ಕಥೆ: ಪರಿಭ್ರಮಣ..(43)

ಕಥೆ: ಪರಿಭ್ರಮಣ..(43)

( ಪರಿಭ್ರಮಣ..42ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಚಂಡಿ ಹಿಡಿದಂತೆ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲೂ ಚಳಿ ಜ್ವರ ಹಿಡಿದವನ ಹಾಗೆ, ತನ್ನ ಅಪಾರ್ಟ್ಮೆಂಟಿನ ಹಜಾರದಲಿದ್ದ ಸೋಫಾದ ಮೇಲೆ ಮುದುರಿಕೊಂಡೆ ಮಲಗಿದ್ದ ಶ್ರೀನಾಥ. ತಲೆಯೆಲ್ಲಾ ಪೇರಿಸಿಟ್ಟ ಯಾವುದೊ ಕಂಗಾಣದ ಅಸಾಧಾರಣ ಹೊರೆಯ ಭಾರದಿಂದ ಬಳಲಿ, ನರಳಿ, ಒಳಗೆಲ್ಲ ಸಿಡಿಯುವಂತಾಗಿ ಮೇಲೇಳಲು ಮನಸಾಗದೆ ಹಾಗೆ ಬಿದ್ದುಕೊಂಡಿದ್ದರೂ, ನಿದಿರೆ ಮಾತ್ರ ಹತ್ತಿರ ಸುಳಿದಿರಲಿಲ್ಲ. ಕಣ್ಮುಚ್ಚಿ ಮಲಗಲೆತ್ನಿಸಿದಷ್ಟು ನಿದಿರೆ ದೂರಾಗುತ್ತ ಪದೆಪದೆ ಕುನ್. ಲಗ್ ಜತೆಗಿನ ಆ ರಾತ್ರಿಯ ಸಂಭಾಷಣೆಯ ಪಲುಕನ್ನೆ ಛಿಧ್ರ ತುಣುಕುಗಳಲ್ಲಿ ಮರಳಿಸಿ ಅಣಕಿಸುತ್ತ ಘಾಸಿಗೊಂಡ ಮನವನ್ನು ಮತ್ತಷ್ಟು ಜರ್ಜರಿತಗೊಳಿಸುತ್ತಿತ್ತು. ಅಲ್ಲಿಯವರೆವಿಗೂ ಬೇರಾರಿಗೂ ಗೊತ್ತಿಲ್ಲದ ಗುಟ್ಟಿನ ವಿಷಯವಾಗಿದ್ದು ಕೇವಲ ತನ್ನೊಬ್ಬನನ್ನು ಮಾತ್ರ ಆಂತರಿಕವಾಗಿ ಕಾಡುವ ಯಾತನೆ ಮಾತ್ರವಾಗಿತ್ತೆಂದು ಭಾವಿಸಿದ್ದವನಿಗೆ, ಈಗ ಆ ಸುದ್ಧಿ ಕೇವಲ ಕುನ್. ಲಗ್ ಮಾತ್ರವಲ್ಲದೆ, ಅವರಿಗೆ ಆ ವಿಷಯ ತಲುಪಿಸಿದ ಮತ್ತೆ ಕೆಲವರಿಗೂ ಸಹ ಗೊತ್ತಾಗಿರಬಹುದೆನ್ನುವ ಸತ್ಯ ವಿಪರೀತ ನಾಚಿಕೆ, ಖೇದವನ್ನು ಹುಟ್ಟಿಸಿ ಸಾರ್ವಜನಿಕವಾಗಿ ಅವರೆಲ್ಲರೆದುರು ತಾನು ಸಣ್ಣವನಾಗಿ ಬಿಡಬೇಕಾಯ್ತಲ್ಲ ಎಂದು ಪರಿತಪಿಸುವಂತಾಗಿ ಹೋಗಿತ್ತು. ಇನ್ನು ಅವರುಗಳಿಂದ ಇನ್ಯಾರ್ಯಾರಿಗೆ ತಲುಪಿದೆಯೋ ಬಲ್ಲವರಾರು? ಹಾಳು ಭಾಷಾಜ್ಞಾನದ ಸೀಮಿತತೆಯಿಂದ ಎದುರಲ್ಲೆ ಮಾತನಾಡಿದರೂ ಗೊತ್ತಾಗುವುದಿಲ್ಲ... ನಿಜ ಹೇಳುವುದಾದರೆ ಆ ಸಂಜೆಯ ಸಂವಾದದ ತರುವಾಯ ಆ ದಿನ ಇಡಿ ರಾತ್ರಿ ಪೂರ್ತ ಇನಿತಾದರೂ ಕಣ್ಣು ಮುಚ್ಚಲಾಗಿರಲಿಲ್ಲ ಶ್ರೀನಾಥನಿಗೆ. ತನ್ನೆಲ್ಲ ವ್ಯಕ್ತಿತ್ವದ ಹುಸಿ ಹೂರಣದ ಸಾರವೆಲ್ಲ ಒಂದೆ ಬಾರಿಗೆ ಕುಸಿದು, ಪಾತಾಳಕ್ಕಿಳಿಸಿದಂತೆ ಅನುಭವವಾಗಿತ್ತು. ಅದುವರೆವಿಗೂ ತಾನು ವೃತ್ತಿಯಲ್ಲಿ ಕಷ್ಟಪಟ್ಟು ಗಳಿಸಿ ಉಳಿಸಿಕೊಂಡಿದ್ದ ಧನಾತ್ಮಕ ಅಂಶ-ಅಭಿಪ್ರಾಯಗಳೆಲ್ಲ ನೀರಲ್ಲಿ ಕದಡಿ ಕರಗಿದಂತೆ ಮಾಯವಾಗಿ ಹೋಗಿ, ಬರಿಯ ನೇತಾತ್ಮಕತೆ ಮಾತ್ರವಷ್ಟೆ ಇಡಿಯಾಗಿ ವ್ಯಾಪಿಸಿ ಕಾಡುವ ಭೂತಾಕಾರವಾದಂತೆ ಅನಿಸತೊಡಗಿತ್ತು. 

