ಕಥೆ: ಪರಿಭ್ರಮಣ..(45)
( ಪರಿಭ್ರಮಣ..http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಹಾಗೆನ್ನುತ್ತಿದ್ದಂತೆ ಅವನಿಗಿನ್ನೂ ಏನಾಗಿದೆಯೆಂಬ ವಿವರ ಗೊತ್ತಾಗಿಲ್ಲವೆಂದರಿವಾಗಿ, ಏನಾಯಿತೆಂದು ವಿಶದವಾಗಿ ವಿವರಿಸತೊಡಗಿದಳು ಮೆತ್ತನೆಯ ಮೆಲುವಾದ ದನಿಯಲ್ಲಿ. ನಿಜಕ್ಕೂ ನಡೆದ್ದದ್ದೇನೆಂದರೆ ಮೂರ್ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಸಣ್ಣಗೆ ಜ್ವರ ಬಂದಂತಾಗಿ ಮೈ ಬೆಚ್ಚಗಾದಾಗ ಮಾಮೂಲಿ ಜ್ವರವಿರಬಹುದೆಂಬ ಅನಿಸಿಕೆಯಲ್ಲಿ ಹತ್ತಿರದ ಮಾಮೂಲಿ ಡಾಕ್ಟರಲ್ಲಿ ತೋರಿಸಿ ಔಷಧಿಯನ್ನು ಕುಡಿಸಿದ್ದರು. ಆ ರಾತ್ರಿ ಕೊಂಚ ಹುಷಾರಾದಂತೆ ಕಂಡ ಮಗುವಿಗೆ ಯಾಕೊ ಬೆಳಗಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಕುಡಿದಿದ್ದೇನೂ ದಕ್ಕದೆ ಎಲ್ಲವು ವಾಂತಿಯಾಗತೊಡಗಿತ್ತು. ಸಾಲದ್ದಕ್ಕೆ ಇದ್ದಕ್ಕಿದ್ದಂತೆ ನಿಲ್ಲದ ಭೇಧಿಯು ಆರಂಭವಾಗಿ ಒಂದೆರೆಡೆ ಗಂಟೆಯಲ್ಲಿ ಮಗುವಿನ ಮುಖ ಹಲ್ಲಿಯ ಹಾಗೆ ಬಿಳಿಚಿಕೊಂಡಾಗ ಎಲ್ಲರಿಗು ಏನಾಯ್ತೆಂಬ ಗಾಬರಿ ಭುಗಿಲೆದ್ದು ಎಲ್ಲರು ಮತ್ತೆ ಕ್ಲಿನಿಕ್ಕಿನತ್ತ ಓಡಿದ್ದರು. ಅಲ್ಲಿ ತಲುಪಿದ ಹೊತ್ತಿನಲ್ಲೆ ವೈದ್ಯರ ಎದುರಿನಲ್ಲೆ ಮತ್ತೊಮ್ಮೆ ವಾಂತಿಯಾದಾಗ ಅದರೊಳಗೆ ಸಣ್ಣಪುಣ್ಣ ಹುಳುವಿನಂತದ್ದಾವುದೊ ಜಂತುಗಳು ಮಿಸುಕಾಡಿಕೊಂಡು ಓಡಾಡುತ್ತಿದ್ದುದನ್ನು ಕಂಡ ಡಾಕ್ಟರು ಮಗುವಿದ್ದ ವಿಷಮ ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿ ತಕ್ಷಣವೆ ಆಸ್ಪತ್ರೆಗೆ ಅಡ್ಮಿಟ್ ಮಾಡಲು ಹೇಳಿದ್ದರು. ಆ ತರಾತುರಿಯಲ್ಲೆ ಮಗುವನ್ನು ಆಸ್ಪತ್ರೆಗೆ ಸೇರಿಸಿದ ತಕ್ಷಣವೆ ಶ್ರೀನಾಥನಿಗೆ ವಿಷಯ ತಿಳಿಸಬೇಕೆಂಬ ಉದ್ದೇಶದಿಂದ ಮತ್ತೆ ಮತ್ತೆ ಪೋನ್ ಮಾಡಲೆತ್ನಿಸಿ ಸಾಧ್ಯವಾಗದೆ ರೋಸೆದ್ದು ಹೋಗಿದ್ದುದು. ಸಾಲದ್ದಕ್ಕೆ ಮೂರು ದಿನದಿಂದಲೂ ಮಗುವಿನ ಸ್ಥಿತಿ ಮತ್ತಷ್ಟು ಹದಗೆಡದಿದ್ದರು, ಯಾವುದೆ ಚೇತರಿಕೆಯ ಸುಳಿವೂ ಕಾಣದೆ ಸತತ ನಿಗಾದಲ್ಲಿಡುವ ವಾರ್ಡಿನಲ್ಲೆ ಇರಬೇಕಾಗಿ ಬಂದಿತ್ತು. ಹೀಗಾಗಿಯೆ ಮಗುವಿನ ಜತೆ ಹತ್ತಿರವಿರಲು ಮಗುವಿನ ತಾಯಿ ಮತ್ತು ಅವರ ಮೇಲ್ವಿಚಾರಣೆಯ ಸಹಾಯಕ್ಕೆ ಅವನ ಅತ್ತೆ ಮಾವ ಜತೆಗೂಡಿಕೊಂಡು ಆ ಮೂರು ದಿನದಿಂದ ಆಸ್ಪತ್ರೆಯೆ ಮನೆಯಾಗಿ ಹೋಗಿತ್ತು.
