ಕಥೆ: ಪರಿಭ್ರಮಣ..(26)

ಕಥೆ: ಪರಿಭ್ರಮಣ..(26)

( ಪರಿಭ್ರಮಣ..25ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಆದರೆ ಶ್ರೀನಿವಾಸ ಪ್ರಭುವಿನ ಕುಟಿಲ ಮನ ಹೇಗಾದರೂ ಶ್ರೀನಾಥನ ಕಾಲೆಳೆದು ಕಿತ್ತಾಟಕಿಳಿಯುವಂತೆ ಪ್ರೇರೇಪಿಸಲು ಉತ್ಸುಕವಾಗಿತ್ತು. ಆ ನಿಟ್ಟಿನಲ್ಲಿ ಹೊಸ ಮಾರ್ಗಗಳೇನಿವೆಯೆಂದು ಹುಡುಕುತ್ತ ಸಂಬಂಧಿಸಿದ ಹಾಗು ಸಂಬಂಧಿಸದ ಎಲ್ಲಾ ಪ್ರಕ್ರಿಯೆಗಳಲ್ಲು ಅಡ್ಡಗಾಲಿರಿಸತೊಡಗಿದ್ದ. ಎಲ್ಲಕ್ಕೂ ಮೀರಿದ ವಿಚಿತ್ರವೆಂಬಂತೆ ಪ್ರಾಜೆಕ್ಟಿನ ನಂತರದ ನಿರ್ವಹಣ ಜವಾಬ್ದಾರಿಯ ವರ್ಗಾವಣೆಗೆ ಏನೇನು ಸಿದ್ದ ಮಾಡಬೇಕೆಂದು ಆಗಲೆ ಷರತ್ತು, ನಿಬಂಧನಾ ಸೂತ್ರಗಳನ್ನು ಹಾಕಿಡತೊಡಗಿದ್ದು. ಸಾಧಾರಣ ಪ್ರಾಜೆಕ್ಟಿನ ಕಟ್ಟ ಕಡೆಯ ವಾರದಲ್ಲಿ ಗಮನಿಸಲ್ಪಡುವ ಈ ಅಂಶಕ್ಕೆ ಯಾವ ರೀತಿಯ ಅವಸರವೂ ಇರಲಿಲ್ಲ ಮತ್ತು ಕಾರ್ಯ ಸೂಚಿಯಲ್ಲಿ ಅದನ್ನು ಸೇರಿಸಿಯೂ ಇರಲಿಲ್ಲ. ಪ್ಲಾನಿಂಗಿನ ದೃಷ್ಟಿಯಿಂದ ಅದು ತುಂಬಾ ಮಹತ್ವದ್ದು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಯಾವ ಸಿದ್ದತೆಯನ್ನು ಮಾಡದೆ ಹೋದದ್ದು ದೊಡ್ಡ ದೋಷವೆಂದು ಷರಾ ಬರೆದುಬಿಟ್ಟಿದ್ದ ಆ ಮಹಾಶಯ. ಶ್ರೀನಾಥ ಅದಕ್ಕೆ ಸಂಬಂಧಪಟ್ಟ ಮೇಲುಸ್ತರದ ಯೋಜನೆ ಈಗಾಗಲೆ ಇದೆಯೆಂದು ಅದರ ಕರಡು ಪ್ರತಿಯನ್ನು ತೋರಿಸಿದರೂ, ಅದು ಸಾಕಾಗದೆಂದು ತೀರ್ಪಿತ್ತು ತನ್ನ ರಿಪೋರ್ಟಿನಲ್ಲಿ ಅದನ್ನು ಕಾರ್ಯಲೋಪದ ದೋಷದ ರೂಪದಲ್ಲಿ ದಾಖಲಿಸುವುದಾಗಿ, ಶೀಘ್ರದಲ್ಲೆ ಅದರ ಕೊರತೆಯನ್ನು ತುಂಬಿ ಲೋಪವನ್ನು ನಿವಾರಿಸಬೇಕೆಂದು ತಾಕೀತು ಮಾಡಿಬಿಟ್ಟಿದ್ದ ಮಹಾನುಭಾವ. ಇದೆಲ್ಲ ತನ್ನ ಮೇಲೆ ಸುಖಾಸುಮ್ಮನೆ ಒತ್ತಡ ಹೇರುವ ತಂತ್ರ ಎಂದರಿವಾಗಿದ್ದ ಶ್ರೀನಾಥ ಸುಮ್ಮನೆ ವ್ಯರ್ಥ ವಾದ ಮಾಡಿ ಫಲವಿಲ್ಲವೆಂದರಿವಾಗಿ ಅವನಿಷ್ಟದಂತೆ ಮಾಡಿಕೊಳ್ಳಲಿ ಎಂದು ಸುಮ್ಮನಾಗಿಬಿಟ್ಟ. ಅವನೆತ್ತಿದ ಕೊರತೆಯ ಆಕ್ಷೇಪ ಆ ಹೊತ್ತಿನಲ್ಲಿ ಸಮಯೋಚಿತವೊ ಅಲ್ಲವೊ - ಆ ಅಂಶದಲ್ಲಿ ಕನಿಷ್ಠ ಸ್ವಲ್ಪ ಹುರುಳಾದರೂ ಇತ್ತು. ಆದರೆ ಅವನು ಎತ್ತಿದ ಮತ್ತೊಂದು ಅಂಶ ಮಾತ್ರ ಶ್ರೀನಾಥನಿಗಿರಲಿ, ಅವನ ನೆಚ್ಚಿನ ಭಂಟರನ್ನು ಅಚ್ಚರಿಗೊಳಿಸಿಬಿಟ್ಟಿತ್ತು. ಪ್ರಾಜೆಕ್ಟಿನ ಯಶಸ್ಸನ್ನು ಹೇಗಾದರೂ ಹೀಗಳೆವ ಅವಸರದಲ್ಲಿ ಹೊಸ ಸಿದ್ದಾಂತವೊಂದನ್ನೆ ಹುಟ್ಟು ಹಾಕಿಬಿಟ್ಟಿದ್ದ ಶ್ರೀನಿವಾಸ ಪ್ರಭು. ಈ ಬಾರಿಯ ಅವನ ದೂರು ಗೋಲೈವಿನ ನಂತರದ ಪ್ರಚಲಿತ ಪರಿಸ್ಥಿತಿಯದಾಗಿತ್ತು. ಯಾವುದೆ ದೂರು, ದೋಷಗಳಿಲ್ಲದ  ಗೋಲೈವ್ ಒಳ್ಳೆಯ ಫಲಿತಕ್ಕೆ ಉದಾಹರಣೆಯಲ್ಲವೆಂದು ಅಪ್ಪಣೆ ಕೊಡಿಸಿ ಹೊಸ ಚಿಂತನಾ ಪಥವನ್ನೆ ತೋರಿಸಿಕೊಟ್ಟುಬಿಟ್ಟಿದ್ದ! ಅವನ ಪ್ರಕಾರ ಹಾಗೆ ಮಾಡುವುದರಿಂದ ಕಸ್ಟಮರರಿಗೆ ನಿಜವಾದ ಬೇನೆಯ ರುಚಿ ಸಿಗದೆ ಹೋಗಿ ಐಟಿ ಪ್ರಾಜೆಕ್ಟುಗಳೆಂದರೆ ತೀರಾ ಅಗ್ಗದ, ಸಡಿಲ ಸಮಸ್ಯೆಗಳೆಂಬ ಭಾವನೆ ಉಂಟು ಮಾಡಿಬಿಡುವುದಂತೆ. ಅದರಿಂದಾಗಿ ಇಂತಹ ಪ್ರಾಜೆಕ್ಟುಗಳ ಮಹತ್ವ ತೀರಾ ಕೀಳುಮಟ್ಟದ್ದಾಗಿ ಪ್ರತಿಬಿಂಬಿತವಾಗಿ ತಮ್ಮ ಪ್ರಯತ್ನಕ್ಕೆ ಸಿಗಬೇಕಾದ ಮನ್ನಣೆ, ಗೌರವ ಸಿಗದೆಂದು ಭಾಷಣ ಬಿಗಿದವನನ್ನೆ ಅಚ್ಚರಿಯಿಂದ ನೋಡುತ್ತ ಕುಳಿತುಬಿಟ್ಟಿದ್ದ ಶ್ರೀನಾಥ - ಇವನು ಇನ್ನು ಯಾವ ಓಬೀರಾಯನ ಕಾಲಮಾನದ ಸುಳಿಯಲ್ಲಿ ಸಿಕ್ಕಿಹೋಗಿದ್ದಾನೆಂದು ಅರಿವಾಗದೆ. ಒಟ್ಟಾರೆ ಗೋಲೈವಿನ ನಂತರ ಹತ್ತಾರು ಭಾಧೆಗಳು ಕಾಡಿದರಷ್ಟೆ ಕಸ್ಟಮರನಿಗೆ ತಮ್ಮ ಕೆಲಸದ ಮೌಲ್ಯದರಿವಾಗುವುದರಿಂದ, ಆ ಲೆಕ್ಕಾಚಾರದಲ್ಲಿ ಈ ಪಾಜೆಕ್ಟಿನ ಫಲಿತವೊಂದು ಕೆಟ್ಟ ಉದಾಹರಣೆಯಾಗಿ ಎದ್ದು ನಿಲ್ಲುವುದೆಂದು ಉವಾಚಿಸಿದ್ದ ಶ್ರೀನಿವಾಸ ಪ್ರಭು. ಅದೆಲ್ಲ ಸಾಲದೆಂಬಂತೆ ಕೊನೆಯ ಗುಟ್ಟಿನ  ಮಾತಾಗಿ, ಈ ರೀತಿಯ ಪ್ರಾಜೆಕ್ಟುಗಳಲ್ಲಿ ಹೆಚ್ಚು 'ದೋಷ' (ಡಿಫೆಕ್ಟು) ಗಳಿದ್ದಷ್ಟು, ತಮ್ಮಂತಹ ಐಟಿ ಕಂಪನಿಗಳಿಗೆ ಕೆಲಸ ಹೆಚ್ಚು ಬರುವುದರಿಂದ, ಎಲ್ಲವನ್ನು ಪರಿಪೂರ್ಣವಾಗಿಸಿ, ಸುಗಮಗೊಳಿಸಿ ದೋಷಗಳೇ ಇಲ್ಲದ ರೀತಿ ಪ್ರಾಜೆಕ್ಟು ನಿಭಾಯಿಸುವುದು 'ವ್ಯವಹಾರಿಕ ದೃಷ್ಟಿ' ಯಿಂದ ಜಾಣ ನಡೆಯಲ್ಲವೆಂದು, ಪ್ರಾಜೆಕ್ಟು ನಡೆಸುವವರಿಗೆ ಅಷ್ಟಾದರೂ ದೂರದೃಷ್ಟಿಯಿರಬೇಕೆಂದು ಪರೋಕ್ಷವಾಗಿ ಶ್ರೀನಾಥನನ್ನು ಹೀಯಾಳಿಸಿದ್ದು ಮಾತ್ರ ನಂಬಲೆ ಆಗದ ವಿಚಿತ್ರ ಸತ್ಯವೆಂಬಂತೆ ಅನಾವರಣಗೊಂಡುಬಿಟ್ಟಿತ್ತು. ಇಂತಹ ಅಗಾಧ ಯಶಸ್ಸಿನಲ್ಲು ದೋಷ ಹುಡುಕುವ ಅವನ ಚತುರತೆ, ಬುದ್ದಿವಂತಿಕೆಗೆ ಮೆಚ್ಚಿಕೊಳ್ಳಬೇಕೊ, ಅವನ ಕುಟಿಲ ಕಾರ್ಯತಂತ್ರಕ್ಕೆ ಕನಿಕರದಿಂದಲೆ  ತುಚ್ಛೀಕರಿಸಿ ನಿರ್ಲಕ್ಷಿಸಬೇಕೊ ಎಂಬ ಗೊಂದಲದಲ್ಲೆ 'ಒಲ್ಲದ ಗಂಡನಿಗೆ ಮೊಸರನ್ನದಲ್ಲಿ ಕಲ್ಲು' ಎನ್ನುವ ಗಾದೆ ಮಾತನ್ನು ನೆನಪಿಸಿಕೊಂಡು ಸಮಾಧಾನಿಸಿಕೊಂಡಿದ್ದ ಶ್ರೀನಾಥ.

