ಕಥೆ: ಪರಿಭ್ರಮಣ..21

ಕಥೆ: ಪರಿಭ್ರಮಣ..21

(ಪರಿಭ್ರಮಣ..(20)ರ ಕೊಂಡಿ - http://www.sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0... )

ವೇರ್ಹೌಸಿನ ಮೂಲೆಯೊಂದರತ್ತ ನಡೆದು ಷೆಲ್ಪುಗಳಿಂದ ಸರಕನ್ನು ಆಯ್ದುಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬಾತನ ಕೆಲಸವನ್ನು ಗಮನಿಸುತ್ತ ಹೊಸ ಸಿಸ್ಟಂ , ಪಿಕ್ ಸ್ಲಿಪ್ ಫಾರಂಗಳು ಹೇಗೆ ಕೆಲಸ ಮಾಡುತ್ತಿವೆಯೆಂದು ಸ್ವತಃ ಪರಿಶೀಲಿಸುತ್ತ ನಿಂತಿದ್ದ ಶ್ರೀನಾಥ. ಅದು ಗೋ ಲೈವ್ ನಂತರದ ಮೂರನೇ ದಿನ. ಕಡೆಗಳಿಗೆಯ 'ಆಘಾತ'ಗಳನ್ನೆಲ್ಲ ನಿವಾರಿಸಿಕೊಂಡು ಮುಳುಗುವಂತಿದ್ದ ಹಡಗನ್ನು ಹೇಗೊ ತೇಲಿಸಿ ಹೊಸ ಆರಂಭದ ಮೊದಲ ದಿನವೆ ಬಂದೊದಗಬಹುದಾಗಿದ್ದ ದೊಡ್ಡ ಅವಘಡವನ್ನು ಬದಿಗೆ ಸರಿಸುವಲ್ಲಿ ಯಶಸ್ವಿಯಾಗಿತ್ತು ಶ್ರೀನಾಥನ ಸಮಯೋಚಿತ ಶಸ್ತ್ರ ಚಿಕಿತ್ಸೆಯಿಂದಾಗಿ. ದೇವ್ ಜತೆ ಕಟ್ಟಕಡೆಗಳಿಗೆಯಲ್ಲಿ ಆರಂಭಿಸಿದ ಸಮರೋಪಾದಿಯ ಪ್ರಕ್ರಿಯೆ, ಕುನ್. ಸೋವಿಯ ಅಸಾಧಾರಣ ಸಹಕಾರದಿಂದಾಗಿ ಸಂಪೂರ್ಣ ನವಿರೆನ್ನಲಾಗದಿದ್ದರೂ, ದೈನಂದಿನ ವ್ಯವಹಾರಕ್ಕೆ ಯಾವುದೆ ಭಾಧೆಯಿಲ್ಲದ ರೀತಿಯಲ್ಲಿ ಶುಭಾರಂಭ ಮಾಡಿಸುವುದರಲ್ಲಿ ಯಶಸ್ವಿಯಾಗಿತ್ತು. 'ಓಂ' ನಾಮ ಹಾಡಿದ ಮೊದಲ ಒಂದೆರಡು ಗಂಟೆ ಒಂದೆರಡು ಸಣ್ಣ ಪುಟ್ಟ ತೊಡಕುಗಳು ಇಣುಕಿ ಹಾಕಿದ್ದರೂ ಸಹ, ಅವು ಚಿಗಿತುಕೊಂಡು ದೊಡ್ಡದಾಗುವುದಕ್ಕೆ ಮೊದಲೆ ಆಲ್ಲೇ ಇದ್ದ ಸೌರಭ್ ದೇವ್ ಮತ್ತು ಶ್ರೀನಾಥರಿಬ್ಬರು ಜತೆಯಾಗಿ ಶೀಘ್ರದಲ್ಲಿ ಅದನ್ನು ನಿವಾರಿಸಿ, ಚಟುವಟಿಕೆಗಳೆಲ್ಲ ಮಾಮೂಲಿನಂತೆ ಮುಂದುವರೆಯಲು ಅನುವು ಮಾಡಿಕೊಟ್ಟಿದ್ದರು. ಆ ನಂತರದ ಅರ್ಧ ದಿನ ಪೂರ ಅಲ್ಲೇ ಪಕ್ಕದಲ್ಲಿ ಕೂತ ದೇವ್ ಬರಬಹುದಾದ ತೊಡಕುಗಳನ್ನು ಹದ್ದಿನ ಕಣ್ಣಿನಲ್ಲಿ ಹುಡುಕುತ್ತ ಹಾಗೆಯೆ ಹೊಸತಿನ ನಡುವೆ ಕಂಗೆಟ್ಟಂತೆ ಬೆದರಿದ್ದ ಸಿಬ್ಬಂದಿಗೆ ಸಹಾಯ ಹಸ್ತ ಚಾಚುತ್ತ ಇದ್ದ ಕಾರಣ, ಮಧ್ಯಾಹ್ನದ ಚಹಾ ಕುಡಿಯುವ ಹೊತ್ತಿಗೆ ಇಡಿ ಪ್ರಕ್ರಿಯೆಯ ಸಾಮಾನ್ಯ ಹಂತಗಳು ತಂತಾನೆ ನಿರಾತಂಕವಾಗಿ ನಡೆಯತೊಡಗಿದ್ದವು. 

ಹೀಗೆ, ಅಷ್ಟೆಲ್ಲಾ ಕಡೆಗಳಿಗೆಯ ಆತಂಕವೊಡ್ಡಿದ್ದ ಆ ವಿಚಿತ್ರ ಸನ್ನಿವೇಶ ಶ್ರೀನಾಥನೂ ಸೇರಿದಂತೆ ಎಲ್ಲರಿಗೂ ಅಚ್ಚರಿಯಾಗುವಂತೆ ನಿರಾತಂಕವಾಗಿ ಸರಿದು ಪ್ರಾಜೆಕ್ಟಿನ ಶುಭಾರಂಭ ಅದ್ಭುತ ರೂಪದಲ್ಲಿ ಉದ್ಘಾಟಿತವಾಗಿಹೋಗಿತ್ತು. ಇಡಿ ಮೊದಲ ದಿನದಲ್ಲಿ ಇನ್ವಾಯ್ಸಿನ ಪ್ರಿಂಟಿಂಗಿನಲ್ಲಿ ಕಂಡುಬಂದ ಸಣ್ಣದೊಂದು ದೋಷವೊಂದನ್ನು ಹೊರತುಪಡಿಸಿದರೆ ಮತ್ಯಾವ ದೊಡ್ಡ ತೊಡಕು ಉದ್ಭವಿಸಿರಲಿಲ್ಲ. ಆ ದೋಷ ಸಹ ಅನಿರೀಕ್ಷಿತವಾದುದ್ದಾಗಿತ್ತಲ್ಲದೆ, ತೀರಾ ಮಹತ್ತರವಾದದ್ದೇನೂ ಆಗಿರಲಿಲ್ಲ. ಸಾಧಾರಣವಾಗಿ ದಾಖಲೆಗಳಲ್ಲಿ ಸರಕನ್ನು ನಮೂದಿಸುವಾಗ ಅದರ ಸಂಕ್ಷಿಪ್ತ ವಿವರಣೆಯ ಜತೆಗೆ ಆ ಸಾಮಾಗ್ರಿಗೆ ಕೊಟ್ಟ ಗುರುತಿನ 'ಕೋಡ್' ಸಹ ನಮೂದಿತವಾಗಿರುತ್ತದೆ. ಪ್ರತಿ ವ್ಯಕ್ತಿಗೆ ಹೇಗೆ ತನ್ನದೆ ಆದ ವಿಶಿಷ್ಠ ಹೆಸರಿರುತ್ತದೊ , ಅದೇ ಮಾದರಿಯಲ್ಲಿ ಪ್ರತಿ ಸರಕಿಗು ಒಂದು ಗುರುತಿನ ಕೋಡ್ ಇರುತ್ತದೆ. ಸಾಕಷ್ಟು ಉದ್ದದ ಈ ಕೋಡ್ ನೋಡಿದರೆ ಸಾಮಾನ್ಯ ಗ್ರಾಹಕನಿಗೆ ಏನೂ ತಲೆ ಬುಡ ಗೊತ್ತಾಗದಿದ್ದರೂ, ಆ ನಾಮಕರಣ ಕ್ರಮದ ಹಿಂದೆ ಕೆಲವು ಸಂಕ್ಷಿಪ್ತ ಸಂಕೇತ ಹುದುಗಿರುತ್ತದೆ - ಕಂಪನಿಯ ಅಂತರಿಕ ಬಳಕೆಯ ಉದ್ದೇಶಗಳಿಗೆ. ಕಂಪ್ಯೂಟರಿಕರಣದ ದಿನಗಳಲ್ಲಿ ಈ ಕೋಡಿಂಗ್ ಸರಿಯಾಗಿ, ನಿಖರವಾಗಿ ಬಳಸದಿದ್ದರೆ ಮಾಹಿತಿಯೆಲ್ಲ ದಾರಿ ತಪ್ಪಿ ಗೊಂದಲ ಉಂಟಾಗುವುದು ಸರ್ವೇ ಸಾಧಾರಣ ಪ್ರಸಂಗ. ಆ ಕಾರಣದಿಂದ ಆ ಕೋಡಿನ ಓದುವಿಕೆ ಸರಳವಾಗಿರಲೆಂದು, ಕಂಪ್ಯೂಟರ ಪರದೆಯ ಮೇಲೆ ಪ್ರದರ್ಶಿಸುವಾಗ ಅಥವಾ ಕಾಗದದ ಮೇಲೆ ಮುದ್ರಿಸುವಾಗ ಒಂದು ಸರಪಣಿಯ ಸತತ ಕೊಂಡಿಯ ಹಾಗೆ ಮುದ್ರಿಸದೆ, ಯಾವುದಾದರೂ ತರ್ಕವನ್ನು ಬಳಸಿ ಮಧ್ಯೆ ಮಧ್ಯೆ 'ಬ್ರೇಕ್' ಕೊಡುವುದು ಸಾಮಾನ್ಯ ವಿಧಾನ. ಸರಳ ಹೋಲಿಕೆಯಲ್ಲಿ ಹೇಳುವುದಾದರೆ - ಹೇಗೆ ಉದ್ದವಾದ ಟೆಲಿಪೋನ್ ನಂಬರನ್ನು ಎರಡು ಇಲ್ಲ ಮೂರಂಕಿ ಜತೆಯಾಗಿಸಿ ಸುಲಭದಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ಹಾಗೆ. ಈ ಪ್ರಾಜೆಕ್ಟಿನಲ್ಲೂ ಅದೆ ರೀತಿಯ ತರ್ಕದನುಸಾರ ಸರಕಿನ ಸಂಖ್ಯೆಯನ್ನು ೩-೨-೩-೨ ಅಕ್ಷರಗಳ ಗುಂಪಾಗಿ ವಿಭಾಗಿಸಿ ನಡುವೆ ಖಾಲಿ ಜಾಗದಲ್ಲಿ ಒಂದು ಸಣ್ಣ ಅಡ್ಡಗೆರೆಯನ್ನೊ, ಚುಕ್ಕೆಯನ್ನೋ ಇಟ್ಟು ಮುದ್ರಿಸಲಾಗುತ್ತಿತ್ತು. ಇದು ಎಲ್ಲಾ ಸರಕಿನ ಸಂಖ್ಯೆಗಳಿಗೂ ಅನುಕರಿಸುತಿದ್ದ ಸಮಾನ ಪದ್ದತಿಯಾದ ಕಾರಣ ಗೊಂದಲವೇನೂ ಬರುವ ಸಾಧ್ಯತೆಯಿರಲಿಲ್ಲ. ಆದರೆ ಸಾಮಾನ್ಯ ನಿರ್ಬಂಧಿತ ನಿಯಮಗಳಿಗೆ ಹೊರತಾಗಿ ಸಣ್ಣಪುಟ್ಟ ಹೊಂದಾಣಿಕೆಯಾಗದ 'ಸ್ಪೆಷಲ್ ಕೇಸು'ಗಳಿರುವುದು ಎಲ್ಲಾ ಕಡೆ ಕಾಣಸಿಗುವ ಅಂಶ ತಾನೆ? . ಈ ಪ್ರಾಜೆಕ್ಟೇನೂ ಆ ನಿಯಮದಿಂದ ಹೊರತಾಗಿರದಿದ್ದರು, ಆ ಸ್ಪೆಷಲ್ ತೊಡಕಿನ ಪರಿಣಾಮ ಎಲ್ಲರಲ್ಲೂ ಆತಂಕವುಂಟು ಮಾಡುವ ಬದಲು ಕಿರುನಗೆ ಮೂಡಿಸುವ ತಮಾಷೆಗೆ ಕಾರಣವಾಗಿತ್ತು. 

