ಕಥೆ: ಪರಿಭ್ರಮಣ...(08)

ಕಥೆ: ಪರಿಭ್ರಮಣ...(08)

( ಪರಿಭ್ರಮಣ 7ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಆ ವಾಕಿಂಗ್ ಸ್ಟ್ರೀಟಿನ ನಡುವಿನ ಭಾಗಕ್ಕೆ ಹಾಗೆ ಅಡ್ಡಾಡುತ್ತ ಬಂದ ಹಾಗೆ , ನಿರೀಕ್ಷೆಯಂತೆ ಅಲ್ಲೊಂದು ದೊಡ್ಡ ವೇದಿಕೆ. ಹಿನ್ನಲೆಯಲ್ಲಿ ಅಗಾಧ ಹೂ ರಾಶಿ ಮತ್ತಿತರ ಅಲಂಕಾರದ ನಡುವೆ ವಿರಾಜಿಸುತ್ತಿರುವ ರಾಜ ರಾಣಿಯ ದೊಡ್ಡ ಚಿತ್ರ ಪಠಗಳು...ಅದರ ಮುಂದೆಯೆ ದೊಡ್ಡ ಸ್ಟೇಜು - ಅಲ್ಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದೆಂದು ಕಾಣುತ್ತದೆ, ಮುಂದಿನ ಪೆಂಡಾಲಿನಡಿಯಲ್ಲಿ ಜನರು ಕೂರಲು ಕುರ್ಚಿಯ ಸಾಲುಗಳು. ಇದೆಲ್ಲಾ ನೋಡುನೋಡುತ್ತೆ ಶ್ರೀನಾಥನಿಗೆ 'ಈ ಮೊದಲೆ ಬಂದಿದ್ದರೆ ಚೆನ್ನಿತ್ತಲ್ಲವೆ' ಎನಿಸಿತು. ಅದೆ ಸಮಯದಲ್ಲಿ ಆ ದಿನ ಸಾಂಸ್ಕೃತಿಕ ಕಾರ್ಯಕ್ರಮ ಕೊಡಲಿದ್ದ ತಂಡದವರೆಲ್ಲ ಹಿಂದಿನ 'ಗ್ರೀನ್ ರೂಂ ಟೆಂಟ್' ನಲ್ಲಿ ಬಗೆಬಗೆ ಕಿರೀಟಾ, ದಿರುಸು, ಬಣ್ಣ ಬಣ್ಣದ ವೈಭವೋಪೇತಾ ಹಾಗೂ ಸಾಂಪ್ರದಾಯಿಕ ಒಡವೆ, ಆಭರಣ ಹಾಗೂ ವಸ್ತ್ರ ಶಸ್ತ್ರಗಳನ್ನು ಧರಿಸಿ ಸಿದ್ದರಾಗುತ್ತಿದ್ದರು. ಅಂದು ಸಂಜೆಯಿಂದ ಸುಮಾರು ರಾತ್ರಿಯೆಲ್ಲ ಅವರು 'ಥಾಯ್ ರಾಮಾಯಣ'ದ ಭಾಗವೊಂದನ್ನು ಆಡಿ ತೋರಿಸಲಿದ್ದರಂತೆ - ಹೀಗಾಗಿ ಬಿಲ್ಲು ಬಾಣದ ರಾಮ, ಲಕ್ಷ್ಮಣ, ಹನುಮಂತರೆಲ್ಲ ಅಲ್ಲಿ ನಿಂತದ್ದು ಕಾಣುತ್ತಿತ್ತು. ಅವರೆಲ್ಲ ಸಿದ್ದರಾದ ಮೇಲೆ ಇಡೀ ರಸ್ತೆಯನ್ನು ಒಂದು ಸುತ್ತು ಮೆರವಣಿಗೆ ಹೋಗಿ ಬರುವ ಈ ತಂಡ , ನಂತರ ವೇದಿಕೆಯ ಮೇಲೆ ತಮ್ಮ ಧೀರ್ಘ ಪ್ರದರ್ಶನ ಆರಂಭಿಸುತ್ತಿದ್ದರು. ಶ್ರೀನಾಥನಿಗೆ ನಮ್ಮ ರಾಮಾಯಣಕ್ಕೂ ಅವರ ರಾಮಾಯಣಕ್ಕೂ ಏನು ವ್ಯತ್ಯಾಸವಿದೆಯೆಂಬ ಕುತೂಹಲವಿದ್ದರೂ ರಾತ್ರಿಯೆಲ್ಲ ಕಾದು ನಿದ್ದೆಗೆಟ್ಟು ನೋಡುವುದು ಆಗದ ಕಾರಣ ಮತ್ತೊಂದೊಮ್ಮೆ ಯಾವಾಗಲಾದರೂ ಬಂದು ನೋಡುವುದೆಂದುಕೊಂಡು, ಆ ಹೊತ್ತಿನಲ್ಲಿ ಸ್ಟೇಜಿನಲ್ಲಿ ನಡೆಯುತ್ತಿದ್ದ ಅಧ್ಭುತ ಥಾಯಿ ನೃತ್ಯವನ್ನು ನೋಡುತ್ತಾ ನಿಂತ. ಅವರ ವಸ್ತ್ರ, ಕಿರೀಟ, ಆಭರಣ, ನೃತ್ಯದ ಭಂಗಿ, ನಿಲುವು, ಚಲನೆಗಳು ಅಮೋಘವೆನಿಸಿ, ಅವರ ಲಲಿತ ಕಲೆಗು ನಮ್ಮದಕ್ಕೂ ಸಾಕಷ್ಟು ಸಾಮ್ಯವಿರಬಹುದೆಂದುಕೊಂಡ. ಹಳೆಯ ಕಾಲದ ರಾಜರೊ-ರಾಜಕುಮಾರರೊ ಇಲ್ಲಿನ / ಅಲ್ಲಿನ ರಾಜಕುಮಾರಿಯರನ್ನು ವರಿಸಿದಾಗಲೊ, ಬೌದ್ಧ ಧರ್ಮ ಹರಡಿದ ಪ್ರಭಾವದಿಂದಲೊ ಸಾಕಷ್ಟು ಸಂಸ್ಕೃತಿ ಕಲಾಚಾರಗಳು ಮಿಶ್ರಣವಾಗಿದ್ದರೆ ಅಚ್ಚರಿ ಪಡುವಂತದ್ದೇನೂ ಇರಲಿಲ್ಲ. ಆದರೆ, ಎಷ್ಟರಮಟ್ಟಿಗಿನ ಸಾಮ್ಯತೆ ಇರಬಹುದೆನ್ನುವುದು ಕುತೂಹಲಕರ ವಿಷಯವೆ.

