ಕಥೆ: ಪರಿಭ್ರಮಣ..(44)

ಕಥೆ: ಪರಿಭ್ರಮಣ..(44)

(ಪರಿಭ್ರಮಣ..43ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ತಡವಾಗಿ ಹೋದ ಖಿನ್ನ ಭಾವದಲ್ಲೆ ಅವಸರವಸರವಾಗಿಯೆ ಮುಖಕ್ಕಿಷ್ಟು ಬೆಚ್ಚಗಿನ ನೀರು ತೋರಿಸಿ, ಸರಸರನೆ ಬಟ್ಟೆ ಧರಿಸಿಕೊಂಡು ಲಂಚಿನ ಹೊತ್ತಿನ ಒಳಗಾದರೂ ಆಫೀಸಿಗೆ ಸೇರಿಕೊಂಡು ಬಿಡಲೆಂದು ಹೊರಟಿದ್ದ ಶ್ರೀನಾಥ, ತಾನಿರುವ ಅಪಾರ್ಟ್ಮೆಂಟಿನ ಮುಖ್ಯ ದ್ವಾರಕ್ಕೆ ಬಂದವನೆ ಅವಾಕ್ಕಾಗಿ ನಿಂತುಬಿಟ್ಟ... ಅಪಾರ್ಟ್ಮೆಂಟಿನೊಳಗಡೆಯೆ ಇದ್ದು ಹೊರಗೇನಾಗುತ್ತಿದೆಯೆಂದು ಗೊತ್ತಾಗದ ಬಹು ಅಂತಸ್ತಿನೆತ್ತರದಲ್ಲಿನ ಗ್ರಹಿಕೆಯಲ್ಲಿ, ಬರಿ ಮಳೆಯ ವಿಶ್ವರೂಪವಷ್ಟೆ ಕಾಡಿತ್ತೆಂದು ಭಾವಿಸಿದ್ದವನಿಗೆ ನೆಲಮಟ್ಟದಲ್ಲಿ ಅದು ಉಂಟು ಮಾಡಿರಬಹುದಾದ ಅವಾಂತರ  ದುರಂತ ಅನಾಹುತಗಳ ಪರಿಮಾಣದ ತೃಣ ಮಾತ್ರದ ಕಲ್ಪನೆಯೂ ಇರಲಿಲ್ಲ. ದೈನಂದಿನ ನಗರ ಜೀವನದಲ್ಲಿ ಅಷ್ಟೊಂದು ತೀವ್ರವಾಗಿ ಘಾಸಿಯುಂಟು ಮಾಡಬಹುದಾಗಿದ್ದ ಮಳೆಯ ರೌದ್ರಾವತಾರವನ್ನು ತನ್ನ ಅದುವರೆಗಿನ  ಜೀವಮಾನದಲ್ಲಿ ಅವನೆಂದೂ ನೋಡಿರಲಿಲ್ಲ - ಅಷ್ಟೊಂದು ವಿಧ್ವಂಸಕ ಮಟ್ಟದಲ್ಲಿ ಚೆಲ್ಲಾಟವಾಡಿ ಬಿಟ್ಟಿತ್ತು ಮಳೆಗಾಳಿಗಳ ಜೋಡಿಯಾಟದ ಸರಸ ಸಲ್ಲಾಪ. ಇನ್ನೂ ಗಾಢವಾಗಿ ಮೋಡಗಳಿಂದಾವೃತ್ತವಾಗಿದ್ದ ತುಸು ಕುಳುಗುಟ್ಟುವ ವಾತಾವರಣದಲ್ಲಿ ನಿಲ್ಲದ ತುಂತುರಿನ ಜಿಟಿಪಿಟಿಗುಟ್ಟುವ ಮಳೆಯಡಿಯಲ್ಲೆ ಹೆಚ್ಚೆಂದರೆ, ಬಹುಶಃ ತುಸು ಅದುಮುದುರಿ ನಡೆದುಕೊಂಡಷ್ಟೆ ಹೋಗಬೇಕಾದೀತೆಂದುಕೊಂಡಿದ್ದ. ಆ ಅನಿಸಿಕೆಯಲ್ಲೆ ತನ್ನ ಕೈನಲ್ಲಿ ರೈನ್ಕೋಟಿನ ಜತೆಗೊಂದು ಛತ್ರಿ ಹಿಡಿದು ಬಂದವನಿಗೆ,  ಬಾಗಿಲಿಂದಿಳಿಯುವಾಗ ಕಾಣುವ ಆರೇಳು ಮೆಟ್ಟಿಲುಗಳ ಬದಲು ಕೇವಲ ಎರಡು ಸಾಲು ಮಾತ್ರವೆ ಕಾಣಿಸಿ, ತನಗಿನ್ನೂ ನಿದಿರೆಯ ಕಣ್ಣೇ? ಎಂದು ಅನುಮಾನಿಸಿ ಕಣ್ಣುಜ್ಜಿಕೊಳ್ಳುತ್ತ ನೋಡಿದರೆ ನೀರಿನ ಪ್ರವಾಹದಲ್ಲಿ ಮುಳುಗಿ ಅರೆಮಾಯವಾಗಿದ್ದ ಮಿಕ್ಕ ಮೆಟ್ಟಿಲುಗಳು ಅಸ್ಪಷ್ಟವಾಗಿ ಕಾಣಿಸಿಕೊಂಡಿದ್ದವು.. ಮಳೆಯ ಹುಚ್ಚಾಟದಲ್ಲಿ ಆ ಸುತ್ತಮುತ್ತಲಿನ ತಗ್ಗಿನಲ್ಲಿದ್ದ ಜಾಗಗಳೆಲ್ಲ ಪ್ರವಾಹದ ನೀರು ತುಂಬಿಕೊಂಡ ಪುಟ್ಟ ಹೊಳೆಗಳಂತಾಗಿ ಹೋಗಿದ್ದವು. ಅಲ್ಲಿ ಕಾಲಿಡುವ ಜಾಗವಿರಲಿ - ತೆಪ್ಪವೊ ದೋಣಿಯೊ ಇರದಿದ್ದರೆ ದಾಟಿ ಹೋಗುವುದೆ ಅಸಾಧ್ಯವೆನಿಸಿಬಿಟ್ಟಿತ್ತು ಆ ನೀರಿನಿಂದಾವೃತ್ತವಾದ ಸುತ್ತಮುತ್ತಲ ಪರಿಸರವನ್ನು ನೋಡಿದರೆ. ಇದ್ದಕ್ಕಿದ್ದಂತೆಯೆ ರಾತ್ರೋರಾತ್ರಿ ಉದ್ಭವವಾಗಿಬಿಟ್ಟಿದ್ದ, ಸಿಟಿಯ ನಟ್ಟ ನಡುವಿನ ಪ್ರಮುಖ ರಸ್ತೆಗಳನ್ನೆಲ್ಲಾ ತುಂಬಿಕೊಂಡಿದ್ದ ಆ ನೀರ್ಗಾಲುವೆಯ ಪರಿಗೆ ವಿಸ್ಮಿತನಾಗುತ್ತಲೆ ರಿಸೆಪ್ಷನ್ನಿನತ್ತ ನಡೆದಿದ್ದ ಏನಾದರೂ ಮಾಹಿತಿ ಅಥವಾ ಸಹಾಯ ದೊರಕಬಹುದೆ ಎಂದು ಪರಿಶೀಲಿಸಲು. ಅತ್ತ ನಡೆಯುತ್ತಿದ್ದಂತೆ ಅಲ್ಲಿಟ್ಟಿದ್ದ ದೊಡ್ಡ ಟಿವಿಯೊಂದರಿದಲೂ ಇದೆ ರೀತಿಯ ಪ್ರವಾಹದ ದೃಶ್ಯಗಳೆ ಬಿತ್ತರವಾಗುತ್ತಿರುವುದನ್ನು ಕಂಡಾಗ ಇದು ಕೇವಲ ತಾನಿದ್ದ ಜಾಗದಲ್ಲಿ ಮಾತ್ರವಲ್ಲದೆ ಬ್ಯಾಂಕಾಕಿನ ಎಲ್ಲೆಡೆಯೂ ಹರಡಿಕೊಂಡ ಸಮಸ್ಯೆಯೆಂದರಿವಾಗಿ ಈ ಸ್ಥಿತಿಯಲ್ಲಿ ಆಫೀಸನ್ನು ತಲುಪುವುದಾದರೂ ಹೇಗೆಂಬ ಆತಂಕ, ದುಗುಡದಲ್ಲೆ ಸ್ವಾಗತಕಾರಿಣಿಯ ಡೆಸ್ಕಿನಲ್ಲಿದ್ದ ಕುನ್. ರತನಾಳತ್ತ ಹೋಗಿ ನಿಂತುಕೊಂಡಿದ್ದ ಶ್ರೀನಾಥ. ಅವನತ್ತ ನೋಡುತ್ತಲೆ  ಎಂದಿನಂತೆ ಮುಖವರಳಿಸಿ ನಗುತ್ತ 'ಸವಾಡಿಸ್ ಕಾ' ಎಂದಿದ್ದಳು ಕುನ್. ರತನಾ.

'ಸವಾಡಿ ಕಾಪ್...ಕುನ್. ರತನ ..'

'ಟುಡೆ ನೋ ಆಫೀಸ್ ಫಾರ್ ಯೂ ಸರ್... ಯು ಕ್ಯನಾಟ್ ಗೋ ಸ್ವಿಮ್ಮಿಂಗ್...' ಎಂದಿದ್ದಳು ಕೀಟಲೆಯ ದನಿಯಲ್ಲಿ. ಸಾಧಾರಣ ಪ್ರತಿ ದಿನವೂ ಅವಳನ್ನೊಮ್ಮೆ ಮೆದುವಾಗಿ ರೇಗಿಸಿಯೆ ಹೋಗುತ್ತಿದ್ದ ಶ್ರೀನಾಥನತ್ತ ಸ್ವಲ್ಪ ಸಲಿಗೆಯಿಂದ ಮಾತನಾಡುತ್ತಿದ್ದವಳು ಅವಳೊಬ್ಬಳೆ - ಸುಮಾರಾಗಿ ಇಂಗ್ಲೀಷ್ ಮಾತನಾಡಬಲ್ಲವಳಾಗಿದ್ದ ಕಾರಣದಿಂದಾಗಿ. ತಿಂಗಳಾನುಗಟ್ಟಲೆ ಸರ್ವೀಸ್ ಅಪಾರ್ಟ್ಮೆಂಟಿನಲ್ಲಿರುವ ಗೆಸ್ಟುಗಳು ಸ್ವಲ್ಪ ಮಾಮೂಲಿಗಿಂತ ಹೆಚ್ಚೆ ಪರಿಚಿತರಾಗಿರುವುದರಿಂದ ಹೋಟೆಲಿನ ಪರಿಸರದಲ್ಲುಂಟಾಗುವ ಕೃತಕ ಯಾಂತ್ರಿಕೃತ ಒಡನಾಟಕ್ಕಿಂತ ತುಸು ಮೇಲ್ಮಟ್ಟದ್ದೆನ್ನಬಹುದಾದಷ್ಟು ಮಾತುಕತೆಯಿರುತ್ತಿತ್ತು. ಆ ಒಡನಾಟದ ಸಲಿಗೆಯಲ್ಲೆ,

' ನೋ ವೇ ! ಪ್ರವಾಹವೇ ಕೊಚ್ಚಿಕೊಂಡು ಬಂದರೂ ಸರಿ ಆಫೀಸಿಗೆ ಹೋಗಲೇಬೇಕು.. ನಡೆದಾದರೂ ಸರಿ, ತೆಪ್ಪವಾದರೂ ಸರಿ, ಕೊನೆಗೆ ಈಜಿ ಕೊಂಡಾದರೂ ಸರಿ...'

' ಕಾ... ? ಅಷ್ಟೊಂದು ಹೋಗಲೇಬೇಕಾದ ಅವಸರವಿದ್ದರೆ ಈಜಿಕೊಂಡು ಹೋಗುವುದೆ ವಾಸಿಯೆಂದು ಕಾಣುತ್ತದೆ... ಲೈಫ್ ವೆಸ್ಟ್ ಜಾಕೆಟ್ಟುಗಳಂತೂ ನಮ್ಮಲ್ಲಿ ಸ್ಟಾಕ್ ಹೇಗೂ ಇವೆ..!'

' ಅದಿರಲಿ ಕುನ್. ರತನಾ... ನೀನು ಕೂಡಾ ದೂರದಿಂದ ಕೆಲಸಕ್ಕೆ ಬರುವವಳಲ್ಲವಾ - ನೀನು ಹೇಗೆ ಬಂದೆ ? ಟೀವಿ ನೋಡಿದರೆ ಬ್ಯಾಂಕಾಕಿನ ಎಲ್ಲಾ ಕಡೆಯೂ ನೀರು ತುಂಬಿಕೊಂಡು ಹರಿಯುತ್ತಿರುವಂತಿದೆಯಲ್ಲ..?'

' ಹೌದು.. ನಾನು ಕೂಡ ಬರಲಾಗುವುದೊ ಇಲ್ಲವೋ ಎಂದು ಅನುಮಾನವಿತ್ತು.. ಆದರೆ ನಮ್ಮ ಮನೆಯ ಹತ್ತಿರವೆ ಟ್ರೈನ್ ಸ್ಟೇಷನ್ ಇರುವುದರಿಂದ ಅದನ್ನು ಹತ್ತಿ ನೇರ ಸಾಲಾಡೆಂಗ್ ಸ್ಟೇಷನ್ನಿಗೆ ಬಂದು ಸೇರಿಬಿಟ್ಟೆ.. ಟ್ರೇನು ಮೇಲ್ಸೇತುವೆಯ ಮುಖಾಂತರ ಚಲಿಸುವುದರಿಂದ ಮತ್ತು ನಮ್ಮ ಮನೆಯಿರುವ ಜಾಗವೂ ಭೌಗೋಳಿಕವಾಗಿ ಎತ್ತರದ ಜಾಗದಲ್ಲಿರುವ ಕಾರಣ ಸಾಲಾಡೆಂಗ್ ಸ್ಟೇಷನ್ನಿಗೆ ಬಂದು ತಲುಪಲು ಕಷ್ಟವಾಗಲಿಲ್ಲ ...'

'ಸಾಲಾಡೆಂಗ್ ಸ್ಟೇಷನ್' ಅನ್ನುತ್ತಿದ್ದ ಹಾಗೆ ಶ್ರೀನಾಥನ ಕಿವಿ ಚುರುಕಾಗಿತ್ತು - ಅವನ ಆಫೀಸಿರುವ ಜಾಗ ಆ ಸ್ಟೇಷನ್ನಿನ ಹತ್ತಿರವೆ - ಅಲ್ಲಿಳಿದು ಐದಾರೆ ನಿಮಿಷಗಳಲ್ಲಿ ಕಾಲ್ನಡಿಗೆಯಲ್ಲೇ ನಡೆದುಕೊಂಡು ಹೋಗಿಬಿಡುವಷ್ಟು ಹತ್ತಿರ...

' ಕುನ್. ರತನ..ಸಾಲಾಡೆಂಗ್ ಸ್ಟೇಷನ್ನಿನ ಹತ್ತಿರವೆ ತಾನೆ ನಮ್ಮ ಆಫೀಸು ಇರುವುದು? ಅಲ್ಲೇನೂ ನೀರಿನ ತೊಂದರೆ ಇರಲಿಲ್ಲವ ? ಅಲ್ಲಿಂದ ಇಲ್ಲಿಗೆ ನೀನು ಹೇಗೆ ಬಂದೆ? ' ಎಂದು ಕೇಳಿದ.