ನಿಜಕ್ಕೂ ಆಗಿದ್ದುದಾದರೂ ಇಷ್ಟೆ : ಗ್ರಾಹಕರು ಕೊಂಡ ಸರಕಿನ ಪ್ರಮಾಣಕ್ಕನುಗುಣವಾಗಿ ಕೆಲವೊಮ್ಮೆ ಜತೆಯಾಗಿ 'ಪ್ರಮೋಶನ್' ಸಲುವಾಗಿ ಕೆಲವು 'ಸರಕಿನ ಗುಂಪಿಗೆ ಸೇರದ' ವಸ್ತುಗಳನ್ನು ಸೇರಿಸಿ ಕಳಿಸುವುದು ಸೇಲ್ಸಿನಲ್ಲಿರುವ ಸಾಮಾನ್ಯ ಪದ್ಧತಿ.  ಕೆಲವೊಮ್ಮೆ ಕೊಡೆಯನ್ನೊ , ಮತ್ತಿನ್ನೊಮ್ಮೆ ಟೀ ಷರ್ಟ್ಗಳನ್ನೊ , ಮಗದೊಮ್ಮೆ ಟರ್ಕಿ ಟವೆಲ್ಗಳನ್ನೊ - ತೀರಾ ವಿಶೇಷ ಆರ್ಡರುಗಳಿಗೆ ಜಾನಿ ವಾಕರ್, ಬ್ಲಾಕ್ ಲೇಬಲ್ ರೆಡ್ ಲೇಬಲ್ ಗಳನ್ನೊ - ಹೀಗೆ ಏನಾದರೊಂದು ಐಟಂ ಜತೆಗೂಡಿಸಿ ಕಳಿಸುವ ಪರಿಪಾಠ. ಈ ಪ್ರಮೋಶನಲ್ ಸರಕು ಕೂಡ ತನ್ನದೇ ಆದ 'ಕೋಡ್' ಹೊಂದಿರಬಹುದಾದರೂ ಮುಖ್ಯ ಸರಕಿಗೂ ಅದಕೂ ವ್ಯತ್ಯಾಸವಿರಿಸುವ ಸಲುವಾಗಿ ಆ ಕೋಡಿಂಗ್ ವಿಧಾನವನ್ನು ಬೇರೆಯದೆ ಆದ ರೀತಿಯಲ್ಲಿ ಪ್ರತ್ಯೇಕವಾಗಿರಿಸುವುದು ಸಾಮಾನ್ಯವಾಗಿ ಬಳಕೆಯಲ್ಲಿರುವ ಕ್ರಮ. ಅದರಂತೆ ಇಲ್ಲೂ ಸಹ ಪ್ರಮೋಶನಲ್ ಐಟಂಗಳಿಗೆ 'ಐದಂಕಿ' ಸ್ಥಾನ ಮಾತ್ರವಿರಬೇಕೆಂದು ನಿಗದಿಗೊಳಿಸಲಾಗಿತ್ತು. ವಿವರಣೆಯ ಜಾಗದಲ್ಲಿ ಉದ್ದಕ್ಕೆ ಮಿತಿಯಿರದ ಕಾರಣ ಇದು ಅಷ್ಟಾಗಿ ಬಾಧಿಸಬೇಕಾದ ಅಂಶವೂ ಆಗಬೇಕಿರಲಿಲ್ಲ. ಆದರೆ ದುರದೃಷ್ಟಕ್ಕೆ ಈ ಪ್ರಮೋಶನಲ್ ಐಟಂಗಳಿಗೆ ಅವರಲ್ಲಿ ಯಾವುದೇ ಕೋಡ್ ಇರಲಿಲ್ಲ. ನೇರ ಹೆಸರನ್ನೆ ಮುದ್ರಣಕ್ಕೆ ಬಳಸುತಿದ್ದ ಕಾರಣ ಹೊಸ ಸಿಸ್ಟಮ್ಮಿನಲ್ಲಿ ಆ ಹೆಸರನ್ನೆ ಐದಕ್ಷರದ ಉದ್ದಕ್ಕೆ ಹೊಂದಿಸಬೇಕಾಗಿ ಬಂದು, ಮೂಲ ರೂಪವನ್ನೆ ತುಂಡಾಗಿಸಿ ಸಂಕ್ಷಿಪ್ತಗೊಳಿಸಬೇಕಾಗಿ ಬಂದಿತ್ತು. ಟಿ ಶರ್ಟಿಗೆ ಇಂಗ್ಲೀಷಿನಲ್ಲಿ 'ಟಿ-ಎಸ್-ಎಚ್-ಆರ್-ಟಿ' ಎಂದು, ಕೊಡೆಗೆ 'ಯು-ಎಂ-ಬಿ-ಆರ್-ಎ' ಎಂದು - ಎಲ್ಲಕ್ಕೂ ತುಂಡು ಹೆಸರಿನ ಮರು ನಾಮಕರಣ ಮಾಡಬೇಕಾಗಿ ಬಂದಿದ್ದರು ಪಕ್ಕದಲ್ಲೆ ಪೂರ್ತಿ ವಿವರಣೆಯನ್ನು ತೋರಿಸುವುದರಿಂದ ಇದೇನು ದೊಡ್ಡ ವಿಷಯವಲ್ಲವೆಂದು ಎಲ್ಲರೂ ಭಾವಿಸಿದ್ದರು. ಆದರೆ ಕೆಲವೊಮ್ಮೆ ಈ ಪ್ರೋಗ್ರಾಮರುಗಳು ಮಾಡುವ ಪ್ರೋಗ್ರಾಮಿಂಗಿನ ಕೈ ಚಳಕ ಅವರಿಗರಿವಿಲ್ಲದಂತೆಯೆ ಕೆಲವು ರಸಭರಿತ ವಾತಾವರಣ ಸೃಷ್ಟಿಸಿಬಿಡುತ್ತವೆ. ಇಲ್ಲೂ ಪ್ರಿಂಟಿಂಗ್ ಪ್ರೋಗ್ರಾಮಿನಲ್ಲಿ ಸೇರಿಸಿದ್ದ '೨-೩-೨-೩' ನಿಯಮ ಕೆಲಸ ಮಾಡಿ ಐದಕ್ಷರವನ್ನು ಎರಡು ಗುಂಪಾಗಿಸಿ '೨-೩' ಜೋಡಣೆಯಲ್ಲಿ ತೋರಿಸತೊಡಗಿತ್ತು. ಹೀಗಾಗಿ ಟವೆಲ್ ಬದಲು 'ಟು-ವೆಲ್' ಎಂದು ಮುದ್ರಿಸಿತ್ತು. ಆದರೆ ಆ ವೇರ್ಹೌಸಿನ ತುಂಟ ಯುವ ಸಿಬ್ಬಂದಿಗೆಲ್ಲ ನಗೆಯುಕ್ಕಿಸಿದ್ದು ಕೊಡೆಯ ಅಪಭ್ರಂಶ ರೂಪ - 'ಯುಎಂ-ಬಿಆರ್ಎ' ಓದಿದರೆ ಯುಎಂ-'ಬ್ರಾ' ಎಂದು ದನಿಸುತಿದ್ದುದು...! ಕೊನೆಯಕ್ಷರ 'ಇ' ತಪ್ಪಾಗಿ 'ಎ' ಆಗಿದ್ದು ಒಂದು ಕಾರಣವಾದರೆ, ಅಲ್ಲೊಂದು 'ಯುಎಂ' ಲೋಕಲ್ ಬ್ರಾಂಡಿನ ಹೆಸರಿನ ಒಳ ಉಡುಪು ಸಿಗುತ್ತಿದ್ದ ಅಂಗಡಿಯೂ ಇದ್ದ ಕಾರಣ ಅವರಲ್ಲಿ ಇನ್ನೂ ಹೆಚ್ಚಿನ ನಗೆಯುಕ್ಕಿಸಲು ಕಾರಣವಾಗಿತ್ತು. ಅದನ್ನು ಪ್ರಿಂಟು ಮಾಡುತ್ತಿದ್ದ ಹೆಣ್ಣು ಸಿಬ್ಬಂದಿಯೊಬ್ಬಾಕೆ ಅದನ್ನು ನೋಡಿ ನಾಚಿ ಅವರ ನಡುವಿನಿಂದ ಓಡಿ ಹೋಗಿ ಜಾಗ ಖಾಲಿ ಮಾಡಿದ್ದಳು. ಆ ದೋಷದ ತುಂಟತನವನ್ನು ನೋಡಿ ಮನಸಾರೆ ನಕ್ಕ ಪ್ರೋಗ್ರಾಮ್ ವೀರ ಸೌರಭ್ ದೇವ್, ಅಲ್ಲೆ ಹತ್ತದಿನೈದೆ ನಿಮಿಷಗಳಲ್ಲಿ ಪ್ರಿಂಟಿಂಗ್ ಪ್ರೋಗ್ರಾಮ್ ಸರಿಪಡಿಸಿ ಮಧ್ಯದಲ್ಲಿದ್ದ ಗ್ಯಾಪ್ ತೆಗೆದುಹಾಕಿ ಐದಕ್ಷರದ ಒಂದೆ ಗುಂಪಾಗಿಸಿಬಿಟ್ಟ;  ಜತೆಗೆ 'ಬ್ರಾ' ಆಗಲು ಕಾರಣವಾಗಿದ್ದ ತಪ್ಪಕ್ಷರ 'ಎ' ಬದಲಿಗೆ 'ಇ' ಎಂದು ಬದಲಾಯಿಸಿದ ಮೇಲೆ ಎಲ್ಲಾ ಸರಿಹೋಗಿತ್ತು..:-)

