ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ

ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ

ಯಾವುದೋ ಪತ್ರಿಕಾ ವರದಿ ಮಾಡಲು ನಾನು ಆ ದಿನ ದಾವಣಗೆರೆಯಲ್ಲಿದ್ದೆ. ಪ್ರಗತಿಪರ ಕೃಷಿಕರೊಬ್ಬರ ಸಂದರ್ಶನ ಮುಗಿಸಿ ಅಲ್ಲೇ ಸೈಬರ್‍ನಲ್ಲಿ ಕುಳಿತು ವರದಿಯನ್ನು ಬರೆದು ಫೋಟೋ ವರದಿ ಎಲ್ಲಾ ಕಚೇರಿಗೆ ಮೇಲ್ ಮಾಡಿದೆ. ನನಗೆ ರಾತ್ರಿ ಬಸ್‍ಗೆ ಟಿಕೆಟ್ ಬುಕ್ ಆಗಿತ್ತು. ಸಮಯ ನೋಡಿದೆ ಬೆಳಿಗ್ಗೆ 11 ಗಂಟೆ. ಇನ್ನೂ ತುಂಬಾ ಸಮಯವಿದೆ ಎಂದು ನಮ್ಮ ಪತ್ರಿಕಾ ಏಜೆಂಟ್ ಅಣ್ಣಪ್ಪನವರಿಗೆ ಫೋ ಮಾಡಿದೆ. ಬಿಡುವಾಗಿದ್ರೆ ಒಮ್ಮೆ ಗಾಂಧಿ ಸರ್ಕಲ್ ಕಡೆ ಬರ್ತೀರಾ ಅಂದೆ. ಮಧ್ಯರಾತ್ರಿಯಲ್ಲೂ ಎಬ್ಬಿಸಿ ಹೊರಡೋಣ್ವಾ ಎಂದರೆ ಎಲ್ಲಿಗೆ ಎಂದು ಕೇಳದೇ ಹೊರಟು ಬಿಡುವ ಆಸಾಮಿ ಅವನು.

ಫೋನ್ ಮಾಡಿದ ಹತ್ತೇ ನಿಮಿಷಕ್ಕೆ ಅವನು ಗಾಂಧಿ ಸರ್ಕಲ್ ಬಳಿ ಹಾಜರ್. ಹೊಟ್ಟೆ ಹಸಿವಾಗುತ್ತಾ ಇತ್ತು. ಅಲ್ಲೇ ಇದ್ದ ಶಾಂತಿ ಸಾಗರ್ ಹೋಟೇಲ್‍ಗೆ ಅವನೇ ಬಲವಂತವಾಗಿ ಕರೆದುಕೊಂಡು ಹೋದ. ದಾವಣಗೆರೆ ಬಂದು ಬೆಣ್ಣೆ ದೋಸೆ ತಿನ್ನದಿದ್ರೆ ಹೇಗೆ ಸರ್? ಎಂದು ಎರಡು ಸ್ಪೆಷಲ್ ಬೆಣ್ಣೆ ದೋಸೆಗೆ ಆರ್ಡರ್ ಮಾಡಿದ. ದೋಸೆ ಬರಲಿನ್ನೂ ಸಮಯವಿತ್ತು. ನಾವು ಕುಳಿತ ಸ್ಥಳದಿಂದ ಬಸ್ ನಿಲ್ದಾಣ ಸರಿಯಾಗಿ ಕಾಣಿಸುತ್ತಿತ್ತು. ಆಗ ಆಶ್ಚರ್ಯಕರ ರೀತಿಯಲ್ಲಿ ಕಣ್ಣಿಗೆ ಬಿದ್ದಳು ಲಕ್ಷ್ಮಿ.

