ಕಥಾಸಂಭ್ರಮ

ಕಥಾಸಂಭ್ರಮ

ಪುಸ್ತಕದ ಲೇಖಕ/ಕವಿಯ ಹೆಸರು
ಅಮರೇಶ ನುಗಡೋಣಿ ಮತ್ತು ಇತರರು
ಪ್ರಕಾಶಕರು
೮ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸಮಿತಿ, ಯು.ಎಸ್.ಎ.
ಪುಸ್ತಕದ ಬೆಲೆ
ರೂ. ೨೦೦/-

ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು.

ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮಗೆ ಲಭ್ಯವಿದ್ದ ಅನುಕೂಲತೆಗಳ ಇತಿಮಿತಿಯಲ್ಲಿ ಪ್ರಚಲಿತ ಲೇಖಕರನ್ನು ಸಂಪರ್ಕಿಸಿ ಈ ಕಥೆಗಳನ್ನು ಪಡೆದುಕೊಳ್ಳಲಾಯಿತು. ಬೊಗಸೆಯಲ್ಲಿ ಸಾಗರದ ನೀರನ್ನು ಹಿಡಿದು, ಇದೇ ಸಾಗರವೆನ್ನುವುದು ದುಸ್ಸಾಹಸವಾದಿತು. ಒಟ್ಟು ಒಂಬತ್ತು ಕಥೆಗಳ ಈ ಕಥಾಸಂಕಲನವನ್ನು ಕನ್ನಡ ಕಥೆಗಳ ಪ್ರಾತಿನಿಧಿಕವೆಂದು ಕರೆಯಲಾಗದು. ….. ಸಣ್ಣ ಕಥೆಯ ಸಾಧ್ಯತೆಗಳ ಹರಹು, ಆಡುಭಾಷೆಗಳಲ್ಲಿನ ವೈವಿಧ್ಯ, ಕಥೆಗಾರರ ಅನುಭವ, ಪರಿಸರ ಬದಲಾದಂತೆ ಅವರನ್ನು ಕಾಡುವ ವಸ್ತುಗಳ ವೈವಿಧ್ಯ ಈ ಸಂಕಲನದಲ್ಲಿ ವ್ಯಕ್ತವಾಗಿದೆ."

ಮೊದಲನೆಯ ಕತೆ: “ಮೈಲಿಗೆ ಮಾಸುವ ಸಮಯ”. ಬೆಂಗಳೂರಿನ ವಿರುಪಮ್ಮ ಭಗವತಿಯಮ್ಮನ ಪೂಜೆಗಾಗಿ ಐದಾರು ವರುಷಗಳ ನಂತರ ತನ್ನ ಹಳ್ಳಿಗೆ ಹಿಂತಿರುಗುವ ಸಂದರ್ಭ. ಕೂಡುಕುಟುಂಬದಲ್ಲಿ ಹಳ್ಳಿಯಲ್ಲಿ ಬದುಕು ಸಾಗಿಸುತ್ತಿದ್ದಳು ವಿರುಪಮ್ಮ. ಆ ಹಳ್ಳಿಯ ಹತ್ತಿರ ದೊಡ್ಡ ಡ್ಯಾಮ್ ಕಟ್ಟುತ್ತಾರೆ. ಜಲಾಶಯದಲ್ಲಿ ನೀರು ಏರುತ್ತಿದ್ದಂತೆ ಇವಳ ಕುಟುಂಬವೂ ಸ್ಥಳಾಂತರವಾಗುತ್ತದೆ. ಆದರೆ, ಇವಳ ಪತಿ ಹಳ್ಳಿಯ ಭಜನೆಮಂಟಪದಲ್ಲೇ ಉಳಿಯುತ್ತಾನೆ; ಕೆಲವು ದಿನಗಳ ನಂತರ ಅಲ್ಲೇ ಆತನ ಸಾವು. ನಂತರ ಕೆಲವು ವರುಷ, ಜಲಾಶಯದ ನೀರು ಇಳಿದಾಗ ತನ್ನ ಜಮೀನಿನಲ್ಲಿ ತರಕಾರಿ ಬೆಳೆಸಿ ಬದುಕು ಕಟ್ಟಿಕೊಂಡ ವಿರುಪಮ್ಮ, ತದನಂತರ ಮಗ-ಮಗಳೊಂದಿಗೆ ಬೆಂಗಳೂರಿಗೆ ಬಂದು ನೆಲೆಸುತ್ತಾಳೆ. ಆಕೆಯೂ ದುಡಿಯುತ್ತಾಳೆ.  ತನ್ನ ಚಿತ್ರಕಲೆಯ ಮೂಲಕ ಮಹಾನಗರದಲ್ಲಿ ನೆಲೆ ಕಂಡುಕೊಳ್ಳುತ್ತಾನೆ ಅವಳ ಮಗ. ಮಗಳಿಗೂ ಅಲ್ಲೇ ಉದ್ಯೋಗ. ಈಗ ಮಗ-ಮಗಳೊಂದಿಗೆ ಭಗವತಿಯಮ್ಮನ ಪೂಜೆಗೆ ಬಂದಿರುವಾಗ, ಗರತಿಯೊಬ್ಬಳು ಭಗವತಿಯಾದ ಕತೆಯ ಇನ್ನೊಂದು ನಿರೂಪಣೆ ಕೇಳಿದ ವಿರುಪಮ್ಮಳಿಗೆ - ಅಲ್ಲಿಯ ತೊರೆಯಲ್ಲಿ ಗರತಿಯರು ಮಾತ್ರ ಸ್ನಾನ ಮಾಡಬೇಕೇ? - ಎಂಬ ಗೊಂದಲ.

“ಹರಿವ ನೀರಿಗೆ ತನ್ನದೇ ಜಾಡು" ಎಂಬ ೨ನೇ ಕತೆಯ ನಾಯಕ ಬೆಂಗಳೂರಿನ ರಾಘು. ಅಮೆರಿಕಕ್ಕೆ ವಲಸೆ ಹೋಗಿ, ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾಗ ಡಾನಾ ಎಂಬವಳ ಮೋಹಪಾಶಕ್ಕೆ ಸಿಲುಕಿದ. ಅನಂತರ ಮುಂದಿನ ಅಧ್ಯಯನಕ್ಕಾಗಿ ಆ ಊರು ತೊರೆಯಬೇಕಾಯಿತು. ಅವನ ಪ್ರೇಯಸಿ ಅವನೊಂದಿಗೆ ಬರಲೊಪ್ಪಲಿಲ್ಲ. ತದನಂತರ ಔಷಧಿ ಕಂಪೆನಿಯ ಉದ್ಯೋಗಿಯಾದ.
ಆಗ ಬೆಂಗಳೂರಿಗೆ ಬಂದು, ನಾಗವೇಣಿಯನ್ನು ಮದುವೆಯಾಗಿ, ಅಮೆರಿಕಕ್ಕೆ ಮರಳಿದ. ಹಲವು ವರುಷಗಳ ನಂತರ, ತನ್ನ ಸಹೋದ್ಯೋಗಿಯೊಬ್ಬನ ಮತ್ತು ಡಾನಾಳ ಸಂಬಂಧ ಅಚಾನಕ್ ತಿಳಿದಾಗ ತೀರಾ ಗೊಂದಲದಲ್ಲಿ ಬಿದ್ದ.

ಮೂರನೆಯ ಕತೆ: "ಒರತೆ ಬತ್ತಿದ ಬಾವಿ". ಕಥಾನಾಯಕ ಮಾದಪ್ಪನನ್ನು ಸಾಕಿ ಬೆಳೆಸಿದವಳು ಅವನ ಅಕ್ಕ. ಆಕೆಯ ಮಗಳು ಹತ್ತು ವರುಷದ ಎಲ್ಲವ್ವನನ್ನು ಒತ್ತಾಯಕ್ಕೆ ಮದುವೆಯಾಗುತ್ತಾನೆ. ಆದರೆ, ಮದುವೆಯ ದಿನ ರಾತ್ರಿಯೇ ಊರು ಬಿಟ್ಟು ಹೋಗುತ್ತಾನೆ. ಹತ್ತಾರು ವರುಷಗಳ ನಂತರ ತನ್ನೂರು ರಾವಳ್ಳಿಗೆ ಅಪರಿಚಿತನಂತೆ ಅವನ ಭೇಟಿ. ಆಗ, ಅವನ ಅಕ್ಕನ ಮನೆ ನೆಲಸಮವಾಗಿತ್ತು. ಕಣಿ ಹೇಳೋ ಕೊರವಂಜಿ ತಾಯಾಗಿ ಎಲ್ಲವ್ವ ಊರು ಬಿಟ್ಟು ಹೋದಳೆಂದು ಊರ ಗೌಡತಿಯಿಂದ ತಿಳಿಯುತ್ತಾನೆ. "ಎಲ್ಲವ್ವಗ ಭಾಳ ಅನ್ಯಾಯ ಮಾಡೇನಿ” ಎಂದು ಅಗಾಧ ತಪ್ಪಿತಸ್ಥ ಭಾವ ಹೊತ್ತು ಪುನಃ ಊರು ಬಿಡುತ್ತಾನೆ.