ಪ್ರತಿದಿನವೂ ತಡವಾಗಿ ಕೆಲಸ ಮುಗಿಸಿ ಮನೆಗೆ ಹೋಗುವ ಅಭ್ಯಾಸದ ಕುನ್. ಸೋವಿ ಆ ದಿನ ಸುಮಾರು ಆರು ಗಂಟೆಯ ಹೊತ್ತಿಗೆ ಶ್ರೀನಾಥನನ್ನು ಹುಡುಕುತ್ತ ಓಡಿಕೊಂಡು ಬಂದಾಗ ತುಸು ಗಾಬರಿಯೂ ಆಗಿತ್ತು, ದಿನದ ಕೊನೆಯಲ್ಲೇನಾದರೂ ಹೊಸ ಭೂತ ಉದ್ಭವಿಸಿಕೊಂಡಿತೆ? ಎಂದು. ಅದರವನ ಎಣಿಕೆ, ಅನಿಸಿಕೆಗೆ ವಿರುದ್ಧವಾಗಿ ಕುನ್. ಸೋವಿ ಏದುಸಿರು ಬಿಡುತ್ತ ,'ಐ ಹ್ಯಾವ್ ಎ ಗೂಡ್ ನ್ಯೂಸ್..' ಅಂದಾಗ ಅಚ್ಚರಿಯಿಂದ ಏನು ಎಂಬಂತೆ ಹುಬ್ಬೇರಿಸಿದ್ದ ಶ್ರೀನಾಥ ...

' ಇನ್ ದ ನಾರ್ಮಲಿ, ವೀ ಮೇಕ್ ಹಂಡ್ರೆಡ್ ಇನ್ವಾಯ್ಸ್ ಡೈಲಿ...' ಎಂದು ಶುರು ಮಾಡಿದ ಕುನ್. ಸೋವಿ... ಇನ್ವಾಯ್ಸ್ ಅನ್ನುತ್ತಿದ್ದಂತೆ ಚಕ್ಕನೆ ಚುರುಕಾಗಿತ್ತು ಶ್ರೀನಾಥನ ಕಿವಿ....

ಕುನ್. ಸೋವಿಗೆ ಮುಖ್ಯವಾಗಿದ್ದಷ್ಟೆ, ಶ್ರೀನಾಥನಿಗೂ ಇನ್ವಾಯ್ಸಿನ ಅಂಕಿ ಅಂಶ ಬಹು ಮುಖ್ಯ ಮಾಹಿತಿ..ಮೊದಲ ದಿನ ಎಷ್ಟು ಇನ್ವಾಯ್ಸ್ ಆಯ್ತೆಂಬುದರ ಲೆಕ್ಕ, ಪ್ರಾಜೆಕ್ಟ್ ಎಷ್ಟು ಯಶಸ್ವಿಯಾಗಿ ಉದ್ಘಾಟಿತವಾಯ್ತೆಂಬುದರ ಮಾನದಂಡ ಸಹ. ಹೀಗಾಗಿ ಕುತೂಹಲದಿಂದ ಕಿವಿ ನಿಮಿರಿಸುತ್ತ , ' ಐ ಆಲ್ಸೋ ವಾಂಟೆಡ್ ಟು ನೋ.... ಡಿಡ್ ವಿ ಕ್ರಾಸ್ ಅಟ್ಲೀಸ್ಟ್ ಫಿಫ್ಟಿ ಟುಡೆ? ' ಎಂದು ಕೇಳಿದ್ದ.

ಅದಕ್ಕುತ್ತರವಾಗಿ ತುಟಿಯಂಚಲ್ಲಿ ನಗುತ್ತ ಹೆಮ್ಮೆಯ ದನಿಯಲ್ಲಿ ' ವಾಟ್ ಫಿಫ್ಟಿ? ವೀ ಆಲ್ರೆಡಿ ಹಂಡ್ರೆಡ್ ಅಂಡ್ ಟೆನ್...ಟುಡೆ ವೀ ಕ್ಯಾನ್ಸಲ್ ಓವರ್ ಟೈಮ್ ಆಲ್ಸೋ...'