'ಸಾಲಾಡೆಂಗ ಸ್ಟೇಷನ್ನಿನ ಹತ್ತಿರ ಅಷ್ಟೊಂದು ತೊಂದರೆಯಾಗಲಿಲ್ಲ... ನೀರು ಕೂಡ ಅಷ್ಟೊಂದು ಹೆಚ್ಚಾಗಿರಲಿಲ್ಲ.. ಅಲ್ಲಲ್ಲಿ ನಡುನಡುವೆ ಮಡುಗಟ್ಟಿಕೊಂಡಿದ್ದ ಇಳಿಜಾರಿನ ಜಾಗಗಳ ಹೊರತಾಗಿ ಮಿಕ್ಕೆಲ್ಲಾ ಕಡೆ ಬರಿ ಪಾದದಷ್ಟು ಎತ್ತರದ ನೀರಿತ್ತಷ್ಟೆ..ಅಥವಾ ಅದಕ್ಕೂ ಒಂದು ಚೂರು ಮೇಲ್ಮಟ್ಟಕ್ಕಿತ್ತೇನೊ? ಜತೆಗೆ ಸ್ಟೇಷನ್ನಿನಿಂದ ಕೆಳಗಿಳಿಯುತ್ತಿದ್ದ ಹಾಗೆ ಸಿಕ್ಕಿದ ಒಂದು ಟ್ಯಾಕ್ಸಿ ಹಿಡಿದು ಬಳಸು ದಾರಿಯಾದ ರಾಮಾ ೪ ರಸ್ತೆಯ ಕಡೆಯಿಂದ ಬಂದು ಬಿಟ್ಟೆ... ಬಳಸಿಕೊಂಡು ಬರಲು ಸ್ವಲ್ಪ ದೂರವಾದರೂ ಆ ರಸ್ತೆಗಳೆಲ್ಲ ಸಾಕಷ್ಟು ಎತ್ತರದ್ದಾದ್ದರಿಂದ ಬರಲೇ ಆಗದಷ್ಟು ನೀರು ನಿಂತಿರಲಿಲ್ಲ...ಆ ಕಡೆಯಿಂದ ಬಂದರೆ ನಮ್ಮ ಬಿಲ್ಡಿಂಗಿನ ಹಿಂದಿನ ಬಾಗಿಲಿನತ್ತ ಬಂದು ಸೇರಿಕೊಳ್ಳುತ್ತದೆ.. ಅದು ಸಾಧಾರಣ ಸರಕು ಸಾಗಾಣಿಕೆಗೆ ಬಳಸುವ ಹಾದಿ..ಅಪಾರ್ಟ್ಮೆಂಟ್ ಗೆಸ್ಟುಗಳ್ಯಾರು ಆ ಕಡೆಯಿಂದ ಓಡಾಡುವುದಿಲ್ಲ. ಅದು ಎತ್ತರದ ಮಟ್ಟಕ್ಕಿರುವುದರಿಂದ ಅಲ್ಲಿಯೂ ಹೆಚ್ಚು ನೀರು ನಿಂತಿಲ್ಲ. ಆ ಹಿಂದಿನ ಬಾಗಿಲ ಕಡೆಯಿಂದ ಬಂದ ಕಾರಣ ಇಷ್ಟೊಂದು ಆಳದ ನೀರು ದಾಟುವ ತಾಪತ್ರಯವಿಲ್ಲದೆ ಒಳಕ್ಕೆ ಬಂದು ಸೇರಿಬಿಟ್ಟೆ.. ಆದರೂ ಟ್ಯಾಕ್ಸಿಯಿರದೆ ನಡೆದು ಬರಬೇಕೆಂದಿದ್ದರೆ ಆಗುತ್ತಿರಲಿಲ್ಲ..  ಟ್ಯಾಕ್ಸಿ ಉದ್ದಕ್ಕೂ 'ಚೊರ್ರೆಂದು' ನೀರು ಹಾರಿಸಿಕೊಂಡೆ ಬಂತು - ಇಲ್ಲಿರುವಷ್ಟೊಂದು ನೀರು ಇರದಿದ್ದರೂ ಕೂಡ....' ಅಂದಿದ್ದಳು ಕುನ್. ರತನ, ತಾನು ಬಂದು ಸೇರಿದ ಸಾಹಸವನ್ನು ಹೆಮ್ಮೆಯಿಂದ ವಿವರಿಸುತ್ತ. ಅಲ್ಲಿ ಕೆಲಸಕ್ಕಿದ್ದ ಸುಮಾರು ಸಿಬ್ಬಂದಿಗಳಲ್ಲಿ ಅವಳೊಬ್ಬಳೆ ಯಶಸ್ವಿಯಾಗಿ ಬಂದು ಸೇರಲು ಸಾಧ್ಯವಾದ ಕರ್ತವ್ಯ ನಿಷ್ಠೆಯ ಹೆಮ್ಮೆಯೂ ಆ ದನಿಯಲ್ಲಿ ವ್ಯಕ್ತವಾಗುತ್ತಿತ್ತು. 

ಹಿಂದಿನ ಬಾಗಿಲು? ಆ ಉದ್ದದ ಅಪಾರ್ಟ್ಮೆಂಟ್ ಕಾಂಪ್ಲೆಸಿನ ಹಿಂಭಾಗದಲ್ಲಿ ಮತ್ತೊಂದು ಹಿಂದಿನ ರಸ್ತೆಗೆ ಸಂಪರ್ಕವಿದೆಯೆಂದು ಗೊತ್ತಿದ್ದರೂ ಗೆಸ್ಟಾಗಿ ಅದನ್ನು ಮಾಮೂಲಾಗಿ ಬಳಸದ ಕಾರಣ ಅಷ್ಟಾಗಿ ಪರಿಚಿತವಿರಲಿಲ್ಲ. 'ಅದರ ಮೂಲಕ ಕುನ್. ರತನ ಬರಲು ಸಾಧ್ಯವಾಯಿತೆಂದರೆ ತಾನೂ ಸಹ ಅದೇ ಮಾರ್ಗದಲ್ಲಿ ಆಫೀಸಿನ ಹತ್ತಿರಕ್ಕೆ ಹೋಗಲು ಸಾಧ್ಯವಿರಬೇಕಲ್ಲವೆ ?' ಎಂದು ತರ್ಕಿಸುತ್ತಿತ್ತು ಶ್ರೀನಾಥನ ಮನ. 

' ಕುನ್ ರತನಾ, ಕ್ಯಾನ್ ಯು ಡು ಮೀ ಏ ಫೇವರ್ ? ಕ್ಯಾನ್ ಯು ಹೆಲ್ಪ್ ಮಿ ರೀಚ್ ಮೈ ಆಫೀಸ್ ದ ಸೆಂ ವೇ ಲೈಕ್ ಯೂ ಡಿಡ್ ? ' ಎಂದು ಅವಳನ್ನೇ ಕೇಳಿದ್ದ ಶ್ರೀನಾಥ, ಅವಳೇನಾದರೂ ದಾರಿ ತೋರಿಸಬಹುದೆಂಬ ಆಶಯದಲ್ಲಿ. 

'ಬಟ್ ಹೌ ಸರ್ ? ನೋ ಟ್ಯಾಕ್ಸಿ ಹಿಯರ್ ಟುಡೇ?' ಗೊಂದಲದ ದನಿಯಲ್ಲಿ ಉತ್ತರಿಸಿದ್ದಳು ಹುಡುಗಿ. ಮಾಮೂಲಿನ ದಿನಗಳಲ್ಲಾದರೆ ಬಿಲ್ಡಿಂಗಿನ ಮುಂದೆಯೆ ಕಡಿಮೆಯೆಂದರು ನಾಲ್ಕೈದು ಟ್ಯಾಕ್ಸಿ ನಿಂತಿರುತ್ತಿತ್ತು.. ಆಗೆಲ್ಲ ಅದರತ್ತ ತಿರುಗಿಯೂ ನೋಡದೆ ನಡೆದುಕೊಂಡು ಹೋಗುತ್ತಿದ್ದ ಶ್ರೀನಾಥ - ಅದು ಬೇರೆ ವಿಷಯ. ಆದರೆ ಈ ದಿನದ ಕಥೆಯೇ ಬೇರೆ...

' ಕುಂ ರತನಾ ಐ ಯಂ ಶೂರ್ ಯು ಕ್ಯಾನ್ ಫೈಂಡ್ ಎ ವೇ .. ಪ್ಲೀಸ್.. ಕಾಂಟ್ ಯು ಡು ಸಮ್ ಥಿಂಗ್  ಸ್ಪೆಷಲ್ ಅಂಡ್ ಹೆಲ್ಪ್ ಮಿ ಗೆಟ್ ದೇರ್ ಸಮ್ ಹೌ?' ತುಸು ಯಾಚನೆ ಬೆರೆತ ದನಿಯಲ್ಲೆ ಬೇಡಿದ್ದ ಶ್ರೀನಾಥ.