ಡಾ. ಕೆ. ಎನ್. ಗಣೇಶಯ್ಯ ಬರೆದ “ಕರುಣಾಯುಧ" ಕತೆ, ಶ್ರೀನಗರದಿಂದ ಐದು ಕಿಮೀ ದೂರದಲ್ಲಿ ೬ನೇ ಶತಮಾನದಲ್ಲಿ ಹೂಣರ ರಾಜ ಮಿಹಿರಾಕುಲ ಕಟ್ಟಿಸಿದ ಶಿವ ದೇವಾಲಯವಿದೆ ಎಂಬ ಸುಳಿವಿನಿಂದ ಶುರು. ರಾಜ ಮಿಹಿರಾಕುಲನ ಬಗ್ಗೆ ಚರಿತ್ರೆಯಲ್ಲಿ ದಾಖಲಾಗಿರುವ ಹಲವಾರು ಸಂಗತಿಗಳೊಂದಿಗೆ ಕತೆ ಬೆಳೆಯುತ್ತದೆ. ಮುಂದೊಮ್ಮೆ ಶ್ರೀನಗರಕ್ಕೆ ನಿರೂಪಕನ ಭೇಟಿ; ಅಲ್ಲಿ ಹಿರಿಯರೊಬ್ಬರನ್ನು ಭೇಟಿಯಾದಾಗ ಮಿಹಿರಾಕುಲನ ಬಗ್ಗೆ ತೀರಾ ಭಿನ್ನ ಚಾರಿತ್ರಿಕ ದಾಖಲೆಗಳನ್ನು ತಿಳಿಯುತ್ತಾನೆ. ಇದರಿಂದಾಗಿ ನಿರೂಪಕನಿಗೆ ಚರಿತ್ರೆಯ ಸತ್ಯದ ಬಗ್ಗೆ ಹಲವಾರು ಅನುಮಾನಗಳು ಕಾಡುತ್ತವೆ.
ಮುಂದಿನ ಕತೆ “ನ್ಯೂಜೆರ್ಸಿಯಲ್ಲಿ ಕಂಬತ್ತಳ್ಳಿ”, ನೀಲಕಂಠ ಅವರ ಜೀವನಕತೆ - ಅವರ ಸಾಕುಮಗಳು ಪ್ರಸ್ತುತಪಡಿಸುವ ಕಥನ. ಅವರಿಗೆ ಹತ್ತು ಮಕ್ಕಳು. ಒಬ್ಬರಿಗೂ ವಿದ್ಯೆ ಹತ್ತಲಿಲ್ಲ. ಮೊದಲ ಹೆಂಡತಿ ಚಿನ್ನಮ್ಮಳ ಮರಣಾ ನಂತರ ಆಕೆಯ ತಂಗಿ ರೇಣುಕಾಳನ್ನೇ ಮದುವೆಯಾದರು. ಚಿನ್ನಮ್ಮಳಿಂದ ಆರು ಮಕ್ಕಳಾದರೆ, ರೇಣುಕಾಳಿಂದ ನಾಲ್ಕು ಮಕ್ಕಳು. ಕೊನೆಗೆ ಗಂಡು ಮಕ್ಕಳು ತಮ್ಮ ಪಾಲಿನ ಜಮೀನಿನ ಹಣ ಕೊಡಲೇ ಬೇಕೆಂದು ಪಟ್ಟು ಹಿಡಿದಾಗ ಜಮೀನು ಮಾರಿ, ಬಂದ ಹಣವನ್ನೆಲ್ಲ ಅವರಿಗೆ ಹಂಚಿ ಕೈತೊಳೆದುಕೊಂಡರು. ಅವರು ಸಾಕುಮಗಳಿಗೆ ಸೋದರ ಮಾವ. ಈ ಸಾಕುಮಗಳ ಅಪ್ಪ-ಅಮ್ಮ ಅಪಘಾತದಲ್ಲಿ ತೀರಿಕೊಂಡಾಗ, ಆಕೆ ನೀಲಕಂಠ ಅವರ ಮನೆಸೇರಿದಳು. ಚೆನ್ನಾಗಿ ಕಲಿತು, ಮರಾಠಿ ಯುವಕ ರಮೇಶನನ್ನು ಮದುವೆಯಾಗಿ ಅಮೇರಿಕ ಸೇರಿಕೊಂಡಳು. ಅನಂತರ ಒಮ್ಮೆ ನೀಲಕಂಠಮಾವನನ್ನು ಅಮೇರಿಕೆಗೆ ಕರೆಸಿಕೊಂಡಳು. ಅಲ್ಲಿ, ಅದೊಂದು ಸಂದರ್ಭದಲ್ಲಿ ನೀಲಕಂಠ ಅವರು ಸಾಕುಮಗಳಿಗೆ ತಮ್ಮ ಬದುಕಿನ ಪರಮರಹಸ್ಯ ತಿಳಿಸಿದಾಗ, ಈಕೆಗೆ ಆಘಾತ.

"ಮುಸ್ಸಂಜೆಯ ಮೂರು ಗಳಿಗೆ" ಒಬ್ಬ ಮಹಿಳೆ ಮತ್ತು ಅವಳ ಮಗನ ವಯಸ್ಸಿನ ನೀಲಿಕಣ್ಣಿನ ಯುವಕನ ನಡುವಣ ಪದಗಳಿಗೆ ಮೀರಿದ ಸಂಬಂಧವೊಂದನ್ನು ನವಿರಾಗಿ ಚಿತ್ರಿಸುವ ಕತೆ. ಕೊನೆಯ ಕತೆ "ನೀರ ಮೇಲಿನ ಗುಳ್ಳೆ”. ಪಿರಮಿಡ್ ಸ್ಕೀಮಿನಿಂದ ದುಡ್ಡಿನ ಗುಡ್ದೆ ಹಾಕುವ ಚಪಲಕ್ಕೆ ಬಲಿಯಾದವರು ಮತ್ತು ಇದರಲ್ಲಿ ಸಿಲುಕಿದ ನಿರಪರಾಧಿಗಳು ನಲುಗಿದ ಕತೆ.