'ಓ ಮೈ ಗಾಡ್.!' ಚಣಕಾಲ ಮಾತಿಲ್ಲದೆ ಮೂಕನಂತೆ ನಿಂತುಬಿಟ್ಟಿದ್ದ ಶ್ರೀನಾಥ..'ಇದು ನಿಜವಾದರೆ ಇದೊಂದು ಗ್ರೇಟ್ ಗೋಲೈವ್ ಆಗುವುದರಲ್ಲಿ ಸಂದೇಹವೇ ಇಲ್ಲ.. ಅವರ ದೈನಂದಿನ ಸರಾಸರಿಯೆ ನೂರು ಇನ್ವಾಯ್ಸ್.. ಗೊಲೈವ್ ಮೊದಲ ದಿನವೇ ಆ ಮೈಲಿಗಲ್ಲು ದಾಟಿದರೆಂದರೆ, ಅದಕ್ಕಿಂತ ಯಶಸ್ಸು ಬೇರೇನು ತಾನೆ ಬೇಕು? ಮ್ಯಾನೆಜ್ಮೆಂಟಿಗೆ ವರದಿ ಒಪ್ಪಿಸಲು ಇದಕ್ಕಿಂತ 'ಸ್ಟೋರೀ ಲೈನ್' ಬೇಕೆ? ' ಎಂದು ಆಲೋಚಿಸುತ್ತಿದ್ದ ಶ್ರೀನಾಥನ ಸೂಕ್ಷ್ಮ ಚಾಣಾಕ್ಷ ಮನ ಆದರೂ ದುಡುಕಲಿಚ್ಚಿಸದೆ, ಮೊದಲು ಆ ದಿನದ ಒಟ್ಟಾರೆ ಇನ್ವಾಯ್ಸ್ ಮೌಲ್ಯ ಎಷ್ಟು ಎಂದು ಪರಿಶೀಲಿಸಿ ನಂತರ ತೀರ್ಮಾನಿಸುವ ನಿರ್ಧಾರಕ್ಕೆ ಬಂದಿತ್ತು. ಮ್ಯಾನೇಜ್ಮೆಂಟಿಗೆ ಕೊನೆಯಲ್ಲಿ ಮುಖ್ಯವಾಗಿ ಬೇಕಾದದ್ದು ಆ ದಿನದ ಒಟ್ಟು ವಹಿವಾಟಿನ (ಟರ್ನೋವರ) ಮೊತ್ತವೆ ಹೊರತು ಇನ್ವಾಯ್ಸ್ ಸಂಖ್ಯೆಯಲ್ಲ. ಅದು ವೇರ್ಹೌಸಿನ ಆಂತರಿಕ ಲೆಕ್ಕಾಚಾರಕ್ಕಷ್ಟೆ ಬೇಕು.. ಆ ಪರಿಶೀಲನೆಗೆ ಹೊರಡುವ ಮೊದಲು ಹಳೆಯ ಸಿಸ್ಟಮ್ಮಿನಲ್ಲಿ ಪ್ರತಿದಿನದ ಸರಾಸರಿ ವಹಿವಾಟಿನ ಮೊತ್ತವೆಷ್ಟೆಂದು ಕುನ್. ಸೋವಿಯಿಂದಲೆ ತಿಳಿದುಕೊಂಡು ನಂತರ ಸೌರಭ ದೇವನತ್ತ ನಡೆದಿದ್ದ - ಆ ದಿನದ ವಹಿವಾಟಿನ ರೀಪೋರ್ಟ್ ತೆಗೆಸಲು. ಅಲ್ಲಂತೂ ಇನ್ನು ಹೆಚ್ಚಿನ ಅಚ್ಚರಿ ಕಾದಿತ್ತು - ಮಾಮೂಲಿನ ದಿನಗಳಲ್ಲಾಗುವ ವಹಿವಾಟಿಗಿಂತ ಶೇಕಡಾ ೨೦ ರಷ್ಟು ಹೆಚ್ಚು ಮೌಲ್ಯದ ಇನ್ವಾಯ್ಸ್ ಈಗಾಗಲೆ ಸೃಷ್ಟಿ ಮಾಡಿಯಾಗಿತ್ತು! ಶ್ರೀನಾಥನಿಗೆ ನಂಬಲಿಕ್ಕೆ ಆಗಲಿಲ್ಲ - ಅಷ್ಟೆಲ್ಲಾ ತೊಡಕುಗಳನ್ನು ದಾಟಿ ಗೋಲೈವ್ ತಲುಪಿದ ಮೊದಲ ದಿನವೆ, ಯಾವುದೇ ತೊಡಕಿಲ್ಲದೆ ವ್ಯವಹಾರ, ವಹಿವಾಟು 'ಬಿಜಿನೆಸ್ ಯಾಸ್ ಯೂಶುವಲ್' ಎಂಬಂತೆ ನಡೆದಿರುವುದು ಮಾತ್ರವಲ್ಲದೆ ವಹಿವಾಟಿನಲ್ಲೂ ಸರಾಸರಿ ಗುರಿ ಮೀರಿಸಿದೆ; ಅದೂ ಯಾವುದೇ ತಾಂತ್ರಿಕ ಅಥವಾ ವ್ಯವಹಾರಿಕ ತೊಂದರೆಗಳಿಲ್ಲದಂತೆ...! ಇದು ನಿಜಕ್ಕೂ ಸೆಲಬ್ರೇಟ್ ಮಾಡಬೇಕಾದ ವಿಷಯವೆ - ಆದರೂ, ಕೇವಲ ಒಂದೆ ದಿನದ ಮಾಹಿತಿಯನ್ನು ಆಧಾರಿಸಿ ತೀರ್ಮಾನ ಆಳುವುದು ಉಚಿತವಲ್ಲ ; ಬದಲಿಗೆ ಎರಡನೆ ದಿನವೂ ಅದೆ ರೀತಿಯ ಪ್ರಕ್ರಿಯೆ ಪುನರಾವರ್ತನೆಯಾಗುವುದೆ ಎಂದು ಕಾದು ನೋಡಿ ನಂತರ 'ಅಫಿಶಿಯಲ್ ಮೆಯಿಲ್' ಕಳಿಸುವುದೆಂದು ನಿರ್ಧರಿಸಿದ್ದ. ಆದರೂ ಆ ದಿನದ ಗಣನೀಯ ಸಾಧನೆಯನ್ನು ಕನಿಷ್ಠ ಮೌಖಿಕವಾಗಿಯಾದರೂ ತಿಳಿಸಿ, ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆಂಬ ಸುಳಿವು ಕೊಡುವುದು ಒಳ್ಳೆಯದೆಂದನಿಸಿದಾಗ ಕುನ್. ಸೋವಿಯ ಆಫೀಸಿನ ಪೋನಿನಿಂದಲೆ ಎಂಡಿ ಮತ್ತು ಫೈನ್ಯಾನ್ಶಿಯಲ್ ಕಂಟ್ರೋಲರ್ ಕುನ್. ಲಗ್ ಇಬ್ಬರಿಗೂ ಪ್ರಾಥಮಿಕ ವರದಿ ಸಲ್ಲಿಸಿದ್ದ - ಆದಷ್ಟು ಎಚ್ಚರದ ದನಿಯಲ್ಲಿ.. ಆದರೆ ಅವನ ಭೀತಿಗೇನೂ ಕಾರಣವಿಲ್ಲವೆಂದು ಎರಡನೆ ದಿನವೆ ಪ್ರಮಾಣಿತವಾಗಿ ಹೋಗಿತ್ತು. ಮೊದಲ ದಿನದಷ್ಟೆ ಸುಗಮವಾಗಿ ನಡೆದ ಚಟುವಟಿಕೆಗಳು, ಮಧ್ಯಾಹ್ನದ ಹೊತ್ತಿಗೆ ಮೊದಲ ದಿನದ ಮಾನಕವನ್ನು ಮೀರಿ ಮುನ್ನಡೆದಾಗ ಮತ್ತೆ ಅವರಿಬ್ಬರಿಗೂ ಮೇಯ್ಲಿನ ಮುಖಾಂತರ ಸುದ್ದಿ ಕಳಿಸಿದ್ದೆ ಅಲ್ಲದೆ ಎರಡು ದಿನದ ವಹಿವಾಟಿನ ವರದಿಯ ಪ್ರತಿಯನ್ನು ಜತೆ ಲಗತ್ತಿಸಿ ಕಳಿಸಿ, ಅವರಿಬ್ಬರೂ ಸಂಪ್ರೀತಗೊಳ್ಳುವಂತೆ ಮಾಡಿದ್ದ. ಹೊರಗಿನ ಬೇರೆ ಕಂಪನಿಗಳಲ್ಲಿ ಈ ರೀತಿಯ ಸಿಸ್ಟಂ ಬದಲಾವಣೆಯಾಗುವಾಗ ಎದ್ವಾತದ್ವಾ ತೊಂದರೆಗಳುಂಟಾಗಿ ತಿಂಗಳಾನುಗಟ್ಟಲೆ ತ್ರಾಸಪಡುತ್ತ ದೈನಂದಿನ ವ್ಯವಹಾರ ನಡೆಸಳು ಕೂಡಾ ಹೆಣಗಾಡಿ ಪರಸ್ಪರ ದೂರು ದೋಷಾರೋಪಣೆಗಿಳಿದಿದ್ದ ಕಥಾನಕಗಳನ್ನು ಕೇಳಿ ಭೀತರಾಗಿದ್ದ ಅವರಿಬ್ಬರಿಗೂ ಇದು ಅತ್ಯಂತ ಆಹ್ಲಾದಕರವಾದ ಸುದ್ದಿಯಾದರೂ, ತಕ್ಷಣಕ್ಕೆ ನಂಬಲಸಾಧ್ಯವಾದದ್ದೂ ಆಗಿತ್ತು. ಆದ್ದರಿಂದಲೆ ವಹಿವಾಟಿನ ವರದಿಯನ್ನು ಜತೆಗೆ ಲಗತ್ತಿಸಿ ಕಳಿಸಿದ್ದ ಶ್ರೀನಾಥ - ಇನ್ವಾಯ್ಸ್ ನಂಬರು ಮತ್ತು ಗ್ರಾಹಕರ ಮಾಹಿತಿಯ ಸಮೇತ. ಅವರ ಅಂತಿಮ ನಿರ್ಧಾರಕ ಶ್ಲಾಘನೆಗೆ ಕನಿಷ್ಠ ಒಂದೆರಡು ತಿಂಗಳಾದರೂ ಕಾಯಬೇಕಿದ್ದರೂ, ಈ ಸುದ್ದಿಯಿಂದ ಅವರು ಕೊಂಚ ನಿರಾಳವಾಗುವುದಂತೂ ಖಂಡಿತ - ಎಲ್ಲಾ ಸರಿಯಾದ ನಿಟ್ಟಿನಲ್ಲಿ ಸಾಗಿದೆ ಎನ್ನುವ ಆತ್ಮವಿಶ್ವಾಸವನ್ನಂತೂ ಹುಟ್ಟು ಹಾಕುವಲ್ಲಿ ಸಫಲವಾಗಿತ್ತು. ಆ ಎರಡನೆ ದಿನದ ಪ್ರಗತಿಯ ನಂತರ ಶ್ರೀನಾಥನಿಗಂತೂ ಇದೊಂದು 'ಲ್ಯಾಂಡ್ಮಾರ್ಕ್' ಯಶಸ್ವಿ ಪ್ರಾಜೆಕ್ಟಾಗುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದೆಯೆಂದು ಈಗಾಗಲೇ ಅನಿಸತೊಡಗಿತ್ತು. ಅದರ ನಿಖರ ಫಲಿತಾಂಶ ಗೊತ್ತಾಗುವುದು ಮೊದಲ ತಿಂಗಳು ಕಳೆದಾಗ. ಅಲ್ಲಿಯವರೆಗೂ ತುಸು ಗಮನವಿಟ್ಟು ನೋಡಿಕೊಂಡರೆ, ಉದ್ಘಾಟನೆಯ ಮೊದಲ ತಿಂಗಳೆ ಅವರು ದಾಖಲೆ ವಹಿವಾಟು ನಡೆಸಿಬಿಟ್ಟರೂ ಅಚ್ಚರಿಯಿಲ್ಲವೆನಿಸಿ ತಾನೆ ವೇರ್ಹೌಸಿನಲ್ಲಿ ಆಗಾಗ್ಗೆ ಅಡ್ಡಾಡುತ್ತ ಎಲ್ಲವೂ ಸರಿಯಿದೆಯೆ ಇಲ್ಲವೆ ಎಂದು ಮುಂಜಾಗರೂಕತ ಕ್ರಮವಾಗಿ ಅಳೆದು ನೋಡತೊಡಗಿದ್ದ. 

