ಕಥೆ: ಪರಿಭ್ರಮಣ..(33)
( ಪರಿಭ್ರಮಣ..32ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಈ 'ಮಾಂಕ್ ಹುಡ್' ಅಥವಾ 'ಬೌದ್ಧ ಸನ್ಯಾಸಿ ದೀಕ್ಷೆ' ಎನ್ನುವುದು ಪ್ರತಿಯೊಬ್ಬ ಥಾಯ್ ಸಂಪ್ರದಾಯಸ್ಥ ಪುರುಷನ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಡೆಯಲೇಬೇಕಾದ ಪ್ರಕ್ರಿಯೆ. ಹಿಂದೆ ಪ್ರತಿಯೊಬ್ಬ ಬಾಲಕ ಅಥವ ಯುವಕರು ಸೂಕ್ತ ಅಥವ ಪ್ರಾಪ್ತ ವಯಸಿಗೆ ಬರುತ್ತಿದ್ದಂತೆ, ಅವರನ್ನು ಈ 'ವಾಟ್ ಪೋ' ರೀತಿಯ ಬೌದ್ಧ ದೇವಾಲಯಗಳಿಗೆ ಕೆಲ ವರ್ಷಗಳ ಕಾಲ ಅಲ್ಲೆ ನೆಲೆಸಿ ವಾಸಿಸಿಕೊಂಡಿರುವಂತೆ ನಿಬಂಧಿಸಿ ಕಳಿಸಿಬಿಡುತ್ತಿದ್ದರಂತೆ. ಅಲ್ಲಿಗೆ ಹೋದವರು ತಾತ್ಕಾಲಿಕವಾಗಿಯಾದರೂ ತಮ್ಮೆಲ್ಲ ಮನೆ ಮಠ ಬಂಧು ಬಾಂಧವರ ಜತೆಗಿನ ಸಂಸಾರಿಕ ಬಂಧನಗಳನ್ನೆಲ್ಲವನ್ನು ಮರೆತು, ಅಲ್ಲಿರುವ ಇತರ ನಿಜ ಭಿಕ್ಷುಗಳ ಹಾಗೆ ಜೀವನ ಸಾಗಿಸಬೇಕು. ಪ್ರತಿ ದಿನ ಬೆಳಗಿನ ಹೊತ್ತಿಗೆ ಮುನ್ನವೆ ಅವರ ಹಾಗೆಯೆ ನಿದ್ದೆ ಮುಗಿಸಿ ಮೇಲೇಳುವುದರಿಂದ ಹಿಡಿದು, ಅಲ್ಲಿ ಕಡ್ಡಾಯವಾಗಿ ವಿಧಿಸಿದ್ದ ಕಸರತ್ತುಗಳ ತರತರದ ವ್ಯಾಯಾಮ ಮಾಡುವುದು, ಅಲ್ಲಿನ ಗ್ರಂಥಾಲಯದಲ್ಲಿರುವ ಬೌದ್ಧ ಗ್ರಂಥ ಪಠಣ ಮಾಡುವುದು, ಶಾವೊಲಿನ್ ತರಹದ ಆತ್ಮರಕ್ಷಣ ಕಲೆಗಳ ಅಭ್ಯಾಸ ಮಾಡುವುದು, ದೇವಾಲಯದ ಸುತ್ತಲ ಕಸ ಕಡ್ಡಿ ಬಳಿದು ಸ್ವಚ್ಛ ಮಾಡುವುದು, ದೇವಾಲಯದ ಎಲ್ಲಾ ದಿನವಾರ್ತೆಯನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ಪ್ರತಿದಿನ ಬೆಳಿಗ್ಗೆ ಇತರ ಎಲ್ಲಾ ಸನ್ಯಾಸಿ ಭಿಕ್ಷುಗಳ (ಮಾಂಕುಗಳ) ಜತೆ ಊರಿನೊಳಕ್ಕೆ ಭಿಕ್ಷಾಟನೆಗೂ ಹೋಗಿ ಬರಬೇಕಿತ್ತು; ಹಾಗೆ ಭಿಕ್ಷೆ ಬೇಡಿ ತಂದಿದ್ದನ್ನು ಕೂಡ ಎಲ್ಲರೂ ಜತೆಯಾಗಿ ಹಂಚಿ ತಿನ್ನುವುದಷ್ಟೆ ಸಾಧ್ಯವಿತ್ತೆ ಹೊರತು ಎಲ್ಲವನ್ನು ತಾವೆ ತಿನ್ನುವಂತಿರಲಿಲ್ಲ. ಅದೆಲ್ಲಾ ಕೆಲಸಗಳು ಮುಗಿಯುವ ಹೊತ್ತಿಗೆ ಬೆಳಗಿನ ಹತ್ತು-ಹನ್ನೊಂದರ ಸಮಯವಾಗಿರುತ್ತಿತ್ತು. ಅಲ್ಲಿಂದಾಚೆಗೆ ಸಂಜೆಯ ತನಕ ವಿರಾಮವಾಗಿ ತಮಗಿಷ್ಟವಾದ ಓದು, ಅಧ್ಯಯನ, ಚರ್ಚೆ - ಅದೊಂದೂ ಬೇಡವೆನಿಸಿದರೆ ಧ್ಯಾನಾಸಕ್ತರಿಗೆ ಏಕಾಂತದ ಧ್ಯಾನ, ಸುಸ್ತಾಗಿ ಕುಸಿದವರಿಗೆ 'ಯೋಗನಿದ್ರೆ' - ಇತ್ಯಾದಿಗಳಲ್ಲಿ ತಲ್ಲೀನರಾಗಬಹುದಿತ್ತು. ಆದರೆ ಬೆಳಗಿನ ಆಹಾರದ ನಂತರ ಹಗಲಿನ ಹೊತ್ತಿನಲ್ಲಿ ಮತ್ತೇನೂ ತಿನ್ನುವಂತಿರಲಿಲ್ಲ - ದಿನದ ಸಂಜೆಗೆ ಮತ್ತೊಮ್ಮೆ ತುಸು ಆಹಾರ ಸೇವಿಸುವುದನ್ನು ಬಿಟ್ಟರೆ. ಒಂದು ರೀತಿಯಲ್ಲಿ ಕಠಿಣ ಮತ್ತು ಶಿಸ್ತುಬದ್ಧವಾದ ಜೀವನ ಕ್ರಮ ಮತ್ತು ಬದುಕಿನ ಶೈಲಿಗೆ ಅವರನ್ನು ಒಳಪಡಿಸಿ, ಸುಗಮ ಬಾಳಿನ ಮತ್ತೊಂದು ಮಗ್ಗುಲಿನ ಪರಿಚಯದಿಂದ ಪ್ರಬುದ್ಧರಾಗಿಸುವ ಮಹದುದ್ದೇಶದಿಂದೆಂಬಂತೆ ಆ ಕಾರ್ಯಾಚರಣೆ ಸಾಗುತ್ತಿತ್ತು.
