ಕಥೆ: ಪರಿಭ್ರಮಣ..(14)
(ಪರಿಭ್ರಮಣ..(13)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಇಂಗ್ಲೀಷ್ ಸಬ್ಟೈಟಲುಗಳಿದ್ದ ಕೆಲವು ಥಾಯ್ ಡೀವಿಡಿಗಳು ಸಿಕ್ಕಿದ್ದ ಕಾರಣದಿಂದ ಬರಿಯ ಆಂಗ್ಲ ಸಿನಿಮಾಗಳನ್ನೆ ನೋಡಿ ಬೇಸತ್ತಿದ್ದ ಮನಕ್ಕೆ ಕೊಂಚ ಆಹ್ಲಾದಕರ ಬದಲಾವಣೆಯೂ ಸಿಕ್ಕಿದಂತಾಗಿತ್ತು. ಆದರೆ ಟಿವಿಯ ಪುಟ್ಟ ಪರದೆಯನ್ನೆ ಒಂದೆ ಸಮನೆ ನೋಡುತ್ತಾ ವೇಗವಾಗಿ ಬದಲಾಗುತ್ತಿದ್ದ ಭಾಷಾಂತರವನ್ನು ಭಾವಾಂತರಿಸಿಕೊಳುವಷ್ಟು ಹೊತ್ತಿಗೆ ದೃಶ್ಯವೆ ಮುಗಿದು ಮುಂದೋಡಿರುತ್ತಿತ್ತು; ಉಪಶೀರ್ಷಿಕೆ ಬಿಟ್ಟು ಬರಿ ದೃಶ್ಯಗಳಲ್ಲೆ ಗ್ರಹಿಸ ಹೊರಟರೆ ಅರ್ಧಂಬರ್ಧ ಅರ್ಥವಾದಂತೆನಿಸಿ ನೋಡುವ ಆಸಕ್ತಿಯೆ ಕುಗ್ಗಿಹೋದಂತಾಗುತ್ತಿತ್ತು. ಹೀಗೆಯೆ ತಡಕಾಡುತ್ತ ಯಾವುದಾದರೊಂದು ಸಿನೆಮಾ ಎರಡು ರೀತಿಯಲ್ಲೂ ನೋಡಲು ಸಹ್ಯವಾಗುವ ರೀತಿಯಲ್ಲಿದೆಯೆ ಎಂದು ಹುಡುಕುತ್ತಾ ಹೆಣಗಿದಾಗ ಸಿಕ್ಕಿದ್ದ ಚಿತ್ರ ' ದಿ ಐ' (ಕಣ್ಣು). ಅಪಘಾತವೊಂದಕ್ಕೊಳಗಾದ ಯುವತಿಯೊಬ್ಬಳಿಗೆ ಇದ್ದಕ್ಕಿದ್ದಂತೆ ಅತೀಂದ್ರೀಯ ಶಕ್ತಿಯೊಂದು ಹೊಕ್ಕಂತೆ ಮುಂದೇನಾಗುವುದೆಂಬ ಸುಳಿವು - ಅದರಲ್ಲೂ ದುರಂತಗಳ ಕುರಿತದ್ದು, ತನ್ನಂತಾನೆ ದೃಶ್ಯರೂಪಕವಾಗಿ ಕಣ್ಣಿಗೆ ಕಟ್ಟುವ ಶಕ್ತಿ ಬಂದುಬಿಡುತ್ತದೆ - ಅನಿರೀಕ್ಷಿತವಾಗಿ. ಅದರ ತೀವ್ರತೆಯನ್ನು ಸಂಭಾಳಿಸಲಾಗದೆ ಒದ್ದಾಡುತ್ತ ಅದರ ಮೂಲ ಹಿಡಿದು ಹೊರಾತಾಗ ಎದುರಾಗುವ ನಿಗೂಢತೆಯ ಪ್ರೇತಾತ್ಮದ ಹಿನ್ನಲೆಯ ಕಥನ...ನೋಡ ನೋಡುತ್ತಿದ್ದಂತೆಯೆ ಅದೆಷ್ಟು ರೋಮಾಂಚಕಾರಿ ಮತ್ತು ಕುತೂಹಲಕಾರಿಯಾದ ಕಥಾನಕವಾಗಿತ್ತೆಂದರೆ ಅದನ್ನು ನೋಡಿ ಗ್ರಹಿಸಲು ಉಪಶೀರ್ಷಿಕೆಗಳ ಅಗತ್ಯವೆ ಬೇಡವಾಗಿತ್ತು. ಆದರೆ ಹಾಗೆಯೆ ನೋಡುತ್ತಾ ನೋಡುತ್ತ ಒಳಗೇನೊ ಸದ್ದಾದಂತೆ ಭಾಸವಾಗಿ ಅಡಿಗೆ ಮನೆಯ ಕತ್ತಲು ತುಂಬಿದ ಪ್ಯಾಸೇಜಿನತ್ತ ನೋಡಿದ ಶ್ರೀನಾಥನಿಗೆ ಅಲ್ಲೇನೂ ಕಾಣದಿದ್ದರೂ ತಾನೊಂದು ಭೀತಿ ಹುಟ್ಟಿಸುವ ಭಯಾನಕ ಸಿನಿಮಾವನ್ನು, ಅದೂ ನಡುರಾತ್ರಿಯ ಹತ್ತತ್ತಿರದ ಸಮಯದಲ್ಲಿ ಒಬ್ಬನೆ ನೋಡುತ್ತಿರುವನೆಂಬ ಪ್ರಜ್ಞೆ ತಟ್ಟನೆ ಅವತರಿಸಿ ಅಷ್ಟು ಹೊತ್ತು ಯಾವುದೆ ರೀತಿಯ ಅಳುಕಿಲ್ಲದೆ ಚಿತ್ರ ನೋಡುತ್ತಿದ್ದವನ ಮನದಲ್ಲಿ ಏನೋ ಒಂದು ರೀತಿಯ ಅಳುಕಿನ ಬೀಜವನ್ನು ಬಿತ್ತಿ ಬಿಟ್ಟಿತು... ಆ ಭೀತಪ್ರಜ್ಞೆಯ ಅನಾವರಣದ ಹೊತ್ತಿಗೆ ಸರಿಯಾಗಿ ಟೀವಿಯಲ್ಲಿ ಬರುತ್ತಿದ್ದ ದೃಶ್ಯದ ಶಬ್ದ ಅಲ್ಲಿನ ದೃಶ್ಯ ಸಂಧರ್ಭಕ್ಕನುಗುಣವಾಗಿ ಇದ್ದಕ್ಕಿದ್ದಂತೆ ತಾರಕಕ್ಕೇರಿ ಇಡಿ ಹಾಲಿನ ಪೂರ್ತಿ ಅನುರಣಿಸಿದಂತೆ ಭಾಸವಾಗಿ ಅವನೆದೆಯನ್ನು ಝಿಲ್ಲೆನಿಸಿ ನಡುಗಿಸಿಬಿಟ್ಟಿತು. ಅಲ್ಲಿಯತನಕ ಕಾಡದಿದ್ದ ನೀರವ ಮೌನ ಇದ್ದಕ್ಕಿದ್ದಂತೆ ಭೀತಿಯುಟ್ಟಿಸುವ ವಕ್ತಾರನಾದಂತೆನಿಸುವ ಹೊತ್ತಲ್ಲೆ, ಇಡೀ ಹಾಲಿನ ಗೋಡೆಯಂತೆ ಹರಡಿಕೊಂಡಿದ್ದ ಗಾಜಿನ ಫಲಕದ ಮೂಲಕ ಹೊರಗಿನ ಕತ್ತಲೆಯೆಲ್ಲ ಪ್ರತಿಫಲಿಸಿದಂತಾಗಿ ಏನೇನೊ ಆಕಾರಗಳನ್ನು ಕಂಡ ಭ್ರಾಂತಿಯುಂಟಾಗಿ ತಟ್ಟನೆದ್ದು ಓಡಿಹೋಗಿ ಗಾಜಿನಿಂದಾಚೆಯ ಕತ್ತಲಿನತ್ತ ಕಣ್ಣನ್ನೆ ತಿರುಗಿಸದೆ ಆತುರಾತುರವಾಗಿ ಗಾಜಿನ ಹೊದಿಕೆಯಾಗಿದ್ದ ತೆಳು ಪಾರದರ್ಶಕ ಮತ್ತು ದಪ್ಪ ಅಪಾರದರ್ಶಕ ಪರದೆಗಳೆರಡನ್ನು ಮೂಲೆಯಲಿದ್ದ ದಾರದ ಕುಣಿಕೆಯ ಮೂಲಕ ಸರಸರನೆ ಎಳೆದು ಮುಚ್ಚಿಬಿಟ್ಟಿದ್ದ - ಬಲವಂತದಿಂದೆಳೆದರೆ ಹರಿದುಹೋಗಬಹುದೆಂಬ ಭೀತಿಯನ್ನು ಬದಿಗಿಟ್ಟು...ಹೀಗೆ ಎಲ್ಲಾ ಕಡೆಯೂ ಮರೆಯಾದರೂ ಇನ್ನು ಢವಗುಟ್ಟುತ್ತಿದ್ದ ಎದೆ ತಹಬಂದಿಗೆ ಬರದೆ ಮೆಲುವಾಗಿ ಕಂಪಿಸುತಿದ್ದ ಹೊತ್ತಲೆ ಸಣ್ಣದಾಗಿದ್ದ ಟೀವಿ ಶಬ್ದವೂ ಅಸಹನೀಯ ಪ್ರಮಾಣದ್ದೆನಿಸಿ ಪೂರ್ಣವಾಗಿ ಮ್ಯೂಟ್ ಮಾಡಿದಾಗ ಸ್ವಲ್ಪ ಸಮಾಧಾನವಾದಂತೆನಿಸಿ ನಿರಾಳವಾಗಿತ್ತು. ಆಮೇಲೂ ಒಬ್ಬನೆ ಕೂತು ಆ ಚಿತ್ರದ ಉಳಿದ ಭಾಗ ನೋಡಲು ಒಂದೆಡೆ ಅಗಾಧ ಕುತೂಹಲ, ಮತ್ತೊಂದೆಡೆ ತಡೆಯೊಡ್ಡುತಿರುವ ಭೀತಿ...ಕೊನೆಗೆ ಆದದ್ದಾಗಲಿ ಈ ಹಾಳು ಕುತೂಹಲ ತಣಿಸಿಬಿಡುವುದೇ ಸರಿ ಎಂದು ಸದ್ದಿಲ್ಲದ ಮ್ಯೂಟಿನಲ್ಲೆ ಸಬ್ಟೈಟಲ್ಲಿನ ಜತೆಗೆ ಮಿಕ್ಕರ್ಧವನ್ನು ನೋಡಿ ಮುಗಿಸಿದ್ದ ಭಂಢತನದಿಂದಲೆ...ಆದರೂ ಆ ನಂತರ ಆ ದೊಡ್ಡ ಮನೆಯಲ್ಲವನೊಬ್ಬನೆ ಇರುವುದರ ಜಾಗೃತ ಪ್ರಜ್ಞೆ ಮತ್ತಷ್ಟು ಹೆದರಿಕೆ ಹುಟ್ಟಿಸಿ ರೂಮಿನ ಬಾಗಿಲು ಮುಚ್ಚಿ ಪೂರ್ತಿ ಮುಸುಗೆಳೆದುಕೊಂಡು ಮಲಗಿಬಿಟ್ಟಿದ್ದ, ಏಸೀಯಲ್ಲೂ ಧಾರಾಕಾರವಾಗಿ ಬೆವರುತ್ತ. ನಾಳೆಯಿಂದ ಬೇರೇನು ಮಾಡಿದರೂ ಸರಿ, ಮನೆಯಲ್ಲಿ ಮಾತ್ರ ಒಬ್ಬನೆ ಕೂತು ಸಿನೆಮಾ ನೋಡುವುದಿಲ್ಲ ಎಂದು ಬಲವಾಗಿ ನಿರ್ಧರಿಸಿಕೊಂಡ ಮೇಲಷ್ಟೆ ಕಣ್ಣಿಗೆ ತುಸು ನಿದ್ರೆ ಹತ್ತಿದ್ದು.
