ಕತ್ತಲು ಮತ್ತು ಬೆಳಕು

ಕತ್ತಲು ಮತ್ತು ಬೆಳಕು

ಮಹಾಭಾರತದ ಸಮಯದ ಒಂದು ಕಥಾ ಪ್ರಸಂಗವಿದು. ನಮ್ಮ ಹಿರಿಯರು ಆಗಾಗ ಹೇಳುತ್ತಿದ್ದ ಕಥೆ ಇದು. ಇದರ ನೀತಿಯುಕ್ತ ಸಾರವು ಅಂದಿನ ಕಾಲಕ್ಕೆ ಮಾತ್ರವಲ್ಲ. ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಶ್ರೀಕೃಷ್ಣ ಹೇಳುವಂತೆ "ಕತ್ತಲು ಬೆಳಕಿದ್ದಲ್ಲಿಗೆ ಹೋಗುವುದಿಲ್ಲ , ಬೆಳಕು ಕತ್ತಲಿದ್ದಲ್ಲಿಗೆ ಹೋಗಬೇಕು " ಸತ್ಯವಾದ ಮಾತು. ಸತ್ಯವನ್ನು ಸಾಬೀತು ಪಡಿಸಲು ಈ ಕಥಾ ಪ್ರಸಂಗವನ್ನು ನೀವು ಓದಲೇ ಬೇಕು.

ಒಂದೊಮ್ಮೆ ಶ್ರೀಕೃಷ್ಣ ತನ್ನ ಅರಮನೆಯ ಕನ್ನಡಿಯ ಮುಂದೆ ಅಲಂಕಾರವನ್ನು ಮಾಡುತ್ತಿದ್ದ. ಅವನು ತನ್ನ ತಲೆಯ ಮೇಲೆ ವಿವಿಧ ಕಿರೀಟಗಳನ್ನು ತೊಟ್ಟು ಹೇಗೆ ಕಾಣುತ್ತದೆ ಎಂದು ನೋಡುತ್ತಿದ್ದ, ಹಾಗೆ ತನಗೆ ಬೇಕಾದ ಒಳ್ಳೊಳ್ಳೆಯ ಆಭರಣಗಳನ್ನು ತೊಡುತ್ತಿದ್ದ, ಹೊರಗೆ ಅವನ ರಥವು ಸಾರಥಿಯ ಸಮೇತ ಅವನಿಗಾಗಿ ಕಾಯುತ್ತಿತ್ತು. ಬಹಳ ಸಮಯ ಕಾದರೂ ಕೃಷ್ಣ ಹೊರಗೆ ಬರದಿರಲು...

ಅವನ ರಥದ ಸಾರಥಿಯು ಕಾಯುತ್ತಾ ಕಾಯುತ್ತಾ ತಾನೇ ಯೋಚಿಸಲಾರಂಭಿಸಿದ - ಸಾಮಾನ್ಯವಾಗಿ, ಕೃಷ್ಣ ತಕ್ಷಣ ಬರುತ್ತಾನೆ, ಇಂದು ಅವನು ಇನ್ನೂ ಬಂದಿಲ್ಲ. ಯಾವತ್ತೂ ಕೃಷ್ಣ ತಡವಾಗಿ ಹೋದವನಲ್ಲ ಮತ್ತೆ ಇಂದು ಯಾಕೆ ಹೀಗೆ  ಎಂಬ ಕುತೂಹಲ ಸಾರಥಿಗೆ, ಕೃಷ್ಣ ಹೋಗಬೇಕಾದ ಕಾರ್ಯಕ್ರಮಕ್ಕೆ ತಡವಾಗಬಹುದೆಂದು ಆಲೋಚಿಸಿ ಒಳಗೆ ಏನು ನಡೆಯುತ್ತಿದೆ ಮತ್ತು ಕೃಷ್ಣನಿಗೆ ಅದನ್ನು ತಿಳಿಸಲೆಂದು ಸಾರಥಿಯು ಒಳಗೆ ಹೋಗುತ್ತಾನೆ, ಕೃಷ್ಣ ಯಾವಾಗ ಬೇಕಿದ್ದರೂ ತನ್ನ ಕಾರ್ಯಕ್ರಮವನ್ನು ಬದಲಾಯಿಸಬಹುದು ಹಾಗಾಗಿ ಒಳಗೆ ಏನಾಗುತ್ತಿದೆ ಎಂದು ನೋಡಲು ಒಳಗೆ ಹೋದರೆ, ಶ್ರೀಕೃಷ್ಣನು ಕನ್ನಡಿಯ ಮುಂದೆ ನಿಂತು ತನ್ನ ಅಂದವನ್ನು ಮೆಚ್ಚಿಕೊಳ್ಳುವುದನ್ನು ನೋಡುತ್ತಾನೆ.

ಸಾರಥಿಯು ಈ ದೃಶ್ಯ ಕಂಡು ಅಚ್ಚರಿಯಿಂದ ಮೆಲುದನಿಯಲ್ಲಿ, “ನನ್ನ ಪ್ರಿಯ ಮಹಾಪಭುಗಳೇ, ಹೇಳಿ, ನೀವು ಇಂದು ಏಕೆ ತುಂಬಾ ಉತ್ತಮವಾದ ಉಡುಗೆಯನ್ನು ತೊಟ್ಟು ನಿಮ್ಮ ಅಲಂಕಾರಕ್ಕೆ ಮಹತ್ವ ಕೊಡುತ್ತಿದ್ದೀರಿ? ನಾವು ಎಲ್ಲಿಗೆ ಹೋಗುತ್ತಿದ್ದೇವೆ?"