ಸುಮಾರು 3 ವರ್ಷದ ಹಿಂದೆ ಅವಳ ಮದುವೆಗೆ ನಾನೂ ನನ್ನ ತಂಗಿ ಹೋಗಿ ಬಂದುದೇ ಕೊನೆ. ನಂತರ ಅವಳನ್ನು ನೋಡುತ್ತಿರುವುದೇ ಈಗ. ಕೈಯಲ್ಲಿ ಸಣ್ಣ ಮಗು ಬೇರೆ ಇದೆ. ಪುಟ್ಟದಾದ ಮಗುವಿಗೆ ಸುಮಾರು ಆರು ಏಳು ತಿಂಗಳು ಇರಬಹುದೆಂದು ಅಂದಾಜಿಸಿದೆ. ಅಣ್ಣಪ್ಪನವರಿಗೆ ಈಗ ಬಂದೆ ಎಂದು ಹೇಳಿ ಬಸ್ ಸ್ಟ್ಯಾಂಡ್ ಕಡೆಗೆ ಓಡಿದೆ. ಅವಳ ಎದುರು ನಿಂತಾಗ ಅವಳ ಬಾಯಿಯಿಂದಲೂ ಮಾತು ಹೊರಡಲಿಲ್ಲ. ಮುಖದಲ್ಲಿ ಮೊದಲಿನ ಕಳೆ ಇರಲಿಲ್ಲ. ತುಂಬಾ ಸೋತು ಹೋದವಳಂತೆ ಕಾಣುತ್ತಿದ್ದಳು. ನಾನೇ ಮೌನ ಮುರಿದು ?ಏನು ಇಲ್ಲಿ? ಎಂದೆ. ಮದುವೆ ನಂತರ ಇಲ್ಲೇ ಇದ್ದೇನೆ ಅಂದಳು. ಆ ಬಿಸಿಲಿನಲ್ಲಿ ಅವಳು ಇನ್ನಷ್ಟು ಕಪ್ಪು ಆಗಿ ಕಾಣಿಸುತ್ತಿದ್ದಳು. ಕಂಕುಳಲ್ಲಿ ಪಾಪ ಮಗು ಬೇರೆ. 

‘ಬಾ ಹೋಟೇಲ್‍ನಲ್ಲಿ ಕುಳಿತು ಮಾತನಾಡುವ’ ಅಂದೆ.

ಅವಳಿಗೂ ಮಾತನಾಡ ಬೇಕೆಂಬ ಮನಸಾಯಿತೋ ಅಥವಾ ಹಸಿವಾಗುತ್ತಿತ್ತೋ ಅವಳ ಮುಖಭಾವದಿಂದ ಗೊತ್ತಾಗಲಿಲ್ಲ. ಸುಮ್ಮನೆ ನನ್ನ ಹಿಂದೆಯೇ ಹೋಟೇಲ್‍ಗೆ ಬಂದಳು. ಅಣ್ಣಪ್ಪನವರಿಗೆ ಲಕ್ಷ್ಮಿಯನ್ನು ಪರಿಚಯ ಮಾಡಿಕೊಟ್ಟೆ. ಇವಳು ನಮ್ಮ ಊರಿನ ಹುಡುಗಿ ಮದುವೆ ನಂತರ ಇಲ್ಲೇ ಇದ್ದಾಳೆ. ಮದುವೆಯ ನಂತರ ಇವಳನ್ನು ಇಲ್ಲೇ ನೋಡೋದು ಅಂದೆ. ನಮಸ್ಕಾರಗಳ ವಿನಿಮಯದ ನಂತರ ನಾನು ಮತ್ತೊಂದು ದೋಸೆ, ಮಗುವಿಗೆ ಹಾಲು ಆರ್ಡರ್ ಮಾಡಿದೆ. 