ಆ ವಿಲ್ಲಾದಲ್ಲಿನ ಅಷ್ಟು ಸೊಗಸಾದ ಮೆತ್ತೆಯ ಮೇಲೂ ನಿದ್ರಿಸಲಾಗದೆ, ಆಕೀಕಡೆ ಒದ್ದಾಡುತ್ತ ಕಾಲ ಕಳೆದು ಕೆಂಪನೆಯ ಊದಿದ ಕಣ್ಣುಗಳೊಡನೆ ಪೂರ್ತಿ ನಿದ್ರಾಹೀನ ಸ್ಥಿತಿಯಲ್ಲೆ ಎದ್ದು ಬರುವಂತಾಗಿತ್ತು ಬೆಳಗಿನ ಪೂರ್ಣ ಉದಯವಾದ ನಂತರವೂ. ಆ ನಿದ್ರೆಯಿಲ್ಲದ ಪರಿಸ್ಥಿತಿಯ ಜತೆಗೆ ರಾತ್ರಿಯ ಸಂಭಾಷಣೆಯ ನಂತರ ಹೊಸದಾಗಿ ಸೇರಿಕೊಂಡ ಅವಮಾನ, ಕೀಳರಿಮೆಯ ಭಾವವೂ ಜತೆಗೂಡಿ ಪ್ರವಾಸದ ಆ ಕೊನೆಯ ದಿನ ಅವರೆಲ್ಲರ ನಡುವೆ ಬಸ್ಸಿನಲ್ಲಿ ತಲೆಯೆತ್ತಿ ಕೂಡುವುದಾದರೂ ಹೇಗೆಂಬ ಆತಂಕ ಹುಟ್ಟಿಸಿ ಒಂದೆ ಸಮನೆ ಬೇಟೆಯಾಡಿಬಿಟ್ಟಿತ್ತು - ಅಲ್ಲಿರುವ ಪ್ರತಿಯೊಬ್ಬರಿಗೂ ಎಲ್ಲಾ ವಿಷಯ ಗೊತ್ತಾಗಿಬಿಟ್ಟಿದೇಯೇನೊ ಅನ್ನುವ ತರದಲ್ಲಿ. ಬೆಳಿಗ್ಗೆಯೆ ಬೇರೇನು ಕಾರ್ಯಕ್ರಮವಿರದಿದ್ದ ಕಾರಣ ಎಂದಿಗಿಂತ ತಡವಾಗಿ, ನಿಧಾನವಾಗಿ ಉಪಹಾರ ಮುಗಿಸಿ ಹೊರಟು ಬಸ್ಸಿನಲ್ಲಿ ಕೂರುವಾಗಲೂ, ಎಲ್ಲಿ ಕುನ್. ಲಗ್ ಕಣ್ಣಿಗೆ ಬಿದ್ದು ಅವರತ್ತ ನೇರದೃಷ್ಟಿಗೆ ಸಿಕ್ಕಿ ಅವರ ಸೀಳುವ ಕಣ್ಣೋಟ ಎದುರಿಸಬೇಕಾದೀತೊ ಎನ್ನುವ ಭೀತಿಯಳುಕಿಗೆ ಸಿಲುಕಿ, ಬಸ್ಸಿನ ಮೂಲೆಯ ಸೀಟೊಂದರೊಳಗೆ ಹುದುಗಿ ಗಾಢನಿದ್ರೆಯಲ್ಲಿ ಇರುವವನಂತೆ ಕಣ್ಮುಚ್ಚಿ, ತಲೆತಗ್ಗಿಸಿಕೊಂಡೆ ಬಂದಿದ್ದ ದಾರಿಯುದ್ದಕ್ಕೂ- ಕಣ್ಮುಚ್ಚಿ ಹಾಲು ಕುಡಿವ ಬೆಕ್ಕಿನ ರೀತಿ. ಕುಡಿತದ ಅಮಲಿನ್ನೂ ಇಳಿಯದ ಮತ್ತಿಗೊ, ರಾತ್ರಿಯೆಲ್ಲ ನಿದ್ರೆಯಿಲ್ಲದ ಆಯಾಸಕ್ಕೊ, ಸತತ ಕಾಡುತ್ತಿದ್ದ ಆಲೋಚನಾಗತಿಯ ನಿರಂತರ ಹೊಡೆತಕ್ಕೊ ಅಥವಾ ಅವೆಲ್ಲವೂ ಸೇರಿ ಸಂಕಲಿಸಿದ ಪರಿಮಾಣದ ಪರಿಣಾಮಕ್ಕೊ - ತಲೆ ಆಗಲೆ 'ಧಿಂ' ಎನ್ನಲು ಆರಂಭವಾಗಿತ್ತಲ್ಲದೆ, ತುಸು ಸಮಯ ಜಾರಿದ ನಂತರ ಬಸ್ಸಿನ ಜೋಲಿಯ ಜೋಕಾಲಿಯು ಸೇರಿ ಜೋಗುಳ ಹಾಡಿದಂತಾಗಿ ತನಗರಿವಿಲ್ಲದಂತೆ ಹಾಗೆ ತೂಕಡಿಸುತ್ತ ನಿದಿರಾವಶನಾಗಿ ಹೋಗಿದ್ದ. ಏರ್ಕಂಡೀಷನ ಬಸ್ಸಿನ ತಂಪು ವಾತಾವರಣದ ಪ್ರಭಾವವೂ ಜತೆ ಸೇರಿ ಗಾಢವಾದ ನಿದ್ದೆಯೆ ಆವರಿಸಿಕೊಂಡಂತಾಗಿದ್ದ ಕ್ಷಣದಲ್ಲಿ ಮತ್ತೆ ಎಚ್ಚರವಾಗಿ ಬಾಹ್ಯಲೋಕಕ್ಕೆ ವಾಪಸು ಬರಲು ಬಸ್ಸು ಸಿಯಾಮ್ ಥಿಯೇಟರು ತಲುಪುವವರೆಗೂ ಕಾಯಬೇಕಾಯ್ತು - ಸರಕ್ಕನೆ ಹಾಕಿದ ಬ್ರೇಕಿನ ಜೋಲಾಟಕ್ಕೆ ಬಾಗಿ ಬೀಳುವಂತಾಗಿ ಎಚ್ಚರವಾಗುವವರೆಗು. 

ಅವರು ಹಾಕಿದ್ದ ಯೋಜನೆಯ ಪ್ರಕಾರ ಮೊದಲು ಸಿಯಾಮ್ ಥಿಯೇಟರಿನ ಹತ್ತಿರ ಇಳಿದು ಹತ್ತಿರವಿದ್ದ ವಿಶೇಷ ರೆಸ್ಟೋರೆಂಟೊಂದರಲ್ಲಿ ಊಟ ಮುಗಿಸಿ, ನಂತರ ಸಿಯಾಮ್ ಥೀಯೇಟರಿನ ಪರಿಚಯ ಮಾಡಿಸುವ ಗೈಡೆಡ್ ಟೂರಿಗೆ ಹೊರಡಬೇಕಿತ್ತು. ಆ ಟೂರಿನ ಕೊನೆಯ ಭಾಗವಾಗಿ ಅಲ್ಲಿನ ವೈಭವೋಪೇತ ಮತ್ತು ಹೆಸರಾಂತ ದೃಶ್ಯನಾಟಕವೊಂದನ್ನು ವೀಕ್ಷಿಸಿ, ತದನಂತರ ಮತ್ತೆ ಬಸ್ಸಿನಲ್ಲಿ ಗೃಹಾಭಿಮುಖವಾಗಿ ಮುಖ್ಯ ರಸ್ತೆಗಳಲ್ಲಿ ಪಯಣಿಸಿ, ಕಡೆಯ ನಿಲುಗಡೆಯಾಗಿ ಆಫೀಸಿನತ್ತ ಹೊರಡುವ ಒಟ್ಟಾರೆ ಯೋಜನೆಯಿದ್ದಿದ್ದು. ಆದರೆ ಆ ಮನಸ್ಥಿತಿಯಲ್ಲಿ ಏನು ಮಾಡಿದರು ಅವರ ಜತೆ ನಿರಾಳ ಮನದಲ್ಲಿ ಪಾಲ್ಗೊಳ್ಳಲು ಸಾಧ್ಯವೆ ಇಲ್ಲ ಅನ್ನುವಷ್ಟು ಪ್ರಕ್ಷುಬ್ದವಾಗಿ ಹೋಗಿತ್ತು ಶ್ರೀನಾಥನ ಪ್ರಸ್ತುತ ಮಾನಸಿಕ ಸ್ಥಿತಿ. ಅದರಿಂದುಂಟಾದ ದಿಗ್ಮೂಢತೆಯಲ್ಲೆ ಆ ಅದ್ಭುತ ಕಲಾವೈಭವವನ್ನು ಕಣ್ಣಾರೆ ನೋಡಬೇಕೆಂದಿದ್ದ ಅತೀವ ಆಸೆ ತವಕಗಳೆಲ್ಲ, ಒಣಗಿ ಬಿರುಕು ಬಿಟ್ಟ ನೆಲದಲ್ಲಿ ಇಂಗಿಹೋದ ನೀರಿನಂತೆ ಸೋರಿಹೋಗಿ ಎಲ್ಲರೂ ಬಸ್ಸಿಳಿದು ಕೆಳಗೆ ಹೋದರೂ ತಾನು ಮಾತ್ರ ಇಳಿಯದೆ ಸೀಟಿಗೊರಗಿಕೊಂಡೆ ಕಣ್ಮುಚ್ಚಿಕೊಂಡೆ ಕೂತುಬಿಟ್ಟಿದ್ದ. ಎಲ್ಲಾ ಇಳಿದರೊ ಇಲ್ಲವೊ ಎಂದು ಪರಿಶೀಲಿಸಲು ಬಂದ ಕುನ್. ಚಿಂತನ ಇವನಿನ್ನೂ ಕೆಳಗಿಳಿಯದ್ದನ್ನು ಕಂಡು ವಿಚಾರಿಸಲು ಅವನ ಹತ್ತಿರ ಬರುತ್ತಿರುವಂತೆ, ಅವಳು ಕೇಳುವ ಮೊದಲೇ, 'ಮೀ ಸಿವಿಯರ ಹೆಡ್ಡೇಕ್..ಕಾಂಟ್ ಗೋ ಡೌನ್.. ಕ್ಯಾನ್ ಯು ಹೆಲ್ಪ್ ಮೀ ಗೆಟ್ ಎ ಟ್ಯಾಕ್ಸಿ ?' ಎಂದು ಯಾಚಿಸಿದ್ದ. ಇವನ ಅನಿರೀಕ್ಷಿತ ಕೋರಿಕೆಯಿಂದ ಚಕಿತಳಾದರೂ, ಅವನ ಕೆಂಗಣ್ಣಿನಿಂದ ಕಂಗಾಲಾಗಿದ್ದ ಸೋತ ಹತಾಶ ಮುಖವನ್ನು ನೋಡಿ ಅದೇನನಿಸಿತೊ, ಮರು ಮಾತನಾಡದೆ ಎದುರು ದಿಕ್ಕಿನತ್ತ ಕೈ ತೋರಿಸುತ್ತ ಅವನಿಗೆ ಬೇಕಿದ್ದ ವಿವರ ನೀಡಿದ್ದಳು. 