ಶ್ರೀನಾಥನ ಕೋರಿಕೆಯನ್ನು ಕೇಳುತ್ತಲೆ ತುಟ್ಟಿಯುಬ್ಬಿಸಿ ಸಾಧ್ಯವಿಲ್ಲವೆನ್ನುವಂತ ಮುಖಭಾವದಲ್ಲಿ ತಲೆಯಾಡಿಸುತ್ತ ಇದ್ದ ಕುನ್. ರತನ ಇದ್ದಕ್ಕಿದ್ದಂತೆ ಏನೋ ಹೊಳೆದವಳಂತೆ, ಅವನ ಜತೆಗಿನ ಮಾತು ನಿಲ್ಲಿಸಿ ತನ್ನ ಸೀಟಿನ ಹತ್ತಿರವಿದ್ದ ಇನ್ನು ಕೆಲಸ ಮಾಡುತ್ತಿದ್ದ ಅದೊಂದೆ ಪೋನ್ ಕೈಗೆತ್ತಿಕೊಂಡು ಯಾರ ಜೊತೆಯೂ ಥಾಯ್ ಭಾಷೆಯಲ್ಲಿ ಮಾತನಾಡತೊಡಗಿದ್ದಳು. ಒಂದೆರಡು ಕಾಲ್ ನಂತರ ಮಾತಿನ ಮಧ್ಯೆ ತಡೆದು ಶ್ರೀನಾಥನತ್ತ ತಿರುಗಿ, 'ದೇ ವಿಲ್ ಚಾರ್ಜ್ ಮೋರ್ ಪ್ರೈಸ್ .. ಇಸ್ ದಟ್ ಓಕೆ ?' ಎಂದು ಕೇಳಿದಳು. ಯಾರೋ ಟ್ಯಾಕ್ಸಿಯವರನ್ನು ಸಂರ್ಪಕಿಸಿ ವಿಚಾರಿಸುತ್ತಿದ್ದಾಳೆಂದರಿವಾಗಿ ಅವಳಿಗೆ ಆಗಲೆಂಬಂತೆ ತಲೆಯಾಡಿಸಿ ಸಮ್ಮತಿ ಸೂಚಿಸಿದ್ದ - ಸದ್ಯಕ್ಕೆ ಹೇಗಾದರೂ ತಲುಪುವ ಮಾರ್ಗ ಸಿಕ್ಕರೆ ಸಾಕೆಂದು. ಅತ್ತ ಕಡೆಯವರ ಜತೆ ಮಾತು ಮುಗಿಸಿದವಳೆ, ಮತ್ತೊಂದು ಹದಿನೈದು ನಿಮಿಷ ಕಾಯಬೇಕಾಗುವುದೆಂದು ತಿಳಿಸಿ ಪೋನ್ ಕೆಳಗಿಟ್ಟಿದ್ದಳು. ಅಲ್ಲಿದ್ದ ಟೀವಿಯನ್ನು ನೋಡಿಕೊಂಡೆ ಒಂದಷ್ಟು ಸಮಯ ಕಳೆಯುವಷ್ಟರಲ್ಲಿ, ಮತ್ತೆ ಕುನ್. ರತನ  ಅವನನ್ನು ಕರೆದು, ಕೂಡಲೆ ಹಿಂದಿನ ಬಾಗಿಲಿನತ್ತ ಹೋಗುವಂತೆ ಸೂಚಿಸಿದಾಗ ಟ್ಯಾಕ್ಸಿ ಬಂದಿರಬಹುದೆಂದು ಗೊತ್ತಾಗಿ, ತಾನಲ್ಲೆ ಇದ್ದರೂ ತನಗರಿವಾಗದಂತೆ ಅವಳಿಗೆ ಹೇಗೆ ಟ್ಯಾಕ್ಸಿ ಬಂದಿದ್ದು ಗೊತ್ತಾಯಿತು? ಎಂಬ ಅಚ್ಚರಿಯಲ್ಲೆ ನಡೆದವನಿಗೆ ನಿಜಕ್ಕೂ ಅಲ್ಲಾಗಲೆ ಬಂದು ನಿಂತಿದ್ದ ಟ್ಯಾಕ್ಸಿಯೊಂದು ಕಾಣಿಸಿತ್ತು. ರಿಸೆಪ್ಷನ್ನಿನ್ನ ಸೀಟಿನಲ್ಲಿರುವ ಕಂಪ್ಯೂಟರು ಪರದೆಯಲ್ಲಿ ಸೆಕ್ಯೂರಿಟಿ ಕ್ಯಾಮೆರಾ ಮುಖೇನ ಅವಳಿಗೆ ಟ್ಯಾಕ್ಸಿ ಬಂದಿದ್ದು ಕಾಣಿಸಿತೆನ್ನುವ ಸರಳ ವಿಷಯವೂ ಹೊಳೆಯಲಿಲ್ಲ ಆ ಗಳಿಗೆಯಲ್ಲಿ. ಅಲ್ಲಿ ಪಾದದ ಮಟ್ಟದಲ್ಲಿದ್ದ ನೀರನ್ನು ಷೂ ಕಾಲಿಗೆ ತಗುಲಿಸಿಕೊಳ್ಳದ ಹಾಗೆ ಎಚ್ಚರದಿಂದ ದಾಟಿಕೊಂಡೆ ಟ್ಯಾಕ್ಸಿಯ ಒಳ ಸೇರಿ ನಿರಾಳತೆಯ ನಿಟ್ಟುಸಿರು ಬಿಟ್ಟಿದ್ದ ಶ್ರೀನಾಥ - ಕೊನೆಗೂ ದಾರಿಯೊಂದು ಕಂಡಿತಲ್ಲ ಎನ್ನುವ ಸಮಾಧಾನದೊಂದಿಗೆ. ಆ ಹಿಂಬದಿಯ ದಾರಿಯ ಚಿರಪರಿಚಯವಿದ್ದವನಂತೆ ಕಂಡ ಆ ಡ್ರೈವರು ಅಲ್ಲಿದ್ದ ನೀರಿನ ನಡುವೆಯೂ ಲೀಲಾಜಾಲವಾಗಿ ಟ್ಯಾಕ್ಸಿ ನಡೆಸುತ್ತ, ಬಳಸು ದಾರಿಯಲ್ಲಿ ಸುತ್ತು ಹಾಕಿಕೊಂಡು ಆಫೀಸಿನ ಕಟ್ಟಡದ ಹತ್ತಿರ ತಂದು ನಿಲ್ಲಿಸಿದ್ದ. ಆದರೆ ಅಲ್ಲಿ ಇಳಿದರೂ ಒಳಗೆ ನಡೆಯಲಾಗದ ಹಾಗೆ ರಸ್ತೆಯಲ್ಲಿ ಸ್ವಲ್ಪ ಹೆಚ್ಚು ನೀರು ತುಂಬಿರುವುದನ್ನು ಗಮನಿಸಿ ಮೂರು ಕಟ್ಟಡಗಳ ಮುಂದೆ ದಾಟಿಕೊಂಡು ಹೋಗಿ ನಿಲ್ಲಿಸಿದ್ದ - ಕೊಂಚ ನೀರು ಕಡಿಮೆಯಾಗಿದ್ದ ನಡೆಯಲನುಕೂಲವಾಗಿದ್ದ ಜಾಗದಲ್ಲಿ. 