ಕೊನೆಗೆ ಹೀಗೆ ಸಿನೆಮಾ ಪರಿಣಯವೂ ಬೇಸರವಾಗುವ ಹೊತ್ತಿಗೆ ಮೂರನೆ ದಿನವೂ ಕಳೆದು ನೀರಿನ ಎರಚಾಟದ ಭೀತಿಯಿಲ್ಲದೆ ತಿರುಗಾಡುವಂತಾಗಿತ್ತು. 'ಸದ್ಯ ಪ್ರಾಜೆಕ್ಟಿನ ತಾಣ 'ಚಿಯಾಂಗ್ಮಾಯ್' ನಂತಹ ಉತ್ತರ ಥಾಯ್ಲ್ಯಾಂಡಿನಲ್ಲಿಲ್ಲ, ಪುಣ್ಯಕೆ; ಇರದಿದ್ದರೆ ಮೂರು ದಿನದ ಬದಲು ಐದು ದಿನದ ಆಚರಣೆಗೆ ಸಾಕ್ಷಿಯಾಗಬೇಕಾಗುತಿತ್ತು' - ಎಂದು ನಿಟ್ಟುಸಿರುಬಿಟ್ಟಿದ್ದ ಶ್ರೀನಾಥ. ಮುಂದಿನ ಎರಡು ದಿನಗಳು ಶನಿವಾರ, ಭಾನುವಾರವಾದ ಕಾರಣ ಆಫೀಸಿಗೆ ರಜೆಯಿತ್ತು. ಆದರೂ ಆಫೀಸಿಗೆ ಹೋಗಿ ಬರಲು ಅಡ್ಡಿಯೇನೂ ಇರಲಿಲ್ಲ. ನೀರಿನ ಹಬ್ಬದ ಅಳುಕಿಲ್ಲದೆ ಹೋಗಿ ಬರಲು ಸಾಧ್ಯವಿತ್ತಾದರೂ ಆ ಸಮಯದ ಧೀರ್ಘ ರಜೆಯನ್ನು ಬಳಸಿಕೊಂಡು ಯಾರೂ ಆಫೀಸಿಗೆ ಬರುತ್ತಿರಲಿಲ್ಲವಾದ ಕಾರಣ, ಬರೀ ಮೇಯಿಲ್ ಚೆಕ್ ಮಾಡುವಂತಹ , ಉತ್ತರಿಸುವಂತಹ ಕೆಲಸ ಬಿಟ್ಟರೆ ಮತ್ತೇನೂ ಆಗುತ್ತಿರಲಿಲ್ಲ. ಒಬ್ಬಂಟಿಯಾಗಿ ಮನೆಯಲಿರಲೂ ಬೇಸರವಾಗಿ ಸರೀ ಆಫೀಸಿನಲ್ಲಾದರೂ ಅಷ್ಟಿಷ್ಟು ಹೊತ್ತು ಕೂತಿದ್ದು ಬರಲೆಂದು ಬೆಳಿಗ್ಗೆಯೆ ಹೊರಟವನು ಆಫೀಸಿನ ಕಟ್ಟಡ ತಲುಪಿ, ಲಿಪ್ಟು ಮುಖಾಂತರ ಆಫೀಸಿನ ಅಂತಸ್ತಿಗೆ ಸೇರಿ ಒಳಗೆ ಕಾರ್ಡಿನ ಮೂಲಕ ಪ್ರವೇಶಿಸಲು ಯತ್ನಿಸಿದರೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು... ಹಬ್ಬದ ರಜೆ ದಿನಗಳೆಂದೊ ಏನೊ ಸುರಕ್ಷತೆಯ ದೃಷ್ಟಿಯಿಂದ ಯಾರೂ ಅನುಮತಿಯಿಲ್ಲದೆ ಬಂದು ಒಳಗೆ ಹೋಗಲಾರದಂತೆ, ಕಾರ್ಡಿನ ಮೂಲಕದ ಪ್ರವೇಶವನ್ನು ನಿರ್ಬಂಧಿಸಿ ಬಿಟ್ಟಿದ್ದರು... ರಜೆ ಆರಂಭವಾಗುವ ಮೊದಲೆ ಕೇಳಿದ್ದರೆ ಅನುಮತಿ ಸಿಕ್ಕಿರುತ್ತಿತ್ತೊ ಏನೊ - ಈಗಂತೂ ಏನು ಮಾಡುವಂತಿರಲಿಲ್ಲ. ವಿಧಿಯಿಲ್ಲದೆ ಮತ್ತೆ ಮನೆಯತ್ತ ಹೆಜ್ಜೆ ಹಾಕಿದ್ದವನಿಗೆ, ಇಂದಾದರೂ ಮಾಬೂಕಾಂಗ್ ಮಾರ್ಕೆಟ್ ತೆಗೆದಿರುವುದೆ ಎಂದು ನೋಡಿ ಬರಬಹುದಲ್ಲ? ಎನಿಸಿತು. ಪೂರ್ತಿ ತೆಗೆದಿರುವ ಸಾಧ್ಯತೆ ಕಡಿಮೆಯಾದರೂ ಒಬ್ಬಿಬ್ಬರಾದರೂ ತೆಗೆದಿದ್ದರೂ ಆಯ್ತು; ಇಲ್ಲದಿದ್ದರೂ ಕೆಲ ಸ್ಟಾಪುಗಳ ನಂತರ ಬರುವ 'ನ್ಯಾಶನಲ್ ಮಾನ್ಯುಮೆಂಟ್' ಹತ್ತಿರಕ್ಕೊ, ಅಥವಾ 'ಸಿಯಾಂ ಸೆಂಟರಿನ'ಲ್ಲಿರುವ ಸಣ್ಣ ಪುಟ್ಟ ಆಕರ್ಷಣೆಗಳಿಗೊ ಭೇಟಿಕೊಟ್ಟು ಬರಬಹುದೆನಿಸಿ ಮನೆಯತ್ತ ನಡೆದಿದ್ದ ಹೆಜ್ಜೆ ತಿರುಗಿಸಿ ಮತ್ತೆ ಟ್ರೈನ್ ಸ್ಟೇಷನ್ನಿನತ್ತ ನಡೆದಿದ್ದ. ಹಿಂದಿನ ದಿನದಂತೆಯೆ ಬಿಕೊ ಎನ್ನುತ್ತಿದ್ದರೂ, ಪ್ರವೇಶ ದ್ವಾರದ ಹತ್ತಿರ ಅಲ್ಲೊಬ್ಬರು ಇಲ್ಲೊಬ್ಬರೂ ಕಾಣುತ್ತಿದ್ದುದು ಇಂದಿನ ವಿಶೇಷ. ದಿನವೂ ಕಾಲಿಡಲೂ ಜಾಗವಿರದಂತೆ ಜನರು ಮತ್ತು ಸಾಮಾಗ್ರಿಗಳಿಂದ ಗಿಜಿಗುಟ್ಟುವ ಈ ಜಾಗ ಈ ಖಾಲಿ ನೀರವತೆಯಲ್ಲಿ ಹಾಸಿಕೊಂಡು ಅನಾಥವಾಗಿ ಬಿದ್ದಿರುವ ಬಗೆಯನ್ನು ಕಂಡು ವಿಚಿತ್ರ ವಿಸ್ಮಯ ಒಡಮೂಡಿತು. ತನಗೆ ಸಂಬಂಧವಿರದ ಸುತ್ತಲಿನ ಸದ್ದು ಗದ್ದಲಗಳೂ ತನ್ನರಿವಿಲ್ಲದೆಯೆ ತನ್ನ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುವುದು, ಇಂತ ಸ್ಮಶಾನ ಮೌನದ ಪರಿಸರದಲ್ಲಿ ನಿಂತು ಅವಲೋಕಿಸಿದ್ದಲ್ಲದೆ ಗೊತ್ತೆ ಆಗುವುದಿಲ್ಲವಲ್ಲ - ಅನಿಸಿತು. ಹೀಗೆ ಖಾಲಿ ಖಾಲಿ ಇರುವ ರೀತಿ ದಿನವೂ ಸಿಗದು...ಇಂದೊಮ್ಮೆ ಯಾಕೆ ಈ ಖಾಲಿ ಕಾರಿಡಾರುಗಳಲ್ಲೆ ಒಂದು ಸುತ್ತು ಹಾಕಿ ಬರಬಾರದು? ಎನಿಸಿ ಆ ವಿಶಾಲ ಮಾಳಿಗೆಯ ನೆಲ ಅಂತಸ್ತಿನ ಓಣಿಯಂತಹ ಜಿಗ್ ಜಾಗ್ ಪಜಲಿನ ರೀತಿಯ ಕಾಲು ಹಾದಿಯಲ್ಲಿ ಹೆಜ್ಜೆ ಹಾಕಿದ್ದ.
