ಕಥನ ಕವನ

ಕಥನ ಕವನ

ಪುಸ್ತಕದ ಲೇಖಕ/ಕವಿಯ ಹೆಸರು
ಸು.ರಂ. ಎಕ್ಕುಂಡಿ
ಪ್ರಕಾಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಪುಸ್ತಕದ ಬೆಲೆ
ರೂ.50/-

ಹೆಸರುವಾಸಿ ಕವಿ ಸು.ರಂ. ಎಕ್ಕುಂಡಿಯವರ “ಕಥನ ಕವನ” ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯಲ್ಲಿ ಮರುಮುದ್ರಣವಾದ ಸಂಪುಟ. ಆ ಮಾಲೆಗೆ ಆಯ್ಕೆಯಾದ 100 ಮೇರುಕೃತಿಗಳಲ್ಲೊಂದು.

ಇದರಲ್ಲಿವೆ 53 ಕಥನ ಕವನಗಳು. ಕೆಲವು ಸರಳ ಕವನಗಳು. ಉದಾಹರಣೆಗೆ “ಪಾರಿವಾಳಗಳು" ಕವನ ಇಲ್ಲಿದೆ:

ದಟ್ಟಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿಪಾರಿವಾಳಗಳ ಜೋಡಿ (1)
ಹಗಲಿರುಳು ಜತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು (2)
ಇಟ್ಟ ಮೊಟ್ಟೆಯನೊಡೆದು ಹಿಗ್ಗಿತಿವುಗಳ ಪ್ರೀತಿ ಮುದ್ದು ಮರಿಗಳ ಮಧುರ ಸದ್ದು ಕೇಳಿ
ದಿನಕಳೆದವಾನಂದದಿಂದ ಬಾಳಿ (3)
ಬೇಡನೊಬ್ಬನು ಬಂದು ಬಲೆಯ ಹರಡಿದನೊಮ್ಮೆ ಪುಟ್ಟ ಮರಿಗಳು ಹಾರಿ ಸಿಲುಕಿ ಸೆರೆಗೆ
ಚೀತ್ಕರಿಸತೊಡಗಿದವು ಬರಲು ಹೊರಗೆ (4)
ಕಂಡು ಮರಿಗಳ ಪಾಡು ತಾಯಿ ಧುಮುಕಿತು ಬಲೆಗೆ ಹೆಂಡತಿಯನಗಲಿರದ ಗಂಡು ಹಕ್ಕಿ
ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ (5)
ಕುರುಡು ವಾತ್ಸಲ್ಯದಲಿ ಕಳೆದುಕೊಂದು ವಿವೇಕ ಬಲೆಗೆ ನುಗ್ಗಿದ ಪಾರಿವಾಳ ಹಿಂಡು
ಹಸಿದ ಬೇಡನು ನಡೆದ ಹೊತ್ತುಕೊಂಡು (6)
ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು
ಏನು ಬಂದರು ಕೂಡ ತಾಳಬೇಕು (7)

ಪೌರಾಣಿಕ ಕತೆಗಳನ್ನು ಆಧರಿಸಿದ ಹಲವು ಕಥನ ಕವನಗಳು ಇದರಲ್ಲಿವೆ. ಮತ್ಸ್ಯಗಂಧಿ ಸತ್ಯವತಿ, ಸಂಪಾತಿ, ಊರ್ವಶೀ, ಬಲಿದಾನ, ಶ್ವೇತಕೇತು ದೇವರ್ಷಿ, ಕಾಲಿಯಾ ಮರ್ದನ, ವಸ್ತ್ರಾಪಹರಣ, ಕುಚೇಲೋಪಾಖ್ಯಾನ, ಗಜೇಂದ್ರ ಮೋಕ್ಷ ಇತ್ಯಾದಿ.

“ಕವಷ ಐಲೂಷ” (32 ಭಾಗ), “ಮಹಾಶ್ವೇತೆ" (20 ಭಾಗ) ಮತ್ತು “ಮತ್ಸ್ಯಗಂಧಿ ಸತ್ಯವತಿ” (ಎಂಟು ಭಾಗ) ದೀರ್ಘ ಕವನಗಳು. ಶಂಕರಾಚಾರ್ಯರ ಬದುಕಿನ ಬಗೆಗಿನ ದೀರ್ಘ ಕವನ "ಉಭಯ ಸರಸ್ವತಿ”. "ಬುದ್ಧದೇವ" ಗೌತಮ ಬುದ್ಧನ ಬದುಕನ್ನು ತೆರೆದಿಡುವ ದೀರ್ಘ ಕವನ. "ಹುಂಜ ಮತ್ತು ಕಮಂಡಲು” ಗೌತಮ ಋಷಿಯ ಶಾಪದಿಂದ ಕಲ್ಲಾಗುವ ಅಹಲ್ಯೆಯ ಕತೆ.