ಆದರೆ ಆ ವೇದಿಕೆಯ ಹಿಂದೆ ಗುಡಾರದಂತಿದ್ದ 'ಗ್ರೀನ್ ರೂಮ್' ನಲ್ಲಿ ಇಣುಕಿದಾಗ ಆದ ವಿಶಿಷ್ಟ ಅನುಭೂತಿ ಮಾತ್ರ ಅವರ್ಣನೀಯ.ಬಹುಶಃ ಅಲ್ಲಿ ಕಂಡ ಚಿತ್ರವೆ ಅಲ್ಲಿನ ಸಂಸ್ಖೃತಿ ಪರಂಪರೆಯ ತುಣುಕಾಗಿ ಮನದಲ್ಲಿ ನಿರಂತರವಾಗಿ ನಿಂತು ಆ ನಾಡಿನ ಸ್ತಬ್ದಚಿತ್ರವನ್ನು ಮನ ಪರದೆಯ ಮೇಲೆ ಕಟ್ಟಿಕೊಡುತ್ತದೆಂದು ಕಾಣುತ್ತದೆ. ಆ ಅನುಭಾವವನ್ನು ಮಾತಿನಲ್ಲಿ ಕಟ್ಟಿಕೊಡುವುದು ತುಸು ಕಷ್ಟವೆ. ಸರಿ ಸುಮಾರು ಹೋಲಿಕೆಯಲ್ಲಿ ಹೇಳಬೇಕೆಂದರೆ, ನಮ್ಮ ಪೌರಾಣಿಕ ಚಿತ್ರಗಳಲ್ಲಿ ಕಾಂಡುಬರುವ ಬಣ್ಣಬಣ್ಣದ ದಿರುಸು, ಆಭರಣ, ಕಿರೀಟಾದಿ ಪೌರಾಣಿಕ ಉಡುಗೆ ತೊಡುಗೆ ತೊಟ್ಟ ಕಿನ್ನರ ಅಪ್ಸರೆಯರ, ದೇವ ದೇವಿಯರ ತಂಡಗಳೆಲ್ಲ ಒಟ್ಟಾಗಿ ಬೆಳ್ಳಿ ತೆರೆಯಿಂದಿಳಿದು ನಮ್ಮ ಕಣ್ಣ ಮುಂದೆ ಬಂದು ನಿಂತರೆ ಹೇಗಿರುತ್ತದೊ ಹಾಗೆ! ಅಷ್ಟರ ಮಟ್ಟಿಗೆ ವೈಭವೋಪೇತ ವಸ್ತ್ರಾಭರಣದ ಜತೆ ಕಿರೀಟ ಸಮೇತ ಹಿನ್ನಲೆಯಲ್ಲಿ ನಿಂತು ತಮ್ಮ ಪಾತ್ರದ ಸರದಿಗೆ ಕಾಯುತ್ತಿರುವ ದೃಶ್ಯವೆ, ಇಂದ್ರನ ಅಮರಾವತಿ ಧರೆಗಿಳಿದು ಬಂದ ಹಾಗೆ ಕಾಣಿಸಿಬಿಡುತ್ತದೆ. ಅದರಲ್ಲೂ ವಿಶಿಷ್ಟವೆಂದರೆ ಪ್ರತಿಯೊಬ್ಬ ಪಾತ್ರಧಾರಿಗೂ ತಲೆಯ ಮೇಲೊಂದು ಥಾಯ್ ಶೈಲಿಯ ಕಿರೀಟ ಇದ್ದೆ ಇರುತ್ತದೆ - ಸೇವಕನಿಂದ ಹಿಡಿದು, ರಾಜ ರಾಣಿಯವರೆಗೆ; ರಾಕ್ಷಸರಿಂದ ಹಿಡಿದು ದೇವಾನುದೇವತೆಗಳವರೆಗೆ. ಅವರ ಕಿಕ್ಕಿರಿದು ನೆರೆದು ನಿಂತ ನೋಟ ನೋಡುತ್ತಿದ್ದರೆ ಅದೊಂದು ಅಧುನಿಕ ನಗರವೆಂಬ ಅನಿಸಿಕೆಯೆ ಮಾಯವಾಗಿ, ಇತಿಹಾಸದ್ದೊ ಪೌರಾಣಿಕದ್ದೊ ನಿಲುಕಿನ ಚಿತ್ರವೊಂದು ಮನಃಪಟಲದಲ್ಲಿ ಮೂಡಿ ನೆಲೆಯಾಗಿ ನಿಂತುಬಿಡುತ್ತದೆ. ಪಾಟ್ಪೋಂಗಿನಂತಹ ಸಮಾನಾಂತರ ಕಪ್ಪು ಜಗವಿರುವುದು ಅದೆ ನೆಲದಲ್ಲಿ ಎಂಬುದೂ ಮರೆತುಹೋಗಿಬಿಡುತ್ತದೆ. ಸ್ವದೇಶಿ ವಿದೇಶಿಗಳ ಮುಂದೆ ಹೆಮ್ಮೆಯಿಂದ ತಮ್ಮ ಸಂಸ್ಕೃತಿಯ ತುಣುಕುಗಳನ್ನು ಪರಿಚಯ ಮಾಡಿಸುವ ಅವರ ಉತ್ಸಾಹಕ್ಕೆ ಮೆಚ್ಚಿಗೆಯೂ ಮೂಡುತ್ತದೆ. 

ತುಸು ಹೊತ್ತು ಅವರ ಪ್ರದರ್ಶನವನ್ನು ನೋಡಿದ ಶ್ರೀನಾಥನಿಗೆ ಕೊಂಚ ಪಿಚ್ಚೆನಿಸಿದ್ದು ಸುಳ್ಳಲ್ಲ. ರಾಮಾಯಣದ ಹುಟ್ಟು ನಾಡದ ನಮ್ಮಲ್ಲಿ ಅದನ್ನು ಕೇಳುವವರು ದಿಕ್ಕಿಲದೆ ಸೊರಗುತ್ತ, ಕೆಲವೆ ಕೆಲವು ಆಸಕ್ತ ಗುಂಪುಗಳ ಸೀಮಿತ ವರ್ಗಕ್ಕೆ ಪರಿಮಿತಿಗೊಂಡು ಬಳಲುತ್ತಿದ್ದರೆ, ಇಲ್ಲಿ ಅದನ್ನು ದೊಡ್ಡ ನಾಟಕ, ಪ್ರಹಸನದ ರೂಪಲ್ಲಿ ಬೀದಿಯ ಮಧ್ಯೆ ವಾರ ವಾರವೂ ಉತ್ಸಾಹದಿಂದ ಪ್ರದರ್ಶಿಸುತ್ತ ನೆಲದ ಸಂಸ್ಕೃತಿಯ ಕುರುಹಾಗಿ ಉಳಿಸಿ ಬೆಳೆಸಲು ಯತ್ನಿಸುತ್ತಿದ್ದಾರೆ... ನಮಗೇ ಇಲ್ಲದ ಕಾಳಜಿ ಇವರಿಗಿರುವುದನ್ನು ವಿಪರ್ಯಾಸವೆನ್ನಬೇಕೊ, ನಮ್ಮ ನಿರ್ಲಕ್ಷ್ಯವೆನ್ನಬೇಕೊ ಗೊತ್ತಾಗುವುದಿಲ್ಲ. ನಮ್ಮಲ್ಲಿ ಕೆಲವೆಡೆಗೆ ಮಾತ್ರ ಸೀಮಿತವಾದ ಬೌದ್ದ ಧರ್ಮ ಇಲ್ಲಿನ ಪ್ರಮುಖ ಧರ್ಮ. ಆದರೆ ಬೌದ್ದ ಧರ್ಮ ಹುಟ್ಟಿದ ನಾಡಲ್ಲಿ ಈ ಮಟ್ಟದ ಕುರುಹೂ ಕಾಣುವುದಿಲ್ಲ... ಥಾಯ್ಲ್ಯಾಂಡಿನಲ್ಲಿ ಹೆಸರುವಾಸಿಯಾದ 'ಮಸಾಜಿನ' ಇತಿಹಾಸ ಗಮನಿಸಿದರೆ, ಅವರೆ ಹೇಳಿಕೊಳ್ಳುವಂತೆ ಇದು ಭಾರತದಿಂದ ಅಲ್ಲಿಗೆ ಹೋದ ವಿಜ್ಞಾನವೆ..ಅಷ್ಟೇಕೆ - ಇಲ್ಲಿನ ರಾಜರ ಹೆಸರು ಸದಾ 'ರಾಮಾ' ಎಂದೆ ಇರುತ್ತದೆ - ರಾಮ-01, ರಾಮ-02, ರಾಮ-03 - ಹೀಗೆ ಸಾಗಿ ಈಗಿನ 'ರಾಮಾ-9'ರತನಕ. ಅಷ್ಟೇಕೆ ಇಲ್ಲಿನ ಕೆಲ ಊರುಗಳ ಹೆಸರನ್ನು ನೋಡಿದರೂ ಸಾಕು ಎಲ್ಲೊ ಕಳಚಿದ ಕೊಂಡಿಯೆಂಬ ಅನುಮಾನ ಮೂಡುತ್ತದೆ - ಅಯುತಯ (ಅಯೋಧ್ಯ), ಕಾಂಚನಾಬುರಿ ಇತ್ಯಾದಿ. ಇದೆಲ್ಲಾ ಸಾಂಸ್ಕೃತಿಕ ಹಿನ್ನಲೆಯಿಂದಾಗಿ, ಬೇರೆ ದೇಶಕ್ಕೆ ಬಂದ ಭಾವನೆಗಿಂತ ನಮ್ಮ ದೇಶದ ಯಾವುದೊ ಪಕ್ಕದ ರಾಜ್ಯವೊಂದಕ್ಕೆ ಬಂದ ಅನುಭವವಾಗುತ್ತದೆ. ಇಷ್ಟೆಲ್ಲಾ ಆದರೂ ಒಂದು ವಿಷಯ ಮಾತ್ರ ಶ್ರೀನಾಥನಿಗೆ ಅರ್ಥವಾಗುವುದಿಲ್ಲ - ಯಾಕೆ ಯಾರೊಬ್ಬ ಪಾತ್ರಧಾರಿಯೂ ದಿರಿಸಿಗೆ ತಕ್ಕ ಪಾದರಕ್ಷೆ ಧರಿಸುವುದಿಲ್ಲ ಎಂದು. ಇಡಿ ದಿರುಸಿನ ಧೀಮಂತಿಕೆ ಗಾಂಭೀರ್ಯಕ್ಕೆ ಹೊಂದುವಂತಹ ಪೌರಾಣಿಕ ಪಾದರಕ್ಷೆಗಳಿರದೆ ಆ ಪಾತ್ರಗಳ ಅರ್ಧ ಘನತೆಯೆ ಕುಗ್ಗಿಹೋದಂತಾಗಿಬಿಡುತ್ತದೆಂದು ಅವನ ಅನಿಸಿಕೆ. ಆದರೆ ಈಗೀಗ ಅವರ ದೈವ ಭಕ್ತಿ, ರಾಜ ಭಕ್ತಿಯನ್ನು ನೋಡಿದರೆ ಅದನ್ನು ಹಾಕದಿರಲು ಕಾರಣ ಆ ದೈವ ಪಾತ್ರಗಳಿಗೆ ಅಗೌರವ ತೋರಿಸದಿರಲೆ ಇರಬೇಕೆಂದು ಬಲವಾಗಿ ಅನಿಸಿದ್ದೂ ಇದೆ - ನಾವು ಹೇಗೆ ದೇವಸ್ಥಾನಗಳ ಒಳಗೆ ಚಪ್ಪಲಿ ಧರಿಸಿ ಹೋಗುವುದಿಲ್ಲವೊ, ಅದೇ ರೀತಿ.