ಏಕವಾಗಿ ಹಾಸಿಕೊಂಡು ಬಿದ್ದಿದ್ದ ಕಾರಿಡಾರಿನಲ್ಲಿ ಸಾಗುತ್ತಲೆ ಅಕ್ಕಪಕ್ಕದಲ್ಲಿದ್ದ ಪುಟ್ಟ ಪುಟ್ಟ ಅಂಗಡಿಗಳ ಮುಚ್ಚಿದ ಬೋರ್ಡನೆ ನೋಡುತ್ತಾ ಸಾಗಿದ್ದವನಿಗೆ ನಡೆದಂತೆ ಯಾರಾದರೂ ಒಬ್ಬಿಬ್ಬರಾದರೂ ಎದುರಿಗೆ ಕಾಣಸಿಗಬಹುದೆಂಬ ನಿರೀಕ್ಷೆ ಮುಂದೆ ಮುಂದೆ ಸಾಗಿದಂತೆ ಸಡಿಲಾಗುತ್ತ ಹೋಯ್ತು. ಅವನ ಅನಿಸಿಕೆಗೆ ವ್ಯತಿರಿಕ್ತವಾಗಿ ಇಡಿ ಸಾಲಿನಲ್ಲಿ ಒಂದು ಅಂಗಡಿಯೂ ತೆರೆದಿರದೆ ಒಂದು ರೀತಿಯ ಗಪ್ಪನೆಯ ಮೌನ ಸುತ್ತಲಿನ ಗಾಳಿಯಲ್ಲೂ ಏನೊ ಅಸಹನೆಯ ಭಾವವನ್ನುಂಟುಮಾಡಿತ್ತು. ಸಾಲದ್ದಕ್ಕೆ ಸುತ್ತಲಿದ್ದ ಬರಿ ಅಂಗಡಿ ಮತ್ತು ಲಂಬವಾಗಿ ಎತ್ತರಕ್ಕೆ ಕಟ್ಟಿ ಪೇರಿಸಿಟ್ಟಿದ್ದ ಸರಕುಗಳಿಂದಲೋ ಏನೊ - ಹೊರಗಿನ ಬೆಳಕು ಬರಲೆ ದಾರಿಯಿಲ್ಲದೆ ಒಂದು ರೀತಿಯ ಮಬ್ಬುಗತ್ತಲೆ ಆವರಿಸಿಕೊಂಡ ಹಾಗೆ ಕಾಣುತ್ತಿತ್ತು. ಮಾಮೂಲಿ ದಿನಗಳಲ್ಲಿ ತೆರೆದ ಅಂಗಡಿಗಳ ದೀಪಗಳಿಂದಾಗಿ ಆ ಮಂಕು ಪ್ರಜ್ಞೆಗೆ ಅರಿವಾಗದಿದ್ದರೂ, ಈ ನಿಶ್ಯಬ್ದ ನೀರವತೆಯಲ್ಲಿ ಆ ಮಬ್ಬು ಒಬ್ಬಂಟಿಯಾಗಿ ಒಡಾಡುವವರಿಗೆ ತುಸು ಹೆದರಿಕೆ ಹುಟ್ಟಿಸುವಷ್ಟರ ಮಟ್ಟಿಗೆ ಗಾಢವಾಗಿ ಪ್ರಕ್ಷೇಪಿಸಿಕೊಂಡಿತ್ತು. ಅಲ್ಲಿನ ನೀರವತೆಯನ್ನು ಮತ್ತಷ್ಟು ನಿಗೂಢವಾಗಿಸಿ ಭೀತಿಯುಟ್ಟಿಸುವಂತೆ ಮಾಡುತಿದ್ದುದು ಅಲ್ಲಿನ ಮೌನವೆ ಎನ್ನಬಹುದಿತ್ತೇನೊ...ಆ ಮೌನದ ನೆರಳಲ್ಲೆ ತಾನು ನಡೆಯುತಿದ್ದ ಹೆಜ್ಜೆಗೆ ತನ್ನ ಬೂಟಿನಿಂದಲೆ ಹೊರಬರುತ್ತಿದ್ದ ಸದ್ದೆ ಭೀತಿಯ್ಹುಟ್ಟಿಸುವಂತಾಗಿ ಆ ಶಬ್ದವನ್ನು ಆದಷ್ಟು ಮಿತಿಗೊಳಿಸಲು ಯತ್ನಿಸುತ್ತ, ಆ ಓಣಿಯ ತುದಿಗೆ ಬಂದಾಗ ಮುಂದಿನ ಅಂತಸ್ತಿಗೆ ಹೋಗುವ ಮೆಟ್ಟಿಲುಗಳು ಕಾಣಿಸಿತು. ಸಾಧಾರಣವಾಗಿ ಎಸ್ಕಲೇಟರಿನಲ್ಲೊ ಅಥವಾ ಎಲಿವೇಟರಿನಲ್ಲೊ ಮೇಲೇರುತ್ತಿದ್ದ ಜಾಗಗಳಾದರೂ, ಈ ದಿನಗಳಲ್ಲಿ ಅವುಗಳನ್ನೆಲ್ಲ ಯಾರೋ ಸ್ಥಗಿತಗೊಳಿಸಿದ ಹಾಗೆ ತಣ್ಣಗೆ ಕೂತುಬಿಟ್ಟಿದ್ದವು. ಅವು ಕೆಲಸ ಮಾಡುತ್ತಿರುವುದನ್ನು ಸೂಚಿಸುವ ದೀಪಗಳಾವುದು ಮಿನುಗದೆ, ಅವು ಮೂರ್ನಾಲ್ಕು ದಿನಗಳಿಂದ ಹಾಗೆ ಇರುವುದನ್ನು ಸಂಕೇತಿಸುವ ಹಾಗೆ ಅವುಗಳ ಮುಂದೆ ಕಟ್ಟಿದ ತಾತ್ಕಾಲಿಕ ಪ್ರವೇಶ ತಡೆ-ಪಟ್ಟಿಗಳು ಇನ್ನೂ ಹಾಗೆಯೆ ಇಡಲ್ಪಟ್ಟು, ಅಲ್ಲಿಂದ ಹೋಗಬಹುದಾದ ಸಾಧ್ಯತೆಯನ್ನು ತೊಡೆದುಹಾಕಿದ್ದವು. ಶ್ರೀನಾಥನಿಗೊ ಅರೆಬರೆ ಮನಸ್ಸು - ಮೇಲೆ ಹೋಗುವುದೊ, ಇಲ್ಲಾ ತಿರುಗಿ ವಾಪಸ್ಸು ಹೋಗುವುದೊ ಎಂದು ಗೊಂದಲ, ಅನುಮಾನ. ಆ ಸಂದೇಹಪೂರ್ಣ ಮನದಲ್ಲೆ ತುಸುಗಳಿಗೆ ಹಾಗೆ ಯೋಚಿಸುತ್ತ ನಿಂತಿದ್ದವನು, ಈ ಒಂದು ಅಂತಸ್ತು ಹತ್ತಿ ಹೋದರೆ ಆ ಅಂತಸ್ತಿನಿಂದ ನೇರ ಟ್ರೈನ್ ಸ್ಟೇಷನ್ನಿಗೆ ದಾಟಿಕೊಳ್ಳಲು ಮೇಲ್ಸೇತುವೆಯ ಕೊಂಡಿ ಇರುವ ಕಾರಣ ಹಾಗೆಯೆ ಹೊರ ಹೋಗಲೆ ಸುಲಭವೆಂದು ಆಲೋಚಿಸಿ ಎರಡು ಮಹಡಿಗಳಷ್ಟು ಎತ್ತರವಿದ್ದ ಮೆಟ್ಟಿಲುಗಳತ್ತ ಹೆಜ್ಜೆ ಹಾಕಿದ.
ಅದೊಂದು ವಿಶಾಲವಾದ ಕಟ್ಟಡಗಳ ಸಂಕೀರ್ಣ..ಅದೂ ಸದಾ ಜನರಿಂದ ತುಂಬಿ ತುಳುಕುವ ಗದ್ದಲದ ತಾಣ...ಆದರಂದಿನ ದಿನ ಹಾಸಿ ಹೊದೆಯುವಷ್ಟು ನಿಶ್ಯಬ್ದ; ನೀರವ ಮೌನದ ಜತೆಗೆ ಮಬ್ಬು ಕವಿದ ಹಾಗಿನ ವಾತಾವರಣದಲ್ಲಿ ಶ್ರೀನಾಥನಿಗೆ ಇದ್ದಕ್ಕಿದ್ದಂತೆ ಅಲ್ಲಿದ್ದ ನಿರ್ಜನ ಸ್ಥಿತಿಯಿಂದಾಗಿ ಈಚಿನ ರಾತ್ರಿಯಷ್ಟೆ ಭಯಾನಕ ಹಿನ್ನಲೆಯ 'ದಿ ಐ' ಚಿತ್ರದಲಿ ನೋಡಿದ್ದ ಉದ್ದನೆಯ ಖಾಲಿ ಕಾರಿಡಾರು ಮತ್ತು ನಿರ್ಮಾನುಷ ಸ್ಟೇರ್ ಕೇಸುಗಳೆ ನೆನಪಾದಂತಾಗಿ, ಯಾಕೊ ಮೇಲೆ ಹತ್ತಿ ಹೋಗುವುದೊ , ಬಿಡುವುದೊ ಎಂಬನುಮಾನದಲ್ಲಿ ಅಸ್ಥಿರ ಮನ ತೂಗುಯ್ಯಾಲೆಯಾಡುತ್ತಲಿದ್ದರೂ ಕಾಲುಗಳು ಮಾತ್ರ ಯಾರೊ ಎಳೆದಂತೆ ಮೆಟ್ಟಿಲಿನತ್ತ ನಡೆದಿದ್ದವು ..ಆ ಮೆಟ್ಟಿಲುಗಳು ನೆಲ ಅಂತಸ್ಥಿನದಾಗಿದ್ದ ಕಾರಣ ಎರಡನೆ ಅಂತಸ್ತಿನ ಮಟ್ಟ ತೀರಾ ಎತ್ತರದಲ್ಲಿ - ಸರಿ ಸುಮಾರು ಮಾಮೂಲಿ ಎತ್ತರದ ಎರಡರಷ್ಟು ಮಟ್ಟದಲ್ಲಿತ್ತು. ಹೀಗಾಗಿ ಮೇಲೆ ತಲುಪಲೆ ಆಯತಾಕಾರದಲ್ಲಿ ನಾಲ್ಕು ಸುತ್ತು ಮೇಲೇರಬೇಕಿತ್ತು... ಸಾಲದ್ದಕ್ಕೆ ದೀಪಗಳಿಲ್ಲದ ಕಾರಣ ಮಂಕು ಬೆಳಕಿನ ಕ್ಷೀಣ ಪ್ರಭೆಯನ್ನು ಬಿಟ್ಟರೆ ಬೇರೇನೂ ಕಾಣಿಸದ ಮಬ್ಬು. ಹೇಗಾದರೂ ಸರಿ ಬೇಗನೆ ಓಡಿ ಜಾಗ ಖಾಲಿ ಮಾಡುವಂತೆಯೂ ಇಲ್ಲ; ಮೆಟ್ಟಿಲು ಮೆಟ್ಟಿಲಾಗಿ ಹತ್ತಿಯೆ ಹೋಗಬೇಕು..ಈಗಾಗಲೆ ಅರ್ಧ ಹತ್ತಿ ಆಗಿದೆ, ಇನ್ನರ್ಧ ಮಾತ್ರ ತಾನೆ? ಎನ್ನುವ ಭಂಡ ಧೈರ್ಯದಲ್ಲಿಯೆ ಏದುಸಿರೊಂದಿಗೆ ಹತ್ತಿ ಮೂರನೆ ಸುತ್ತು ಸುತ್ತಿ ಕೊನೆಯ ಗುಂಪಿನ ಮೆಟ್ಟಿಲುಗಳತ್ತ ಬರುವ ಹೊತ್ತಿಗೆ ಮೇಲೆ ಎರಡನೆ ಮೆಟ್ಟಿಲ ಹತ್ತಿರ ಯಾರೊ ಕುಳಿತ ಹಾಗೆನಿಸಿ ತಲೆಯೆತ್ತಿ ನೋಡಿದರೆ - ಸಾಂಪ್ರದಾಯಿಕ ಸರಳ ಥಾಯ್ ಉಡುಗೆ ಧರಿಸಿದ ಲಕ್ಷಣವಾದ ಯುವತಿಯೊಬ್ಬಳು ಕೈಯಲ್ಲೊಂದು ಬ್ಯಾಗು ಹಿಡಿದುಕೊಂಡು ಕುಳಿತಿದ್ದಾಳೆ..!
ಯಾರೂ ಇಲ್ಲದೆ ನಿರ್ಮಾನುಷವಾಗಿದ್ದ ನಿರ್ಜನವಾದ ಸ್ಥಳದಲ್ಲಿ ಏಕಾಏಕಿ ಹುಡುಗಿಯೊಬ್ಬಳನ್ನು ಕಂಡ ಶ್ರೀನಾಥ ಬೆಚ್ಚಿ ಬಿದ್ದರೂ ಇವನನ್ನು ಕಾಣುತ್ತಿದ್ದಂತೆ ಅವಳು ಬೆಚ್ಚದೆ ಮುಗುಳ್ನಗೆಯೊಂದನ್ನು ವಿನಿಮಯಿಸಿದಾಗ ತುಸು ಉತ್ಸಾಹ ಚೇತರಿಕೆ ಬಂದಂತಾಯ್ತು - 'ಸದ್ಯ ಮಾನವ ಜೀವಿಯೊಂದು ಕಣ್ಣಿಗೆ ಬಿತ್ತಲ್ಲಾ' ಎಂದು. ಆದರೆ ಶ್ರೀನಾಥನಿಗೆ ಅದನ್ನು ಮೀರಿದ ಅಸಹನೀಯ ಚಡಪಡಿಕೆಯಾಗಲಿಕ್ಕೆ ಕಾರಣ ಅವಳ ಮುಖ; ಯಾರೊ ತುಂಬ ಪರಿಚಯವಿದ್ದವರ ಮುಖದಂತೆ, ತೀರಾ ಇತ್ತೀಚೇಗಷ್ಟೆ ನೋಡಿದ, ಒಡನಾಡಿದ ವ್ಯಕ್ತಿಯಂತೆ ಭಾಸವಾದರೂ ಯಾರಿರಬಹುದೆಂದು ಎಷ್ಟು ನೆನಪಿಸಿಕೊಳ್ಳಲು ಯತ್ನಿಸಿದರೂ ಗೊತ್ತಾಗಲಿಲ್ಲ...ಜತೆಗೆ ಪರಿಚಿತ ನಗೆ ಬೇರೆ ಬೀರುತ್ತಿದ್ದಳೆಂದ ಮೇಲೆ ಯಾರೊ ಆಫೀಸಿನ ಕಡೆಯಿಂದಲೊ ಅಥವಾ ಅಪಾರ್ಟುಮೆಂಟಿನ ಸುತ್ತಮುತ್ತಲವರೊ ಇರಬಹುದೆಂಬ ಗುಮಾನಿ ಬಂದರೂ ಯಾರೆಂದು ಮಾತ್ರ ನಿಲುಕಿಗೆ ಸಿಗಲಿಲ್ಲ...ಅರೆಕ್ಷಣ ದಿಗ್ಮೂಢನಾಗಿ ಹತ್ತುವುದನ್ನು ಮರೆತು ನಿಂತವನನ್ನು ನೋಡಿ ಇಂಗ್ಲೀಷಿನಲ್ಲಿಯೆ, "ಡು ಯೂ ವಾಂಟು ಟು ಗೋಟು ಬೀಟಿಎಸ್ ಸ್ಟೇಷನ್? ದ ಡೋರ್ ಇಸ್ ಕ್ಲೋಸ್ಡ್..ಕಾಂಟ್ ಗೊ...ಮೀ ಟೂ ಸ್ಟ್ರಕ್..." ಎಂದು ತುಸು ಥಾಯ್ ಬೆರೆತ ರಾಗದ ಶೈಲಿಯಲ್ಲಿ ಉಲಿದಾಗ..ಇಷ್ಟು ಹೊತ್ತು ಯಾರೂ ಇಲ್ಲದ ಕಡೆ ಇವಳ್ಹೇಗೆ ಏಕಾಏಕಿ ಧುತ್ತನೆ ಪ್ರತ್ಯಕ್ಷಳಾದಳೆಂದು ಅನುಮಾನ ಕಾಡುತ್ತಿದ್ದರೂ 'ಅರೆ..ಇವಳಾರೊ ತಾನಾಗೆ ಸಲಿಗೆಯಿಂದ ಮಾತನಾಡಿಸುತ್ತಿರುವಳಲ್ಲ? ತುಸು ಪ್ರಯತ್ನಿಸಿದರೆ ಹೆಚ್ಚು ಹತ್ತಿರವಾಗಬಹುದೇನೊ?' ಎಂದೆನಿಸಿ, ಅದುವರೆಗೂ ಬೂದಿ ಮುಚ್ಚಿದ್ದ ಕೆಂಡದಂತೆ ಸುಪ್ತವಾಗಿದ್ದ ಬಯಕೆಯೊಂದು ತಟ್ಟನೆ ಜಾಗೃತವಾದಂತೆ ನರನಾಡಿಗಳೆಲ್ಲ ಹುರಿಗಟ್ಟಿ, ಮಾಯವಾಗಿದ್ದ ಚಾಣಾಕ್ಷ್ಯತೆ, ಕುಶಾಗ್ರಮತಿ ಚಾತುರ್ಯಗಳು ಅಂತರಾಳದಿಂದ ಏಕ್ ದಂ ಮೆದುಳಿಗೆ ರವಾನೆಯಾದಂತೆ ಅವನ ಪ್ರತಿಯೊಂದು ಪ್ರತಿಕ್ರಿಯೆಯನ್ನು ಚುರುಕಾಗಿಸತೊಡಗಿದವು.... ಅದರ ನಡುವೆ ಪರಿಚಿತ ಮುಖವೆಂಬ ಅನಿಸಿಕೆ...ಸಾಲದ್ದಕ್ಕೆ ನಕ್ಕು ಮಾತನಾಡಿಸುವ ಪರಿ ಕಂಡರೆ ಯಾರೊ ತನಗೆ ನೆನಪಿಲ್ಲದ ಪರಿಚಿತಳೆ ಇರಬಹುದೆನಿಸಿತ್ತು. ಇವನಾಗಿ ಏನೂ ಕೇಳದಿದ್ದರೂ, ತಾನೆ ಕಾರಣ ಸರಿಯಾಗಿ ಊಹಿಸಿ ಸ್ಪಷ್ಟವಾದ ಆಂಗ್ಲ ಭಾಷೆಯಲ್ಲಿ ಮಾತನಾಡಿದವಳನ್ನೆ ಒಂದರೆಗಳಿಗೆ ತದೇಕನಾಗಿ ದಿಟ್ಟಿಸಿ ನೋಡಿದ್ದ ಶ್ರೀನಾಥ...
ಅವಳ ವಯಸು ಸುಮಾರು ಇಪ್ಪತ್ತೈದು-ಇಪ್ಪತ್ತಾರು ವರ್ಷದಾಚೀಚೆ ಇರಬಹುದೇನೊ...ಸುಮಾರು ಐದಡಿಗಿಂತ ತುಸು ಎತ್ತರವಿದ್ದಂತೆ ಕಾಣುತ್ತಿದ್ದಳು. ಉದ್ದವಾದ ಸ್ಕರ್ಟಿನಂತಹ ಮಿರುಗುವ ಮೇಲ್ಮೆಯ ತಿಳಿ ನೇರಳೆ ಬಣ್ಣದ ಥಾಯ್ ರೇಷ್ಮೆ ಲಂಗ ಪಾದದವರೆಗಿನ ದೇಹವನ್ನು ಆವರಿಸಿಕೊಂಡಿದ್ದರೆ, ಅದೇ ಬಣ್ಣದ ತುಂಬು ತೋಳಿನ ಮೇಲುಡುಪಿನ ಮಡಿಸಿದ ಕಾಲರು ಕುತ್ತಿಗೆಯ ಸುತ್ತ ಆವರಿಸಿಕೊಂಡು ಅದರ ಹೊಳೆವ ಚಿತ್ತಾರದಿಂದಲೆ ಬಂಗಾರದ ಒಡವೆಯ ಹಾಗೆ ಕೊರಳನಪ್ಪಿಕೊಂಡು ಕುಳಿತಿತ್ತು. ಇಡಿ ದೇಹದಲ್ಲಿ ಕೇವಲ ಮುಖ ಮತ್ತು ಸುಂದರ ವಿನ್ಯಾಸದ ಪಾದರಕ್ಷೆಗಳನ್ನಪ್ಪಿದ್ದ ಪಾದಗಳನ್ನು ಬಿಟ್ಟರೆ, ಮಿಕ್ಕೆಲ್ಲ ಆ ಸುಂದರ ದಿರಿಸಿನೊಳಗೆ ಸೇರಿದಂತಿತ್ತು. ಯೌವ್ವನದ ಬಿರುಸಿನಿಂದ ಕಟ್ಟುಮಸ್ತಾಗಿ ಯಾವುದೆ ಅನಗತ್ಯ ಬೊಜ್ಜಿನ ಹಂಗಿಲ್ಲದೆ ನಳನಳಿಸುತ್ತಿದ್ದ ಕೋಮಲ ತನುವನ್ನು ಬಿಟ್ಟಿರಲಾರೆನೆನುವಂತೆ ಬಿಗಿಯಾಗಿ ಅಪ್ಪಿ ಹಿಡಿದಿದ್ದ ಆ ಬಿಗಿಯುಡುಗೆಯಿಂದಲೋ ಏನೊ, ಅವಳ ಯೌವ್ವನ ಸೂಸುವ ಅಮೃತ ಕಲಶಗಳು ಮಿತಿ ಮೀರಿ ಅಗತ್ಯಕ್ಕಿಂತಲೂ ಹೆಚ್ಚು ಪ್ರಚೋದಕವಾಗಿ ಪ್ರದರ್ಶನಗೊಂಡು, ಎಂತಹ ಅರಸಿಕನನ್ನು ಸೆಳೆದು ಒಮ್ಮೆಯಾದರೂ ಅವಳೆಡೆಗೆ ತಲೆಯೆತ್ತಿ ನೋಡುವಂತೆ ಮಾಡುತ್ತಿತ್ತು. ತೀರಾ ಬಿಳಿಯಲ್ಲದಿದ್ದರೂ ಗೌರವರ್ಣದಿಂದೊಡಗೂಡಿದ ಮೊಗ, ಸೂಜಿಗಲ್ಲಂತೆ ಸೆಳೆಯದಿದ್ದರೂ ಆ ಮುಖದೊಳಗಿನ ಆಕರ್ಷಣೆಯನ್ನೆಲ್ಲ ಹಿಡಿದಿಟ್ಟು ಸೆಳೆಯುತ್ತಿದ್ದುದು ಆ ಎರಡು ಸುಂದರ ಕಣ್ಣುಗಳು...ಬಹುಶಃ ಆ ಜೋಡಿ ಕಣ್ಣುಗಳಿಂದಲೇ ಇರಬೇಕು - ಅವಳನ್ನು ಈ ಮೊದಲೆ ನೋಡಿದ್ದ ಅನಿಸಿಕೆ ಕಾಡುತ್ತಿದ್ದುದು. ಜೀವಂತಿಕೆಯ ಸಾರವನ್ನೆಲ್ಲಾ ಕಣ್ಣೊಳಗಷ್ಟೆ ತುಂಬಿ ನಿರಂತರವಾಗಿ ಸೂಸುತ್ತಿರುವಂತೆ ದಿಗ್ಬ್ರಮೆ ಹುಟ್ಟಿಸುವ ವಿಶಿಷ್ಟತೆಯಲ್ಲಿ ದ್ವೇದೀಪ್ಯಮಾನವಾಗಿ, ಗರ್ಭಗುಡಿಯಲಿ ಹಚ್ಚಿಟ್ಟ ಜ್ಯೋತಿಯ ಹಾಗೆ ಬೆಳಗುತ್ತ ಹೊಳೆಯುತ್ತಿದ್ದವು. ಅಪ್ರತಿಮ ಸೌಂದರ್ಯದ ಅಪರಾವತಾರವೆನಿಸಬಹುದಾಗಿದ್ದ ಅವಳ ಮನೋಹರ ವದನವನ್ನು ನಿಜಕ್ಕೂ ಮಿತಿಗೊಳಿಸಿ ಸಾಮಾನ್ಯ ಮಟ್ಟಕ್ಕಿಳಿಯುವಂತೆ ಮಾಡಿದ್ದುದು ಅವಳ ಮೊಂಡು ಮೂಗು.. ಕೆಳಗೆ ಅಗಲವಾಗಿ ತುಸು ಮೇಲೆತ್ತಿದಂತೆ, ಚೂಪಿಲ್ಲದ ಮೊಂಡು ತುದಿ ತೀರಾ ಉದ್ದವಾಗಿರದೆ ತಟ್ಟನೆ ಇಂಗಿಹೋದಂತೆ ಕಣ್ಣಿನ ಹತ್ತಿರ ಮಾಯವಾಗಿದ್ದ ಕಾರಣ ಏನೊ ಕುಂದಿರುವಂತೆ ಭಾಸವಾಗಿ ಮುಖದ ಇತರ ಆಕರ್ಷಣೆಯನ್ನು ಮರೆ ಮಾಚಿಬಿಟ್ಟಿತ್ತು. ಆ ಕಿರು ವಿರೂಪವನ್ನೂ ಮರೆ ಮಾಚಿ ಆಕರ್ಷಣೆಯಿಂದ ಅವಳೆಡೆಗೆ ಸೆಳೆಯುವಂತೆ ಮಾಡುತ್ತಿದ್ದುದೆಂದರೆ ಪುಟ್ಟ ತೊಂಡೆ ಹಣ್ಣಿನ ತುಟಿಯೊಳಗವಿತಿದ್ದ ಮನೋಹರ ನಗೆ; ತೀರಾ ದೊಡ್ಡದಲ್ಲದ ಪುಟ್ಟ ಸಾಲಾದ ದಂತ ಪಂಕ್ತಿಯಿಂದಾಗಿ ಅವಳಿಗೊಂದು ಪುಟ್ಟ ಮಗುವಿನ ನಗುಮುಖವನ್ನು ಆರೋಪಿಸಿ ಅವಳ ವಯಸಿಗಿಂತ ಪುಟ್ಟ ಬಾಲೆಯ ಹಾಗೆ ಕಾಣುವಂತೆ ಮಾಡಿಬಿಡುತ್ತಿತ್ತು. ಆ ಇಡೀ ಸಾಂಪ್ರದಾಯಿಕತೆಯಲ್ಲಿದ್ದ ಏಕೈಕ ಆಧುನಿಕ ಸ್ಪರ್ಶವೆಂದರೆ ಉದ್ದವಾಗಿ ಬೆನ್ನ ಮೇಲರ್ಧ ಮತ್ತು ಭುಜದ ಮೇಲರ್ಧ ಹರಡಿಕೊಳ್ಳಲು ಬಿಟ್ಟ ಸೊಂಪಾದ ತುಸು ಗುಂಗುರಲೆಯಂತೆ ಚಾಚಿಕೊಂಡ ನೀಳವಾದ ಕೇಶರಾಶಿ...