ಹಿಂದೆಲ್ಲಾ ಕಡ್ಡಾಯವಾಗಿ 'ಮಾಂಕ್ ಹುಡ್' ನಿಯಮವನ್ನು ಅನುಕರಿಸಲೇ ಬೇಕಿತ್ತಂತೆ ಥಾಯ್ ಪುರುಷರು. ಈಗಿನ ಜನಾಂಗದಲೂ ಆ ನಿಯಮ ಪ್ರಜ್ಞೆ ಜಾಗೃತವಿದ್ದರು, ಆಧುನಿಕ ಜೀವನದ ಬದಲಾವಣೆಗನುಸಾರವಾಗಿ ಸಾಕಷ್ಟು ಹೊಂದಾಣಿಕೆ, ಬದಲಾವಣೆಯಾಗಿದೆಯೆಂದು ಕುನ್. ಸೋವಿ ಹೇಳುತ್ತಿದ್ದ. ಹಳೆಯ ದಿನಗಳಲ್ಲಿ ವರ್ಷಾನುಗಟ್ಟಲೆ ಇದ್ದು ನಡೆಸಬೇಕಾಗಿದ್ದ ಈ 'ಮಾಂಕ್ ಹುಡ್' ಸನ್ಯಾಸಿ ಜೀವನ, ಈಗಿನ ಆಧುನಿಕ ಶೈಲಿಯ ಬದುಕಿನ ಒತ್ತಡದಿಂದಲೊ, ಕಳಚಿ ಸಡಿಲಾಗುತ್ತಿರುವ ಸಾಂಪ್ರದಾಯಿಕ ನಂಬಿಕೆಗಳ ಹಗುರ ಚೌಕಟ್ಟಿನಿಂದಲೊ ಏನೊ - ವರ್ಷಗಳ ಲೆಕ್ಕದಿಂದ ತಿಂಗಳುಗಳಿಗಿಳಿದು ಕಡೆಗೆ ಕನಿಷ್ಠ ಎರಡು ಮೂರು ವಾರದ ಮಟ್ಟಕ್ಕೆ ಬಂದು ನಿಂತಿತ್ತು. ಇನ್ನು ಕೆಲವು ಸಂದರ್ಭಗಳಲ್ಲಿ ಅದನ್ನು ಮತ್ತಷ್ಟು ಕುಗ್ಗಿಸಿ, ಕೆಲವೆ ದಿನಗಳ ಮಟ್ಟಕ್ಕೂ ಇಳಿಸುವುದು ಉಂಟೆಂದೂ ಕೇಳಿದ್ದ ಶ್ರೀನಾಥ. ಅಷ್ಟೆಲ್ಲದರ ನಡುವಲೂ ಅವನಿಗೆ ಅಚ್ಚರಿಯಾದ ಮತ್ತು ಮೆಚ್ಚಿಕೆಯಾದ ಒಂದು ಅಂಶವೆಂದರೆ, ಈ 'ಮಾಂಕ್ ಹುಡ್' ಅನ್ನು ಕೇವಲ ಥಾಯ್ ಜನರು ಮಾತ್ರವಲ್ಲದೆ, ಯಾರಾದರೂ ವಿದೇಶಿಗರು ಅನುಕರಿಸಲು ಬಯಸಿದರೆ ಸ್ವಕೀಯ ಹಾಗು ಪರಕೀಯ ಎನ್ನುವ ಭೇಧವಿಲ್ಲದೆ ಅದಕ್ಕು ಅವಕಾಶ ನೀಡುವಷ್ಟು ಉದಾರ ನೀತಿ ಚಾಲ್ತಿಯಲ್ಲಿತ್ತು. ಆ ರೀತಿಯ ವಿದೇಶಿ ಜನರ ಅನುಕೂಲದ ಸಲುವಾಗಿ ಇಂಗ್ಲೀಷಿನ ವಹಿವಾಟು ಬಳಕೆಯಲ್ಲಿ ಹೆಚ್ಚಾಗಿರುವ ಕೆಲವು ಬೌದ್ಧ ದೇವಾಲಯಗಳಲ್ಲಿ 'ಮಾಂಕ್ ಹುಡ್'ಗಾಗಿ ತಂಗುವ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಅಲ್ಲದೆ ವಿದೇಶಿಯರೆಂಬ ಕಾರಣಕ್ಕೊ ಏನೊ, ಅವರು ದೇವಾಲಯದಲ್ಲಿ ಕಳೆಯಬೇಕಾದ ದಿನಗಳ ಸಂಖ್ಯೆ ಕೂಡ ಬಂದವರ ಅನುಕೂಲಕ್ಕೆ ತಕ್ಕಂತೆ ಹೆಚ್ಚುಕಡಿಮೆಯಿರುತ್ತಿತ್ತು. ಕೇವಲ ಕನಿಷ್ಠ ಮೂರೆ ದಿನಗಳಿಂದ ಆರಂಭವಾಗಿ ಆ ವಿದೇಶಿಯರಿಗೆ ಎಷ್ಟು ದಿನಗಳ ತನಕ ಇರಬೇಕೆನಿಸುತ್ತದೊ ಅಷ್ಟರವರೆಗೆ ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತಿತ್ತು. ಆದರೆ ಇದ್ದಷ್ಟು ದಿನವೂ ಯಾವುದೆ ರಿಯಾಯತಿಯಿಲ್ಲದೆ ಖಡಾಖಂಡಿತವಾಗಿ ಅಲ್ಲಿನ ಸ್ಥಳೀಯ ಬೌದ್ಧ ಭಿಕ್ಷುಗಳ ಜೀವನ ಕ್ರಮ, ಬದುಕಿನ ಶೈಲಿಗಳನ್ನೆ ಅನುಕರಿಸಬೇಕಿತ್ತು ಯಾವುದೆ ವಿನಾಯಿತಿಯಿಲ್ಲದೆ. ಮೊದಲ ಬಾರಿ ಹಾಗೆ ಬಂದು ಹೋದ ಎಷ್ಟೊ ಥಾಯ್ ಜನರು ಮತ್ತು ವಿದೇಶಿಯರು ಮತ್ತೆ ಪ್ರತಿ ವರ್ಷವರ್ಷವೂ ಅಥವಾ ಸಾಧ್ಯವಾದಾಗಲೆಲ್ಲ ಅಲ್ಲಿಗೆ ಬಂದು ಒಂದಷ್ಟು ದಿನ ಇದ್ದು ಹೋಗುವುದು ಸಹ ಸಾಮಾನ್ಯವಾಗಿತ್ತು. ಅಲ್ಲಿದ್ದುಕೊಂಡು ಅನುಕರಿಸಬೇಕಾದ ಆ ಕಟ್ಟುಪಾಡೆಲ್ಲ ಬೇಡವೆಂದು ಸುಮ್ಮನೆ ಪ್ರವಾಸಿಯಂತೆ ಕೆಲದಿನ ತಂಗಿದ್ದುಕೊಂಡು ಹೋಗಲು ಬರುವ ವಿದೇಶಿಯರೇನು ಕಡಿಮೆಯಿರಲಿಲ್ಲ. ಇದೆಲ್ಲವನ್ನು ಓದಿ, ಕೇಳಿ ತಿಳಿದುಕೊಂಡಿದ್ದ ಶ್ರೀನಾಥನಿಗೆ ಅವುಗಳನ್ನೊಮ್ಮೆ ಕಣ್ಣಾರೆ ಇಣುಕಿ ನೋಡುವ ಕುತೂಹಲವೂ ಸೇರಿಕೊಂಡಿತ್ತು - ಅವೆಲ್ಲ ಹೇಗೆ ಕಾರ್ಯ ನಿರ್ವಹಿಸುತ್ತವೆಂದು ಅರಿಯುವ ಸಲುವಾಗಿ. ಹೀಗಾಗಿ ಕುನ್. ಸೋವಿ 'ವಾಟ್ ಪೋ' ಗೆ ಭೇಟಿ ನೀಡುವ ಮಾತೆತ್ತಿದಾಗ ಖುಷಿಯಿಂದ ತಾನೂ ಜತೆಗೂಡಿದ್ದ.
