ಕಥೆ: ಪರಿಭ್ರಮಣ..22

ಕಥೆ: ಪರಿಭ್ರಮಣ..22

(ಪರಿಭ್ರಮಣ..(21)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

' ಸದ್ಯಕ್ಕೆ ಅಜೈಲಿನ ವಾದ ಪಕ್ಕಕ್ಕಿಡೋಣ.. ಅದರ ಬಗ್ಗೆ ಮಾತಾಡಲು ಹೊರಟರೆ ಮತ್ತೊಂದು ಹೊಸ ಅಧ್ಯಾಯವನ್ನೆ ತೆರೆಯಬೇಕಾಗುತ್ತದೆ. ಸದ್ಯಕ್ಕೆ ನಮ್ಮ 'ವಾಟರ್ ಫಾಲ್ ' ವಿಧಾನದತ್ತ ಗಮನ ಕೊಡೋಣ... ಈ 'ಅನಿಸಿಕೆಯ ಅಸ್ಪಷ್ಟತೆ' ಒಂದು ಸೈದ್ದಾಂತಿಕ ತೊಂದರೆಯಾದರೆ ಇನ್ನು ಪ್ರಾಜೆಕ್ಟಿನ ಕಾರ್ಯ ರೀತಿಯದು ಮತ್ತೊಂದು ಬಗೆಯ ತೊಡಕು..'

'ಅದಕ್ಕೆಂದೆ ಅಲ್ಲವೆ ಪ್ರಾಜೆಕ್ಟುಗಳಿಗೆ ಉದ್ದದ ಕಾಲಮಾನ ನಿಗದಿಪಡಿಸುವುದು - ತೊಡಕುಗಳಿಗೆಲ್ಲ ಪರಿಹಾರಕ್ಕೆ ಸಾಕಷ್ಟು ಸಮಯವಿರಲೆಂದು ?'

'ಹೌದು ಮತ್ತು ಅಲ್ಲ. ಪ್ರಾಜೆಕ್ಟಿನ ಕಾಲಮಾನ ನಿಗದಿಯಾಗುವುದು ಪರಸ್ಪರ ಅವಲಂಬಿತ ಕಾರ್ಯಗಳ ಮೇಲೆ, ಜತೆಗೆ ಪ್ರಾಜೆಕ್ಟ್ ಸ್ಕೋಪು, ಹಣಕಾಸಿನ ಪರಿಸ್ಥಿತಿ, ಅವಶ್ಯಕತೆಯ ಅವಸರ - ಎಲ್ಲಾ ಪರಿಗಣನೆಗೆ ಬರುತ್ತದೆ. ಆದರೆ ನಾನು ಹೇಳ ಹೊರಟ ಸಂಧರ್ಭ ಪ್ರಾಜೆಕ್ಟಿನ ವೇಳಾಪಟ್ಟಿ ನಿರ್ಧರಿಸಿದ ಮೇಲೆ ಬರುವಂತಾದ್ದು. ನಿನಗೂ ಗೊತ್ತಿರುವಂತೆ ಪ್ರಾಜೆಕ್ಟಿನ ಪ್ರತಿ ಹಂತದಲ್ಲೂ, ಪ್ರತಿ ಕಾರ್ಯ ಚಟುವಟಿಕೆಯಲ್ಲೂ, ಮಾಡಬೇಕಾದ ಕೆಲಸದ ಮೊತ್ತ ಒಂದೆ ಸಮ ಇರುವುದಿಲ್ಲ. ಹಿಂದಿನವರು ಮುಗಿಸುವತನಕ ಕಾಯಬೇಕಾದ ಕಾರಣಕ್ಕೆ ಕೆಲವೊಮ್ಮೆ ಮಾಡಲೇನೂ ಕೆಲಸವೇ ಇರದ ಪರಿಸ್ಥಿತಿಯಿದ್ದರೆ , ಕೆಲಸ ಮಾಡಬೇಕಾಗಿ ಬಂದಾಗ ಎಲ್ಲಾ ಕೆಲಸ ಒಟ್ಟಾಗಿ ಬಂದು ವಕ್ಕರಿಸಿಕೊಂಡು, ಕಡಿಮೆ ಹೊತ್ತಿನಲ್ಲಿ ಎಲ್ಲಾ ಮುಗಿಸುವ ಅನಿವಾರ್ಯವಾಗಿಸಿಬಿಡುತ್ತದೆ. ಹೀಗಾಗಿ ಸದಾ ಕಾಲದ ಹಿಂದಿನ ಓಟವಾಗಿಬಿಡುತ್ತದೆ ಪ್ರಾಜೆಕ್ಟಿನ ನಡೆಸುವಿಕೆ... ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋದವನೊಬ್ಬ ಹತ್ತರಿಂದ ಐದರತನಕ ದುಡಿದು ನೂರೈವತ್ತು ಪಂಪು ತಯಾರಿಸಿದೆ ಎನ್ನುವ ಲೆಕ್ಕಾಚಾರ ಪ್ರಾಜೆಕ್ಟಿನಲ್ಲಿ ಮಾಡಲಾಗುವುದಿಲ್ಲ..'

ಹೀಗೆನ್ನುತ್ತಲೆ ಮತ್ತೆ ಕಾಫಿ ಹೀರಲು ನೋಡಿದರೆ ಲೋಟ ಖಾಲಿಯಾಗಿತ್ತು. 'ಕಾಫಿ ಚೆನ್ನಾಗಿತ್ತಲ್ಲ? ಮತ್ತೊಂದು ಕಪ್ ಹೇಳೋಣ' ಎಂದು ಆರ್ಡರು ಮಾಡಿದವನನ್ನೆ ಶ್ಲಾಘನೆಯ ಭಾವದಿಂದ ನೋಡುತ್ತ ಕುಳಿತ ದೇವ್, ತನ್ನ ಅಚ್ಚರಿಯ ಭಾವ ಅವಿತಿಟ್ಟುಕೊಳ್ಳಲಾಗದೆ 'ನನಗಂತೂ ಇದೊಂದು ಮೊದಲ ಬಾರಿಯ ವಿಭಿನ್ನ ಅನುಭವ ಈ ಪ್ರಾಜೆಕ್ಟಿನಲ್ಲಿ.. ಇಷ್ಟು ಸಲೀಸಿನ ಗೋಲೈವಿನ ಅನುಭವ ಎಂದೂ ಆಗಿರಲಿಲ್ಲ..ಈ ಅನುಭವದ ಆಧಾರದ ಮೇಲೆ ಹೇಳುವುದಾದರೆ,  ಪ್ರಾಜೆಕ್ಟಿನಲ್ಲಿ ಸಾಧಾರಣವಾಗಿ  ನಿಗದಿಯಾಗುವ ಕಾಲಮಾನ ಯಾಕಷ್ಟು ಉದ್ದವೆಂದು ನನಗರ್ಥವಾಗುತ್ತಿಲ್ಲ ..'

ಅದನ್ನು ಕೇಳಿ ಗಹಿಗಹಿಸಿ ನಕ್ಕ ಶ್ರೀನಾಥ, ' ಅದೇನು ರಾಕೆಟ್ ಸೈನ್ಸ್ ಅಲ್ಲ, ತಂಡದವರೆಲ್ಲ ತಮ್ಮ ತಮ್ಮ ಕೆಲಸಕ್ಕೆ ಹಿಡಿಯುವ ಸಮಯದ ಅಂದಾಜು ಕೊಡುತ್ತಾರೆ - ತಂತಮ್ಮ ಲೆಕ್ಕಾಚಾರದನುಸಾರ. ಅದು ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಬದಿಗಿಟ್ಟು, ಸರಿಯಾದ ಆಧಾರವೆಂದು ಪರಿಗಣಿಸಿ, ಆ ಕಾಲಮಾನಗಳನ್ನೆಲ್ಲ ಪರಸ್ಪರಾವಲಂಬನೆಗನುಗುಣವಾಗಿ ಜೋಡಿಸಿ ತುಸು ಆಚೀಚೆ ಜಾಡಿಸಿದರೆ ಒಟ್ಟಾರೆ ಕಾಲಮಾನ ಸಿದ್ದ. ಆದರೆ ಒಟ್ಟು ಕಾಲಮಾನ ಯಾಕೆ ಉದ್ದವಿರುತ್ತದೆ ಎಂದು ಒಂದು ಉದಾಹರಣೆಯೊಡನೆ ಪರಿಶೀಲಿಸಿ ನೋಡೋಣವೇ? ನೀನು ಮೊನ್ನೆ ಮಾಡಿದೆಯಲ್ಲ ಆ ತಂತ್ರಾಂಶ, ಅದರ ಅಸಲಿ ಕಾಲದ ಲೆಕ್ಕಾಚಾರ ಎಷ್ಟಿತ್ತು ? '

' ಅದೊಂದು ಮಧ್ಯಮ ಗಾತ್ರದ ಪ್ರೋಗ್ರಾಮ್ ..ಅಂದರೆ ನಮ್ಮ ಲೆಕ್ಕಾಚಾರದಲ್ಲಿ ನಾಲ್ಕರಿಂದ ಆರು ವಾರ - ಅಂತಿಮ ಡೆಲಿವರಿಯ ತನಕ..'

