ಕತೆಗಾರ್ತಿ ದೊಡ್ಡಮ್ಮ

ಕತೆಗಾರ್ತಿ ದೊಡ್ಡಮ್ಮ

ಬರಹ

"ರೂಪವ್ವ ಬಾರೆ , ಆನಂದ ಬಾರಲಾ , ಒಂದ್ಕತೆ ಯೇಳ್ತೀನಿ " ಅಂತಾ ಆ ಹೆಂಗಸು ಕರೆದ ತಕ್ಶಣ, ಏನೇ ಮಾಡುತ್ತಿದ್ದರೂ ನಾವು ಅವಳ ಮುಂದೆ ಹಾಜಾರಾಗುತ್ತಿದ್ದೆವು.
ಅವಳ ಹೆಸರೇ ದೊಡ್ಡಮ್ಮ. ಪಕ್ಕದ ಮನೆಯವರಿಗೆ ಯಾವುದೋ ಸಂಬಂಧದವಳು. ಅವಾಗ ವಯಸ್ಸು ಎಷ್ಟು ಅಂತ ಗೊತ್ತಾಗ್ತಿರಲಿಲ್ಲ, ಅದೆಲ್ಲಾ ಬೇಕಾಗೂ ಇರಲಿಲ್ಲ.
ಈಗ ಅನ್ನಿಸುತ್ತಿದೆ ಸುಮಾರು ೬೫ -೭೦ ವರ್ಷವಿರಬೇಕು.

"ಎಲ್ಲಿ ಒಂದ್ನಾಕಾಣೆ ತತ್ತಾ . ಎಲೆ ಅಡಿಕೆ ತಕ್ಕೊಂತೀನಿ ."ಅವಳು ಕೇಳಿದ ತಕ್ಷಣ ಯಾರೂ ಒಬ್ಬ ಹುಡ್ಗ ಅಥವ ನಾನೋ ಯಾರಾದರೂ ತಮ್ಮ ಹುಂಡಿಯಿಂದ ಅವಳಿಗೆ ನಾಕಾಣೆ ಕೊಟ್ಟರೆ ಸೊಂಟಕ್ಕೆ ಸಿಗಿಸಿದ ತನ್ನ ಎಲೆ ಅಡಿಕೆ ಚೀಲದಿಂದ ಒಂದಷ್ಟು ಎಲೆ ಆಡಿಕೇನಾ ಕುಟ್ಕೊಂಡು ಕತೆ ಹೇಳಲು ಶುರು ಮಾಡುತ್ತಿದ್ದಳು.
ಅಬ್ಬಾ ಅವಳೊಂದು ಕಥಾ ಕೋಶವೇ ಇರಬೇಕು . ದಿನಕ್ಕೆ ಒಂದು ಹೊಸಾ ಕತೆ ಹೆಣೆಯುತ್ತಿದ್ದಳು.
ಅವಳ ಕತೆಗಳಾದರೂ ಎಂತಹದು. ಕರಡಿ , ರಾಜ ,ಸಿಂಹ, ರಾಜಕುಮಾರಿ, ಹೀಗೀ ಏನೇನೂ ಕತೆಗಳು . ನಮಗೆಲ್ಲಾ ದೊಡ್ಡಮ್ಮ ಎಂದರೆ ಅಚ್ಚು ಮೆಚ್ಚು.
ರಾತ್ರಿ ಕತ್ತಲೆಯಲ್ಲಿ ಸೀಮೆ ಎಣ್ಣೆ ದೀಪ ಹಚ್ಚಿಕೊಂಡು ವಠಾರದ ಮಕ್ಕಳೆಲ್ಲಾ ಅವಳ ಮುಂದೆ ಕೂತುಬಿಡ್ತಿದ್ದೆವು. ಅವಾಗ ಈಗಿನಂತೆ ಟಿ .ವಿ ಹುಚ್ಚು ಇರಲಿಲ್ಲವಲ್ಲ (ನಮ್ಮನೇಲಿ ಟಿ.ವಿ. ಇರಲಿ, ಕರೆಂಟೇ ಇರಲಿಲ್ಲ ) ಅದೇ ಒಂಥರಾ ಎಂಟರ್‌ಟೈನ್‍ಮೆಂಟ್ ನಮಗೆಲ್ಲಾ.
ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ರಸ ಸೋರಿಸಿಕೊಂಡು ಕತೆ ಹೇಳುತ್ತಿದ್ದರೂ ನಮಗ್ಯಾರಿಗೂ ಅಸಹ್ಯವೆನಿಸುತ್ತಿರಲಿಲ್ಲ.
"ದೊಡ್ಡಮ್ಮ ಮತ್ಯಾವುದಾದರೂ ಕತೆ ಹೇಳು " ಒಂದು ಕತೆ ಮುಗಿದ ನಂತರ ಮತ್ತೆ ದುಂಬಾಲು ಬೀಳುತ್ತಿದ್ದೆವು. ಎಷ್ಟೋ ಕತೆಗಳನ್ನು ಆಗಲೇ ಕೇಳಿದ್ದರೂ ಅವಳ ಬಾಯಿ ಕಣ್ಣಗಳ ಚಲನೆ , ಅವಳ ಭಾಷೆ ಒಂಥರಾ ಅಪ್ಯಾಯಮಾನವಾಗಿಸಿತ್ತು. ಅವಳೂ ಅಷ್ಟೆ ಒಂಚೂರು ಬೇಸರಿಸಿಕೊಳ್ಳದೇ ಹೇಳುತ್ತಿದ್ದಳು. ಒಂದು ರೀತಿಯ ಆತ್ಮೀಯ ಬಂಧವೇರ್ಪಟ್ಟಿತ್ತು ನಮ್ಮಲ್ಲೆಲ್ಲಾ
"ಚಿನ್ನದ ಪೆಟ್ಗೇಲಿ ಅಣ್ಣ, ರನ್ನದ ಪೆಟ್ಗೇಲಿ ಅಕ್ಕ, ಅಟ್ಟಾದ ಮೆಲ್ ಮಾವಾ ನಾಳೆ ಹೊತ್ಗೆ ಎಲ್ಲಾ ಮಾಯ " ಕತೆ ಯೊಂದ ಹೇಳುವಾಗ ಈ ವಾಕ್ಯ ನನ್ನ ಮನಸಲ್ಲಿ ಉಳ್ಕೊಂಡಿದೆ
"ನಮ್ಮನೇಲಿ ಅವರ ಜಾತಿ ಬೇರೆ. ಅವರ ಮನೆಗೆ ಹೋಗ್ಬೇಡ "ಹಾಗೆ ಹೀಗೆ ಅಂತ ಹೇಳಿದರೂ ನಾನು ಕೇಳುತ್ತಿರಲಿಲ್ಲ.
ಮತ್ತೆ ದೊಡ್ಡಮ್ಮ ಒಗಟು ಹೇಳುವುದರಲ್ಲಿ ನಿಸ್ಸೀಮಳು
"ಸಣ್ಣ ಪುಟ್ಟ ದೇವಸ್ಥಾನ ಬಗ್ಗಿ ಬಗ್ಗಿ ನಮಸ್ಕ್ಲಾರ"
"ಹಸಿರು ಗಿಡದ ಮ್ಯಾಗಿ ಮೊಸರು ಚೆಲ್ಯಾರು"
"ಅಡ್ಡಡ್ಡ ಬಾವಿ ನೀರು ಒಂಚೂರು ಇಲ್ಲ"

