ಕತ್ತಲೆ ಕಳೆಯಿತು

ಕತ್ತಲೆ ಕಳೆಯಿತು



ಕತ್ತಲೆ ಕಳೆಯಿತು.

                       -ಎಂ.ಆರ್.ಗಣೇಶಕುಮಾರ್.



          ದೇವರು ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡ. ಪ್ರಪಂಚದ ಸೃಷ್ಟಿ ಆಯಿತು. ಸೂರ್ಯ-ಚಂದ್ರ-ತಾರೆ, ನದಿ-ಸಾಗರ-ಪರ್ವತಗಳ ಉಗಮವಾಯಿತು. ಸಸ್ಯರಾಶಿ, ಜೀವಕೋಟಿಯ ಜನನವಾಯಿತು. ದಣಿದು ಹೋದ ದೇವರು ಸ್ವಲ್ಪ ವಿಶ್ರಾಂತಿ ಪಡೆದ. ನಂತರ ತನ್ನ ಸೃಷ್ಟಿಯನ್ನು ತಾನೇ ಈಕ್ಷಿಸಿದ. ಹಂತ ಹಂತವಾಗಿ ಬೆಳೆದ ಸೃಷ್ಟಿಗೆ ಶಿಖರಪ್ರಾಯವಾದ ಸೃಷ್ಟಿಯೊಂದರ ಅಗತ್ಯವಿದೆ ಎನ್ನಿಸಿತು. ಪ್ರಯತ್ನಿಸತೊಡಗಿದ.               ಮಾನವಾಕೃತಿಯ ಕಲ್ಪನೆ ಮೊಳೆಯಿತು.



         ದೇವರು ತನ್ನೆಲ್ಲಾ ಕಲ್ಪನೆ, ಪ್ರತಿಭೆಯನ್ನು ಬಳಸಿ ಮಾನವನನ್ನು ಕಡೆಯತೊಡಗಿದ. ಮಾನವಾಕೃತಿ ಮೈದಳೆಯಿತು. ತೃಪ್ತಿಯಿಂದ ನೋಡಿದ. ಒಮ್ಮೆ ಗಾಭರಿಯಾಯಿತು. ಪರಿಪೂರ್ಣತೆಯ ಸಾಕಾರವೆಂಬಂತೆ ಕಾಣುವ ಆಕಾರದ ಅಂತರಂಗದ ತುಂಬಾ ಕಗ್ಗತ್ತಲೆ!  ಕ್ರೌರ್ಯ, ಮೃಗೀಯತೆ ಹಾಗೂ ದುಷ್ಟತನಗಳ ಮೇಲಾಟ!



          ಕ್ಷಣಹೊತ್ತು ದೇವರಿಗೆ ದಿಕ್ಕು ತೋಚದಂತಾಯಿತು. ಈಗೇನು ಮಾಡುವುದು ಎಂದು ಯೋಚನೆಯಾಯಿತು. ದೇವರಲ್ಲವೆ? ಬೇಗ ಪರಿಹಾರವೂ ಹೊಳೆಯಿತು. `ಕತ್ತಲೆಯನು ಹೊಡೆದಟ್ಟಲು ಬೆಳಕ ಸೃಜಿಸಿದರಾಯಿತು' ಎಂದುಕೊಂಡ ದೇವರು ಪ್ರೀತಿ, ಮಮತೆ, ಧರ್ಮ, ವಿಜ್ಞಾನ, ವೈಚಾರಿಕತೆಯ ಬೆಳಕುಗಳನ್ನು ಒಂದೊಂದಾಗಿ ಸೃಷ್ಟಿಸಿ ಮಾನವನ ಅಂತರಂಗದೊಳಗಿಟ್ಟ. ಎಲ್ಲವೂ ಪುಟ್ಟ ಪುಟ್ಟ ಹಣತೆಗಳಂತೆ             ಮಿನುಗತೊಡಗಿದವು. ಆದರೆ ಕತ್ತಲೆ ಪೂತರ್ಿಯಾಗಿ ತೊಲಗಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ದೈವತ್ವದ ಬೆಳಕನ್ನು ಸೃಜಿಸಿ ಮಾನವನ ಅಂತರಂಗದೊಳಕ್ಕೆ ಸೇರಿಸಿದ. ಇಲ್ಲ. ಕತ್ತಲೆ ಕಳೆಯಲಿಲ್ಲ. ದೇವರಿಗೆ ಮತ್ತೇನು

ಮಾಡಲೂ ತೋಚಲಿಲ್ಲ. ಸ್ವಲ್ಪ ಹೊತ್ತು ತಲೆಯ ಮೇಲೆ ಕೈ ಹೊತ್ತು ಕುಳಿತ. ಕೊನೆಗೆ ದೇವಗುರುವಿನ ಮೊರೆ ಹೋಗಲು ನಿಶ್ಚಯಿಸಿದ.



