದ್ದ ಹಿಡಿದೀಪದ ಬೆಳಕು.ಎರಡು ಕೈಗಳನ್ನು ಮೇಲೆತ್ತಿ ಹಿಡಿದು,’ನಾನು ಇಲ್ಲಿಯೇ ನಿಂತಿದ್ದೇನೆ’ಎಂದು ಕಿರುಚಿದೆ.ಕಿರುಚಿದೆ ಎಂದು ನಾನಂದುಕೊಂಡೆ.ಆದರೆ ನನ್ನ ಮಾತುಗಳು ಚಿಕ್ಕ ಮಗುವೊಂದರ ಪಿಸುಗುಡುವಿಕೆಯಂತೇ ನನ್ನ ಗಂಟಲಿನಿಂದ ಹೊರಬಿದ್ದಿದ್ದವು.
ಅಷ್ಟರಲ್ಲಿಯೇ ಮುಖದ ಮೇಲೆ ಬಿದ್ದಿದ್ದ ಏಟೊಂದರ ವೇಗಕ್ಕೆ ನಾನು ನೆಲಕ್ಕುರುಳಿದ್ದೆ.ಬಿದ್ದ ಪೆಟ್ಟಿನ ರಭಸಕ್ಕೆ ಅದು ನುಸುಳುಕೋರನ ಕೈ ಹೊಡೆತವೇ ಅಥವಾ ದೊಣ್ಣೆಯ ಪೆಟ್ಟಾ ಎಂಬುದು ಅರಿವಾಗಲಿಲ್ಲ.ಅಸಾಧ್ಯ ನೋವಿನ ನಡುವೆ ಬಾಯ್ತುಂಬಿಕೊಂಡ ಕೆಂಪು ದ್ರವ.ಬಾಯಿ ತೆರೆಯುವುದು ಸಹ ನನ್ನಿಂದ ಶಕ್ಯವಾಗಲಿಲ್ಲ.ಗಂಟಲು ಕಟ್ಟಿಹೋಗಿ ಉಸಿರಿಗಾಗಿ ದವಡೆಯನ್ನು ಜೋತುಬಿಟ್ಟುಕೊಳ್ಳುವ ಅನಿವಾರ್ಯತೆ ನನ್ನದು.ನನ್ನ ಎರಡೂ ಕೈಗಳನ್ನು ಬೆನ್ನ ಹಿಂದೆ ತಿರುಚಿ ಹಿಡಿದು ಪಟ್ಟಿಯಿಂದ ಸುತ್ತಲಾಯಿತು. ಬಹುಶ:ಅದು ವಿದ್ಯುತ್ ಇಲಾಖೆಯಲ್ಲಿ ಬಳಕೆಯಾಗುವ ಅಂಟುಪಟ್ಟಿಯಿರಬೇಕು.ಚಿಕ್ಕಮಕ್ಕಳು ಬೀದಿಯಲ್ಲಿ ಕ್ರಿಕೆಟ್ ಆಡುವಾಗ ಚೆಂಡಿಗೆ ಅದನ್ನು ಸುತ್ತಿರುವುದನ್ನು ನೋಡಿದ ನೆನಪು.ನೆಲಕ್ಕೆ ಮುಖವೂರಿ ಬಿದ್ದುಕೊಂಡಿದ್ದ ನನಗೆ ಮೈಯೆಲ್ಲ ವಿಪರೀತ ನೋವು. ಯಾತನೆಯಿಂದಾಗಿ ಸಣ್ಣಗೆ ನರಳುತ್ತಿದ್ದವನಿಗೆ ಸಹಿಲಸಾಧ್ಯ ನೋವಿಗೆ ಮೂರ್ಛೆ ಹೋಗಿಬಿಡುತ್ತೇನೇನೋ ಎಂಬ ಅನುಮಾನ.