ಆದರೆ ಅದೇ ವೇದಿಕೆಯಿಂದ ಹತ್ತು ನಿಮಿಷ ನಡೆದು ಮತ್ತೊಂದು ತುದಿಯತ್ತ ಇರುವ ವೇದಿಕೆ ಗೆ ಬಂದರೆ ಇಡೀ ಚಿತ್ರಣವೆ ತಳಕಂಬಳಕ! ಅಲ್ಲಿ ಮತ್ತೊಂದು ಸರ್ಕಾರಿ ಆಶ್ರಯದಲ್ಲೆ ನಡೆದಿರುವ ಮತ್ತೊಂದು ಕಾರ್ಯಕ್ರಮ ಕಣ್ಣಿಗೆ ಬೀಳುತ್ತದೆ. ಇಲ್ಲಿ ಮತ್ತೊಂದು ರೀತಿಯ ವೈಭೋಗ - ಆದರೆ ಆಧುನಿಕ ಸ್ತರದಲ್ಲಿ. ಅಚ್ಚ ಅಧುನಿಕ ವಿನ್ಯಾಸದ ಉಡುಗೆ ತೊಡುಗೆ ತೊಟ್ಟ ಅರೆಬರೆ ಮೈ ಮುಚ್ಚುವ, ಅರೆಬರೆ ಪಾರದರ್ಶಕ ಉಡುಗೆ ತೊಡುಗೆ ತೊಟ್ಟ ಹದಿ ಹರೆಯದ ಲಲನಾಮಣಿಗಳು ಮೈಕ್ ಹಿಡಿದುಕೊಂಡು ಥಾಯ್ ಭಾಷೆಯಲ್ಲಿ ಏನೊ ಸರಕನ್ನು 'ಪ್ರಮೋಟ್' ಮಾಡುತ್ತಲೊ, ಅಥವಾ ಯಾವುದಾದರೂ ಕಾರ್ಯಕ್ರಮ ನಡೆಸಿಕೊಡುವ 'ಹೋಸ್ಟ್' ಆಗಿಯೊ ಕಾರ್ಯ ನಿರ್ವಹಿಸುತ್ತಿರುತ್ತಾರೆ... ಅದರಲ್ಲೂ, ಬ್ಯಾಂಕಾಕ್ ಆಟೋಮೋಟೀವ್ ತಯಾರಿಕಾ ಉದ್ಯಮಕ್ಕೆ ಹೆಸರಾದ ಜಾಗ - ಅಲ್ಲಿರುವ ವಿದೇಶಿ, ಅದರಲ್ಲೂ ಜಪಾನಿ ಕಂಪೆನಿಗಳಿಂದಾಗಿ. ಆ ಕಂಪನಿಗಳ ಹೊಸ ಕಾರುಗಳ ಮಾಡೆಲ್ಲುಗಳನ್ನು ಬಿಡುಗಡೆ ಮಾಡಲೊ ಅಥವಾ 'ಪ್ರಮೋಟ್' ಮಾಡಲೊ ಸೇಲ್ಸ್ ಗರ್ಲುಗಳ ರೂಪದಲ್ಲಿ ಮಾಡೆಲ್ಲುಗಳನ್ನೆ ಬಿಟ್ಟಿರುತ್ತಾರೆ...ಜನ ಕಾರಿನ ಮಾಡೆಲ್ ನೋಡಿ ಕೊಳ್ಳುತ್ತಾರೊ ಅಥವಾ ಮಾರುವ ಸುಂದರ ಹೆಣ್ಣಿನ ಮಾಡೆಲ್ ನೋಡಿ ಹಳ್ಳಕೆ ಬೀಳುತ್ತಾರೊ ಹೇಳುವುದು ಕಷ್ಟ..ಭರ್ಜರಿ ಸೇಲ್ ಅಂತೂ ಆಗುವುದರಿಂದ ಎರಡೂ ಕಾರಣವೂ ಮಿಶ್ರವಿದ್ದರೂ ಇರಬಹುದು..ಅಂದು ಶ್ರೀನಾಥ ಆ ವೇದಿಕೆಯ ಹತ್ತಿರ ಬಂದಾಗ, ಯಾವುದೊ ಭಾಷಣ ನಡೆಯುತ್ತಿತ್ತು - ರಾಜಕೀಯ ವ್ಯಕ್ತಿಗಳು ಬಂದು ವೇದಿಕೆಯನ್ನಲಂಕರಿಸಿದಂತೆ ಕಾಣುತ್ತಿತ್ತು. ಅದೆ ಸಭೆಯಲ್ಲಿ ಆ ವರ್ಷದ ಮಿಸ್ ಥಾಯ್ಲ್ಯಾಂಡ್ ಸ್ಥಾನಕ್ಕೆ ಸ್ಪರ್ಧಿಸಿ ಮೊದಲ ಮೂರು ಸ್ಥಾನ ಪಡೆದ ಸುಂದರಿಯರನ್ನು ವೇದಿಕೆಯ ಮೇಲೆ ಕೂರಿಸಲಾಗಿತ್ತು. ಅದೇನು ಅವರ ಸನ್ಮಾನ ಸಮಾರಂಭವೆ ಅಥವಾ ಆ ಸಮಾರಂಭಕ್ಕೆ ಅವರೂ ಅತಿಥಿಗಳೊ ಶ್ರೀನಾಥನಿಗೆ ಗೊತ್ತಾಗಲಿಲ್ಲ. ವೇದಿಕೆಯ ಹಿಂದೆ ತಗುಲಿಸಿದ್ದ ದೊಡ್ಡ ತೆರೆಯಲ್ಲಿ 'ಚಿಂಗ್ಮಾಯ್' ಎಂದು ದೊಡ್ಡದಾಗಿ ಬರೆದಿದ್ದ ಇಂಗ್ಲೀಷ್ ಬರಹದಿಂದಾಗಿ, ಬಹುಶಃ ಆ ವಾರದ ಥೀಮು ಈ ಪ್ರಾಂತ್ಯದ್ದಿರಬಹುದು ಎಂದು ಊಹಿಸಿದ... ಅವನಿಗಚ್ಚರಿಯಾದದ್ದೆಂದರೆ ಅದು ಹೇಗೆ ಈ ಜನ ಪರಂಪರೆಯ ಋತುವನ್ನು ಆಧುನಿಕತೆಯ ಸತುವನ್ನು ಒಟ್ಟಾಗಿ ಒಂದೆ ನೊಗಕ್ಕೆ ಕಟ್ಟಿದ ಎರಡು ಎತ್ತುಗಳಂತೆ ಜತೆಗೆ ಸಾಗಿಸಿಕೊಂಡು ಹೋಗುತ್ತಿದ್ದಾರೆ ಎಂಬುದು.