ಎಲ್ಲಕ್ಕಿಂತ ತೀರಾ ಗಾಬರಿಯಾಗಿದ್ದೆಂದರೆ ಮೂರು ದಿನವಾದರೂ ಮಗು ಮಾಮೂಲಿನಂತಾಗದೆ ಬರಿಯ ಔಷಧಿಯ ಮತ್ತಿನಲ್ಲಷ್ಟೆ ನಿದ್ರಿಸಿಕೊಂಡಿತ್ತು. ತೀವ್ರ ಸ್ತರದ ವಾಂತಿ ನಿಂತಿದ್ದರೂ, ಅತಿಸಾರದ ಕಾಟದಿಂದ ಇನ್ನೂ ಪೂರ್ಣ ವಿಮುಕ್ತಿ ಸಿಕ್ಕಿರಲಿಲ್ಲ. ಮಗುವಿನ ಮುಖದಲ್ಲಂತೂ ಕೊಂಚವೂ ಗೆಲುವೆ ಕಾಣದೆ ಸುಸ್ತಿನಿಂದ ಪೂರ್ತಿ ಸುಸ್ತಾಗಿ ಹೋಗಿತ್ತು. ಕೇವಲ ಆ ದಿನ ಬೆಳಗಿನಿಂದಷ್ಟೆ ಮತ್ತೆ ಸ್ವಲ್ಪ ಹಾಲು ಕುಡಿಸಲು ಹೇಳಿದ್ದುದು. ಶ್ರೀನಾಥನ ಪೋನು ಬರುವ ಹತ್ತೇ ನಿಮಿಷಕ್ಕೆ ಮೊದಲಷ್ಟೆ ಸ್ವಲ್ಪ ಹಾಲು ಕುಡಿದು ಮಲಗಿದ್ದೆ ಅದುವರೆವಿಗೂ ಕಂಡಿದ್ದ ಮಗುವಿನ ಪರಿಸ್ಥಿತಿಯ ಸುಧಾರಣೆ. ಇನ್ನು ಹೀಗೆ ಎಷ್ಟು ದಿನ ಆಸ್ಪತ್ರೆಯಲ್ಲಿರಬೇಕೊ ಎಂದು ತೊಳಲಾಡುತ್ತಲೆ ದಿಕ್ಕೆಟ್ಟವಳಂತೆ ಕೂತ ಹೊತ್ತಿನಲ್ಲಿ ಪೋನಿನಲ್ಲವನ ದನಿ ಕೇಳುತ್ತಲೆ ಅದುವರೆವಿಗೂ ಬಂದು ಸೇರಿಕೊಂಡಿದ್ದ ಹತಾಶೆಯ ಪೂರದ ಕಟ್ಟೆಯ್ಹೊಡೆದು, ಪೇರಿಸಿಕೊಂಡಿದ್ದ ಭಾವೋದ್ರೇಕತೆಯ ಸಂಕಟ, ಭಾವೋತ್ಕಟತೆಯ ಆಕ್ರೋಶ, ಮಗುವಿನ ಇನ್ನೂ ಸುಧಾರಣೆ ಕಾಣದ ಸ್ಥಿತಿಯ ಆತಂಕಪೂರ್ಣ ನಿರಾಶೆ - ಹೀಗೆ ಎಲ್ಲದರ ಕಲಸು ಮೇಲೋಗರವಾಗಿ, ಶ್ರೀನಾಥನ ಮೇಲೆ ನೇರವಾಗಿ ಎಗರಾಡುವಂತಾಗಿತ್ತು. ಅದುವರೆವಿಗೂ ಒಡ್ಡು ಕಟ್ಟಿಕೊಂಡಂತಿದ್ದ ಭಾವೋತ್ಕಲನಕ್ಕೊಂದು ತಕ್ಷಣದ ದಾರಿ ಸಿಕ್ಕಂತಾಗಿ ಏನೆಲ್ಲಾ ಮಾತಿನ ರೂಪದಲ್ಲಿ ಹೊರಬಿದ್ದಿತ್ತು. ಶ್ರೀನಾಥ ಮೂರು ದಿನದಿಂದ ತಾವ್ಯಾರು ಬ್ಯಾಂಕಾಕಿನಲ್ಲಿ ಇರದಿದ್ದುದ್ದು ಮತ್ತು ವಾಪಸ್ಸು ಬಂದಾಗಲು ಮಳೆಯ ಹೊಡೆತದ ವಿಶ್ವರೂಪಕ್ಕೆ ಸಿಕ್ಕಿ ಪೋನ್ ಮಾಡಲೂ ಸರ್ಕಸ್ಸು ಮಾಡಿ ಹೆಣಗಬೇಕಾಗಿದ್ದು - ಎಲ್ಲದರ ಹಿನ್ನಲೆ ವಿವರಿಸಿದ ಮೇಲೆ ಅವನು ಸಿಗದಿದ್ದ ಕಾರಣ ಅವನ ನಿರ್ಲಕ್ಷ್ಯವಲ್ಲದ ಕಾರ್ಯಭಾರದ ಕಾರಣದಿಂದ ಎಂದರಿವಾದಾಗ ಅವಳಿಗೂ ಸ್ವಲ್ಪ ಸಮಾಧಾನವಾಗಿತ್ತು. ಅದೊಂದು ಎಲ್ಲಾ ದಿಕ್ಕಿನಿಂದಾದ, ಹಲವಾರು ಅನಪೇಕ್ಷಿತ ಘಟನೆಗಳ ಏಕಕಾಲದ ಒಟ್ಟಾರೆ ಧಾಳಿಯ ಅನಿರೀಕ್ಷಿತ ಸಂಘಟನೆಯ ಆಕಸ್ಮಿಕವೆಂದು ಅರಿವಾಗುತ್ತಲೆ ಮನಸು ಕೊಂಚ ತಹಬದಿಗೆ ಬಂದಿತ್ತು. ಜತೆಗೆ ಶ್ರೀನಾಥನ ಮೇಲೆ ಕಾರಿಕೊಂಡ ಕಾರಣದಿಂದ ಒಳಗಿದ್ದ ಬೇಗುದಿಯೆಲ್ಲ ಹೊರಬಿದ್ದು ಒಂದು ರೀತಿ ಹಗುರವಾದಂತಾಗಿ ಮತ್ತಷ್ಟು ನಿರಾಳವಾಗಿತ್ತು ಅವಳ ಮನಸಿಗೆ.
' ಅದೆಲ್ಲ ಇರಲಿ..ಈಗ ಮಗು ಹೇಗಿದೆ' ಅವಳು ಆವೇಶವಿಳಿದು ಮಾಮೂಲಿನಂತಾದಳೆಂದು ಖಚಿತವಾದ ಮೇಲೆ ವಿಚಾರಿಸಿದ ಶ್ರೀನಾಥ.