ಅರೆಪ್ರಜ್ನಾವಸ್ಥೆಯಲ್ಲಿ ಧರಾಶಾಹಿಯಾಗಿದ್ದ ನನ್ನ ಪಕ್ಕದಲ್ಲಿ ಇಬ್ಬರು ನಿಂತಿದ್ದರು.ನನ್ನ ಕಂಕುಳಿಗೆ ಕೈ ಹಾಕಿ ನನ್ನನ್ನು ಎಳೆಯುತ್ತ ಮನೆಯಿಂದ ಹೊರತಂದವರು ಅವರಿಬ್ಬರೇ.ಸಮಯ ಎಷ್ಟಾಗಿದೆಯೋ ನನಗೆ ತಿಳಿಯದು.ಸೂರ್ಯನಿನ್ನೂ ಉದಯಿಸಿಲ್ಲವೆನ್ನುವುದಕ್ಕೆ ಕತ್ತಲು ಸಾಕ್ಷಿಯಾಗಿತ್ತು.ವಿದ್ಯುತ್ ಮರಳಿಬಂದಿದೆಯೆಂಬುದರ ಸಾಕ್ಷಿಯಾಗಿ ಗೇಟಿನ ದೀಪಗಳು ಉರಿಯುತ್ತಿದ್ದವು.ಗೇಟಿನ ಪಕ್ಕದಲ್ಲಿಯೇ ಉರುಳಿಬಿದ್ದಿದ್ದ ಕಾವಲುಗಾರನ ಶವ ಕಾಣಿಸಿತ್ತು.ಕಾಟಾಚಾರಕ್ಕೆನ್ನುವಂತೆ ಮನೆ ಕಾಯ್ದುಕೊಂಡಿದ್ದ ಚಿಕ್ಕ ಮೋರೆಯ ಅಶಕ್ತ ಮುದುಕ ನುಸುಳುಕೋರರ ಒಂದೇ ಏಟಿಗೆ ಶವವಾಗಿ ಹೋಗಿದ್ದನೇನೋ.ದುಷ್ಕರ್ಮಿಗಳು ಅವನನ್ನು ಹೇಗೆ ಕೊಂದಿರಬಹುದೆನ್ನುವ ಸಣ್ಣದ್ದೊಂದು ಕೆಟ್ಟ ಕುತೂಹಲ ನನ್ನಲ್ಲಿ.ದುಷ್ಟರ ಎಳೆತದಿಂದ ನೆಲಕ್ಕೆ ತರಚುತ್ತಲೇ ಸಾಗುತ್ತ ಅಸಾಧ್ಯವೆನ್ನುವಂತೆ ನೋಯುತ್ತಿದ್ದ ದೇಹವನ್ನೊಮ್ಮೆ ಎತ್ತಿ ಅವನತ್ತ ನೋಡಿದೆ.ರಕ್ತದ ಕುರುಹುಗಳೇನೂ ಗೋಚರಿಸಲಿಲ್ಲ.ಸರಿಯಾಗಿ ಗಮನಿಸುವುದೂ ಸಹ ನನ್ನಿಂದ ಸಾಧ್ಯವಾಗಲಿಲ್ಲವೆನ್ನಿ.ಬಹುಶ: ಅವರು ನಾಲ್ವರಿರಬೇಕು.ಅವರದ್ದು ತಾಮ್ರ ವರ್ಣದ ಟೊಯೋಟ ಕಾರು.ನಾನು ಬಾಲಕನಾಗಿದ್ದಾಗ ಇಂಥದ್ದೊಂದು ಕಾರು ನಮ್ಮ ಮನೆಯಲ್ಲಿಯೂ ಇತ್ತೆಂಬ ಅಸ್ಪಷ್ಟ ನೆನಪು ನನ್ನ ಮಸ್ತಿಷ್ಕದಲ್ಲಿ.ಆದರೆ ಖದೀಮರ ಕಾರು ತುಂಬ ಹಳೆಯದ್ದು.ಕಾರಿನ ಡಿಕ್ಕಿಯನ್ನು ತೆರೆದ ಖೂಳರು ನನ್ನನ್ನು ಅದರಲ್ಲೆಸೆದು ಜೋರಾಗಿ ಬಾಗಿಲು ಜಡಿದರು.ನನಗೀಗ ಏನೂ ಕಾಣಿಸದು.ಡಿಕ್ಕಿಯಲ್ಲಿನ ಹಳೆಯ ಜಮಖಾನೆಗೆ ನನ್ನ ಮುಖಕ್ಕೆ ಒತ್ತುತ್ತಿದ್ದರೆ,ನನ್ನ ಮೈಯನ್ನು ಒತ್ತುತ್ತಿದ್ದದ್ದು ಹೆಚ್ಚುವರಿ ಚಕ್ರದ ಒರಟು ರಬ್ಬರು.