ನಿಜ ಹೇಳಬೇಕೆಂದರೆ ಅದರಲ್ಲಿ ಅಚ್ಚರಿಯಾಗುವಂತಹದ್ದೇನೂ ವಿಶೇಷವಿರಲಿಲ್ಲ ಶ್ರೀನಾಥನಿಗೆ. ಬಂದ ಹೊಸತರಲ್ಲೆ ಸಿಕ್ಕ ಮೊದಲ ಶಾಕ್ - ಸಿಲೋಮ್, ಪಾಟ್ಪೋಂಗ್ ಜಗಗಳೆರಡರ ಒಟ್ಟಾಗಿಹ ಸಹ ಜೀವನದ ಮಾದರಿ, ವಿಪರ್ಯಾಸದ ಅತಿರೇಖಗಳು ಸಹಕಾರದ ಹೊಂದಾಣಿಕೆಯಲ್ಲೊ ಅಥವಾ ತಮ್ಮ ಪಾಡಿಗೆ ತಾವೆನ್ನುವ ಸಹನೆ, ಸಹಾನುಭೂತಿಯ ನಿರ್ಲಿಪ್ತ ಹೊದಿಕೆಯಲ್ಲಿಯೊ ಜತೆಯಲ್ಲೆ ಸಾಗಿರುವ ದೃಶ್ಯ ಮೊದಲಿಗೆ ದಿಗ್ಭ್ರಮೆ ಮೂಡಿಸಿದ್ದರೂ, ನಂತರ ಅದೆ ಇಲ್ಲಿನ ಸಹಜ ಮಂತ್ರವೆಂಬುದರ ಅರಿವು ಮೂಡಿಸಿತ್ತು. ಆ ಅರಿವಿನ ತರುವಾಯ ಗಮನಿಸಿದ ಮತ್ತಷ್ಟು ಸಣ್ಣಪುಟ್ಟ ಸಂಗತಿಗಳು ಆ ನಂಬಿಕೆಯನ್ನು ದೃಢಪಡಿಸಿದ್ದವು. ಅದರಲ್ಲೊಂದು ಮೊದಮೊದಲ ಅನುಭವ ಮೆಕ್ಡೋನಾಲ್ಡಿನಲ್ಲಾಗಿತ್ತು - ಅದನ್ನು ಮೊದಲ ಬಾರಿಗೆ ಕಂಡಾಗ ಅವನ ಅಚ್ಚರಿಗೆ ಮೇರೆಯೆ ಇರಲಿಲ್ಲ. ಸಾಧಾರಣವಾಗಿ ಎಲ್ಲಾ ದೇಶಗಳಿಗೂ ಕಾಲಿಕ್ಕಿರುವ ಈ ಮೆಕ್ಡೋನಾಲ್ಡ್ ರೆಸ್ಟೋರೆಂಟು ಬ್ಯಾಂಕಾಕಿನಲ್ಲೂ ಎಲ್ಲಾ ಕಡೆ ಚಾಚಿ ಹರಡಿಕೊಂಡಿತ್ತು ತನ್ನ ಶಾಖೆಗಳನ್ನು . ಆಫೀಸಿನ ಪಕ್ಕದಲ್ಲೆ ಇದ್ದ ಒಂದು ಶಾಖೆಯನ್ನು ಕಂಡಾಗ ಶ್ರೀನಾಥನೆ ಅಲ್ಲದೆ ಮಿಕ್ಕವರಿಗೂ ಹರ್ಷವಾಗಿತ್ತು - ಸದ್ಯ ವೆಸ್ಟ್ರನ್ ಫುಡ್ ಪಕ್ಕವೆ ಸಿಗುತ್ತದಲ್ಲ ಎಂದು. ಹಾಗೊಂದು ದಿನ ಎಲ್ಲಾ ಒಟ್ಟಾಗಿ ಅಲ್ಲೆ ಲಂಚಿಗೆ ಹೋಗಲಿಕ್ಕೆ ನಿರ್ಧರಿಸಿ ಸೇರಿ ಒಳ ಹೋಗಿ ಕುಳಿತಾಗ ಅಲ್ಲಿ ಸಿಗುವ ಮಾಮೂಲಿ ಬರ್ಗರ  ಐಟಂಗಳು ಕಣ್ಣಿಗೆ ಬಿದ್ದಿದ್ದರೂ, ಎಲ್ಲರ ಗಮನ ಸೆಳೆದದ್ದು ಒಂದು ವಿಶೇಷವಾದ ಐಟಂನಿಂದಾಗಿ. ಆ ಐಟಮ್ಮೆ ಅಲ್ಲಿ ಪ್ರಮುಖವೆಂಬಂತೆ ಎಲ್ಲೆಡೆ ಅದರದೆ ಜಾಹೀರಾತು ಮತ್ತು ಅದೆ ಅತ್ಯಂತ ಕಡಿಮೆ ದುಡ್ಡಿನ ಐಟಂ ಸಹ - 'ರೈಸ್ ವಿತ್ ಮೆಕ್ ಚಿಕನ್ !' ಅನ್ನದ ಜತೆಗೆ ಫ್ರೈಡ್ ಚಿಕನ್ನಿನ ತುಂಡಿಗೆ ಪಾನೀಯವೊಂದನ್ನು ಸೇರಿಸಿದ ಸೆಟ್ ಮೀಲ್.. ಬರ್ಗರ ಮಾರುವ ಅಮೇರಿಕನ್ ಕಂಪನಿ ಮೆಕ್ಡೊನಾಲ್ಡಿನಲ್ಲಿ ಅನ್ನ? - ಎಂದರೆ ಆ ಕಂಪನಿಯನ್ನು ಅಮೇರಿಕಾ ದೃಷ್ಟಿಕೋನದಿಂದ ನೋಡಿದ್ದವರಿಗೆ ನಂಬುವುದು ಕಷ್ಟ.. ಆದರೆ, ಅದೆ ಇಲ್ಲಿನ ಒಂದು ವಿಶೇಷ ; ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಬದುಕುಳಿಯಬೇಕೆಂದರೆ ಇಲ್ಲಿನ ನಾಡಿ ಮಿಡಿತಕ್ಕೆ ಸ್ಪಂದಿಸಲೆಬೇಕು; ಇಲ್ಲದಿದ್ದರೆ ಸ್ಪರ್ಧಾತ್ಮಕ ವಾತಾವರಣದಲ್ಲಿ ಉಳಿಗಾಲವಿರುವುದಿಲ್ಲ. ಈ ಕಂಪನಿಗಳು ಬುದ್ದಿವಂತರೆ - ಮೊದಲು ಜನರನ್ನು ಬದಲಿಸಲು ಸಾಧ್ಯವೆ ಎಂದು ನೋಡುತ್ತವೆ ...ಆಗದಿದ್ದರೆ ತಾವೆ ಬದಲಾಗುತ್ತವೆ. ಬಂಡವಾಳಶಾಹಿ ಜಗದಲ್ಲಿ ಹಣ ಗಳಿಸುವುದಷ್ಟೆ ಮುಖ್ಯ, ಹೇಗಾದರೂ ಸರಿ.