ಆ ಮೂರನೆ ದಿನದ ಅಡ್ಡಾಟವು ಸಹ ಅದೆ ಉದ್ದೇಶದಿಂದ ನಡೆದಿದ್ದಾಗಿತ್ತು. ಹಾಗೆಯೆ ಅಡ್ಡಾಡುತ್ತ ಎತ್ತರದ ಷೆಲ್ಪುಗಳಲ್ಲಿ ಇಟ್ಟಿದ್ದ ಸಾಮಗ್ರಿಗಳನ್ನೆ ನೋಡುತ್ತ ಬರುತ್ತಿದ್ದವನಿಗೆ ಮೂಲೆಯ ತಿರುವಿನಲ್ಲಿ ಕಂಪ್ಯೂಟರ್ ರೂಮಿನಿಂದ ಬರುತ್ತಿದ್ದ ಸೌರಭ ದೇವ್ ಸಿಕ್ಕಿ ಮುಗುಳ್ನಕ್ಕಿದ್ದ. ಕಣ್ಣಲ್ಲೆ 'ಎಲ್ಲಾ ಸರಿಯಿದೆ ತಾನೆ?' ಎಂದವನಿಗೆ 'ಫರ್ಫೆಕ್ಟ್' ಎನ್ನುವಂತೆ ಹೆಬ್ಬೆರಳು ತೋರುಬೆರಳಿನ ಉಂಗುರ ಮಾಡಿ ತೋರಿಸುತ್ತ, ' ನವ್ ಇಟ್ ಇಸ್ ಬೋರಿಂಗ್ ...ಆಲ್ ಗೋಯಿಂಗ್ ವೆರಿ ಸ್ಮೂತ್ಲಿ..' ಎಂದಿದ್ದ. ಅಂತಿಮ ಕ್ಷಣದಲ್ಲಿ ಅವನು ಮಾಡಿದ ಮಹತ್ಕಾರ್ಯದ ಅರಿವಿದ್ದ ಶ್ರೀನಾಥನಿಗೆ ಈಗ ಹೇಗೂ ಸಮಯವಿರುವಾಗ, ತುಸು ಉತ್ತೇಜನಕಾರಿ ಮಾತಾಡಿ ಪ್ರೋತ್ಸಾಹಿಸಬೇಕೆನಿಸಿತು. ಅದೆ ಹೊತ್ತಿನಲ್ಲಿ ಅಲ್ಲಿ ಮಾತನಾಡುವುದಕ್ಕಿಂತ, ಹಾಗೆ ಹೊರಗೆ ಹತ್ತಿರದಲ್ಲಿದ್ದ ಕೆಫೆಯೊಂದರಲ್ಲಿ ಹೋಗಿ ಕಾಫಿ ಕುಡಿಯುತ್ತ ಮಾತನಾಡಬಹುದೆನಿಸಿತ್ತು. ಕುನ್. ಸೋವಿಗೆ ತಾವು ಹೊರಟ ಕಾರಣ ಹೇಳಿ ಇಬ್ಬರೂ ಹೊರನಡೆದಿದ್ದರು ತುಸು ನಿರಾಳವಾದ ಮನದಲ್ಲಿ.

ಆ ವೇರ್ಹೌಸ್ ಇದ್ದ ಜಾಗ ನಿರ್ಜನ ಸ್ಥಳ ಅನ್ನುವುದಕ್ಕಿಂತ ಅದೇ ರೀತಿಯ ಹಲವಾರು ವಿವಿಧ ವಾಣಿಜ್ಯೋದ್ದೇಶಗಳ ಬಳಕೆಗೆಂದೆ ಉಪಯೋಗಿಸುತ್ತಿದ್ದ ಕಾರಣ ಉದ್ದಕ್ಕೂ ಬರಿಯ ಉಗ್ರಾಣಗಳೊ, ಗೋಡೌನ್ ರೀತಿಯ ಷೆಡ್ಡುಗಳೊ, ಕಂಪನಿಯ ಅಧಿಕೃತ 'ಸ್ಟಾಕ್ ಅಂಡ್ ಸೇಲ್' ಮಳಿಗೆಗಳೊ ಆವರಿಸಿಕೊಂಡು, ಕೂತು ಮಾತಾಡಿಕೊಂಡು ಕಾಫಿ ಕುಡಿಯಬಲ್ಲಂತಹ ಯೋಗ್ಯ ತಾಣವೆ ಇರಲಿಲ್ಲ, ಸುತ್ತಮುತ್ತಲಿನ ಪರಿಧಿಯಲ್ಲಿ. ನಡುನಡುವೆ ಇದ್ದ ಸಣ್ಣ ಪುಟ್ಟ ಪೆಟ್ಟಿಗೆಯಂಗಡಿಯಂತಹ ಬೀದಿ ಬದಿಯ ರೆಸ್ಟೋರೆಂಟುಗಳಲ್ಲಿ ಕಾಫಿ, ಟೀ ಸಿಗುತ್ತಿರಲಿಲ್ಲ. ಸುತ್ತಲಿನ ಕೆಲಸ ಮಾಡುವ ಜನಕ್ಕೆ ಲಂಚ್ ಒದಗಿಸಲೆಂದೆ ತೆರೆದುಕೊಂಡಿದ್ದ ಅಂಗಡಿಗಳವು. ಜತೆಗೆ ವಾಹನಗಳು ಸದಾ ಹರಿದಾಡುವ ನಿಭಿಢ ರಸ್ತೆಯಿಂದಾಗಿ ಅಲ್ಲಿ ಕೂತು ಮಾತಾಡುವ ಸಾಧ್ಯತೆಯೂ ಇರಲಿಲ್ಲ. ಸುಮಾರು ಒಂದು ಮೈಲಿ ದೂರದಲ್ಲಿದ್ದ ಟೆಸ್ಕೊ ಲೋಟಸ್ ಮಳಿಗೆಯ ಜಾಗದಲ್ಲಷ್ಟೆ ಒಂದಷ್ಟು ಕಾಫಿ ಕೆಫೆಗಳು, ಒಳ್ಳೆ ರೆಸ್ಟೋರೆಂಟುಗಳು ಇದ್ದುದ್ದು. ಸದಾ ವಾಹನಗಳಿಂದ ಗಿಜಿಗುಡುವ ಆ ರಸ್ತೆ ಆ ಹೊತ್ತಿನಲ್ಲಿ ತುಸು ವಿಶ್ರಮಿಸಿಕೊಳ್ಳುತ್ತಿರುವಂತೆ ಖಾಲಿಯಾಗಿ ಕಂಡಾಗ ಅಲ್ಲೆ ಹಾದು ಹೋಗುತ್ತಿದ್ದ ಟ್ಯಾಕ್ಸಿಯೊಂದನ್ನು ನಿಲ್ಲಿಸಿ ಇಬ್ಬರು ಒಳಗೆ ತೂರಿಕೊಂಡಿದ್ದರು. ಬೇರೆಯ ಹೊತ್ತಿನಲ್ಲಿ ಟ್ರಾಫಿಕ್ಕಿನ ಕೃಪೆಯಿಂದಾಗಿ ಟ್ಯಾಕ್ಸಿ ಸಿಕ್ಕರೂ ಅದರ ಆಮೆ ವೇಗಕ್ಕೆ ಹೆದರಿ, ಕಾಲುನಡಿಗೆಯಲ್ಲೇ ನಡೆದು ಹೋಗಬೇಕಾಗಿದ್ದ ಅನಿವಾರ್ಯ ತಪ್ಪಿದ ಅಪರೂಪದ ಸಂಧರ್ಭಕ್ಕೆ ಹರ್ಷಿಸುತ್ತ, ಐದೇ ನಿಮಿಷದಲ್ಲಿ ಕಾಂಪ್ಲೆಕ್ಸ್ ತಲುಪಿ ಮೊದಲ ಹಂತದಲ್ಲೆ ಕಂಡ ಹಲವಾರು ರೆಸ್ಟೊರೆಂಟುಗಳಲ್ಲಿ ಜನ ಕಡಿಮೆಯಿದ್ದೊಂದು ಕಡೆ ನುಸುಳಿ ಟೇಬಲ್ ಹಿಡಿದು ಕೂತಿದ್ದರು. ಕಾಫಿಗೆ ಆರ್ಡರು ಮಾಡಿ ಕಾಯುವ ಹೊತ್ತಲ್ಲಿ ಬೆರಳಿನಿಂದ ಮೆಲುವಾಗಿ ಮೇಜು ಕುಟ್ಟುತ್ತ , ' ಹೇಗಿದೆ ಈ ಪ್ರಾಜೆಕ್ಟ್ ಗೋಲೈವ್ ಅನುಭವ?' ಎಂದು ಕೇಳಿದ್ದ ಶ್ರೀನಾಥ ತುಸು ಛೇಡಿಕೆ ಬೆರೆತ ದನಿಯಲ್ಲಿ. ಅಲ್ಲಿಯವರೆಗೂ ಇಷ್ಟು ಸುಗಮವಾಗಿ ನಡೆದ ಗೋಲೈವನ್ನು ನೋಡಿರದಿದ್ದ ಸೌರಭ ದೇವ್, ' ಇಷ್ಟು ವರ್ಷಗಳ ಅನುಭವದಲ್ಲಿ ಇದೆ ಮೊದಲ ಬಾರಿಗೆ - ಗೊಲೈವ್ ಆಯ್ತೆಂದೆ ಅನಿಸುತ್ತಿಲ್ಲ...ಮೊದಲೆಲ್ಲ ಗೋಲೈವೆಂದರೆ ಎಷ್ಟೊಂದು ಬಿಜಿ, ಎಷ್ಟು ಪರದಾಟ - ಮೊದಲೆರಡು ಮೂರೂ ವಾರ ತಲೆ ಕೆರೆಯಲು ಪುರುಸೊತ್ತಿಲ್ಲದಷ್ಟು ಕೆಲಸ, ಒತ್ತಡ, ಒದ್ದಾಟ... ಈ ಸಾರಿ ನೋಡಿದರೆ ಮೂರನೆ ದಿನಕ್ಕೆ ಆರಾಮವಾಗಿ ಹೊರಗೆ ಬಂದು ಕಾಫಿ ಕುಡಿಯುತ್ತಿದ್ದೇವೆ..! ಗೋಲೈವಿನ ಹಿಂದಿನ ಮೂರು ದಿನದ 'ನೈಟ್ ಮೆರ್' ನೆನೆಸಿಕೊಂಡು ಹೋಲಿಸಿದರೆ ಇದನ್ನು ನಂಬಲೇ ಆಗುತ್ತಿಲ್ಲ ಸಾರ್..' ಎಂದಿದ್ದ.

