ಕತ್ತೆ ಕಂಡ ನೀಲಿ ಹುಲ್ಲು!

ಕತ್ತೆ ಕಂಡ ನೀಲಿ ಹುಲ್ಲು!

ಒಂದು ದೊಡ್ಡ ಕಾಡಿನಲ್ಲಿ ಕತ್ತೆಯೊಂದು ವಾಸ ಮಾಡುತ್ತಿತ್ತು. ಅದೇ ಕಾಡಿನಲ್ಲಿ ಹುಲಿಯೂ ಇತ್ತು. ಒಮ್ಮೆ ಕತ್ತೆಯು ಹುಲ್ಲು ಮೇಯುತ್ತಿರುವಾಗ ಹುಲಿಯ ಆಗಮನವಾಯಿತು. ಹುಲಿ ತನ್ನನ್ನು ತಿಂದೇ ಬಿಡುತ್ತದೆ ಎಂಬ ಗಾಭರಿ ಕತ್ತೆಗೆ ಆಯಿತು. ಹುಲಿಯ ಬಾಯಿಗೆ ಬೀಳದ ಹಾಗೆ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂದು ಯೋಚನೆ ಮಾಡತೊಡಗಿತು. 

ಹುಲಿಯನ್ನು ಕರೆದು ಹೇಳಿತು.”ಹುಲಿಯಣ್ಣ, ಹುಲಿಯಣ್ಣ ನೀಲಿ ಬಣ್ಣದ ಹುಲ್ಲನ್ನು ನೋಡಿರುವಿರಾ?”

ಹುಲಿ ಸಹಜ ಧ್ವನಿಯಲ್ಲಿ ಹೇಳಿತು “ಹುಲ್ಲಿನ ಬಣ್ಣ ನೀಲಿಯಲ್ಲ ಹಸಿರು"

ಕತ್ತೆ ಮತ್ತೆ ಹೇಳಿತು “ಹಸಿರಲ್ಲ, ನೀಲಿ"

ಹುಲಿ ರೋಷದಿಂದ ಹೇಳಿತು “ನೀಲಿ ಹುಲ್ಲು ಇರಲು ಸಾಧ್ಯವೇ ಇಲ್ಲ, ಹುಲ್ಲಿನ ಬಣ್ಣ ಹಸಿರು"

ಹೀಗೆ ಹತ್ತಾರು ಸಲ ವಾದ ಮಾಡಿದ ಬಳಿಕ, ಅವುಗಳೆರಡೂ ಕಾಡಿನ ಮೃಗರಾಜನಾದ ಸಿಂಹದ ಬಳಿಗೆ ತೆರಳಿ ಉತ್ತರ ಕೇಳಲು ಯೋಚಿಸಿದವು. ಹಾಗೆಯೇ ಕತ್ತೆ ಮತ್ತು ಹುಲಿಯ ಸವಾರಿ ಸಿಂಹದ ಬಳಿಗೆ ಬಂತು.

ಸಿಂಹವನ್ನು ನೋಡಿದ ಕೂಡಲೇ ಕತ್ತೆ ಜೋರಾಗಿ ಬೊಬ್ಬೆ ಹಾಕುತ್ತಾ ಹೇಳಿತು “ಮಹಾರಾಜರೇ, ಹುಲ್ಲಿನ ಬಣ್ಣ ನೀಲಿಯೆಂಬುವುದು ಸತ್ಯವಲ್ಲವೇ?”

ಸಿಂಹ ಹೇಳಿತು “ಹೌದು ಸತ್ಯ, ಹುಲ್ಲಿನ ಬಣ್ಣ ನೀಲಿ"

ಇದರಿಂದ ಉತ್ತೇಜನಗೊಂಡ ಕತ್ತೆ ಹೇಳಿತು “ಮಹಾರಾಜ, ಆದರೆ ಈ ಹುಲಿ ಹೇಳುತ್ತದೆ ಹುಲ್ಲಿನ ಬಣ್ಣ ಹಸಿರು ಎಂದು. ಕಾಡಿನ ಎಲ್ಲೆಡೆ ಹುಲಿ ತಪ್ಪಾದ ಮಾಹಿತಿ ಪ್ರಸಾರ ಮಾಡುವುದರಿಂದ ಎಲ್ಲಾ ಪ್ರಾಣಿಗಳಿಗೆ ಗೊಂದಲವಾಗುತ್ತಿದೆ. ಆದುದರಿಂದ ತಾವು ದಯಮಾಡಿ ಹುಲಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಕೋರಿಕೊಳ್ಳುತ್ತೇನೆ"

ಸಿಂಹ ಹೇಳಿತು “ ಹೌದು, ನಿನ್ನ ಮಾತು ಸತ್ಯ. ಹುಲಿಗೆ ಶಿಕ್ಷೆ ಆಗಲೇ ಬೇಕು. ಒಂದು ವರ್ಷಗಳ ಕಾಲ ಹುಲಿ ಯಾರ ಬಳಿಯೂ ಮಾತನಾಡದೇ ಇರಬೇಕು ಎಂದು ಅಪ್ಪಣೆ ಮಾಡುತ್ತೇನೆ" ಎಂದಿತು.

ಕತ್ತೆಗೆ ಈ ಮಾತಿನಿಂದ ಬಹಳ ಸಂತೋಷವಾಯಿತು. ತನ್ನ ಮನೆಗೆ ಮರಳುವಾಗ ಜೋರಾಗಿ “ನೀಲಿ ಬಣ್ಣದ ಹುಲ್ಲನು... ತಿನ್ನಲು ಬನ್ನಿರೋ.." ಎಂದು ಹಾಡುತ್ತಾ ಹೋಯಿತು.

ಹುಲಿಗೆ ಇದರಿಂದ ತುಂಬಾನೇ ಬೇಸರವಾಯಿತು. ಸತ್ಯಕ್ಕೆ ಯಾವುದೇ ಬೆಲೆ  ಇಲ್ಲವಾಯಿತೇ? ಎಂದು ನೋವಾಯಿತು. ಅದು ಸಿಂಹದ ಬಳಿ ಹೇಳಿತು “ ಮಹಾರಾಜಾ, ತಾವು ತುಂಬಾ ಬುದ್ಧಿವಂತರಿದ್ದೀರಾ, ಆದರೂ ತಾವು ಕತ್ತೆಯ ಮಾತು ನಂಬಿದಿರಿ, ಹುಲ್ಲಿನ ಬಣ್ಣ ಹಸಿರು ಎಂದು ಲೋಕಕ್ಕೇ ಗೊತ್ತು. ಆದರೂ ತಾವು ನೀಲಿ ಎಂದು ತೀರ್ಪು ಕೊಟ್ಟಿರಿ. ಅದರ ಜೊತೆಗೆ ನನಗೆ ಶಿಕ್ಷೆಯನ್ನೂ ಕೊಟ್ಟಿರುವಿರಿ, ಏಕೆ ಹೀಗೆ ಮಾಡಿದಿರಿ?”

ಸಿಂಹ ಗಾಂಭೀರ್ಯದಿಂದ ಹೇಳಿತು “ ನಿನ್ನ ಮಾತು ಸತ್ಯ, ಹುಲ್ಲಿನ ಬಣ್ಣ ಹಸಿರು"

ಹುಲಿ ಕೇಳಿತು “ ಹಾಗಾದರೆ ನನಗ್ಯಾಕೆ ಶಿಕ್ಷೆಯನ್ನು ಕೊಟ್ಟಿರಿ?”

ಸಿಂಹ ಹೇಳಿತು “ ಹುಲ್ಲಿನ ಬಣ್ಣ ನೀಲಿ ಅಥವಾ ಹಸಿರು ಎಂಬ ವಿಷಯ ಇಲ್ಲಿ ಮುಖ್ಯವಲ್ಲ. ಮೇಧಾವಿ, ಬುದ್ಧಿವಂತ, ಶಕ್ತಿಶಾಲಿ ಪ್ರಾಣಿಯಾದ ನೀನು ನಿನ್ನ ಅಮೂಲ್ಯವಾದ ಸಮಯವನ್ನು ‘ಕತ್ತೆ'ಯ ಜೊತೆ ಅನಾವಶ್ಯಕ ವಾದ ಮಾಡುವುದರಲ್ಲಿ ಹಾಳು ಮಾಡಿರುವಿಯಲ್ಲಾ? ಇದು ನನಗೆ ತೀವ್ರ ಬೇಸರ ತಂದಿತು. ನಿನ್ನ ಸಮಯ ವ್ಯರ್ಥ ಮಾಡಿದ್ದು ಮಾತ್ರವಲ್ಲ, ನಿಮ್ಮ ವಾದವನ್ನು ನನ್ನಲ್ಲಿಗೆ ತೆಗೆದುಕೊಂಡು ಬಂದು ನನ್ನ ಸಮಯವನ್ನೂ ಹಾಳುಮಾಡಿದೆಯಲ್ಲಾ. ಈ ಕಾರಣಕ್ಕೇ ನಾನು ನಿನಗೆ ಶಿಕ್ಷೆ ನೀಡಿದ್ದು. ಮೂರ್ಖರ ಜೊತೆ ವಾದ ಸಮ್ಮತವಲ್ಲ ಹುಲಿರಾಯ. ಇನ್ನಾದರೂ ಈ ಮಾತು ನೆನಪಿಟ್ಟುಕೋ.."