ಆ ಹೋಲಿಕೆಯನ್ನು ನೆನೆಸಿಕೊಂಡಾಗ ಬಹುಶಃ ಹೊಸತು ಹಳತಿನ ಸಮ್ಮಿಲನದಲ್ಲಿ ರಾಜಿಯ ನಡುವಣ ಸೂತ್ರವೊಂದನ್ನು ಶೋಧಿಸಿ ಅದಕ್ಕೆ ತಗುಲಿಕೊಂಡು ಮುನ್ನಡೆವುದೆ ಈ ಜನರ ವಿಶೇಷ ಗುಣವೇನೊ ಅನಿಸಿತ್ತು ಶ್ರೀನಾಥನಿಗೆ. ಅದರಿಂದಲೊ ಏನೊ ಸಹಜವಾಗಿಯೆ ವಿಪರ್ಯಾಸವೆನಿಸಿದ್ದು ಕಂಡರೂ ಇಲ್ಲಿನ ಆಯಕಟ್ಟಿನಲ್ಲಿ ಅದು ಸಹಜತೆಯೆ ಏನೊ ಅನಿಸುವಂತೆ ಭಾವನೆಯುಂಟಾಗುತ್ತಿತ್ತು. ಬಹುಶಃ ಅದನ್ನು ಸಾಧ್ಯವಾಗಿಸಿದ್ದು ಇಲ್ಲಿನ ಸದಾ ನಗುಮುಖದ , ಕೋಪವನ್ನೆ ಮಾಡಿಕೊಳ್ಳದ ಜನರಿರಬೇಕು.. ಬೌದ್ಧ ಧರ್ಮದ ಪ್ರಭಾವದಿಂದಲೊ ಏನೊ - ಈ ಜನ ಕೋಪ ಮಾಡಿಕೊಂಡಿದ್ದು ಕಾಣುವುದೆ ಇಲ್ಲ ; ಸದಾ ಹೂ ನಗುವೊಂದೂ ಮುಖದ ಮೇಲೆ ರಾರಾಜಿಸುತ್ತಲೆ ಇರುತ್ತದೆ. ಪ್ರಾಯಶಃ ಅದೆ ಬೌದ್ಧ ಧರ್ಮದ ಕಾರಣದಿಂದಲೊ ಏನೊ - ರಾತ್ರಿ ಹನ್ನೆರಡಾದರೂ ಸುರಕ್ಷಿತವಾಗಿ , ಏಕಾಂಗಿಯಾಗಿ ಹೆಣ್ಣುಗಳು ಓಡಾಡುವ ವಾತಾವರಣ ನಿರ್ಮಿತವಾಗಿದೆ; ಅನಿರ್ಬಂಧಿತವಾಗಿ ಮುಕ್ತವಾಗಿಟ್ಟ ಕಾಮ ವ್ಯಾಪಾರವೂ ಇದಕ್ಕೆ ಪೂರಕ ಕಾರಣವಿರಬಹುದು. ಅದೇನೆ ಇದ್ದರೂ, ಭಾಷೆಯ ತೊಡಕಿನ ನಡುವೆಯೂ ಈ ಜನರಲ್ಲಿ ಪ್ರಿಯವಾಗುವ ಗುಣವೆಂದರೆ ಈ ಮುಗುಳ್ನಗೆಯ ಸ್ವಭಾವ. ವ್ಯವಹಾರದಲ್ಲಿ ಚೌಕಾಸಿ ಮಾಡುವಾಗಲೂ ಯಾವುದೆ ಬೆಲೆಗೆ ಕೇಳಿದರೂ ನಗುತ್ತಲೆ ಉತ್ತರಿಸುವ ಈ ಜನರ ಸಹಜ ಗುಣ ಶ್ರೀನಾಥನಿಗೆ ಮೆಚ್ಚಿಕೆಯಾದ ಅಂಶಗಳಲ್ಲೊಂದು. ಅದರಿಂದಾಗಿಯೆ ಪ್ರಾಜೆಕ್ಟಿನ ಕೆಲಸ ಅದೆಷ್ಟೊ ಸುಲಭವಾಗುತ್ತೆಂಬುದು ಸುಳ್ಳಲ್ಲ.

ಭಾಷೆಯ ವಿಷಯಕ್ಕೆ ಬಂದರೆ, ಶುರುವಿನಲ್ಲಿ ನಡೆದ ಘಟನೆಯೊಂದನ್ನು ನೆನೆದ ಶ್ರೀನಾಥನಿಗೆ ಈಗಲೂ ವಿಸ್ಮಯ ಮತ್ತು ನಗು. ಅದು ಬಂದ ಮೊದಮೊದಲ ದಿನಗಳು - ಒಂದು ದಿನ ಸಂಜೆ ನಾಲ್ಕಾರು ಜನ ಒಟ್ಟಾಗಿ ಸೇರಿ ಹತ್ತಿರದ ಹೆಸರಾದ ಥಾಯ್ ರೆಸ್ಟೊರೆಂಟ್ ಒಂದಕ್ಕೆ ಹೋಗಿದ್ದರು. ಯಾರಿಗೂ ಥಾಯ್ ಭಾಷೆ ಬರದಿದ್ದರೂ, ಅಲ್ಲಿ ಸಿಗುವ ತಿನಿಸುಗಳ ಚಿತ್ರ ಮತ್ತು ಬೆಲೆಯಿರುವ ಕಾರ್ಡುಗಳು ಇರುತ್ತಿದ್ದ ಕಾರಣ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಸಾಧಾರಣ ಯಾರದರೊಬ್ಬ ಥಾಯ್ ಸಹೋದ್ಯೋಗಿಯ ಜತೆ ಹೋಗುತ್ತಿದ್ದವರು ಅಂದು ತಮ್ಮ ತಮ್ಮಲ್ಲೆ 'ನಿಭಾಯಿಸಿ' ಅನುಭವ ಪಡೆಯಲು ನಿರ್ಧರಿಸಿದ್ದ ಕಾರಣ ಎಲ್ಲರಲ್ಲು ಒಂದು ವಿಧದ 'ಥ್ರಿಲ್' ಕೂಡ ಸೇರಿಕೊಂಡಿತ್ತು. ಸರಿಯೆಂದು ಒಳಹೋದವರೆ ಅಲ್ಲಿನ ಪದ್ದತಿಗನುಗುಣವಾಗಿ ಸಾಲಿನಲ್ಲಿ ನಿಂತು ತಮಗೆ ಬೇಕು ಬೇಕಾದ ಸೆಟ್ ಮೀಲ್ಸುಗಳನ್ನು ಒಟ್ಟಾಗಿ ಆರ್ಡರು ಮಾಡಿ ರಸೀತಿ ಪಡೆದು ಮೂಲೆಯಲಿದ್ದ ಸರಿಯಾದ ಟೇಬಲ್ಲೊಂದನ್ನು ಹುಡುಕಿ ಕುಳಿತರು, ಆರ್ಡರಿನ ಬರುವಿಕೆಗೆ ಕಾಯುತ್ತ. ಅದು ಸಂಜೆಯ ಹೊತ್ತಾದ ಕಾರಣ ಜನರ ರಶ್ ಸ್ವಲ್ಪ ಜಾಸ್ತಿಯೆ ಇತ್ತು. ಹೀಗಾಗಿ ಸಪ್ಲೈ ಕೂಡ ಸ್ವಲ್ಪ ನಿಧಾನವಾಗಿತ್ತು. ಸುಮಾರು ಹತ್ತದಿನೈದು ನಿಮಿಷ ಕಾದಮೇಲೆ ಒಬ್ಬ ಪರಿಚಾರಕ ಹೆಣ್ಣು ಆರ್ಡರು ಮಾಡಿದ್ದ ಐಟಂಗಳಲ್ಲಿ ಇಬ್ಬರ ಐಟಂ ತಂದಿಟ್ಟು ಹೋದಳು. ಮಿಕ್ಕವರದಿನ್ನು ಬರದಿದ್ದ ಕಾರಣ ಶ್ರೀನಾಥನೆ, ಬಂದ ಐಟಂ ತಿನ್ನಲಾರಂಭಿಸುವಂತೆ ಅವರಿಗೆ ಸಲಹೆಯಿತ್ತ. ಹಸಿವೆಯಾಗಿದ್ದ ಕಾರಣವೊ, ಅಲ್ಲಿದ್ದ ಜನ ಸಮೂಹದ ಕಾರಣಕ್ಕೊ ಅವರಿಬ್ಬರೂ ಆರಂಭಿಸಿಯೆಬಿಟ್ಟರು, ಸದ್ಯದಲ್ಲೆ ಮಿಕ್ಕವರದು ಬಂದುಬಿಡಬಹುದೆಂಬ ನಂಬಿಕೆಯಲ್ಲಿ.  ಆದರೆ ಇಬ್ಬರ ಆರ್ಡರ ಇಟ್ಟು ಹೋದವಳು ಆಕೆ ಮತ್ತೆ ಪತ್ತೆಯೆ ಇಲ್ಲ!

