ಕಥೆ:ಮಂಜನ ಸವಾರಿಯ ಕನಸು-ಭಾಗ ೧
ಮಂಜ ಶಾಲೆಯಿಂದ ಬಂದವನೇ ಬ್ಯಾಗನ್ನು ಮಂಚದ ಮೇಲೆ ಎಸೆದು,ಸಮವಸ್ತ್ರವನ್ನು ಬದಲಿಸದೇ,ನಂಜೇಗೌಡರ ತೋಟದ ಕಡೆಗೆ ಓಡಿದ.
ಹೀಗೆ ನಾಲ್ಕೈದು ದಿನದ ಹಿಂದೆ ಕಡಿದು ಹಾಕಿದ ನಾಟವನ್ನು ಸಾಗಿಸಲು ಮಾವುತ ಮಾದವ ನಾಯರ್ ಮತ್ತು ಬಳಗ ಕ್ಯಾಂಪ್ ಹಾಕಿತ್ತು.
ಜೊತೆಗೆ ಒಂದು ಆನೆಯು ಇತ್ತು.
ಮಂಜನಿಗೆ ಆನೆಯೆಂದರೆ ಮೊದಲಿನಿಂದಲ್ಲೂ ಆಕರ್ಷಣೆಯ ಜೀವವಾಗಿತ್ತು.
ಹಿಂದೆ ರಾಜಮಹಾರಾಜರು ಆನೆಯ ಮೇಲೆ ಕುಳಿತು ಗಾಂಭಿರ್ಯದಿಂದ ಸಾಗುವುದನ್ನು ಯಾವುದೋ ಸಿನಿಮಾವೊಂದರಲ್ಲಿ ಕಂಡಿದ್ದ.
ದಸರಾ ಸಂದರ್ಭದಲ್ಲಿ ಅಲಂಕೃತ ಆನೆಯ ಮೇಲೆ ಅಂಬಾರಿಯ ಮೆರವಣಿಗೆಯನ್ನು ನೋಡಿದ.
ಇ ಎಲ್ಲಾ ಕಾರಣದಿಂದಾಗಿ ಮಂಜನಿಗೆ ಆನೆಯ ಮೇಲೆ ಕೂರುವುದು ಮಹತ್ಕಾರ್ಯದಂತೇ ತೋರಿತು.
ಹಾಗೇಯೇ ಮಂಜನಿಗೆ ಆನೆಯ ಮೇಲೆ ಕುಳಿತ ಮಾವುತ ಮಾದವನಾಯರ್ ಕೂಡ ರಾಜಮಹಾರಾಜರಂತೇಯೇ ಕಂಡಿದ್ದ.
ಇದಿಷ್ಟೇ ಅಲ್ಲದೇ ಅಂಬಾರಿಯನ್ನು ಕಂಡಾಗ,ರಾಜಮಹರಾಜರು ಟೀವಿಯಿಂದ ಆನೆಯ ಮೇಲೆ ಕುಳಿತ ದೃಶ್ಯವನ್ನು ಕಂಡಾಗಲೆಲ್ಲಾ ಮಂಜನಿಗೆ ಸಹ ಆನೆಯ ಮೇಲೆ ಕುಳಿತುಕೊಳ್ಳಬೇಕೆಂಬ ಮನಸಾಗುತ್ತಿತು.
ಅವನು ಆ ಕನಸಿನಲ್ಲಿ ತೇಲುತ್ತಿರುವಾಗಲೇ ಮಾವುತ ಮಾದವನಾಯರ್ ನ ಪರಿವಾರ ಬೆಟ್ಟದೂರಿಗೆ ಆಗಮಿಸಿದ್ದು.
ನಂಜೇಗೌಡರ ತೋಟದ ಬೇಲಿಗೆ ಹೊಂದಿಕೊಂಡಂತೇ ಮಂಜನ ಮನೆಯಿತ್ತು.ಶಾಲೆ ಬಿಟ್ಟೊಡನೆ ತೋಟದ ಕಡೆಗೆ ಹೋಗುವುದು ಮಾಮೂಲಾಯಿತು.
ಆ ದಿನವೂ ಕೂಡ ಮಂಜ ತೋಟದತ್ತ ಹೊರಟ್ಟಾಗ ಪಡುವಣ ಸೂರ್ಯನ ಕಿರಣಗಳು ತೋಟದ ಎಲೆಗಳ ನಡುವೆ ಓರೆಯಾಗಿ ಬೀಳುತ್ತಿತ್ತು.