ಚಕ್ರ ನನ್ನನ್ನು ಒತ್ತುತ್ತಿತ್ತೋ ಅಥವಾ ನಾನೇ ಅದನ್ನೊತ್ತುತ್ತಿದ್ದೆನೋ ಸ್ಪಷ್ಟವಾಗಿ ಹೇಳಲಾರೆ.ಕಾರು ಚಲಿಸುತ್ತಿದ್ದ ವೇಗಕ್ಕೆ,ರಸ್ತೆಯಲ್ಲಿನ ಸಣ್ಣಪುಟ್ಟ ದಿಣ್ಣೆಗಳ ಮೇಲಿನ ಅದರ ನೆಗೆತಕ್ಕೆ ನನ್ನ ದೇಹವೂ ಸಣ್ಣಗೆ ಜಿಗಿಯುತ್ತಿತ್ತು.ಸಹಿಸಲಾಗದಷ್ಟು ನೋವಿನ ನಡುವೆಯೂ ಇನ್ನಷ್ಟು ನೋವು ನಮಗಾಗಿ ಕಾದಿದೆಯೆನ್ನುವ ಸತ್ಯವನ್ನು ಗ್ರಹಿಸಿ ಮನಸ್ಸಿಗೊಂದು ಮಿಥ್ಯಾ ಸಮಾಧಾನವನ್ನು ಹೇಳಿಕೊಂಡೇ ಸುಮ್ಮನೇ ಎಲ್ಲವನ್ನು ಸಹಿಸಿಕೊಂಡು ದಂತವೈದ್ಯನ ಮುಂದೆ ಕುಳಿತುಕೊಳ್ಳುತ್ತೇವಲ್ಲ,ಅಂಥದ್ದೆ
ಅನುಭವ ನನಗಿಂದು ಆಗುತ್ತಿತ್ತು.
ಸಹಿಸಲಸಾಧ್ಯ ನೋವಿಗೆ ಜ್ವರಬಂದಂತಾಗಿ ಸಣ್ಣಗೆ ನಡುಗುತ್ತಿರುವ ಮೈಗೆಲ್ಲ ಮಲೇರಿಯಾ ಏರಿದ ಭಾವನೆ. ಅರೆಬರೆ ನಿದ್ರೆಯ ನಡುವೆ ಕಾಡುತ್ತಿರುವ ಹತ್ತಾರು ಕೆಟ್ಟಕಲ್ಪನೆಗಳು.ನನ್ನ ಮಗನನ್ನೂ ಸೇರಿದಂತೆ ನನ್ನಿಡಿ ಕುಟುಂಬದ ಮಾರಣ ಹೋಮವನ್ನೇ ಮಾಡಿರಬಹುದಾ ಈ ದುಷ್ಟರು..? ಬಹುಶ: ನನ್ನ ಮಡದಿಯ ಮೇಲೆ ಅತ್ಯಾಚಾರವನ್ನು ನಡೆಸಿರಬಹುದು.ಈಗ ನನ್ನ ಮೇಲೆ ಆಸಿಡ್ ದಾಳಿಯ ಆಲೋಚನೆ ಇವರದ್ದಾಗಿರಬಹುದಾ..?ನನಗೆ ಸಾಯುವುದು ಇಷ್ಟವಿಲ್ಲ.ಆದರೆ ಅನಿವಾರ್ಯವಾದರೆ ನಾನು ತಾನೇ ಏನು ಮಾಡಬಲ್ಲೇ?ಕೊಲ್ಲುವ ಮೊದಲು ಈ ಖೂಳರು ನನಗೆ ಚಿತ್ರಹಿಂಸೆ ಕೊಡದಿದ್ದರೆ ಸಾಕು ಎನ್ನುವ ಆಶಯ ನನ್ನದು.ನನ್ನ
ವೃಷಣಗಳನ್ನು ಇಕ್ಕಳಕ್ಕೆ ಸಿಲುಕಿಸಿ ಒಡೆದು ಹಾಕಿದರೆ,ಸಿಗರೇಟಿನಿಂದ ನನ್ನ ಕಣ್ಣನ್ನು ಸುಟ್ಟಿ ಹಾಕಿದರೆ ಆಗುವ ಕಲ್ಪನಾತೀತ ನೋವನ್ನು ಸಹಿಸುವುದು ನನ್ನಿಂದ ಸಾಧ್ಯವೇ..? ಇಂಥಹ ಭಯಾನಕ ಆಲೋಚನೆಗಳಿಂದಾಗಿ ನನಗೆ ಕಾರಿನ ಡಿಕ್ಕಿಯೇ ಹೆಚ್ಚು ಸುರಕ್ಷಿತವೆಂಬಂತೆ ಭಾಸವಾಗಲಾರಂಭಿಸಿತ್ತು.ಮುಗಿಯದೇ ಇರುವ ಪಯಣ ಇದಾಗಿರಲಿ ಎನ್ನುವ ಅರ್ಥಹೀನ ಆಸೆಯೊಂದು ನನ್ನಲ್ಲಿ ಹುಟ್ಟಿಕೊಂಡಿತ್ತು.