ಅದೇನೆ ಇದ್ದರೂ ಈ ಮೀಟಿಂಗಿನ ಕೊನೆಯಲ್ಲಿ ಎಲ್ಲಾ ಸುಗಮವಾಗಿದೆಯೆಂಬ ಭಾವನೆಯುಂಟಾಗಲು ಅವನು ಅವಕಾಶ ಕೊಡುವುದಿಲ್ಲವೆಂಬುದು ಸ್ಪಷ್ಟವಾಗಿ ಹೋಗಿತ್ತು. ಜತೆಗೆ ಸ್ಥಳೀಯ ಮ್ಯಾನೇಜ್ಮೆಂಟಿಗೆ ಕೊನೆಯ ದಿನ ಅವನೆ ಮುಖತಃ ಭೇಟಿಯಾಗಿ ವರದಿಯ ಸಾರಾಂಶ ನೀಡುವುದರಿಂದ ಆ ಅವಕಾಶವನ್ನು ಬಳಸಿಕೊಂಡು ತನ್ನ ಹೆಸರಿಗೊಂದಷ್ಟು ಕೆಸರೆರಚದೆ ಬಿಡಲಾರ ಎನ್ನುವುದು ಖಚಿತವಾಗಿ ಹೋಗಿತ್ತು. ತನ್ನ ಭೇಟಿಯಿಂದಾಗಿಯೆ ಹಲವಾರು ದೋಷಗಳು ಬೆಳಕಿಗೆ ಬಂದಿದ್ದಾಗಿ ಹೇಳಿಕೊಂಡು, ಕೊನೆಗೆ ಅದೆಲ್ಲ ತನ್ನ ಮುಖೇನವೆ ಪರಿಹಾರವಾಯ್ತೆಂದು ತೋರಿಸಿಕೊಂಡು ಶ್ರೀನಾಥನ ಪಾತ್ರವನ್ನು ನಗಣ್ಯಗೊಳಿಸುವ ಯತ್ನ ಮಾಡಿಯೇ ತೀರುತ್ತಾನೆ.. ಹಾಳಾಗಿ ಹೋಗಲಿ - ತನಗೊ ಈ ಪ್ರಾಜೆಕ್ಟು ಯಶಸ್ವಿಯಾಗಿ ಮುಗಿದರೆ ಸರಿ - ತಾನಿಲ್ಲಿ ಕಲಿತ ಕಲಿಕೆಯಂತೂ ಸದಾ ತನ್ನ ಜೊತೆಗೆ ಬರಲಿದೆ - ತನಗದು ಸಾಕು ಎಂದು ತನ್ನಲ್ಲೆ ಚಿಂತಿಸುತ್ತಿದ್ದ ಶ್ರೀನಾಥನಿಗೆ, ಶ್ರೀನಿವಾಸ ಪ್ರಭು ಹಾಕಿದ ಕಡೆಯ ಬಾಂಬಿನಿಂದ ಬೆಚ್ಚಿ ಬೀಳುವಂತಾಗಿತ್ತು. ಸಾಧಾರಣವಾಗಿ ಪ್ರಾಜೆಕ್ಟಿನ ಮುಕ್ತಾಯದ ಒಂದೆರಡು  ದಿನಕ್ಕೆ ಮೊದಲು ಭಾರತದಿಂದ ದೊಡ್ಡ ಬಾಸನ್ನು ಕರೆಸುವುದು ವಾಡಿಕೆ, ಒಂದು ರೀತಿಯ ಕೃತಘ್ನತೆಯ ವಂದನಾರ್ಪಣೆಯನ್ನು ಸಲ್ಲಿಸುವ ಹಾಗೆ. ಆದರೆ ಈ ಬಾರಿ ವಾಡಿಕೆಯ ಹಾಗೆ ಮಾಡದೆ ಮೊದಲ ತಿಂಗಳು ಮುಗಿಯುತ್ತಿದ್ದಂತೆ ಮೊದಲ ವಾರದಲ್ಲೆ ದೊಡ್ಡ ಬಾಸು ಬಂದು ಸ್ಥಿತಿಗತಿಗಳನ್ನು ಪರಿಶೀಲಿಸುವರೆಂದು ಹೇಳಿಬಿಟ್ಟ! ಅಂದರೆ ಅವನೆ ಅವರನ್ನು ವಾಡಿಕೆಗೆ ಮೊದಲೆ ಬರುವಂತೆ ಹೇಳಿ ಒಪ್ಪಿಸಿರಬೇಕು. ಈಗೇನೊ ಎಲ್ಲಾ ಚೆನ್ನಾಗಿ ನಡೆದಿದ್ದರೂ ತಿಂಗಳ ಕೊನೆಯೊಳಗೆ ಏನಾದರೂ ಕೀಟಲೆ ಮಾಡಿ ಹಳಿ ತಪ್ಪಿಸುವ ಯೋಜನೆ ಹಾಕಿದ್ದಾನೆಯೆ? ಅದೇನಾದರೂ ನಿಜವಾಗಿದ್ದರೆ ಬಂದ ದೊಡ್ಡ ಬಾಸಿನ ಮುಂದೆ ಇಡಿ ಪ್ರಾಜೆಕ್ಟೆ ಒಂದು 'ಪ್ಲಾಫ್ ಷೋ' ಆಗಿ ಅದುವರೆಗಿನ ಯಶೋಗಾಥೆಯೆಲ್ಲ ನೀರಿನಲ್ಲಿ ಮಾಡಿದ ಹೋಮದಂತೆ ಕರಗಿ ಹೋಗುತ್ತದೆ. ಆ 'ಲಾಸ್ಟ್ ಇಂಪ್ರೆಶನ್ನಿನ' ಕೆಟ್ಟ ಚಿತ್ರಣವಷ್ಟೆ ದೊಡ್ಡ ಬಾಸಿನ ಮನಃಪಟಲದಲ್ಲಿ ಉಳಿದುಹೋಗುತ್ತದೆ. ಆ ನಂತರ ಇವನೇನೊ ದೊಡ್ಡ ಹರಸಾಹಸ ಮಾಡಿ ಎಲ್ಲವನ್ನು ಸರಿಪಡಿಸಿದವನಂತೆ ಪೋಸ್ ಕೊಟ್ಟು ನಿಂತು ಬಿಡುತ್ತಾನೆ - ಕಷ್ಟಕರವಾದ ನಿರ್ವಹಣೆಯನ್ನು ತನ್ನ ಹೆಗಲಿಗೆ ವರ್ಗಾಯಿಸಿಕೊಂಡು ನಿಭಾಯಿಸಿದ ಅವತಾರದಲ್ಲಿ. ಯಶಸ್ಸಿನ ಧನಾತ್ಮಕವೆಲ್ಲ ಅವನ ಪಾಲಾಗಿ ಬರಿಯ ಋಣಾತ್ಮಕ ಫಲಿತ ತನ್ನ ಹೆಗಲಿಗಂಟಿಕೊಂಡು ಬಿಡುತ್ತದೆ. ಏನಿರಬಹುದವನ ಹುನ್ನಾರ? ಏನು ಮಾಡಲು ಯೋಜನೆ ಹಾಕಿಕೊಂಡಿದ್ದಾನೆ ಈ ಕುತಂತ್ರಿ?? ಏನು ಮಾಡ ಹೊರಟಿದ್ದಾನೆಂದು ಆ ಹೊತ್ತಿನಲ್ಲಿ ಅರಿವಾಗದಿದ್ದರೂ, ತಿಂಗಳ ಕೊನೆಯ ಮೊದಲೆ ಏನೊ ಘಟಿಸಲಿದೆಯೆಂದು ಮಾತ್ರ ಖಚಿತವಾಗಿ ಅನಿಸತೊಡಗಿತ್ತು ಶ್ರೀನಾಥನ ಅಂತರಾತ್ಮದ ಪ್ರಜ್ಞೆಗೆ. ಏನಾದರೂ ಘಟಿಸುವ ಮುನ್ನದ ತನ್ನ ಆರನೆ ಇಂದ್ರಿಯದ ಮುನ್ಸೂಚನೆಗಳ ಮೇಲೆ ಅಪಾರ ನಂಬಿಕೆಯಿದ್ದ ಶ್ರೀನಾಥನಿಗೆ ಈ ಬಾರಿಯ ಪ್ರಯತ್ನ ಭಾರಿಯದೆ ಆಗಿದ್ದು ಸಫಲವಾದರೆ ಭಾರಿ ದೊಡ್ಡ ಏಟನ್ನೆ ಕೊಡುವುದು ಖಚಿತವೆನಿಸಿದಾಗ ಹೊಟ್ಟೆಯಲ್ಲಿ ಮತ್ತೆ ಸಂಕಟದ ತಳಮಳ ಶುರುವಾಗಿತ್ತು ವ್ಯಗ್ರಗೊಂಡ ಉದರದೊಳಗೆ.