ಹೀಗೆ ಅವಳು ಒಗಟು ಕೆಳಿದಾಗ ದೊಡ್ಡಾರು ಸಣ್ಣವರು ಎಂದು ನೋಡದೆ ಭಾಗಿಯಾಗುತ್ತಿದ್ದರು.

ಎಷ್ಟೋ ಜನಪದ ಹಾಡುಗಳನ್ನು ಹಾಡುತ್ತಿದ್ದಳು. ಆ ಹಾಡುಗಳನ್ನು ಕಲಿತುಕೊಳ್ಳೊದಿಕ್ಕೂ ನಮಗೆ ಪೈಪೋಟಿ

ತೊಟ್ಟಿಲ ಒತ್ಕೊಂಡು ತವರ ಬಣ್ನ ತೊಟ್ಕೊಂದು

ಅದೇನು ಮತ್ತೆ ಗೊತ್ತಿಲ್ಲ
ಕೂಸು ಇದ್ದ ಮನೀಗೆ ಬೀಸಣಿಕೆ ಯಾತಕ

ಕೂಸ ಕಂದಯ್ಯ ಒಳ ಹೊರಗ
ಕೂಸ ಕಂದಯ್ಯ ಒಳ ಹೊರಗ
ಆಡಿದರ
ಬೀಸಣಿಗೆ ಗಾಳಿ ಸುಳಿದಾವು
-------------
------------------

ಅವಳಿಗೆ ಸಿನಿಮಾ ಹಾಡುಗಳು ಹಿಡಿಸುತ್ತಿರಲಿಲ್ಲ
ನಾನು ನಂಜುಂಡಿ ಕಲ್ಯಾಣ ಸಿನಿಮಾದ "ಒಳಗೆ ಸೇರಿದರೆ ಗುಂಡು " ಹಾಡನ್ನ ಅವಳ ಮುಂದೆ ಹಾಡಿದ್ದಲ್ಲದೆ ಅದಕ್ಕೆ ಕುಣಿದದ್ದಕ್ಕೆ ಹಿಗ್ಗ್ಗಾಮುಗ್ಗಾ ಬೈದಿದ್ದ್ಳು
"ಯವ್ವಿ ಎಂಥಾ ಕಾಲ ಬಂತವ್ವಿ . ಇನ್ನೂ ಎಂತೆಂಥಾ ಹಾಡು ಕೇಳ್ಬೇಕೋ " ಅನ್ನುತ್ತಿದ್ದಳು

ಈಗ ಅವಳಿಲ್ಲ.

ಬಹುಷ ಅವಳು ಈಗ ಯಾವ ಮನೆಯಲ್ಲೂ ಕಾಣ ಸಿಗುವುದಿಲ್ಲ

ಯಾಕೆಂದರೆ ಈಗಿನ ಅಜ್ಜಿಯರೆಲ್ಲರೂ ಟಿ.ವಿ ಯಲ್ಲಿ ಮಗ್ನರಾಗಿದ್ದಾರೆ

ಕತೆ ಹೇಳುವ , ಕತೆ ಕೇಳುವ ತಾಳ್ಮೆ ಈಗ ಯಾರಲ್ಲಿಯೂ ಕಾಣುವುದಿಲ್ಲ

ನೆನ್ನೆ ನನ್ನ ಮಗಲು ಫ್ಯಾನ್ ಕತೆ ಹೇಳು ನೀರು ಕತೆ ಹೇಳು, ಅಂತ ಪೀಡಿಸುತಿದ್ದಾಗ ನಾಲಕ್ಕು ಚಚ್ಚಿ ಮಲಗಿಸಿದೆ. ನಂತರ ಶಾಂತವಾಗಿ ಯೋಚಿಸಿದಾಗ ದೊಡ್ಡಮ್ಮ ನೆನಪಾದಳು.
ಆ ತಾಳ್ಮೆ, ಆ ನಲ್ಮೆ ನಮಗೆ ಬರುತ್ತದೆಯೇ?

ಹೀಘೆ