ಅಂದಿನ ಗುರುವಾರ ಮಾತಿತ್ತಿದ್ದಂತೆ ಕುನ್. ಸೋವಿ ಬೆಳಿಗ್ಗೆಯೆ ಆಫೀಸಿಗೆ ಬಂದು ತನ್ನ ಪುಟ್ಟ ಮೀಟಿಂಗೊಂದನ್ನು ಮುಗಿಸಿದ ನಂತರ ಶ್ರೀನಾಥನನ್ನು 'ವಾಟ್ ಫೋ'ಗೆ ಹೊರಡಿಸಿಕೊಂಡು ಹೊರಟಿದ್ದ. ಅವನ ಕಾರಿನಲ್ಲೆ ಹೊರಟು ಬ್ಯಾಂಕಾಕಿನ ಟ್ರಾಫಿಕ್ಕಿನಲ್ಲಿ ಈಜಿ ಆ ಬೃಹತ್ ಬೌದ್ಧ ದೇವಾಲಯ ತಲುಪುವ ಹೊತ್ತಿಗೆ ಒಂದು ಗಂಟೆ ಕಳೆದಿತ್ತು. ನಂತರ ಆ ವಿಶಾಲ ದೇಗುಲದ ಭವ್ಯ ಪ್ರಾಂಗಣದಲ್ಲಿ ನಡೆದಾಡುತ್ತ ಅದರ ಅಗಾಧತೆಗೆ ಬೆರಗಾಗುತ್ತ ಬಾಯ್ಬಿಟ್ಟುಕೊಂಡು ನೋಡುತ್ತಿದ್ದ ಶ್ರೀನಾಥನಿಗೆ, ಉದ್ದಕ್ಕೂ ತನಗೆ ತಿಳಿದ ಮಟ್ಟಿಗೆ ಅದರ ಕುರಿತಾಗಿ ಕಾಮೆಂಟರಿ ನೀಡುತ್ತ ನಡೆದಿದ್ದ ಕುನ್. ಸೋವಿ. ಅಲ್ಲೆಲ್ಲಾ ಪ್ರಾಂಗಣದ ಸುತ್ತ ಸುತ್ತಾಡಿ ಮುಖ್ಯ ದೇಗುಲದ 'ಪ್ರಾಣಮಂದಿರ'ದತ್ತ ಬಂದಾಗ ಅಲ್ಲಿ ಅತಿ ದೊಡ್ಡದಾದ ನಿದ್ರಾಸೀನ ಬುದ್ಧನ ಮೂರ್ತಿಯಿರುವುದು ಮೊದಲೆ ಗೊತ್ತಿದ್ದರೂ, ಕಣ್ಣೆದುರು ತೆರೆದುಕೊಂಡ ಆ ಬೃಹತ್ ಮೂರ್ತಿಯ ಗಾತ್ರಕ್ಕೆ ಅರೆಗಳಿಗೆ ಸ್ತಂಭಿಭೂತನಾಗಿ ನಿಂತುಬಿಟ್ಟಿದ್ದ ಶ್ರೀನಾಥ. ನಿಜಕ್ಕೂ ಅದೆಷ್ಟು ದೊಡ್ದದಿತ್ತೆಂದರೆ ಆ ಗಾತ್ರದ ವಿಶಾಲತೆ ಮತ್ತು ಅಗಾಧತೆಯಿಂದಾಗಿ ಇಡಿ ವಿಗ್ರಹವನ್ನು ಒಂದೆ ಬಾರಿಗೆ ಒಂದೆ ದೃಷ್ಟಿಯಲ್ಲಿ ಎರಡು ಕಣ್ಣಿನಿಂದ ತುಂಬಿಸಿಕೊಳ್ಳುವುದು ಸಾಧ್ಯವೆ ಇರಲಿಲ್ಲ; ಬರಿ ಭಾಗಭಾಗಗಳಾಗಿಸಿ ಖಂಡ-ಛೇಧಗಳನ್ನು ಮಾತ್ರವೆ ನೇತ್ರಕ್ಷೇತ್ರ ಮತ್ತದರ ಪ್ರಕ್ಷೇಪಿತ ಮನೋಃಪಟಲದಲ್ಲಿ ಹಿಡಿದಿಡಲು ಆಗುತ್ತಿತ್ತಷ್ಟೆ. ಆ ಕಾರಣದಿಂದಲೆ ಏನೊ, ಆ ಬೃಹನ್ಮೂರ್ತಿಯನ್ನು ನೋಡುವ ಪರಿಕ್ರಮವನ್ನು ಮೂರು ಭಾಗವಾಗಿ ವಿಭಾಗಿಸಿ, ಮೂರು ದ್ವಾರಗಳ ಮೂಲಕ ಪ್ರತಿ ಭಾಗವನ್ನು ನೋಡುವ ವ್ಯವಸ್ಥೆ ಮಾಡಲಾಗಿತ್ತು. ವಿಪರ್ಯಾಸವೆಂದರೆ ಛಾಯಚಿತ್ರ ಹಿಡಿಯಬೇಕೆಂದರೂ ಒಂದೆ ಫ್ರೇಮಿನಲ್ಲಿ ಹಿಡಿಯಲಾಗದ ಅಗಾಧ ವಿಸ್ತಾರ, ವೈಶಾಲ್ಯತೆ - ಆ ಪ್ರಶಾಂತ, ನಿರ್ಲಿಪ್ತವದನದಲ್ಲಿ ಆಸೀನನಾಗಿದ್ದ ಬುದ್ಧನ ಮಹಾನ್ ಮೂರ್ತಿಯಲ್ಲಿತ್ತು. ಆ ಭವ್ಯ ಆಕಾರದ ಜತೆಗೂಡಿದ ಮುಖದ ಸೌಮ್ಯ ಪ್ರಶಾಂತ ಕಳೆ ಎಂತಹ ನಾಸ್ತಿಕನಲ್ಲೂ ಭಕ್ತಿಯ ಭಾವವನ್ನುದಿಸುವಂತೆ ಮಾಡಿ ಕೈ ಜೋಡಿಸಿ ನಮಿಸಲು ಪ್ರೇರೇಪಿಸಿ ಬಿಡುವಂತಿತ್ತು. ಅಲ್ಲಿನ ಸುತ್ತಮುತ್ತಲ ವಿವರಗಳನ್ನೆಲ್ಲ ಅಧ್ಯಯನ ಮಾಡಲು ಹೊರಟರೆ ತಿಂಗಳು ವಾರಗಟ್ಟಲೆ ಸಂಶೋಧಿಸಬಹುದಾದಷ್ಟು ಸರಕಿತ್ತು, ಅಲ್ಲಿ. ಶಯನಾಸನದಲ್ಲಿ ಪವಡಿಸಿದ್ದ ಬುದ್ಧನ ಕಾಲಡಿಯನ್ನು ನೋಡಲು ಸಾಧ್ಯವಿದ್ದ ಕಡೆಯಲ್ಲಿ, ಆ ಪಾದದಲ್ಲಿರುವ 'ಪಾದ ಸಾಮುದ್ರಿಕಾ ರೇಖೆ'ಗಳನ್ನು ಕೂಡ ವಿವರವಾಗಿ ನಿಖರವಾಗಿ ಬಿಡಿಸಿಡಲಾಗಿತ್ತು. ಅಲ್ಲಿ ಬುದ್ಧನ ನಿಜವಾದ ಪಾದಗಳಲ್ಲಿ ಇತ್ತೆಂದು ಹೇಳಲಾದ ನೂರೆಂಟು ಪಾದ ಸಾಮುದ್ರಿಕಾ ರೇಖೆಗಳನ್ನು, ಬಗೆಬಗೆ ಆಕಾರಗಳನ್ನು ಕಾಣಬಹುದಿತ್ತು, ಹೂವು ಪ್ರಾಣಿಗಳಾದಿಯಾಗಿ ವಿವಿಧ ಸಂಕೇತಗಳ ರೂಪದಲ್ಲಿ. ಆ ಪ್ರತಿ ರೇಖೆಯ ಹಿರಿಮೆ, ಮಹತ್ವಗಳನ್ನು ವರ್ಣಿಸುವ ಅಗಾಧ ಸಾಹಿತ್ಯ ರಾಶಿಯೂ ಅಲ್ಲಿ ಹೇರಳವಿದೆಯೆಂದು ನುಡಿದಿದ್ದ ಕುನ್. ಸೋವಿ. ಅಲ್ಲಿಗೆ ಬಂದ ಗಳಿಗೆಯಿಂದ ಅದರ ಭವ್ಯತೆಗೊ, ಪ್ರಶಾಂತತೆಗೊ ಮರುಳಾಗಿ ಪೂರ್ಣ ಸಮಾಧಾನಗೊಂಡ ಪ್ರಶಾಂತ ಮನಸ್ಥಿತಿಯನ್ನು ಪಡೆದವನಂತೆ ಅನುಭೂತಿ ಹೊಂದಿದ ಶ್ರೀನಾಥ, ಆ ಹೊತ್ತಿನ ಮಟ್ಟಿಗೆ ಪ್ರಾಜೆಕ್ಟು, ಕೆಲಸದಲ್ಲಿರುವ ಆತಂಕ, ಕುನ್.ಸು ಇತ್ಯಾದಿಗಳನ್ನೆಲ್ಲ ಸ್ಮೃತಿಯಿಂದ ಸಂಪೂರ್ಣವಾಗಿ ಮರೆತಂತಾಗಿ, ಆ ಅಪಾರ ಗಾತ್ರದ ಮುಂದೆ ಎಲ್ಲ ಕ್ಲೇಷಗಳು ನಶಿಸಿದಂತೆನಿಸಿ, ಆ ಅನುಭವಾನುಭೂತಿಯ ದಿಗ್ಬ್ರಮೆಯಲ್ಲಿ ಮಿಕ್ಕೆಲ್ಲ ಉನ್ಮೇಷ, ಉದ್ದೇಶಗಳನ್ನು ಪೂರ್ಣವಾಗಿ ಮರೆತಂತವನಾಗಿಬಿಟ್ಟಿದ್ದ.
'ಟುಕ್-ಗವೀ' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ 'ವಾಟ್ ಫೋ' ದೇಗುಲ ಸಂಕೀರ್ಣ ಬ್ಯಾಂಕಾಕಿನ ಅರಮನೆಯ ಮತ್ತೊಂದು ಪಾರ್ಶ್ವಕ್ಕೆ ಸೇರಿಕೊಂಡಂತೆ ಇದ್ದುದರಿಂದ ಅರಮನೆಯೊಳಗಿದ್ದ ಮತ್ತೊಂದು ದೇಗುಲ ಜೇಡ್ ಬುದ್ಧನ ಪ್ರತಿಮೆಯಿರುವ 'ವಾಟ್ ಪ್ರಕ್ ಯ್ಯಾವ್' ದೇವಾಲಯಕ್ಕೂ ಹತ್ತಿರವಾಗಿತ್ತು. ಈ ಪ್ರಾಂಗಣದಲ್ಲಿ ಪ್ರಮುಖವಾಗಿದ್ದ ಬೃಹತ್ ಬುದ್ಧ ದೇಗುಲದ ಜತೆಗಿದ್ದ ಮತ್ತೆರಡು ಪ್ರಮುಖ ವೈಶಿಷ್ಠ್ಯಗಳೆಂದರೆ ಅದರೊಳಗಡೆ ಇದ್ದ ಬೌದ್ಧ ಮಸಾಜ್ ಶಾಲೆ ಮತ್ತು ನಾಲ್ಕು ದೊಡ್ಡ 'ವಿಹಾರ'ದ ಹಜಾರಗಳನ್ನು ಒಳಗೊಂಡಿದ್ದ 'ಮಾನೆಸ್ಟರಿ'. ದೇಗುಲದಲ್ಲಿದ್ದ ಬೃಹತ್ ಗಾತ್ರದ ಬುದ್ಧನ ಪ್ರತಿಮೆಯೆ ಅಲ್ಲದೆ ಸಾವಿರಕ್ಕೂ ಮಿಕ್ಕ ಅನೇಕ ರೂಪಾಕಾರದ ಬುದ್ಧನ ಪ್ರತಿಮೆಗಳು ಹೇರಳವಾಗಿ ಸಂಗ್ರಹಿತವಾಗಿರುವ ದೇಗುಲವದು! ಅಲ್ಲಿದ್ದ ಆ ಬೃಹತ್ ಬುದ್ಧನ ಮೂರ್ತಿಯೂ ಸಹ, ಶ್ರೀರಂಗನಂತೆ ತಲೆಗೆ ಕೈ ಕೊಟ್ಟು ಮಲಗಿರುವ ಭಂಗಿಯಲ್ಲಿ ರಾಜ ಮನೆತನದ ಪೋಷಣೆಯ ವೈಭೋಗವನ್ನೆಲ್ಲ ಬಿಂಬಿಸುತ್ತ ಆ ಸಿರಿವಂತಿಕೆಯೆ ಮೈಯಾದಂತೆ ಸಾಕಾರಗೊಂಡಿತ್ತು. ಬುದ್ಧನ ಸಂಗ್ರಹಿತ ಚಿತಾಭಸ್ಮದ ಬೂದಿಯ ಜತೆಗೆ ರಾಜಮನೆತನದವರ ದೇಹಾಂತವಾದಾಗ ಅವರ ಚಿತಾಭಸ್ಮವನ್ನು ಸಹ ಅಲ್ಲಿರುವ ಕರಂಡಗಳಲ್ಲಿ ಇಡುತ್ತಿದ್ದರು, ಬುದ್ಧನ ಭಸ್ಮದ ಜತೆಯಲ್ಲಿ. ಬುದ್ಧನ ನೂರೆಂಟು ಸುಗುಣಗಳ ಸಂಕೇತವಾಗಿ ಪಾತ್ರೆಯಾಕಾರದ ನೂರೆಂಟು ಬೋಗುಣಿಗಳನ್ನು ಸಾಲಾಗಿ ಜೋಡಿಸಿಟ್ಟ ಕಡೆ ಭಕ್ತರು ತಮಗೆ ಪ್ರಿಯವೆನಿಸಿದ ಗುಣ-ಭೋಗುಣಿಗೆ, ಕಾಣಿಕೆ ಹಾಕಿ ಹೋಗಬಹುದಿತ್ತು. ಹಾಗೆ ಸಂಗ್ರಹಿತವಾದ ಕಾಣಿಕೆ ಅಲ್ಲಿನ ಮಾಂಕುಗಳ ಖರ್ಚು ವೆಚ್ಚಕ್ಕೆ ಬಳಸಲಾಗುತ್ತಿತ್ತು.
ಇನ್ನು ಅಲ್ಲಿರುವ ಮಸಾಜ್ ಸ್ಕೂಲ್ - ಸಾಂಪ್ರದಾಯಿಕ ಥಾಯ್ ಮಸಾಜಿನ ಮೂಲ ರೂಪುರೇಷೆ ಸಿದ್ದಾಂತಗಳು ಹುಟ್ಟಿಕೊಂಡಿದ್ದೆ ಅಲ್ಲಿಂದ. ಅಲ್ಲಿನ ಧಾರ್ಮಿಕ ಬರಹಗಳಲ್ಲಿ ಹುದುಗಿದ್ದ ಚಿಕಿತ್ಸಕ ತತ್ವಗಳನ್ನು ಹೆಕ್ಕಿ ಸಾಂಪ್ರದಾಯಿಕ ಮಸಾಜಿನ ರೂಪದಲ್ಲಿ ಕಲೆಯಾಗಿ ರೂಪಿಸಿ, ಅದನ್ನೊಂದು ವಾಣಿಜ್ಯ ಪ್ರೇರಕ ಸರಕಾಗಿ ಮಾರ್ಪಡಿಸುವ ಮಟ್ಟಕ್ಕೆ ಬೆಳೆದುನಿಂತಿತ್ತು ಆ ಮಸಾಜಿನ ಕಲೆ. ಆದರೆ ಅದೆಲ್ಲ ದೇಗುಲದಿಂದ ಹೊರಗೆ ಮಾತ್ರ; ಈ ದೇವಾಲಯದಲ್ಲಿ ಕೂಡ ಕನಿಷ್ಠ ದರದಲ್ಲಿ ಬೇಕೆಂದು ಬಂದವರಿಗೆ ಸ್ವಚ್ಛ ಸಾಂಪ್ರದಾಯಿಕ ಥಾಯಿ ಮಸಾಜಿನ ಸೇವೆ ಲಭಿಸುತ್ತಿತ್ತಾದರು ಅದಕ್ಕೆಂದೆ ಅಷ್ಟು ದೂರಕ್ಕೆ ಬರುವ ಅಗತ್ಯದ ಪರಿಗಣನೆಯೂ ಸೇರಿ, ಆ ಜಾಗ ನೋಡಲು ಬರುವ ಪ್ರವಾಸಿಗಳಿಗೆ ಮತ್ತು ಆಸಕ್ತರಿಗೆ ಅಲ್ಲಿಗೆ ಬಂದಾಗ ಕೈಗೊಳ್ಳಬಹುದಾದ ಕೈಂಕರ್ಯವಾಗಿ ಮಾರ್ಪಾಡಾಗಿತ್ತು. ಅದು ಬಿಟ್ಟರೆ ಬೌದ್ಧ ಮಾಂಕುಗಳು ತಂಗುವ ವಿಶಾಲ 'ಮಾನೆಸ್ಟರಿ' ಅಲ್ಲಿನ ಮತ್ತೊಂದು ಪ್ರಮುಖ ವಿಭಾಗ. ಮಿಕ್ಕೆಲ್ಲ ಕಡೆ ಸುತ್ತಾಡಿದ ನಂತರ ಅತ್ತ ಕಡೆಗು ನಡೆದಿದ್ದ ಕುನ್. ಸೋವಿಯ ಜತೆ ಮೂಕವಿಸ್ಮಿತನಂತೆ ಹಿಂಬಾಲಿಸಿ ನಡೆದಿದ್ದ ಶ್ರೀನಾಥ ಅಲ್ಲಿನ ಕೌತುಕಗಳನ್ನೆಲ್ಲ ಕಣ್ತುಂಬಿಕೊಳ್ಳುತ್ತಲೆ.