' ಯೂ ಆರ ರೈಟ್ .. ಪ್ರಾಜೆಕ್ಟುಗಳಲ್ಲಿ ಗೋಲೈವಿನ ದಿನದ ತನಕ ಯಶಸ್ಸಿನ ಪ್ರಮಾಣವನ್ನು ಅಳೆಯುವುದು ಕಷ್ಟ. ಎಲ್ಲಾ ಸ್ಟೇಟಸ್ ರಿಪೋರ್ಟಿನಲ್ಲೂ ಸುಂದರವಾದ ವರದಿಗಳೆ ಕಾಣಿಸಿಕೊಂಡಿರುತ್ತವೆ - ತೀರಾ ಕೈ ಮೀರಿದ ಘಟನೆ, ಸಂಧರ್ಭಗಳನ್ನು ಬಿಟ್ಟರೆ.. ಆದರೆ ಗೋಲೈವಿನ  ಹೊತ್ತಿನಲ್ಲಿ - ಗೊತ್ತಿದ್ದೊ, ಗೊತ್ತಿಲ್ಲದೆಯೊ ಮಾಡಿದ್ದ ಪಾಪಗಳೆಲ್ಲದರ ಒಟ್ಟಾರೆ ಪರಿಣಾಮ, ಸಮಷ್ಟಿ ರೂಪದಲ್ಲಿ ಅಥವಾ ಯಾವ್ಯಾವುದೊ ತೊಡಕಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ... ಆ ಸಂಧರ್ಭದಲ್ಲಿ ಎದುರಾಗುವ ಸಮಸ್ಯೆ ಹೇಗೆ ಬಂತೆಂದು ಕಂಡುಹಿಡಿಯಲೆ ಸುಮಾರು ಹೊತ್ತು ಶ್ರಮಿಸಬೇಕು. ಯಾರದೋ ತಪ್ಪಿನ ಫಲ ಇನ್ನಾರದೊ ತಪ್ಪಾಗಿ ಕಾಣಿಸುವುದು ಮತ್ತೊಂದು ಸಮಸ್ಯೆ. ಬಹುತೇಕ ಈ ಸಮಸ್ಯೆಗಳೆಲ್ಲ ಬಿಡಿಸಲಾಗದ್ದು ಅಂತೇನಲ್ಲ.. ಆದರೆ ಅದರ ನಿಜ ಮೂಲ ಅರ್ಥ ಮಾಡಿಕೊಂಡು ಬಿಡಿಸಲು ಸಮಯ ಹಿಡಿಯುತ್ತದೆ. ದುರದೃಷ್ಟಕ್ಕೆ ಗೋಲೈವ್ ಆದ ಮೇಲೆ ಕಂಪನಿಯ ವ್ಯವಹಾರ ಅರೆಗಳಿಗೆ ಕುಂಠಿತವಾದರೂ ಗ್ರಾಹಕರಿಗೆ ಅಸಹನೀಯವಾದ ಕಾರಣ, ಸಮಸ್ಯೆಯ ಗಹನತೆಯ ಜತೆಗೆ ನಿಭಾಯಿಸಬೇಕಾದ ವೇಗದ ಒತ್ತಡವೂ ಸೇರಿ ಸಂಧರ್ಭವನ್ನು ಇನ್ನಷ್ಟು ಸಂಕೀರ್ಣವಾಗಿಸಿಬಿಡುತ್ತದೆ. ಆಗ ವೇಗವಷ್ಟೆ ಪ್ರಮುಖವಾಗಿ, ಗುಣಮಟ್ಟದ ಪರಿಹಾರಕ್ಕಿಂತ ಹೇಗೊ ಈ ತೊಡಕಿನಿಂದ 'ಬಚಾವ್' ಆದರೆ ಸಾಕೆನ್ನುವ ಉತ್ತರಕ್ಕೆ ಹುಡುಕಾಟ ನಡೆಯುತ್ತದೆ. ಆ ಉತ್ತರವೆ  ಹೆಚ್ಚುಕಡಿಮೆ ಖಾಯಂ ಆಗಿಯೂ ಉಳಿದುಬಿಡುತ್ತದೆ - ಯಾಕೆಂದರೆ ಗೋಲೈವಾದ ಮೇಲೆ ಪ್ರಾಜೆಕ್ಟು ಹೆಚ್ಚು ದಿನ ನಡೆಯುವಂತಿಲ್ಲ...' ಟೇಬಲ್ ಮೇಲೆ ಕೈಯೂರಿಕೊಂಡು ಗಲ್ಲಕಾನಿಸಿದ್ದ ಮುಷ್ಟಿಯೊಡನೆ ಎಲ್ಲೋ ಶೂನ್ಯದತ್ತ ನೋಡುತ್ತ ನುಡಿದಿದ್ದ ಶ್ರೀನಾಥ. ಅವನ ಚಿತ್ತಪಟಲದಲ್ಲಿ ಹಳೆಯ ಪ್ರಾಜೆಕ್ಟುಗಳ ನೆನಪೆಲ್ಲ ಹಾದುಹೋಗುತ್ತಿತ್ತು ಸಿನೆಮಾ ರೀಲಿನಂತೆ. 

' ನಾನಂತೂ ಪ್ರಾಜೆಕ್ಟುಗಳೆಂದರೆ ಯಾವಾಗಲೂ ಅಷ್ಟೆ, ಬರಿ ಕಿರುಕುಳವೆ ... ಸ್ಮೂತ್ ಗೋಲೈವ್ ಸಾಧ್ಯವೆ ಇಲ್ಲವೆಂದುಕೊಂಡಿದ್ದೆ....'

' ಇಲ್ಲ ಸೌರಭ್ ... ಮಾಡಬೇಕಾದ ಕೆಲಸಗಳನ್ನು ಗೋಲೈವಿಗೆ ಮುಂಚಿತವಾಗಿ ಸರಿಯಾಗಿ ಮಾಡಿದ್ದರೆ ಅಷ್ಟೊಂದು ತೊಡಕು ಬರುವುದಿಲ್ಲ. ಸಮಸ್ಯೆಯೆಂದರೆ 'ಸರಿಯಾಗಿ' ಎನ್ನುವುದರ 'ಸರಿಯಾದ' ಅರ್ಥ. ಪ್ರಾಜೆಕ್ಟಿಗೆ ಮೊದಲು ಎಲ್ಲಾ ಎಷ್ಟೊಂದು ಪರಿಶ್ರಮದಿಂದ ಹಗಲಿರುಳೆನ್ನದೆ ಒಂದೆ ಸಮನೆ ಕೆಲಸ ಮಾಡುತ್ತಾರೆ.. ಆದರೆ ಅದು ನಿಜಕ್ಕೂ ಗೋಲೈವಿಗೆ ಪೂರಕವಾದ ಕೆಲಸವೊ ಅಥವಾ ತಡವಾಗಿ ಮಾಡಬಹುದಾಗಿದ್ದ , ಬಹುಶಃ ಮಾಡಲಗತ್ಯವೆ ಇರದಿದ್ದ ಕೆಲಸವೊ ಎಂದು ಯಾರಿಗೂ ಖಚಿತವಾಗಿ, ನಿಖರವಾಗಿ ಗೊತ್ತಿರುವುದಿಲ್ಲ... ಏನೆಲ್ಲಾ ಮಾಡಬೇಕಿದೆಯೊ ಅದನ್ನೆಲ್ಲಾ ಮಾಡಿ ಮುಗಿಸಿ ಕೈತೊಳೆದುಕೊಂಡು 'ಅಬ್ಬಾ! ಮುಗಿಯಿತಲ್ಲಾ ಸದ್ಯ..' ಅಂದುಕೊಂಡು ನಿಟ್ಟುಸಿರೆಳೆಯುವ ಪರಿಸ್ಥಿತಿಯೆ ಜಾಸ್ತಿ. ವಿಪರ್ಯಾಸವೆಂದರೆ ಗೋಲೈವಿನ ಮುಂಚಿನ ಹೊತ್ತಲ್ಲಿ 'ಬಿಜಿನೆಸ್ ಪ್ರೆಷರ' ಇರದ ಕಾರಣ ಕೆಲಸದ ದಕ್ಷತೆಯೂ ಹೆಚ್ಚಿ ಒಳ್ಳೆಯ ಗುಣಮಟ್ಟ ಬರಬೇಕು.. ಆದರೆ ಹಾಗಾಗುವುದಿಲ್ಲ..'

