ಕಥೆ:ಪೇಟೆ-೧

ಕಥೆ:ಪೇಟೆ-೧

ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ ಗುಡ್ಡದೂರಿಗೆ ಹೋಗಿರಬಹುದೇನೋ.ಆದರೆ ಇಂದು ಮಂಜ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಅವನು ಪ್ರಾರ್ಥಿಸಿದ ಸಕಲದೇವರ ಅನುಗ್ರಹವೆಂಬಂತೆ ಪೇಟೆಗೆ ಹೋಗುವ ಸುಯೋಗ ಒದಗಿತ್ತು.
    ಆ ದಿನ ಬೆಳಿಗ್ಗೆ ನಂಜೇಗೌಡರು ಮಂಜನ ತಂದೆ ಸಿದ್ದನ ಬಳಿ 'ಏ ಸಿದ್ದ ಇವತ್ತು ಸಾಯಂಕಾಲಕ್ಕೆ ಮೋಟರಿಗೆ ಡೀಸೆಲ್ ತರಕೋಗ್ಬೇಕು.ಬೈಕಲಿ ಕ್ಯಾನ್ ಇಡಕಂಡ್ ಬರಕಾಗಲ್ಲ,ಮಂಜ್ ನ ಕಳ್ಸು'ಎಂದು ಹೇಳಿದರು.ಈ ಸುದ್ದಿ ಕೇಳಿದಾಗಿನಿಂದ ಮಂಜ ನಿಂತಲ್ಲಿ ನಿಲ್ಲದವನಾಗಿದ್ದ.ಶಾಲೆಯ ಸಮವಸ್ತ್ರವನ್ನು ತೊಟ್ಟು,ತಲೆಗೊಂದು ಯಾರೋ ಕೊಟ್ಟ 'ಪಲ್ಸ್ ಪೋಲಿಯೋ ಭಾನುವಾರ'ಎಂದು ಬರೆದ ಕ್ಯಾಪನ್ನು ಹಾಕಿದ್ದ.ಅವನ ಬಳಿ ಇದ್ದ ಬಟ್ಟೆಗಳಲ್ಲಿ ಶಾಲೆಯ ಸಮವಸ್ತ್ರವೊಂದೇ ತಕ್ಕ ಮಟ್ಟಿಗೆ ಬಣ್ಣ ಮತ್ತು ಶುದ್ದತೆಯ ದೃಷ್ಟಿಯಿಂದ ಚೆನ್ನಾಗಿದದ್ದು.ಎಣ್ಣೆ ಹಾಕಿ ನೀಟಾಗಿ ಬಾಚಿದ ತಲೆ ಕಾಣಲಿ ಎಂದು ಆಗಾಗ ಕ್ಯಾಪನ್ನು ತೆಗೆದು ಕೈಯಲ್ಲಿ ಸವರಿಕೊಳ್ಳುತ್ತಿದ್ದ.ನಂಜೇಗೌಡರೊಡನೆ ಮಂಜ ಬೈಕಿನಲ್ಲಿ ಹೊರಟಾಗ ಆಗಿನ್ನೂ ಕತ್ತಲಾಗುತ್ತಿತ್ತು.ಮೋಡ ಮುಸುಕಿದ್ದರಿಂದ ಸ್ಪಲ್ಪ ಮುಂಚೆಯೇ ಕತ್ತಲಾದಂತೇ ತೋರುತಿತ್ತು.ಬೆಟ್ಟದೂರದಿಂದ ಹೊರಟ್ಟರೆ ಚಿಕ್ಕಮಗಳೂರು ಪೇಟೆ ತಲುಪುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಕಾಫಿತೋಟ ಹಲವಾರು ಮೈಲಿಗಳವರೆಗೂ ವ್ಯಾಪಿಸಿದೆ.