ಮಿಕ್ಕೆಲ್ಲ ಕಡೆ ಅಡ್ಡಾಡಿಯಾದ ಮೇಲೆ ಈ ಮಾಂಕುಗಳು ಮತ್ತು ಬೌದ್ಧ ಭಿಕ್ಷುಗಳೆ ತುಂಬಿರುವ ಆ ಕಟ್ಟಡದ ಹತ್ತಿರಕ್ಕೆ ಕರೆದೊಯ್ದಿದ್ದ ಕುನ್. ಸೋವಿ, ಅಲ್ಲಿ ತನಗೇನೋ ಕೆಲಸವಿರುವವನಂತೆ. ಅಲ್ಲೊಂದು ದೊಡ್ಡ ಬೌದ್ಧ ಗ್ರಂಥಾಲಯವಿರುವಂತೆ ಸಹ ಕಾಣುತ್ತಿತ್ತು, ಸುತ್ತಲ ವಾತಾವರಣವನ್ನು ಮತ್ತು ಅದರ ಸದ್ದಿರದ ಮೌನ ಪರಿಸರವನ್ನು ಗಮನಿಸಿದರೆ. ಅದಕ್ಕಂಟಿಕೊಂಡಂತಿದ್ದ ಹಜಾರದಲ್ಲಿ ಅನೇಕ ಉದ್ದನೆಯ ನಿಲುವಂಗಿ ಧರಿಸಿದ್ದ ಬೋಳು ತಲೆಯ ಬೌದ್ಧ ಭಿಕ್ಷು(ಮಾಂಕು)ಗಳು, ತಾತ್ಕಾಲಿಕ 'ಮಾಂಕ್ ಹುಡ್' ಪಾಲಿಸಲು ಬಂದಿದ್ದ ಸ್ಥಳೀಯ ಜನಸಾಮಾನ್ಯರು ಸೇರಿದಂತೆ - ಎಲ್ಲರೂ ಅಲ್ಲಲ್ಲಿ ಪ್ರಸ್ಥಾನರಾಗಿ ಅವರವರಿಗೆ ನಿಯೋಜಿಸಿದ್ದ ಯಾವುದಾವುದೊ ಅವಸರಗಳಲ್ಲಿ ಕಾರ್ಯ ನಿಯುಕ್ತರಾಗಿದ್ದರು. ಅಷ್ಟೊಂದು ಜನರಿದ್ದರೂ, ಅಲ್ಲಿ ತುಸುವೆ ಗದ್ದಲವಾಗಲಿ, ಗೊಂದಲವಾಗಲಿ ಕಂಡುಬರದೆ ಅಗಾಧ ಶಿಸ್ತಿನ ಮೌನ ನಿರ್ಮಲ ಪರಿಸರವೆ ಚೆಲ್ಲಾಡಿಕೊಂಡಂತಿತ್ತು. ಅದನ್ನೆಲ್ಲ ದಾಟಿ ಒಳಹೋದ ಕುನ್. ಸೋವಿ ಒಳ ಹಿತ್ತಲಿನ ಮತ್ತೊಂದು ತೆರೆದ ಬಯಲಿನಂತಿದ್ದ ಜಾಗಕ್ಕೆ ಪ್ರವೇಶಿಸಿದಾಗ ಅಲ್ಲೊಂದು ದೊಡ್ಡ ಭೋಧಿವೃಕ್ಷ ಕಂಡು ಬಂದಿತ್ತು; ಮತ್ತದರ ಸುತ್ತಲು ಧ್ಯಾನ ನಿರತರಾದಂತೆ ಕಾಣುವ ಕೆಲವು ಸನ್ಯಾಸಿ ಮಾಂಕುಗಳು ಕುಳಿತಿದ್ದರು. ಅಲ್ಲಿಯೆ ಕುಳಿತಿದ್ದ ಮತ್ತಲವರು ದೊಡ್ಡದೊಂದು ಗ್ರಂಥ ಹಿಡಿದು ಯಾವುದೊ ಆಳವಾದ ಸಂವಾದ ಜಿಜ್ಞಾಸೆಯಲ್ಲಿ ತೊಡಗಿಸಿಕೊಂಡಂತಿತ್ತು. ಈ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ಏಕಾಂತದಲ್ಲಿ ಒರಗಿ ಕುಳಿತು ಕಣ್ಮುಚ್ಚಿ ಕುಳಿತ ಪರಿ ನಿದಿರೆಯೊ, ಧ್ಯಾನಮುದ್ರೆಯೊ ಎಂದು ಹೇಳಲಾಗದ ವಿಭಿನ್ನ ಪ್ರಕ್ರಿಯೆಯಾಗಿ ಕಂಡಿತ್ತು ಶ್ರೀನಾಥನಿಗೆ.
ಹಾಗೆ ನಡೆಯುತ್ತ ಇದ್ದ ಹಾಗೆ, ಅಲ್ಲಿದ್ದವರಲ್ಲೊಬ್ಬವರು ಕುನ್. ಸೋವಿಗೆ ಪರಿಚಯವಿದ್ದವರೊ ಏನೊ - ಅವರ ಹತ್ತಿರ ನೇರವಾಗಿ ಹೋಗಿ ಕುಳಿತು ಏನೊ ಪ್ರಶ್ನಿಸುತ್ತ ಮಾತಿಗಿಳಿದಿದ್ದ ಕುನ್. ಸೋವಿ. ಅವರ ಸಂಭಾಷಣೆ, ಸಂವಾದ ಥಾಯ್ ಭಾಷೆಯಲ್ಲಿದ್ದ ಕಾರಣ ಹೇಗೂ ಅದು ಅರ್ಥವಾಗುವುದಿಲ್ಲವೆಂದು ಅರಿವಿದ್ದ ಕಾರಣ, ಅಲ್ಲಿ ನಿಲ್ಲದೆ ಸ್ವಲ್ಪದೂರ ನಡೆದು ವಿಹಾರವೊಂದರ ಎದುರಿನಲ್ಲಿದ್ದ ಬೃಹತ್ ವೃಕ್ಷವೊಂದರ ಹತ್ತಿರ ಹೋಗಿ ಕಣ್ಮುಚ್ಚಿ ಕುಳಿತುಕೊಂಡ ಶ್ರೀನಾಥ. ಹೀಗೆ ಸುಮಾರು ಐದು ನಿಮಿಷದ ತನಕ ಕೂತು ಕಣ್ಣು ಮುಚ್ಚಿದ್ದ ಶ್ರೀನಾಥನಿಗೆ, ಅಲ್ಲಿ ಬೀಸುತ್ತಿದ್ದ ತಂಗಾಳಿಯಿಂದಾಗಿ ಯಾವುದೊ ಅಲೌಕಿಕ ಅನುಭೂತಿಯಲ್ಲಿ ತೇಲಿದಂತಹ ಅನುಭೂತಿಯುಂಟಾಗಿ ಆ ಅನುಭವಸಾರವನ್ನು ಪ್ರಜ್ಞೆಯಿಂದ ದೂರಾಗಲೆ ಬಿಡದಂತೆ ಮುಚ್ಚಿದ ಕಣ್ಣನ್ನು ಇನ್ನು ಗಟ್ಟಿಯಾಗಿ ತೆಗೆಯಲಾಗದಂತೆ ಮುಚ್ಚಿಕೊಂಡಿದ್ದ.. ಆ ಗಳಿಗೆಯಲ್ಲಿ ಇದ್ದಕ್ಕಿದ್ದಂತೆ ಯಾವುದೋ ಲೋಕಕ್ಕೆ ಜಾರಿ, ತೇಲಿಕೊಂಡು ಹೋಗುತ್ತಿರುವ ಅನಿಸಿಕೆಯಾಗಿ ಬೆವರ ಹನಿಗಳನ್ನು ತಾಕಿದ ತಂಗಾಳಿಯ ನೇವರಿಕೆಯೂ ಮುಖದ ಮೇಲೆಲ್ಲ ತಂಪಾದ 'ಕುಳುಕುಳು'ಗುಟ್ಟಿಸುವ ಅನುಭೂತಿಯನ್ನು ಪ್ರಕ್ಷೇಪಿಸುತ್ತಿರುವಂತೆನಿಸಿ ಮೈಯೆಲ್ಲಾ ಹಗುರವಾದಂತ ವಿಸ್ಮೃತಿಯನ್ನು ಆಸ್ವಾದಿಸತೊಡಗಿತ್ತು ಶ್ರೀನಾಥನ ಮನಸ್ಸು. ಆ ವಿಸ್ಮಯಾವರಣದ ಭ್ರಮಾಲೋಕದಲ್ಲಿ ಕಳುವಾದವನಂತೆ ಜಾಗೃತ ಪ್ರಜ್ಞೆಯನೆಲ್ಲ ಅದರ ಅಡಿಯಾಳಾಗಿಸಿ ಕೇವಲ ಆಂತರ್ಯದ ಆಂತರಿಕ ನಿಗೂಢೀಂದ್ರಿಯಗಳಿಂದಷ್ಟೆ ನಿರ್ದೇಶಿತನಾದವನಂತೆ ಅಪರಿಚಿತ ಪರಿಸರದಲ್ಲೂ ಸುಪರಿಚಿತ ಅನ್ಯೋನ್ಯತೆಯಲ್ಲಿ ವಿಹರಿಸತೊಡಗಿತ್ತು, ಅವನೊಳಗಿದ್ದೂ ಅಪರಿಚಿತ ಅತಿಥಿಯಂತಿದ್ದ ಅವನ ಒಳಗಡಗಿದ್ದ ಒಳಾಂಗಣ ಪ್ರಜ್ಞಾಧಾರ. ಆ ಅಲೌಕಿಕ ಅನುಭವದಲ್ಲಿ ಅದೆಷ್ಟು ಹೊತ್ತು ಹಾಗೆ ಕುಳಿತಿರುತ್ತಿದ್ದನೊ - ಬಾಹ್ಯ ಪರಿಸರದ ಆ ಬಡಿದೆಬ್ಬಿಸುವ ದನಿ ಕರ್ಣೇಂದ್ರಿಯವನ್ನು ದಾಟಿ ಮಸ್ತಿಷ್ಕವನ್ನು ಬಡಿಹಿಡಿದು ಅಲುಗಾಡಿಸದಿದ್ದರೆ..
ಇದ್ದಕ್ಕಿದ್ದಂತೆ ಹಿಂದಿನಿಂದ ತೇಲಿ ಬಂದ ಆ ಆದೇಶಪೂರ್ವಕ ಆಗ್ರಹ ಸ್ವರ, ಅಧಿಕಾರದ ದನಿಯಲ್ಲಿ ಅವನ ಜಾಗೃತ ಪ್ರಜ್ಞೆಯನ್ನು ಬಡಿದೆಬ್ಬಿಸಿ ಒಳಹೊಕ್ಕು, ಒಳಪ್ರಜ್ಞೆಯನ್ನು ಕದಲಿಸಿ ಎಚ್ಚರಿಸಿದಂತಾಗಿತ್ತು... ಆ ಆಗ್ರಹಪೂರ್ವಕ ಕಂಪನಾತರಂಗದ ಕರೆಯನ್ನು ಧಿಕ್ಕರಿಸಲಾಗದ ಅಸಹಾಯಕತೆಯ ಜತೆಗೆ, ಅದೇನಿರಬಹುದು, ಅದು ಯಾರಿರಬಹುದೆಂದು ಅರಿವ ಕುತೂಹಲ ಪ್ರೇರಿತ ಹಂಬಲವು ಸೇರಿ, ತಾನು ಕಳುವಾಗಿ ಹೋಗಿದ್ದ ಭ್ರಮಾಲೋಕದ ಹಿತವಾದ ಬಂಧನದ ಪ್ರಲೋಭನೆಯನ್ನು ಮೀರಿಸುವ ಪ್ರಚೋದನೆಯಾದಾಗ ಬಲವಂತವಾಗಿ ಕಣ್ತೆರೆದು, ಬಿಡಿಸಿಕೊಳ್ಳಲೆ ನಿರಾಕರಿಸುತ್ತಿದ್ದ ಕಣ್ಣುಗಳ ಪ್ರತಿರೋಧವನ್ನು ಧಿಕ್ಕರಿಸುತ್ತ ಅಕ್ಕಪಕ್ಕಕ್ಕೆ ತಿರುಗಿ ನೋಡಿದರೆ, ಅಲ್ಲಿ ಅನತಿ ದೂರದಲ್ಲಿ ಮರದ ಬುಡಕ್ಕೊರಗಿದಂತೆ ಕುಳಿತಿದ್ದ ಬೌದ್ಧ ಭಿಕ್ಷು ಸನ್ಯಾಸಿಯೊಬ್ಬರು ಕಣ್ಣಿಗೆ ಬಿದ್ದಿದ್ದರು. ಪೂರ್ತಿ ಉದ್ದದ ನಿಲುವಂಗಿಯೊಂದನ್ನು ಹೊದ್ದ ಆತನ ತೇಜಸ್ವಿ ಮುಖದಲ್ಲಿ ಏನೊ ವಿಶೇಷವಾದ ಪ್ರಖರ ಓಜಸ್ಸಿನ ಪ್ರಕಾಶಮುಕ್ತ ಕಾಂತಿಯೊಂದು ಹೊಮ್ಮುತ್ತಿರುವಂತೆ ಭಾಸವಾಗುತ್ತಿತ್ತು . ಸನ್ಯಾಸತ್ವಕ್ಕೆಂದು ಬೋಳಿಸಿದಂತಿದ್ದ ಖಾಲಿಯಾಗಿದ್ದ ಬೋಡು ತಲೆಯಲ್ಲಿ ಕೂಡ ಸಮಪ್ರಮಾಣದಲ್ಲಿ ಹರಡಿಕೊಂಡಿದ್ದ ತುಂಡುಗೂದಲಿನ ನಡುವೆಯೂ ಆ ಮುಖದಲಿದ್ದ ಮಿಂಚುವ ಪ್ರಖರ ಕಾಂತಿಯೆ ಪ್ರತಿಫಲಿಸಿದಂತಾಗಿ, ಆ ಅವರ್ಣನೀಯ ತೇಜಸ್ಸೆ ಇಡಿ ದೇಹಕೆ ವಿಶಿಷ್ಟ ವ್ಯಕ್ತಿತ್ವದ ಒಂದು ವಿಶೇಷ ಕಳೆಯನ್ನಿತ್ತಂತೆ ಕಂಡಿತ್ತು. ತಟ್ಟನೆ ಕಣ್ತೆರೆದು ಲೌಕಿಕ ಪ್ರಪಂಚದ ಪರಿಸರದೊಳಗೆ ಮತ್ತೆ ಪ್ರತಿಷ್ಟಾಪಿಸಿಕೊಂಡು ಅನಾವರಣಗೊಳ್ಳಲೆತ್ನಿಸುತ್ತಿದ್ದ ಶ್ರೀನಾಥನಿಗೆ ಅಚ್ಚರಿಯಾಗುವಂತೆ, ಥಾಯ್ ಭಾಷೆಯ ಬದಲಿಗೆ ಅವನು ವಿದೇಶಿಯನೆಂಬುದನ್ನು ಗುರುತಿಸಿದ ಕುರುಹಾಗಿ ಸುಸ್ಪಷ್ಟವಾದ, ಸ್ವಚ್ಛವಾದ ಇಂಗ್ಲೀಷಿನಲ್ಲಿ ಹೊರಟಿತ್ತು ಆ ವ್ಯಕ್ತಿಯ ಮಧುರ, ವಾತ್ಸಲ್ಯ ಪ್ರೇರಿತವೆನಿಸಿದ ಅಧಿಕಾರಯುಕ್ತ ದನಿ..!