' ಅದು ವಿಚಿತ್ರವಲ್ಲವೆ ಶ್ರೀನಾಥ್ ಸರ್ ? ಅದು ಏಕೆ ಹಾಗೆ?'

' ಅದೊಂದು ಅತಿ ಸುಲಭದ ಆದರೆ ಅಷ್ಟೇ ಸಂಕೀರ್ಣ ಉತ್ತರದ ಪ್ರಶ್ನೆ .. ಪ್ರಾಜೆಕ್ಟಿನ ನಡೆಸುವಿಕೆಯಲ್ಲಿ ಮೂಲಭೂತವಾದ ಕೆಲವು 'ಅನಿಸಿಕೆ' (ಅಸಂಕ್ಷನ್) ಗಳು ಮುಖ್ಯ ಪಾತ್ರವಹಿಸುತ್ತವೆ. ಪ್ಲಾನಿಂಗಿನ (ಯೋಜನಾ) ಹಂತದಲ್ಲಿ ಈ ಅನಿಸಿಕೆಗಳ ಆಧಾರದ ಮೇಲೆ ಎಲ್ಲಾ ಲೆಕ್ಕಾಚಾರ ಹಾಕಿ ವಿವರವಾದ ಕಾರ್ಯಯೋಜನೆ ತಯಾರಿಸುವುದರಿಂದ ಈ ಯೋಜನಾನಕ್ಷೆ ಸಂಪೂರ್ಣ ಪರಿಪಕ್ವವೆಂದು ಹೇಳಲಾಗುವುದಿಲ್ಲ... ಬದಲಾಗುತ್ತಿರುವ ವ್ಯವಹಾರ ಜಗತ್ತಿನ ದೆಸೆಯಿಂದ ಮೊದಲಿದ್ದ ಅನಿಸಿಕೆಗಳೆ ತಿರುವುಮುರುವಾಗಿ ಹೋಗಿಬಿಡಬಹುದು... ಅಂದರೆ ಪ್ರಾಜೆಕ್ಟಿನ ಕಾರ್ಯಯೋಜನೆಯನ್ನು  ಪೂರ್ತಿಯಾಗಿ ಮತ್ತೆ ಪರಾಮರ್ಶಿಸಬೇಕು - ಹೆಚ್ಚುಕಡಿಮೆ ಮೊದಲಿನಿಂದ ಮಾಡಿದಂತೆ. ಅಷ್ಟು ಹೊತ್ತಿಗಾಗಲೆ ಪ್ರಾಜೆಕ್ಟ್ ಹಲವಾರು ಹೆಜ್ಜೆ ಮುಂದಿಕ್ಕಿಬಿಟ್ಟಿರುವ ಕಾರಣ ಎಷ್ಟೊ ಬದಲಾವಣೆ ಮಾಡಬೇಕೆಂದರೂ ಸಾಧ್ಯವಾಗದ ಪರಿಸ್ಥಿತಿ.. ಎಲ್ಲಾ ಅರೆಬರೆ ಗೊಂದಲದ ಮಿಶ್ರಣವಾಗಿ ಗಮ್ಯದ ನಿಲುಕು ತಪ್ಪಿ ಹೋಗಬಾರದಲ್ಲ? ಈ 'ಅನಿಸಿಕೆ' ಗಳ ಅಸ್ಪಷ್ಟತೆ ಮುಂದುವರೆಯುತ್ತಲೆ ಇರುವುದರಿಂದ ಪ್ರಾಜೆಕ್ಟಿನ ಅನಿಶ್ಚಿತತೆಯ ಪರಿಸರವೂ ಹಾಗೆಯೇ ಮುಂದುವರೆಯುತ್ತಲೆ ಇರುತ್ತದೆ. ಸಮಯ ಕಳೆದಂತೆ ಅನಿಸಿಕೆಗಳ ಅಸ್ಪಷ್ಟತೆ - ಸ್ಪಷ್ಟತೆಯತ್ತ ನಡೆದರು, ಸದಾ ಬಡ್ಜೆಟ್ಟು, ವ್ಯಯವಾದ ಕಾಲ, ಗುಣಮಟ್ಟ, ಸಂಪನ್ಮೂಲಗಳ ಒದ್ದಾಟದಲ್ಲಿ ಮುಳುಗಿಹೋಗಿರುವ ಪ್ರಾಜೆಕ್ಟುಗಳು ಬೇಕೆಂದರೂ ಬದಲಿಸಿಕೊಳ್ಳಲಾಗದ, ಹೊಂದಿಕೊಳ್ಳಲಾಗದ ಸ್ಥಿತಿಗೆ ತಲುಪಿಬಿಡುತ್ತವೆ.. ಆಗಿನ ತಂಡದ ಮನಸ್ಥಿತಿ ಹೇಗಿರುತ್ತದೆಂದರೆ - 'ಹೇಗಾದರೂ ಸರಿ, ಪ್ರಾಜೆಕ್ಟ್ ಮುಗಿದರೆ ಸಾಕಪ್ಪಾ' ಅನ್ನುವಂತೆ...'

'ನಿಜ ನಿಜ..ಪ್ರಾಜೆಕ್ಟಿನ ನಡೆಸುವಿಕೆಯಲ್ಲಿ ಇಷ್ಟೆಲ್ಲ ಒಳ ಸೂಕ್ಷ್ಮಗಳಿರುತ್ತವೆಯೆಂದು ನನಗೆ ಗೊತ್ತಾಗಿಯೆ ಇರಲಿಲ್ಲ..ಬಿಜಿನೆಸ್ ಅನಲಿಸ್ಟೊ, ಪ್ರಾಜಕ್ಟ್ ಮ್ಯಾನೇಜರೊ ಸರಿಯಿಲ್ಲವೆಂದುಕೊಂಡು ಅವರನ್ನು ಬೈದುಕೊಳ್ಳುತ್ತಿದ್ದೆವು.. ಅದಿರಲಿ, ಈ ಪ್ರಾಜೆಕ್ಟುಗಳಿಗೆ ಈ ಪರಿಸ್ಥಿತಿಯಿಂದ ಮುಕ್ತಿಯೇ ಇಲ್ಲವೇ? ಮತ್ತೊಂದು ಕಡೆ ನೋಡಿದರೆ ಮ್ಯಾನೇಜ್ಮೆಂಟಿಗೆ ಈ ಪಾಡಿನ ಕುರಿತಾದ ಅರಿವೂ ಇರುವಂತೆ ಕಾಣದು..ಗೋಲೈವಿನ ನಂತರವೂ ಏನಾದರೂ ದೂರುತ್ತಲೆ ಇರುತ್ತಾರೆ..? ' 

ಅವನ ಮಾತಿಗೆ ನಸುನಕ್ಕ ಶ್ರೀನಾಥ ಎದುರಿದ್ದ ಕಾಫಿ ಹೀರುತ್ತ, 'ಮ್ಯಾನೇಜ್ಮೆಂಟಿಗೆ ವ್ಯವಹಾರ ಸುಗಮವಾಗಿ ನಡೆಯುವುದಷ್ಟೆ ಮಖ್ಯ ..ಐಟಿಯ ತೊಂದರೆಯೆಲ್ಲ ಅವರಿಗೆ ಗೊತ್ತಾದರೂ ಅವರ ಪ್ರತಿಕ್ರಿಯೆ ಭಿನ್ನವಾಗಿರುವುದಿಲ್ಲ.. ಇಲ್ಲಿ ಗೆದ್ದರೆ ಯಾರೂ ಹಾರ ಹಾಕುವುದಿಲ್ಲ - ಯಾಕೆಂದರೆ ಪ್ರಾಜೆಕ್ಟಿನ ತಂಡದ ಮಾಮೂಲಿ ಕರ್ತವ್ಯವೇ ಅದು - ಬಿಜಿನೆಸ್ಸನ್ನು ಗೆಲ್ಲಿಸುವುದು. ಸೋತರೆ ಮಾತ್ರ ಆಳಿಗೊಂದು ಕಲ್ಲು ಖಂಡಿತ! ಅದಿರಲಿ; ಇನ್ನು ಪ್ರಾಜೆಕ್ಟಿನ ಸೂಕ್ಷ್ಮದ ವಿಷಯಕ್ಕೆ ಬಂದರೆ - ಇವೆಲ್ಲ  ಪ್ರಾಜೆಕ್ಟಿನ ಗಾತ್ರ, ಸಂಕೀರ್ಣತೆಯ ಮೇಲೂ ಅವಲಂಬಿಸಿರುತ್ತದೆ.. ಚಿಕ್ಕ ಪ್ರಾಜೆಕ್ಟುಗಳಲ್ಲಿ ಅಸ್ಪಷ್ಟತೆಯ ತೊಡಕು ಸುಲಭದಲ್ಲಿ, ತಂತಾನೆಯೆ ನಿವಾರಣೆಯಾಗಿಬಿಡಬಹುದು. ದೊಡ್ಡದರಲ್ಲಿ ಇನ್ನು ಗಹನವಾಗಿ ಮತ್ತಷ್ಟು ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿಬಿಡಬಹುದು. ಅದರಿಂದಲೆ ಪ್ರಾಜೆಕ್ಟಿನ ಕಮ್ಯೂನಿಕೇಶನ್ನು ಕಷ್ಟಕರ ಎನ್ನುವುದು. ಒಂದು ಕಡೆ ಹೆಚ್ಚು ಸಂವಹನ ಗೊಂದಲಕ್ಕೆ ಕಾರಣವಾದರೆ, ಇನ್ನೊಂದೆಡೆ ಕಡಿಮೆ ಸಂವಹನ ತಪ್ಪನಿಸಿಕೆಗಳ ಸರಪಳಿ ಪ್ರಕ್ರಿಯೆಗೆ ಕಾರಣವಾಗುತ್ತದೆ..ದುರಂತವೆಂದರೆ ಎರಡರ ಫಲಿತವೂ ದುರಂತಕರವೆ..'