‘ನಿಮ್ಮ ಊರಿನವರು ಸಿಕ್ಕಿದ್ರಲ್ಲಾ ಸರ್, ತುಂಬಾ ಮಾತನಾಡಲು ಇರಬಹುದು. ನಾನು ಹೀಗೆನೇ ಒಮ್ಮೆ ಬ್ಯಾಂಕ್‍ಗೆ ಹತ್ರ ಹೋಗಿ ಬರ್ತೇನೆ’ ಎಂದ ಅಣ್ಣಪ್ಪ. ನಮ್ಮಿಬ್ಬರ ಮುಖ ಭಾವ ನೋಡಿ ಅವನಿಗೂ ನಮಗೆ ಏಕಾಂತ ಬೇಕಾಗಿದೆಯೇನೋ ಅನಿಸಿರ ಬೇಕು. ದೋಸೆ ತಿಂದೇ ಹೋಗಿ ಅಂದೆ. ‘ಬಂದ ನಂತರ ಪಾರ್ಸೆಲ್ ಮಾಡಿಸಿದ್ರೆ ಆಯ್ತು ಸರ್. ನೀವು ಆರಾಮವಾಗಿ ದೋಸೆ ತಿನ್ನುತ್ತಾ ಮಾತಾಡಿಕೊಳ್ಳಿ ಸರ್. ಬೆಣ್ಣೆ ದೋಸೆ ದಾವಣಗೆರೆಯಲ್ಲಿ ಭಾರೀ ಫೇಮಸ್ ಸರ್’ ಎಂದು ಹೇಳಿ ಹೊರಟೇ ಹೋದ.

ದೋಸೆ ಬಂತು. ಅದನ್ನು ತಿನ್ನುತ್ತಾ ಹಿಂದಿನ ಘಟನೆಗಳು ನೆನಪಾದವು. ಬಣ್ಣದಲ್ಲಿ ಕಪ್ಪಾದರೂ ಲಕ್ಷಣವಾಗಿದ್ದು, ಒಳ್ಳೆಯ ಮನಸ್ಸು ಹೊಂದಿದ್ದ ಲಕ್ಷ್ಮಿ ಕಣ್ಣು ಕಾಣದ ಹುಡುಗನನ್ನು ಮದುವೆಯಾಗಿ ಆದರ್ಶ ಮೆರೆದಿದ್ದಳು. ಆದರೆ ಇಂದು ಬದುಕಿನಲ್ಲಿ ತುಂಬಾ ಸೋತು ಹೋದ ಹಾಗೆ ಕಾಣಿಸುತ್ತಾ ಇದ್ದಾಳೆ. 

ಏನಾಯ್ತು? ಅಂದೆ. ಬಹುಷಃ ಇದೇ ಮಾತಿಗೆ ಕಾಯ್ತಾ ಇದ್ದಳು ಅನಿಸುತ್ತೆ. ಅವಳ ಕರುಣಾ ಜನಕ ಕಥೆ ಹೊರಬರಲಾರಂಭಿಸಿತು.