'ಪರಿಸ್ಥಿತಿಯಲ್ಲೇನು ಹೆಚ್ಚು ಸುಧಾರಣೆಯಾಗಿಲ್ಲ.. ಇಷ್ಟು ದಿನಕ್ಕೆ ಇವತ್ತೆ ಸ್ವಲ್ಪ ಹಾಲು ಕುಡಿದು ದಕ್ಕಿಸಿಕೊಂಡಿದ್ದು - ಅದೂ ಒಳಲೆಯಲ್ಲಿ ಸ್ವಲ್ಪ ಸ್ವಲ್ಪ ಕುಡಿಸಿದ್ದಕ್ಕೆ... ಅದು ಬಿಟ್ಟರೆ ಮೂರು ದಿನದಿಂದ ಬಿದ್ದಲ್ಲೆ ಬಿದ್ದುಕೊಂಡಿದೆ ಅಲುಗಾಡದೆ..ಯಾಕೊ ವಿಪರೀತ ಭಯವಾಗುತ್ತಿದೆ ರೀ, ಪಾಪು ಹುಷಾರಾಗುತ್ತೊ ಇಲ್ಲವೊ ಎಂದು...' ಸಿಟ್ಟೆಲ್ಲ ಕರಗಿ ಹತಾಶೆಯಿಂದ ದೈನ್ಯತೆಯತ್ತ ತಿರುಗಿದ್ದ ದನಿಯಲ್ಲಿ ನುಡಿದಿದ್ದಳು. ತಾನೊಬ್ಬಳೆ ಹೊತ್ತು ನರಳುತಿದ್ದ ಹೊಣೆಗಾರಿಕೆಗೆ ಈಗವನು ಜತೆಯಾದನಲ್ಲ ಎಂಬ ನಿರಾಳತೆಯೊಂದಿಗೆ ಮುಂದೇನು ಎಂಬ ಆತಂಕವೂ ಸೇರಿಕೊಂಡು ದನಿ ಕೊಂಚ ನಡುಗುತ್ತಿತ್ತು.
' ಅದರ ಬಗ್ಗೆ ಚಿಂತಿಸಬೇಡ ಬಿಡು... ನಾನು ಡಾಕ್ಟರ ಹತ್ತಿರ ನೇರ ಮಾತನಾಡುತ್ತೇನೆ.. ಈ ಆಸ್ಪತ್ರೆಯಲ್ಲಿ ಬೇಕಾದ ಅನುಕೂಲವಿರದಿದ್ದರೆ ಬೇರೆ ಆಸ್ಪತ್ರೆಗೆ ಬೇಕಾದರೂ ಸೇರಿಸೋಣ.. ನನ್ನ ಸ್ನೇಹಿತನೊಬ್ಬ ಚೈಲ್ಡ್ ಸ್ಪೆಷಲಿಸ್ಟ್ ಆಗಿದ್ದಾನೆ..ಅವನಿಗೂ ಒಮ್ಮೆ ಪೋನ್ ಮಾಡಿ ಸಲಹೆ, ಸೂಚನೆ ಕೇಳುತ್ತೇನೆ..ಇಲ್ಲಿಗಾದರೂ ಕರೆಸಿಕೊಳ್ಳೋಣವೆಂದರೆ ಹಾಳು ಪಾಸ್ಪೋರ್ಟಿನ ಪಾಡು.. ಏನಾಯ್ತು ಆ ಪಾಸ್ಪೋಟುಗಳ ಕಥೆ? ಏನಾದರೂ ಗೊತ್ತಾಯಿತಾ?'
' ಇಲ್ಲಾ..ಇನ್ನು ಗೊತ್ತಾಗಿಲ್ಲ..ಅದೇನೊ ಪೋಲೀಸ್ ವೆರಿಫಿಕಶನ್ ಬೇರೆ ಬರಬೇಕಂತೆ; ತಿಂಗಳುಗಟ್ಟಲೆ ಆಗುತ್ತೆ ಅಂತ ಬೇರೆ ಹೇಳಿದರು..'
' ಸರಿ ..ಇನ್ನದನ್ನು ನಂಬಿ ಕುಳಿತರೆ ಕಥೆ ಆದ ಹಾಗೆ ಲೆಕ್ಕ... ಹಾಳಾಗಲಿ. ಮೊದಲು ನನಗೆ ಆ ಡಾಕ್ಟರ ಹೆಸರು ಮತ್ತು ನಂಬರು ಕೊಡು..ಅಥವಾ ಈ ನಂಬರಿನಲ್ಲೆ ಸಿಗುತ್ತಾರಾ?'