ನಂಜೇಗೌಡರು ಮಳೆ ಬರುವ ಮೊದಲು ಪೇಟೆಯನ್ನು ಸೇರಬೇಕೆಂಬ ತರಾತುರಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾರೆ.ನಂಜೇಗೌಡರ ಬೈಕಿನ ಕರ್ಕಶ ಧ್ವನಿ ಮೌನವಾಗಿದ್ದ ಪರಿಸರವನ್ನು ಪ್ರವೇಶಿಸುತ್ತಿದಂತೆ ವಿವಿಧ ಬಗ್ಗೆಯ ಪಕ್ಷಿಗಳು ಹಾರಿಹೋದವು.ಅಕ್ಷಯ ಕಾನನದ ಯಾವುದೋ ಮೂಲೆಯಲ್ಲಿ ಕಳ್ಳಭಟ್ಟಿ ಬೇಯಿಸುತ್ತಿದ್ದ ಕೆಲವರು ಕೆಲಕಾಲ ಗಾಬರಿಗೊಂಡರು.ಬೈಕಿನ ಕರ್ಕಶಧ್ವನಿ ಅವರ ಕೇಳುವಿಕೆಯ ವ್ಯಾಪ್ತಿಯನ್ನೂ ದಾಟಿ ಮುಂದೆ ಹೋದಾಗ ನಿರಾಳರಾದರು.ನಂಜೇಗೌಡರಿಗೆ ಇದ್ದು ಯಾವುದರ ಪರಿವೇ ಇರಲಿಲ್ಲ.ಪೇಟೆಯಿಂದ ತರಬೇಕಾದ ಸಾಮಾನುಗಳ ಪಟ್ಟಿಯನ್ನು ಯೋಚಿಸುತ್ತಾ,ಅದೇ ಗುಂಗಿನಲ್ಲಿ ವೇಗವಾಗಿ ಬೈಕನ್ನು ಚಲಾಯಿಸುತ್ತಿದ್ದರು.ಆದರೆ ಅವರ ಬೈಕು ಮಾತ್ರ ತನ್ನ ಕರ್ಕಶ ಮಾರ್ದನಿಯಿಂದ ಸುತ್ತಲ್ಲಾ ಪರಿಸರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿ,ತಾನು ಹೋದಲೆಲ್ಲಾ ಪರಿಸರದ ಗಮನವನ್ನು ಸೆಳೆಯುತ್ತಿತ್ತು.ರಸ್ತೆಬದ್ದಿಯ ತೋಟದಲ್ಲಿ ಹಲಸಿನಹಣ್ಣು ಕದಿಯಲು ಬಂದಿದ್ದ ಹಳ್ಳಿಯ ಹುಡುಗರು ಬೈಕಿನ ಆಕ್ರಂದನವನ್ನು ಕೇಳಿ,ತೋಟದ ಮಾಲಿಕರು ಬಂದರೆಂದು ಹಣ್ಣನ್ನು ಅಲ್ಲೆ ಎಸೆದು ಪರಾರಿಯಾದರು.ಚೋರಕ್ಕಿಗೆ ಗುರಿಯಿಟ್ಟು ಅಣಿಯಾಗುತ್ತಿದ್ದ ಆ ತೋಟದ ಹುಡುಗ ಚಾಟರಿಬಿಲ್ಲು ಬೀಸುವ ಮೊದಲೇ ಬೈಕಿನ ಆರ್ಭಟಕ್ಕೆ ಚೋರಕ್ಕಿ ಹಾರಿ ಹೋಯಿತು.-ಹೀಗೆ ಸುತ್ತಲಿನ ಪ್ರಕೃತಿಯ ತಪ್ಪಸಿಗೆ ಭಂಗ ತರುತ್ತ ಬೈಕು ಮುಂದುವರೆಯಿತು.


