ಕತ್ತಲಲ್ಲಿ ಕಂಡದ್ದೇನು????
ಸುಮಾರು 6 ವರ್ಷಗಳ ಹಿಂದಿನ ಮಾತು...ಆಗಷ್ಟೇ ಹೊಸದಾಗಿ "Bajaj Caliber " ಗಾಡಿ ಕೊಂಡಿದ್ದೆ...ಆದರೆ ಇನ್ನು ಗಾಡಿ
ಓಡಿಸಲು ಕಲಿತಿರಲಿಲ್ಲ...ಹಾಗಾಗಿ ದಿನಾಲೂ ನನ್ನ ಸ್ನೇಹಿತ ಬಂದು ನನ್ನನ್ನು ಕರೆದುಕೊಂಡು ಹೋಗಿ ಗಾಡಿ ಓಡಿಸಲು ಹೇಳಿಕೊಡುತ್ತಿದ್ದ..ನಮ್ಮ ಮನೆ ಇದ್ದದ್ದು ಚಾಮರಾಜಪೇಟೆಯಲ್ಲಿ...ಮೊದಮೊದಲು ಅಲ್ಲಲ್ಲೇ ಮೈದಾನದಲ್ಲಿ ಕಲಿಸಿಕೊಡುತ್ತಿದ್ದ...ನಂತರ ರಸ್ತೆಗಿಳಿದು "Long Ride " ವರೆಗೂ ಬಂದು ತಲುಪಿತು ನನ್ನ ಗಾಡಿ ಕಲಿಯುವಿಕೆ..
ಹೀಗೆ ಒಮ್ಮೆ ಗಾಡಿ ಕಲಿಯಲು ಚಾಮರಾಜಪೇಟೆಯಿಂದ ಖಾಲಿ ರಸ್ತೆ ಹುಡುಕಿಕೊಂಡು ಕೆಂಗೇರಿಗೆ ಬಂದು ತಲುಪಿದೆವು..ಕೆಂಗೇರಿ
ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದೆ ಹೋದರೆ ಈಗಿರುವ ಮೇಲ್ಸೇತುವೆ ಪಕ್ಕ ಒಂದು ರಸ್ತೆ ಇತ್ತು...ಅದು ಎಂಥಹ ಜಾಗ ಎಂದರೆ..
ನಿರ್ಮಾನುಷವಾದ ಜಾಗ...ಸುತ್ತಲೂ ಖಾಲಿ ನಿವೇಶನಗಳು, ಹುಡುಕಿದರೂ ಒಂದು ನರಪಿಳ್ಳೆಯ ಸುಳಿವು ಇರಲಿಲ್ಲ..ಅದೇಕೋ
ಆ ಜಾಗ ನನಗೆ ತುಂಬಾ ಇಷ್ಟ ಆಗೋಯ್ತು...ಸುಮಾರು ಒಂದು ಗಂಟೆ ಅಲ್ಲಿ ಗಾಡಿ ಕಲಿತು ಮತ್ತೆ ವಾಪಸ್ ಬಂದೆವು...
ನಂತರದ ದಿನಗಳಲ್ಲಿ ಹೇಗೋ ಗಾಡಿ ಓಡಿಸೋದು ಕಲಿತುಬಿಟ್ಟೆ..ಆದರೆ ಆ ಜಾಗ ಮಾತ್ರ ಮರೆಯಲು ಆಗದೆ ವಾರದಲ್ಲಿ ಸುಮಾರು
ಎರಡು ಸಲ ಅಲ್ಲಿಗೆ ಹೋಗಿ ಬರುತ್ತಿದ್ದೆವು..ಪ್ರತಿ ಸಲ ಅಲ್ಲಿ ಹೋದಾಗಲೂ ಏನೋ ಒಂಥರಾ ಖುಶಿ ಆಗುತ್ತಿತ್ತು ಮನಸ್ಸಿಗೆ...ನಾವು
ಅಲ್ಲಿ ಹೋಗಿ ಮಾಡುತ್ತಿದ್ದದ್ದಾರೂ ಏನು..ಹೋಗೋದು, ಗಾಡಿ ಒಂದು ಕಡೆ ನಿಲ್ಲಿಸಿ ಹಾಗೆ ಮಾತಾಡುತ್ತ ಸುತ್ತಾಡಿ ಒಂದು ಗಂಟೆಯ ನಂತರ ವಾಪಸ್ ಬರುತ್ತಿದ್ದೆವು..