ಆ ವಾರದ ಮಿಕ್ಕೆಲ್ಲ ಮೀಟಿಂಗಿನ ಹಣೆಬರಹ ಹೆಚ್ಚು ಕಡಿಮೆ ಇದೆ ಹಾದಿಯಲ್ಲಿ ಸಾಗಿ, ಒಂದು ಮಟ್ಟದ ನಂತರ ಸದುದ್ದೇಶ ಪ್ರೇರಣೆಗಿಂತ ಹೆಚ್ಚಾಗಿ ದುರುದ್ದೇಶಪ್ರೇರಿತ ಹವಣಿಕೆಯೆ ಪ್ರಾಮುಖ್ಯತೆ ವಹಿಸಿದ್ದಿದರ ಅರಿವಾಗಿ ತನ್ನ ಮಿಕ್ಕೆಲ್ಲ ಪ್ರಯತ್ನಗಳನ್ನು ಸಡಿಲಿಸಿ, ಹೋದಂತೆ ಹೋಗಲೆಂದು ಬಿಟ್ಟು ಕೈ ಚೆಲ್ಲಿ ಕೂತುಬಿಟ್ಟಿದ್ದ ಶ್ರೀನಾಥ. ಅದೇನೆ ಆಗಿದ್ದರೂ ಮೀಟಿಂಗಿನ ಹದ ತಪ್ಪಿ ಪರಸ್ಪರ ವ್ಯಕ್ತಿತ್ವಗಳ ಕಾದಾಟ ಮಾತ್ರವಾಗುವುದನ್ನು ತಪ್ಪಿಸಲೆಂದು ಸಂಪೂರ್ಣ ತಟಸ್ಥ ನೀತಿಯನ್ನನುಸರಿಸಲು ನಿರ್ಧರಿಸಿಕೊಂಡುಬಿಟ್ಟಿದ್ದ. ಒಂದು ಕೈಯಲ್ಲಿ ಚಪ್ಪಾಳೆ, ಒಂದೆ ಬೆರಳಲ್ಲಿ ಚಿಟಿಕಿ ಹೊಡೆಯಲು ಹೇಗೂ ಸಾಧ್ಯವಾಗುವುದಿಲ್ಲವಲ್ಲ? ಅಂತೂ ಆ ವಾರ ಹಾಗೂ ಹೀಗೂ ಮುಗಿದಾಗ ಹರ್ಷವೊ ಖೇದವೊ - ಸದ್ಯ ಮುಗಿಯಿತಲ್ಲ ಎನ್ನುವ ನಿರ್ಭಾವ ಪೂರ್ಣ ನಿರಾಳತೆಯೆ ಮೈದುಂಬಿಕೊಂಡಂತಾಗಿತ್ತು. ಆ ನಡುವೆಯೂ ಶ್ರೀನಾಥನನ್ನು ಸತತವಾಗಿ ಕಾಡಿದ್ದ ನಿಜವಾದ ವಿಷಯವೆಂದರೆ ಕುನ್. ಸು ಕುರಿತದ್ದು.  ಸೋಮವಾರದ ದಿನದ ಕಡೆಯ ಭೇಟಿಯ ನಂತರ ಅವಳನ್ನು ಮತ್ತೆ ಭೇಟಿಯಾಗಿ ಕ್ಷಮೆ ಕೇಳಿ, ತನ್ನನ್ನು ಇಕ್ಕಳದಂತಹ ಇಕ್ಕಟ್ಟಿನ ಸಂಕಟದಿಂದ ಪಾರು ಮಾಡಿದ್ದಕ್ಕೆ ಕೃತಜ್ಞತೆಯನ್ನು ಅರ್ಪಿಸಿ ಬಲವಂತವಾಗಿಯಾದರೂ ಅವಳು ವಾಪಸ್ಸು ನೀಡಿದ್ದ ಹಣವನ್ನೆಲ್ಲ ಮತ್ತೆ ಅವಳಿಗೆ ಕೊಟ್ಟು ಕೊಂಚ ನಿರಾಳವಾಗಿ ಉಸಿರಾಡಲು ಬಯಸಿದ್ದ ಅವನ ಆತ್ಮಸಾಕ್ಷಿಯ ಹಾರೈಕೆಗೆ ತಣ್ಣೀರೆರಚಿದಂತೆ ಆ ನಂತರದ ದಿನಗಳಲ್ಲಿ ಅವಳು ಆಫೀಸಿನಲ್ಲಿ ಕಾಣಿಸಿರಲೆ ಇಲ್ಲ. ಇಂದು ಬಂದಾಳು ನಾಳೆ ಸಿಕ್ಕಾಳು ಅಂದುಕೊಂಡೆ ವಾರ ಪೂರ್ತಿ ಕಳೆದರೂ ಅವಳ ಪತ್ತೆಯಿಲ್ಲದಾದಾಗ ತನ್ನ ಅಪರಾಧಿ ಮನೋಭಾವದ ತೀವ್ರ ಅಂತರ್ಪ್ರಜ್ಞೆ ಮತ್ತೆ ಮತ್ತೆ ಬಲವಾಗಿ ಕಾಡಿ, ಪೂರ್ತಿ ಖಿನ್ನನನ್ನಾಗಿಸಿ ಬಿಟ್ಟಿತ್ತು. ಸುಸಂಸ್ಕೃತ ನಡುವಳಿಕೆಯ ನೈತಿಕ ವ್ಯಕ್ತಿಯಾಗಿ ತಾನು ಸಹಜವಾಗಿ ತೋರಬೇಕಿದ್ದ ಪ್ರೌಢ, ಪ್ರಬುದ್ಧ ನಡವಳಿಕೆಯ ಬದಲು ತೀರಾ ಕೀಳುಮಟ್ಟದಲ್ಲಿ ಚಿಂತನೆ ನಡೆಸಿ ಅವಳನ್ನು ತೀರಾ ನೀಚ ಮಟ್ಟಕ್ಕಿಳಿಸಿ ತುಲನೆ ಮಾಡಿ ಕೀಳುಗರೆದಿದ್ದು ಅವನ ಮನದಲ್ಲಿ ಅಗಾಧ ಮುಜುಗರವನ್ನುಂಟು ಮಾಡಿ ಒಳಗೊಳಗೆ ಕುಗ್ಗಿಸಿಬಿಟ್ಟಿತ್ತು. ಒಂದು ವೇಳೆ ಅವಳು ದಾಖಲೆ ಸಮೇತ ಹಣ ಹಿಂದಿರುಗಿಸುವ ಕೆಲಸ ಮಾಡಿರದಿದ್ದರೆ ಅವನಷ್ಟೊಂದು ಕುಸಿದುಹೋಗುತ್ತಿರಲಿಲ್ಲವೇನೊ.  ಆದರೆ ಹಾಗೆ ಮಾಡುವ ಮೂಲಕ ಅವನ ವ್ಯಕ್ತಿತ್ವವನ್ನಳೆವ ಲೆಕ್ಕಾಚಾರವನ್ನೆಲ್ಲ ಬುಡಮೇಲಾಗಿಸಿ ಅವನ ವ್ಯಕ್ತಿತ್ವಗಳನ್ನಳೆಯುವುದರಲ್ಲಿ ಅಸೀಮ ನೈಪುಣ್ಯವುಳ್ಳವನೆಂಬ 'ಪ್ರಾಜೆಕ್ಟು ಮ್ಯಾನೇಜರಿಕೆಯ ಅಹಂ'ಗೆ ಬಲವಾದ ಕೊಡಲಿ ಪೆಟ್ಟು ಹಾಕಿಬಿಟ್ಟಿದ್ದಳು. ಯಾವುದೆ ಸದ್ದು ಗದ್ದಲವಿಲ್ಲದೆ, ಆಡಂಬರಾಚರಣೆಗಳ ಹಂಗಿಲ್ಲದೆ ನಿಶ್ಯಬ್ದವಾಗಿ ಅವಳು ಹಾಕಿದ್ದ ನೈತಿಕತೆ, ಸ್ವಾಭಿಮಾನದ ಪೆಟ್ಟು ಒಳಗೆಲ್ಲೊ ಮುದುರಿ ಕುಳಿತಿದ್ದ ನೈತಿಕ ಪ್ರಜ್ಞೆಯ ಮರ್ಮಕ್ಕೆ ನೇರವಾಗಿ ಘಾತಿಸಿ ಸುಪ್ರಜ್ಞೆಯ ಒಳಗಣ್ಣನ್ನು ಪೂರ್ತಿಯಾಗಿ ತೆರೆಸಿಬಿಟ್ಟಿದ್ದವು. ಆ ಮನಸ್ಥಿತಿಯ ಕೊಡಲಿಯ ಕಾವು ತುಸು ಆರಬೇಕೆಂದರೆ ಅವಳಲೊಮ್ಮೆ ಕ್ಷಮೆ ಯಾಚಿಸಿಬಿಡಬೇಕಿತ್ತು - ಆದರೆ ಆ ಘಟನೆಗೆ ಅನುವು ಮಾಡಿಕೊಡಲು ಕನಿಷ್ಠ ಬೇಕಾಗಿದ್ದ ಅವಳ ಇರುವಿಕೆಯೆ ಇಲ್ಲವಾಗಿ ಏನು ಮಾಡಲೂ ತೋಚದೆ ಕಳವಳ ತಳಮಳದಿಂದ ಒದ್ದಾಡುವಂತಾಗಿತ್ತು. ಅಷ್ಟಾದರೂ ಅವಳಿನ್ನು ಮತ್ತಿನ್ನು ಆಫೀಸಿಗೆ ಬರಲಾರಳೆಂದು, ತನಗಿನ್ನು ಅವಳೊಡನೆ ನೇರ ಮಾತಾಡಿ ಕ್ಷಮೆ ಬೇಡುವ ಅವಕಾಶವೆ ದೊರಕಲಾರದೆಂದು ಅರಿವಾಗಲು ಮುಂದಿನ ವಾರದತನಕ ಕಾಯಬೇಕಾಯ್ತು - ವೇರ್ಹೌಸಿನ ಭೇಟಿಯಲ್ಲಿ ಕುನ್. ಸೋವಿ ಅವಳ ಕುರಿತಾದ ಸುದ್ದಿಯನ್ನು ಹೇಳುವ ತನಕ!