‘ಕಣ್ಣಿಲ್ಲವೆಂದು ಗೊತ್ತಿದ್ದರೂ ನಾನು ಅವರನ್ನು ಮದುವೆಯಾದೆ. ಮದುವೆಯ ಮೊದಲಲ್ಲಿ ಎಲ್ಲಾ ಸರಿಯಾಗಿತ್ತು. ಉತ್ತಮವಾಗಿ ಹಾಡುತ್ತಿದ್ದ ಅವರನ್ನು ಸಂಗೀತ ಕಾರ್ಯಕ್ರಮಗಳಿಗೆ ನಾನೇ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಅವರ ಗಾಯನ ಎಲ್ಲಾ ಮುಗಿದ ನಂತರ ನಾನೇ ಮನೆಗೆ ಕರೆದುಕೊಂಡು ಬರುತ್ತಿದ್ದೆ. ಹೀಗೆ ಒಂದು ವರ್ಷ ಹೇಗೆ ಕಳೆದು ಹೋಯಿತೆಂದೇ ತಿಳಿಯಲಿಲ್ಲ. ಅವರ ಸಂಗೀತ, ಧ್ವನಿಯನ್ನು ಮೆಚ್ಚಿ ಹಲವಾರು ಕಾರ್ಯಕ್ರಮಗಳು ಸಿಗಲಾರಂಭಿಸಿದವು. ಆಕಾಶವಾಣಿಯಲ್ಲಿ ಹಾಡೋ ಅವಕಾಶವೂ ದೊರೆಯಿತು. ಸ್ಥಳೀಯವಾಗಿ ರಸಮಂಜರಿ, ಸಂಗೀತ ಸಂಜೆಗಳಲ್ಲಿ ಹಾಡಿದ ಹಾಡುಗಳ ಸಿಡಿಯೂ ಬಿಡುಗಡೆಯಾಯಿತು. ದಾವಣಗೆರೆಯಲ್ಲಿ ಇವರಿಗೊಂದು ಒಳ್ಳೆಯ ಹೆಸರೂ ಬಂತು. ಹೀಗೆ ಒಮ್ಮೆ ಮುಂಬಯಿಯ ಕನ್ನಡ ಸಂಘದವರು ತಮ್ಮ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಇವರ ಹಾಡುಗಳ ರಸಮಂಜರಿಯನ್ನು ಮಾಡ ಬೇಕು ಎಂದು ಕರೆದರು. ಅದೇ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡುವ ಕಾರ್ಯಕ್ರಮವೂ ಇತ್ತು. ಮುಂಬಯಿ ತುಂಬಾ ದೂರವಾಗುತ್ತೆ, ನಾನು ಹೋಗುದಿಲ್ಲ ಕಣೇ ಅಂದರು. ಆದರೆ ನಾನು ಬಲವಂತ ಮಾಡಿದೆ. ಒಳ್ಳೆ ಉದ್ದೇಶದಿಂದ ಮಾಡುವ ಕಾರ್ಯಕ್ರಮ ನೀವು ಹೋಗಲೇ ಬೇಕು, ನಾನು ಹೇಗೂ ನಿಮ್ಮ ಜೊತೆ ಇದ್ದೇನಲ್ಲ ಅಂದು ಕರೆದುಕೊಂಡು ಹೋದೆ.

ಕಾರ್ಯಕ್ರಮ ಅದ್ಭುತವಾಗಿತ್ತು. ಇವರನ್ನೂ ಗೌರವದಿಂದ ಸತ್ಕರಿಸಿ, ಸನ್ಮಾನಿಸಿದರು. ಅದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಖ್ಯಾತ ಕಣ್ಣಿನ ವೈದ್ಯರಾದ ಡಾ.ಭಾಸ್ಕರ್ ಶೆಣೈಯವರು ಇವರ ಹಾಡಿನಿಂದ ಪ್ರಭಾವಿತರಾಗಿ, ನೀವು ಯಾಕೆ ಒಮ್ಮೆ ನಮ್ಮ ಕ್ಲಿನಿಕ್‍ಗೆ ಬಂದು ಕಣ್ಣನ್ನು ಪರೀಕ್ಷಿಸಿ ಕೊಳ್ಳಬಾರದು? ಎಂದರು. ತುಂಬಾ ಕಡೆ ತೋರಿಸಿ ನಿರಾಶರಾಗಿದ್ದ ನಮ್ಮವರಿಗೆ ಯಾಕೋ ಕಣ್ಣು ತೋರಿಸಲು ಆಸಕ್ತಿ ಇರಲಿಲ್ಲ. ಆದರೂ ನಾನೇ ಬಲವಂತವಾಗಿ ಕರೆದುಕೊಂಡು ಹೋದೆ.