'ಸರಿ ಒಂದು ತಿಂಗಳೆ ಎಂದು ಇಟ್ಟುಕೊಳ್ಳುವ ... ಅದೇ ಪ್ರೋಗ್ರಮ್ಮನ್ನು ಬದಲಿಸಿ ಹೊಸದಾಗಿ ಮಾಡಲು ನಿನಗೆ ಸಿಕ್ಕ ಸಮಯವೆಷ್ಟು? '

' ಎರಡು ದಿನವೂ ಇಲ್ಲ..ಸರಿ, ಅರ್ಥವಾಯಿತು ಬಿಡಿ ಸಾರ್ ..ಎಲ್ಲಾ ಕಡೆ ಇದೇ ರೀತಿ 'ಬಫರ' ತುಂಬಿದ ಎಸ್ಟಿಮೇಟಿನಿಂದಾಗಿ ಒಟ್ಟಾರೆ ಕಾಲವೂ ಲಂಬಿಸುತ್ತಾ ಹೋಗುತ್ತದೆ .. ಯಾರೂ ನಿಜವಾದ ನಿಖರ ಎಸ್ಟಿಮೇಟ್ ಕೊಡುವುದಿಲ್ಲ...ಏನಾದರೂ ಹೆಚ್ಚುಕಮಿಯಾಗಿ ಹೋದರೆ ಇರಲೆಂದು ಸ್ವಲ್ಪ ಹೆಚ್ಚೇ ಸೇರಿಸಿರುತ್ತಾರೆ...'

' ಅದು ಗೊತ್ತಿರುವುದರಿಂದಲೆ ಎಲ್ಲ ಪ್ರಾಜೆಕ್ಟ್ ಮ್ಯಾನೇಜರರು ಅದರಲ್ಲಿ ಕೊಂಚ ಕಡಿತ ಮಾಡುತ್ತಾರಾದರೂ, ಕೊನೆಗದು ಕಾಲ ಕಳೆದಂತೆ 'ಸೆಲ್ಪ್ ಪುಲ್ಪಿಲ್ಲಿಂಗ್ ಪ್ರೋಪೆಸಿ' ಯಾಗಿಬಿಡುತ್ತದೆ. ಅಲ್ಲದೆ ಒಟ್ಟಾರೆ ಸಮಗ್ರ ಚಿತ್ರಣದಲ್ಲಿ ಒಳಗಿನ ಅವ್ಯವಸ್ಥೆಗಳಾವುದು ಎದ್ದು ಕಾಣುವುದಿಲ್ಲ... ಪ್ರಪಂಚದ ಎಲ್ಲರೂ ಇದೆ ವಿಧಾನ ಅನುಕರಿಸುತ್ತಿರುವುದರಿಂದ ಬಹುಶಃ ಇದೆ ಸರಿಯಾದ ವಿಧಾನವೆಂದು ನಂಬುತ್ತಲೊ ಅಥವಾ ಇದಕ್ಕಿಂತ ಉತ್ತಮವಾದದ್ದು ಸಿಕ್ಕಿಲ್ಲವೆಂಬ ಅನಿವಾರ್ಯದಿಂದಲೊ ಇಡಿ ಜಗ ಹಾಗೆಯೇ ಮುಂದುವರೆಯುತ್ತಲಿದೆ. ನಾವೂ ಎಲ್ಲಕ್ಕೂ ಪಾಶ್ಚಿಮಾತ್ಯ ಮಾನದಂಡಗಳನ್ನೆ ಅನುಕರಿಸುವುದರಿಂದ ಅದೆ ಉತ್ತಮ ವಿಧಾನವೆಂದು ಮೂಕನುಕರಣೆ, ಅಂಧಾನುಕರಣೆಗಿಳಿಯುತ್ತೇವೆ..ಇನ್ನು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತು ಅವರ ವಿಧಾನವನ್ನು ಅನುಕರಿಸಲೇಬೇಕು..'

' ಶ್ರೀನಾಥ್ ಸಾರ್..ನಿಮ್ಮ ಮಾತಿನ ರೀತಿ ನೋಡಿದರೆ ಆ ವಿಧಾನಗಳನ್ನು ನೀವು ಸಂಪೂರ್ಣ ಒಪ್ಪಿದಂತೆ ಕಾಣುವುದಿಲ್ಲ? '

' ಒಪ್ಪುವುದು ಬಿಡುವುದು ಸಂಧರ್ಭೋಚಿತ ಸಮಯೋಚಿತತೆಯ ಹಸುಗೂಸು. ಸದ್ಯಕ್ಕೆ ಆ ಚರ್ಚೆ ಬೇಡ. ಆ ವಾದ ಸಿದ್ದಾಂತಕ್ಕಿಳಿದರೆ ಇಡಿ ದಿನವೆಲ್ಲ ಚರ್ಚಿಸಬಹುದು ...'

' ಅದಿರಲಿ ಸರ್...ನೀವು ಹೇಳಿದ ಕಾಲದ ಲೆಕ್ಕಾಚಾರ ಸಂಪೂರ್ಣ ಸತ್ಯ..ನನಗಂತೂ ಅದರ ಮೇಲೆ ಸಂಪೂರ್ಣ ನಂಬಿಕೆ ಬಂದುಬಿಟ್ಟಿದೆ.. ನಿಜ ಹೇಳುವುದಾದರೆ ನನಗೆ ಅದರ ಮತ್ತೊಂದು ಪ್ರತ್ಯಕ್ಷ ಅನುಭವ ನಿನ್ನೆ ತಾನೆ ಆಯ್ತು...' 

' ಅಂದರೆ..' ಅರ್ಥವಾಗದೆ ಪ್ರಶ್ನಿಸಿದ ಶ್ರೀನಾಥನ ಮಾತನಲ್ಲೆ ನಡುವೆಯೆ ತುಂಡರಿಸುತ್ತ ನುಡಿದ ಸೌರಭ ದೇವ್..

' ಇಲ್ಲಿ ಜಾಂಡಾ ಊರಿದ ಮೇಲೆ ಕೆಲಸವಿಲ್ಲದ ಬಿಡುವಿನ ಹೊತ್ತಿನಲ್ಲಿ ಸುತ್ತಮುತ್ತಲಿನ ಪ್ರೋಸೆಸನ್ನೆ ಗಮನಿಸುತ್ತಿದ್ದೆ.  ನಿನ್ನೆ ಮೊನ್ನೆಯೆಲ್ಲ ಆ ವೇರ್ಹೌಸಿನ ಸಿಬ್ಬಂದಿ ಜತೆಯೆ ಕೂತಿದ್ದರಿಂದ ಅವರು ನಡುನಡುವೆ ಮಾಡುತ್ತಿದ್ದ ಪ್ಯಾಕಿಂಗ್ ಮತ್ತು ಲೋಡಿಂಗ್ ಕೆಲಸ ಕೂಡ ಕಣ್ಣಿಗೆ ಬಿದ್ದಿತ್ತು .. ಸರಕನ್ನೆಲ್ಲ ಆಯ್ದು ಪ್ಯಾಕ್ ಮಾಡಿದ ಮೇಲೆ ಅದನ್ನು ಟ್ರಾನ್ಸ್ಪೋರ್ಟರನ ಟ್ರಕ್ಕಿಗೆ ಜೋಡಿಸುವ ಹೊತ್ತಿನಲ್ಲಿ ಪಾಪ ತುಂಬಾ ಒದ್ದಾಡುತ್ತಾರೆ ಅನಿಸಿತು...'

' ಆಹಾ..ದಟ್ ಸೀಮ್ಸ್ ಇಂಟರೆಸ್ಟಿಂಗ್..'