ಯಾತನೆಯ ನಡುವೆಯೂ ನಿದ್ರೆಯ ಮಂಪರಿನಲ್ಲಿ ಮುದುರಿಕೊಂಡಿದ್ದ ನನ್ನನ್ನು ಅವರು ಡಿಕ್ಕಿಯಿಂದ ಹೊರಗೆಳೆಯುವಾಗ ಬೆಳಕು ಹರಿದಿತ್ತು.ಆಗಲೇ ನಾನು ಅವರು ಮೊದಲು ಬಾರಿ ಸ್ಪಷ್ಟವಾಗಿ ನೋಡಿದ್ದು.ಆಜಾನುಬಾಹುಗಳಾಗಿದ್ದ ಪುಂಡರು ನನ್ನನ್ನು ಪುನ: ದರದರನೇ ಎಳೆದೊಯ್ದು ಮನೆಯೊಂದನ್ನು ಸೇರಿಕೊಂಡರು. ಗೋಡೆಗೆ ಹಚ್ಚಿದ್ದ ಬಣ್ಣವೆಲ್ಲ ಉದುರಿ ಹೋಗಿ ಅಲ್ಲಲ್ಲಿ ಬಿರುಕೊಡೆದಿದ್ದ ಶಿಥಿಲಾವಸ್ಥೆಯಲ್ಲಿದ್ದ ಹಳೇಯ ಮನೆಯದು.ಅಲ್ಲಿನ ಕಿಟಕಿಗಳಿಲ್ಲದ ಬಚ್ಚಲುಮನೆಯಲ್ಲಿ ನನ್ನನ್ನು ತಳ್ಳಿ ಬಾಗಿಲು ಹಾಕಿ ಹೊರನಡೆದ ದಾಂಡಿಗರ ಭಯಕ್ಕೆ ನಾನು ಗಡಗಡ ನಡುಗುತ್ತಿದ್ದೆ.ನನ್ನ ಪ್ಯಾಂಟಿನಲ್ಲಿಯೇ ಮೂತ್ರ ವಿಸರ್ಜನೆಯಾಗಿ ಅದೆಷ್ಟು ಹೊತ್ತು ಕಳೆದಿತ್ತೋ ಗೊತ್ತಿಲ್ಲ.ಒಳ ಉಡುಪಿನಲ್ಲಿಯೇ ಒಣಗಿಹೋಗಿದ್ದ ಮೂತ್ರದಿಂದಾಗಿ ತೊಡೆಯ ಸಂದಿಯಲ್ಲಿ ತಡೆಯಲಾಗದ ನವೆ. ಅವರನ್ನು ನಂಬಿಸೋಣವೆಂದರೆ ನನಗೆ ದೇವರ ಸ್ತೋತ್ರಗಳೂ ನೆನಪಿಲ್ಲ.ಅವರೊಂದಿಗೆ ಕುಳಿತು ಪ್ರಾಥಿಸಿ ಅವರ ಕರುಣೆಯನ್ನು ಸಂಪಾದಿಸ ಹೋದರೆ ನನ್ನ ತಪ್ಪುತಪ್ಪು ಉಚ್ಛಾರಣೆಯಿಂದ ನಾನೊಬ್ಬ ನಾಸ್ತಿಕ ಎನ್ನುವುದನ್ನು ತುಂಬ ಸುಲಭವಾಗಿ ಅವರು ಕಂಡುಕೊಳ್ಳುತ್ತಾರೆ.ಆಗ ನನ್ನ ಪರಿಸ್ಥಿತಿ ಇನ್ನಷ್ಟು ದುರ್ಭರವಾಗುತ್ತದೆ. ಅದರ ಬದಲಾಗಿ ಸುಮ್ಮನೇ ಕುಳಿತಲ್ಲಿಯೇ ನಾನು ಬಾಯಿ ಮಣಮಣಿಸಿದರೆ ನಾನೊಬ್ಬ ಧಾರ್ಮಿಕ ವ್ಯಕ್ತಿ ಎಂದು ಭಾವಿಸಿ ಅವರು ನನ್ನನ್ನು ಬಿಟ್ಟು ಬಿಡಬಹುದೇನೋ.ಯಾರೂ ಇಲ್ಲದ ಈ ಮನೆಯ ಮೌನವೂ ಈಗ ಅಸಹನೀಯವೇ.