ಅವಳಿತ್ತ ಮಾಹಿತಿಯನುಸಾರ ಎದುರುಗಡೆ ರಸ್ತೆಯ ಬದಿಯಲ್ಲಿ ಸಾಲಾಗಿ ನಿಂತುಕೊಂಡಿದ್ದ ಟ್ಯಾಕ್ಸಿಗಳಲ್ಲೊಂದನ್ನು ಹಿಡಿದು ಮನೆ ಸೇರಿಕೊಂಡಿದ್ದ - ದಾರಿಯ ನಡುವೆ ಇದ್ದಕ್ಕಿದ್ದಂತೆ ಆರಂಭವಾಗಿದ್ದ ಬಲವಾದ ಮಳೆಯ ನಡುವೆಯೆ.. ಅಪಾರ್ಟ್ಮೆಂಟ್ ತಲುಪಿ ಶೂ ಕಳಚಿದವನೆ, ಬಟ್ಟೆಯನ್ನು ಕೂಡಾ ಬದಲಿಸದೆಯೆ, ಹಾಗೆಯೆ ಸೋಫಾ ಮೇಲೆ ಹಾಗೆ ಬಿದ್ದುಕೊಂಡಿದ್ದ ಮಂಪರು ತುಂಬಿದ ಅರೆಬರೆ ಸ್ವಪ್ನಾವಸ್ಥೆಯಲ್ಲಿ ತೇಲುತ್ತಿದ್ದವನಂತೆ. ಅದೆಷ್ಟು ಹೊತ್ತು ಹಾಗೆ ಬಿದ್ದುಕೊಂಡೆ ಮಲಗಿದ್ದನೊ ಅವನಿಗೆ ಗೊತ್ತಿರಲಿಲ್ಲ - ಎಚ್ಚರವಾದಾಗ ಇನ್ನು ಮಳೆ ಜೋರಾಗಿ ಸುರಿಯುತ್ತ ಇಡಿ ಹಜಾರಕ್ಕೆಲ್ಲ ಮಬ್ಬು ಕವಿಸಿ ಕತ್ತಲಾಗಿಸಿಬಿಟ್ಟಿತ್ತು. ವೇಳೆಯೆಷ್ಟಾಗಿರಬಹುದೆಂದು ತಿಳಿಯದೆ ಹಾಗೂ ಹೀಗೂ ಸಾವರಿಸಿಕೊಂಡು ಮೇಲೆದ್ದವನೆ ಗಡಿಯಾರದತ್ತ ಕಣ್ಣು ಹಾಯಿಸಿದರೆ ಆಗಲೆ ರಾತ್ರಿಯ ಎಂಟು ಗಂಟೆಯನ್ನು ತೋರಿಸುತ್ತಿತ್ತು. ಚೆನ್ನಾಗಿ ನಿದ್ದೆಯಾದದ್ದಕ್ಕೊ ಏನೊ ತಲೆಯ ಭಾರವಿಳಿದು ಕೊಂಚ ಹಗುರಾದಂತಿತ್ತು.  ಹೊಟ್ಟೆ ಬೇರೆ ಚುರುಗುಡುತ್ತಿರುವ ಅನುಭವವಾಗಿ 'ಸದ್ಯ ಹಸಿವಾಗುತ್ತಿದೆ,ಅಂದರೆ ಜ್ವರ ಬಂದಂತಿಲ್ಲ' ಎಂದು ನಿರಾಳಗೊಳ್ಳುತ್ತಲೆ, ಮಳೆಯಲ್ಲಿ ಹೊರಗೆ ಹೋಗುವುದಾದರೂ ಹೇಗೆ ಎಂದು ಚಡಪಡಿಸುತ್ತಿರುವ ಹೊತ್ತಿನಲ್ಲೆ ಬಾಗಿಲಲ್ಲಿ ಕರೆಗಂಟೆಯೊತ್ತಿದ ಸದ್ದಾಗಿತ್ತು. ಈ ಹೊತ್ತಿನಲ್ಲಿ ಯಾರಿರಬಹುದೆಂದು ಊಹಿಸಲು ಯತ್ನಿಸುತ್ತ, ಬಾಗಿಲು ತೆರೆದರೆ ಅವನು ಬಸ್ಸಿನ ಲಗೇಜ್ ಕಂಪಾರ್ಟ್ಮೇಂಟಿನಲ್ಲಿ ಬಿಟ್ಟು ಬಂದಿದ್ದ ಟ್ರಾವೆಲ್ ಬ್ಯಾಗನ್ನು ಹಿಡಿದುಕೊಂಡು ನಿಂತಿದ್ದ ಸರ್ವೀಸ್ ಡೆಸ್ಕಿನ ಹುಡುಗ ಕಣ್ಣಿಗೆ ಬಿದ್ದಿದ್ದ. ಬಹುಶಃ ಟ್ರಿಪ್ಪೆಲ್ಲಾ ಮುಗಿದ ಮೇಲೆ ಬಸ್ಸು ವಾಪಸ್ಸಾಗುವ ದಾರಿಯಲ್ಲಿ ಹಾಗೆ ಬಸ್ಸಿನಲ್ಲೆ ಬಿಟ್ಟು ಬಂದಿದ್ದ ಲಗೇಜು ಕೊಟ್ಟು ಹೋಗಲು ಬಂದಿರಬೇಕೆನಿಸಿ ಕುನ್. ಚಿಂತನಳಿಗೆ ಮನದಲ್ಲೆ ವಂದನೆ ಸಲ್ಲಿಸಿದ್ದ. ಟ್ಯಾಕ್ಸಿ ಹಿಡಿದ ಹೊತ್ತಿನಲ್ಲಿ ಲಗೇಜಿನ ನೆನಪೆ ಆಗಿರಲಿಲ್ಲವಾದರೂ ಅವಳು ಮರೆಯದೆ ಅದನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದಳು. ಅಷ್ಟೂ ಸಾಲದೆಂಬಂತೆ ಜತೆಯಲ್ಲೊಂದು ಪ್ಲಾಸ್ಟಿಕ್ ಕವರಿನಲ್ಲಿ ಬಗೆಬಗೆಯ ಬೇಕರಿಯ ತಿಂಡಿಯ ಜತೆಗೆ ಅವರು ಜತೆಗೆ ತಂದಿದ್ದ ಮತ್ತಿತರ ತಿನಿಸುಗಳನ್ನು ಹಾಕಿಟ್ಟು  ಕೊಟ್ಟು ಹೋಗಿದ್ದಳು. ಮಳೆಯಲ್ಲಿ ಹೊರಗೆ ಹೋಗಲಾಗದೆಂಬ ಅನಿಸಿಕೆಯಲ್ಲಿ ಅದನ್ನು ಕಳಿಸಿದ್ದ ಅವಳ ಮುಂಜಾಗರೂಕತೆಗೆ ಒಳಗೊಳಗೆ ಮೆಚ್ಚುತ್ತ, ರಾತ್ರಿಯೂಟಕ್ಕಾಗಿ ಮಳೆಯಲ್ಲಿ ಅಲೆದಾಡುವ ತಾಪತ್ರಯ ತಪ್ಪಿಸಿದ್ದಕ್ಕೆ ಮನದಲ್ಲೆ ವಂದನೆ ಸಲ್ಲಿಸುತ್ತಾ ಲಗೇಜಿನ ಸಮೇತ ಎಲ್ಲವನ್ನು ಎತ್ತಿ ಒಳಗಿರಿಸಿಕೊಂಡಿದ್ದ ಶ್ರೀನಾಥ. 