' ಕೈಯಲ್ಲಿ ಡೆಲಿವರಿ ನೋಟ್ , ಇನ್ವಾಯ್ಸುಗಳ ಕಂತೆ ಹಿಡಿದುಕೊಂಡು ಒಂದೊಂದೆ ಕಾಪಿ ಚೆಕ್ ಮಾಡುತ್ತ ಆ ಟ್ರಾನ್ಸ್ಪೋರ್ಟ್ ಕಂಪನಿಯ ಸರಕಿನ ಬಾಕ್ಸ್ ಹುಡುಕಿ ಇನ್ವಾಯ್ಸಿನ ಹಾಳೆಯಲ್ಲಿರುವ ನಂಬರಿನ ಜತೆ ತಾಳೆ ನೋಡಿ ಮೇಲೆತ್ತಿ ಜೋಡಿಸಬೇಕು. ಆ ಹುಡುಕಾಟದಲ್ಲೇ ತುಂಬಾ ಹೊತ್ತು ವ್ಯಯವಾಗುತ್ತದೆ..'

' ಹೌದು..ಮೂರು ಟ್ರಾನ್ಸ್ಪೋರ್ಟ್ ಕಂಪನಿಗಳಿರುವುದರಿಂದ, ಮತ್ತು ಯಾರು ಯಾವಾಗ ಬರಬಹುದೆಂದು ಮೊದಲೆ ನಿರ್ಧಾರವಾಗಿರದ ಕಾರಣ, ಅವರು ಆ ವಿಧಾ ಅನುಕರಿಸದೆ ಬೇರೆ  ದಾರಿಯಿಲ್ಲ ಅಲ್ಲವೆ?' ಎಂದು ಪ್ರಶ್ನಿಸಿದ ಶ್ರೀನಾಥ. 

' ಹೌದು..ಆದರೆ ಅದನ್ನು ಸುಲಭವಾಗಿಸೊ ಮತ್ತು ಸರಳವಾಗಿಸೊ ಸಾಧ್ಯತೆಯಂತೂ ಇದೆ..' ಆ ಸಾಧ್ಯತೆ ನಿಜಕ್ಕೂ ಕೆಲಸ ಮಾಡುವುದೊ ಇಲ್ಲವೊ ಎಂದು ಇನ್ನು ಕೊಂಚ ಅನುಮಾನದಲ್ಲಿ ಇದ್ದವನ ಹಾಗೆ ಧ್ವನಿಸುತ್ತ ನುಡಿದಿದ್ದ ಸೌರಭ್ ದೇವ್. 

'ಹೇಗೆ?' ಎಂದಿದ್ದ ಉತ್ತೇಜಿಸುವ ದನಿಯಲ್ಲಿ. ಈಗ ತುಸು ಆಳದ ಕುತೂಹಲ ಕೆರಳಿತ್ತು ಶ್ರೀನಾಥನಿಗೆ...ಅದರಲ್ಲೂ ಪ್ರೋಸೆಸ್ ಅಂದ ತಕ್ಷಣವೆ ಅವನ ಕಿವಿ ನಿಮಿರಿತ್ತು. ಅದರಲ್ಲೂ ಪ್ರೋಗ್ರಾಮರುಗಳು ಪ್ರೋಸೆಸ್ ಕುರಿತು ಮಾತಾಡುವುದು ತೀರಾ ಅಪರೂಪ ಬೇರೆ..!

' ಶ್ರೀನಾಥ್ ಸರ್, ಪ್ರತಿ ಬಾಕ್ಸಿನಲ್ಲೂ ಲೇಬಲ್ ಹಾಕಿ ಅದಕ್ಕೊಂದು ಬಾಕ್ಸ್ ನಂಬರು ಕೊಟ್ಟಿರುವುದರಿಂದ ಬಾಕ್ಸು ಗುರುತಿಸುವುದು ಸುಲಭ. ಆ ನಂಬರನ್ನು ಅವರು ಸಿಸ್ಟಮ್ಮಿನಲ್ಲಿ ಡೆಲಿವರಿ ನೋಟಿನ ಯಾವುದಾದರೂ ಬಳಸದ ಫೀಲ್ಡಿಗೆ ಎಂಟ್ರಿ ಮಾಡಿದರೆ, ಆ ಲೇಬಲ್ ಬಾಕ್ಸ್ ನಂಬರನ್ನು ಡೆಲಿವರಿ ನೋಟಿನಲ್ಲು ಪ್ರಿಂಟು ಮಾಡಬಹುದು, ಎರಡರ ಟ್ರಾಕಿಂಗಿಗೆ ಅನುಕೂಲವಾಗುವಂತೆ..'

' ಆದರೆ ಅದರಿಂದೇನು ಅನುಕೂಲ? ಅದರಿಂದ ಅವರು ಹೆಚ್ಚು ಕೆಲಸ ಮಾಡಬೇಕಾಗುವುದಿಲ್ಲವೆ, ಸಿಸ್ಟಮ್ಮಿನಲ್ಲಿ ? ಡೆಲಿವರಿ ನೋಟಿನ ಟ್ರಾಕಿಂಗ್ ಅನುಕೂಲವಾಗುವುದಾದರೂ ಅವರು ಪೇಪರುಗಳ ಕಂತೆ ಹಿಡಿದು ಪರದಾಡಲೆಬೇಕಲ್ಲ? ' 

' ಅಲ್ಲೇ ವ್ಯತ್ಯಾಸವಿರುವುದು ಸಾರ್..ಡೆಲಿವರಿ ನೋಟಿನಲ್ಲಿ ಮುದ್ರಿಸುವ ಐಡಿಯ ಬರಿ ಬ್ಯಾಕಪ್ ಪ್ಲಾನ್ ಮಾತ್ರ..ಯಾಕೆಂದರೆ ಆಡಿಟ್ಟಿನ ದೃಷ್ಟಿಯಿಂದ ಯಾವಾಗಲಾದರೂ ತಾಳೆ ನೋಡಬೇಕಾದರೆ ಅದು ಉಪಯೋಗಕ್ಕೆ ಬರುತ್ತದೆ '

' ಮತ್ತೆ..?' ಈಗ ಶ್ರೀನಾಥನ ದನಿಯಲೂ ತುಸು ಪ್ರಶಂಸೆಯ ಎಳೆಯಿತ್ತು - ಬಹುಶಃ ಇವನನ್ನು ಸರಿಯಾಗಿ ಗ್ರೂಮ್ ಮಾಡಿದರೆ ಇವನು ಒಳ್ಳೆಯ ಬಿಜಿನೆಸ್ ಅನಲಿಸ್ಟ್ ಆಗಬಹುದೇನೊ? 

' ಯಾವಾಗ ಈ ನಂಬರ್ ಸಿಸ್ಟಮ್ಮಿನಲ್ಲಿ ಸಿಕ್ಕುವುದೊ, ಸಿಸ್ಟಮ್ಮಿನ ಡೆಲಿವರಿ ನೋಟಿನಲ್ಲಿ ಅದರ ಜತೆಗಿರುವ ಟ್ರಾನ್ಸ್ಪೋರ್ಟರನ ಮಾಹಿತಿ ಸೇರಿಸಿ, ಒಂದು 'ಟ್ರಾನ್ಸ್ಪೋರ್ಟ ವೈಸ್' 'ಲೋಡಿಂಗ್ ಟ್ರಿಪ್ ಶೀಟ್ ರಿಪೋರ್ಟ್' ಪ್ರಿಂಟು ಮಾಡಿಬಿಡಬಹುದು ಸಾರ್..ಬಾಕ್ಸ್ ನಂಬರಿಗನುಗುಣವಾಗಿ ಮತ್ತು ಪ್ರತಿ ಟ್ರಾನ್ಸ್ಪೋರ್ಟರನಿಗೂ ಬೇರೆ ಬೇರೆಯಾಗಿ...'

' ಇಂಟರೆಸ್ಟಿಂಗ್ ...!'

' ಅವರು ಐಟಂಸ್ ಪಿಕ್ ಮಾಡಿದ ಮೇಲೆ ಹೇಗೂ ಕಂಪ್ಯೂಟರಿನಲ್ಲಿ ಎಂಟ್ರಿ ಮಾಡಲೇಬೇಕು ಎಷ್ಟು ಪಿಕ್ ಮಾಡಿದರೆಂದು..ಹೀಗಾಗಿ ಅದೇ ಹೊತ್ತಿನಲ್ಲಿ ಬಾಕ್ಸ್ ನಂಬರು ಹಾಕುವುದೇನು ಕಷ್ಟವಾಗದು.. ಪ್ಯಾಕಿಂಗ್ ಮೊದಲೇ ಲೇಬಲ್ ಪ್ರಿಂಟ್ ಮಾಡಿಕೊಂಡಿದ್ದರೆ ಸಾಕು..'