ತೋಟದ ಗೇಟನ್ನು ತೆರೆದು ಒಳಗೆ ಪ್ರವೇಶಿಸಿದ ಮಂಜ ಗಿಡಗಳ ನಡುವಿನ ದಾರಿಯಲ್ಲಿ ಓಡುವಂತೆ ನಡೆಯತೊಡಗಿದ.ಸ್ವಲ್ಪ ದೂರ ಸಾಗಿ,ಬಿಡಾರದ ಬಳಿ ಬರುತ್ತಿದಂತೇ ಆನೆಗೇ ಆದೇಶ ನೀಡುತ್ತಿರುವ,ಸರಪಳಿಯ ಜಣಜಣ ಶಬ್ದ ಅಸ್ಪಷ್ಟವಾಗಿ ಕೇಳಿಸತೊಡಗಿತು.
ಬಿಡಾರದ ಬಳಿ ಸಾಗಿ ಕಡಿದು ಒಂದೆಡೇ ಜೋಡಿಸಿದ ದಿಮ್ಮಿಯ ಮೇಲೆ ಕುಳಿತ ಮಂಜ, ಆನೆಯ ದಿಮ್ಮಿ ಎಳೆಯುವ ಸಾಹಸವನ್ನು ನೋಡತೊಡಗಿದ.
ಬಿಡಾರದ ಸುತ್ತಮುತ್ತ ಆನೆಯ ಲದ್ದಿಯ ರಾಶಿ.
ಅರ್ಧತಿಂದು ಬಿಟ್ಟ ಬೈನೆಸೊಪ್ಪು ಅಸ್ತವ್ಯಸ್ತವಾಗಿ ಬಿದ್ದಿದ್ದವು.
ನೀಲಿಬಣ್ಣದ ಟಾರ್ಪಲಿನ್ ನಿಂದ ಕಟ್ಟಿದ ಬಿಡಾರದಿಂದ ಪಕ್ಕದಲ್ಲಿ ಮೂರುಕಲ್ಲಿನ ತಾತ್ಕಾಲಿಕ ಒಲೆಯಲ್ಲಿ ಕುಸುಲಕ್ಕಿ ಗಂಜಿ ಕೊತಕೊತನೇ ಕುದಿಯುತ್ತಿತ್ತು.
ಆಗಿನ್ನೂ ಸುಟ್ಟ ಒಣಮೀನಿನ ವಾಸನೆ ಮಂದವಾಗಿ ತೇಲಿ ಪರಿಸರದಲ್ಲಿ ಲೀನವಾಯಿತು.ಆನೆಯ ಮೇಲೆ ಕುಳಿತ ಮಾವುತ ಮಾದವನ್ ಚೌಕಚೌಕದ ನೀಲಿ ಪಂಚೆ,ಕರೆಹಿಡಿದು ಕಪ್ಪಾಗಿದ ಬನಿಯನ್ ತೊಟ್ಟಿದ.ತಲೆಗೊಂದು ಟವೆಲ್ ಕಟ್ಟಿ,ಕೈಯಲ್ಲೊಂದು ಬೆತ್ತದ ಕೋಲೊಂದನ್ನು ಹಿಡಿದು 'ಅಂಗಟ್ ವಾ ಆನೆ,ಇಂಗಟ್ ವಾ 'ಅಬ್ಬರಿಸುತ್ತಿದ್ದ.
ಸಣಕಲ ಮಾವುತ,ದಷ್ಟಪುಷ್ಟ ಆನೆಯನ್ನು ಆದೇಶಿಸುವ ದೃಶ್ಯ ತಮಾಷೆಯಾಗಿ ಕಾಣುತಿತ್ತು.
ಮಂಜ ದಿಮ್ಮಿಯ ಮೇಲೆ ಕುಳಿತು ಆ ದಿನದ ಕೆಲಸ ಮುಗಿಯುವದನೇ ಕಾಯತೊಡಗಿದ.
ಯಾಕೆಂದರೇ ಸಂಜೆಯ ವೇಳೆ ಆನೆಯನ್ನು ಸ್ನಾನಮಾಡಿಸಲು ಕರೆದೊಯ್ಯುವ ಕಾರ್ಯಕ್ರಮವಿತ್ತು.
ಸಂಜೆ ತೋಟದ ದಿಮ್ಮಿ ಎಳೆಯುವ ಕೆಲಸ ದಿನದ ಮಟ್ಟಿಗೆ ಮುಗಿದ ಮೇಲೆ, ಆನೆಗೆ ಜಳಕ ಮಾಡಿಸುವ
ಸಲುವಾಗಿ ಮಾವುತ ಮಾದವನ್, ಆನೆಯ ಬದಿ ಕೋಲು ಹಿಡಿದುಕೊಂಡು ಊರ ಹೊರಗಿನ ಹಳ್ಳದ ಕಡೆ ಹೊರಟರು.ಅದುವರೆಗೆ ಆ ಸಮಯಕ್ಕಾಗಿಯೇ ಕಾಯುತ್ತಿದ್ದ ಮಂಜ ಆನೆಯನ್ನೇ ಹಿಂಬಾಲಿಸತೊಡಗಿದ.
(ಮುಂದಿನ ಭಾಗ ಸಧ್ಯದಲ್ಲಿ)