ನೋಡು ನೋಡುತ್ತಲೆ ಅವರಿಬ್ಬರ ತಟ್ಟೆಯೂ ಖಾಲಿಯಾಗಿಹೋಯ್ತು. ತುಸು ಹೊತ್ತಿನಲ್ಲೆ ಅಲ್ಲಿಗೆ ಬಂದ ಟೇಬಲ್ ವರೆಸುವ ಮತ್ತೊಬ್ಬ ಪರಿಚಾರಕ ಅಲ್ಲಿ ತಂದಿಟ್ಟಿದ್ದ ಕುರುಹೂ ಉಳಿಯದಂತೆ ಒರೆಸಿ ಟೇಬಲ್ ಕ್ಲೀನ್ ಮಾಡಿ ಹೋಗಿ ಬಿಟ್ಟ...ಅದಾದ ಹತ್ತು ನಿಮಿಷಗಳಲ್ಲಿ ಮತ್ತೆ ಪರಿಚಾರಿಕೆಯ ಸವಾರಿ ಬಂತು - ಈ ಬಾರಿ ಎಲ್ಲರ ಆರ್ಡರು ಒಂದೆ ಸಾರಿ ಹೊತ್ತು ತಂದಂತೆ ಕಾಣುತ್ತಿತ್ತು. ಎಲ್ಲಾ ನೀಟಾಗಿ ಜೋಡಿಸಿದ ಮೇಲೆ ನೋಡಿದರೆ - ಮೊದಲು ತಂದಿಟ್ಟ ಎರಡು ಐಟಂಗಳು ಮತ್ತೆ ಸೇರಿಕೊಂಡುಬಿಟ್ಟಿವೆ! ಇಡಿ ತಂಡದ ಪ್ರಾಮಾಣಿಕ ಹಾಗೂ ನೈತಿಕ ಪ್ರಜ್ಞೆ ಜಾಗೃತವಾಗಿಬಿಟ್ಟಿತು..ಸಾಲದ್ದಕ್ಕೆ ಹೀರೊಗಳಂತೆ ತೋರಿಸಿಕೊಂಡು ಮೆರೆಯುವ ಹಂಬಲ. ಚೂರುಪಾರು ಕಲಿತಿದ್ದ ಭಾಷೆಯ 'ಕಲಾಪ್ರದರ್ಶನ' ಕ್ಕೊಂದು ಪ್ರಶಸ್ತ ಅವಕಾಶ...ಸರಿ, ಅಲ್ಲೆ ಶುರುವಾಯ್ತು ಕಿರು ಪ್ರಹಸನ - ಈ ಎರಡು ಐಟಂ ಆಗಲೆ ಕೊಟ್ಟಾಗಿದೆ, ಮತ್ತೆ ತಪ್ಪಾಗಿ ಬಂದುಬಿಟ್ಟಿದೆ, ವಾಪಸ್ಸು ಕೊಂಡೊಯ್ಯಿ ಎಂದು ಹರಕು ಮುರಕು ಥಾಯ್ ಮತ್ತು ಸಾಧ್ಯವಿರುವೆಲ್ಲಾ ಆಂಗಿಕ ಭಾಷೆಯ ಚಹರೆಯನ್ನೆಲ್ಲ ಬಳಸಿ ಹೇಳಲು ಪ್ರಯತ್ನಿಸಿದರು. ಮೊದಲಿಗೆ ಅವಳಿಗೊ ಚೂರೂ ಇಂಗ್ಲೀಷು ಬರುತ್ತಿರಲಿಲ್ಲ ..ಇವರ ಹಾವಭಾವದ ಜತೆ, ಇವರು ವಿದೇಶೀಯರೆಂಬ ಭೀತಿಯೂ ಸೇರಿ ಅವಳಿಗೆ ಇವರ ಭಾಷೆ ಅರ್ಥವಾಗುವ ಬದಲು ಗಾಬರಿ ಹುಟ್ಟಿಸಿಬಿಟ್ಟಿತು... ಅದೇನೆಂದುಕೊಂಡು ಅರ್ಥ ಮಾಡಿಕೊಂಡಳೊ ಏನು ಕಥೆಯೊ, ಆತಂಕವೆ ಮುಖವಾದ ಭಾವದಲ್ಲಿ 'ಸಾರೀ..ಸಾರಿ..' ಎನ್ನುತ್ತ ಆ ತಟ್ಟೆಗಳನ್ನು ತೆಗೆದುಕೊಳ್ಳದೆಯೆ ಓಡಿ ಹೋಗಿಬಿಟ್ಟಳು. ಇವರಿಗೊ ಏನಾಯ್ತೆಂಬ ಅರಿವೆ ಇಲ್ಲ ..ವಾಪಸ್ಸು ತೆಗೆದುಕೊ ಎಂದರೂ ಕಷ್ಟವೆ? ಎಂಬ ವಿಚಿತ್ರ ಅನಿಸಿಕೆ. ಸರಿ ಏನಾಗುವುದೊ ನೋಡೋಣವೆಂದುಕೊಳ್ಳುತ್ತಲೆ ಮಿಕ್ಕವರು ತಮ್ಮ ಪಾಲಿನ ತಟ್ಟೆ ಮುಗಿಸತೊಡಗಿದರು, ಅವೆರಡನ್ನು ಹಾಗೆ ಬಿಟ್ಟುಬಿಟ್ಟು.

ಈ ತಿನ್ನಾಟದ ನಡುವಲ್ಲೆ ಮತ್ತೆ ತಲೆಯೆತ್ತಿ ನೋಡಿದರೆ ಆ ಹುಡುಗಿ ಮತ್ತೆ ಹಾಜರು! ಈ ಬಾರಿ ಮತ್ತೊಂದು ತುಸು ಅನುಭವಸ್ತ ಹೆಣ್ಣಿನ ಜತೆ. ಇವರಿಗೊ ಯಾರೊ ಇಂಗ್ಲೀಷ್ ಬಲ್ಲವರನ್ನು ಕರೆತಂದಿರಬೇಕೆಂದು ನಿರಾಳವಾಗಿ, ಆ ಹೊಸಬಳ ಮುಂದೆಯೂ ನಮ್ಮ ಕಿರುಪ್ರಹಸನವನ್ನು ಪುನರಾವರ್ತಿಸಿದರು. ಯಥಾಪ್ರಕಾರ ಇವರ ಅಂಗಚೇಷ್ಟೆಗಳೆಲ್ಕ ಮುಗಿದ ಮೇಲೆ ಅವಳೂ ಕೂಡ 'ಸಾರಿ' ಎಂದವಳೆ ಮತ್ತೆ ವಾಪಸ್ಸು ಹೋದಳು...! ಇವರಿಗೆಲ್ಲ ಅಚ್ಚರಿಯಾದರೂ, ಬಹುಶಃ ಒಳಗೆ ಕರೆದೊಯ್ದು ವಿವರಿಸಿ ಮತ್ತೆ ಕಳಿಸುವಳೆಂದು ತಮ್ಮ ತಿನ್ನುವಿಕೆಯನ್ನು ಮುಂದುವರೆಸಿದ್ದಾಗಲೆ ಐದು ನಿಮಿಷದ ನಂತರ ಆ ಹೊಸ ಅನುಭವಸ್ತೆಯೆ ಹಾಜರು - ಈ ಬಾರೀ ತುಸು ಸೂಪರವೈಸರಿನ ಹಾಗೆ ದಿರುಸು ತೊಟ್ಟಿದ್ದ ಮತ್ತೊಂದು ಹೆಣ್ಣಿನ ಜತೆ ! ಸರಿ ಮತ್ತೊಮ್ಮೆ ಶುರುವಾಯ್ತು ವಾಲ್ಮೀಕಿಯ ರಾಮಾಯಣ ಪ್ರಹಸನ...ಶ್ರೀನಾಥನೆ, ಈ ಬಾರಿ ಸರಿಯಾಗಿ ತಿಳಿಯಲೆಂದು ಆ ಪ್ಲೇಟುಗಳನ್ನೆತ್ತಿ ಅವರ ಮುಂದೆ ಹಿಡಿದು ವಿವರಿಸಲು ಯತ್ನಿಸಿದ - ಈಕೆ ಸುಪರ್ವೈಜರ್ ಆದ ಕಾರಣ ಇಂಗ್ಲೀಷು ತುಸುವಾದರೂ ಅರಿವಾಗಬಹುದೆಂಬ ಆಸೆಯಲ್ಲಿ. ಯಥಾರೀತಿ ಎಲ್ಲಾ ಮುಗಿದ ಮೇಲೆ ಆಕೆಯೂ 'ವೆರಿ ಸಾರೀ ಸಾರ್..' ಎಂದವಳೆ ಒಳಗೆ ಓಡಿದಾಗ ಇವರು ಮುಖ ಮುಖ ನೋಡಿಕೊಂಡರು. ಅರ್ಥವಾಯಿತೊ ಇಲ್ಲವೊ ಎಂಬ ಸುಳಿವೂ ಕೊಡದೆ ಇಬ್ಬರೂ ಜಾಗ ಖಾಲಿ ಮಾಡಿದ್ದರು. ಉಳಿದವರ ಊಟವೂ ಅಷ್ಟೊತ್ತಿಗೆ ಮುಗಿದಿದ್ದ ಕಾರಣ ಆ ಎರಡು ಪ್ಲೇಟು ಮಾತ್ರ ಹಾಗೆಯೆ ಟೇಬಲ್ಲಿನ ಮೇಲೆ ಕೂತಿತ್ತು..