ಅದೆಷ್ಟೋ ದಿನದ ಸಾಲವನ್ನು ಹಿಂತಿರುಗಿಸುವ ಬಾಕಿಯುಳಿಸಿಕೊಂಡಿದ್ದಂತೆ ಒಂದೆ ಸಮ ನಿಲ್ಲದಂತೆ ಸುರಿದಿತ್ತು ಬ್ಯಾಂಕಾಕಿನ ಜಡಿ ಮಳೆ. ಆ ರಭಸದ ಜತೆಗೆ ಬೀಸುತ್ತಿದ್ದ ಬಿರುಸಾದ ಗಾಳಿಯ ಪೌರುಷವು ಸೇರಿಕೊಂಡು, ಎಡಕ್ಕೂ-ಬಲಕ್ಕೂ-ಹಿಂದಕ್ಕೂ-ಮುಂದಕ್ಕೂ ಜಗ್ಗಾಡಿಕೊಂಡು ತೂಗಾಡುತ್ತಿದ್ದ ಮರದ ನೆನೆದ ಕೊಂಬೆ ರೆಂಬೆಗಳ ಮಳೆಯ ನೀರಲ್ಲಿ ತೊಯ್ದ ಕಾರಣದಿಂದುಂಟಾದ ಹೊಳಪನ್ನು ಮಿಂಚಿನ ಮತ್ತು ಗಾಜಿನ ಗೋಡೆಯ ಹೊರಬದಿಯಲಿ ಹಚ್ಚಿದ್ದ ದೀಪದ ಬೆಳಕಿನಲ್ಲಿ ತದೇಕಚಿತ್ತನಾಗಿ ನೋಡುತ್ತ ಕುಳಿತಿದ್ದ ಶ್ರೀನಾಥನಿಗೆ ಪ್ರಾಯಶಃ ತನ್ನ ಮನದೊಳಗೆದ್ದು ತೂರಾಡಿಸುತ್ತಿರುವ ಬಿರುಗಾಳಿಯೇನು ಅದಕ್ಕಿಂತ ಕಡಿಮೆಯಿಲ್ಲವೆಂದೇ ಅನಿಸಿತ್ತು. ಅವನು ನೋಡುತ್ತಿದ್ದಂತೆಯೆ ಅವನ ಅಪಾರ್ಟ್ಮೆಂಟಿನ ಎದುರಿಗಿದ್ದ ಬೃಹತ್ ಮರವೊಂದು ಗಾಳಿ ಮಳೆಯ ಸಂಯೋಜಿತ ಅವಿರತ ಧಾಳಿಯ ಹೊಡೆತ ತಾಳಲಾಗದೆ ಸೋತು, ತಾನು ವರ್ಷಾಂತರದಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ ಮೇಲಿನ ತುದಿಯಲಿದ್ದ ಶಾಖೆಯ ಹಲವಾರು ಭದ್ರ ಕೊಂಬೆ, ಕವಲುಗಳನ್ನು ಆಹುತಿಗೆಂಬಂತೆ ವಿಸರ್ಜಿಸಿ, 'ಇನ್ನಾದರೂ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಹೋಗಬಾರದೆ?' ಎಂದು ಆರ್ದ್ರ ದನಿಯಲ್ಲಿ ನರಳುತ್ತ ಬೇಡಿಕೊಳ್ಳುವಂತೆ ತನ್ನೊಡಲನ್ನು ಅದುವರೆವಿಗೂ ಉಡಿ ತುಂಬಿಸಿದಂತೆ ಕಾಪಿಟ್ಟಿದ ಹಸಿರೆಲೆಯ ಜತೆಗೆ ಮತ್ತಷ್ಟು ಹಣ್ಣೆಲೆಗಳನ್ನು ಜತೆಗೂಡಿಸಿ ಸಂಕಟವನ್ನೆಲ್ಲ ತೊಡೆದುಹಾಕುವ ಅಶ್ರುಧಾರೆಯಂತೆ ಸ್ಪುರಿಸುತ್ತ ತನ್ನ  ಬಿಡುಗಡೆಗೆಂದು ಮೌನವಾಗೆ ರೋಧಿಸತೊಡಗಿತ್ತು. ಆ ಹೊತ್ತಲ್ಲುದುರಿದ ಮುರಿದ ಕೊಂಬೆಗಳ ಭಾರವು ತನ್ನ ಕೆಳಗಿನ ಶಾಖೆಗಳ ಮೇಲೂ ಬಿದ್ದು, ಆ ವೇಗ ಮತ್ತು ತೂಕಕ್ಕೆ ಅಲ್ಲಿದ್ದ ಮತ್ತೆ ಕೆಲವನ್ನು ಮುರಿದುಹಾಕಿ ಒಂದು ರೀತಿಯ ಸರಪಳಿ ಪ್ರಕ್ರಿಯೆಯನ್ನು ಹುಟ್ಟುಹಾಕಿ ಊರ್ಜಿತಗೊಳಿಸುತ್ತ, ಒಂದೆ ಸಡಿಲ ಗಂಟಿನಲ್ಲಿ ಆಧಾರ ಕಳಚಿಬಿದ್ದ ಆಕಾಶಕಾಯದ ಹಾಗೆ ಬುಡಬುಡನೆ ಉದುರಿ ಬೀಳತೊಡಗಿದ್ದವು - ಹಾಗೆ ಬೀಳುವ ಅವಸರದಲ್ಲಿ ಅಕ್ಕಪಕ್ಕದಲ್ಲಿದ್ದ ಮಿಕ್ಕ ಶಾಖೆಗಳ ಕೊಂಬೆ-ರೆಂಬೆಗಳಿಗಾಗುವ ಆಘಾತ, ತರಚು ಗಾಯಗಳನ್ನು ಲೆಕ್ಕಿಸದಂತೆ. ಹಾಗೆ ಧರೆಗುರುಳಿದ್ದವುಗಳಲ್ಲಿ ಕೆಲವು ತಮ್ಮ ದಾರಿಗಡ್ಡಲಾಗಿದ್ದ ಮತ್ತಿತರ ಕೊಂಬೆಯ ಶಾಖೆಗಳಿಗೆ ಡಿಕ್ಕಿ ಹೊಡೆದದ್ದಕ್ಕೊ ಏನೊ, ಯಾವಾವುದೊ ತಮ್ಮದೆ ಆದ ಲಾಘವದಲ್ಲಿ ಹುಚ್ಚುಚ್ಚಾಗಿ ಪಲ್ಟಿ ಹಾಕುತ್ತ, ಅನಿಯಂತ್ರಿತ ಸ್ತರದಲ್ಲಿ  ನುಲಿದ ಮದೋನ್ಮತ್ತ ನರ್ತನದಲಿ ಜಿಗಿಯುತ್ತ , ಪುಟ ಬಿದ್ದೆದ್ದ ಚೆಂಡಿನ ಹಾಗೆ ಗಾಳಿಯಲ್ಲೆ ಕುಣಿದು ಕೆಳಗೆ ನೆಲದ ಮೇಲೆ ಬಂದು ಬೀಳುತ್ತಿದ್ದವು. ಹಾಗೆ ಬಿದ್ದು ನೆಲ ಸೇರುವ ರಭಸಕ್ಕೆ ಕೆಲವು ಮತ್ತೊಂದೆರಡು ಬಾರಿ ಸ್ಪ್ರಿಂಗಿನಂತೆದ್ದು ಪುಟಬಿದ್ದು ಅಕ್ಕಪಕ್ಕದಲ್ಲಿ ಚೆಲ್ಲಾಡಿದ್ದರೆ ಮಿಕ್ಕ ಮತ್ತಲವು ಆ ಎತ್ತರದಿಂದ ಕೆಳ ಬಿದ್ದ ಆಘಾತಕ್ಕೆ ಪಕ್ಕೆಯೆಲುಬು ಮುರಿದಂತೆ ಸೊರಗಿ ಚದುರಿ ಬಿದ್ದು ಮತ್ತಷ್ಟು ಚೂರುಗಳಾಗಿ ನೆಲಕಚ್ಚಿದ್ದವು. 

