ಕಥಾಭರಣ

ಕಥಾಭರಣ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ಅಜಿತ್ ಹರೀಶಿ, ವಿಠಲ್ ಶೆಣೈ
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿ ನಗರ, ಬೆಂಗಳೂರು-೫೬೦೦೧೦, ಮೊ: ೯೯೪೫೯೩೯೪೩೬
ಪುಸ್ತಕದ ಬೆಲೆ
ರೂ೨೯೦.೦೦, ಮುದ್ರಣ: ೨೦೨೨

ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು ತಮ್ಮ ಮಾತುಗಳಲ್ಲಿ “ ಬಹುತೇಕ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಅನ್ನವನ್ನು ಊರ ದೇವರಿಗೆ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು ಇತ್ಯಾದಿಗಳ ಸೋಂಕಿಲ್ಲದೆ ಎಲ್ಲರೂ ಈ ದಾನ ಮಾಡುತ್ತಾರೆ. ಅದನ್ನೆಲ್ಲಾ ಸ್ವೀಕರಿಸಿದ ದೇವಸ್ಥಾನವು ಸುಗ್ಗಿ ಹಬ್ಬ ಹಮ್ಮಿಕೊಳ್ಳುತ್ತದೆ. ಊರವರೇ ನೀಡಿದ ಧಾನ್ಯಗಳನ್ನು ಬಳಸಿ ಊರವರೇ ಅಡುಗೆ ತಯಾರಿಸಿ ಎಲ್ಲರೂ ಊಟ ಮಾಡುತ್ತಾರೆ. ಈ ಊಟವು ಊರವರಿಗೆಲ್ಲ ಅತ್ಯಂತ ರುಚಿ ಎನ್ನಿಸುತ್ತದೆ. ಇಂತಹ ಸುಗ್ಗಿ ಹಬ್ಬದ ರುಚಿ ಈ ಕಥಾ ಸಂಕಲನಕ್ಕೆ ದಕ್ಕಿದೆ. ಕನ್ನಡ ಸಾಹಿತ್ಯ ಲೋಕದ ಸಾಕಷ್ಟು ಹೊಸ ಕತೆಗಾರರು ಮತ್ತು ಒಂದಿಷ್ಟು ಹಳಬರು ಈ ಸಂಕಲನಕ್ಕೆ ತಮ್ಮ ಕತೆಯನ್ನು ನೀಡಿದ್ದಾರೆ. ಸದ್ಯದ ಲೋಕದ ಹೊಸ ಬರವಣಿಗೆಯ ಪಕ್ಷಿನೋಟವನ್ನು ಸಂಕಲನ ನೀಡುತ್ತದೆ ಊರವರೆಲ್ಲರೂ ಒಂದಾದಾಗ ಮೂಡುವ ಹೃದಯತೆ, ಆತ್ಮೀಯತೆ ಮತ್ತು ಲವಲವಿಕೆಯು ಇಲ್ಲಿ ಕಾಣುತ್ತದೆ. ಈ ನಿಟ್ಟಿನಲ್ಲಿ ಇದು ಪರಂಪರೆಯ ನೆಲದಲ್ಲಿ ಹೊಸ ಬೆಳೆಯಾಗಿದೆ. ಊರ ದೇವಸ್ಥಾನವೂ ಒಂದಿಷ್ಟು ಹೊಲವನ್ನು ಹೊಂದಿದ್ದು ಅದು ಕೊಯ್ಲು ಮಾಡಿದ ಧಾನ್ಯದಲ್ಲಿ ಒಂದಿಷ್ಟು ಭಾಗವನ್ನು ಸುಗ್ಗಿ ಹಬ್ಬಕ್ಕೆ ದಾನ ಮಾಡುತ್ತದೆ. ಅದೇ ರೀತಿ ಈ ಸಂಕಲನವನ್ನು ಶೃದ್ಧೆಯಿಂದ ಸಂಪಾದಿಸಿದ ಅಜಿತ್ ಹರೀಶಿ ಮತ್ತು ವಿಠಲ್ ಶೆಣೈ ತಮ್ಮ ಕತೆಯನ್ನೂ ಇಲ್ಲಿ ಓದುಗರಿಗೆ ಕೊಟ್ಟಿದ್ದಾರೆ.  ರುಚಿಯ ನಿರ್ಧಾರದಲ್ಲಿ ನಾಲಿಗೆಗಿಂತಲೂ ಮನಸ್ಸು ದೊಡ್ಡ ಪಾತ್ರ ವಹಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ತಯಾರಿಸಿದ ಸುಗ್ಗಿಯೂಟ ರುಚಿಯಾಗಿರಲು ಮನಸ್ಸೇ ಮುಖ್ಯ ಕಾರಣ. ಆದರೆ ಪಕ್ಕದ ಊರಿನವರೂ ನಮ್ಮೂರಿನ ಸುಗ್ಗಿ ಊಟ ರುಚಿ ಎಂದರೆ ಆಗ ಆ ಪಾಕ ಮಹತ್ವ ಪಡೆದುಕೊಳ್ಳುತ್ತದೆ. ಅಂತಹ ದಾರಿಯಲ್ಲಿ ಇಲ್ಲಿನ ಹಲವು ಕಥೆಗಳಿವೆ ಎನ್ನುವುದು ನನಗೆ ಭರವಸೆಯನ್ನು ಕೊಟ್ಟಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಲೇಖಕರಾದ ವಿವೇಕಾನಂದ ಕಾಮತ್ ಅವರೂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಈ ಸಂಕಲನ “ಕಥಾಭರಣ” ದ ಎಲ್ಲಾ ಕಥೆಗಳನ್ನು ಓದಿ ಮುಗಿಸಿದಾಗ ಮೇಲೆ ತಿಳಿಸಿದ ಎರಡೂ ನಿಟ್ಟಿನಲ್ಲಿ ಇಲ್ಲಿನ ಲೇಖಕ/ಕಿಯರು ಸಮರ್ಥವಾಗಿ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಇದು ನವ್ಯ ಕಾಲದ ಬರಹಗಾರರ ಕಥಾ ಸಂಕಲನ ‘ಕಥಾಭರಣ'. ಪ್ರತಿಯೊಂದು ಆಭರಣದ ಹಿಂದೆಯೂ ಒಂದೊಂದು ಅನನ್ಯತೆ ಇರುತ್ತದೆ. ಅದು ಧರಿಸುವವರ ಮನವನ್ನು ಮುದಗೊಳಿಸುತ್ತದೆ. ಇಲ್ಲಿನ ಸಂಕಲನದ ಕಥೆಗಳಲ್ಲಿ ಇಪ್ಪತ್ತೆಂಟು ಈಗಿನ ತಲೆಮಾರಿನ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಹೆಜ್ಜೆ ಗುರುತನ್ನು ನಿಚ್ಚಳವಾಗಿ ಮೂಡಿಸಿರುವ ೨೮ ಕಥೆಗಾರ/ರ್ಥಿಯರ ಕಥೆಗಳಿವೆ. ಹಸಿದವನ ಮುಂದೆ ಒಂದು ಬಾಳೆ ಎಲೆಯಲ್ಲಿ ಬಗೆ ಬಗೆಯ ಭಕ್ಷ್ಯಗಳನ್ನು ಬಡಿಸಿದಾಗ ಆತ ಸಂತ್ರಪ್ತಿಯಿಂದ ಉಂಡು ಎದ್ದಂತ ಭಾವ ಇಲ್ಲಿನ ಕಥೆಗಳನ್ನು ಓದಿ ಮುಗಿಸಿದಾಗ ಮೂಡುತ್ತದೆ.