ಸಂಜೆಯ ಮಬ್ಬುಗತ್ತಲಲ್ಲಿ ಹಿಂದಿರುಗಿದ ದುಷ್ಕರ್ಮಿಗಳು ಮಾತನಾಡುತ್ತಿರುವ ಭಾಷೆಯೂ ನನಗೆ ಅರ್ಥವಾಗುತ್ತಿಲ್ಲ.ಅದು ಅರೇಬಿಕ್ ಅಥವಾ ಪಶ್ತೂನ್ ಭಾಷೆಯಿರಬಹುದೆನ್ನಿಸಿತು.ಇಷ್ಟಕ್ಕೂ ಈ ಬಂಡುಕೋರರು ಯಾರು ಎಂಬುದೇ ನನಗರ್ಥವಾಗುತ್ತಿಲ್ಲ.ಅಪ್ರಯತ್ನವಾಗಿ ಕಣ್ಣೀರು ಹರಿದುಬರುತ್ತಿದೆ.ಒಂದರ್ಥದಲ್ಲಿ ಅದು ಒಳ್ಳೆಯದೇ.ನೀರು ತುಂಬಿದ ಕಣ್ಗಳಿಂದ ಅತ್ಯಂತ ದೈನ್ಯಭಾವದಿಂದ,’ನಾನು ಮಾಡಿದ ತಪ್ಪಾದರೂ ಏನು ಸ್ವಾಮಿ..? ದಯವಿಟ್ಟು ನನ್ನನ್ನು ಬಿಟ್ಟುಬಿಡಿ’ಎಂದು ಅವರನ್ನು ಅಂಗಲಾಚಿದೆ.ಸರಿಯಾಗಿ ಕಾರ್ಯ ನಿರ್ವಹಿಸದ ನನ್ನ ಬಾಯಿಂದ ಹೊರಟ ಮನವಿಗಳು ಕುಡುಕನೊಬ್ಬನ ಬಡಬಡಿಕೆಯಂತೆ ಭಾಸವಾದವು.ಅವರಿಗಂತೂ ನನ್ನ ಮೇಲೆ ಎಳ್ಳಷ್ಟೂ ಕರುಣೆ ಹುಟ್ಟಲಿಲ್ಲ.ನನ್ನ ಮಾತುಗಳು ಕೇಳಿಸಿಯೇ ಇಲ್ಲವೇನೋ ಎಂಬಂತೆ ಅವರಲ್ಲೊಬ್ಬ ಪೀಠವೊಂದರ ಮೇಲೆ ವಿಡಿಯೋ ಕ್ಯಾಮರಾವೊಂದನ್ನು ನಿಲ್ಲಿಸಿದ.ಮತ್ತೊಬ್ಬ ಚಿತ್ರೀಕರಣಕ್ಕೆ ಅವಶ್ಯಕವಿರುವ ದೊಡ್ಡ ದೀಪವನ್ನು ಹೊತ್ತಿಸಿದ ಇವರೇನು ಮಾಡಲಿದ್ದಾರೆಂಬುದನ್ನು ಊಹಿಸಿದ ನನ್ನ ಜಂಘಾಬಲವೇ ಉಡುಗಿಹೋಯಿತು.ಖಂಡಿತವಾಗಿಯೂ ನನಗೆ ಈದ್ ಹಬ್ಬದ ಆಡಿನಂತಾಗಲು ಇಷ್ಟವಿಲ್ಲ.ಬಾಲಕನಾಗಿದ್ದಾಗ ಎಳೆಯ ಆಡಿಗೆ ಹುಲ್ಲು ತಿನ್ನಿಸುತ್ತಿದ್ದದ್ದು ನನಗಿನ್ನೂ ನೆನಪಿದೆ.