ಅಷ್ಟರಲ್ಲಿ ಸಣ್ಣಗೆ ಮಳೆ ಪ್ರಾರಂಭವಾಯಿತು.ಸಣ್ಣಗೆ ಪ್ರಾರಂಭವಾದ ಮಳೆ ಬರಬರುತ್ತಾ ರಭಸವಾಗಿ ಸುರಿಯಲಾರಂಬಿಸಿತ್ತು.ನಂಜೇಗೌಡರು ಮಳೆಗೆ ಜರ್ಕೀನ್ ಹಾಕಿಕೊಂಡಿದರು.ಆದರೆ ಮಂಜ ನೆನೆದು ತೊಪ್ಪೆಯಾಗಿ ಹೋಗಿದ್ದ.ಮಂಜನ ಕ್ಯಾಪ್ ಹಾಕಿದ್ದ ತಲೆಯಿಂದ ಎಣ್ಣೆಮಿಶ್ರಿತ ಮಳೆಹನಿಗಳು ಮುತ್ತಿನ ಮಣಿಗಳಂತೆ ಮುಖದ ಮೇಲೆ ಜಾರುತ್ತಿದ್ದವು.ಆದರೆ ಮಂಜನಿಗೆ ಈ ಯಾವುದರ ಪರಿವೆಯೂ ಇರಲಿಲ್ಲ.ಅವನು ಪೇಟೆಯ ವೈಭವಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ.ಪೇಟೆಯ ಬೀದಿ ಬದಿಯ ಬೇಕರಿಗಳಲ್ಲಿ ಬಣ್ಣದ,ರುಚಿಯಾದ ತಿಂಡಿಗಳು.ಸದಾಕಾಲ ಬಿಡುವಿಲ್ಲದೇ ಚಲಿಸುವ ವಾಹನಗಳು,ಬಣ್ಣಬಣ್ಣದ ಉಡುಪು ತೊಟ್ಟಜನಗಳು-ಇದೆಲ್ಲದರ ಬಗ್ಗೆ ತಮ್ಮೂರಿನ ಜನಗಳ ಬಳಿ  ಕೇಳಿ ಅಚ್ಚರಿ ಪಟ್ಟಿದ.ಅದಕ್ಕಿಂತಲೂ ಮುಖ್ಯವಾಗಿ,ಬೆಟ್ಟದೂರಿನ ಯಾವುದೋ ಮೂಲೆಯಲ್ಲಿ ಇದ್ದ ಮಂಜನಿಗೆ ಕಾಡಿನ ಆ ಮೌನ,ಏಕಾಂತ,ಬೇಸರ ತರಿಸುತ್ತಿತ್ತು.ಅದಲ್ಲದೇ ತನ್ನ ಮೆಚ್ಚಿನ ಮೇಷ್ಟರು ಮನೆಯಿರುವುದು ಇದೇ ಪೇಟೆಯಲ್ಲೆ.ಬೆಟ್ಟದೂರಿನ ಮುರುಕಲುಶಾಲೆಯಿಂದ ವರ್ಗಾವಣೆಯಾದ ಮೇಲೆ ಮಂಜನಿಗೆ ಮೇಷ್ಟ್ರನ್ನು ನೋಡಲಾಗಿರಲಿಲ್ಲ.ಈಗ ಎಲ್ಲಾದರೂ ಕಂಡರೂ ಕಾಣಬಹುದೆಂಬ ಸಣ್ಣ ನಿರೀಕ್ಷೆಯು ಮಂಜನ ಮನದ ಮೂಲೆಯಲ್ಲಿತ್ತು.ಈ ಎಲ್ಲಾ ಸಂಭ್ರಮಗಳಿಂದಾಗಿ ಎಂಥಹ ಬಿರುಮಳೆಯು ಮಂಜನ ಗಮನಕ್ಕೆ ಬಂದಿರಲಿಲ್ಲಆದರೆ ಗೌಡರ ಯೋಚನೆಯೇ ಬೇರೆಯಿತ್ತು.ಗೌಡರು ಪೇಟೆಗೆ ಬಂದಿದ್ದು ಡಿಸೇಲ್ ಕೊಳ್ಳಲಾದರೂ,ಅದು ಮಾತ್ರ ಕಾರಣವಾಗಿರಲಿಲ್ಲ.ನಂಜೇಗೌಡರ ಅನೇಕ ದೌರ್ಬಲ್ಯಗಳಲ್ಲಿ ಕುಡಿತವೂ ಒಂದು.ಅವರ ಇತರ ಕುಡುಕ ಗೆಳೆಯರು ತಮ್ಮ-ತಮ್ಮ ಮನೆಗಳಲ್ಲಿ ನೆಪ ಹೇಳಿ ಪೇಟೆ ತಿರುಗಲು ಬರುತ್ತಿದರು.ವಾರದ ಒಂದು ದಿನ ಎಲ್ಲರೂ ಕೂಡಿ ಗುಂಡುಪಾರ್ಟಿ ಮಾಡುವುದು ಮಾಮೂಲಾಗಿತ್ತು.ಇ ದಿನದ ಪಾರ್ಟಿಗೆ ಪೇಟೆಗೆ ಬರಲು ಡೀಸೆಲ್ ತರುವುದು ನೆಪ ಮಾತ್ರವಾಗಿತ್ತು.ಆದರೆ ನಂಜೇಗೌಡರು ಮುಚ್ಚುಮರೆ ಮಾಡುವುದು ಅಗತ್ಯವಿತ್ತು.ಬೆಟ್ಟದೂರಿನಲ್ಲಿ ನಂಜೇಗೌಡರ ವಂಶಕ್ಕೆ ಗೌರವವಿತ್ತು.ಬೆಟ್ಟದೂರಿನ ಗ್ರಾಮದೇವತೆ ದೇವಿರಮ್ಮನ ದೇವಸ್ಥಾನದ ನಿರ್ವಣನೆಯ ಜವಾಬ್ದಾರಿ ಹಿಂದಿನಿಂದಲೂ ನಂಜೇಗೌಡರ ವಂಶದವರದಾಗಿತ್ತು.ಅದು ಇಲ್ಲದೇ ಈಸಲದ ಗ್ರಾಮ ಪಂಚಾಯತಿಯ ಅದ್ಯಕ್ಷ ಸ್ಥಾನಕ್ಕೆ ನಂಜೇಗೌಡರು ಸ್ಪರ್ದಿಸುವವರಿದ್ದರು.ಮನೆಗೆ ತಂದು ಕದ್ದುಮುಚ್ಚಿ ಕುಡಿಯಲು ಸಾದ್ಯವಿರಲಿಲ್ಲ.ಅವರ ವಂಶದಲ್ಲಿ ಯಾರು ಸಹ ಕುಡಿಯುತಿರಲಿಲ್ಲ.(ಎಲ್ಲೋ ಕೆಲವರು ಮಾತ್ರ ಕದ್ದು ಮುಚ್ಚಿ ಕುಡಿಯುತ್ತಿದರಷ್ಟೇ).ಈ ಕಾರಣದಿಂದಾಗಿ ಗೌಡರು ಗೌಪ್ಯತೆ ಕಾಪಾಡುವ ಅಗತ್ಯವಿತ್ತು.


ನಂಜೇಗೌಡರು ಮತ್ತು ಮಂಜ ಪೇಟೆಯನ್ನು ತಲುಪುವಷ್ಟರಲ್ಲಿ ಮಳೆ ಸಂಪೂರ್ಣ ಕಡಿಮೆಯಾಯಿತು.ಸಂಪೂರ್ಣವಾಗಿ ಕತ್ತಲಾವರಿಸಿತ್ತು.ಮಂಜ ರಾತ್ರಿಯ ಪೇಟೆಯನ್ನು ಕಂಡಿರಲಿಲ್ಲ.ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಬೀದಿಗಳನ್ನು ನೋಡಿ ದಂಗಾಗಿ ಹೋದ.ನಂಜೇಗೌಡರು  ಕಾಕನ ಕ್ಯಾಂಟಿನ್ ಬದಿಗೆ ಬೈಕನ್ನು ನಿಲ್ಲಿಸಿ,ಬೈಟು ಕಾಫಿಗೆ ಹೇಳಿ,ಸಿಗರೇಟು ಹಚ್ಚಿಕೊಂಡರು.ಮಂಜ ಅಲ್ಲೇ ನಿಂತು ಕಾಕನ ಕ್ಯಾಂಟಿನಿನ ಟೇಬಲ್ಲಿನ ಮೇಲೆ ಜೋಡಿಸಿದ ಗಾಜಿನ ಬಾಟಲಿಗಳಲ್ಲಿನ ಬನ್ನು,ಬ್ರೆಡ್ಡು,ಬತ್ತಾಸುಗಳನ್ನು ತದೇಕಚಿತ್ತದಿಂದ ನೋಡತೊಡಗಿದ್ದ.