ಆ ಸುದ್ದಿ ಕುನ್. ಸೋವಿಯಿಂದ ಗೊತ್ತಾದದ್ದು ಕೂಡ ಆಕಸ್ಮಿಕವಾಗಿಯೆ. ವಾರದ ಪೂರ್ತಿಯ ಮೀಟಿಂಗು ಮುಗಿಸಿ ಶ್ರೀನಿವಾಸ ಪ್ರಭು ಹಿಂದಿರುಗಿ ಹೋದ ಮೇಲೆ, ತಿಂಗಳ ಕೊನೆಯೊಳಗಿನ ಮಿಕ್ಕ ದಿನಗಳಲ್ಲಿ ಏನೆಲ್ಲಾ ಕೆಡಕುಂಟು ಮಾಡಬಹುದೆಂದು ಆಲೋಚಿಸುತ್ತಲೆ ಪೂರ್ತಿ ವಾರದ ಕೊನೆಯನ್ನು ಕಳೆದಿದ್ದ ಶ್ರೀನಾಥ. ಇಲ್ಲಿನ ಧನಾತ್ಮಕ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಹೋಗಿರುವ ಕಾರಣ ಏನಾದರೂ ಬಲವಾದ ರೀತಿಯ ಕುಟಿಲೋಪಾಯ ಹುಡುಕಲು ಯತ್ನಿಸುವನೆಂದಂತೂ ಚೆನ್ನಾಗಿ ಅರಿವಾಗಿಹೋಗಿತ್ತು. ಅಲ್ಲದೆ ಕೇವಲ ಒಂದೆ ದಾರಿಯಲ್ಲದೆ ಹಲವು ಮಾರ್ಗಗಳಲ್ಲಿ ತೊಡಕಿಗೆ ಸಿಕ್ಕಿಸಲು ಯತ್ನಿಸುವನೆಂದು ಕೂಡ ಮನದಟ್ಟಾಗಿತ್ತು. ಯಾವ ದಾರಿ ಹಿಡಿಯಬಹುದೆಂದು ಊಹಿಸುವುದು ಕಷ್ಟವಾದರೂ ಒಂದು ಅಂಶ ಮಾತ್ರ ಖಚಿತವಿತ್ತು - ಅವನು ಏನೆ ಯೋಜನೆ ಹಾಕಿದರೂ ಅದರ ಫಲಿತದ ಹೊಡೆತ ಶ್ರೀನಾಥನ ಮೇಲೆ ಮಾತ್ರ ವ್ಯತಿರಿಕ್ತವಾಗಿ ಬೀಳುವಂತಿರಬೇಕಷ್ಟೆ ಹೊರತು ಅವನಿಗೆ ಸ್ವಯಂ ತಿರುಗುಬಾಣವಾಗುವಂತಿರಬಾರದು.. ಅಂತಿಮವಾಗಿ ಪ್ರಾಜೆಕ್ಟಿನ ಒಟ್ಟಾರೆ ಯಶಸ್ಸು ಅವನಿಗೂ ಮುಖ್ಯವೆ - ಅದರಲ್ಲೂ ಪ್ರಾಜಕ್ಟೋತ್ತರ  ನಿರ್ವಹಣೆಯ ಹೊಣೆ ಅವನ ತಲೆಗೆ ಬರುವುದರಿಂದ; ಆ ಅಗತ್ಯದ ಗುರಿ ಸಾಧನೆಗೆ ಹೊಂದಾಣಿಕೆ ಮಾಡಿಕೊಳ್ಳದ ರೀತಿಯಲ್ಲಿ ಶ್ರೀನಾಥನಿಗೆ ಮಾತ್ರ ಘಾಸಿಯಾಗುವಂತೆ ಪರಿಸ್ಥಿತಿ ಸೃಷ್ಟಿಯಾದರೆ ಸಾಕು;  ಅಂತಹ ಕುಟಿಲೋಪಾಯವನ್ನಷ್ಟೆ ಅವನು ಅರಸುವ ಸಾಧ್ಯತೆ ಇದ್ದ ಕಾರಣ, ಪ್ರತಿ ಸಾಧ್ಯತೆಯನ್ನು ಆಲೋಚಿಸುತ್ತ ಅದರಲ್ಲಿ ಇಬ್ಬರಿಗೂ ಭಾಧಕವಾಗಬಹುದಾದ ವಿಕಲ್ಪಗಳನ್ನು ತೆಗೆದುಹಾಕಿ, ತನಗೊಬ್ಬನಿಗೆ ಮಾತ್ರ ಕೆಡುಕೆಣಿಸಬಹುದಾದ ಸಾಧ್ಯತೆಗಳನ್ನು ಒಟ್ಟುಗೂಡಿಸಿದ್ದ. ಸದ್ಯದ ಪರಿಸ್ಥಿತಿಯಲ್ಲಿ ಆ ಬಗೆಯ ಐದು ಸಾಧ್ಯತೆಗಳು ಕಂಡು ಬಂದಿದ್ದವು. ಪ್ರೋಗ್ರಾಮಿನೊಳಗಡೆ ನುಸುಳಿ ಏನಾದರು ಎಡವಟ್ಟಾಗಿಸುವುದರಿಂದ ಹಿಡಿದು ತಿಂಗಳ ಕೊನೆಯಂತಹ ತೀರಾ ನಿರ್ದಿಷ್ಠವಾದ ಮಹತ್ವದ ಘಟ್ಟದಲ್ಲಿ ಕಂಪ್ಯೂಟರ ಸರ್ವರನ್ನು ಯಾವುದೋ ನೆಪದಲ್ಲಿ ಡೌನ್ ಮಾಡಿ ಸಿಸ್ಟಮ್ಮು ಸಿಗುವ ಸಮಯವನ್ನು ಕಡಿತ ಮಾಡುವವರೆಗೆ ಹೋಗಬಹುದಿತ್ತು ಅವನ ಕೃತಿಮ ಕಾರ್ಯಾಚರಣೆಯ ಕಾರಾಸ್ಥಾನ. ಇವೆಲ್ಲವನ್ನೂ ಏನೊ ಆಕಸ್ಮಿಕವಾಗಿ ನಡೆದುಹೋದಂತೆ ತೋರಿಸಿ, ಅದನ್ನು ಸರಿಪಡಿಸಲು ಹೊತ್ತು ಹಿಡಿಯಿತೆಂದು ತೋರಿಸುವುದು ಕಷ್ಟವಿರಲಿಲ್ಲ. ಪ್ರೋಗ್ರಾಮಿಂಗಿನಲ್ಲಿ ತಾಂತ್ರಿಕವಾಗಿ ಅವನೇನೆ ಒಳಸಂಚು ನಡೆಸಿದರೂ ಸೌರಭ್ ದೇವನ ಸಹಯೋಗದಿಂದ ಬದಲಾವಣೆಗಳನ್ನೆಲ್ಲ ಹದ್ದಿನ ಕಣ್ಣಿನಿಂದ ಕಾದು ನಿಭಾಯಿಸುವ ಸಾಧ್ಯತೆಯಿತ್ತು. ಜತೆಗೆ ಅವನಿಗೆ ತಕ್ಷಣವೆ ಹೇಳಿ ಎಲ್ಲಾ ಪ್ರೋಗ್ರಾಮುಗಳ ಬ್ಯಾಕಪ್ ತೆಗೆದಿಟ್ಟುಕೊಂಡು ತುರ್ತು ಸ್ಥಿತಿಗೆ ಸಿದ್ದವಾಗಿರುವಂತೆ ಮುನ್ಸೂಚನೆ ಕೊಡಬಹುದಿತ್ತು. ಮಿಕ್ಕ ಕೆಲವನ್ನು ಹಾಗೆ ನೇರ ನಿಭಾಯಿಸಲು ಸಾಧ್ಯವಿರಲಿಲ್ಲ - ಅದನ್ನು ಯಾರಾದರೂ ಪ್ರಾಜೆಕ್ಟ್ ತಂಡದ ಹೊರಗಿನಿಂದ ನಿಗಾವಹಿಸಿ ಗಮನಿಸಿಕೊಳ್ಳಬೇಕಿತ್ತು; ಅದು ಸಾಧ್ಯವಿದ್ದ ಜಾಗವೆಂದರೆ ವೇರ್ಹೌಸಿನಲ್ಲಿ ಮಾತ್ರ. ಸರಕು ಅಂತಿಮವಾಗಿ ವೇರ್ಹೌಸ್ ಬಿಡುವ ಮುನ್ನ ಅವರಲ್ಲಿ ಯಾರಾದರೂ ನೂರಕ್ಕೆ ಪ್ರತಿಶತ ಸಿದ್ದಪಡಿಸಿಕೊಂಡ ದಾಖಲೆಗಳನ್ನೆಲ್ಲ ಪರೀಕ್ಷಿಸಿ ಏನೂ ತೊಡಕಿಲ್ಲವೆಂದು ಗ್ಯಾರಂಟಿ ಮಾಡಿಕೊಂಡ ನಂತರವಷ್ಟೆ ಸರಕು ಕಳಿಸುವ ಕೆಲಸ ಮಾಡಬೇಕಿತ್ತು. ಇದನ್ನು ನಿಭಾಯಿಸಬೇಕಿದ್ದರೆ ವೇರ್ಹೌಸಿನ ಕುನ್. ಸೋವಿಯ ಸಹಕಾರ ಬಲು ಮುಖ್ಯವಾಗಿತ್ತು. ಅವನೊಡನೆ ಇತ್ತೀಚಿನ ಒಡನಾಟದಲ್ಲಿ ಗಟ್ಟಿಯಾಗಿದ್ದ ಸ್ನೇಹದ ಬಂಧ ಬಳಸಿ ಆ ಕೆಲಸ ಸಾಧಿಸಬೇಕಿತ್ತು. ಇನ್ನು ಶ್ರೀನಾಥ ಯಾವುದೆ ಮುನ್ನೆಚ್ಚರಿಕೆ ತೆಗೆದುಕೊಂಡರು ನಿವಾರಿಸಿಕೊಳ್ಳಲಾಗದ ಒಂದೆ ಒಂದು ಸಾಧ್ಯತೆಯೆಂದರೆ - ಸರ್ವರನ್ನು ಡೌನ್ ಮಾಡಿಬಿಡುವುದು. ಅದಾದಾಗ ವ್ಯವಹಾರದ ಯಾವ ಅಂಗವೂ ಸುಸೂತ್ರವಾಗಿ ಕಾರ್ಯ ನಿರ್ವಹಿಸಲಾಗುವುದಿಲ್ಲ. ಸಿಸ್ಟಮ್ ಇಲ್ಲದ ಕಾರಣ ಆರ್ಡರನ್ನು ಡೆಲಿವರಿಗೆ ಬಿಡುಗಡೆ ಮಾಡಲಾಗುವುದಿಲ್ಲ... ಅದಿಲ್ಲದೆ ಪಿಕ್ ಸ್ಲಿಪ್ ಬರುವುದಿಲ್ಲವಾದ ಕಾರಣ ವೇರ್ಹೌಸಿನಲ್ಲಿ ಬೇಕಾದ ಸರಕನ್ನು ಹುಡುಕಿ ಪ್ಯಾಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ.. ಪ್ಯಾಕಿಂಗ್ ಆಗಿ ಕುಳಿತಿದ್ದವನ್ನು ಡೆಲಿವರಿ ನೋಟ್ ಮತ್ತು ಇನ್ವಾಯ್ಸಿಲ್ಲದೆ ಕಳಿಸಲಾಗದು. ಲೋಡಿಂಗ್ ಶೀಟ್, ಪ್ಯಾಕಿಂಗ್ ಸ್ಲಿಪ್ - ಹೀಗೆ ಎಲ್ಲವೂ ಒಂದರ ಮೇಲೊಂದು ಕ್ರಮಬದ್ಧ ಸರಣಿರೂಪದಲ್ಲಿ ಅವಲಂಬಿತವಾಗಿರುವ ಕಾರಣ ನಡುವೆ ಸಿಸ್ಟಮ್ಮಿಲ್ಲದಂತೆ ಮಾಡಿದರೆ ಒಂದೆ ಕಲ್ಲಲ್ಲಿ ಹಲವಾರು ಹಕ್ಕಿಗಳನ್ನು ಉರುಳಿಸಿಬಿಡಬಹುದು. ಕೊನೆ ಗಳಿಗೆಯಲ್ಲಿ ಸಿಸ್ಟಮ್ಮು ವಾಪಸ್ಸು ಬಂದರೂ ಅಮೂಲ್ಯವಾದ ಸಮಯ ವ್ಯಯವಾಗಿ ಹೋಗುವುದರಿಂದ ಆತುರಾತುರದಲ್ಲಿ ಮಾಡಿದರೂ ಎಲ್ಲ ಕೆಲಸವನ್ನು ಮುಗಿಸಲು ಆಗುವುದಿಲ್ಲ. ಆಗ ಉಂಟಾಗುವ ದೊಡ್ಡ ಅಹಿತಕರ ಪರಿಣಾಮವೆಂದರೆ - ಬಿಜಿನೆಸ್ಸಿಗೆ ಏಟು! ಗುರಿಯಿಟ್ಟುಕೊಂಡಿದ್ದ ಟರ್ನೋವರ ವಹಿವಾಟು ಸಾಧ್ಯವಾಗುವುದಿಲ್ಲ... ಯಾವಾಗ ಆ ಗುರಿ ತಲುಪುವುದಿಲ್ಲವೊ, ಆಗ ಮ್ಯಾನೇಜ್ಮೆಂಟಿನ ಕಣ್ಣು ಕೆಂಪಗಾಗುತ್ತದೆ.... ಮೊದಲ ತಿಂಗಳ ಬಿಜಿನೆಸ್ ಕುಂಟಿದರೆ ಆ ಸೋಲಿನ ಪೂರ್ಣ ಜವಾಬ್ದಾರಿ ಪ್ರಾಜೆಕ್ಟಿನ ಮೇಲೆ - ಅರ್ಥಾತ್ ಶ್ರೀನಾಥನೊಬ್ಬನ ಮೇಲೆ ಬೀಳುತ್ತದೆ! 