ಹುಲಿ ನಾಚಿಕೆಯಿಂದ ತಲೆಯಲ್ಲಾಡಿಸುತ್ತಾ ಅಲ್ಲಿಂದ ತೆರಳಿತು.

***

ಇದು ಒಂದು ಕಾಲ್ಪನಿಕ ಕಥೆ. ಆದರೆ ನಾವು ನಮ್ಮ ಜೀವನದಲ್ಲಿ ನಮ್ಮ ಅಮೂಲ್ಯ ಸಮಯ ಹಾಗೂ ಶಕ್ತಿಯನ್ನು ಮೂರ್ಖರ ಹಾಗೂ ಅಪಾತ್ರರ ಜೊತೆ ವಾದಿಸುವಲ್ಲಿ ಕಳೆದು ಬಿಡುತ್ತೇವೆ. ‘ಸಜ್ಜನರ ಸಂಗ ಹೆಜ್ಜೇನು ಸವಿದಂತೆ' ಎನ್ನುತ್ತಾರೆ. ಆದುದರಿಂದ ನಾವು ನಮ್ಮ ಗೆಳೆಯರನ್ನು ಬುದ್ದಿವಂತಿಕೆಯಿಂದ ಆಯ್ಕೆ ಮಾಡಬೇಕು. ಇದರಿಂದ ನಮಗೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವುದು ತಪ್ಪುತ್ತದೆ. 

ಮೂರ್ಖರು ತಮ್ಮ ವಿತಂಡವಾದದ ಮುಖಾಂತರ ಎಲ್ಲರನ್ನೂ ತಮ್ಮತ್ತ ಸೆಳೆಯಲು ಬಯಸುತ್ತಾರೆ. ಹಲವಾರು ಬಾರಿ ನಾವೂ ಅವರ ಬಲೆಗೆ ಬೀಳುತ್ತೇವೆ. ನಾವು ಆ ಸಮಯದಲ್ಲಿ ನಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಳ್ಳಬೇಕು, ವಿವೇಚನೆಯಿಂದ ಯೋಚನೆ ಮಾಡಬೇಕು. ಇದರಿಂದ ನಮ್ಮ ಸಮಯ, ಹಣ ಹಾಗೂ ಶಕ್ತಿಯ ವ್ಯಯವಾಗುವುದು ತಪ್ಪುತ್ತದೆ. ಬೇರೆಯವರ ಸಮಯವನ್ನು ಹಾಳು ಮಾಡುವುದನ್ನೂ ತಪ್ಪಿಸಬಹುದಾಗಿದೆ. ಬಹಳಷ್ಟು ಮಂದಿಗೆ ಬೇರೆಯವರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಅರಿವು ಇರುವುದಿಲ್ಲ. ಅವರೇ ದೊಡ್ದ ಬುದ್ಧಿಶಾಲಿಗಳು ಎಂಬ ಭ್ರಮಾಲೋಕದಲ್ಲಿ ತೇಲಾಡುತ್ತಿರುತ್ತಾರೆ. ಇವರನ್ನು ಬದಲಾಯಿಸಲು ತುಂಬಾ ಪ್ರಯತ್ನ ಪಡಬೇಡಿ. ಅದರಿಂದ ನಿಮ್ಮ ಘನತೆಗೇ ಕುತ್ತಾಗುತ್ತದೆ. ಕೆಸರಿಗೆ ಕಲ್ಲು ಬಿಸಾಡಿದರೆ ಆ ಕೆಸರು ನಿಮ್ಮ ಮುಖಕ್ಕೇ ರಾಚುತ್ತದೆ. ಅಂತಹ ಪ್ರಭೂತಿಗಳ ಸಂಗ ಮಾಡಬೇಡಿ. ಅವರ ಭ್ರಮಾಲೋಕ ಕಳಚಿ ಬಿದ್ದಾಗ ಮತ್ತೆ ನಿಮ್ಮ ಹತ್ತಿರ ಅವರಾಗಿಯೇ ಬರುತ್ತಾರೆ. ಸರಿಯಾದ ಸಮಯಕ್ಕಾಗಿ ಕಾಯುವುದು ಬುದ್ಧಿವಂತರ ಲಕ್ಷಣ. 