ಇವರಿಗೊ ಏನು ಮಾಡಲೂ ತೋಚಲಿಲ್ಲ..ಊಟ ಮುಗಿದಿದ್ದರೂ ಹೋಗುವಂತಿಲ್ಲ. ಇಲ್ಲೊ ಯಾರಿಗೂ ಅವರು ಹೇಳುವುದು ತಿಳಿಯುತ್ತಿಲ್ಲ. ಸುತ್ತ ಮುತ್ತ ಯಾರಾದರೂ ಇಂಗ್ಲೀಷು ಬಲ್ಲ ಗಿರಾಕಿಗಳ ಮೂಲಕ ಮಾತಾಡಿಸೋಣವೆಂದರೆ ಅಲ್ಲಿರುವ ಯಾರಿಗೂ ಇಂಗ್ಲೀಷು ಬರುವಂತೆ ಕಾಣುತ್ತಿಲ್ಲ..ಅವರೂ ಇವರ ಮುಖವನ್ನೆ ಮಾತಾಡದೆ ಸುಮ್ಮನೆ ನೋಡುತ್ತಿದ್ದಾರೆ...ಸರಿ ಆದದ್ದಾಗಲಿ ಅದನ್ನು ಹಾಗೆ ಟೇಬಲ್ಲಿನಲ್ಲೆ ಬಿಟ್ಟು ಹೊರಡುವ ಎಂದು ಎದ್ದು ನಿಂತರು. ಆ ಹೊತ್ತಿಗೆ ಸರಿಯಾಗಿ ಮತ್ತೊಬ್ಬ ವ್ಯಕ್ತಿ ಓಡುತ್ತಾ ಬರುವುದು ಕಾಣಿಸಿತು..ಆತ ಕಳೆದ ಬಾರಿ ಬಂದಿದ್ದ ಸುಪರವೈಜರಳ ಜತೆಗೆ ಬಂದು ತಾನೆ ಮ್ಯಾನೇಜರ ಎಂದು ಪರಿಚಯಿಸಿಕೊಂಡಾಗ ' ಸದ್ಯಾ..ಇವನಾದರೂ ಬಂದನಲ್ಲಾ..ಇವನಿಗೆ ಖಂಡಿತ ಇಂಗ್ಲೀಷು ಭಾಷೆ ಬರುತ್ತದೆ' ಎಂದುಕೊಳ್ಳುತ್ತಿರುವಂತೆ ಅವನು ರಸೀತಿಯ ಪ್ರತಿಯೊಂದನ್ನು ಹಿಡಿದು ಅದೇನನ್ನೊ ವಿವರಿಸತೊಡಗಿದ. ಇವರೂ ತಮಗೆ ಸಾಧ್ಯವಾದ ಮಟ್ಟಿಗೆ ನಮ್ಮ ನೈತಿಕ ಪ್ರಜ್ಞೆ ಪ್ರಾಮಾಣಿಕತೆಯ ಪ್ರದರ್ಶನಕ್ಕೆ ಮತ್ತೊಮ್ಮೆ ಯತ್ನಿಸತೊಡಗಿದರು...ಇದು ಮತ್ತೈದು ನಿಮಿಷ ನಡೆದ ಮೇಲೆ ಆತ ಆಕೆಗೇನೊ ಹೇಳಿದ..ಆಕೆ ಸರಿಯೆಂದು ಹೇಳಿ ತಲೆಯಾಡಿಸುತ್ತ ಓಡಿದಳು. ಒಂದೆರಡು ನಿಮಿಷದ ತರುವಾಯ ನೋಡಿದರೆ ಮೊದಲು ಬಂದ ಹುಡುಗಿ ಎಲ್ಲರಿಗೂ ಒಂದೊಂದು ಐಸ್ಕ್ರೀಮ್ ಕಪ್ಪು ತಂದಿಡುತ್ತಿದ್ದಾಳೆ!