          ದೇವಗುರುವನ್ನು ಧ್ಯಾನಿಸುತ್ತಾ ಕುಳಿತ. ಅಧ್ಯಯನ ಮಗ್ನರಾಗಿದ್ದ ದೇವಗುರುಗಳಿಗೆ ದೇವರ ಕರೆ ಕೇಳಿಸಿತು. ದೇವರ ಮುಂದೆ ಪ್ರತ್ಯಕ್ಷರಾದರು. ದೇವರು ಅವರ ಮುಂದೆ ತನ್ನ ಸಮಸ್ಯೆಯನ್ನು ನಿವೇದಿಸಿಕೊಂಡ. ದೇವಗುರುಗಳು ದೇವನ ಹೊಸ ಸೃಷ್ಟಿಯನ್ನೊಮ್ಮೆ ಅವಲೋಕಿಸಿದರು. ನಸುನಕ್ಕು ನುಡಿದರು - ``ವತ್ಸಾ, ಮಾನವನನ್ನು ಸೃಷ್ಟಿಸಿದ್ದೀಯ, ಸರಿ. ಆದರೆ ಮಾನವನ ಅಂತರಂಗದೊಳಗೆ ಮಾನವೀಯತೆಯ     ಬೆಳಕನ್ನೇ  ಮೂಡಿಸಿಲ್ಲವಲ್ಲ!"



          ದೇವರಿಗೆ ತನ್ನ ತಪ್ಪಿನ ಅರಿವಾಯಿತು. ಆದರೆ ಮಾನವೀಯತೆಯ ಬೆಳಕನ್ನು ಸೃಜಿಸಿವುದು ತನ್ನ ಸಾಮಥ್ರ್ಯಕ್ಕೆ ಮೀರಿದ್ದು ಎನ್ನಿಸಿತು.  ಎದುರಿದ್ದ ಗುರುಗಳಲ್ಲೇ ವಿನಂತಸಿಕೊಂಡ - ``ಗುರುವರ್ಯ,           ಮಾನವೀಯತೆಯ ಬೆಳಕನ್ನು ಸೃಜಿಸುವುದು ನನ್ನಿಂದಾಗದ ಕೆಲಸ. ದಯಮಾಡಿ ನೀವೇ ದಾರಿ ತೋರಬೇಕು,"



         ದೇವಗುರುಗಳ ಮುಖದ ತುಂಬಾ ನಗೆ ಹರಡಿತು. ಕಣ್ಣುಗಳು ಮಿನುಗುಟ್ಟಿದವು. ಕ್ಷಣವೂ ತಡಮಾಡದೆ ತಮ್ಮ ಕಣ್ಣೊಳಗಿನ ಬೆಳಕನ್ನು ಕರತಲದ ಮೇಲೆ ಆಹ್ವಾನಿಸಿಕೊಂಡು ದೇವರಿಗೊಪ್ಪಿಸಿ ``ವತ್ಸಾ, ಈ ಬೆಳಕನ್ನು ಮಾನವನ ಅಂತರಂಗದೊಳಗೆ ಪ್ರತಿಷ್ಠಾಪಿಸು.ಅವನ ಅಂತರಂಗದ ಕತ್ತಲೆ ಕಳೆಯುವುದು" ಎಂದರು. ದೇವರು ಭಯ ಭಕ್ತಿಗಳಿಂದ ವಿನಯಪೂರ್ವಕವಾಗಿ ಆ ಬೆಳಕನ್ನು ಸ್ವೀಕರಿಸಿ ಮಾನವನ ಅಂತರಂಗದೊಳಗೆ ಪ್ರತಿಷ್ಠಾಪಿಸಿದ. ದೇವಗುರುಗಳಂದಂತೆ ಮಾನವನ ಅಂತರಂಗದ ಕತ್ತಲೆ ಕಳೆಯಿತು. ಬೆಳಕು ಹರಡಿತು. ದೇವರಿಗೆ ಸಂತೃಪ್ತಿಯಾಯಿತು.

                                           ********