***

ಮತ್ತೊಂದು ಪುಟ್ಟ ಕಥೆಯೊಂದಿಗೆ ನಾನು ನನ್ನ ಬರಹವನ್ನು ಮುಗಿಸುತ್ತಿದ್ದೇನೆ.

ಕ್ಷೌರಿಕನೊಬ್ಬ ದೇವಸ್ಥಾನದ ಪೂಜಾರಿಯ ಹತ್ತಿರ ಮಾತನಾಡುತ್ತ ಕೇಳಿದ. 

“ದೇವರು ಹೀಗೆಲ್ಲ ಏಕೆ ಮಾಡುತ್ತಾನೆ? ಅಲ್ಲಿ ಮಹಾಪೂರ ಬಂತು, ಇನ್ನೊಂದು ಕಡೆ ಬರಗಾಲ ಬಂತು, ಅಲ್ಲಿ ಅಪಘಾತ ಆಯಿತು, ಇಲ್ಲಿ ಉಪವಾಸ ಬಿದ್ದರು, ಅಲ್ಲಿ ಮಹಾಮಾರಿ ಹರಡಿತು ಹೀಗೆಲ್ಲ ಏಕೆ ಆಡಬೇಕು? ದೇವರು ಹೀಗೆ ಮಾಡುವುದು ಸರಿಯೇ? 

ಪೂಜಾರಿ ಹೇಳಿದ, ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಕ್ಷೌರಿಕನಿಗೆ ದೂರದಲ್ಲಿ ಕುಳಿತಿದ್ದ ಒಬ್ಬ ಭಿಕ್ಷುಕನನ್ನು  ತೋರಿಸಿದ. ಆತನ ತಲೆಗೂದಲು ಬಹು ಉದ್ದವಾಗಿ, ಸಿಕ್ಕುಸಿಕ್ಕಾಗಿ ಬೆಳೆದಿತ್ತು, ಗಡ್ಡವೂ ಹೇಗೆಂದರೆ ಹಾಗೆ ಬೆಳೆದಿತ್ತು. 

ಪೂಜಾರಿ ಕ್ಷೌರಿಕನನ್ನು ಕೇಳಿದ - “ನೀನಿರುವಾಗ ಆತನಿಗೆ ಇಂಥ ಸ್ಥಿತಿ ಏಕೆ?” 

ಕ್ಷೌರಿಕ ತಕ್ಷಣ ಹೇಳಿದ “ಆತ ನನ್ನ ಸಂಪರ್ಕಕ್ಕೇ ಬಂದಿಲ್ಲ”

ಪೂಜಾರಿ ಹೇಳಿದ "ನಿನ್ನ ಪ್ರಶ್ನೆಗೆ ಇದೇ ಉತ್ತರ. ಯಾವ ಜನರು ದೇವರೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಾರೋ ಅವರ ದುಃಖಗಳು ಬೇಗ ನಿವಾರಣೆಯಾಗುತ್ತವೆ. ಜನರು ದೇವರ ಸಂಪರ್ಕ (ಸ್ಮರಣೆ) ವನ್ನೇ ಮಾಡುವುದಿಲ್ಲ, ದುಃಖಿ ಆಗಿದ್ದೇವೆಂದು ಮಾತ್ರ ಹೇಳುತ್ತಾರೆ "

ಕ್ಷೌರಿಕ ಹೇಳಿದ "ಹೌದು, ತಮ್ಮ ಮಾತು ನಿಜ" ಎಂದು ಪೂಜಾರಿಗೆ ನಮಿಸಿದ.

(ಆಂಗ್ಲ ಭಾಷೆಯಿಂದ ಅನುವಾದ ಮಾಡಿದ್ದು)

 ಚಿತ್ರ ಕೃಪೆ: ಅಂತರ್ಜಾಲ ತಾಣ