ಸುಮಾರು ಒಂದು ವಾರಗಳಷ್ಟು ಕಾಲ ನಮ್ಮ ಮನೆಯಲ್ಲಿರುತ್ತಿದ್ದ ಆ ಆಡಿಗಾಗಿಯೇ ನಾನು ಎಳೆಯ ಸೊಪ್ಪುಗಳನ್ನು ಮುರಿದು ತರುತ್ತಿದ್ದೆ.ಚಂದಕ್ಕಿದ್ದ ಆಡಿನ ಕಣ್ಗಳಲ್ಲಿ ಮಾತ್ರ ಸಾವಿನ ಛಾಯೆ.ನನಗೆ ಅದರ ಕಣ್ಣುಗಳು ಇಷ್ಟವಾಗುತ್ತಿರಲಿಲ್ಲ.ಬಾಯಿ ಸೊಟ್ಟಗೆ ಮಾಡಿ ಹುಲ್ಲನ್ನು ಅಗಿಯುತ್ತಿದ್ದ,ಸಪೂರ ಕಾಲುಗಳ ಮೇಕೆಯನ್ನು ಹಬ್ಬದ ದಿನದಂದು ಕತ್ತರಿಸಿ ಭಗವಂತನಿಗೆ ಅರ್ಪಿಸುವ
ದೄಶ್ಯವನ್ನು ನಾನು ಭಯಮಿಶ್ರಿತ ಕುತೂಹಲದಿಂದ ನೋಡುತ್ತಿದ್ದೆ.ಇಂದು ನಾನು ಆ ಪಶುವನ್ನೇ ಪ್ರತಿನಿಧಿಸುತ್ತಿದ್ದೇನಾ ಎಂದೆನಿಸಲಾರಂಭಿಸಿದೆ.’ದಯವಿಟ್ಟು ನನಗೇನೂ ಮಾಡಬೇಡಿ’ಎಂದು ಇಂಗ್ಲೀಷಿನಲ್ಲಿ ನಾನು ತೊದಲಿದ್ದೂ ಸಹ ನಿರರ್ಥಕವೇ.ಭಯಕ್ಕೆ ನಾನು ಏನೇನೋ ಗೊಣಗಲಾರಂಭಿಸಿದ್ದೆ.’ನನ್ನನ್ನು ಬಿಟ್ಟುಬಿಡಿ.ಇದುವರೆಗೂ ನಾನು ಧರ್ಮದ ವಿಷಯವಾಗಿ ಏನನ್ನೂ ಬರೆದಿಲ್ಲ.ಧರ್ಮದ ಬಗ್ಗೆ ನನಗೆ ತುಂಬ ಗೌರವವಿದೆ.ನನ್ನ ತಪ್ಪು ಏನೆಂದು ನನಗೆ ತಿಳಿಸಿ.ತಿದ್ದಿಕೊಳ್ಳುತ್ತೇನೆ.ಇನ್ನು ಮೇಲೆ ನೀವು ಹೇಳಿದ್ದನ್ನೇ ಬರೆಯುವೆ.ನೀವು ಬೇಡವೆನ್ನುವುದಾದರೆ ನಾನು ದೇವರಾಣೆಗೂ ಬರೆಯುವುದನ್ನೇ ನಿಲ್ಲಿಸಿಬಿಡುತ್ತೇನೆ,ದಯವಿಟ್ಟು ಕೇಳಿ,ನಾವೆಲ್ಲರೂ ಒಂದೇ’ಎಂಬ ನನ್ನ ಅಸ್ಪಷ್ಟ ಗೊಣಗುವಿಕೆಗಳು ಪ್ರಯೋಜನಕ್ಕೆ ಬಾರದಾದವು.