ಇದೆಲ್ಲದರ ನಡುವೆಯೂ ಸೋಲೊಪ್ಪದ ಕೆಲವು ಕೊಂಬೆಯ ಮುರಿದ ಶಾಖೆಗಳು ಗಾಳಿಯಲ್ಲಿ ಹೇಗೊ ಆಚೀಚೆಗೆ ದೂಡಿದಂತೆ ಗಾಳಿಯಲ್ಲಿ ತೂರಿಕೊಂಡೆ ಸರಿದುಹೋಗಿ, ಹೊರಗಿನ ಟೆಲಿಪೋನ್ ಕಂಬಗಳಿಂದ ಒಳಗೆ ಸಂಪರ್ಕವಿರಿಸಲು ಎಳೆದಿದ್ದ ಕೇಬಲ್ಲುಗಳ ಜಾಲದ ಮೇಲೆ ನೇರವಾಗಿ ಬಿದ್ದು, ಕೆಲ ಹೊತ್ತು ಆ ಜಾಲದ ಮಡಿಲಲ್ಲೆ ತೊಟ್ಟಿಲಲಾಡುವ ಮಗುವಿನಂತೆ ಜೋಕಾಲಿಯಾಡಿ, ಜೋಲಿ ಹೊಡೆಯುತ್ತಲೆ ಸಮಾನಾಂತರದಲ್ಲಿ ಜೊಂಪೆಯಾಗಿದ್ದ ಹತ್ತಾರು ಕೇಬಲ್ಲುಗಳನ್ನು ಜಂಟಿಯಾಗಿ ತನ್ನ ಮುಷ್ಟಿಯಲ್ಹಿಡಿದುಬಿಟ್ಟಿದ್ದವು. ಅದರ ಅಕ್ಷದ ಸುತ್ತಲೇ ರುಬ್ಬಿದಂತೆ ತಿರುವಿ ಹಾಕಿ ಸುತ್ತಿಸಿ ಕಗ್ಗಂಟಾಗುವಂತೆ ನುಲಿಸಿ, ಯಾವುದೋ ಅದೃಶ್ಯ ಶಕ್ತಿಯೊಂದು ಕಾಣಿಸಿಕೊಳ್ಳದೆ ಭ್ರಮಣಕ್ಕೊಳಪಡಿಸುತ್ತಿದೆಯೇನೊ ಅನಿಸುವ ಮಟ್ಟಿಗಿನ ಪರಿಣಿತಿಯಲ್ಲಿ ಅಲ್ಲಿದ್ದ ಆ ಹತ್ತಾರು ಕೇಬಲ್ಲುಗಳ ಸಾಲನ್ನು ಜಡೆಯೆಣೆಯುವಷ್ಟೆ ಕುಶಲತೆಯಿಂದ ದಪ್ಪ ಹಗ್ಗದ ಹಾಗೆ ಸುತ್ತಿಸುತ್ತಿ ಸುರುಳಿ ಹೊಸೆಯತೊಡಗಿತ್ತು. ಹೊಸೆತದ ವೇಗ ಹೆಚ್ಚುತ್ತಿದ್ದಂತೆ ಆ ಬಿಗಿಯುವಿಕೆಯ ಬಲವಾದ ಹಿಡಿತಕ್ಕೆ ಸಿಕ್ಕಿದ ಕೇಬಲ್ಲುಗಳ ಹೊರ ಮೈ ಪದರ, ತಡೆದುಕೊಳ್ಳಲಾಗದೆ ಹೊಟ್ಟೆ ಹಿಂಡಿಕೊಂಡು ದುರ್ಬಲವಾಗುವುದು ಖಚಿತ ಅಂದುಕೊಳ್ಳುತ್ತಿದ್ದ ಹಾಗೆಯೆ ಅಲ್ಲಿ ಸಿಕ್ಕಿಕೊಂಡಿದ್ದ ಕೊಂಬೆಯ ಭಾಗದ ಸುತ್ತುವಿಕೆ ಇದ್ದಕ್ಕಿದ್ದಂತೆ ನಿಧಾನವಾಗುತ್ತ, ಶೇಖರವಾದ ತಮ್ಮೆಲ್ಲ ಸಮಗ್ರ ಭಾರದ ತೂಕವನ್ನು ತಾವೆ ತಡೆಯಲಾಗದ ಅಸಹಾಯಕತೆಗೇನೊ ಎಂಬಂತೆ, ಜಡೆ ಹಗ್ಗದಂತೆ ನಿಗುರಿಕೊಂಡಿದ್ದ ಕೇಬಲ್ಲಿನ ಎಳೆಗಳ ನಡುವಿಂದಲೆ ತಮ್ಮ ಭಾರದ ಸಹಯೋಗದೊಂದಿಗೆ ಕೆಳಗೆ ಜಗ್ಗತೊಡಗಿದ್ದವು.. 