ಅಷ್ಟರಲ್ಲಿ ಕಾಫಿ ಮಂಜನ ಕೈಗೆ ಬಂತು.ನಂಜೇಗೌಡರು ಮಂಜನಿಗೆ ಬನ್ನನ್ನು ಕೊಟ್ಟು,ಅಲ್ಲಿ ಯಾರೋ ಪರಿಚಯದವರೊಡನೆ ಮಾತನಾಡುತ್ತಾ ನಿಂತರು.ಆ ವೇಳೆಗೆ ನಂಜೇಗೌಡರ ಗೆಳೆಯರ ನಾಲ್ಕು ಬೈಕುಗಳು ಬಂದು ನಿಂತವು.ಅವರೆಲ್ಲರನ್ನು ಮಂಜ,ನಂಜೇಗೌಡರ ಮನೆಗೆ ಬಂದಾಗ ನೋಡಿದ.ನಂಜೇಗೌಡರ ಗೆಳೆಯರ ಬಗ್ಗೆ ಬೆಟ್ಟದೂರಿನಲ್ಲಿ ಗುಸುಗುಸು ಮಾತುಗಳನ್ನು ಕೇಳಿದ ಮಂಜ,ಇವರೇಕೇ ಇಲ್ಲಿ ಬಂದರೂ ಎಂದುಕೊಂಡ.ಮಂಜನ ಬಳಿ ಬಂದ ನಂಜೇಗೌಡರು'ಲೋ ಮಂಜ ಇಲ್ಲೆ ಕೂತ್ಕಾ,ನಾನು ಡಿಸೀಲ್ ತಗಾಂಡು ಇತ್ಲಾಗ್ ಬರ್ರ್ತೀನಿ,ಎಲ್ಲಿಗೂ ಹೋಗಬೇಡ ಆಯ್ತಾ?.ತಗಾ ಇ ದುಡ್ಡು,ಏನಾರಬೇಕಾರೇ ತಗಾ ಆಯ್ತಾ?' ಎಂದು ಹೇಳಿ ಗೆಳೆಯರೊಡನೆ ಹೊರಟುಹೋದರು.ಮಂಜ ಕಾಕನ ಕ್ಯಾಂಟಿನಿನ ಹೊರಗೆ ಹಾಕಿದ ಬೇಂಚಿನ ಮೇಲೆ ಕುಳಿತು,ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನೋಡತೊಡಗಿದ.ಅದಾಗಲೇ ಸಂಪೂರ್ಣ ಕತ್ತಲಾವರಿಸಿ,ಸೊಳ್ಳೆಗಳು ಕಾಟಕೊಡಲಾರಂಬಿಸಿದವು.ತುಂಬಾ ಹೊತ್ತಿನಿಂದ ಕುಳಿತು ಬೇಸರವಾಗತೊಡಗಿತ್ತು.ಮಂಜನ ಗಮನಿಸಿದ ಕ್ಯಾಂಟಿನಿನ ಕಾಕ ತಮ್ಮ ಎಂದಿನ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ಒಳಗೆ ಬಂದು ಕೂರಲು ಹೇಳಿ ಅರ್ಧಕಾಫಿಯನ್ನು ಕೊಟ್ಟು,ತಾವು ಕಾಫಿ ಕುಡಿಯತೊಡಗಿದರು.ಮಂಜ ಕಾಫಿ ಕುಡಿದು ಮುಗಿಸಿ ಯೋಚಿಸತೊಡಗಿದ್ದ.'ಗೌಡ್ರು ಬರದು ಇನ್ನೂ ಲೇಟು,ಒಂದು ರೌಂಡು ಯಾಕ್ ಹೋಗಬಾರದು,ಎಲ್ಲಾದ್ರು ಮೇಷ್ಟ್ರು ಕಂಡ್ರು ಕಾಣಬಹುದು'ಎಂದು ಬೀದಿಗಿಳಿದು ನಡೆಯತೊಡಗಿದ.ಹಿಂದೆ ಬರಲು ದಾರಿ ತಿಳಿಯಲೆಂದು ಲೈಟು ಕಂಬವನ್ನು,ಬೋರುವೆಲ್ಲನ್ನು ಗುರುತಾಗಿಟ್ಟುಕೊಂಡು ಹೆಜ್ಜೆ ಹಾಕತೊಡಗಿದ್ದ.