ಅಷ್ಟರಲ್ಲಿ ಒಬ್ಬಾತ ನನ್ನ ಬಾಯಿಗೆ ಕಪ್ಪುಪಟ್ಟಿಯನ್ನು ಸುತ್ತಿ ನೆಲದ ಮೇಲೆ ಬೋರಲು ಮಲಗಿಸಿದ.ನನ್ನ ಹಿಂದಿನಿಂದ ಬಂದ ಮತ್ತೊಬ್ಬ ನನ್ನು ಕೂದಲುಗಳನ್ನು ಎಳೆದು ಹಿಡಿದು ಕತ್ತನ್ನೆತ್ತಿ ಹಿಡಿದ.ಆ ಹೊತ್ತಿನಲ್ಲಿ ನನ್ನಲ್ಲೊಂದು ವಿಕ್ಷಿಪ್ತ ಲೈಂಗಿಕ ಭಾವ.ನನ್ನ ಮಡದಿಯಿನ್ನೂ ಬದುಕಿರಬಹುದಾ..? ಬದುಕಿದ್ದರೆ ನನ್ನ ನಂತರ ಅವಳು ಮತ್ತೊಬ್ಬನೊಟ್ಟಿಗೆ ಮಲಗಬಹುದಾ? ಅಸಲಿಗೆ ಎಷ್ಟು ಜನರೊಂದಿಗೆ ಆಕೆ ಚಕ್ಕಂದವಾಡಬಹುದು? ಹತ್ತು ಹಲವು ಹುಚ್ಚುಚ್ಚು ಪ್ರಶ್ನೆಗಳು.ಕೊನೆಗೊಮ್ಮೆ ’ಛೇ,ಆಕೆ ಅಂತವಳಲ್ಲ’ ಎನ್ನುವ ನಿರುಮ್ಮಳ ಮನಸ್ಥಿತಿ.ಬೆನ್ನ ಹಿಂದೆ ನಿಂತವನ ಕೈಯಲ್ಲಿ ಮಿರುಗುತ್ತಿದ್ದ ಉದ್ದನೇಯ ಕತ್ತಿ ನನಗೆ ಕಾಣುತ್ತಿತ್ತು.ಆತನೀಗ ಕ್ಯಾಮರಾದಲ್ಲಿ ಮಾತನಾಡುತ್ತಿದ್ದಾನೆ.ಅವನನ್ನು ನೋಡಲಾಗದೇ ನಾನು ಗಟ್ಟಿಯಾಗಿ ಕಣ್ಣುಗಳನ್ನು ಮುಚ್ಚಿಕೊಂಡೆ.ಹೃದಯಾಘಾತವಾಗಿ ನಾನು ಈ ಕ್ಷಣಕ್ಕೆ ಪ್ರಾಣ ಬಿಡಬಾರದೇ ಎನ್ನಿಸುತ್ತಿದೆ.ದೇಹದಲ್ಲೆಲ್ಲ ವಿಲಕ್ಷಣ ಕಂಪನ.ಅದಾಗಲೇ ಕುತ್ತಿಗೆಯ ಹಿಂಬದಿಯಿಂದ ’ಕಸ್ಸಸ್ಸಸ್ಸ್’ಎನ್ನುವ ಸದ್ದು.ಮೊದಮೊದಲು ಬಿಸಿಬಿಸಿಯಾಗಿ ಕ್ಷಣಮಾತ್ರದಲ್ಲಿ ತಣ್ಣಗೆ ಕತ್ತಿನುದ್ದಕ್ಕೂ ಹರಿದು ಬರುತ್ತಿದ್ದ ರಕ್ತವನ್ನು ಕಣ್ತೆರೆದು ನೋಡಿದೆ.ಒಂದರೆಕ್ಷಣ ಹಿಂದೆಂದೂ ಅನುಭವಿಸದಷ್ಟು ನರಕಸದೃಶ್ಯ ವೇದನೆ.ನಂತರ ಕಣ್ಣೆದುರು ಕವಿದ ಘೋರ ಕಗ್ಗತ್ತಲೆ. ದೇಹ ಮನಸುಗಳೆರೆಡು ಖಾಲಿ ಖಾಲಿ.ಬರಿಯ ಶೂನ್ಯ...