ಶ್ರೀಕೃಷ್ಣನು, “ನಾನು ದುರ್ಯೋಧನನನ್ನು ಭೇಟಿಯಾಗಲಿದ್ದೇನೆ” ಎಂದು ಹೇಳಿದನು.

ಸಾರಥಿಯು  “ದುರ್ಯೋಧನನನ್ನು ಭೇಟಿಯಾಗಲು ನೀವು ಈ ಪರಿಯ ಉಡುಗೆ ತೊಡುತ್ತಿದ್ದೀರಾ ?” ಎಂದು ಇನ್ನಷ್ಟು ಆಶ್ಚರ್ಯದಿಂದ ಕೇಳಿದನು.

ಆಗ ಕೃಷ್ಣನು, “ಅವನು ನನ್ನ ಅಂತರಾತ್ಮವನ್ನು ಅರಿಯಲಾರ ಮತ್ತು ನೋಡಲಾರ, ಅವನು ನನ್ನ ಬಾಹ್ಯ ಅಂದವನ್ನಷ್ಟೇ ನೋಡಿ ಅದನ್ನು ಅಳೆಯುವವ ಮತ್ತು ಮೆಚ್ಚುವವನು. ಹಾಗಾಗಿ ನನ್ನ ಅಂತರಾತ್ಮವನ್ನು ನೋಡಲು ಸಾಧ್ಯವಾಗದ ಕಾರಣ ನಾನು ಹೀಗೆ ಉಡುಗೆ ಧರಿಸಿದ್ದೇನೆ ಅದು ಅವನು ಇದನ್ನು ಮೆಚ್ಚುವುದಕ್ಕಾಗಿ  ”

ಆಗ ಸಾರಥಿ , “ನೀವು ದುರ್ಯೋಧನಲ್ಲಿಗೆ ಹೋಗುತ್ತಿದ್ದೀರಾ? ನೀವು ಹೋಗಬಾರದು, ಅವನು ಒಳ್ಳೆಯವನಲ್ಲ. ಅವನು ನಿಮ್ಮ ಬಳಿಗೆ ಬರಬೇಕು. ಇದನ್ನು ನಾನು ಒಪ್ಪಲು ಸಾಧ್ಯವಿಲ್ಲ. ” ಎಂದು ಹೇಳುತ್ತಾ , “ಇದು ನ್ಯಾಯವಲ್ಲ. ನೀವು ಯಾರು ಮತ್ತು ಅವನಾರು ?! ನೀವು ಮೂರು ಲೋಕದ ಲೋಕದ ಪ್ರಭು. ನೀವು ಹೋಗಬಾರದು, ಅವನೇ ಬೇಕಿದ್ದರೆ  ಬರಲಿ. ”

ಸಾರಥಿಯ ಮಾತಿಗೆ ಶ್ರೀಕೃಷ್ಣ ಹಿಂದೆ ತಿರುಗಿ, ಅವನತ್ತ ನೋಡುತ್ತಾ, ಮುಗುಳ್ನಕ್ಕು,

ಹೇ ಸಾರಥಿ....

"ಕತ್ತಲು ಬೆಳಕಿದ್ದಲ್ಲಿಗೆ ಹೋಗುವುದಿಲ್ಲ, ಬೆಳಕು ಕತ್ತಲಿದ್ದಲ್ಲಿಗೆ ಹೋಗಬೇಕು ". ಎಂಬ ಮಾತನ್ನು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಾರಥಿಗೆ ಅದರ ತಾತ್ಪರ್ಯ ಕೂಡಲೇ ಅರ್ಥವಾಗುತ್ತದೆ. ಮತ್ತೇನೂ ಮಾತನಾಡದೇ ಅವನು ರಥವನ್ನು ದುರ್ಯೋಧನನ ಅರಮನೆಯತ್ತ ಓಡಿಸುತ್ತಾನೆ.

ಪ್ರಿಯ ಮಿತ್ರರೇ, ಈ ಪ್ರಸಂಗದಿಂದ ನಿಮಗೂ ಬಹಳಷ್ಟು ಸಂಗತಿಗಳು ತಿಳಿಯಬಹುದು ಅಲ್ಲವೇ? ಜ್ಞಾನದ ಬೆಳಕು ಬಾರದಂತೆ ನಾವೇ ಕೆಲವೊಮ್ಮೆ ನಮ್ಮ ಮನದ ಬಾಗಿಲನ್ನು ಮುಚ್ಚಿಬಿಡುತ್ತೇವೆ. ಇದರಿಂದಾಗಿ ನಾವು ಹಲವಾರು ಸಂಗತಿಗಳಿಂದ ಹಿಂದೆ ಉಳಿದು ಬಿಡುತ್ತೇವೆ. ಈ ಕಾರಣದಿಂದ ನಾವು ನಮ್ಮ ಅಹಂಕಾರದ ಗುಣವನ್ನು ತ್ಯಜಿಸಿ ಎಲ್ಲರೊಡನೆ ಬೆರೆಯುತ್ತಾ, ನಮಗೆ ತಿಳಿಯದ ಸಂಗತಿಗಳನ್ನು ಬೇರೆಯವರಿಂದ ತಿಳಿದು ಕೊಳ್ಳುತ್ತಾ ಬಾಳನ್ನು ಸಾರ್ಥಕಗೊಳಿಸೋಣ. 

(ಹಿರಿಯರಿಂದ ಕೇಳಿದ ಪ್ರಸಂಗ)

ಚಿತ್ರ: ಅಂತರ್ಜಾಲ ತಾಣದ ಕೃಪೆ