ಆಗ ಮಾತ್ರ ಈ ಹೊಯ್ದಾಟವನ್ನು ಆ ಸಾಧಾರಣ ಕೇಬಲ್ಲುಗಳು ಇನ್ನು ಬಹಳ ಕಾಲ ತಡೆದುಕೊಂಡಿರಲಾರವು ಎಂದು ಖಚಿತವಾಗಿ ಅನಿಸಿತ್ತು ಶ್ರೀನಾಥನಿಗೆ. ಅನಿಸುವುದೇನು ಬಂತು? ಮುಂದಿನ ಕೆಲವೆ ಕೆಲವು ಕ್ಷಣಗಳಲ್ಲಿ ಬೀಸಿದ ಗಾಳಿಯ ಮಾರುತದ ಮತ್ತೊಂದು ಬಿಗಿಯಾದ ಹೊಡೆತಕ್ಕೆ ಇಡಿ ಜೊಂಪೆಯೆ ಪೂರ ಜಗ್ಗಿಕೊಂಡು, ಒಂದೆ ನೇರದತ್ತ ತುಸುವೂ ಸುಧಾರಿಸಿಕೊಳ್ಳಬಿಡದೆ ಎಳೆದುಕೊಂಡು ಹೋಗಿ ತನ್ನ ಪರಿಧಿಯನ್ನು ವಿಸ್ತರಿಸುತ್ತಾ ಇದ್ದಂತೆ, ಅದುವರೆವಿಗೂ ತಂತಿಗಳನ್ನು ಬಂಧಿಸಿಟ್ಟಿದ್ದ ಅದರ ಆಂತರಿಕ ಶಕ್ತಿಸ್ಥಾವರವೆಲ್ಲ ದುರ್ಬಲವಾಗಿ ಅದರ ಎಳೆಗಳು ಒಂದೊಂದಾಗಿ ಸಡಿಲಾಗುತ್ತ ' ಫಟ್ ಫಟ್' ಸದ್ದಿನೊಂದಿಗೆ ತಮ್ಮನ್ನು ತಾವೆ ಕತ್ತರಿಸಿಕೊಳ್ಳತೊಡಗಿದವು - ಆ ಬಂಧನದಿಂದ ಬಿಡುಗಡೆಯಾಗಲು ಇನ್ನಾವ ಬೇರೆ ದಾರಿಯೆ ಇಲ್ಲವೇನೊ ಎಂಬಂತೆ. ಆ ಹೊತ್ತಿನಲ್ಲಿ ಸರಿಯಾಗಿ ಶ್ರೀನಾಥ ಕಣ್ಣಿವೆಯಿಕ್ಕುವುದರಲ್ಲಿ, ಅವನ ಕಣ್ಣೆದುರಿನಲ್ಲೆ ಅವನು ನೋಡುತ್ತಿದ್ದ ಆ ಕೇಬಲ್ಲಿನ ಸಂಪೂರ್ಣ ಜಾಲ ಸಿಡಿದುಹೋದ ಸಿಡಿಮದ್ದಿನಂತೆ ಬೇರಾಗಿ, ತನ್ನುದರದ ಗಂಟಲ್ಲಿ ಹಿಡಿದಿಟ್ಟುಕೊಂಡಿದ್ದ ಕೊಂಬೆಗಳನ್ನು ಏಕಾಏಕಿ ಬಿಡುಗಡೆಯಾಗಿಸಿ ದೊಪ್ಪನೆ ಕೆಳಗುರುಳಿಸಿಬಿಟ್ಟವು. ಹಾಗೆ ಕತ್ತರಿಸಿಕೊಂಡಾಗ ಉಂಟಾದ ಎರಡು ಬದಿಯ ಪರಸ್ಪರ ವಿರುದ್ಧ ದಿಸೆಯ ಉದ್ರಿಕ್ತ ಸೆಳೆತಕ್ಕೆ ಎಳೆದು ಬಿಟ್ಟ ಸ್ಪ್ರಿಂಗಿನ ಹಾಗೆ ಚಿಮ್ಮಿಕೊಂಡು, ಕತ್ತರಿಸಿ ಬಿದ್ದ ಕೇಂದ್ರದಿಂದ ಆಚೀಚೆಯ ಎರಡೂ ಬದಿಗೆ ತಮ್ಮನ್ನು ತಾವೆ ಕಿತ್ತೆಸೆದುಕೊಂಡ ಮೇಲಷ್ಟೆ ಶಾಂತವಾಗಿದ್ದವು. ಅವು ಹಾಗೆ ಸಿಡಿದುಕೊಂಡು ಹೋಗಿ ಅದರ ತುದಿಗಳು ರಭಸದಿಂದ ನೆಲಕ್ಕಪ್ಪಳಿಸುವ ಹೊತ್ತಿಗೆ ಸರಿಯಾಗಿ 'ಇನ್ನು ಹೊಸ ಕೇಬಲ್ಲನ್ನು ಹಾಕಿಸಿ ಟೆಲಿಪೋನು ಲೈನುಗಳು ರಿಪೇರಿಯಾಗುವತನಕ ಪೋನು ಸತ್ತ ಹಾಗೆ ಲೆಕ್ಕ' ಎಂಬ ಭಾವನೆ ಸುಳಿದು ಮಾಯವಾಗಿತ್ತು ಶ್ರೀನಾಥನ ಮನದಲ್ಲಿ - ಪೋನಿನ ಕೇಬಲ್ಲಿಗಾದ ಕಥೆಯೆ ಬ್ಯಾಂಕಾಕಿನ ಬೀದಿಬೀದಿಗಳಲ್ಲೂ ಜೇಡರಬಲೆಯಂತೆ ಹರಡಿಕೊಂಡಿರುವ ವಿದ್ಯುತ್ ತಂತಿಗಳಿಗೂ ಆಗದಿರಲೆಂಬ ಆಶಯದೊಂದಿಗೆ...

ಆ ಪ್ರಕೃತಿಯ ರೌದ್ರಾವೇಶ ಕೇವಲ ಟೆಲಿಪೋನ್ ಕೇಬಲಿನಂತಹ ಮಾನವ ನಿರ್ಮಿತ ತಾಂತ್ರಿಕ ಸವಲತ್ತಿನ ಸೌಲಭ್ಯವನ್ನಷ್ಟೆ ಧರೆಗುರುಳಿಸುತ್ತಿದೆಯೆಂದು ಭಾವಿಸಿದ್ದ ಶ್ರೀನಾಥನಿಗೆ ಆ ಹೊತ್ತಿನಲ್ಲಿ ಇನ್ನೂ ಗೊತ್ತಾಗಿರದಿದ್ದ ವಿಷಯವೆಂದರೆ - ಅದರ ಪ್ರತಾಪದ ಫಲದಿಂದಾಗಿಯೆ, ಅವನಿಗೆ ತಲುಪಬೇಕಾಗಿದ್ದ ಅತ್ಯಂತ ಅವಸರದ ಸುದ್ದಿಯೊಂದು ಅವನನ್ನು ತಲುಪಲಾಗದೆ ಹೋಗುತ್ತಿದೆಯೆಂಬುದು.. ಊರಿನಿಂದ ಹೇಗಾದರೂ ಅವನನ್ನು ಸಂಪರ್ಕಿಸಿ ಸುದ್ದಿ ತಲುಪಿಸಲು ಸತತವಾಗಿ ಯತ್ನಿಸುತ್ತ, ಪೋನಿನಲ್ಲಿ ಅವನನ್ನು ಹೇಗಾದರು ಹಿಡಿಯಲು ಸುಮಾರು ಒಂದೆರಡು ಗಂಟೆಯಿಂದ ಸತತವಾಗಿ ಪ್ರಯತ್ನಿಸಿಯೂ ಲೈನೇ ಸಿಗದೆ ಹತಾಶರಾಗಿ ಹೋಗಿದ್ದರು ಆತನ ಮಾವ ಮತ್ತು ಹೆಂಡತಿ..  