' ಎನಿವೇ, ಪ್ಯಾಕಿಂಗ್ ಲಿಸ್ಟನ್ನು ಸಹ ಸಿಸ್ಟಮ್ಮಿನಲ್ಲೆ ಮಾಡುವುದರಿಂದ ಬೇಕಾದ ಅದರ ಮಾಹಿತಿಯೆಲ್ಲ ಡೆಲಿವರಿ ನೋಟಿನ ಒಳಗೆ ಇರುತ್ತದೆ..'

'ಹೌದು ಸಾರ್..ಜತೆಗೆ ಇದೆ ಮಾಹಿತಿ ಬಳಸಿ ಪ್ಯಾಕ್ ಮಾಡುವ ಕೊನೆಯ ಹಂತದಲ್ಲಿ, ಬಾಕ್ಸಿನ ಮೇಲೆ ಎದ್ದು ಕಾಣುವ ಹಾಗೆ ಆ ನಂಬರನ್ನು ಬರೆದರೆ ಸಾಕು ಮಾರ್ಕರ ಪೆನ್ನಿನಲ್ಲಿ...ಅದೇ ನಂಬರನ್ನು ಪ್ಯಾಕಿಂಗ್ ಸ್ಲಿಪ್ ಮೇಲೆ ನೋಟ್ ಮಾಡಿಕೊಂಡು ಕಂಪ್ಯೂಟರಿಗೆ ಎಂಟ್ರಿ ಮಾಡಿದರೆ ಸಾಕು. ಅವರು ಕೆಲಸ ಮಾಡುವ ರೀತಿಯಲ್ಲಿ ದೊಡ್ಡ ಬದಲಾವಣೆಯೇನೂ ಬೇಕಾಗುವುದಿಲ್ಲ.. '

' ಆಗ ಲೋಡ್ ಮಾಡುವ ಸಿಬ್ಬಂದಿ ದೊಡ್ಡ ಕಂತೆಯ ಬದಲು ಈ ಒಂದೆ ಪೇಪರು ಲಿಸ್ಟು ಹಿಡಿದುಕೊಂಡು ಅಲ್ಲಿರುವ ಬಾಕ್ಸ್ ನಂಬರನ್ನು ತಾಳೆ ನೋಡಿ ಸರಿಯಾದ ಬಾಕ್ಸನ್ನು ಆಯ್ದು ಟ್ರಕ್ಕಿಗೆ ಹೆಚ್ಚು ಹುಡುಕಾಟವಿಲ್ಲದೆ ಸಾಗಿಸಬಹುದು...' ಆ ಸನ್ನಿವೇಶ ಹೇಗೆ ಕೆಲಸಮಾಡುವುದೆಂಬುದರ ಚಿತ್ರಣವನ್ನು ಮನದಲ್ಲೇ ಊಹಿಸುತ್ತ ನುಡಿದಿದ್ದ ಶ್ರೀನಾಥ 'ಕುನ್. ಸೋವಿ ವುಡ್ ಲವ್ ಡಿಸ್ ಸಲ್ಯುಷನ್ ... ಐ ಥಿಂಕ್ ವಿ ಶುಡ್ ಟ್ರೈ ಅಂಡ್ ಸೀ ಹೌ ಇಟ್ ವರ್ಕ್ಸ್. ಈ ರಿಪೋರ್ಟ್ ರೆಡಿ ಮಾಡಲು ಎರಡು ಮೂರು ದಿನ ಹಿಡಿಸಬಹುದಾ? ಅದು ಸರಿಯಾಗಿ ಕೆಲಸ ಮಾಡುತ್ತಿದೆಯೆಂದು ಗ್ಯಾರಂಟಿಯಾದ ಮೇಲೆ, ನಂತರ ಕುನ್. ಸೋವಿಯೊಂದಿಗೆ ಮಾತನಾಡಬಹುದು...?'

ಆ ಮಾತಿಗೆ ಸೌರಭ್ ತುಟಿಯಂಚಿನಲ್ಲೆ ನಗುತ್ತ, ' ಅದೇನೂ ಕಾಯುವ ಅಗತ್ಯವಿಲ್ಲ ಶ್ರೀನಾಥ್ ಸಾರ್... ನಿನ್ನೆ ಸಂಜೆಯೇ ರೆಡಿ ಮಾಡಿ ಟೆಸ್ಟಿಂಗ್ ಮುಗಿಸಿಬಿಟ್ಟೆ.. ನೀವು 'ಹೂಂ' ಎಂದರೆ ಇವತ್ತೇ ಆರಂಭಿಸಬಹುದು..!' ಅಂದಿದ್ದ ಯಾವುದೋ ಸಸ್ಪೆನ್ಸ್ ಬಿಡಿಸಿದವನಂತೆ ಹೆಮ್ಮೆಯ ದನಿಯಲ್ಲಿ.

ಬೆಚ್ಚಿಬಿದ್ದ ಮೆಚ್ಚಿಕೆಯ ಭಾವದಲ್ಲಿ ಅವನತ್ತ ನೋಡುತ್ತ ಶ್ರೀನಾಥ 'ದಟ್ ಇಸ್ ಗ್ರೇಟ್ ...ದೆನ್ ಲೆಟ್ ಅಸ ಗೋ ಅಹೆಡ್ .. ಕುನ್. ಸೋವಿ ಶುಡ್ ಗೀವ್ ಎ ಪಾರ್ಟಿ ಫಾರ್ ದಿಸ್ ಬೋನಸ್ ಗಿಫ್ಟ್ ..' ಎಂದಿದ್ದ ಮೆಲು ನಗುತ್ತ. 

' ಇದೇನು ಮಹಾ ಗ್ರೇಟು ಬಿಡಿ ಶ್ರೀನಾಥ್ ಸಾರ್..ನೀವು ಗೋಲೈವಿಗೆ ಮೂರೆ ದಿನಕ್ಕೆ ಮೊದಲು ಅದು ಹೇಗೆ ಇಲ್ಲೊಂದು ತೊಡಕಿರಬಹುದೆಂದು ಊಹಿಸಿ ಕಂಡುಹಿಡಿದಿರೊ ಎನ್ನುವುದು ಈಗಲೂ ನನಗೆ ಯಕ್ಷಪ್ರಶ್ನೆ. ಒಂದು ವೇಳೆ ಅದು ಗೊತ್ತಾಗಿರದಿದ್ದರೆ ಈಗ ನಾವೀರೀತಿ ಇಲ್ಲಿ ಕೂತು ತಳಾರವಾಗಿ ಮಾತನಾಡಲಾಗುತ್ತಿತ್ತೆ? ಅದೂ ಗೋಲೈವಿನ ವಾರದಲ್ಲಿ !'

' ಅದು ಬಿಡು ಮತ್ತೊಂದು ದೊಡ್ಡ ಟಾಫಿಕ್ ..ಕಾಫಿ ಜತೆ ಮುಗಿಯುವಂತಾದ್ದಲ್ಲ...ಈಗ ವಾಪಸ್ಸು ಹೊರಡೋಣ ವೇರ್ಹೌಸಿಗೆ - ನಿನ್ನ 'ಹೊಸ' ರಿಪೋರ್ಟ್ ಕುರಿತು ಹೇಳಿ ಅವರನ್ನು ಖುಷಿ ಪಡಿಸುವುದಕ್ಕೆ. ಅದಕ್ಕೆ ಮೊದಲು ಒಂದೆ ಒಂದು ಮಿನಿ ಸಿದ್ದಾಂತದ ಕಿಡಿಯನ್ನ ನಿನಗೂ ಹಂಚಿ, ಹಚ್ಚಿಬಿಡುತ್ತೇನೆ. ಆಗ ನೀನು ಮಾಡಿದ ಈ ಕೆಲಸ ಎಷ್ಟು ತೃಪ್ತಿಕರವಾದದ್ದೆಂದು ನಿನಗೂ ಅರಿವಾಗುತ್ತದೆ ಮತ್ತು ಇದೇ ರೀತಿ ಮುಂದೆಯೂ ಮುಂದುವರೆಯಲು ಸಹಕಾರಿಯಾಗುತ್ತದೆ..'

' ಐಯಾಮ್ ಆಲ್ ಇಯರ್ಸ್ ಸರ್' ಎಂದ ಸೌರಭದೇವ ಕುತೂಹಲ ಬೆರೆತ ಆಸಕ್ತಿಯಿಂದ. 