ಹೇಗೊ ಸದ್ಯ ಆಫೀಸಿನ ಹತ್ತಿರ ಬಂದು ಸೇರಲಾದರೂ ಸಾಧ್ಯವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರಿಡುತ್ತ ಟ್ಯಾಕ್ಸಿಯವನ ಕೈಗೆ ನೂರರ ನೋಟೊಂದನ್ನು ಕೈಗಿತ್ತು ಕೆಳಗಿಳಿದಿದ್ದ ಶ್ರೀನಾಥ, ನೀರು ನಿಂತಿರದಿದ್ದ ಪುಟ್ಪಾತಿನ ಎತ್ತರದ ಕಟ್ಟೆಯ ಕಡೆ ಕಾಲು ಚಾಚಿ ಜಿಗಿದಂತೆ ಇಳಿಯುತ್ತ. ಮಾಮೂಲಿ ದಿನಗಳಲ್ಲಾದರೆ ಹದಿನೈದಿಪ್ಪತ್ತು ಬಾತಿಗೆಲ್ಲ ತಲುಪಬಹುದಾದ ಜಾಗಕ್ಕೆ ಈ ಬಾರಿ ಕೊಟ್ಟ ನೂರರ ನೋಟು ತುಂಬಾ ದುಬಾರಿಯೆನಿಸಿದರೂ, ಆ ಪರಿಸ್ಥಿತಿಯಲ್ಲಿ ಅವನನ್ನು ಹೇಗೊ ಮಾಡಿ ಆಫೀಸು ತಲುಪಿಸಿದ ಸಾಹಸಕ್ಕೆ ಅದೇನು ದೊಡ್ಡ ಮೊತ್ತವಲ್ಲವೆನಿಸಿ ಚಿಲ್ಲರೆಗೂ ಕಾಯದೆ ಆಚೆಗೆ ನಡೆದಿದ್ದ. ಆದರೆ ಮತ್ತೆರಡು ಹೆಜ್ಜೆ  ಹಾಕುವಲ್ಲಿ ಅರ್ಧ ಮೊಣಕಾಲುದ್ದ ನೀರು ತುಂಬಿದ ಪುಟ್ಪಾತಿನ ಹಾದಿ ಮತ್ತೆ ಎದುರಾದಾಗ ಮಳೆಯ ಪರಾಕ್ರಮವುಂಟು ಮಾಡಿದ್ದ ಹಾನಿಯ ವಿಸ್ತಾರ ವೈವಿಧ್ಯಕ್ಕೆ ಬೆರಗಾಗುತ್ತಲೆ, ಸುತ್ತ ಮುತ್ತ ಏನಾದರೂ ಸುಲಭದ ಹಾದಿ ಕಾಣಿಸುತ್ತದೆಯೆ ಎಂದು ಹುಡುಕಾಡುವ ಕಣ್ಣಿಗೆ ಕಟ್ಟಡದ ಮುಂದೆ ಉದ್ದಕ್ಕೂಹಾಸಿಕೊಂಡಿದ್ದ ಅರ್ಧ ಮಟ್ಟಕ್ಕೆ ಮಾತ್ರ ಮುಳುಗಿದ್ದ ಮೆಟ್ಟಿಲುಗಳು ಕಣ್ಣಿಗೆ ಬಿದ್ದು ನಿರಾಳವಾಗಿತ್ತು. ಒಟ್ಟು ಎರಡು ಕಟ್ಟಡಗಳನ್ನು ದಾಟಿ ಮುಂದಕ್ಕೆ ಬರುವಾಗ ನಡುವಿದ್ದ ಗಲ್ಲಿಯಂತಹ ಓಣಿಗಳಲ್ಲಿ ಮೆಟ್ಟಿಲುಗಳಿಲ್ಲದ ಕಾರಣ ವಿಧಿಯಿಲ್ಲದೆ ನೀರಿಗಿಳಿದೆ ನಡೆಯಬೇಕಾದರೂ ಕೇವಲ ಪಾದ ಮುಚ್ಚುವ ಮಟ್ಟದಷ್ಟಿದ್ದ ಕಾರಣ ಪ್ಯಾಂಟಿನ ತುದಿಯನ್ನು ಮೇಲೆತ್ತಿ ದಾಟಿಕೊಂಡೆ ಬಂದಿದ್ದ. ಆದರೂ ಆ ಪಾದ ಮಟ್ಟದ ನೀರೆ ಷೂಸಿನ ಒಳಗೆಲ್ಲ ನುಗ್ಗಿ, ಹೀರಿಕೊಂಡ ಕಾಲುಚೀಲದ ಮುಖೇನ ಇಡಿ ಪಾದವನ್ನೆಲ್ಲ ಒದ್ದೆ ಮಾಡಿ ತಣ್ಣಗಾಗಿಸಿದಾಗ, ಆ ತಣ್ಣನೆಯ ನೀರ್ಗೋಲು ಬರಿ ಪಾದಗಳಿಗೆ ಮಾತ್ರ ಸೀಮಿತವಾಗದೆ ಕಾಲುಗಳನ್ನು ದಾಟಿ ಮೇಲೇರಿಕೊಂಡು ಹೋದ ತೆಳುವಾದ ಅಲೆಯಂತೆ ಭಾಸವಾಗಿ, ಮೊಳಕಾಲಿಂದಲೂ ಮೇಲೇರುತ್ತ ತೊಡೆಯ ಮಟ್ಟದವರೆಗೂ ನುಗ್ಗಿ ತಂಪಿನ ಅನುಭವವಾಗುವಂತೆ ಅನುಭೂತಿಯನ್ನುಂಟು ಮಾಡಿತು. ಆ ಕ್ಷಿಪ್ರ ಗತಿಯ ನೀರ್ಪದರದ ಚಲನೆ ಮೈಯೊಳಗಿನ ನಡುಕವನ್ನೆಲ್ಲ ಒಂದೆ ಸೆಳೆತದಲ್ಲಿ ಒಟ್ಟುಗೂಡಿಸಿದ ಕಂಪನವಾಗಿಸಿ, ನಖಶಿಖಾಂತದ ಒಂದು ಅನಿಯಂತ್ರಿತ ಅದುರುವಿಕೆಯ ರೂಪದಲ್ಲಿ ಹೊರ ಹಾಕಿಸಿತ್ತು. ಕೊನೆಗೂ ಎಲ್ಲಾ ತರದ ಸರ್ಕಸ್ ಮಾಡಿ ಆಫೀಸಿದ್ದ ಕಟ್ಟಡ ತಲುಪಿ ಲಿಪ್ಟ್ ಹಿಡಿದು ತನ್ನ ಆಫೀಸಿರುವ ಅಂತಸ್ತನ್ನು ತಲುಪಿದ್ದ ಶ್ರೀನಾಥನಿಗೆ, ಒಳಗಿನ್ನು ಬೆರಳೆಣಿಕೆಯಷ್ಟು ಮಾತ್ರವೆ ಜನರಿದ್ದುದನ್ನು ಕಂಡು ಅಚ್ಚರಿಯೇನೂ ಆಗಿರಲಿಲ್ಲ. ಸುದೈವವಶಾತ್ ಅಲ್ಲಿಯೂ ವಿದ್ಯುತ್ತಿನ ಸಂಪರ್ಕಗಳು ಕೈ ಕೊಡದ ಕಾರಣ ಕಂಪ್ಯೂಟರು ಮತ್ತು ಪೋನ್ ಸೇರಿದಂತೆ ಎಲ್ಲವು ಸುಸ್ಥಿತಿಯಲ್ಲಿದ್ದವು. ಹೆಚ್ಚುಕಡಿಮೆ ನಾಲ್ಕು ದಿನಗಳಿಂದ ಕಂಪ್ಯೂಟರನ್ನು ತೆರೆದೆ ಇರದಿದ್ದ ಕಾರಣ ಮತ್ತೇನು ವಿಶೇಷ ಸುದ್ದಿ ಕಾದಿದೆಯೊ ಅಥವಾ ಎಂದಿನಂತೆಯೆ ಮಾಮೂಲಿ ಸುದ್ದಿಯೊ ಎಂದರಿಯುವ ಕಾತರದಲ್ಲೆ ತನ್ನ ಇ-ಮೇಯ್ಲಿನ  ಕಡತವನ್ನು ಬಿಚ್ಚಿದ್ದ ಶ್ರೀನಾಥ. ಅಲ್ಲಿ ಅವನು ಬಾಗಿಲು ತೆರೆಯುವುದನ್ನೆ ಕಾದು ಕೂತಿದ್ದಂತೆ ಕಾತರಿಸಿಕೊಂಡು ಕುಳಿತಿತ್ತು - ಭಾರತದ ಗೆಳೆಯನೊಬ್ಬನ ಕಡೆಯಿಂದ ಮೂರು ದಿನ ಮೊದಲೆ ಬಂದಿದ್ದ ಆ ಮಿಂಚಂಚೆಯ ಪತ್ರ. ನಿಜದಲ್ಲಿ ಅದು ಒಂದು ಅಂಚೆಯಾಗಿರದೆ ಮೂರು  ದಿನದಿಂದ ಬಂದು ಸೇರಿದ್ದ ಆರೇಳು ಅಂಚೆಗಳ ಸಮಗ್ರ ಸಂಗ್ರಹವಾಗಿತ್ತು!