ತನ್ನ ಮೆಚ್ಚಿನ ಮೇಷ್ಟ್ರರು ಕಾಣಬಹುದೆಂದು ಸುತ್ತಮುತ್ತ ಕಣ್ಣಾಡಿಸುತ್ತಾ ಮುಂದೆ ಸಾಗತೊಡಗಿದ್ದ.ಮಂಜನಿಗೆ ಮೇಷ್ಟ್ರು ಹೇಳುತ್ತಿದ್ದ ಸಂಗತಿಗಳು ನೆನಪಾದವು.ಬೆಳೆಯುವ ಮಕ್ಕಳು, ಆದರ್ಶ ಪುರುಷರ ಜೀವನವನ್ನು ಅರಿಯಬೇಕೆಂದು,ಗಾಂಧೀಜೀಯ ಆತ್ಮಕಥೆಯ ಪುಸ್ತಕವನ್ನು ಓದಲು ಕೊಟ್ಟದು,ಪುಸ್ತಕವನ್ನು ತೊರೆಯ ಪಕ್ಕದ ಹುಲ್ಲಿನ ಮೇಲೆ ಕುಳಿತು,ಜೇನುಗುಡ್ಡದ ಮೇಲೆ,ಮಾವಿನ ಮರದ ಕೊಂಬೆಯ ಮೇಲೆ,ಕರೆಂಟಿಲ್ಲದ ತನ್ನ ಮನೆಯ ಚಿಮಣಿಯ ದೀಪದ ಬೆಳಕಿನಲ್ಲಿ,ಕುಳಿತು ಓದಿದ್ದು ನೆನಪಾಯಿತು.ಅದಕ್ಕಿಂತಲೂ ಒಂದು ಭಾನುವಾರ ನಾಲ್ಕೈದು ಹುಡುಗರೊಡನೆ ಮೇಷ್ಟ್ರರು ಜೇನುಗುಡ್ಡಕ್ಕೆ ಹೋದಾಗಿನ ಅನುಭವ ಮರೆಯುವಂತಾಹದಲ್ಲ.ಅಂದು ಎಷ್ಟೊಂದು ವಿಚಾರಗಳ ಬಗ್ಗೆ ಹೇಳಿದರು.'ಪ್ರಕೃತಿ ರಹಸ್ಯಗಳ ಗಣಿ,ಪ್ರಕೃತಿ ಮುನಿದರೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ,ಪ್ರಕೃತಿಯ ನಾಶ,ಪರೋಕ್ಷವಾಗಿ ಮಾನವನ ನಾಶ,ಅದರ ಪರಿಣಾಮ ಈಗ ಆಗದಿದ್ದರೂ ಮುಂದಿನ ಪೀಳಿಗೆಗೆ ಅದರ ಪ್ರಭಾವ ಆಗೇ ಆಗುತ್ತದೆ'ಎಂದದ್ದು.'ನಿಮ್ಮ ನಮ್ಮೆಲ್ಲರ ಹಿರಿಯರು ಶೋಷಣೆಗೆ ಗುರಿಯಾಗಲು ಕಾರಣ, ಅವರ ಅಜ್ಞಾನ ಮತ್ತು ಮುಗ್ಧತೆ.ಶೋಷಣೆಯಿಂದ ಹೊರಬರಬೇಕಾದರೇ ಶಿಕ್ಷಣವೊಂದೇ ದಾರಿ.ನಮ್ಮ ಹಿರಿಯರು ಶಿಕ್ಷಣದಿಂದ ವಂಚಿತರಾದರು.ಶಿಕ್ಷಣದ ಸಿಹಿಯನ್ನು ಕಹಿಯೆಂದು ತಿಳಿದರು.ಅವರ ಕಾಲ ಮುಗಿಯಿತು.ಆದರೆ ಶೋಷಣೆ ಇನ್ನೂ ನಿಂತಿಲ್ಲ.ಮುಂದಿನ ಪೀಳಿಗೆಯವರಾದ ನೀವುಗಳು ಶೋಷಣೆಯಿಂದ ಮುಕ್ತರಾಗಬೇಕಾದರೆ ಶಿಕ್ಷಣ ಪಡೆಯಲೇಬೇಕು'ಎಂದು ಭರವಸೆ ಮೂಡಿಸಿದು ನೆನಪಾಯಿತು.

Comments