ಇದೆಲ್ಲ ಚೆನ್ನಾಗಿ ಬಲ್ಲ ಶ್ರೀನಿವಾಸ ಪ್ರಭು ತನ್ನನ್ನು ಚೆನ್ನಾಗಿ ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಬಯಸಿದರೆ ಈ ದಾರಿಯನ್ನೆ ಆಲೋಚಿಸುವುದು ಖಚಿತ. ಈ ದಾರಿಯಲ್ಲೂ ಅವನು ಯಾವಾಗ ಬೇಕೆಂದರೆ ಆವಾಗ ಸಿಸ್ಟಮ್ ಡೌನ್ ಮಾಡಿದರೆ ಪ್ರಯೋಜನವಿರದು. ಯಾಕೆಂದರೆ ಅವನೇನೆ ಮಾಡಿದರೂ ಆ ಪರಿಸ್ಥಿಯಲ್ಲಿ ಹೆಚ್ಚೆಂದರೆ ಒಂದು ಅಥವಾ ಎರಡು ದಿನವಷ್ಟೆ ನಿಭಾಯಿಸಬಹುದು. ಅಷ್ಟು ಹೊತ್ತಿಗೆ ಎಲ್ಲಾ ಕಡೆಯ ಒತ್ತಡ ಅಧಿಕವಾಗಿರುವ ಕಾರಣ ಸಿಸ್ಟಮ್ ಅನ್ನು ಮತ್ತೆ ದೊರಕಿಸಲೆಬೇಕು... ಹೀಗಾಗಿ ಅವನ ಯೋಜನೆ ಯಶಸ್ವಿಯಾಗಬೇಕಾದರೆ, ಅವನು ಸೂಕ್ತ ಸಮಯವನ್ನು ಆಯ್ದುಕೊಳ್ಳಬೇಕು... ಆ ಆಯ್ದುಕೊಂಡ ಸಮಯ ಹೇಗಿರಬೇಕೆಂದರೆ, ಅದು ಗರಿಷ್ಠ ಮಟ್ಟದ ಹೊಡೆತ ಕೊಡುವಂತಿರಬೇಕು... ಅವನ್ಯಾವ ಸಮಯ ಆಯ್ದುಕೊಳ್ಳಬಹುದು? ಅದನ್ನು ಹೊರಗಿನವರು ಊಹಿಸಲು ಕಷ್ಟವಾದರೂ ಈ ಔದ್ಯೋಗಿಕ ಪ್ರಪಂಚದ ದೈನಂದಿನ ಆಗುಹೋಗುಗಳ ಪರಿಚಯವಿರುವ ಶ್ರೀನಾಥನಂತಹವರಿಗೆ ಊಹಿಸಲೇನೂ ಕಷ್ಟದ್ದಾಗಿರಲಿಲ್ಲ; ಅದನ್ನು ಸರಿಯಾಗಿ ಊಹಿಸಲು ಈ ವ್ಯವಹಾರದ ದೈನಂದಿನ ವಹಿವಾಟು ನಡೆಯುವ 'ರೀತಿಯ' ಅರಿವಿದ್ದರೆ ಸಾಕಿತ್ತು. ಈ ವ್ಯವಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಅಂಶವೆಂದರೆ, ಪ್ರತಿದಿನವೂ ನಡೆಯುವ ವ್ಯಾಪಾರ ವಹಿವಾತಿನ ಗತಿ ಒಂದೆ ಮಟ್ಟದ್ದಾಗಿರುವುದಿಲ್ಲ. ತಿಂಗಳ ಮೊದಲಲ್ಲಿ ನಿಧಾನ ಗತಿಯಲ್ಲಿ ಆರಂಭವಾಗುವ ವ್ಯವಹಾರ ಎರಡನೆ ವಾರ ತುಸು ತೀವ್ರಗತಿಗೇರಿದರೂ ಒಟ್ಟಾರೆ ತಿಂಗಳ ಒಟ್ಟು ಮೊತ್ತಕ್ಕೆ ಹೋಲಿಸಿದರೆ ಶೇಕಡ ಹತ್ತಿಪ್ಪತ್ತರ ಆಸುಪಾಸಿನಲ್ಲೆ ಒದ್ದಾಡಿಕೊಂಡಿರುತ್ತದೆ. ಮೂರನೆ ವಾರದಲ್ಲಿ ಹೌಹಾರಿದಂತೆ ಕಂಡ ಮ್ಯಾನೇಜ್ಮೆಂಟಿನ ಒತ್ತಡದಿಂದ ಮತ್ತಷ್ಟು 'ತೇಜಿ'ಯಾದರೂ ಇನ್ನೊಂದು ಹದಿನೈದಿಪ್ಪತರಷ್ಟು ಮಾತ್ರ ಸೇರಿಕೊಂಡು ಮಿಕ್ಕ ಶೇಕಡಾ ಅರವತ್ತರಿಂದ ಅರವತ್ತೈದು ವಹಿವಾಟು ನಡೆಯುವುದು ತಿಂಗಳ ಕೊನೆಯ ವಾರದಲ್ಲೆ - ಅದರಲ್ಲೂ ಕಡೆಯ ಎರಡು ಮೂರು ದಿನದಲ್ಲೆ. ಅಂದರೆ ಯಾರಾದರೂ ತೊಡಕುಂಟು ಮಾಡಬೇಕೆಂದು ಹೊರಟರೆ ತೀರಾ ಬುದ್ದಿಶಾಲಿಯಾಗಿ ಚಿಂತಿಸುವ ಅಗತ್ಯವೇನೂ ಇರುವುದಿಲ್ಲ. ಆ ಕಡೆಯ ಎರಡು ಮೂರು ದಿನ ಸ್ವಲ್ಪ ವ್ಯತ್ಯಯವಾಗಿ, ವ್ಯತ್ಯಾಸವಾಗುವಂತೆ ನೋಡಿಕೊಂಡರೆ ಸಾಕು. ಕೇವಲ ಅರ್ಧ ದಿನ ನಷ್ಟವಾದರೂ ಅದನ್ನು ಮತ್ತೆ ಕುದುರಿಸಿಕೊಳ್ಳುವ ಮೊದಲೆ ತಿಂಗಳ ಕೊನೆ ಮುಗಿದುಹೋಗಿರುತ್ತದೆ. ಆ ನಂತರ ವಹಿವಾಟು ನಡೆಸಿದರೂ ಅದು ಮುಂದಿನ ತಿಂಗಳ ಲೆಕ್ಕಕ್ಕೆ ಬರುವುದಲ್ಲದೆ ಪ್ರಸಕ್ತ ತಿಂಗಳಿಗಲ್ಲ. ಒಟ್ಟಾರೆ ತಿಂಗಳ ಗುರಿಗೆ ಖೋತಾ ಆಯ್ತೆಂದರೆ ಆ ತಿಂಗಳ ಸಾಧನೆ ಕೆಳಮಟ್ಟದ್ದೆಂದೆ ಲೆಕ್ಕ. ಇದನ್ನೆಲ್ಲಾ ಬಲ್ಲ ಪ್ರಭು, ಏನಾದರೂ ಎಡವಟ್ಟು ಮಾಡಲೆಣಿಸಿದರೆ ಖಂಡಿತ ತಿಂಗಳ ಕೊನೆಯ ಮೂರು ದಿನಗಳಲ್ಲಷ್ಟೆ ಮಾಡುತ್ತಾನೆ - ಅದೂ ಅವನು ಸಿಕ್ಕಿ ಹಾಕಿಕೊಳ್ಳದ ರೀತಿಯಲ್ಲಿ. ದುರ್ವಿಧಿಯೆಂದರೆ ಅವನು ಆ ದಾರಿ ಹಿಡಿದರೆ ಅದನ್ನು ಎದುರಿಸಲು ತನ್ನ ಬಳಿ ಮತ್ಯಾವ ಪ್ರತ್ಯಾಸ್ತ್ರವೂ ಇರದು. ಏನೆ ಮಾಡಬೇಕೆಂದರೂ ತಿಂಗಳ ಕೊನೆಯ ಸೀಮಿತ ಅವಧಿಯೆ ಕಂಟಕವಾಗಿಬಿಡುತ್ತದೆ. ಹಾಗೇನಾದರೂ ಆದಲ್ಲಿ ಶ್ರೀನಿವಾಸ ಪ್ರಭುವೂ ಗೆಲುವಿನ ನಗೆ ಬೀರುತ್ತ ನಿಂತರೂ, ತಾನು ಅಸಹಾಯಕನಂತೆ ನೋಡುತ್ತ ನಿಲ್ಲುವುದಲ್ಲದೆ ಮತ್ತೇನೂ ಮಾಡಲಾಗದು... ಬಹುಶಃ, ಒಮ್ಮೆ ವೇರ್ಹೌಸಿನಲ್ಲಿ ಕುನ್. ಸೋವಿಯನ್ನು ಭೇಟಿಯಾಗಿ ಎಷ್ಟು ಟರ್ನೋವರ ಮುಟ್ಟಿದೆ, ಎಷ್ಟು ಬಾಕಿಯಿದೆ, ತಿಂಗಳ ಕೊನೆ ವಾರದಲ್ಲಿ ಎಷ್ಟು ಶೇಕಡಾ ವಹಿವಾಟು ಜರುಗುತ್ತದೆ - ಇತ್ಯಾದಿಯೆಲ್ಲ ತಿಳಿದುಕೊಂಡು ಮ್ಯಾನೇಜ್ಮೆಂಟಿಗೆ ಒಂದು ಮುನ್ನೆಚ್ಚರಿಕೆ ಕೊಟ್ಟು ಬಿಡುವುದು ವಾಸಿ, ಹೊಸ ಸಿಸ್ಟಮ್ಮಾದ ಕಾರಣ ಕೈ ಕೊಡುವ ಸಾಧ್ಯತೆಯಿದ್ದು, ಹಾಗಾದಲ್ಲಿ ಯಾವಾಗ್ಯಾವಾಗ ಎಷ್ಟೆಷ್ಟು ವಹಿವಾಟಿಗೆ ರಿಸ್ಕ್ ಬರಬಹುದು ಎಂದು. ಕನಿಷ್ಟ ಮೊದಲೆ ಮುನ್ಸೂಚನೆ ಕೊಟ್ಟರೆ ಅದರಿಂದುಂಟಾಗುವ ಆಘಾತದ ಪರಿಮಾಣವನ್ನು ಒಂದಷ್ಟು ಕಡಿಮೆಯಾಗಿಸಬಹುದೇನೊ - ಹಾಗೇನಾದರೂ ಆದಲ್ಲಿ... ಇದೆಲ್ಲಾ ತರದ ಚಿಂತನೆಯ ಹಿನ್ನಲೆ ವಾರದ ಕೊನೆಯೆಲ್ಲಾ ಕೊರೆದು, ಚಡಪಡಿಕೆಯ ರೂಪ ತಾಳಿ, ಸೋಮವಾರದ ಮುಂಜಾವು ಬರುತ್ತಿದ್ದಂತೆ ಸೌರಭ್ ದೇವನನ್ನೆಳೆದುಕೊಂಡು ಬೆಳಿಗ್ಗೆಯೆ ವೇರ್ಹೌಸಿನತ್ತ ಹೊರಡುವಂತೆ ಮಾಡಿತ್ತು ಈ ಆಂತರಿಕ ಶತೃವಿನ ಹೊಸ ವಿಪ್ಪತ್ತಿನ ಸಾಧ್ಯತೆ.