ಎಂದೂ ಇಲ್ಲದ ರೀತಿಯಲ್ಲಿ ಸಾಲು ಸಾಲಾಗಿ ಬಂದು ಮೇಯಿಲ್ ಬಾಕ್ಸಿನಲ್ಲಿ ಕವುಚಿಕೊಂಡಿದ್ದ ಮಿಂಚಂಚೆಗಳನ್ನು ಅವಸರದಿಂದ ಒಂದಾದ ಮೇಲೊಂದರಂತೆ ಓದತೊಡಗಿದಂತೆ ಶ್ರೀನಾಥನ ಮುಖ ರಕ್ತವಿಲ್ಲದೆ ಬಿಳಚಿಕೊಂಡಂತೆ ವಿವರ್ಣವಾಗತೊಡಗಿತ್ತು.. ಅದೆಲ್ಲವೂ ಗೆಳೆಯನೊಬ್ಬನ ಕಡೆಯಿಂದ ಬಂದ ಮೆಸೇಜುಗಳೆ ಆಗಿದ್ದರು, ಸುದ್ದಿ ಮಾತ್ರ ಊರಿನ ಕಡೆಯಿಂದ ಹೆಂಡತಿಯಿಂದ ಬಂದದ್ದಾಗಿತ್ತು. ಎರಡು ದಿನ ಹಳೆಯದಾಗಿದ್ದ ಮೊದಲ ಎರಡು ಮೂರು ಮಿಂಚಂಚೆಗಳಲ್ಲಿ ಬೇರೇನೂ ಸುದ್ದಿಯಿರದೆ ಬರಿ, 'ಮೆಸೇಜ್ ಫ್ರಮ್ ಯುವರ ವೈಫ್ ಅಂಡ್ ಇನ್ ಲಾ... ಕಾಲ್ ದೆಮ್ ಇಮ್ಮೀಡಿಯೆಟ್ಲಿ..' ಎಂದಿತ್ತು. ಮೂರನೆಯದರಲ್ಲಿ ಅದೆ ಸುದ್ದಿಯ ಜತೆಗೆ 'ವೆರಿ ಅರ್ಜೆಂಟ್' ಎಂದು ಅಡಿ ಟಿಪ್ಪಣಿಯನ್ನು ಸೇರಿಸಿತ್ತು. ಕೊನೆಯ ಮಿಂಚಂಚೆ ಮಾತ್ರ ನೇರ ಗೆಳೆಯನೆ ಇವನ ಮುಖದ ಮೇಲೆ ಹೊಡೆದಂತೆ ನೇರ ಬರೆದದ್ದಾಗಿತ್ತು... 'ನೀನೆಂತಹ ಆಸಾಮಿ ಮಾರಾಯ? ಅಷ್ಟು ಮೇಯ್ಲ್ ಬರೆದರೂ ಒಂದಕ್ಕೂ ರಿಪ್ಲೆ ಇಲ್ಲ? ಕನಿಷ್ಠ ಮನೆಗಾದರೂ ಪೋನ್ ಮಾಡಬೇಡವೆ? ಪುಟ್ಟ ಮಗುವನ್ನು ಆಸ್ಪತ್ರೆಯಲ್ಲಿ ಸೇರಿಸಿ ಒದ್ದಾಡುತ್ತಿದ್ದಾರೆ ನಿನ್ನ ಹೆಂಡತಿ ಮತ್ತು ಮಾವ.. ಸ್ವಲ್ಪವಾದರೂ ಗಮನ ಕೊಡಬಾರದೆ?' ಎಂದು ನೇರ ಆಕ್ಷೇಪದೊಂದಿಗೆ ಬರೆದಿದ್ದ. ತಟ್ಟನೆ ಶ್ರೀನಾಥನಲ್ಲಿ ಮೂಡಿದ ಅಸಹನೆಯೊಂದು ಖೇದವನ್ಹುಟ್ಟಿಸಿ, ಬ್ಯಾಂಕಾಕಿನಲ್ಲಿ ಸದಾಕಾಲವೂ ಇದ್ದಾಗ ಯಾವುದೆ ಅವಸರವೂ ಸಂಘಟಿಸದೆ, ಅವಘಡಕ್ಕೂ ತಾವೀಯದೆ ಇದ್ದ ವಿಚಿತ್ರ ವಿಧಿಯಾಟ, ತಾನು ಅಪರೂಪಕ್ಕೆಂದು ಎರಡು ಮೂರು ದಿನದ ಪ್ರವಾಸ ಹೋಗಿದ್ದಾಗ, ಅದೂ ತಾನು ಯಾವ ರೀತಿಯಲ್ಲೂ ಯಾವ ಸುದ್ದಿಯನ್ನು ಓದಲಾಗದ ಮತ್ತು ಸುಲಭದಲ್ಲಿ ಅರಿಯಲಾಗದ ಪರಿಸ್ಥಿತಿಯಲ್ಲಿದ್ದಾಗಲೆ ಸಂಭವಿಸಿ ಅಣಕಿಸಿದ ಪರಿಗೆ ವಿಪರೀತ ಆಕ್ರೋಶವನ್ಹುಟ್ಟಿಸಿಬಿಟ್ಟಿತ್ತು. ಪ್ರಾಜೆಕ್ಟುಗಳಲ್ಲಿ ಎದುರು ನೋಡದ ಹೊತ್ತಿನಲ್ಲಿ, ಎದುರು ನೋಡದಿದ್ದ ಅಚ್ಚರಿಗಳು ಆತಂಕದ ರೂಪದಲ್ಲಿ ಅನಿರೀಕ್ಷಿತವಾಗಿ ಎದುರಾಗುವುದಕ್ಕೆ 'ಮರ್ಫಿ ಹಿಟ್ಸ್ ಅನ್ ಎಕ್ಸ್ ಪೆಕ್ಟೆಡ್ಲಿ..' ಅನ್ನುತ್ತಾರೆ - ಅದು ತನಗೀಗ ನಿಜ ಜೀವನದಲ್ಲೆ, ವೈಯಕ್ತಿಕ ಸ್ತರದಲ್ಲಿ ಅನುಭವವಾಗಿ ಹೋಯಿತಲ್ಲ ಅನ್ನುವ ವಿಷಾದದಲ್ಲೆ ಅವಸರವಸರವಾಗಿ ತನ್ನ ಪೋನ್ ರಿಸೀವರನ್ನು ಕೈಗೆತ್ತಿಕೊಂಡು ಪೋನ್ ನಂಬರನ್ನು ತಿರುಗಿಸತೊಡಗಿದ, ಹೆಂಡತಿ ಸದ್ಯಕ್ಕೆ ವಾಸವಾಗಿರುವ ಮಾವನ ಮನೆಯ ನಂಬರಿಗೆ ಡಯಲ್ ಮಾಡಲೆತ್ನಿಸುತ್ತ. ಎರಡು ಮೂರು ಬಾರಿ ಯತ್ನಿಸಿದರೂ ಯಾಕೊ ರಿಂಗ್ ಆದರೂ ಯಾರೂ ಪೋನ್ ಎತ್ತದೆ ಇದ್ದಾಗ ಇನ್ನೂ ಆತಂಕ, ದುಗುಡ ಹೆಚ್ಚಾಗಿ ಅದೆ ಕಾತರದಲ್ಲಿ ಗೆಳೆಯನ ಮೇಯಿಲ್ ಐಡಿಗೆ ತಟ್ಟನೊಂದು ರಿಪ್ಲೆ ಬರೆದು, ತಾನು ಮನೆಯವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದರೂ ಲೈನಿನಲ್ಲಿ ಸಿಗದಿರುವ ಮಾಹಿತಿಯನ್ನು ಅರುಹಿದ್ದ - ಅವನಿಗೇನಾದರೂ ಅವರೆಲ್ಲಿರಬಹುದೆಂಬ ಹೆಚ್ಚಿನ ವಿವರ ಗೊತ್ತಿರಬಹುದೆಂಬ ಆಶಾವಾದದಲ್ಲಿ. ಆದರೆ ಅಲ್ಲೂ ಅವನ 'ಔಟ್ ಆಫ್ ಆಫೀಸ್' ಮೆಸೇಜ್ ತಿರುಗಿ ಬಂದಾಗ ಇನ್ನೂ ಅತೀವ ನಿರಾಶೆಯಾಗಿತ್ತು - ಹೆಚ್ಚಿದ ದುಗುಡ ಮತ್ತು ಆತಂಕದ ಜತೆಗೆ. ಮತ್ತೇನೂ ಮಾಡಲೂ ತೋರದೆ ಅದೆ ನಂಬರಿಗೆ ಮತ್ತೆ ಮತ್ತೆ ಡಯಲ್ ಮಾಡತೊಡಗಿದ್ದ - ಅತ್ತ ಕಡೆಯಿಂದ ಯಾರೂ ಎತ್ತದೆ ಇದ್ದರೂ ಎಡಬಿಡದೆ...

ಸುಮಾರು ಒಂದು ಗಂಟೆಯತನಕ ಪೋನ್ ಮಾಡೆಲೆತ್ನಿಸಿ ಲೈನ್ ಸಿಗದೆ ವಿಫಲನಾಗಿ ನಿರಾಶೆ, ಕಳವಳದಿಂದ ಕೂತವನಿಗೆ, ಕೊನೆಗೂ ಗೆಳೆಯನ ಮಿಂಚಂಚೆಯೋಲೆ ಪರದೆಯ ಮೇಲೆ ಮೂಡಿ ಬಂದಾಗ ತನ್ನ ಸಂದೇಶವನ್ನು ನೋಡಿ ಮಾರುತ್ತರ ಕಳಿಸಿರಬಹುದೆಂಬ ಆಶಾವಾದ ಮೂಡಿ ಆತುರಾತುರದಿಂದ ಅದನ್ನು ತೆರೆದ. ಸುದೈವಕ್ಕೆ ಅದು ಗೆಳೆಯ ಬರೆದ ಮಾರುತ್ತರವೆ ಆಗಿದ್ದು ಸಂಕ್ಷಿಪ್ತವಾಗಿದ್ದರೂ ಅವನಿಗೆ ಬೇಕಿದ್ದ ಮಾಹಿತಿ ಸಿಕ್ಕಿದ್ದು ಮಾತ್ರವಲ್ಲದೆ, ಯಾಕೆ ಯಾರು ಪೋನೆತ್ತಲಿಲ್ಲವೆಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿತ್ತು. ಅದರಲ್ಲಿ ಮಗುವನ್ನು ಚಿಕಿತ್ಸೆಗಾಗಿ ಸೇರಿಸಿದ್ದ ನರ್ಸಿಂಗ್ ಹೋಮಿನ ಹೆಸರು ಮತ್ತು ಅಲ್ಲಿನ ಸಂಪರ್ಕದ ಪೋನ್ ನಂಬರು ಸಿಕ್ಕಿತ್ತು. ಜತೆಗೊಂದು ಪುಟ್ಟ ಮಾಹಿತಿಯೂ ಇತ್ತು - ಮನೆಯವರೆಲ್ಲ ಮಗುವಿನ ಜತೆ ಆಸ್ಪತ್ರೆಯಲ್ಲೆ ಇರುವರೆಂದು; ಆ ಕಾರಣದಿಂದಲೆ ರಿಂಗಾಗುತ್ತಿದ್ದ ಪೋನ್ ಎತ್ತುವವರು ಯಾರೂ ಇರಲಿಲ್ಲ. ಸದ್ಯ ಕೊನೆಗೂ ಹೆಚ್ಚು ಒದ್ದಾಡಿಸದೆ ನಂಬರಾದರೂ ಸಿಕ್ಕಿತಲ್ಲ ಎಂಬ ನಿರಾಳತೆಯೊಂದಿಗೆ ಗೆಳೆಯನಿಗೊಂದು 'ಥ್ಯಾಂಕ್ಸ್'  ಮೆಸೇಜು ಕಳಿಸಿ ಸರಸರನೆ ಆ ನರ್ಸಿಂಗ್ ಹೋಮಿನ ನಂಬರಿಗೆ ಪೋನಾಯಿಸಿದ. ಆ ನಂಬರಿನ ಮೂಲಕ ಆಸ್ಪತ್ರೆಯ ಸ್ವಾಗತಕಾರಿಣಿಯನ್ನು ಸಂಪರ್ಕಿಸಿ ಹೆಂಡತಿ, ಮಗಳ ವಿವರ ಕೊಟ್ಟ ತಕ್ಷಣ ಆಕೆ ಅಲ್ಲಿಂದಲೆ ಅವರಿದ್ದ ಸ್ಪೆಷಲ್ ವಾರ್ಡಿನ ಪೋನಿಗೆ ಕರೆಯನ್ನು ವರ್ಗಾಯಿಸಿದ್ದಳು. ಎರಡು ಮೂರು ರಿಂಗಾಗಿ ಅತ್ತಲಿಂದ ಹೆಂಡತಿಯ ದನಿ ಕೇಳಿಸುತ್ತಿದ್ದಂತೆ 'ಹಲೋ' ಎಂದಿದ್ದ ಆತುರದ ದನಿಯಲ್ಲಿ. ಅವನ ದನಿ ಕೇಳುತ್ತಿದ್ದ ಹಾಗೆ ಮಿಂಚಿನ ಹಾಗೆ ತೂರಿಬಂದಿತ್ತು ಪೋನಿನ ಅತ್ತ ಕಡೆಯಿಂದ ಹೆಂಡತಿಯ ಪ್ರಶ್ನೆ ಕಟುವಾದ ಒರಟು ದನಿಯಲ್ಲಿ....