ತದೇಕಚಿತ್ತನಾಗಿ ಅನ್ಯಮನಸ್ಕನಾಗಿ ಅವಳತ್ತಲೆ ನೋಡುತ್ತ ನಿಂತಿದ್ದವನಿಗೆ ಇದ್ದಕ್ಕಿದ್ದಂತೆ ಅವಳ ಪ್ರಶ್ನೆಗಿನ್ನು ತಾನು ಉತ್ತರಿಸಿಲ್ಲ ಎಂದು ನೆನಪಾಗಿ , ' ಯೆಸ್..ಇ ವಾಂಟು ಟೇಕ್ ದ ಟ್ರೈನ್..ವಾಟ್ ಆರ್ ಯೂ ಡೂಯಿಂಗ್ ಹಿಯರ್?' ಎಂದ. ತುಸು ಹೊತ್ತು ಅವಳೊಡನೆ ಮಾತನಾಡಿದಾಗ ಗ್ರಹಿಸಿದ್ದೆಂದರೆ, ಕೆಲ ದಿನಗಳ ಹಿಂದೆ ಅಲ್ಲಿನ ಅಂಗಡಿಯೊಂದರಿಂದ ತುಸು ದುಬಾರಿಯ ಪಾದರಕ್ಷೆಯೊಂದನ್ನು ಕೊಂಡು ಹೋಗಿದ್ದಳಂತೆ.. ಯಾಕೊ, ಅದರ ಅಳತೆ ಸರಿ ಬರದೆ ಒಂದೆರಡು ಬಾರಿ ನಡೆಯುವಾಗಲೆ ತೊಡರಿ ಬಿದ್ದಂತಾಗಿ, ಬದಲಿಸಬೇಕೆಂದುಕೊಂಡರೆ ಈ ಹಬ್ಬದ ದೆಸೆಯಿಂದಾಗಿ ಸಾಧ್ಯವಾಗಿರಲಿಲ್ಲ. ಈ ದಿನ ಹಬ್ಬ ಮುಗಿದಿರುವ ಕಾರಣ ತೆಗೆದಿದ್ದರೂ ತೆಗೆದಿರಬಹುದೆಂಬ ದೂರದಾಶೆಯಲ್ಲಿ ಬಂದಿದ್ದಳಂತೆ.. ಅವಳಿಗೂ ಲಿಪ್ಟ್ ನಡೆಯದ ತೊಂದರೆಯೆ ಎದುರಾಗಿ ನಿಧಾನವಾಗಿ ಮಹಡಿಯನ್ನೇರುತ್ತಿರುವಾಗ, ಅದೇ ಚಪ್ಪಲಿಯನ್ನೆ ಧರಿಸಿ ನಡೆಯುತ್ತಿದ್ದ ಕಾರಣ, ಮೆಟ್ಟಿಲ ಮೇಲೊಂದರ ಮೇಲೆ ಕಾಲಿಟ್ಟಾಗ ಮತ್ತೊಮ್ಮೆ ತೊಡರಿದಂತಾಗಿ ಜಾರಿ ಕೆಳಗೆ ಬಿದ್ದಳಂತೆ...ಈ ಬಾರಿ ಒಂದೆರಡು ಮೆಟ್ಟಿಲ ಹಂತದಿಂದ ಉರುಳಿದ ಕಾರಣ ಕಾಲು ಉಳುಕಿದಂತೆ ಭಾಸವಾಗಿ ಮೇಲೇಳಲಾಗದೆ , ಹತ್ತಿರ ಯಾರೂ ಇಲ್ಲದೆ ಅಸಹಾಯಕಳಾಗಿ ಒಬ್ಬಳೆ ಕೂತಿರಬೇಕಾದ ಸಂಧರ್ಭ ಒದಗಿ ಬಂದಿತ್ತು. ಪುಣ್ಯವಶಾತ್ ಶ್ರೀನಾಥ ಬಂದ ಕಾರಣ ಅವಳಿಗೆ ಹೋದ ಜೀವವೆ ಹಿಂದೆ ಬಂದಂತಾಗಿತ್ತು...ಇರದಿದ್ದರೆ ಅದೆಷ್ಟು ಹೊತ್ತು ಕೂತಿರಬೇಕಾಗುತ್ತಿತ್ತೊ ಏನೊ? ಅವಳು ಹೋಗಬೇಕಾಗಿದ್ದ ಅಂಗಡಿಯೂ ಮೊದಲ ಮಹಡಿಯಲ್ಲೆ ಇದ್ದರೂ ತೆಗೆದಿರುವುದೊ ಇಲ್ಲವೊ ಅವಳಿಗೂ ಖಚಿತವಿರಲಿಲ್ಲ. ಒಂದು ಛಾನ್ಸ್ ನೋಡೋಣವೆಂದುಕೊಂಡು ಬಂದಿರುವುದಾಗಿ ಹೇಳಿದಳು. ಆದರೆ ಅವಳಿದ್ದ ಪರಿಸ್ಥಿತಿಯಲ್ಲಿ ತಕ್ಷಣ ಮೇಲೆದ್ದು ನಡೆಯುವ ಸಲಕರಣೆಯಿರುವಂತೆ ಕಾಣಲಿಲ್ಲ. ಕನಿಷ್ಟ ಮತ್ತೊಂದಷ್ಟು ಹೊತ್ತು ಕೂತು ಸುಧಾರಿಸದೆ ಮೇಲೇಳಲು ಸಾಧ್ಯವಿಲ್ಲವೆಂದು ಅವಳಿಗೇ ಅನಿಸಿತ್ತು. ಆ ಹಿನ್ನಲೆಯಲ್ಲೆ ತನ್ನನ್ನು ಅಂಗಡಿಯ ತನಕ ಹೋಗಲಿಕ್ಕೆ ಸಹಾಯ ಮಾಡಲೂ ಸಾಧ್ಯವೆ? ಎಂದಾಗ ಏನೊ ಒಂದು ರೀತಿಯ ಪುಳಕಿತ ಭಾವ, ಭಾವೋತ್ಪಾತದ ಕಿಡಿಯೆಬ್ಬಿಸಿ ಅಲುಗಿಸಿದಂತೆನಿಸಿ, 'ಶ್ಯೂರ್..ವೈ ನಾಟ್..' ಎಂದಿದ್ದ. ಅವಳ ಕೈ ಹಿಡಿದು ಮೇಲೆ ನಿಲ್ಲಿಸಿ, ಅವಳ ತೋಳಿಗೆ ತನ್ನ ಭುಜದಾಸರೆಯನ್ನು ನೀಡಿ, ಅವಳು ಅರೆ ಕುಂಟುತ್ತಲೆ ನಿಧಾನವಾಗಿ ನಡೆಯಲು ಅನುವು ಮಾಡಿಕೊಟ್ಟ.. ಕಾರಿಡಾರಿನ ಆ ತುದಿಯತನಕ ನಡೆಯಬೇಕಿದ್ದ ಕಾರಣ ಆ ಹೊತ್ತಿನ್ನಲ್ಲೆ ಅವಳ ಮತ್ತಷ್ಟು ಚರಿತ್ರೆಯನ್ನು ಕೆದಕಲು ಸಾಧ್ಯವಾಗಿತ್ತು. ಅವಳು ಬ್ಯಾಂಕಾಕಿನ ಸರ್ಕಾರಿ ಸಂಸ್ಥೆಯೊಂದರಲ್ಲಿ ಆಡಳಿತಾತ್ಮಕ ಸಹಾಯಕಿಯಾಗಿ ಕೆಲಸಕಿದ್ದಾಳೆಂದು ತಿಳಿಯಿತು. ದೂರದ ಹುಟ್ಟೂರಿನಿಂದ ಕೆಲಸಕ್ಕಾಗಿ ಬ್ಯಾಂಕಾಕಿನಲ್ಲಿ ನೆಲೆಸಿದ್ದರೂ ಇಲ್ಲಿನ ಜೀವನ ವೆಚ್ಚದ ಹೊಡೆತ ತೀವ್ರವಾಗಿದ್ದ ಕಾರಣ ಅವಳಂತೆಯೆ ನಾಕಾರು ಸಹೋದ್ಯೋಗಿಗಳ ಜತೆ ದೂರದ ಬಡಾವಣೆಯೊಂದರಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದಳೆಂದು ತಿಳಿಯಿತು. ಹಾಗೆ ಅದೂ ಇದೂ ಮಾತನಾಡುತ್ತ ಅವನ ಅಪಾರ್ಟ್ಮೆಂಟು ಹತ್ತಿರದಲ್ಲೆ ಎರಡು ಮೂರೆ ಸ್ಟೇಷನ್ ಎಂದು ತಿಳಿದು, ತನ್ನ ಮನೆ ತುಂಬಾ ದೂರದಲ್ಲಿರುವ ಕಾರಣ, ತುಸು ಕಾಲು ವಾಸಿಯಾಗುವವರೆಗೆ ಯಾವುದಾದರೂ ನೋವು ಉಪಶಮನಕಾರಿ ಕ್ರೀಮು ಹಚ್ಚಿಕೊಂಡು ಒಂದೆರಡು ಗಂಟೆ ಅವನ ಅಪಾರ್ಟ್ಮೆಂಟಿನಲ್ಲೆ ವಿಶ್ರಮಿಸಬಹುದೆ? ಎಂದು ಕೇಳಿದಾಗ ಸ್ವರ್ಗಕ್ಕೆ ಏಣಿ ಹಾಕಿದ ಅನುಭೂತಿಯುಂಟಾಗಿ ಮನದಲ್ಲೆ ಏನೇನೊ ಮಂಡಿಗೆ ತಿನ್ನುತ್ತಲೆ 'ಹೂಂ' ಎನ್ನುವಂತೆ ತಲೆಯಾಡಿಸಿದ್ದ...ಹಾಗೆ ಮಾತಾಡುತ್ತಲೆ ಅವಳು ಮತ್ತೆ ಜಾರಿ ಬೀಳುವಂತಾಗಿ ಅವನ ಮೇಲೆ ಮತ್ತಷ್ಟು ಭಾರವಾಗುವಂತೆ ಒರಗಿದಾಗ ಯಾವುದೊ ಆಪ್ಯಾಯತೆಯ ಸುಮಧುರ ಅನುಭವ ಶ್ರೀನಾಥನನ್ನು ಕಾಡದಿರಲಿಲ್ಲ.
ಅವಳಂತೂ ತನ್ನೆಲ್ಲ ಭಾರವನ್ನು ಅವನ ಮೇಲೆ ಹಾಕಿ, ಒಂದು ಕೈಯಿಂದ ಅವನ ಬೆನ್ನನ್ನು ಬಳಸಿ ಹಿಡಿದುಕೊಂಡವಳೆ ಕುಂಟಿಕೊಂಡೆ ನಡೆಯತೊಡಗಿದಳು. ಅದಾವುದೊ ಆವೇಗ ಆವೇಶ ಬಂದವನಂತೆ ಶ್ರೀನಾಥನೂ ಧೈರ್ಯವಹಿಸಿ ತನ್ನ ಕೈಯನ್ನು ಅವಳ ಭುಜದ ಸುತ್ತ ಹಾಕಿ ಬಳಸಿ ತಬ್ಬಿ ಹಿಡಿದುಕೊಂಡವನೆ ಮುನ್ನಡೆಸತೊಡಗಿದ. ಈಗವಳ ಸಾಮೀಪ್ಯ ಎಷ್ಟು ನಿಕಟವಾಗಿತ್ತೆಂದರೆ ಅವಳು ಹಾಕಿಕೊಂಡಿದ್ದ ಸೆಂಟಿನ ಮಧುರವಾದ ಸುವಾಸನೆ ಅವಳ ಮೃದುವಾದ ಕೇಶದ ಸ್ಪರ್ಶದೊಂದಿಗೆ ಕಚಗುಳಿಯಿಡುತ್ತಲೆ ಅವನ ನಾಸಿಕವನ್ನು ಸೇರಿ ಯಾವುದೊ ಸ್ವಪ್ನ ಲೋಕಕ್ಕೆ ಒಯ್ಯುತ್ತಿರುವಂತೆ ಫೀಲಾಗತೊಡಗಿದ. ಅದೆ ಭ್ರಮಾತೀತ ಲೋಕದಲ್ಲಿ ತೇಲುತ್ತಿರುವ ಹಾಗೆ ಜಗದ ಪರಿವೆಯೆ ಇಲ್ಲದವನಂತೆ ನಡೆಯುತ್ತಿದ್ದವನಿಗೆ ಅವಳ ಕೈ ಭುಜದಿಂದ ಜಾರಿ, ಬೆನ್ನನ್ನು ಸವರಿಕೊಂಡೆ ಅವನ ಸೊಂಟವನ್ನು ಬಳಸಿ ಗಟ್ಟಿಯಾಗಿ ಹಿಡಿದುಕೊಂಡಾಗ ಅಲ್ಲೆ ಶಿಲೆಯಂತೆ ಮರಗಟ್ಟಿ ಹೋದ ಅನುಭವ...ಅವಳ ಹಸ್ತ ಅವನ ಪ್ಯಾಂಟಿನ ಹಿಂಬಂದಿಯ ಜೇಬಿನ ಮೇಲೆ ಭದ್ರವಾಗಿ ಕವುಚಿಕೊಂಡು ಅಪ್ಪಿದ ಹಾಗೆ ಕುಳಿತಿರುವ ಭಾವನೆ ಇಡೀ ಮೈಯಲ್ಲೆಲ್ಲ ವಿದ್ಯುತ್ತನೆ ಹರಿಸಿದಂತಾಗಿ ಸಾಧ್ಯವಾದಷ್ಟು ನಿಧಾನದಲೆ ನಡೆಯತೊಡಗಿದ - ಅವಳ ಅಪ್ಪುಗೆಯ ಜತೆ ಅವಳ ಹಸ್ತದ ಹಿತವಾದ ಮರ್ದನ ಸುಖವನ್ನು ಅನುಭವಿಸುತ್ತ... ಹೀಗೆ ಅದೆಷ್ಟು ಹೊತ್ತು ಕಳೆಯಿತೊ? ಅವಳು ತಟ್ಟನೆ ಒಂದೆಡೆ ನಿಂತವಳೆ ಅಲ್ಲಿದ್ದ ಮುಚ್ಚಿದ್ದ ಅಂಗಡಿಯೊಂದರತ್ತ ಬೊಟ್ಟು ಮಾಡಿ ಪೆಚ್ಚು ಮುಖದಲ್ಲಿ 'ಇದೆ ಅಂಗಡಿ' ಎಂದಳು. ಇವನೂ ಅದನ್ನೆ ನಿರೀಕ್ಷಿಸಿದ್ದ ಕಾರಣ ನಿರಾಶೆಯೇನೂ ಆಗದಿದ್ದರೂ, ಅವನಪ್ಪುಗೆಯಲಿದ್ದವಳು ಬಿಡಿಸಿಕೊಂಡು ನಿಲ್ಲುವ ಹಾಗಾಯ್ತಲ್ಲ ಎಂದು ನಿರಾಸೆಯಲ್ಲಿ ಪರಿತಪಿಸುತಿದ್ದವನಿಗೆ, ಇದ್ದಕ್ಕಿದ್ದಂತೆ ಅವಳು ಮನೆಗೆ ಬರುವೆನೆಂದು ಹೇಳಿದ್ದು ನೆನಪಾಗಿ ಅದನ್ನೆ ಅವಳಿಗೆ ನೆನಪಿಸಿದ. ಅವಳೂ ಅದನ್ನನುಮೋದಿಸುವವಳಂತೆ ತಲೆಯಾಡಿಸುತ್ತ ಎದುರಿನ ಮೂಲೆಯಲ್ಲಿ ಕಾಣುವ ದ್ವಾರದತ್ತ ಕೈ ತೋರಿಸಿದ್ದಳು...ಅದೃಷ್ಟವಶಾತ್ ಈ ಬಾಗಿಲು ಟ್ರೈನ್ ಸ್ಟೇಷನ್ನಿಗೆ ಇದ್ದ ಮತ್ತೊಂದು ಕೊಂಡಿಯಾಗಿದ್ದ ಕಾರಣ ಅಲ್ಲಿಂದಲೆ ಸ್ಟೇಶನ್ ತಲುಪುವ ದಾರಿ ಕಂಡಂತಾಗಿತ್ತು - ಮಾಮೂಲಿನದಕ್ಕಿಂತ ತುಸು ಬಳಸಿನದಾದರೂ. ಒಬ್ಬರನ್ನೊಬ್ಬರು ಅಪ್ಪಿಕೊಂಡಂತೆಯೆ ಅದರ ಹತ್ತಿರ ಬರುವ ಹೊತ್ತಿಗೆ ಸರಿಯಾಗಿ ಆ ಯುವತಿ ಪಕ್ಕದಲ್ಲಿ ಕಾಣುತಿದ್ದ ಮತ್ತೊಂದು ಮೆಟ್ಟಿಲ ಕಡೆ ತೋರಿಸುತ್ತ ' ಟಾಯ್ಲೆಟ್ಟಿಗೆ' ಹೋಗಿ ಬರುವುದಾಗಿ ಹೇಳಿದಳು...ಅಲ್ಲಿ ಕೇವಲ ಏಳೆಂಟು ಮೆಟ್ಟಿಲು ಹತ್ತಿಳಿದರೆ ಸಾಕು - ಅಲ್ಲೊಂದು ಟಾಯ್ಲೆಟ್ಟು ಇದೆಯೆಂದಾಗ ಅವಳ ಜತೆಗೆ ಹೊರಡಲ್ಹೊರಟವನನ್ನು ಹುಸಿ ಮುನಿಸಿನ ನಗೆಯೊಂದನ್ನು ನಕ್ಕು ' ಇಟ್ ಈಸ್ ಫಾರ್ ಲೇಡೀಸ್ ಓನ್ಲಿ.. ಯೂ ಕ್ಯಾನಾಟ್ ಗೋ..' ಎಂದವಳೆ ಮುಸಿ ಮುಸಿ ನಗುತ್ತ ತಾನೊಬ್ಬಳೆ ಇಳಿದು ಹೋಗಿದ್ದಳು...ಅವಳು ಹೋಗಿ ಬರುವುದನ್ನೆ ಕಾತುರ, ಅಸಹನೆ, ಚಡಪಡಿಕೆಗಳೊಂದಿಗೆ ಶತಪಥ ಹಾಕುತ್ತಲೆ ಮನದ ಊಹಾ ಸಾಮ್ರಾಜ್ಯದಲ್ಲೇನೇನೊ ಕಲ್ಪನೆಯ ಗಾಳಿ ಗೋಪುರವನ್ನು ಕಟ್ಟುತ್ತ ಕನಸು ಕಾಣತೊಡಗಿದ್ದ ಶ್ರೀನಾಥ...
'ಇವಳಾರೊ ಒಳ್ಳೆಯ ಕೆಲಸದಲ್ಲಿರುವ ಸಂಭಾವಿತ ಹೆಣ್ಣಿನ ಹಾಗೆ ಕಾಣುತ್ತಾಳೆ.. ಬಹುಶಃ ಏಕಾಂಗಿತನದಿಂದಲೊ ಅಥವಾ ಮತ್ತಾವ ಭಾವ ತೀವ್ರತೆಗೊ ಸಾಂಗತ್ಯವೊಂದರ ಅಗತ್ಯ ಅವಳಿಗೂ ಇರುವಂತೆ ತೋರುತ್ತಿದೆ..ಈಗ ಆಗಿರುವ ಪರಿಚಯದ ಸಖ್ಯವನ್ನು ಮತ್ತಷ್ಟು ಬಲಪಡಿಸಿ ಹತ್ತಿರವಾದರೆ ಇಲ್ಲಿರುವಾಗಿನ ಏಕಾಂತಕೊಬ್ಬಳು ಕೆಳೆ ಸಿಕ್ಕಿದಂತಾಗುತ್ತದೆ...ತೀರಾ ಅಪಾಯಕಾರಿಯಲ್ಲದ ನೇರ ದಾರಿಯಲ್ಲಿ ಹೋಗಬಹುದು ಯಾವುದೆ ಅಡ್ಡಿ, ಆತಂಕಗಳ ಭೀತಿಯಿರದೆ. ಸಾಂಗತ್ಯದ ಕೆಳೆ ಅವಳಿಗೂ ಗುಟ್ಟಾಗಿದ್ದರೆ ಸರಿಯಿರಬೇಕೆಂದು ಕಾಣುತ್ತದೆ..ಹೀಗಾಗಿ ಇಬ್ಬರಿಗೂ ಹೊಂದುತ್ತದೆಯೇನೊ....ಈಗ ನೇರ ಮನೆಗೆ ಹೋಗುವುದೊ ಅಥವಾ ಊಟ ಮುಗಿಸಿ ನಂತರ ಹೋಗುವುದೊ? ಅವಳೇ ಬರಲಿ, ಕೇಳಿ ನಿರ್ಧರಿಸಿದರಾಯ್ತು....' ಹೀಗೆಲ್ಲಾ ತರಹಾವರಿ ಆಲೋಚನೆಯಲ್ಲಿ ಕಳುವಾದವನಿಗೆ ಸಮಯವುರುಳಿದ್ದರ ಪರಿವೆಯೆ ಆಗಲಿಲ್ಲ. ಆಗೊಮ್ಮೆ ಇದ್ದಕ್ಕಿದ್ದಂತೆ ಎಚ್ಚರವಾದಂತಾಗಿ ಅರೆ ಇದೇನು ಅರ್ಧ ಗಂಟೆಯಾದರೂ ಇವಳು ಪತ್ತೆಯಿಲ್ಲವಲ್ಲ ? ಎಂದು ಕಳವಳಿಸತೊಡಗಿದ. ಈಗ ಬರಬಹುದು, ಆಗ ಬರಬಹುದು ಎನ್ನುವ ತಪನೆಯಲ್ಲೆ ಮತ್ತೆ ಹದಿನೈದು ನಿಮಿಷ ಉರುಳಿದಾಗ ಯಾಕೊ ಅನುಮಾನವಾಗಿ ಕೆಳಗಿಳಿದು ನೋಡಿದರೆ - ಅಲ್ಲಿ ಟಾಯ್ಲೆಟ್ಟ್ ಇರುವ ಸುಳಿವೆ ಇಲ್ಲ...! ಆ ಹಾದಿ ನೇರವಾಗಿ ಕೆಳಗಿಳಿಸುತ್ತ ಹೊರಗೆ ಹೋಗುವ ಮತ್ತೊಂದು ಹೆಬ್ಬಾಗಿಲಿನತ್ತ ಮುಖ ಮಾಡಿಕೊಂಡು ನಿಂತಿದ್ದೂ ಅರಿವಾಯ್ತು..ಆ ಗಳಿಗೆಯಲ್ಲಿ ಅವಳು ಇವನಿಗೆ ಕೈ ಕೊಟ್ಟು ಹೋಗಿರಬಹುದೆಂಬ ನಂಬಲಾಗದ ಅನಿಸಿಕೆ ಗಾಢವಾಗತೊಡಗಿದರೂ, ಯಾಕೊ ಅವಳೆಲ್ಲೊ ಅಲ್ಲೆ ಟಾಯ್ಲೆಟ್ಟೊಂದರಲ್ಲಿರಬೇಕು...ಇನ್ನೇನು ಬಂದುಬಿಡುತ್ತಾಳೆಂಬ ಭಾವನೆಯನ್ನು ತೊಡೆಯಲು ಸಾಧ್ಯವೆ ಆಗಲಿಲ್ಲ...
ಬಹುಶಃ ಅದನ್ನು ತೊಡೆಯಲು ಆ ದಿನವೆಲ್ಲಾ ಹಾಗೆ ನಿಂತಿದ್ದರೂ ಸಾಧ್ಯವಾಗುತ್ತಿರಲಿಲ್ಲವೊ ಏನೊ - ಯಾವುದೊ ಕಾರಣಕ್ಕೆ ಅವನ ಪ್ಯಾಂಟಿನ ಹಿಂದಿನ ಜೇಬಿಗೆ ಕೈ ಹಾಕಲು ಹೋಗಿರದಿದ್ದರೆ..ಅಲ್ಲಿ ತಗುಲಿದ ಕೈಗೆ ಸಾಧಾರಣವಾಗಿ ತಟ್ಟನೆ ಸಿಗುತ್ತಿದ್ದ ದಪ್ಪನೆಯ ಮೊಬೈಲ್ ಪೋನಿನ ಒರಟು ಮೈ ಬದಲಿಗೆ ಪ್ಯಾಂಟಿನ ಬರಿ ಮೆತ್ತೆಯ ಅನುಭವವಾದಂತೆ ಅನಿಸಿದಾಗ ಕೈ ಹಾಕಿ ನೋಡಿದರೆ - ಅಲ್ಲೆಲ್ಲಿದೆ ಮೊಬೈಲ್? ಬರೀ ಖಾಲಿ ಜೇಬು...!
ಆ ಕ್ಷಣದಲ್ಲಿ ಏನಾಗಿರಬಹುದೆಂದು ಪ್ರಜ್ಞೆಯಾಳಕ್ಕೆ ಅರಿವಾಗಿ ದಿಗ್ಭ್ರಮೆಯಿಂದ ದಿಗ್ಮೂಢನಾಗುತ ಸ್ತಂಭೀಭೂತನಾದಂತೆ ಶ್ರೀನಾಥ ಅಚಲನಾಗಿ ಅಲ್ಲೆ ನಿಂತುಬಿಟ್ಟ.. ಅದೇ ಹೊತ್ತಿಗೆ ಮತ್ತೇನೊ ನೆನಪಾದವನಂತೆ ಬಲದ ಕೈ ತಟ್ಟನೆ ಪ್ಯಾಂಟಿನ ಮುಂದಿನ ಜೇಬಿನತ್ತ ಸರಿದು ಒಳಗೆ ಕೈ ತೂರಿಸಿತು, ಅಲ್ಲಿಟ್ಟಿದ್ದ ಪರ್ಸಿಗಾಗಿ ....
ಹಲವಾರು ಕಾರ್ಡುಗಳು , ಪೋನು ನಂಬರುಗಳು ಮತ್ತು ಸಾವಿರಗಟ್ಟಲೆ ಹಣವಿದ್ದ ಪರ್ಸು ಮತ್ತು ಆ ದಿನಗಳಲ್ಲಿ ಅತಿ ಅಪರೂಪವಾಗಿದ್ದ ದುಬಾರಿಯ ಮೊಬೈಲು - ಎಲ್ಲವನ್ನೂ ಎಗರಿಸಿದ್ದ ಆ ಚಾಲಾಕಿ ಹುಡುಗಿ, ಅವನ ಶರ್ಟಿನ ಜೇಬಿನಲ್ಲಿದ್ದ ಐವತ್ತು ಬಾತಿನ ಹೊರತಾಗಿ ಮತ್ತೆಲ್ಲವನ್ನು ಕಬಳಿಸಿ, ಅವನನ್ನು ಅನಾಥನಂತೆ , ತಬ್ಬಲಿಯಂತೆ ಒಂಟಿಯಾಗಿ ನಿಲ್ಲಿಸಿ ಹೇಳದೆ ಕೇಳದೆ ಮಾಯವಾಗಿಬಿಟ್ಟಿದ್ದಳು ...!
(ಇನ್ನೂ ಇದೆ)
_____________
Comments
ಉ: ಕಥೆ: ಪರಿಭ್ರಮಣ..(14)
ಶ್ರೀನಾಥನ ಅವಸ್ಥೆಗಳಂತು ಮುಗಿಯುವಂತೆ ತೋರುತ್ತಿಲ್ಲ, ಓದುತ್ತ ಮೈಮರೆತಾಗ ಒಮ್ಮೊಮ್ಮೆ ಬರಹದ ಓಘದಲ್ಲಿ ಲೇಖಕರ ಸ್ವ ಅನುಭವದಂತೆ ಮನಸನ್ನು ತುಂಬಿಬಿಡುವುದು :)
In reply to ಉ: ಕಥೆ: ಪರಿಭ್ರಮಣ..(14) by partha1059
ಉ: ಕಥೆ: ಪರಿಭ್ರಮಣ..(14)
ಕಥೆಯನ್ನು ನೀವು ಹೇಳಬೇಕು ನಾವು ಕೇಳಬೇಕು. ತುಂಬಾ ಚೆನ್ನಾಗಿ ವಿವರಿಸಬಲ್ಲಿರಿ. ಕಥೆಯ ಆಸಕ್ತಿಯನ್ನು ತುಂಬಾ ಚೆನ್ನಾಗಿ ಕಾಪಾಡುತ್ತಾ ಇನ್ನೂ ಹೇಳಿ, ಮತ್ತು ಹೇಳಿ. ಮತ್ತೆ ಭೇಟಿಯಾಗುವ !
In reply to ಉ: ಕಥೆ: ಪರಿಭ್ರಮಣ..(14) by venkatesh
ಉ: ಕಥೆ: ಪರಿಭ್ರಮಣ..(14)
ವೆಂಕಟೇಶ್ ಸಾರ್ ನಮಸ್ಕಾರ ಮತ್ತು ಧನ್ಯವಾದ ಸಹ! ಒಂದು ರೀತಿ ನಿಮ್ಮ ಮಾತು ತುಂಬಾ ಅರ್ಥ ಪೂರ್ಣ - ಮೊದಲಿಗೆ ಸಣ್ಣ ಕಥೆಯೆಂದುಕೊಂಡು ಬರೆಯಹೊರಟೆ...ಶುರುವಿನಲ್ಲೆ ಅನಿಸಿತು - ಇಲ್ಲಾ ಇಲ್ಲಾ ಇದು ನೀಳ್ಗಥೆಯಾದೀತು ಎಂದು. ಒಂದೆರಡು ಕಂತು ಮುಗಿಯುವಷ್ಟರಲ್ಲಿ ಅನಿಸಿತು ಇಲ್ಲಾ ಇದು ನೀಳ್ಗಥೆಯ ಅಳವನ್ನು ಮೀರಿದ್ದು ಎಂದು. ಈಗ ನೋಡಿದರೆ ಮಿನಿ ಕಾದಂಬರಿಯಾಗುವಂತೆ ಕಾಣುತ್ತಿದೆ. ನಾನು ಕಥೆಯ ರೂಪುರೇಷೆ ಹಾಕಿದಾಗ ಮೂಲ ಬಂಡವಾಳದಂತೆ ಹಾಕಿದ್ದ ಬುಲೆಟ್ ಪಾಯಿಂಟುಗಳು ಸುಮಾರು ನಲವತ್ತೊ ಐವತ್ತೊ ಇರಬಹುದು. ಇಲ್ಲಿಯತನಕ ಇನ್ನು ಹತ್ತದಿನೈದು ಪಾಯಿಂಟುಗಳು ಬಾಕಿಯಿವೆ. ಆ ಅಂದಾಜಿನ ಮೇಲೆ ಹೇಳುವುದಾದರೆ - ಇಪ್ಪತ್ತು ಕಂತು ಆಗಬಹುದೇನೊ ಅನಿಸುತ್ತಿದೆ! ನೋಡೋಣ - ತಮಗೆ ಹೀಗೆ ಹಿಡಿಸುವಂತೆ ಉಳಿದ ಕಂತುಗಳೂ ಮೂಡಿ ಬರಲೆಂದು ಆಶಿಸುವೆ :-)
In reply to ಉ: ಕಥೆ: ಪರಿಭ್ರಮಣ..(14) by partha1059
ಉ: ಕಥೆ: ಪರಿಭ್ರಮಣ..(14)
ಪಾರ್ಥಾ ಸಾರ್ ನಮಸ್ಕಾರ, ಕಥೆಯ ಮೂಲ ಉದ್ದೇಶ / ಬಂಡವಾಳವೆ ಶ್ರೀನಾಥವೆಂಬ ಸಂಕೀರ್ಣ ವ್ಯಕ್ತಿತ್ವದ ಅನಾವರಣ ಮತ್ತು ಅದರ ನೆಪದಲ್ಲಿ ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳ ಹೂರಣವನ್ನು ಸರಿ-ತಪ್ಪೆಂದು ವಿಶ್ಲೇಷಿಸದೆ ಬಿಚ್ಚಿಡುತ್ತಾ ಹೋಗುವುದು. ಇಡೀ ಬರಹವೆ ಶ್ರೀನಾಥನ ಮುಖೇನ ಹೇಳಿಸುತ್ತಿರುವ ಕಥನವಾದ ಕಾರಣ ಆ ಪಾತ್ರದೊಳಗೆ ಲೇಖಕ ತಾನೆ ಹೊಕ್ಕಂತೆ ಬರೆಯುವ ಅನಿವಾರ್ಯತೆ ಒಂದೆಡೆಯಾದರೆ, ಕೆಲವೆಡೆ ಆ ಪಾತ್ರದಿಂದ ತುಸು ಪಕ್ಕಕ್ಕೆ ಸರಿದು ನಿರ್ಲಿಪ್ತತೆಯಿಂದ ಗಮನಿಸುವ ವೀಕ್ಷಕನ ಪಾತ್ರ ನಿಭಾಯಿಸಬೇಕಾಗುತ್ತದೆ. ಬರೆಯುವ ಓಘದಲ್ಲಿ ಈ ಎರಡು ಅವತಾರಗಳಲ್ಲಿ ಯಾವಾಗ ಯಾವ ಸ್ವರೂಪ ಅಭಿವ್ಯಕ್ತವಾಗುತ್ತಿದೆಯೊ ಎಂಬುದು ಅರಿವಾಗುವುದಿಲ್ಲ. ಕೆಲವೊಮ್ಮೆಯಂತೂ ಎರಡು ಅವತಾರಗಳು ಅಡ್ಡಾದಿಡ್ಡಿಯಾಗಿ ಮಿಶ್ರಣವಾಗುತ್ತ, ಬೇರಾಗುತ್ತ ನಡುವಿನ ತೆಳುವಾದ ರೇಖೆಯೆ ಮಾಸಿ ಹೋದಂತೆನಿಸುತ್ತದೆ. ಆದರೆ ಈ ರೀತಿ ಬರೆಯುವ ಮೊದಲ ಅನುಭವವಾದ ಕಾರಣ ಕಲಿಕೆಯ ರೀತಿ ಹಾಗೆಯೆ ಮುಂದುವರೆಸಿದ್ದೇನೆ. ನಿಮಗೆ ಅದು ಕೆಲವೆಡೆ ಲೇಖಕನ ಅನುಭವವೇನೊ ಅನ್ನುವ ಅನುಭೂತಿ ಹುಟ್ಟಿಸಿದ್ದರೆ, ಅದಕ್ಕೆ ಬಹುತೇಕ ಈ ದ್ವಂದ್ವದ ತಾಕಲಾಟವೂ ಕಾರಣವಿರಬಹುದು!