' ನಾನು ಹೇಳ ಹೊರಟ ಈ ಸಿದ್ದಾಂತದ ತುಣುಕು ಹೊಸ ವಿಷಯವೇನಲ್ಲ.. 'ಥಿಯರಿ ಆಫ್ ಕಂಸ್ಟ್ರೈಂಟ್ಸ್ ' ಪಿತಾಮಹನೆಂದೆ ಹೆಸರಾದ 'ಗೋಲ್ಡ್ ರಾಟನ' ಪುಸ್ತಕವೊಂದರಲ್ಲಿ ಓದಿದ ಸರಳ ತುಣುಕಷ್ಟೆ - ಆದರೂ ಗಹನವಾದ ವಿಷಯ. ಪ್ರಾಜೆಕ್ಟಿನ ನನ್ನೆಲ್ಲ ಸ್ವಂತ ಒಡನಾಟದಲ್ಲಿ ಇದು ಪ್ರಮುಖ ದಾರಿದೀಪದಂತೆ ಕೆಲಸ ಮಾಡುವ ಅಂಶ ...'

' ಈಗ ನನ್ನ ಕುತೂಹಲವೂ ಕೆರಳುತ್ತಿದೆ ಶ್ರೀನಾಥ ಸಾರ್...'

' ಗ್ರಾಹಕರಿಗಾಗಿ ನಾವೇನೆ ಮಾಡಿದರೂ - ನೀನು ಮಾಡುವ ಪ್ರೋಗ್ರಾಮಿಂಗ್ ಸೇರಿದಂತೆ - ಅದನ್ನು ಎರಡು ದೃಷ್ಟಿಕೋನದಿಂದ ನೋಡಬಹುದು. ಮೊದಲನೆಯದು 'ಮಾರಾಟಗಾರನ ಮೌಲ್ಯಮಾಪನ ಭಾವ' (ಸೆಲ್ಲರ್ ಪರ್ಸೆಪ್ಶನ್ ಆಫ್ ವ್ಯಾಲ್ಯೂ ) - ಈ ನಿನ್ನ ತಂತ್ರಾಂಶದ ಉದಾಹರಣೆಯಲ್ಲಿ ನೀನು ಮಾರಾಟಗಾರನ ಸ್ಥಾನದಲ್ಲಿ ಇರುವುದರಿಂದ ನೀನು ತಯಾರಿಸಿದ ಸರಕಿನ ಮೌಲ್ಯ , ಅರ್ಥಾತ್ ನಿನ್ನ ಪ್ರೋಗ್ರಾಮಿನ ಮೌಲ್ಯ - ಅದನ್ನು ತಯಾರಿಸಲು ನೀನೆಷ್ಟು ಕಷ್ಟಪಟ್ಟೆ, ಎಷ್ಟು ಸಮಯ ವ್ಯಯಿಸಿದೆ, ಏನೆಲ್ಲಾ ಸಂಪನ್ಮೂಲ ಬಳಸಿದೆ ಎನ್ನುವುದರ ಮೇಲೆ ಆಧರಿಸಲ್ಪಟ್ಟಿರುತ್ತದೆ.. ನೀನು ವಾರ ಪೂರ್ತಿ ಹಗಲು ರಾತ್ರಿ ನಿದ್ದೆಗೆಟ್ಟು ತಂತ್ರಾಂಶದ ಸಮಸ್ಯೆಯನ್ನೆಲ್ಲ ಬಗೆಹರಿಸಿ ಕಷ್ಟಪಟ್ಟು ಮುಗಿಸಿದಾಗ ಅದೊಂದು ಅತ್ಯಮೂಲ್ಯ ಸಾಧನೆಯಾದ ಕಾರಣ ನಿನ್ನ ಅಥವಾ ನಿನ್ನ ಸಂಸ್ಥೆಯ ಕಣ್ಣಲ್ಲಿ ಅದರ ಮೌಲ್ಯ ಅತ್ಯಂತ ಹೆಚ್ಚಾಗಿ ಕಾಣುತ್ತದೆ - ಸ್ವಾಭಾವಿಕವಾಗಿ ಮತ್ತು ತರ್ಕಬದ್ದವಾಗಿ ಸಹ...'

' ಹೌದು..ನಿಜ.. ನನಗಂತೂ ತೀರಾ ಕಂಗೆಡಿಸಿದ ಪ್ರೋಗ್ರಾಮುಗಳೆ ತುಂಬಾ ಆಪ್ತ ಮತ್ತು ಹೊಸತಿನ ಕಲಿಕೆಯ ಪ್ರೇರಕ ಕೂಡಾ.'

' ಎಗ್ಸಾಕ್ಟ್ಲಿ.. ಅದೇ ಈಗ ಎರಡನೆಯ ಸಿದ್ದಾಂತದ ತುಣುಕಿಗೆ ಬರೋಣ.. 'ಕೊಂಡುಕೊಳ್ಳುವವನ ಮೌಲ್ಯಮಾಪನ ಭಾವ' (ಬೈಯರ್ಸ್ ಪರ್ಸೆಪ್ಶನ್ ಆಪ್ ವ್ಯಾಲ್ಯೂ). ಈ ಪ್ರೋಗ್ರಾಮಿನ ಕೇಸಿನಲ್ಲಿ ಕುನ್. ಸೋವಿಗಾಗಲಿ ಅವನ ಸಿಬ್ಬಂದಿಗಾಗಲಿ ನೀನೆಷ್ಟು ಕಷ್ಟಪಟ್ಟೆ, ಸಮಯ ವ್ಯಯಿಸಿದೆ ಎಂಬುದು ಮುಖ್ಯವಾಗಿ ಕಾಣುವುದಿಲ್ಲ. ಅವರು ಅದನ್ನು ಬಳಸುವಾಗ ಇರುವ ಸರಳತೆ, ಮತ್ತು ಅದರಿಂದಾಗುವ ಉಪಯೋಗದ ಆಧಾರದ ಮೇಲೆ ಅದರ ಮೌಲ್ಯಮಾಪನ ಮಾಡುತ್ತಾರೆ. ನೀನು ಕೊಟ್ಟ ಫಲಿತಾಂಶ ಬಳಸಲು ಕಷ್ಟವಾದದ್ದಾಗಿದ್ದರೆ, ಅವರಿಗೆ ಹೆಚ್ಚು ಸಮಯ ವ್ಯಯ ಮಾಡಿಸಿ ಅವರ ದೈನಂದಿನ ಚಟುವಟಿಕೆಯನ್ನು ಏರುಪೇರು ಮಾಡಿಸುವಂತಿದ್ದರೆ ಆ ಫಲಿತಾಂಶ ಅವರಿಗೆ ಶೂನ್ಯವಿರಲಿ, ಅದಕ್ಕಿಂತಲೂ ಕಡಿಮೆಯ ಋಣಾತ್ಮಕ ಮೌಲ್ಯದ್ದಾಗಿಬಿಡುತ್ತದೆ.... '

' ಹೌ ಟ್ರೂ...ಶ್ರೀನಾಥ್ ಸರ್.. ! ಅವರು ಒದ್ದಾಡುವುದನ್ನು ನಾನೆ ಕಣ್ಣಾರೆ ನೋಡಿರದಿದ್ದರೆ ನನಗೂ ನಂಬಿಕೆ ಬರುತ್ತಿರಲಿಲ್ಲ..' 

' ಅದೇ ನೀನೀಗ ಎರಡು ಘಂಟೆಯಷ್ಟೆ ವ್ಯಯಿಸಿ ಸಿದ್ದಪಡಿಸಿದ ಈ ಹೊಸ 'ಲೋಡಿಂಗ್ ಶೀಟ್ ರಿಪೋರ್ಟ್' ನೋಡು. ನಿನ್ನ ಮೌಲ್ಯದ ದೃಷ್ಟಿಯಲ್ಲಿ 'ಈ ಎರಡು ಗಂಟೆಯ ಫಲಿತ' ನಗಣ್ಯವಾದರೂ, ವೇರ್ಹೌಸಿನ ಸಿಬ್ಬಂದಿಯ ಅದರಲ್ಲೂ ಆ ಲೋಡಿಂಗ್ ಕ್ಲರ್ಕುಗಳ ದೃಷ್ಟಿಯಲ್ಲಿ ಅಪರಿಮಿತ ಮೌಲ್ಯವುಳ್ಳದ್ದಾಗುತ್ತದೆ..' 