ನಿಲ್ಲದೆ ಸುರಿಯುತ್ತಿರುವ ನಿರಂತರ ಗಾಳಿಮಳೆಯ ಹೊಡೆತದಿಂದಾಗಿ ಟೆಲಿಪೋನ್ ಲೈನುಗಳು ಸಿಗದೆ ಹೋಗಿ, ಅವನ ಆಫೀಸಿನ ಪೋನಿಗಾಗಲಿ ಅಥವಾ ಅಪಾರ್ಟ್ಮೆಂಟಿನ ಪೋನಿಗಾಗಲಿ ತಲುಪಲಾಗದೆ ಹತಾಶರಾಗಿ ಹೋಗಿದ್ದರು ಅವರಿಬ್ಬರೂ. ಆಫೀಸಿನಲ್ಲಿ ಪೋನೇನೊ ರಿಂಗ್ ಆಗುತ್ತಿದ್ದರೂ ಯಾರೂ ಪೋನ್ ಎತ್ತುವವರೆ ಇರಲಿಲ್ಲ. ಲೈನ್ ನಡುವಲೊಮ್ಮೆ ಸಿಕ್ಕಾಗ ಮಾತನಾಡಿದವರಾರೊ ಇಂಗ್ಲೀಷು ಬರದವರಾದ ಕಾರಣ ಥಾಯ್ ಭಾಷೆಯಲ್ಲಿ ಸಂಭಾಷಿಸಲು ತೊಡಗಿ ಮಾತಾಟ ಸಫಲವಾಗದೆ ಪೋನಿಡಬೇಕಾಗಿ ಬಂದಿತ್ತು. ಮತ್ತನೇಕ ಬಾರಿಯ ವಿಫಲ ಯತ್ನಗಳ ತರುವಾಯ ಕೊನೆಗೊಂದು ಬಾರಿ ಲೈನಿನಲ್ಲಿ ಸಿಕ್ಕ ಆಪರೇಟರಳೊಬ್ಬಳು ಅಂದು ಹೆಚ್ಚಿನವರಾರು ಆಫೀಸಿನಲ್ಲಿಲ್ಲವೆಂದು, ಎಲ್ಲಾ ಹೊರಗಿನ ಕಾರ್ಯಾಗಾರ ಶಿಬಿರವೊಂದಕ್ಕೆ ಹೋಗಿದ್ದಾರೆಂದು ಸುದ್ದಿ ಕೊಟ್ಟಾದ ಮೇಲೆ ಶ್ರೀನಾಥನಿದ್ದ ಅಪಾರ್ಟ್ಮೆಂಟಿನ ನಂಬರನ್ನು ಹುಡುಕಿ ಅಲ್ಲಿಯೂ ಪ್ರಯತ್ನಿಸಹತ್ತಿದ್ದರು. ದುರದೃಷ್ಟವಶಾತ್ ಆ ನಂಬರನ್ನು ಹುಡುಕಿ ಅದನ್ನು ಡಯಲ್ ಮಾಡಲು ಪ್ರಯತ್ನಿಸುವ ಹೊತ್ತಿಗೆ, ಇನ್ನೇನು ಆ ಸಂಪರ್ಕ ಸಿಕ್ಕಿಯೆಬಿಟ್ಟಿತೇನೊ ಎನ್ನುವ ಸಮಯಕ್ಕೆ ಸರಿಯಾಗಿ ಕಳಚಿ ಬಿದ್ದಿದ್ದ ಮರದ ಕೊಂಬೆಗಳ ಮತ್ತು ಟೆಲಿಪೋನ್ ಕೇಬಲ್ಲಿನ ಜತೆಗಿನ ರುದ್ರನರ್ತನ ಉತ್ಕರ್ಷಕ್ಕೇರಿ, ಬಂಧವನ್ನು ಕತ್ತರಿಸಿಕೊಂಡು ಲೈನುಗಳನ್ನು ನಿಷ್ಕ್ರಿಯವಾಗಿಸಿಬಿಟ್ಟಿದ್ದವು - ಸಂಪರ್ಕವಾಗಿಸಿ ಮಾತನಾಡಲೂ ಬಿಡದಂತೆ. ಅದಾವುದರ ಅರಿವಿಲ್ಲದವನಂತೆ ಕೇಬಲ್ಲುಗಳನ್ನು ಕತ್ತರಿಸಿ ಹಾಕಿದ್ದ ಕೊಂಬೆಗಳನ್ನೆ ನೋಡುತ್ತ ಕುನ್. ಚಿಂತನ ಕೊಟ್ಟಿದ್ದ ಡಿನ್ನರಿನ ಪ್ಯಾಕೆಟ್ಟಿನ ಜತೆ ಗ್ಲಾಸಿನ ತುಂಬಾ ಬೀರಿಳಿಸುತ್ತ ಕುಳಿತುಬಿಟ್ಟಿದ್ದ ಶ್ರೀನಾಥ, ಹೇಗಾದರೂ ನಡೆದಿದ್ದೆಲ್ಲವನ್ನು ಕುಡಿದ ಅಮಲಿನಲ್ಲಾದರು ಮರೆತು ನಿದ್ರಾವಶನಾಗಿರಲು ಪ್ರಯತ್ನಿಸುತ್ತಾ - ತನ್ನೂರಿನಲ್ಲಿ ಆಗಿರುವ ಆಘಾತದ ಸಂಗತಿಯ ಇನಿತೂ ಅರಿವಿಲ್ಲದ ಹಾಗೆ..!

ಮರುದಿನ ಬೆಳಗಾಗಿ ಸಾಕಷ್ಟು ಹೊತ್ತೇರಿದ್ದರು ಮೈಮೇಲೆ ಎಚ್ಚರವಿಲ್ಲದವನ ಹಾಗೆ ಬಿದ್ದುಕೊಂಡೆ ಇದ್ದ ಶ್ರೀನಾಥ, ಸತತವಾಗಿ ಬಾರಿಸಿಕೊಳ್ಳುತ್ತಿದ್ದ ಕರೆಗಂಟೆಯ ಸದ್ದಿಗೆ ಗತ್ಯಂತರವಿಲ್ಲದೆ ಏಳಬೇಕಾಗಿ ಬಂದು ಅರೆ ಮನಸಿನಿಂದಲೆ ಮೇಲೆದ್ದು ಕುಳಿತ. ಹೊರಗಿನ್ನು ಮೋಡ ಕವಿದ ವಾತಾವರಣದ ಜತೆಗೆ ಇನ್ನೂ ಬೀಳುತ್ತಲೆ ಇದ್ದ ತುಂತುರು ಮಳೆಯಿಂದಾಗಿ ಗಪ್ಪನೆ ಕವಿದುಕೊಂಡ ಮಸುಕು ಮಸುಕಾದ ನಸುಬೆಳಕಿನ ಮಂಕು, ಕತ್ತಲೆಯೆ ತುಂಬಿಕೊಂಡ ಭಾವವುಂಟಾಗಿಸಿ ಗಂಟೆಯೆಷ್ಟಾಗಿದೆಯೆಂದು ಕೂಡ ಅಂದಾಜು ಸಿಗದೆ ಹೋಗಿತ್ತು. ಯಾರು ಹೀಗೆ ಇಷ್ಟು ಕರ್ಕಶವಾಗಿ ಕರೆಗಂಟೆಯನ್ನೊತ್ತುತ್ತಿರುವವರು?