ಈ ಕಥಾಸಂಕಲನವನ್ನು ಅವಲೋಕಿಸಿದಾಗ, ಒಂದು ರೂಢಿಗತ ಹಂದರದ ಹಂಗಿಲ್ಲದೇ ತಮ್ಮದೇ ಆದ ಜಾಡನ್ನು ಲೇಖಕ/ಕಿಯರು ಕಂಡುಕೊಂಡಿದ್ದು ಇಲ್ಲಿನ ಬಹುತೇಕ ಕಥೆಗಳಲ್ಲಿ ಎದ್ದು ಕಾಣುವ ಅಂಶವಾಗಿದೆ. ಹಾಗಾಗಿ ಮುಂದಿನ ತಲೆಮಾರಿನ ಜಗತ್ತು ಈ ಲೇಖಕ/ಕಿಯರ ಪೋಷಣೆಯಲ್ಲಿ ಉಜ್ವಲವಾಗಿದೆ ಭರವಸೆ ನೀಡುತ್ತದೆ. ಇದು ಸಮಾನ ಮನಸ್ಕ ಬರಹಗಾರರ ತಂಡವಾದ್ದರಿಂದ ಆ ಸಮಾನತೆಯನ್ನು ಗೌರವಿಸುತ್ತಾ ನಾನಿಲ್ಲಿ ಪ್ರತ್ಯೇಕವಾಗಿ ಯಾವ ಕಥೆಯನ್ನೂ ಅದರ ಗುಣಮಟ್ಟವನ್ನು ನಮೂದಿಸಲು ಹೋಗುವುದಿಲ್ಲ. ಪ್ರತಿಯೊಂದರ ಹೊಸತು ಎಂದಾಕ್ಷಣ ಇದು ಹೊಸ ಹುಮ್ಮಸ್ಸು, ಉತ್ಸಾಹದಿಂದ ನಾವು ಹೊಸ ಕಾರ್ಯವನ್ನು ಮಾಡಲು ಪ್ರಯತ್ನಿಸುತ್ತೇವೆ. ಹಾಗಾಗಿ ಇಲ್ಲಿನ ಕಥೆಗಾರರರೆಲ್ಲರೂ ಕಥಾ ಜಗತ್ತಿನ ಕಿಂಡಿಗೆ ಮುಖ ಮಾಡಿ ನಿಂತವರು. ತಂತಮ್ಮ ನೋಟಕ್ಕೆ ಕಾಣುವ ಜಗತ್ತನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದಾರೆ. ನೋಡಿದ, ಅನುಭವಿಸಿದ ದೃಷ್ಟಿಕೋನದಲ್ಲಿ ಬರಹ ಅವಲಂಬಿತವಾಗಿದೆ. ಅಲ್ಲೇ ನಿಂತರೆ ಅದಷ್ಟೇ ನೋಟ, ಹಿಡಿದಿಡುವುದು ಅದಷ್ಟೇ ಬದುಕು, ಹೊರಗೆ ಹಾರಿದಲಾಗಷ್ಟೇ ನಿಚ್ಚಳವಾಗಿ ಲೋಕದರ್ಶನ ಸಾಧ್ಯ"ಎಂದು ಅಭಿಪ್ರಾಯ ಪಟ್ಟಿದ್ದಾರೆ.