“ನನ್ನ ಹಾಗೆಯೆ …" ಕವನ ಬಾಹುಬಲಿಯ ಕಥನ. ಮಹಾಮಜ್ಜನದ ಸಂದರ್ಭದಲ್ಲಿ ಪುಟ್ಟ ಮಗು “ಈತನಾರು ತಾತ ಇಲ್ಲಿ ನಿಂತು ನೋಡುತಿರುವನು ಇಂದ್ರಗಿರಿಯ ನೆತ್ತಿಯಲ್ಲಿ ಎನು ಮಾಡುತಿರುವನು?” ಎಂದು ಕೇಳಿದಾಗ ಅಜ್ಜ ಬಾಹುಬಲಿಯ ಕತೆಯನ್ನು ಹೇಳುತ್ತಾರೆ. ಕೊನೆಗೆ ಪುಟ್ಟ ಮಗು “ತಾತ, ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೆ, ನಿಲ್ಲಿಸುವಳು ಬಾಹುಬಲಿಯು ಕೂಡ ನನ್ನ ಹಾಗೆಯೆ, ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ” ಎಂದುಸುರಿದಾಗ, “ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ" ಎನ್ನುವಲ್ಲಿಗೆ ಕವನ ಮುಕ್ತಾಯ.

“ನಾಗಿಯ ಕಥೆ” ನಾಗಿ ಮತ್ತು ಪ್ರಿಯಕರನ ಪ್ರೇಮದ ಕವನ. "ಹುಡುಗಿಯ ಕಥೆ” ತೆರೆದಿಡುತ್ತದೆ ರೋಗಪೀಡಿತ ಹುಡುಗಿಯ ದುರಂತ ಕತೆಯನ್ನು. ಕಾಡಿಗೆ ಸೌದೆ ಕಡಿಯಲು ಹೋದಾತನಿಗೆ ಅವಳಿ ಮರಗಳ ಬಗ್ಗೆ ಪೂಜ್ಯ ಭಾವ ಮೂಡಿದ ಕಥನ “ಮಂಜುಗೌಡನ ಕಥೆ”. ಈ ಸಂಕಲನದ ವಿಭಿನ್ನ ಕವನ “ಪವಾಡ"; ದಾರಿಯಲ್ಲಿ ಕೆಟ್ಟು ನಿಂತ ಲಾರಿ ಅದರ ಚಾಲಕ ಏನು ಮಾಡಿದರೂ ಚಾಲೂ ಆಗಲಿಲ್ಲ; ಅನಂತರ ಇನ್ನೊಂದು ಲಾರಿ ಬಂದು “ಕುದುರೆ ಕುದುರೆಯ ಗೋಣು ತಿಕ್ಕಿ ನೆಕ್ಕಿದ ಹಾಗೆ” ಪಕ್ಕದಲ್ಲೇ ನಿಂತಾಗ “ಮುಂಚಿನ ಗಾಡಿ ಓಡತೊಡಗಿತು ಸದ್ದು ಮಾಡಿ ಭಾರಿ” ಎಂಬುದೇ ಇದರ ಹೂರಣ.

ಬಾಲಕೃಷ್ಣನ ತುಂಟಾಟಗಳ ಸುಂದರ ರೂಪಕ “ದೂರು" ಕವನ. “ವಸ್ತ್ರಾಪಹರಣ" ಕಥನ ಶ್ರೀಕೃಷ್ಣನು ಗೋಪಿಕೆಯರನ್ನು ಸತಾಯಿಸಿದ ಕ್ಷಣಗಳನ್ನು ಬಣ್ಣಿಸುವ ಪರಿ ಅನನ್ಯ. “ಬಲಿದಾನ" ಬಲಿಚಕ್ರವರ್ತಿಯನ್ನು ವಾಮನ ಪಾತಾಳಕ್ಕೆ ತಳ್ಳಿದ ಕಥನ.  “ಬುಟ್ಟಿ ಮತ್ತು ಬೀಗದ ಕೈ" ಹಾಗೂ "ಅತಿಥಿ" ಪುರಂದರದಾಸರ ಬದುಕಿನ ಘಟನೆಗಳನ್ನು ಕವನ ರೂಪಕ್ಕಿಳಿಸಿವೆ.

"ಕಿಡಕಿ ಮತ್ತು ಗಾಲಿಗಳು”, "ಗಿರವಿ ಅಂಗಡಿಯಲ್ಲಿ", “ಕದವ ತಟ್ಟಿದರು" ಮತ್ತು "ಆಂಡರ್ಸನ್ ಬೀದಿ, ಲಂಡನ್ನಿನಲ್ಲಿ" - ಇವು ನಾಲ್ಕು ಕಾರ್ಲ ಮಾರ್ಕ್ಸ ಅವರ ಬದುಕಿನ ಘಟನೆಗಳನ್ನು ಆಧರಿಸಿದ ಕಥನ ಕವನಗಳು.