ಆಗ ಶ್ರೀನಾಥನೂ ಸೇರಿದಂತೆ ಎಲ್ಲರಿಗೂ ಅರಿವಾಗಿ ಹೋಯ್ತು. ಈತನಿಗೂ ಭಾಷೆಯ ಗಂಧ 'ಶುದ್ಧ ಪಿಟಿಪಿಟಿ' ಎಂದು. ಏನು ಮಾಡುವುದೆಂದು ಮುಖ ನೋಡಿಕೊಂಡಿರುವಾಗಲೆ ಶ್ರೀನಾಥ ಹೇಳಿದ್ದ,"ಇವರೆಲ್ಲೊ ನಾವು ತಪ್ಪು ಸಪ್ಲೈ ಮಾಡಿದ್ದಕ್ಕೆ ಕಂಪ್ಲೈಂಟ್ ಮಾಡುತ್ತಿದ್ದೇವೆಂದುಕೊಂಡಿರಬೇಕು..ಅದಕ್ಕೆ ರಸೀತಿ ತೋರಿಸುತ್ತಿದ್ದಾರೆ ಮತ್ತು ಕಾಂಪ್ಲಿಮೆಂಟರಿ ಐಸ್ಕ್ರೀಮು ಕೊಡುತ್ತಿದ್ದಾರೆ.. ನಾವು ಯಾಕೆ ವಾಪಸ್ಸು ಕೊಡುತ್ತಿದ್ದೇವೆಂದು ಅವರಿಗೆ ಅರ್ಥವಾಗುತ್ತಿಲ್ಲ...ಹಾಳು ಹಾನೆಸ್ಟಿ, ಗಿನೆಸ್ಟಿ ಎಲ್ಲಾ ಬಿಟ್ಟು ಹಾಕಿ...ಈ ಎರಡು ಪ್ಲೇಟಿನ ಜತೆಗೆ ಐಸ್ಕ್ರೀಮು ತಿಂದು ಜಾಗ ಖಾಲಿ ಮಾಡೋಣ...ಇಲ್ಲದಿದ್ದರೆ ಮುಂದಿನ ಪಾಳಿ ಓನರನದಾಗಿರುತ್ತದೆ ನೋಡಿ" ಎಂದ. ಆ ನಂತರ ಎಲ್ಲರು 'ಒಕೆ ಒಕೆ...' ಎನ್ನುತ್ತ ಐಸ್ಕ್ರೀಮ್ ಕೈಗೆತ್ತೊಕೊಂಡಾಗ ಅವನು ಪದೆಪದೆ 'ಕಾಪ್ ಕುನ್ ಕಾಪ್...(ಥ್ಯಾಂಕ್ಯೂ)' ಎಂದು ನಮಸ್ಕರಿಸುತ್ತ ಹೋಗಿದ್ದ. ಅದನ್ನು ನೆನೆದಾಗೆಲ್ಲ ಎಲ್ಲರಿಗೂ ನಗು..ಆದರೆ ಶ್ರೀನಾಥನಿಗೆ ಅದು ಆ ಜಾಗದ ಕಟು ವಾಸ್ತವದ ಒಂದು ಮುಖವನ್ನು ಪರಿಚಯ ಮಾಡಿಸಿತ್ತು. ಅದರಿಂದಾಗಿಯೆ ಬ್ಯಾಂಕಾಕಿನ ಬಣ್ಣ ಬಣ್ಣದ ಟ್ಯಾಕ್ಸೀವಾಲರು ತಮ್ಮ ಬಣ್ಣದ ಕಾರಿಗೆ ಆಹ್ವಾನಿಸುತ್ತ, "ಪ್ಲೀಸ್ ಕಮ್ ಟು ಟೇಕ್ ಮೈ ಟ್ಯಾಕ್ಸೀ ಸಾರ್..ವೆರಿ ನೈಸ್ ಟ್ಯಾಕ್ಸಿ...ವೇರ್ ಯೂ ವಾಂಟೂ ಗೋ?" ಎಂದರೂ ಬೇಸ್ತು ಬೀಳುವುದಿಲ್ಲ. ಅವನಿಗೀಗ ಚೆನ್ನಾಗಿ ಗೊತ್ತು, ಆ ಟ್ಯಾಕ್ಸಿಯವನಿಗೆ ಬರುವ ಇಂಗ್ಲೀಷು ಬರಿ ಅಷ್ಟೆ ಎಂದು ! ಅದಕ್ಕೆ ಥಾಯ್ ನಲ್ಲಿ ಬರೆಸಿಕೊಂಡ ಚೀಟಿಯಿರದೆ ಅವನು ಟ್ಯಾಕ್ಸಿ ಹತ್ತುವುದಿಲ್ಲ. ತೀರಾ ಅಪರೂಪಕ್ಕೆ ಒಬ್ಬರೊ ಇಬ್ಬಾರೊ ತುಸು ಮಾತಾಡಬಲ್ಲವರೂ ಸಿಕ್ಕಿದ್ದು ಉಂಟು. ಅದಕ್ಕೆ ಕಾರಣ ಅವರು ವಿದೇಶಗಳಲ್ಲಿ ಇದ್ದು ಕೆಲಸ ಮಾಡಿ ವಾಪಸ್ಸು ಬಂದು ಈಗ ಸುಮ್ಮನೆ ಟೈಮ್ ಪಾಸಿಗೆ ಟ್ಯಾಕ್ಸಿ ಓಡಿಸುವವರು...ಆ ಅನುಭವದ ನಡುವೆಯೂ ಕಡೆಗೆ ಎದ್ದು ಕಾಣುವುದು ಆ ಜನರ ಒಳ್ಳೆಯ ಗುಣವೆ...

ನೃತ್ಯ ಮುಗಿದ ಮೇಲೆ ಹಾಗೆ ಅಡ್ಡಾಡುತ್ತ ಬಂದವನೆ ರಸ್ತೆಯ ತುದಿಯ ಹತ್ತಿರ ಬಂದ ಹಾಗೆ ಅಂಗಡಿಗಳು ಮತ್ತು ಜನಸಂದಣಿಯು ಕಡಿಮೆಯಾಗುತ್ತಿರುವುದು ಕಂಡಿತು. ಸರಿಯೆಂದು ರಸ್ತೆಯ ಮತ್ತೊಂದು ಬದಿಗೆ ದಾಟಿ ಆ ಕಡೆಯೇನಿದೆಯೆಂದು ನೋಡುತ್ತಾ ಹಿಂದಿರುಗಿ ಹೋಗೋಣವೆಂದು ಕೊಳ್ಳುತ್ತಿರುವಾಗಲೆ ಕಡೆಯ ಅಂಗಡಿಯೊಂದರಿಂದ ಸುಮಾರೂ ಹದಿನೈದು ಹದಿನಾರು ವರ್ಷದ ಹುಡುಗನೊಬ್ಬ ಕೈಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದ ಚಿತ್ರವೊಂದನ್ನು ಹಿಡಿದುಕೊಂಡು ಬಂದು,'ಓನ್ಲಿ ಹಂಡ್ರೆಡ್ ಬಾತ್....ಬ್ಯೂಟಿಫುಲ್ ಪಿಚ್ಚರ್...' ಎಂದು ಕೈ ಹಿಡಿದು ಗೋಗರೆಯುವನಂತೆ ಕೇಳಿದ. ಬಹುಶಃ ಹುಡುಗನಾದ ಕಾರಣ ಗಿರಾಕಿಗಳು ಕಮ್ಮಿಯಿದ್ದರೇನೊ ಅಂದುಕೊಂಡು, 'ಮಾಯ್..ಮಾಯ್..(ಬೇಡ..ಬೇಡಾ..)' ಎಂದು ಹೋಗುತ್ತಿರುವಾಗಲೆ , ಹಿಂದಿನಿಂದ ಹೆಣ್ಣುದನಿಯೊಂದು 'ಡೀ ಮಾಕ್....ಸುವೈ ಮಾಕ್ ..' ಎಂದದ್ದು ಕೇಳಿಸಿತು. ಯಾರೆಂದು ತಿರುಗಿ ನೋಡಿದರೆ - 

ಆಫೀಸಿನಲ್ಲಿ ಹೌಸ್  ಕೀಪಿಂಗ್ ಮಾಡುವ ಹೆಂಗಸು - 'ಕುನ್ ಸುವನ್ನ'...

(ಇನ್ನೂ ಇದೆ)

Comments

Submitted by ಗಣೇಶ Sun, 04/20/2014 - 19:09

ವಾಕಿಂಗ್ ಸ್ಟ್ರೀಟ್‌ನಲ್ಲಿ ಸುತ್ತಾಡಿಸಿದ್ದಕ್ಕೆ ಧನ್ಯವಾದಗಳು ನಾಗೇಶರೆ. ಹೋಟಲ್ ಪ್ರಸಂಗ:)))))

Submitted by nageshamysore Sun, 04/20/2014 - 21:07

In reply to by ಗಣೇಶ

ಗಣೇಶ್ ಜಿ, ಈ ಕಲ್ಪನಾ ಕಥಾನಕದಲ್ಲಿ ಸೇರಿಸಿರುವ ಕೆಲವೆ ಕೆಲವು ನೈಜ್ಯ ಘಟನೆಗಳಲ್ಲಿ ಆ ರೆಸ್ಟೋರೆಂಟಿನ ಅನುಭವವೂ ಒಂದು. ನಮ್ಮ ಜತೆ ಕೆಲಸ ಮಾಡುತ್ತಿದ್ದ ಹುಡುಗರ ಗುಂಪಿಗೆ ಸಾಕ್ಷಾತ್ತಾಗಿ ಈ ಅನುಭವವಾಗಿತ್ತು..ಅದನ್ನ ಯಾವುದೆ ಉತ್ಪೇಕ್ಷೆಯನ್ನು ಬೆರೆಸದೆ ಯಥಾವತ್ತಾಗಿ ಶ್ರೀನಾಥನ ಅನುಭವವಾಗಿಸಿದೆ. ಈಗ ಬ್ಯಾಂಕಾಕಿಗೆ ಹೋದರೂ ಈ ಅನುಭವ ಅಷ್ಟೇನೂ ಭಿನ್ನವಾಗಿರಲಿಕ್ಕಿಲ್ಲ ಎಂದೆ ನನ್ನನಿಸಿಕೆ.