ಓದಿ ಮುಗಿಸಿದ ನಂತರವೂ ತುಂಬ ಹೊತ್ತು ಕಾಡುವ ಈ ಪರಿಣಾಮಕಾರಿ ಕತೆಯನ್ನು ಬರೆದವರು ಪಾಕಿಸ್ತಾನಿ ಸಂಜಾತ ಬ್ರಿಟಿಷ್ ಬರಹಗಾರ ಮೊಹ್ಸಿನ್ ಹಮೀದ್.’Beheading' ಎಂಬ ಹೆಸರಿನ ಈ ಕತೆಯನ್ನು ಬರೆದ ಸಂದರ್ಭವನ್ನು ಪ್ರಸಿದ್ಧ ಪಾಕಿಸ್ತಾನಿ ಪತ್ರಿಕೆ ’ದಿ ಎಕ್ಸಪ್ರೆಸ್ ಟ್ರಿಬ್ಯೂನ್’ನಲ್ಲಿ ವಿವರಿಸುವ ಹಮೀದ್,’ನಾನು ಬ್ರಿಟನ್ನಿನಿಂದ ಪಾಕಿಸ್ತಾನಕ್ಕೆ ಹಿಂದಿರುಗುವ ಒಂದೂವರೆ ವರ್ಷಗಳ ಮುಂಚೆಯೇ ಈ ಕತೆಯನ್ನು ಬರೆದಿದ್ದೆ.ಪಾಕಿಸ್ತಾನಿ ಬರಹಗಾರನೊಬ್ಬ ಅಪಹರಣ ಮತ್ತು ಶಿರಚ್ಛೇದನ ವಸ್ತುವುಳ್ಳ ಕಾಲ್ಪನಿಕ ಕತೆಯಿದು.ಪಾಕಿಸ್ತಾನದಲ್ಲಿ ಇಂಥಹ ಹತ್ಯೆಗಳು ತೀರ ಸಹಜವೆಂದು ಬಿಂಬಿಸುವುದು ನನ್ನ ಕತೆಯ ಉದ್ದೇಶವಲ್ಲ. ಲೇಖಕನೊಬ್ಬನನ್ನು ಕಾಡುವ ಧರ್ಮಾಂಧರ ಕುರಿತಾದ ಭಯದ ಅಭಿವ್ಯಕ್ತಿ ಅನಾವರಣವಿದು.ಈ ಕತೆಯನ್ನು ಬರೆಯುವ ಮೂಲಕ ನಾನು ತುಂಬ ಧೈರ್ಯಶಾಲಿಯಾದೆನೆಂದು ಸಹ ಹೇಳಲಾರೆ.ಇಷ್ಟಾಗಿಯೂ ಈ ಬಗೆಯ ಕತೆಗಳು ನಾನು ಮತ್ತು ನನ್ನಂಥಹ ಲೇಖಕರುಗಳಲ್ಲೊಂದು ಪ್ರಶ್ನೆಯನ್ನು ಉಳಿಸಿ ಹೋಗುತ್ತವೆ’ಎಂದು ಬರೆಯುತ್ತಾರೆ.ಹೀಗೆಂದು ಅವರು ಬರೆಯುತ್ತಾರಾದರೂ ಪತ್ರಿಕೆಯಲ್ಲಿನ ಅವರ ವಿವರಣೆಯ ಸಂಪೂರ್ಣ ಸಾರವನ್ನೋದಿದಾಗ ಕತೆಯನ್ನು ವಿವರಿಸುವ ಒತ್ತಡ ಮತ್ತು ಪಾಕಿಸ್ತಾನದಂತಹ ದೇಶದಲ್ಲಿ ಧರ್ಮವಿರುದ್ಧವಾಗಿ ಸಾಗುವ ಲೇಖಕರ ಪರಿಸ್ಥಿತಿಯನ್ನು ಊಹಿಸುವುದು ಕಷ್ಟವೇನಲ್ಲ. ’ಮಾಥ್
ಸ್ಮೋಕ್’,’ದ ರಿಲಕ್ಟಂಟ್ ಫಂಡಮೆಂಟಲಿಸ್ಟ್’ನಂತಹ ಅದ್ಭುತ ಕಾದಂಬರಿಗಳನ್ನು ಬರೆದ ಮೊಹ್ಸಿನ್ ಹಮೀದರ ಈ ಕತೆ ಮತಾಂಧರ ರಾಷ್ಟ್ರಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಸ್ಥಿತಿಗೆ ಎತ್ತಿ ಹಿಡಿದ ಕೈಗನ್ನಡಿ ಎಂದರೆ ಸುಳ್ಳಾಗಲಾರದು.ಕಲ್ಪನೆಗಳಲ್ಲಿ ಕತೆಗಳು ಹುಟ್ಟುತ್ತವೆಂಬುದು ನಿಜ.ಆದರೆ ಹುಟ್ಟಿದ ಕತೆಗಳೆಲ್ಲವೂ ಕಲ್ಪನೆಯೇ ಆಗಿರಬೇಕೆಂದೇನಿಲ್ಲ ಅಲ್ಲವೇ..??
Comments
ಉ: ಕತೆಗಾರನ ಗುಪ್ತಭಯ ಕತೆಯಲ್ಲಿಯೇ ಬಯಲಾಯಿತು...!!
ಉತ್ತಮ ಕಥಾವಸ್ತು ಹಾಗು ಹಾಗು ಅಷ್ಟೆ ಉತ್ತಮ ಬಾಷಾಂತರ (ಕನ್ನಡ ರೂಪ)
ಅಭಿನಂದನೆಗಳು