ಎಂದಿನ ಗಡಿಬಿಡಿಯಿಲ್ಲದೆ ಯಾವುದೊ ಫೈಲ್ ನೋಡುತ್ತ ಕುಳಿತಿದ್ದ ಕುನ್. ಸೋವಿಗೆ ಯಾವುದೆ ಮುನ್ಸೂಚನೆ ನೀಡದೆ ತಟ್ಟನೆ ಬಂದಿಳಿದ ಶ್ರೀನಾಥ ಮತ್ತು ಸೌರಭ್ ದೇವನನ್ನು ಕಂಡು ಅಚ್ಚರಿಯಾದರೂ, ಗೋಲೈವಿನ ನಂತರದ ದಿನಗಳಲ್ಲಿ ಅವರು ಬಂದು ಹೋಗುವ ಭೇಟಿ ಮಾಮೂಲಾಗಿಬಿಟ್ಟಿದ್ದ ಕಾರಣ ತೀರಾ ಅತಿಶಯವೆನಿಸಿರಲಿಲ್ಲ. ನಿಜ ಹೇಳುವುದಾದರೆ ಅವರನ್ನು ನೋಡುತ್ತಿದ್ದಂತೆ ಒಂದು ವಿಧದ ಹಿತವಾದ ಆಹ್ಲಾದಕರ ಭಾವನೆ ಒಡಮೂಡಿ ಹಿಗ್ಗೆಲ್ಲ ಪ್ರತಿಫಲಿಸಿ  ಹೊರಸೂಸಿದಂತೆ ಅವನ ಮೊಗದಲ್ಲಿನ ಆಯಾಚಿತ ನಗೆಯಾಗಿ ಅರಳಿತ್ತು. ಕುನ್. ಸೋವಿಯನ್ನು ಸದಾ ಗಡಿಬಿಡಿಯಲಿರುತಿದ್ದ ಅವತಾರದಲ್ಲಷ್ಟೆ ನೋಡಿ ಅಭ್ಯಾಸವಿದ್ದ ಶ್ರೀನಾಥನೂ ಇದನ್ನು ಕಂಡು ಆಶ್ಚರ್ಯಚಕಿತನಾದರೂ, ತಾನು ಕೈಗೊಳ್ಳ ಬಂದಿರುವ ಕಾರ್ಯಕ್ಕೆ ಅವನನ್ನು ಯಾವುದೆ ಅಡೆತಡೆಯಿಲ್ಲದ ನಿರಾಳ ಮನಸಿನಿಂದ ತೊಡಗಿಸಬಹುದೆಂಬ ಅನಿಸಿಕೆ ಮೂಡಿಸಿದ ಸಮಾಧಾನದಿಂದ ಪ್ರಸನ್ನಚಿತ್ತನಾದ. ಎಂದಿನಂತೆ ಸೌರಭ ದೇವ್ ಕಂಪ್ಯೂಟರಿನ ರೂಮಿನತ್ತ ಒಂದು ಸುತ್ತು ನೋಡಿಕೊಂಡು ಬರುವೆನೆಂದು ಹೊರಟಾಗ ಕುನ್. ಸೋವಿಯ ಎದುರಿನ ಸೀಟಿನಲ್ಲಿ ಕುಳಿತು ಮಾತಿಗಾರಂಭಿಸಿದ್ದ ಶ್ರೀನಾಥ. ಕಳೆದ ವಾರದ ಶ್ರೀನಿವಾಸ ಪ್ರಭುವಿನ ವೇರ್ಹೌಸಿನ ಭೇಟಿಯಲ್ಲಿನ ವಿಚಿತ್ರ ನಡುವಳಿಕೆಯನ್ನು ಪರೋಕ್ಷವಾಗಿ ಗಮನಿಸಿದಂತಿದ್ದ ಕುನ್. ಸೋವಿ ತಾನೆ ನುಡಿದಿದ್ದ ತುಟಿಯಂಚಲ್ಲೆ ನಗುತ್ತ -