' ವಾಹ್! ವಾಟ್ ಎ ಡಿಫರೆಂಟ್ ಪರ್ಸ್ಪೆಕ್ಟಿವ್ !!' ಸ್ವಲ್ಪ ಏರಿದ ಎಗ್ಸೈಟ್ ಆದವನ ದನಿಯಲ್ಲಿ ಚೀರಿದ್ದ ಸೌರಭ್ ದೇವ್.

' ಎಸ್ ಇಟ್ ಇಸ್ ... ನೀನು ಏನೇ ಮಾಡ ಹೊರಟರೂ ಈ 'ಗ್ರಾಹಕ ಚಿಂತನ' ದೃಷ್ಟಿಕೋನಕ್ಕೆ ಗಮನವಿತ್ತರೆ, ಮಾರಾಟಗಾರ ಭಾವ ಮತ್ತು ಕೊಳ್ಳುವವರ ಭಾವ - ಈ ಎರಡರ ನಡುವಿನ ಸಮಷ್ಟಿಯನ್ನು ಸಾಧಿಸಬಲ್ಲ ಸಮಗ್ರ ದೃಷ್ಟಿಕೋನದತ್ತ ಪರಿಶ್ರಮವನ್ನು ಕೆಂದ್ರೀಕರಿಸಬಹುದು...ಅದೇ ಪ್ರಾಜೆಕ್ಟಿನ ಅಥವಾ ಗ್ರಾಹಕರೊಡನಾಟವಿರುವ ಯಾವುದೆ ವಹಿವಾಟಿನ ಯಶಸ್ಸಿನ ಮೂಲ ಮಂತ್ರ..' ಎನ್ನುತ್ತಾ ಮೇಲೆದ್ದ ಶ್ರೀನಾಥನನ್ನೆ ಆರಾಧನಾ ಭಾವದಿಂದ ನೋಡುತ್ತ ' ವಿಲ್ ಆಲ್ವೇಸ್ ಕೀಪ್ ದಿಸ್ ಇನ್ ಮೈಂಡ್ ಸಾರ್..ನಾನ್ಯಾವತ್ತು ಈ ದೃಷ್ಟಿಯಿಂದ ಆಲೋಚಿಸಿರಲೆ ಇಲ್ಲ ' ಎಂದು ತಾನೂ ಮೇಲೆದ್ದ ಸೌರಭ್ ದೇವ್. 

' ನಾಳೆ ಬೆಳಿಗ್ಗೆ ವೇರ್ಹೌಸಿಗೆ ನೀನು ಮೊದಲು ಬಂದಿರು..ನಾನು ಬೆಳಿಗ್ಗೆ ಆಫೀಸಿಗೆ ಹೋಗಿ ಆಮೇಲೆ  ಬರುತ್ತೇನೆ.. ಮೂರು ದಿನದಿಂದ ಇಲ್ಲೇ ಕಳೆದಿದ್ದಾಯ್ತು.. ಅಲ್ಲೆಲ್ಲ ಸರಿಯಾಗಿ ಸಾಗುತ್ತಿದೆಯೊ ಇಲ್ಲವೊ ಎಂದು ಒಮ್ಮೆ ಕಣ್ಣುಹಾಯಿಸಿ ಬರುತ್ತೇನೆ..' ಎಂದವನ ಮಾತಿಗೆ ಆಗಲೆಂದು ತಲೆಯಾಡಿಸುತ್ತ ಟ್ಯಾಕ್ಸಿ ಸ್ಟ್ಯಾಂಡಿನತ್ತ ಹೆಜ್ಜೆ ಜತೆಗೂಡಿಸಿದ ಸೌರಭ ದೇವ. 

ಸೌರಭ್ ದೇವನ 'ಟ್ರಿಪ್ ಲೋಡಿಂಗ್ ಶೀಟಿನ' ರಿಪೋರ್ಟು ವೇರ್ಹೌಸಿನಲ್ಲಿ ಸಂಚಲನವನ್ನೆ ಎಬ್ಬಿಸಿಬಿಟ್ಟಿತ್ತು. ಮೊದಲಿಂದಲೂ ಹಳೆಯ ವಿಧಾನದಲ್ಲಿ ಹೆಚ್ಚು ವೇಳೆ ಮತ್ತು ಶ್ರಮ ವ್ಯಯಿಸಿ ಮಾಡುತ್ತಿದ್ದ ಕೆಲಸ ಈಗ ಏಕಾಏಕಿ ಒಂದು ಗಂಟೆಯ ಅವಧಿಯ ಒಳಗೆ ಮುಗಿಯುವಂತಾದಾಗ ಕುನ್. ಸೋವಿಯ ಮುಖದಲ್ಲಿ ಮೂಡಿದ್ದ ಧನ್ಯವಾದದ ಕೃತಜ್ಞತಾ ಭಾವ ಮಾತಿಗೆ ಮೀರಿದ್ದಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಅದನ್ನು ನೋಡುತ್ತಿದ್ದಂತೆ ಅಲ್ಲಿಯ ಸಿಬ್ಬಂದಿಯೊಬ್ಬನಿಗೆ ಚಕ್ಕನೆ ಮಿಂಚು ಹೊಳೆದಂತಾಗಿ - 'ಆ ಟ್ರಿಪ್ ಶೀಟ್ ಬಳಸಿಕೊಂಡು ಐಟಂ ಪ್ಯಾಕಿಂಗ್ ಮಾಡುವಾಗಲೆ ಬೇರೆ ಬೇರೆ ಗುಂಪಾಗಿ ಬೇರ್ಪಡಿಸಿ ಜೋಡಿಸಿಟ್ಟುಬಿಟ್ಟರೆ ಟ್ರಕ್ ಬಂದಾಗ ಬರಿಯ ಲೋಡಿಂಗ್ ಮಾತ್ರ ಬಾಕಿ ಉಳಿಯುತ್ತದೆ, ಹುಡುಕಾಡುವ ಅವಸರವೂ ತಪ್ಪುತ್ತದೆ ಮತ್ತು ನಮ್ಮದರ ಜತೆಗೆ ಟ್ರಕ್ಕಿನವನ ಸಮಯವೂ ಉಳಿತಾಯವಾಗುತ್ತದೆ ' ಎಂದಿದ್ದ.. ಕುನ್. ಸೋವಿಯೂ ಸಹಮತದಲ್ಲಿ ತಲೆಯಾಡಿಸುತ್ತ ಆ ವಿಭಾಗಿಸಿದ ಸರಕನ್ನು ಪರಸ್ಪರ ಮಿಶ್ರಗೊಳ್ಳದ ಹಾಗೆ ಹೇಗೆ ಭೌತಿಕವಾಗಿ ದೂರದಲ್ಲಿರಿಸಬಹುದೆಂಬ ಚರ್ಚೆಯನ್ನು ಆರಂಭಿಸಿದ್ದ! ಅದನ್ನು ಕೇಳಿದಾಗ ಶ್ರೀನಾಥನಿಗೆ ಈ ಬಾರಿ ಗೋಲೈವಿನ ಮೊದಲ ತಿಂಗಳಲ್ಲೆ ರೆಕಾರ್ಡ್ ಶಿಪ್ಪಿಂಗ್ ಮತ್ತು ಇನ್ವಾಯ್ಸಿಂಗ್ ಸಾಧಿಸಬಹುದೆಂದು ಖಚಿತವಾಗಿ ಅನಿಸತೊಡಗಿತು. ಕುನ್. ಸೋವಿಯಂತು ಸೌರಭದೇವನನ್ನು ಖುಷಿಯಿಂದ ಅಪ್ಪಿಕೊಳ್ಳುವುದೊಂದೆ ಬಾಕಿ. ಅವರ ಪ್ರತಿಕ್ರಿಯೆ ಮತ್ತು ಸೌರಭ್ ದೇವ್ ಮೇಲೆ ಮೂಡಿದ್ದ ನಂಬಿಕೆಯ ಬಿಗಿಯನ್ನು ನೋಡಿದ ಮೇಲೆ, ಮಿಕ್ಕ ದಿನಗಳಲ್ಲಿ ಅವನೊಬ್ಬನೆ ವೇರ್ಹೌಸಿಗೆ ಬಂದರೂ ಸಾಕು, ನಿಭಾಯಿಸಿಕೊಳ್ಳುತ್ತಾನೆಂಬ ನಂಬಿಕೆ ಹುಟ್ಟಿತು. ಇನ್ನು ಅಗತ್ಯ ಬಿದ್ದರಷ್ಟೆ ಬಂದರಾಯ್ತು ಎಂದು ಮನದಲ್ಲೆ ತೀರ್ಮಾನಿಸಿ, ಸೌರಭ್ ದೇವನಿಗೂ ತನ್ನ ಬರುವಿಕೆಯ ಅನಿಶ್ಚಿತತೆಯ ಮುನ್ಸೂಚನೆ ನೀಡಿದ. ಗೋಲೈವಿನ ಮೊದಲ ಮೂರು ದಿನದ ನಿರೀಕ್ಷೆಗೂ ಮೀರಿದ ಸುಗಮಾನುಭವಕ್ಕೆ ಮನಸು ಮಾತ್ರ ನಿರಾಳತೆಯಿಂದ ಕೂಡಿ ಪ್ರಪುಲ್ಲಿತವಾಗಿ ಹೋಗಿತ್ತು. ಅಂದು ಸಂಜೆ ಅಪಾರ್ಟ್ಮೆಂಟಿಗೆ ವಾಪಸ್ಸು ಹೋಗುವ ಹಾದಿಯಲ್ಲಿ ಮನದಲ್ಲಿದ್ದ ಹಗುರ ಭಾವಕ್ಕೆ ಸಂವಾದಿಯಾಗೇನೊ ಎಂಬಂತೆ ಒಂದು ಬಿಯರ ಬಾಟಲು ಖರೀದಿಸಿಕೊಂಡು ಹೋಗಿದ್ದ ಶ್ರೀನಾಥ - ಸೆಲಬ್ರೇಶನ್ ಮೂಡಿನಲ್ಲಿ.  