'ಬರಿಯ ಹೊರಗಣ್ಣನ್ನು ಮುಚ್ಚಿ ಆ ಅಲೌಕಿಕ ಅನುಭವವನ್ನು ಶಾಶ್ವತವಾಗಿ ಕಟ್ಟಿ ಹಿಡಿದಿಡಲಾಗದು.. ಅದು ಕಳೆದು ಹೋಗದಂತೆ ನಿರಂತರವಿರಬೇಕಾದರೆ ಮನಸಿನ ಒಳಗಣ್ಣಿನಲ್ಲಿ ಹಿಡಿದಿಡಬೇಕು...'
ಅವನನ್ನು ನೋಡಿ ಥಾಯ್ ಶೈಲಿಯಲ್ಲೆ ನಮಸ್ಕರಿಸಿ ' ಸವಾಡಿಸ್ ಕಾಫ್..' ಎಂದು ಕೈ ಜೋಡಿಸಿ ಗೌರವದಿಂದ ತಲೆ ಬಾಗಿಸಿದ ಶ್ರೀನಾಥ.
ಆತ ಶ್ರೀನಾಥನ ನಮನವನ್ನು ಸ್ವೀಕರಿಸಿದವನಂತೆ ತಲೆದೂಗಿಸುತ್ತ 'ಒಳಗಿನ ದುಗುಡ ಹೊರೆಯನ್ನು ಕಳೆದುಕೊಳ್ಳಬೇಕೆಂಬ ಆಶಯವೇನೊ ಸಹಜ.. ಆದರೆ ನಿನ್ನೊಳಗಿನ ಭಾರ ಇಳಿಯದೆ ನೀನು ಅದು ಹೇಗೆ ತಾನೇ ಹಗುರವಾಗಲಿಕ್ಕೆ ಸಾಧ್ಯ ?' ಎಂದು ಪ್ರಶ್ನಿಸಿದ್ದ.
ಈಗ ನಿಜಕ್ಕೂ ಚಕಿತನಾಗುವ ಸರದಿ ಶ್ರೀನಾಥನದಾಗಿತ್ತು.. ಯಾರೆಂದೆ ಗೊತ್ತಿರದ ಅಪರಿಚಿತ ಸನ್ಯಾಸಿಯೊಬ್ಬ ತಾನಾಗೆ ಮಾತನಾಡಿಸುತ್ತಿರುವುದಲ್ಲದೆ , ಈಗ ನೋಡಿದರೆ ತನ್ನ ಒಳಗಿನ ಭಾರವೆಲ್ಲ ಪೂರ ಅಳೆದು ಮಾಡಿ ಗೊತ್ತಿರುವವನಂತೆ ಮಾತನಾಡುತ್ತಿರುವನಲ್ಲ? ಎಂದು. ಅದೇ ಸಂದಿಗ್ದದಲ್ಲಿಯೆ,
' ತಮ್ಮ ಮಾತು ನನಗರ್ಥವಾಗಲಿಲ್ಲ ಮಾಸ್ಟರು..' ಎಂದಿದ್ದ ಶ್ರೀನಾಥ. ಅವರನ್ನು ಮಾಸ್ಟರರೆಂದು ಸಂಭೋದಿಸಬೇಕೊ ಅಥವಾ ಗುರುವೆಂದೊ, ಸ್ವಾಮಿಗಳೆಂದೊ ಕರೆಯಬಹುದೆ, ಇಲ್ಲವೆ ಈ ಬೌದ್ಧ ಸನ್ಯಾಸಿಗಳನ್ನು ಸಾಂಪ್ರದಾಯಿಕವಾಗಿ ಮತ್ತಾವುದಾದರೂ ಥಾಯ್ ಶೈಲಿಯಲ್ಲಿ ಗೌರವಪೂರಕವಾಗಿ ಸಂಭೋಧಿಸಬೇಕೆ ಎಂದರಿವಾಗದ ಸಂದಿಗ್ದಪೂರ್ಣ ಗೊಂದಲದಲ್ಲಿ ನುಡಿದಿದ್ದ.
ಆ ಸನ್ಯಾಸಿಯ ಪ್ರಶಾಂತ ಮುಖದಲ್ಲಿ ಮತ್ತದೆ ಮಾಸದ ಮುಗುಳ್ನಗೆ; ತಲೆಯನ್ನು ಮೇಲೆತ್ತಿ ಎತ್ತಲೊ ವೃಕ್ಷದ ಮೂಲೆಯನ್ನು ದಿಟ್ಟಿಸಿ ನೋಡುತ್ತ, 'ಸಂಭೋಧನೆಯ ಪದದಲ್ಲೇನಿದೆ ಬಿಡು.. ನನಗೆ ನೇರವಾಗಿ ಮಾತನಾಡಿಯೆ ಅಭ್ಯಾಸ, ಗಾಬರಿಯಾಗಬೇಡ. ನೀನಿಲ್ಲಿ ಬಂದಿರುವ ಪರೋಕ್ಷ ಉದ್ದೇಶ ನನಗೆ ಗೊತ್ತು ...ಆದರದು ನೆರವೇರುವುದಿಲ್ಲ ಎನ್ನುವುದರ ಅರಿವೂ ಇರುವುದರಿಂದ ನಿನಗೆ ಹೀಗೆ ಹೇಳುವ ಪ್ರೇರಣೆಯಾಯ್ತಷ್ಟೆ.. ನೀನು ನೋಡಬೇಕೆಂದಿರುವ ಹುಡುಕಾಡುತ್ತಿರುವ ವ್ಯಕ್ತಿ ಈಗ ಇಲ್ಲಿಲ್ಲ ಮತ್ತು ನಿನಗಿಲ್ಲಿ ಸಿಗುವುದೂ ಇಲ್ಲ..'
(ಇನ್ನೂ ಇದೆ)