' ನೀವೇನು ಮನುಷ್ಯರೊ ಇಲ್ಲಾ ರಾಕ್ಷಸರೊ? ನಮ್ಮನ್ನು ಇಲ್ಲಿ ಹೀಗೆ ಸಾಯಲು ಬಿಟ್ಟು ಎಲ್ಲಿ ಹೋಗಿದ್ದೀರಿ? ಅಥವಾ ಎಲ್ಲಾ ಸಾಯಲಿ ಆಮೇಲೆ ಒಂದೆ ಸಾರಿ ಬರೋಣವೆಂದು ಲೆಕ್ಕ ಹಾಕಿಕೊಂಡು ಕೂತಿದ್ದೀರಾ?'

ಆ ದನಿಯಲಿದ್ದ ಕಠೋರತೆ, ರೋಷಕ್ಕೆ ಒಂದರೆಗಳಿಗೆ ಏನು ಹೇಳಬೇಕೆಂದೆ ತೋಚಲಿಲ್ಲ ಶ್ರೀನಾಥನಿಗೆ. ಅವಳು ಒಂದೆ ಬಾರಿಗೆ ಹೀಗೆ ಆಕ್ರಮಣ ಮಾಡಬಹುದೆಂದು ನಿರೀಕ್ಷಿಸದಿದ್ದ ಕಾರಣ ಅವಳ ನೇರ ಆರೋಪದಿಂದ ಮರ್ಮಾಘಾತವಾದಂತಾಗಿ ಮಾತೆ ಹೊರಡದಂತಾಗಿ ಹೋಗಿತ್ತು. ಅವನಿಂದ ಮಾರುತ್ತರಕ್ಕಾಗಿ ಕಾಯುತ್ತಿದ್ದವಳಿಗೆ ಅವನ ಮೌನದಿಂದ ಮತ್ತಷ್ಟು ರೋಷವೇರಿದಂತಾಗಿ, 'ಮಾತಾಡಲೂ ಬಾಯಿಲ್ಲವೆ ? ಈ ಭಾಗ್ಯಕ್ಕೆ ಪೋನ್ ಆದರೂ ಯಾಕೆ ಮಾಡಬೇಕಿತ್ತೊ? ಕಷ್ಟವೊ ಸುಖವೊ ಹೇಗೊ ನಿಭಾಯಿಸಿಕೊಳ್ಳುತ್ತಿಲ್ಲವೆ ?' ಎಂದು ಸಿಡಿದವಳ ಮಾತಿಗೆ ಈ ಮಟ್ಟಿಗೆ ಸಿಟ್ಟಾಗುವಂತದ್ದೇನಾಗಿದೆಯೊ ಎಂದು ಕಳವಳಿಸುತ್ತಲೆ, ಆ ಮೂಡಿನಲ್ಲಿ ಎದುರು ಮಾತಾಡದೆ ಶರಣಾಗತನಾಗಿ ಅವಳನ್ನು ಸಹಜ ಸ್ಥಿತಿಗೆ ತರುವುದೆ ಉಚಿತವೆಂದೆನಿಸಿ ತನ್ನಲ್ಲಿದ್ದ ಸೌಮ್ಯತೆ, ದೈನ್ಯತೆಯನ್ನೆಲ್ಲ ಒಟ್ಟುಗೂಡಿಸಿಕೊಂಡವನೆ, 'ಲತಾ, ಐ ಯಂ ರಿಯಲಿ, ರಿಯಲಿ ವೆರಿ ಸಾರಿ..ಅಲ್ಲಿ ಏನಾಗಿದೆಯೆಂದು ನನಗೆ ನಿಜವಾಗಿಯೂ ಗೊತ್ತಾಗಲಿಲ್ಲ..ಈಗಲೂ ಸರಿಯಾಗಿ ಗೊತ್ತಿಲ್ಲ..ಐ ವಿಲ್ ಎಕ್ಸ್ ಪ್ಲೈನ್  ಎವೆರಿಥಿಂಗ್.. ಅದನ್ನು ಕೇಳುವ ತನಕ ಪ್ಲೀಸ್ ಹೋಲ್ಡಾನ್.. ಜಸ್ಟ್ ಟೆಲ್ ಮೀ ವಾಟ್ ಹ್ಯಾಪೆಂಡ್...  ಪ್ಲೀಸ್ ಕಾಂ ಡೌನ್...' ಎಂದ.  

ಅವನ ದನಿಯಲಿದ್ದ ಯಾಚನೆಗೊ, ನಿಜಾಯತಿಯ ಕೃತಿಮವಲ್ಲದ ತಪ್ಪೊಪ್ಪಿಗೆಯ ಬೇಷರತ್ ಕ್ರಿಯೆಗೊ ಮನ ಚಲಿಸಿದಂತಾಗಿ ತುಸು ಮೃದುವಾದಂತಾಗಿ,' ನಾನು ಒಬ್ಬಂಟಿಯಾಗಿ ಇಲ್ಲಿ ಮತ್ತೇನು ಮಾಡಬೇಕು ಹೇಳಿ? ಮೂರು ದಿನದಿಂದ ಒಂದೆ ಸಮನೆ ಪೋನಿನ ಮೇಲೆ ಪೋನ್ ಮಾಡಿ ಸಾಕಾಗಿ ಹೋಯ್ತು..ಅದೆಂಥಹ ಹಾಳು ಆಫೀಸ್ ರೀ ನಿಮ್ಮದು...? ನೆಟ್ಟಗೆ ಒಂದು ಪೋನ್ ಎತ್ತಿ ಉತ್ತರ ಕೊಡೋಕ್ ಬರೋದಿಲ್ವಾ? ಸಾಲದ್ದಕ್ಕೆ ಅದ್ಯಾವ ನಂಬರು ಕೊಟ್ಟಿದ್ದೀರೊ, ಸುಡುಗಾಡು.. ಪೋನ್ ಮಾಡಿದರೆ ಲೈನ್ ಸಿಗೋದೆ ಕಷ್ಟ..ಸಿಕ್ಕಿದರೆ ಅದ್ಯಾವುದೊ ಹೆಂಗಸು ಯಾವುದೊ ಅರ್ಥವಾಗದ ಭಾಷೆಯಲಿ, 'ಸವಾಡಿ ಕಾ, ಸವಾಡಿ ಕಾ' ಅಂತೇನೊ 'ಕಾಕಾಕಾ..' ಅಂತ ಒದರಾಡುತ್ತಾಳೆಯೆ ಹೊರತು ಒಂದಕ್ಷರ ಇಂಗ್ಲೀಷಿನಲ್ಲಿ ಮಾತನಾಡಲಿಲ್ಲ..ಬಡಕೊಂಡು ಬಡಕೊಂಡು ಸಾಕಾಗಿ ಪೋನ್ ಕುಕ್ಕಿ ಎದ್ದು ಬಂದಿದ್ದಾಯ್ತು ..ಅದ್ಯಾವ ಸೀಮೆ ಕೆಲಸ ರೀ, ಪೋನಲ್ಲೂ ಸಿಗದೆ ಇರೊ ಅಂತದ್ದು? ಅಂತಾ ಹಾಳು ಕೆಲಸ ಯಾಕ್ರೀ ಬೇಕು...? ಅತ್ಲಾಗ್ ಕಿತ್ತೊಗ್ದುಬಿಟ್ಟು ಬರಬಾರ್ದಾ...?' ಎಂದು ತನ್ನಲ್ಲಿದ್ದ ಸಿಟ್ಟು ಅಸಹನೆಯನ್ನೆಲ್ಲ ಒಂದೆ ಬಾರಿಗೆ ಕಾರಿಕೊಂಡಿದ್ದಳು. ಆಫೀಸಿನಲ್ಲಿ ಮಾಮೂಲಿಯಾಗಿ ರಿಸೆಪ್ಷನ್ನಿನಲ್ಲಿ ಇರುತ್ತಿದ್ದವಳು ಕುನ್. ಜಂದ್ರ. ಅವಳಿಗೇನೊ ಸಾಕಷ್ಟು ಇಂಗ್ಲೀಷು ಬರುತ್ತಿದ್ದರೂ, ಈ ಬಾರಿಯ ಪ್ರವಾಸದಲ್ಲಿ ಅವಳು ಸೇರಿಕೊಂಡಿದ್ದ ಕಾರಣದಿಂದಾಗಿ ತಾತ್ಕಾಲಿಕವಾಗಿ ಇಂಗ್ಲೀಷ್ ಸರಿಯಾಗಿ ಬಾರದ ಇನ್ನಾರನ್ನೊ ಅವಳ ಜಾಗದಲ್ಲಿ ಕೂರಿಸಿದ್ದರು - ಅದೆ ಇಷ್ಟೆಲ್ಲ ಎಡವಟ್ಟಿಗೆ ಕಾರಣವಾಗಿತ್ತು. ಆದರು ಅವಳ ಉಗ್ರರೂಪಿನ ವ್ಯಗ್ರತೆಯ ಮೂಲಕಾರಣ ಗೊತ್ತಾಗುತ್ತಿದ್ದಂತೆ ಸಮಾಧಾನಿಸುವುದು ತುಸು ಸಲೀಸಾದಂತೆನಿಸಿ ಅದೆ ಸಂತೈಸುವ ದನಿಯಲ್ಲಿ, 'ಇದನ್ನೆ ನೋಡು ಗ್ರಹಚಾರ ಎನ್ನುವುದು.. ಮೂರು ದಿನಗಳಿಂದ ಆಫೀಸಿನಲ್ಲಿ ಯಾರೂ ಇಲ್ಲ.. ಬಿಸಿನೆಸ್ ಟ್ರಿಪ್ಪಿನಲ್ಲಿ ಎಲ್ಲರು ವಾರ್ಷಿಕ ಸೆಮಿನಾರಿನಲ್ಲಿ ಭಾಗವಹಿಸಲು ಬೇರೆ ಊರಿಗೆ ಹೋಗಿಬಿಟ್ಟಿದ್ದರು.. ಜತೆಯಲ್ಲಿ ನಾನೂ ಹೋಗಲೇಬೇಕಾಗಿ ಬಂತು.. ಎಲ್ಲಾ ನಿನ್ನೆ ರಾತ್ರಿಯಷ್ಟೆ ವಾಪಸ್ಸು ಬಂದಿದ್ದು. ಆ ಪ್ರವಾಸದ ಹೊತ್ತಿನಲ್ಲಿ ಯಾರೊ ಭಾಷೆ ಬರದವರನ್ನು ಅಲ್ಲಿ ಕೂರಿಸಿ ಹೋದ ಕಾರಣ ಇದೆಲ್ಲ ಗೊಂದಲ ಆಯ್ತೆಂದು ಕಾಣುತ್ತದೆ...' ಎಂದ.