ಎಂದು ಬೈದುಕೊಳ್ಳುತ್ತಲೆ ಗೋಡೆಗೆ ನೇತುಹಾಕಿದ್ದ ಗಡಿಯಾರದತ್ತ ನೋಡಿ ಹೌಹಾರಿ ಎಗರಿ ಬಿದ್ದು ಮೇಲೆದ್ದಿದ್ದ ಶ್ರೀನಾಥ - ಅದು ತೋರಿಸುತ್ತಿರುವ ಬೆಳಗಿನ ಹನ್ನೊಂದು ಗಂಟೆಯನ್ನು ನೋಡಿ. ಅವನಿಗೆ ನೆನಪಿರುವಂತೆ ಹಿಂದೆಂದೂ ಅಷ್ಟು ಹೊತ್ತಿನವರೆಗೆ ಮಲಗಿದ್ದ ನೆನಪಿರಲಿಲ್ಲ - ಬಹುಶಃ ವಾರದ ಕೊನೆ ಅಥವಾ ರಜೆಯ ದಿನಗಳನ್ನು ಹೊರತುಪಡಿಸಿದರೆ. ಭೋರೆದ್ದ ಮಳೆಯ ಚಂಡಿಯಿಂದಾಗಿ ಕದಲದೆ ನಿಂತ ಮೋಡದ ವಾತಾವರಣ ಮತ್ತಷ್ಟು ಬೆಚ್ಚಗೆ ಹೊದ್ದುಕೊಂಡು ಮುದುರಿ ಮಲಗುವಂತೆ ಮಾಡಿದ್ದರ ಜತೆಗೆ, ರಾತ್ರಿ ಏರಿಸಿದ್ದ ಬಿಯರಿನ ಪ್ರಭಾವವೂ ಸೇರಿಕೊಂಡು ಎಚ್ಚರವಿಲ್ಲದೆ ಹಂದಿಯ ಹಾಗೆ ನಿದ್ರಿಸುವಂತೆ ಮಾಡಿಬಿಟ್ಟಿತ್ತು. ಮಾಮೂಲಿನಂತೆ ಎಂಟು ಗಂಟೆಗೆ ಆಫೀಸಿಗೆ ಹೋಗಬೇಕಿತ್ತಾದರೂ ಮೂರ್ನಾಲ್ಕು ಬಾರಿ ಬಡಿದುಕೊಂಡು ಸೋತು ಸುಮ್ಮನಾಗಿದ್ದ ಅಲಾರಾಂ ಕೂಡ ಅವನನ್ನು ಗಾಢ ನಿದ್ರೆಯಿಂದೆಬ್ಬಿಸುವದರಲ್ಲಿ ಸಫಲವಾಗದೆ ಹೋಗಿತ್ತು. ಸರಿ, ಮೊದಲು ಬಾಗಿಲು ಬಡಿಯುತ್ತಿರುವುದು ಯಾರು ಎಂದಾದರು ನೋಡೋಣವೆಂದು ಹೋಗಿ ಬಾಗಿಲು ತೆರೆದರೆ ಡೈಲಿ ಹೌಸ್ ಕೀಪಿಂಗಿನ ಹೆಂಗಸು ರೂಮ್ ಸರ್ವೀಸಿನ ಪರಿಕರಗಳೊಂದಿಗೆ ಕಾಯುತ್ತ ನಿಂತಿದ್ದಳು. ಮಾಮೂಲು ದಿನಗಳಲ್ಲಾದರೆ ಒಳಗಿನ ಚಿಲುಕ ಹಾಕಿರದ ಕಾರಣ ಡೂಪ್ಲಿಕೇಟ್ ಕೀ ಬಳಸಿ ಕ್ಲೀನ್ ಮಾಡಿಟ್ಟು ಹೋಗಿ ಬಿಡುತ್ತಿದ್ದಳು. ಈ ದಿನ ಶ್ರೀನಾಥನೆ ಒಳಗಿದ್ದು ಚಿಲಕ ಹಾಕಿಕೊಂಡಿದ್ದ ಕಾರಣ ಆ ದಿನನಿತ್ಯದ ವಿಧಾನ ಬಳಸಲಾಗದೆ ಕರೆಗಂಟೆಯೊತ್ತುತ್ತ ಕಾದು ನಿಂತಿದ್ದಳು. ಅವಳನ್ನು ಒಳಗೆ ಕ್ಲೀನ್ ಮಾಡಲು ಬಿಟ್ಟು ತಾನು ಮತ್ತೊಂದು ಖಾಲಿಯಿರುವ ಬಾತ್ ರೂಮಿನಲ್ಲಿ ಹಲ್ಲುಜ್ಜಿ ಬರಲು ಹೊರಟ - ಶೀಘ್ರವಾಗಿ ಸಿದ್ದನಾಗಿ ಆಫೀಸಿಗೆ ಹೊರಡಲು. ಅದೆ ಹೊತ್ತಿನಲ್ಲಿ ಅವಳು ಕೈಗಿತ್ತಿದ್ದ ರಿಸೆಪ್ಷನಿಸ್ಟ್ ಡೆಸ್ಕಿನಿಂದ ಬಂದಿದ್ದ ಕರಪತ್ರದಲ್ಲಿ ರಾತ್ರಿಯ ಮಳೆಯ ಹಾವಳಿ ನಡೆಸಿದ ಚೆಲ್ಲಾಟದಲ್ಲಿ ಮುರಿದುಬಿದ್ದ ಟೆಲಿಪೋನ್ ಲೈನಿನ ಕುರಿತಾದ ಸೂಚನೆಯಿತ್ತು. ಮತ್ತು ಎಲ್ಲಾ ರಿಪೇರಿಯಾಗಲಿಕ್ಕೆ ಮತ್ತೆರಡು ದಿನವಾದರೂ ತಗುಲುವುದರಿಂದ ತೀರಾ ಅವಸರದ 'ಎಮರ್ಜೆನ್ಸಿ' ಕಾಲುಗಳಿದ್ದರೆ ಕೆಳಗಿನ ನೆಲ ಅಂತಸ್ತಿನಲ್ಲಿ ಸ್ವಾಗತಕಾರಿಣಿಯ ಹತ್ತಿರದಲ್ಲಿರಿಸಿರುವ ಪೋನ್ ಬಳಸಿ ಮಾತಾಡಬಹುದೆಂದು ಮಾಹಿತಿಯೂ ಇತ್ತು. ರಾತ್ರಿಯೆಲ್ಲ ನಿರಂತರವಾಗಿ ಪೋನ್ ಮಾಡಿ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೆಂಬ ಕೊಂಚ ಸುಳಿವು ಸಿಕ್ಕಿದ್ದರೂ ಅಲ್ಲಿಗೆ ಹೋಗಿ ಕರೆಯನ್ನು ಹಿಂತಿರುಗಿಸುವ ಆಲೋಚನೆ ಮಾಡುತ್ತಿದ್ದನೊ ಏನೊ? ಅದರ ಅರಿವಿಲ್ಲದೆ ಹೋದ ಕಾರಣ ಪ್ರತಿದಿನದಂತೆ ಮಾಮೂಲಾಗಿ ಸಿದ್ದನಾಗುತ್ತ ಹೋದರೂ ಯಾಕೊ ಯಾವುದೊ ಹೇಳಲಾಗದ ಆತಂಕ ಮನದ ಒಳಗೆಲ್ಲ ತುಂಬಿಕೊಂಡು ಏನೊ ವಿವರಿಸಲಾಗದ ಅಸಹನೀಯ ಚಡಪಡಿಕೆಯಾಗಿ ಭಾಧಿಸತೊಡಗಿತ್ತು. 

(ಇನ್ನೂ ಇದೆ) 
____________
 

Comments

Submitted by nageshamysore Wed, 08/13/2014 - 04:41

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಚಡಪಡಿಕೆಯ ಮುಕ್ತಾಯದ ಆರಂಭ 44ನೆ ಕಂತಿನಲ್ಲಿ ಆರಂಭವಾಗಿದೆ ನೋಡಿ (ಈಗ ತಾನೆ ಪ್ರಕಟಿಸಿದ್ದೇನೆ ಸಂಪದದಲ್ಲಿ) . ಅದರ ಮುಂದಿನ ಕಂತುಗಳೂ ಆ ಚಡಪಡಿಕೆಯ ಪೂರ್ಣ ವಿಮುಕ್ತಿಯತ್ತ (ಅರ್ಥಾತ್ ಆರೋಹಣದತ್ತ)  ಕೊಂಡೊಯ್ಯಲಿವೆ - ಮೂಲ ಸಮಸ್ಯೆಯ ಪರಿಹಾರದ ಸಮೇತ :-)