ಮರುದಿನ ನೇರ ಆಫೀಸಿಗೆ ಹೋದವನಿಗೆ ಅಲ್ಲೂ ತೀರಾ ದೊಡ್ಡ ಸಮಸ್ಯೆಗಳೇನೂ ಕಾಡದೆ ಎಲ್ಲಾ ಸುಗಮವಾಗಿ ನಡೆದಿರುವುದು ಕಂಡು ಮನ ಹಗುರವಾಗಿತ್ತು. ಎದುರಿಗೆ ಸಿಕ್ಕ ಎಂಡಿ - ' ಐ ಹರ್ಡ್ ಎವೆರಿ ಥಿಂಗ್ ಇಸ್ ಗೋಯಿಂಗ್ ಫೈನ್ ಸೋ ಫಾರ್..?' ಎಂದು ಕೈ ಕುಲುಕಿದಾಗ ಇನ್ನಷ್ಟು ನಿರಾಳವಾಗಿತ್ತು. ಅಲ್ಲಿಯತನಕ ಯಾರೂ ಅವರಿಗೆ ದೂರು ಒಯ್ದಿಲ್ಲವೆಂದರೆ ಎಲ್ಲಾ ಸರಿ-ಸುಮಾರು  ಸ್ವಸ್ಥವಾಗಿ ನಡೆಯುತ್ತಿದೆಯೆಂದೆ ಲೆಕ್ಕ. ಸಾಲದ್ದಕ್ಕೆ ಆಗ ತಾನೆ ಆಫೀಸಿನೊಳಕ್ಕೆ ಬರುತ್ತಿದ್ದ ಕುನ್. ಲಗ್ ಪ್ರಾಜೆಕ್ಟ್ ಶುರುವಾದ ನಂತರ ಮೊಟ್ಟಮೊದಲಬಾರಿಗೆ ಇವನ ಸೀಟಿಗೆ ನೇರ ಬಂದು ಮಾತಾಡಿಸಿ ಅಭಿನಂದಿಸಿ ಹೋಗಿದ್ದರು. ಇದೆ ಪರಿಸರ, ವಾತಾವರಣ ಪ್ರಾಜೆಕ್ಟು ಮುಗಿಯುವತನಕ ಇದ್ದರೆ, ತಾನೀ ಯುದ್ಧ ಗೆದ್ದ ಹಾಗೆ ಎಂದುಕೊಂಡು ಸೀಟಿನಲ್ಲಿ ಮುಗಿಸದೆ ಬಿದ್ದಿದ್ದ ಕೆಲವು ಕಾಗದಗಳತ್ತ ಗಮನ ಹರಿಸಿದ್ದ ಶ್ರೀನಾಥ. ತುಸು ಹೊತ್ತಿನ ನಂತರ ಅಲ್ಲೆ ಹತ್ತಿರದಲ್ಲೆ ಕೂರುತ್ತಿದ್ದ ಸಂಜಯ ಶರ್ಮನ ಆಗಮನವೂ ಆಗಿ, ಒಟ್ಟಾರೆ ಪರಿಸ್ಥಿತಿ ಹೇಗಿದೆಯೆಂದು ವಿಚಾರಿಸಿ ಯಾವ ದೊಡ್ಡ ತೊಡಕೂ ಇಲ್ಲವೆಂದು ಅವನಿಂದಲೂ ಖಚಿತಪಡಿಸಿಕೊಂಡ. ಅವನ ಜತೆ ಮಾತಾಡುವಾಗ ಅದೇಕೊ ಅವನೊಂದು ರೀತಿ ಬಿಗಿಯಾಗಿ, ಅರೆ ಮುನಿಸಿಕೊಂಡವನಂತೆ ವರ್ತಿಸಿದ ಅನುಭೂತಿಯುಂಟಾದರೂ ಗೋಲೈವಿನ ಮೊದಲ ದಿನಗಳ ಒತ್ತಡದಲ್ಲಿ ಅದು ಸಾಮಾನ್ಯವೆಂದು ನಿರ್ಲಕ್ಷಿಸಿ ಮತ್ತೆ ತನ್ನ ಕಾರ್ಯದಲ್ಲಿ ಮಗ್ನನಾದ. ಅವನ ಹೆಚ್ಚಿನ ನೇರ ಭಾಗವಹಿಸುವಿಕೆಯಿಲ್ಲದೆಯೂ ಮಾಡಿದ ಬದಲಾವಣೆ, ನಿನ್ನೆಯ ಟ್ರಿಪ್ ಶೀಟ್ ರಿಪೋರ್ಟಿನ ಪ್ರಸಂಗಗಳೆಲ್ಲವೂ ಅವನಲ್ಲಿ ತುಸು ಇರಿಸುಮುರಿಸು ಭಾವನೆ ಹುಟ್ಟಿಸಿದ್ದರೆ ಅಚ್ಚರಿಯಿಲ್ಲ... ಕೊಂಚ ಸಮಯ ಕಳೆದರೆ ಎಲ್ಲ ಮಾಮೂಲಾಗುತ್ತದೆ ಎಂದುಕೊಂಡು 'ಡೈಲಿ ಮೀಟಿಂಗಿನ' ಸಿದ್ದತೆಯಲ್ಲಿ ತೊಡಗಿಸಿಕೊಂಡ ಶ್ರೀನಾಥ ತನ್ನ ಕೆಲಸದ ಬಾಕಿಯಲ್ಲಿ ಕಳೆದು ಹೋಗುತ್ತಿದ್ದನೊ ಏನೊ - ಕುನ್. ಸು ಬಂದು ಹೊಸ ಶಾಕ್ ಕೊಡದಿದ್ದಿದ್ದರೆ... 