' ಹೋದ ವಾರ ನಿಮ್ಮ ಸಿಂಗಪುರದ ಮ್ಯಾನೇಜರು ಇಲ್ಲಿಗೆ ಬಂದಿದ್ದರು .. ಎಲ್ಲ ಹೇಗಿದೆಯೆಂದು ನೋಡಿಕೊಂಡು ಹೋಗಲೆಂದೇನೊ...?'

' ಹೌದು.. ನಾನೆ ಶರ್ಮ ಮತ್ತು ಸುರಭಾನ ಜತೆ ಮಾಡಿ ಕಳಿಸಿದ್ದೆ.. ನಾನು ಜತೆಗೆ ಬರಬೇಕಿತ್ತು, ಆದರೆ ಮೀಟಿಂಗುಗಳ ಸಿದ್ದತೆಯಲ್ಲಿ ಬಿಜಿಯಾಗಿದ್ದ ಕಾರಣ ಬರಲು ಆಗಲಿಲ್ಲ..' ಕುನ್. ಸು ಅಂದು ಮಧ್ಯಾಹ್ನ ಮಾತಿಗೆ ಸಿಗುವಳೆಂಬ ಕಾರಣಕ್ಕೆ ಎಲ್ಲರನ್ನು ಬೇಗನೆ ವೇರ್ಹೌಸಿಗೆ ಅಟ್ಟಿ ತಾನು ಆಫೀಸಿಗೆ ಧಾವಿಸಿದ್ದು ನೆನಪಾಗಿತ್ತು ಶ್ರೀನಾಥನಿಗೆ. 

' ಆದರೆ ಅವರಿಗೇಕೊ ಭೇಟಿಯಲಿದ್ದ ಪರಿಸ್ಥಿತಿ ಕಂಡು ಸಮಾಧಾನವಾದಂತೆ ಕಾಣಿಸಲಿಲ್ಲ?' ಕುನ್. ಸೋವಿಯ ಕುಶಾಗ್ರ ಮನ ಶ್ರೀನಿವಾಸ ಪ್ರಭುವಿನ ವರ್ತನೆಯಲ್ಲಿದ್ದ ಅಸಹಜತೆಯನ್ನು ಸೂಕ್ಷ್ಮವಾಗಿ ಗಮನಿಸಿ ಆಗಲೇ ಗುರುತಿಸಿಕೊಂಡಿದ್ದಂತೆ ಕಂಡಿತ್ತು. 

' ಯಾಕೆ? ಏನೆಂದರು? ಎಲ್ಲಾ ಸುಸೂತ್ರವಾಗಿ ನಡೆದಿರುವುದನ್ನು ಕಂಡು ಖುಷಿಯಾಗಿರಬೇಕಿತ್ತಲ್ಲಾ?' ಏನೂ ಗೊತ್ತಿರದವನಂತೆ ಪ್ರಶ್ನಿಸಿದ್ದ ಶ್ರೀನಾಥ. 

' ನಮ್ಮಲ್ಲಿ ಯಾವುದೆ ಇಶ್ಯೂಗಳಿಲ್ಲದೆ ಇರುವುದು ಅವರಿಗೇಕೊ ನಂಬಿಕೆ ಬಂದಂತೆ ಕಾಣಲಿಲ್ಲ.. ಮೇಲಿಂದ ಮೇಲೆ ಕೆದಕಿ ಕೆದಕಿ ಅದಕ್ಕಾಗಿಯೆ ಹುಡುಕಾಡುತ್ತಿದ್ದಂತಿತ್ತು...'

' ಸಾಮಾನ್ಯ ಈ ರೀತಿಯ ದೊಡ್ಡ ಪ್ರಾಜೆಕ್ಟುಗಳಲ್ಲಿ ಗೋಲೈವಿನಲ್ಲಿ ಸಿಕ್ಕಾಪಟ್ಟೆ ಒದ್ದಾಟವಿರುತ್ತದೆ..ಅದಕ್ಕೆ ವಿಚಾರಿಸಿಕೊಂಡಿರಬಹುದು....' ಶ್ರೀನಾಥ ಇನ್ನು ಸಭ್ಯ ನಾಗರೀಕ ಪರಿಧಿಯ ಪರಿಮಿತಿಯಲ್ಲೆ ಉತ್ತರಿಸಲು ಹವಣಿಸುತ್ತಿದ್ದ, ಒಳಗೊಳಗೆ ಶ್ರೀನಿವಾಸ ಪ್ರಭುವಿನ ಕುರಿತು ಕೋಪ ಬರುತ್ತಿದ್ದರೂ; ಕನಿಷ್ಠ ಕಸ್ಟಮರುಗಳ ಮುಂದೆಯಾದರೂ ವೃತ್ತಿಪರ ನಮ್ರತೆಯ ಮೊಗ ಪ್ರದರ್ಶಿಸಬಾರದಿತ್ತೆ ಈ ಮಹಾನುಭಾವ? ತಮ್ಮೊಳಗಿನ ಒಳ ಜಗಳಗಳು ತಮ್ಮೊಳಗಿರಬೇಕೆ ಹೊರತು ಹೊರಗೆಲ್ಲ ಪ್ರದರ್ಶಿತವಾಗಬಾರದೆಂಬ ಕನಿಷ್ಠ ಜ್ಞಾನವಾದರೂ ಇರಬಾರದಿತ್ತೆ?  

(ಇನ್ನೂ ಇದೆ)
__________
 

Comments

Submitted by kavinagaraj Sat, 06/28/2014 - 09:28

ನನ್ನ ಕೆಲವು ಸಹೋದ್ಯೋಗಿಗಳ ನೆನಪು ಮೂಡಿಸಿತು. ವೃತ್ತಿ ಮಾತ್ಸರ್ಯ ಇಲ್ಲದ ಎಡೆಯಿಲ್ಲ. ಮುಂದೆ ಏನಾಗಬಹುದು, ತಿಳಿಸಿ ನಾಗೇಶರೇ - ಮುಂದಿನ ಕಂತಿನಲ್ಲಿ! :)

Submitted by nageshamysore Sun, 06/29/2014 - 17:44

In reply to by kavinagaraj

ಕವಿಗಳೆ ಪ್ರತಿಕ್ರಿಯೆಗೆ ಧನ್ಯವಾದಗಳು. ವೃತ್ತಿ ಮಾತ್ಸರ್ಯದ ಕುರಿತು ನನ್ನ ಅನಿಸಿಕೆ ಮತ್ತು ಅನುಭವವೂ ನಿಮ್ಮದಕ್ಕಿಂತ ತಾತ್ವಿಕವಾಗಿ ಭಿನ್ನವೇನಿಲ್ಲವಾದರೂ, ಆಧುನಿಕತೆಯ ಸೋಗಿರುವ ಐಟಿ ಜಗತ್ತಿನಲ್ಲಿ ಇದು ಕಡಿಮೆಯಿರಬೇಕೆನ್ನುವುದು ಸಹಜವಾದ ನಿರೀಕ್ಷೆ. ಆದರೆ ಕೆಲವೊಮ್ಮೆ ಈ ಕ್ಷೇತ್ರದಲ್ಲಿ ಕಾಣುವ ಕೊಳಕು ರಾಜಕೀಯ ಅಚ್ಚರಿಗೊಳಿಸುವುದರಲ್ಲಿ ಸಂಶಯವಿಲ್ಲ. ಆ ಮಾತ್ಸರ್ಯದ ಪರಿಸರ ಪರಿಚಯವಾಗಲೆಂಬ ಕಾರಣಕ್ಕೆ ಈ ಸನ್ನಿವೇಶಗಳನ್ನು ತರಬೇಕಾಯ್ತು. ಮುಂದಿನ ಕೆಲವಾರು ಭಾಗಗಳಲ್ಲಿ ಅದರ ವಿಸ್ತೃತ ವರ್ಣನೆ ಮೂಡಿಬರಲಿದೆ - ಕಥಾನಕದ ದೃಷ್ಟಿಯಿಂದ ಸ್ವಲ್ಪ ' ನಾಟಕೀಯತೆಯನ್ನು ' ಮೇಳೈಸಿಕೊಂಡೆ :-) ಐಟಿ ಭಾಷೆ ಮತ್ತು ಪರಿಸರದ ಒಡನಾಟವಿರದವರಿಗೆ ಸ್ವಲ್ಪ 'ಹೆವಿ ಡೋಸ್' ಆಗಬಹುದಾದರೂ, ಈ ಮೂಲಕ ಅದರ ಪರಿಚಯವಾದಂತಾದರೂ ಆಗುತ್ತದೆ ಎಂದುಕೊಂಡು ಮುಂದುವರೆಯುತ್ತಿದ್ದೇನೆ, ನೋಡೊಣ !