ಕಣ್ಣನ್ನು ಪರೀಕ್ಷಿಸಿದ ಡಾ.ಭಾಸ್ಕರ್ ಶೆಣೈಯವರು ದೃಷ್ಟಿ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆಪರೇಶನ್ ಮಾಡಿ ನೋಡುವ ಅಂದರು. ಹಾಗೇ ಅವರ ಕಣ್ಣಿನ ಆಸ್ಪತ್ರೆಯಲ್ಲೇ ಆಪರೇಷನ್ ಸಹ ನಡೆದೇ ಹೋಯಿತು. ಕಲಾವಿದನನ್ನು ಬೆಂಬಲಿಸುವ ನಿಟ್ಟಿನಲ್ಲಿ ಡಾ.ಭಾಸ್ಕರ್ ಶೆಣೈಯವರು ಉಚಿತವಾಗಿಯೇ ಆಪರೇಷನ್ ನಡೆಸಿದರು. ಆಶ್ಚರ್ಯಕರವಾಗಿ ಅವರಿಗೆ ಕಣ್ಣಿನ ದೃಷ್ಟಿ ಬಂತು ಆದರೆ ನಂತರದ ದಿನಗಳಲ್ಲಿ ನನ್ನನ್ನು ನೋಡುವ ದೃಷ್ಟಿಯೇ ಬದಲಾಯ್ತು. ಕಪ್ಪು, ಕಪ್ಪು ಎಂದು ಸದಾ ಕಾಲ ನನ್ನ ಮೂದಲಿಸಲಾರಂಬಿಸಿದರು. ಅದೇ ಸಮಯಕ್ಕೆ ನನಗೆ ಮಗು ಹುಟ್ಟಿತು. ಇವರ ಖ್ಯಾತಿ ಏರಿದಂತೆಲ್ಲಾ ಇವರು ನನ್ನನ್ನು, ಮಗುವನ್ನು ಕಡೆಗಣಿಸಿಲಾರಂಭಿಸಿದರು. ನಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗುತ್ತಿರಲಿಲ್ಲ. ನಾನು ಅವರಿಗೆ ಕಣ್ಣು ಕಾಣದೇ ಇದ್ದಾಗ ಮಾಡಿದ ಯಾವುದೇ ಸಹಾಯ ನೆನಪು ಇರಲಿಲ್ಲ. ಅದು ನಿನ್ನ ಕರ್ತವ್ಯವಾಗಿತ್ತು ಅದಕ್ಕೆ ಮಾಡಿದೆ ಅಷ್ಟೇ ಎಂದು ಮಾತನಾಡುತ್ತಿದ್ದರು. ಅವರ ಸಂಗೀತ ರಸ ಮಂಜರಿಯಲ್ಲಿ ಹಾಡುವ ಹುಡುಗಿಯೊಂದಿಗೆ ಪ್ರೇಮ ಶುರುವಾಯಿತು. ಕೆಲವು ಸಲ ಮನೆಗೇ ಕರೆದುಕೊಂಡು ಬಂದು ಹರಟೆ ಹೊಡೆಯುತ್ತಿದ್ದರು. ಅವಳ ಎದುರು ನನ್ನನ್ನು ಕಪ್ಪು, ಕರಿ ಎಂದೆಲ್ಲಾ ಹಿಯಾಳಿಸಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದರು. ಮತ್ತೆ ಒಂದು ದಿನ ಡೈವೋರ್ಸ್ ಪೇಪರ್ ಹಿಡಿದು ಕೊಂಡು ಬಂದು ಸಹಿ ಹಾಕು ಎಂದರು. ನನಗೂ ಅವರ ಸಹವಾಸ ಸಾಕು ಎಂದು ಅನಿಸಿತು. ಸಹಿ ಹಾಕಿ ಕೊಟ್ಟೆ. ಸ್ವಲ್ಪ ಹಣ ಮತ್ತು ಈಗ ಇರುವ ಸಣ್ಣ ಮನೆ ನನ್ನ ಪಾಲಿಗೆ ಬಂತು. ಸಣ್ಣದೊಂದು ಬ್ಯೂಟಿ ಪಾರ್ಲರ್ ಶುರು ಮಾಡಿದೆ. ಹೇಗೂ ಜೀವನ ಸಾಗುತ್ತಿದೆ.? ಎಂದು ಅವಳ ಕಥೆ ಮುಗಿಸಿದಾಗ ಇಬ್ಬರ ಕಣ್ಣಲ್ಲೂ ನೀರಿತ್ತು. 