'ಹಾಗಾದರೆ ಒಟ್ಟಾರೆ .. ಎಲ್ಲವೂ ಸಮಯೋಚಿತವಾದ, ಹದವಾದ ಪ್ರಮಾಣದಲ್ಲಿ ಬೆರೆತಿದ್ದರಷ್ಟೆ ಪ್ರಾಜೆಕ್ಟಿನ ಯಶಸ್ಸು ಅಂದ ಹಾಗಾಯ್ತು..?' 

'ಒಂದು ರೀತಿಯಲ್ಲಿ ಇದು ನಿಜ..ಬಹುಶಃ ಪ್ರತಿ ಪ್ರಾಜೆಕ್ಟಿನಲ್ಲೂ ಈ ಸಮಯೋಚಿತ ಹದದ ಪರಿಮಾಣ ಮತ್ತು ಪರಿಣಾಮಗಳನ್ನು ಕಂಡುಕೊಂಡು ಅದನ್ನು ಮುನ್ನಡೆಸುವ ಪಂಥ ಪ್ರಾಜೆಕ್ಟ್ ಮ್ಯಾನೇಜರನದು.. ಇದರಿಂದಾಗಿಯೆ ಮೇಲ್ನೋಟಕ್ಕೆ ಒಂದೆ ರೀತಿ ಕಾಣುವ ಎರಡು ಪ್ರಾಜೆಕ್ಟುಗಳು ಅದರ ನಡೆಸುವಿಕೆಯಲ್ಲಿ ತೀರಾ ವಿಭಿನ್ನವಾಗಿ ತೋರುವುದು... ಬಹುಶಃ, ಈ ತರದೆಲ್ಲಾ ಅನುಭವಗಳಿಂದ ಪ್ರಭಾವಿತವಾಗಿ ಪ್ರಾಜೆಕ್ಟುಗಳಲ್ಲಿ 'ಅಜೈಲ್' ನಂತಹ ಹೊಸತಿನ ಚುರುಕು ವಿಧಾನಗಳು ಚಲಾವಣೆಗೆ ಬರುತ್ತಿರುವುದು... '

' ನಾನೂ ಅದರ ಕುರಿತು ಓದಿದ್ದೇನೆ... ಬಹುಶಃ ಇದೆಲ್ಲ ಸಮಸ್ಯೆಗಳಿಗೂ 'ಅಜೈಲ್ ವಿಧಾನ' ಉತ್ತರವಾಗುತ್ತದೋ ಏನೋ..?'

'ತಾಳು ತಾಳು.. ಕೊಂಚ ಕಡಿವಾಣ ಹಾಕೋಣ ಕಲ್ಪನೆಯ ಕುದುರೆಗೆ.. ಅಜೈಲ್ ಎಲ್ಲದಕ್ಕೂ ರಾಮಬಾಣ ಅಂದುಕೊಂಡು ಹೊರಡುವುದು ಕೂಡಾ ಅಪಾಯಕಾರಿಯೆ..'

'ಅಂದರೆ ಅಜೈಲಿನಲ್ಲೂ ದೋಷವಿದೆಯೆನ್ನುತ್ತಿರಾ?' 

(ಇನ್ನೂ ಇದೆ)
__________
 

Comments

Submitted by kavinagaraj Mon, 05/26/2014 - 10:14

ನಿಮ್ಮ ಕಾರ್ಯಕ್ಷೇತ್ರದ ಬಗ್ಗೆ ನನ್ನ ತಿಳುವಳಿಕೆ ಕಡಿಮೆ. ಆರೋಹಣ ಚೆನ್ನಾಗಿದೆ.

Submitted by nageshamysore Thu, 05/29/2014 - 05:49

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಕಥೆಯಲ್ಲಿ ಬರುವ ಕಾರ್ಯಕ್ಷೇತ್ರ ಐಟಿ ಹಿನ್ನಲೆಯದಾದರೂ, ಪ್ರಾಜೆಕ್ಟು ಹಿನ್ನಲೆಯೆಲ್ಲಾ ಮಾಮೂಲಿನ ಪ್ರಾಜೆಕ್ಟಿನ ಸಿದ್ದಾಂತಗಳನ್ನು ಆಧರಿಸಿದ್ದೆ. ಹಿಂದೊಮ್ಮೆ ಹೇಳಿದ್ದಂತೆ ಪ್ರಾಜೆಕ್ಟುಗಳ ಕುರಿತಾದ ಸಾಹಿತ್ಯಿಕ ಪರಿಚಯ ಎಲ್ಲರಿಗೂ ಇರುವುದಿಲ್ಲವಾದ ಕಾರಣ ಇಲ್ಲಿ ಒಂದಷ್ಟು ವಿವರಣೆ ತರಲು ಯತ್ನಿಸಿದ್ದೇನೆ. ಕೆಲವು ಪದಗಳ ಭಾಷಾಂತರ ತೀರ ಅಪರಿಚಿತವೆನಿಸುವ ಕಾರಣ ಸ್ವಲ್ಪ ಗೊಂದಲ ಮೂಡಿಸಿದರೂ ಅಚ್ಚರಿಯಿಲ್ಲ. ಅದಕ್ಕೆ ಅಲ್ಲಲ್ಲಿ ಮೂಲ ಭಾಷೆಯ ಪ್ರಯೋಗವನ್ನೆ ಉಳಿಸಿಕೊಂಡಿದ್ದೇನೆ. ಒಂದು ರೀತಿ, ಇದೂ ಎಕ್ಸ್ಪರಿಮೆಂಟೆ :-)

Submitted by ಗಣೇಶ Mon, 06/15/2015 - 00:01

In reply to by nageshamysore

ನಾಗೇಶರೆ,
ದೂರದ ನೆಫ್ಚೂನ್ ಗ್ರಹದಂತೆ ನನ್ನ ಪರಿಭ್ರಮಣ ಓದು ನಿದಾನಗತಿಯಲ್ಲಿ ಸಾಗುತ್ತಿದೆ. ಕವಿನಾಗರಾಜರಂದಂತೆ ಈ ವಿಷಯದ ಬಗ್ಗೆ ನನ್ನ ತಿಳುವಳಿಕೆನೂ ಕಡಿಮೆನೇ.. ಆದರೆ ನನ್ನಂತಹ ಸಾಮಾನ್ಯನಿಗೂ ಅರ್ಥವಾಗುವಂತೆ ನೀವು ವಿವರಿಸಿದ ರೀತಿಯಂತೂ ಅಮೋಘ. ಈ ಐಟಿ ಮಂದಿಯ ಒದ್ದಾಟದ ಅರಿವಾಯಿತು.

Submitted by nageshamysore Tue, 06/16/2015 - 05:14

In reply to by ಗಣೇಶ

ಗಣೇಶ್ ಜಿ ನಮಸ್ಕಾರ.. ಐಟಿ ಜಗದ ತಾಕಲಾಟಗಳು ಮಾಮೂಲಿಗಿಂತ ಭಿನ್ನವಾದ ಕಾರಣ ಅದರ ತುಸು ಪರಿಚಯಾತ್ಮಕ ವಿವರಣೆ ನೀಡಬಹುದೆನಿಸಿತು. ಆ ಅನುಭವವಿರದವರಿಗೆ ಹೆಸರುಗಳಾದರು ಪರಿಚಯವಾಗುತ್ತದೆ.. ಸ್ವಲ್ಪ ತಿಣುಕಿದರೆ ಹಿನ್ನಲೆಯು ಅರಿವಾಗುತ್ತದೆ.

ನೆಪ್ಚೂನೆ ಆದರು ಪರಿಭ್ರಮಣದ ಸೌರವ್ಯೂಹದಲ್ಲಿ ಇನ್ನು ಕೊಂಡಿಯಿರಿಸಿಕೊಂಡೆ ಸುತ್ತುತ್ತಿದ್ದೀರಾ.. ಬೇಗನೆ ಬಲಯ ಬದಲಿಸಿ ಮಂಗಳನೊ, ಶುಕ್ರನೊ ಆಗಬಹುದು ಬಿಡಿ:-)