ನಂತರ ಕೆಲಸದ ಒತ್ತಡದಲ್ಲಿ ಸುಮಾರು ೨ ತಿಂಗಳು ಆ ಕಡೆ ಹೋಗಲು ಆಗಲಿಲ್ಲ...ಒಂದು ಭಾನುವಾರ ಸಂಜೆ ಹೀಗೆ ಆ ಜಾಗದ ನೆನಪಾಗಿ ನಾನು ನನ್ನ ಸ್ನೇಹಿತ ಅಲ್ಲಿಗೆ ಹೊರಟೆವು..ಅದೇ ಮೊದಲ ಬಾರಿಗೆ ನಾವು ಸಂಜೆಯ ಹೊತ್ತು ಅಲ್ಲಿಗೆ ಹೋಗಿದ್ದು...ಯಾವತ್ತೂ ಸಂಜೆಯ ಹೊತ್ತು ಹೋಗಿರದ ನಾವು ಅಂದು ಅಲ್ಲಿನ ವಾತಾವರಣ ಕಂಡು ಸ್ವಲ್ಪ ಭಯಭೀತರಾದೆವು...ಸುತ್ತಲೂ ಕತ್ತಲು, ಬೀದಿ ದೀಪ ಸಹ ಇರಲಿಲ್ಲ..ಸರಿ ಬಂದದ್ದು ಆಗಿದೆ ಇನ್ನೇನು ಮಾಡುವುದು ಎಂದು ಹಾಗೆ ಖಾಲಿ ರಸ್ತೆಯ ಮೇಲೆ ನಾನು ನನ್ನ ಸ್ನೇಹಿತ ಎದುರು ಬದುರಾಗಿ ಕೂತು ಮಾತಾಡುತ್ತಿದ್ದೆವು...ಸುಮಾರು ಹತ್ತು ನಿಮಿಷ ಕಳೆದಿರಬಹುದು...ನನ್ನ ಸ್ನೇಹಿತ ಜೋರಾಗಿ ಕಿರುಚಿಕೊಂಡ...ತಕ್ಷಣ ಅವನು ಕಿರುಚಿದ ಕಾರಣ ಏನೆಂದು ತಿಳಿಯಲು
ಹಿಂದೆ ತಿರುಗಿದೆ...ಒಂದು ಕ್ಷಣ ನನ್ನ ಮೈ ರೋಮಗಳು ಹಾಗೆ ನಿಂತುಕೊಂಡ ಅನುಭವ ವಾಯ್ತು....ಕೂಡಲೇ ಅಲ್ಲಿಂದ ಎದ್ದು ಹೊರಟು ಬಂದಿದ್ದು ಇದುವರೆಗೂ ಆ ಕಡೆ ತಲೆ ಹಾಕಿಲ್ಲ...
ಅಸಲಿಗೆ ಆ ಕತ್ತಲಲ್ಲಿ ಕಂಡದ್ದಾದರೂ ಏನು?? ನಾವು ಅಲ್ಲಿ ಕಂಡದ್ದು ಒಂದು ನಾಯಿ...
ಇದೇನಪ್ಪ ಬರಿ ನಾಯಿ ಕಂಡು ಇಷ್ಟು ಹೆದರಿಕೊಂಡು ಬಂದ್ರಾ ಅಂತೀರಾ...ನಾವು ಹೆದರಿದ್ದು ನಾಯಿಗೆ ಅಲ್ಲ...ಆದರೆ ಅಷ್ಟು ಹೊತ್ತು ಸುತ್ತಲು ಕಾಣದೆ
ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದಕ್ಕೆ...ಅದು ಎಲ್ಲಿಂದ ಬಂತೋ ಹೇಗೆ ಬಂತೋ....ಇವತ್ತಿಗೂ ಅದನ್ನ ನೆನೆಸಿಕೊಂಡರೆ ಒಂಥರಾ ಮೈ ಕಂಪಿಸುತ್ತೆ ಹಾಗೆ ನಗು ಸಹ ಬರತ್ತೆ...