ನಿಜಕ್ಕೂ ಜನ ಹೀಗೂ ಇರ್ತಾರಾ ಅನಿಸ್ತು. ಒಂದು ನಿರ್ಧಾರ ಮಾಡಿದೆ. ಅವಳ ಹತ್ರ ಹೇಳಿದೆ ‘ನಿನಗೆ ಒಪ್ಪಿಗೆ ಇದ್ರೆ ನಾನು ನಿನ್ನ ಮದುವೆ ಆಗ್ತೀನಿ. ನಿನ್ನ ಮಗುವನ್ನು ಅಪ್ಪನ ಸ್ಥಾನದಲ್ಲಿ ನಿಂತು ಸಾಕುತ್ತೇನೆ’ ಎಂದೆ. ಅವಳು ಸಮ್ಮತಿಯೆಂದು ತಲೆ ಆಡಿಸಿದಳು. ಕೂಡಲೇ ನನ್ನ ತಂಗಿ ವನಿತಾಗೆ ಫೋನ್ ಮಾಡಿದೆ. ‘ಹೇ ಅತ್ತಿಗೆ ಬೇಕೆಂದು ಹೇಳುತ್ತಿದ್ದಿಯಲ್ಲಾ, ಕರೆದುಕೊಂಡು ಬರುತ್ತಾ ಇದ್ದೇನೆ ರೆಡಿಯಾಗಿರು ಸ್ವಾಗತಕ್ಕೆ’ ಎಂದು ಹೇಳಿದೆ. ಲಕ್ಷ್ಮಿಯೇ ಬರುತ್ತಿದ್ದಾಳೆ ಎಂದು ಕೇಳಿದಾಗ ಅವಳ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು. ‘ಇದು ನೀನು ನನಗೆ ನೀಡುವ ಅತ್ಯಂತ ಅಮೂಲ್ಯ ಗಿಫ್ಟ್, ಥ್ಯಾಂಕ್ಸ್ ಅಣ್ಣ’ ಎಂದು ಹೇಳಿ ಫೋನ್ ಇಟ್ಟಳು. 

ಅದೇ ಸಮಯಕ್ಕೆ ಅಣ್ಣಪ್ಪ ಬಂದ. ‘ನೋಡಪ್ಪಾ ಆಗ ನಮ್ಮ ಊರಿನವಳು ಎಂದು ಪರಿಚಯ ಮಾಡಿ ಕೊಟ್ಟೆಯಲ್ಲಾ ಈಗ ನಿನ್ನ ಅತ್ತಿಗೆಯಾಗುವವಳು ಎಂದು ಮತ್ತೆ ಪರಿಚಯ ಮಾಡಿ ಕೊಡ್ತಾ ಇದ್ದೇನೆ’ ಎಂದೆ. ಅಣ್ಣಪ್ಪ ಮುಖ ಮುಖ ನೋಡಿದ. ರಾತ್ರಿ ಬಸ್‍ಗೆ ಇನ್ನೊಂದು ಟಿಕೇಟ್ ಸಿಗುತ್ತಾ ನೋಡು ಎಂದೆ. 

‘ಲಕ್ಷ್ಮಿ, ಇವತ್ತೇ ಮಂಗಳೂರಿಗೆ ಹೊರಡುವ, ನಾಳೆಯೇ ಸರಳವಾಗಿ ಮದುವೆಯಾಗಿ ಬಿಡುವ, ನಂತ್ರ ಇಲ್ಲಿಗೆ ಬಂದು ಮನೆ ಖಾಲಿ ಮಾಡುವ ಬಗ್ಗೆ ಯೋಚಿಸುವ ಆಯ್ತಾ’ ಅಂದೆ. ಅವಳಿಗೆ ಇದು ಕನಸೋ ನನಸೋ ಎಂದು ಗೊತ್ತೇ ಆಗದೆ ಪೆದ್ದು ಪೆದ್ದಾಗಿ ತಲೆ ಆಡಿಸಿದಳು. ಆದರೆ ಅವಳ ಮಗಳು ಮಾತ್ರ ನನ್ನ ನೋಡಿ ಬಾಯಿ ತುಂಬಾ ನಕ್ಕಳು.

ಚಿತ್ರ ಕೃಪೆ: ಅಂತರ್ಜಾಲ ತಾಣ