' ಹಾಳಾಗಲಿ ಬಂದ ಮೇಲಾದರೂ ಪೋನ್ ಮಾಡಬಾರದಿತ್ತೆ..? ರಾತ್ರಿಯಲ್ಲಿ ಯಾರಾದರು ಮನೆಯಲಿದ್ದೆ ಇರುತ್ತಿದ್ದರಲ್ಲ, ಖಂಡಿತ ವಿಷಯ ತಿಳಿಸುತ್ತಿದ್ದರು...'

' ನಿನ್ನೆ ರಾತ್ರಿ ಅದನ್ನಾದರೂ ಮಾಡಬಹುದಿತ್ತೇನೊ.. ಆದರಿಲ್ಲಿ ಹಾಳಾದ ಹೊರಗೆ ಓಡಾಡಲೂ ಆಗದಷ್ಟು ವಿಪರೀತ ಮಳೆ..ತೈಫೂನ್ ಗಲಾಟೆಯಲ್ಲಿ ಎದ್ದ ಬಿರುಗಾಳಿ, ಮಳೆಯಿಂದ ಟೆಲಿಪೋನ್ ಲೈನುಗಳೆಲ್ಲ ಬಿದ್ದು ಹೋಗಿ ಅಪಾರ್ಟ್ಮೆಂಟಿನಲ್ಲಿ ಪೋನ್ ಕನೆಕ್ಷನ್ನೆ ಕೆಲಸ ಮಾಡುತ್ತಿಲ್ಲ.. ಈಗಲೂ ಆಫೀಸಿಗೆ ಹೆಣಗಾಡಿಕೊಂಡು ಬರಲೆ ಇಷ್ಟು ಹೊತ್ತು ಹಿಡಿಯಿತು..ಇಲ್ಲದಿದ್ದರೆ ಬೆಳಿಗ್ಗೆಯೆ ಇನ್ನು ಬೇಗನೆ ಪೋನ್ ಮಾಡಬಹುದಿತ್ತು ....' ( ಅಡಿ ಟಿಪ್ಪಣಿ: ಕಥಾನಕದ ಕಾಲಘಟ್ಟ ಹತ್ತಾರು ವರ್ಷಗಳಿಗಿಂತ ಹಿಂದಿನದೆಂದು ಈ ಮೊದಲೇ ಹೇಳಿರುವುದರಿಂದ, ಈಗಿರುವಂತೆ ಆಗ ಮೊಬೈಲಿನ ಬಳಕೆ, ಪ್ರಸರಣೆ ಇರಲಿಲ್ಲವಾಗಿ ಮಾಮೂಲಿನ ದೂರವಾಣಿಗಳನ್ನೆ ಅವಲಂಬಿಸಬೇಕಾಗಿತ್ತು - ಲೇಖಕ). ಆದರೂ ಆ ಗಳಿಗೆಯಲ್ಲಿ ತಂಡದ ಜತೆ ಹೋಗಿದ್ದುದು ಪ್ರವಾಸಕ್ಕೆಂದು ಹೇಳಿದರೆ ಅದರ ಸೂಕ್ಷ್ಮವನ್ನರಿಯದೆ ಎಲ್ಲಿ ಮತ್ತೆ ಸಿಡಿಯುತ್ತಾಳೊ ಎಂಬ ಅನಿಸಿಕೆಗೆ ಮಣಿದು 'ಬಿಸಿನೆಸ್ ಟ್ರಿಪ್, ಸೆಮಿನಾರ್' ಎಂದು ಅನೃತವಾಡಿದ್ದ - ಬೀಸುವ ದೊಣ್ಣೆಯಿಂದ ಮೊದಲು ಪಾರಾಗಲು ಆಲೋಚಿಸುತ್ತ.

ಅವನ ವಿವರಣೆಯಿಂದ ಸ್ವಲ್ಪ ಒತ್ತಡ ಶಮನವಾದಂತಾಗಿ ತಗ್ಗಿದ ಕೋಪದಲ್ಲಿ ಅವಳ ದನಿಯೂ ಮೃದುವಾಗಿ, 'ಅದೆಲ್ಲ ನನಗ್ಹೇಗೆ ಗೊತ್ತಾಗಬೇಕು? ಇಲ್ಲಿ ಪಾಪು ಇದ್ದಕ್ಕಿದ್ದಂತೆ ಹುಷಾರು ತಪ್ಪಿ 'ಜೀವವೆ ಬಂತು, ಹೋಯ್ತು' ಅನ್ನುವ ಹಾಗಾದಾಗ ಗಾಬರಿಯಲ್ಲಿ ನಾನೆಲ್ಲಿಗೆ ಹೋಗಲಿ? ಮೂರು ದಿನದಿಂದ ನಮ್ಮ ಅಪ್ಪ ಅಮ್ಮನ ಜತೆ ಹೆಣಗುತ್ತಾ ಇದ್ದೇನೆ..ಈ ಅವಸರದ ಸಮಯದಲ್ಲಿ ಪೋನಿನಲ್ಲೂ ಸಿಗಲಿಲ್ಲವಲ್ಲ, ಪಾಪೂಗೆ ಏನಾಗಿಬಿಡುವುದೊ ಅನ್ನೊ ಭಯಕ್ಕೆ ಪೂರ್ತಿ ಕುಸಿಯುವಂತಾಗಿ ಸಿಕ್ಕಾಪಟ್ಟೆ ಕೋಪ ಬಂತು ನಿಮ್ಮ ಮೇಲೆ...ನಾನಾದರೂ ಏನು ಮಾಡಲಿ ಹೇಳಿ? '

'ದಟ್ ಐ ಕ್ಯಾನ್ ಅಂಡರ್ಸ್ಟ್ಯಾಂಡ್...ಬಟ್ ಪಾಪುಗೇನಾಯ್ತು ಅದು ಮೊದಲು ಹೇಳು.. ಬೆಳಗಿನಿಂದ ನನಗಾಗುತ್ತಿರುವ ಗಾಬರಿಯನ್ನು ಯಾರ ಹತ್ತಿರ ಹೇಳಿಕೊಳ್ಳಲಿ ನಾನು?' ಎಂದ ಶ್ರೀನಾಥ.

(ಇನ್ನೂ ಇದೆ) 
 

Comments

Submitted by nageshamysore Sat, 08/16/2014 - 09:52

In reply to by kavinagaraj

ಕವಿಗಳೇ, ಎಲ್ಲದರಿಂದ ಮುಕ್ತನಾಗುವ ಹಂತದಿಂದ ಒಂದು ಹೆಜ್ಜೆಯಷ್ಟೇ ದೂರದಲ್ಲಿರುವ ಆರೋಹಣದ ಅಂತಿಮ ಘಟ್ಟದಲ್ಲಿದ್ದಾನೆ... ಆದರೆ ಆ ಮುಕ್ತಿ ಪರಿಶ್ರಮ, ಪಶ್ಚಾತಾಪವಿಲ್ಲದೆ ಸುಲಭದಲ್ಲಿ ಸಿಕ್ಕಿಬಿಡುವುದೆ? ಅದೆಲ್ಲದರ ಭಾರವೆ ಅವನನ್ನು ಹಗುರಾಗಿಸುವ ಮೆಟ್ಟಿಲಾಗಲಿದೆ - ಮುಂದಿನ ಕಂತಿನಿಂದಲೆ :-)