ಶ್ರೀನಾಥನ ಅವಸ್ಥೆಗೆ ಮುಕ್ತಿ? - ಇನ್ನು ಸ್ವಲ್ಪ ಕಾದು ನೋಡೋಣ :-)
ಉ: ಕಥೆ: ಪರಿಭ್ರಮಣ..(14)
ಕಥೆ ಮತ್ತೆ ಟ್ರ್ಯಾಕಿಗೆ ಮರಳಿದೆ! ಶ್ರೀನಾಥನಿಗೆ ಬುದ್ಧಿ ಕಲಿಸಿದ ಚಾಲಾಕಿ ಹುಡುಗಿ! :)
In reply to ಉ: ಕಥೆ: ಪರಿಭ್ರಮಣ..(14) by kavinagaraj
ಉ: ಕಥೆ: ಪರಿಭ್ರಮಣ..(14)
ಶ್ರೀನಾಥನ ಜಾಗದಲ್ಲಿ ನಾವಿಡ್ದಿದ್ದರು ಅದನ್ನೇ ಮಾಡುತ್ತಿದ್ದೆವು. ಸ್ವಲ್ಪ ಬೇರೆ ರೀತಿಯಲ್ಲಿ ಆಲ್ಲವೇ ?!
In reply to ಉ: ಕಥೆ: ಪರಿಭ್ರಮಣ..(14) by venkatesh
ಉ: ಕಥೆ: ಪರಿಭ್ರಮಣ..(14)
ವೆಂಕಟೇಶ್ ಸರ್, ಬಹುಶಃ ಯಾರದೆ ಪ್ರತಿಕ್ರಿಯೆಯೂ ಅವರ ವ್ಯಕ್ತಿತ್ವದನುಸಾರವೆ ಪ್ರಕಟವಾಗುತ್ತದೆಯೆನಿಸುತ್ತದೆ. ಈ ರೀತಿಯ ಅಪರಿಚಿತ ಸ್ಥಳದಲ್ಲಿ ಬಹುಶಃ ಪ್ರಚೋದನೆ ಮತ್ತು ಪ್ರಲೋಭನೆ ಹೆಚ್ಚಿದ್ದು ವಿವೇಚನಾ ಶಕ್ತಿ ಹಿನ್ನಲೆಗೆ ಸರಿಯುವುದು ನಿಜವಾದರೂ, ಈ ರೀತಿಯ ಭಂಡತನದ ಕಾರ್ಯಕ್ಕು ಮೊಂಡು ಧೈರ್ಯವಿರಬೇಕೇನೊ.. ಅದು ಎಲ್ಲರಲ್ಲೂ ಇರಲಾರದೆಂದು ನನ್ನ ಭಾವನೆ.. ಆದರೆ ಕೆಲವು ಬಾರಿಯ ಸೋಲಿನ ಅನುಭವವೂ ಭಂಡ ಧೈರ್ಯ ತಂದುಕೊಡಬಹುದು ಅಥವಾ ಹೇಡಿಯಾಗಿಸಿ ಹಿನ್ನಲೆಗೆ ಸರಿಸಿಬಿಡಬಹುದು. ಒಟ್ಟಾರೆ ಈ ಸಂಧರ್ಭಗಳಲ್ಲಿನ ಖಳನಾಯಕ - ಆಗಿನ ಪರಿಸರ ಮತ್ತು ಪರಿಸ್ಥಿತಿಯ ಜತೆಗೆ ಸಂಘಟನೆಯ ಆಕಸ್ಮಿಕತೆ ಎನ್ನಬಹುದೇನೊ? :-)
In reply to ಉ: ಕಥೆ: ಪರಿಭ್ರಮಣ..(14) by kavinagaraj
ಉ: ಕಥೆ: ಪರಿಭ್ರಮಣ..(14)
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಈ ಚಾಲಾಕಿ ಹುಡುಗಿಯ ಪ್ರಸಂಗದ ಹಿನ್ನಲೆ ಸ್ವಲ್ಪ ಕುತೂಹಲಕಾರಿಯಾಗಿದೆ. ನನ್ನ ಸ್ವಂತ ಅನಿಸಿಕೆಯಲ್ಲಿ ಈ ರೀತಿಯ ಕೆಟ್ಟ ಅನುಭವವಾಗುವ ಸಾಧ್ಯತೆ ಕಡಿಮೆ - ಇಲ್ಲಿನ ಜನರ ಮೃದು ಸ್ವಭಾವ, ನಡತೆ ನೋಡಿದರೆ ಅವರು ಈ ರೀತಿ ಮಾಡಬಲ್ಲರೆಂದು ಊಹಿಸುವುದು ಕಷ್ಟ. ಎಲ್ಲೊ ಅಲ್ಲಿಲ್ಲೊಂದು ಈ ತರದ ಅನುಭವವಾಗಿರಬಹುದಾದರೂ ಸಾಮಾನ್ಯ ಸ್ತರದಲ್ಲಿ ಇದು ಅಪರೂಪವೆ ಎನ್ನಬಹುದು. ಆದರೆ, ಪರಿಚಿತರೊಬ್ಬರು ಥಾಯ್ಲ್ಯಾಂಡಿನ ಊರೊಂದರಲ್ಲಿ (ಬ್ಯಾಂಕಾಕಿನಲ್ಲಲ್ಲ) ಯಾರಿಗೊ ಈ ತರದ ಅನುಭವವಾಗಿತ್ತಂತೆ ಎಂದು ಅಂತೆ ಕಂತೆ ಹೇಳಿದ್ದರು...ಆ ಅಂತೆ ಕಂತೆ ಆಧಾರದ ಮೇಲೆ ಅದು ಸಹಜವಾಗಿ ನಡೆವ ಘಟನೆಯೆಂದು ವರ್ಗಿಕರಿಸುವುದು ಸರಿಯಲ್ಲವೆಂದುಕೊಂಡಿದ್ದಾಗಲೆ, ಈಚಿನ ದಿನಗಳಲ್ಲಿ ಥಾಯ್ಲ್ಯಾಂಡಿನಲ್ಲಿ ಚಿತ್ರಿಸಿದ್ದ ಹಿಂದಿ ಚಿತ್ರವೊಂದರಲ್ಲಿ ಇದೆ ರೀತಿಯ ವಿಭಿನ್ನ ಅನುಭವವೊಂದು ಕಾಣಿಸಿಕೊಂಡಿತ್ತು. ನಿಜವೊ, ಸುಳ್ಳೊ - ಇವೆಲ್ಲ ಮನಸತ್ವದ ಸ್ತರದಲ್ಲಿ ನಡೆಯುವ ಪ್ರಕ್ರಿಯೆಗಳಾದ ಕಾರಣ ಎಲ್ಲಿಯಾದರೂ ನಡೆಯಬಹುದೆನಿಸಿತು - ಬಹುಶಃ ಇಲ್ಲಿ ಅದರ ಪರಿಮಾಣ ಬೇರೆಡೆಗಿಂತ ಕಡಿಮೆಯಿರಬಹುದೇನೊ? ಆದರೆ ಅಲ್ಲಿನ ವ್ಯಾಪಾರಿ ಪ್ರವೃತ್ತಿಗೆ ತೀರಾ ವಿರುದ್ಧವಾದ ಎಂಬಿಕೆ ಮಾಲ್ ವಿವರಣೆಗೆ ಇದು ಹಿನ್ನಲೆಯಾಗಿ ಸೂಕ್ತವಾದೀತು ಅನಿಸಿ ಅದನ್ನೆ ಬಳಸಿದೆ - ಶ್ರೀನಾಥನ ವ್ಯಕ್ತಿತ್ವದ ದೌರ್ಬಲ್ಯವನ್ನು ಮತ್ತಷ್ಟು ಗಟ್ಟಿಯಾಗಿ ಹೇಳಲನುವಾಗುವಂತೆ :-)
In reply to ಉ: ಕಥೆ: ಪರಿಭ್ರಮಣ..(14) by nageshamysore
ಉ: ಕಥೆ: ಪರಿಭ್ರಮಣ..(14)
ಇದನ್ನು ಸರಿಯಾಗಿ ಹೇಳಬೇಕೆಂದರೆ, ಕಥೆ ಹೇಳುವ ಪರಿಯನ್ನು ಕುರಿತು. ತುಂಬಾ ಸೊಗಸಾಗಿದೆ. ಬೇರೆ ಒಂದು ಪ್ರಸಂಗವನ್ನು ಕುರಿತು ಬರೆಯಿರಿ. ಆಗ ನಮಗೆ ಚೆನ್ನಾಗಿ ಅರ್ಥವಾಗುತ್ತದೆ. ಪಾರ್ಥರವರ ವಿಶ್ಲೇಷಣೆ ನಿಜಕ್ಕೂ ಚೆನ್ನಾಗಿದೆ, ಅರ್ಥಗರ್ಭಿತವಾಗಿದೆ. ಶುರುವಿನಲ್ಲಿ ಕಥೆ ಬೆಳೆಯುತ್ತಾ ಹೋದಂತೆ, ಸ್ವಲ್ಲ ಬೇರೆಡಿಕ್ಕಿಗೆ ಸಾಗುತ್ತದೆ. ನಿರ್ಜನ ಪ್ರದೇಶ, ಒಂಟಿ ಹೆಣ್ಣು, ಅವಳಿಗೆ ಮಾನವೀಯತೆ ದೃಷ್ಟಿ ಇಂದ ಸಹಾಯದ ಅಗತ್ಯವಿದೆ. ಸರಿ. ಪ್ರಾಯದ ಹುಡುಗ ಆ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಪರಿ, ಹಾಗೂ ಅದಕ್ಕೆ ಸ್ಪಂದಿಸುವ ಆ ಚಾಲಾಕಿ ಹೆಣ್ಣಿನ ಧಾರ್ಷ್ಯತೆಗಳು ಪ್ರಶ್ನಿಸಲು ಗ್ರಾಸ ಕೊಡುತ್ತವೆ.
In reply to ಉ: ಕಥೆ: ಪರಿಭ್ರಮಣ..(14) by venkatesh
ಉ: ಕಥೆ: ಪರಿಭ್ರಮಣ..(14)
ವೆಂಕಟೇಶ ಸರ್, ಕಥಾನಕ ಮುಂದುವರೆದಂತೆ ಮತ್ತಷ್ಟು ಪ್ರಸಂಗಗಳು ಸೇರಿಕೊಳ್ಳಲಿವೆ. ಸದ್ಯಕ್ಕೆ ಮೂರನೆ ಅಧ್ಯಾಯವಾದ 'ಅಧಃಪತನ' ಕೊನೆಯ ಹಂತ ತಲುಪುತ್ತಾ ಇದೆ. ಆಮೇಲಿನ ಕೊನೆಯ ಅಧ್ಯಾಯ 'ಆರೋಹಣ'ದಲ್ಲಿ ಸಹ ಮತ್ತಷ್ಟು ಪ್ರಸಂಗಗಳ ಉಲ್ಲೇಖ ಬರಲಿದೆ. ಒಟ್ಟಾರೆ ಪರಸ್ಪರ ಸಂಬಂಧಿಸದ ಹಾಗೂ ಸಂಬಂಧಿಸಲ್ಪಟ್ಟ ಆಗು ಹೋಗುಗಳ ಸಮಷ್ಟಿ ಮೊತ್ತಗಳೆಲ್ಲದರ ಸಮಗ್ರ ಪರಿಣಾಮವನ್ನು ಒಂದು ವ್ಯಕ್ತಿತ್ವದ ಪಟ್ಟಕದಡಿ ತಂದಿಡುವ ಯತ್ನ - ಆ ಮನಸತ್ವದ ತೊಳಲಾಟ, ಆಲಾಪ, ವಿಲಾಪಗಳ ಮುಖೇನ. ತಾವು ಘಟನೆಗಳ ಆಳಕ್ಕಿಳಿದು ವಿಶ್ಲೇಷಿಸುತ್ತಿರುವ ದೃಷ್ಟಿಕೋನ ಮೆಚ್ಚಿಗೆಯಾಯ್ತು :-)