ಅಂದು ಯಥಾರೀತಿಯಲ್ಲಿ ಎಲ್ಲಾ ನಡೆಯುತ್ತಿದ್ದ ಹೊತ್ತಿನಲ್ಲಿ, ಎಂದಿನಂತೆ ಬಂದ ಕುನ್. ಸೂ, ಅವನ ಟೇಬಲ್ಲಿನ ಮೇಲೆ ಚಹಾ ಇರಿಸುವಾಗ, ಒಮ್ಮೆ ಸುತ್ತ ಮುತ್ತ ಕಣ್ಣು ಹಾಯಿಸಿ, ಯಾರೂ ನೋಡುತ್ತಿಲ್ಲವೆಂದು ಖಚಿತಪಡಿಸಿಕೊಂಡು ಅವನ ಮುಂದೆ ಕಾಗದದಲ್ಲಿ ಸುತ್ತಿದ್ದ ಪೊಟ್ಟಣವೊಂದನ್ನಿಟ್ಟು ಸರಸರನೆ ಹೋಗಿಬಿಟ್ಟಿದ್ದಳು. ಈ ಬಾರಿ ಮತ್ತೇನು ಬಂತೊ? ಎಂದು ಎದೆ ಧಸಕ್ಕೆಂದ ಭಾವನೆಯಲ್ಲಿ ಕುಸಿದಿದ್ದ ಮನದಲ್ಲೆ ಶ್ರೀನಾಥ, ಮತ್ತೊಮ್ಮೆ ಯಾರೂ ಗಮನಿಸುತ್ತಿಲ್ಲವೆಂದು ಖಚಿತವಾದ ನಂತರ ಸರಕ್ಕನೆ ಆ ಪೊಟ್ಟಣವನ್ನೆತ್ತಿ ಡ್ರಾಯರಿನೊಳಕ್ಕೆ ಸೇರಿಸಿದ್ದ. ಅದರೊಳಗೆ ಏನಿದೆಯೊ ಎಂಬ ಆತಂಕಪೂರ್ಣ ಕುತೂಹಲ ಕಾಡುತ್ತಿದ್ದರೂ ಸೀಟಿನಲ್ಲಿ ಕೂತು ಬಿಚ್ಚಿ ನೋಡುವ ಧೈರ್ಯ ಸಾಲದೆ ಸಂಜೆ ಮನೆಯಲ್ಲಿ ನೋಡುವುದೆಂದು ಅಂದುಕೊಳ್ಳುತ್ತಿದ್ದರೂ, ಸಂಜೆಯ ತನಕ ಕಾಯಲಾಗದ ವಿಚಲಿತ ಮನವನ್ನು ನಿಗ್ರಹಿಸಲಾಗದೆ, ಹೇಗಾದರೂ ಅದೇನೆಂದು ತಕ್ಷಣವೆ ನೋಡಿಬಿಡುವುದು ಸರಿಯೆಂದು ನಿರ್ಧರಿಸಿ, ಆ ಪೊಟ್ಟಣವನ್ನು ಹಾಗೆ ಕೈ ಮರೆಯಲ್ಲೆ ಪ್ಯಾಂಟಿನ ಜೇಬಿಗೆ ಸೇರಿಸಿಕೊಂಡು ಮೇಲೆದ್ದ - ಅದನ್ನು ನೋಡುವ ಸೂಕ್ತ ಜಾಗವನ್ನರಸುತ್ತ. ಮನಸು ಮಾತ್ರ ಅವಳು ಬಂದು ಹೋದಾಗಿನ ಚಿತ್ರಣವನ್ನೆ ಮನಃಪಟಲದಲ್ಲಿ ಮತ್ತೆಮತ್ತೆ ಮರಳಿಸಿ ಮರುಕಳಿಸುವಂತೆ ಮಾಡಿ ಕಂಗೆಡಿಸುತ್ತಿತ್ತು. ಈಚಿನ ದಿನಗಳಲ್ಲಿ ಗೋಲೈವ್ ಮತ್ತು ವೇರ್ಹೌಸಿನ ತೊಡಕಿನ ಗಡಿಬಿಡಿಯಲ್ಲಿ ಸಿಕ್ಕಿ ಅವಳ ವಿಷಯವೇ ಮರೆತುಹೋದಂತಾಗಿತ್ತು. ಆ ಭಿನ್ನ ಮನಸ್ಥಿತಿಯ ನಡುವೆಯೆ ಅಂದವಳು ಮತ್ತೆ ಮ್ಲಾನವದನದೊಂದಿಗೆ ಹಾಜರಾದಾಗ  ಇಂದು ಮತ್ತೇನಿದೆಯೊ , ಇನ್ನೇನು ಕಾದಿದೆಯೊ ಎಂಬ ಅಳುಕಲ್ಲೆ ಏನು ಎಂಬಂತೆ ದಿಟ್ಟಿಸಿ ನೋಡಿದ್ದ. ಅವಳು ಏನು ಮಾತಾಡದೆ ಆ ಸಣ್ಣ ಪೊಟ್ಟಣವನ್ನು ಕೈಗಿತ್ತು ಮಾತೂ ಆಡದೆ ಹೊರಟು ಹೋಗಿದ್ದಳು. ಇದೇನು ಹೊಸ ಕಥೆಯೊ ಏನೊ ಎಂದು ಆತಂಕಿಸುತ್ತಲೆ ಟಾಯ್ಲೆಟ್ಟಿನೊಂದರ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡು ಅದೇನಿರಬಹುದೆಂದು ಬಿಚ್ಚಿ ನೋಡಿದರೆ - ಅಲ್ಲಿ ಸ್ವಸ್ಥವಾಗಿ ಅವನನ್ನೇ ಅಣಕಿಸುವಂತೆ ಕೂತಿತ್ತು -

....'ಪಾಸಿಟಿವ್' ಫಲಿತಾಂಶ ತೋರಿಸುತ್ತಿದ್ದ 'ಪ್ರೆಗ್ನೆನ್ಸಿ ಕಿಟ್' ನ ಸ್ಟ್ರಿಪ್.. !

ಅಲ್ಲಿಯ ತನಕದ ಗೋಲೈವಿನ ಹರ್ಷವೆಲ್ಲ ಒಂದೇ ಏಟಿಗೆ ಸೋರಿಹೋದಂತಾಗಿ, ಇನ್ನು ಮತ್ಯಾವ ಹೊಸ ಕೂಪದಲ್ಲಿ ಬಿದ್ದೆನೆಂದು ಗೊತ್ತಾಗದೆ ಟಾಯ್ಲೆಟ್ಟಿನ ಕಮೋಡಿನ ಸೀಟಿನ ಮೇಲೆ, ತಲೆ ಮೇಲೆ ಕೈ ಹೊತ್ತು ಕುಸಿದು ಕೂತಿದ್ದ ಶ್ರೀನಾಥ - ಆ ಸ್ಟ್ರಿಪ್ಪಿನ ಮೇಲೆ ರಾಚುವಂತಿದ್ದ ಬಣ್ಣವನ್ನೆ ದೈನ್ಯವಾಗಿ ದಿಟ್ಟಿಸುತ್ತಾ.

(ಇನ್ನೂ ಇದೆ)
__________
 

Comments

Submitted by H A Patil Fri, 05/30/2014 - 09:40

ನಾಗೇಶ ಮೈಸೂರು ರವರಿಗೆ ವಂದನೆಗಳು
ಪರಿಭ್ರಮಣ ಕಥಾನಕ ಚೆನ್ನಾಗಿ ಮೂಡಿ ಬರುತ್ತಿದೆ, ಧೀರ್ಘಕಾಲದಿಂದ ಸಂಪದದಿಂದ ದೂರವಿದ್ದೆ, ಇದರ ಹಿಂದಿನ ಕೆಲವು ಕಂತುಗಳನ್ನು ಓದಲಾಗಿಲ್ಲ ಮುಂದೆ ಓದಿ ಗ್ಯಾಪ್ ತುಂಬಿಕೊಳ್ಳುವೆ, ಧನ್ಯವಾದಗಳು.

Submitted by nageshamysore Sat, 05/31/2014 - 08:26

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಶಸ್ತ್ರಚಿಕಿತ್ಸೆಯ ನಂತರದ ಕಣ್ಣಿನ ಪರಿಸ್ಥಿತಿ ಈಗ ಹೆಚ್ಚು ಸುಧಾರಿಸಿದೆಯೆಂದು ಭಾವಿಸುತ್ತೇನೆ. ಮೊದಲ ಆದ್ಯತೆ ಆ ಕುರಿತಾಗಿರುವುದರಿಂದ ಅದರತ್ತ ಹೆಚ್ಚು ಗಮನ ಕೊಡಿ.  ಹಳೆಯ ಕಂತನ್ನು ನಿಧಾನಕ್ಕೆ ಓದಿಕೊಳ್ಳಬಹುದು ಬಿಡಿ - ಸಂಪದದ ಕಡತದಲ್ಲಿ ಸದಾ ಇದ್ದೆ ಇರುತ್ತದೆ :-)

Submitted by nageshamysore Sat, 05/31/2014 - 08:32

In reply to by kavinagaraj

ಮಾಡಿದ್ದುಣ್ಣೊ ಮಾರಾಯ ಆಗಬಹುದೆ? ಕಾದು ನೋಡೋಣ - ಆರೋಹಣಾವರೋಹಣಗಳ ಬಲದ ಸಮಷ್ಟಿ ಮೊತ್ತದ ಸೆಳೆತ ಯಾವ ದಿಕ್ಕಿಗೆತ್ತೆಸೆಯುವುದೊ ಶ್ರೀನಾಥನ ಬದುಕನ್ನ ಎಂದು...!
...:-)