ಅಲ್ಲಿನ ಪರಿಸ್ಥಿತಿಯ ಪಕ್ಷಿನೋಟ ಸಿಕ್ಕ ಮೇಲೆ ವೈದ್ಯರ ಜತೆಯೂ ಮಾತಾಡಿದ ಶ್ರೀನಾಥನಿಗೆ ಅಲ್ಲಿನ ಸಮಗ್ರ ನೋಟದ ವಿವರಣೆ ಸಿಕ್ಕಂತಾಯ್ತು. ನಿಜ ಹೇಳುವುದಾದರೆ ಪರಿಸ್ಥಿತಿ ಸಾಕಷ್ಟು ಗಂಭೀರವಾಗಿ, ಚಿಂತಾಜನಕವಾಗಿಯೆ ಇತ್ತು... ಸದ್ಯಕ್ಕಿದ್ದ ಒಂದೆ ಒಂದು ಆಶಾವಾದವೆಂದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿಲ್ಲವೆಂಬುದಷ್ಟೆ. ಆದರೆ ಮತ್ತಷ್ಟು ಸುಧಾರಣೆಯಿಲ್ಲದೆ ಇನ್ನೆರಡು ದಿನ ಹೀಗೆ ಮುಂದುವರೆದರೆ ಕಳವಳಕ್ಕೆ ಕಾರಣವಾಗಲಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದ್ದರು ಡಾಕ್ಟರು. ಸುದೈವಕ್ಕೆ ಶ್ರೀನಾಥ ಹೇಳಿದ ಗೆಳೆಯ ಡಾಕ್ಟರ ಅವರಿಗೂ ಚೆನ್ನಾಗಿ ಪರಿಚಯವಿದ್ದ ಕಾರಣ, ಅವರನ್ನೊಮ್ಮೆ ಕನ್ಸಲ್ಟ್ ಮಾಡಲು ಅಭ್ಯಂತರವೇನಿಲ್ಲವೆಂದು ಹೇಳಿದ್ದಲ್ಲದೆ ಬೇಕಿದ್ದರೆ ತಾವೆ ಪೋನ್ ಮಾಡಿ ಕರೆಸುವುದಾಗಿ ಹೇಳಿದಾಗ ಮತ್ತಷ್ಟು ಹಗುರವಾದಂತೆ ಭಾಸವಾಗಿತ್ತು.
ಆನಂತರ ಚಕಚಕನೆ ಮತ್ತೆರಡು ಕಾಲ್ ಮಾಡಿ ಡಾಕ್ಟರ್ ಗೆಳೆಯನನ್ನು ಸಂಪರ್ಕಿಸಿ ವಿಷಯ ವಿವರಿಸಿದ ಮೇಲೆ ಮತ್ತೆ ಹೆಂಡತಿಗೆ ಅದೆಲ್ಲ ವಿವರ ತಿಳಿಸಿ ಗಾಬರಿಯಾಗದಿರುವಂತೆ ಧೈರ್ಯ ಹೇಳಿದ. ಇನ್ನು ಆಸ್ಪತ್ರೆಯ ವಿಪರೀತದ ವೆಚ್ಚಕ್ಕೆ ಬೇಕಾದ ಹಣವನ್ನು ತಕ್ಷಣ ರವಾನಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿ ಮತ್ತೆ ರಾತ್ರಿ ಪೋನ್ ಮಾಡುವುದಾಗಿ ತಿಳಿಸಿ ಪೋನಿಟ್ಟು ಒಂದು ದೊಡ್ಡ ನಿಟ್ಟುಸಿರಿನೊಂದಿಗೆ ಸೀಟಿಗೊರಗಿ ಕೈಯೆರಡನ್ನು ತಲೆಯ ಹಿಂದಕ್ಕೆ ಕಟ್ಟಿ ಕಣ್ಮುಚ್ಚಿದ್ದ. ಅದೇನು ಕೊನೆಗೂ ಮಾತನಾಡಿ ವಿವರ ಸಂಗ್ರಹಿಸಿದ ನಿರಾಳತೆಯೊ ಅಥವಾ ಹೊಸದೊಂದು ಸಂಕಟದ ಆರಂಭಕ್ಕೆ ಮುನ್ನುಡಿಯಾಗುತ್ತಿದೆಯೇನೊ ಎಂಬ ಸಂದಿಗ್ದ ತಂದ ಗೊಂದಲವೊ ಅರಿವಾಗದ ಸಮ್ಮಿಶ್ರ ಭಾವದಲ್ಲಿ. ಹಾಗೆ ಮುಚ್ಚಿದ ಕಣ್ಣ ಹಿಂದಿನ ಮನಃಪಟಲದ ತೆರೆಯಲ್ಲಿ ಈಚಿನ ದಿನಗಳಲ್ಲಿ ನಡೆದ ಸಂಘಟನೆಗಳೆಲ್ಲ ಒಂದೊಂದಾಗಿ ಹಾದು ಹೋಗತೊಡಗಿದವು ಸಿನಿಮಾದಲ್ಲಿನ ದೃಶ್ಯಗಳಂತೆ...ಅದರಲ್ಲೂ ಕುನ್.ಸು ಜತೆಗೆ ಅನೈಚ್ಛಿಕವಾಗಿ ಸಂಭವಿಸಿದ ಐಚ್ಛಿಕ ಒಡನಾಟ, ತನ್ನ ಕೀಳರಿಮೆಯನ್ನು ಜಯಿಸುವಲ್ಲಿ ಆ ಒಡನಾಟ ವಹಿಸಿದ ಅಪರೂಪದ ಭೂಮಿಕೆ, ಅದು ಕೊಂಡೊಯ್ದ ತಾರ್ಕಿಕವಾದರೂ ಅನಿರೀಕ್ಷಿತವಾಗಿದ್ದ ಮಿಲನ ಸಾಂಗತ್ಯ, ಅದರ ಬೆನ್ನಲ್ಲೆ ಆಘಾತ ನೀಡಿದ ಅವಳ ಗರ್ಭಿಣಿಯಾದ ಸುದ್ದಿ, ಅವಳ ಕುರಿತಾಗಿ ಉಂಟಾದ ಖೇದ, ವಿಷಾದ, ಅನುಮಾನ, ಶಂಕೆಯಿಂದೊಡಗೂಡಿದ ಭಾವ, ತನಗೆ ತಿಳಿಸದೆಲೆ ಗರ್ಭಪಾತ ಮಾಡಿಸಿಕೊಂಡು ಮಿಕ್ಕುಳಿದ ಹಣವನ್ನು ಹಿಂತಿರುಗಿಸಿ ಕೊಟ್ಟು ಮಾತನಾಡದೆ ಹೊರಟು ಹೋದದ್ದು, ಆಮೇಲೆ ಅವಳು ಕೆಲಸ ಕಳೆದುಕೊಂಡಳೆಂದು ಗೊತ್ತಾಗಿದ್ದು, ನಡುವೆ ಪ್ರಾಜೆಕ್ಟಿನ ಯಶಸ್ಸಿನ ಆಚರಣೆಯ ಪ್ರವಾಸದ ಭೂಮಿಕೆ ಸಿದ್ದವಾಗತೊಡಗಿದ್ದು, ಕುನ್. ಸೋವಿಯ ಜತೆ ವಾಟ್ ಪೋ ದೇವಾಲಯಕ್ಕೆ ಹೋದಾಗ ಆದ ಬೌದ್ದ ಸಂತನ ಭೇಟಿ ಮತ್ತು ಮಾತುಕತೆ, ಪ್ರಾಜೆಕ್ಟಿನ ಅದ್ಭುತ ಯಶಸ್ಸು, ಪ್ರವಾಸದ ಅತ್ಯಮೋಘ ಅನುಭವ, ಆ ಸಂಧರ್ಭದಲ್ಲೆ ಉಂಟಾದ ನಿಸರ್ಗ ಸಂಸರ್ಗದ ತಾದಾತ್ಮಕತೆಯ ಅನಿರ್ವಚನೀಯ ಅನುಭೂತಿಗಳು - ಎಲ್ಲದರ ಅಂತಿಮದಲ್ಲಿ ಮೇಲೆರಿದ್ದು ಕೆಳಗಿಳಿಯಲೇಬೇಕೆಂಬ ತರ್ಕದಲ್ಲಿ ಕುನ್. ಲಕ್ ಸ್ಪೋಟಿಸಿದ್ದ ಕುನ್. ಸು ಕೆಲಸ ಕಳೆದುಕೊಳ್ಳಲು ಕಾರಣವಾಗಿದ್ದ ರಹಸ್ಯ, ಬ್ಯಾಂಕಾಕಿನ ಭಾರಿ ಗಾಳಿ ಮಳೆಯ ಹೊದರಿನಲ್ಲಿ ಎದ್ದುಬಿದ್ದು ಆಫೀಸಿಗೆ ಬಂದರು ಮನೆಯನ್ನು ಸಂಪರ್ಕಿಸಲಾಗದೆ ಒದ್ದಾಡಿದ್ದು, ಕೊನೆಗೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಮಗುವಿನ ಪರಿಸ್ಥಿತಿ - ಎಲ್ಲವು ಒಂದರ ಹಿಂದೆ ಒಂದು ಹಾದು ಹೋಗುತ್ತ, ಸಾಮಾನ್ಯನೆನಿಸಿಕೊಂಡ ತನ್ನ ಜೀವನದಲ್ಲೇ ಇವೆಲ್ಲಾ ನಡೆಯುತ್ತಿದೆಯಲ್ಲ? ಎನಿಸುತ್ತಲೆ ಏನೂ ವಿಶೇಷ ಸಂಭವಿಸದ ಸಾಮಾನ್ಯ ಬದುಕಿನ ನಿರೀಕ್ಷೆಯನ್ನು ಮೀರಿಸಿದ ಇವೆಲ್ಲಾ ಸಂಘಟನೆಗಳಿಗೆ ತಾನು ಪಾತ್ರಧಾರಿಯಾದ ವಿಸ್ಮಯದ ಸೋಜಿಗಕ್ಕೆ ಅಚ್ಚರಿಯ ದಿಗ್ಮೂಢ ಭಾವವನ್ನು ಲೇಪಿಸಿತ್ತು. ಏನಾದರಾಗಲಿ ಇವೆಲ್ಲದರಿಂದ ಹೊರಬಿದ್ದು ಯಾವುದೇ ಜಂಜಾಟವಿರದ ಸಾಧಾರಣ ಬದುಕಿನ ಮಡಿಲಿಗೆ ಮತ್ತೆ ಮರಳಿದರೆ ಸಾಕೆನ್ನುವ ಭಾವ ತೀವ್ರತೆಯುಂಟಾಗಿ, ಅದೆ ಅನುಭೂತಿ ಕಳೆದ ನಿರ್ಭಾವದಲ್ಲಿ ಕಣ್ತೆರೆದು ಮುಂದಿದ್ದ ಕಂಪ್ಯೂಟರಿನ ಪರದೆಯತ್ತ ಕಣ್ಣು ಹಾಯಿಸಿದ್ದ ಯಾಂತ್ರಿಕವಾಗಿ. ಇದ್ದಕಿದ್ದಂತೆ ಅದರ ಕೆಳಗಿನ ಮೂಲೆಯಲೇನೊ ಬಿದ್ದಿರುವುದು ತಟ್ಟನೆ ಕಣ್ಣಿಗೆ ಬಿದ್ದು ಎತ್ತಿಡಲೆಂದು ಕೈಗೆತ್ತಿಕೊಂಡು ನೋಡಿದರೆ - ಆ ಬೌದ್ಧ ಸಂತ ತಾನು ಹೊರಡುವ ಮುನ್ನ ನೀಡಿದ್ದ ವಿಳಾಸವಿದ್ದ ಕಾರ್ಡು. ಅದನ್ನು ನೋಡುತ್ತಿದ್ದಂತೆ ತಟ್ಟನೆ ನೆನಪಾಗಿತ್ತು ಶ್ರೀನಾಥನಿಗೆ ಆ ಮಾಂಕ್ ಸುಚರಿತ್ ತಾನು ಹೊರಡುವ ಹೊತ್ತಿನಲ್ಲಿ ನುಡಿದಿದ್ದ ಮಾತುಗಳು...
" ಸರಿ.. ಹಾಗಾದರೆ ಈಗ ನಾನು ಹೇಳಲಿರುವುದನ್ನು ಗಮನವಿಟ್ಟು ಕೇಳು.. ನೀನು ನಂಬಲಿ, ನಂಬದಿರಲಿ ಉಢಾಫೆ ಮಾತ್ರ ಮಾಡಬೇಡ. ಇನ್ನು ಕೆಲವು ವಾರಗಳಲ್ಲಿ ಇದ್ದಕ್ಕಿದ್ದಂತೆ ಒಂದೆರಡು ಆಕಸ್ಮಿಕ ಸಂಘಟನೆಗಳು ತಂತಾನೆ ನಡೆದು, ನೀನು ಕನಸಿನಲೂ ಎಣಿಸಿರದ ರೀತಿಯಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಗಳನ್ನು ತರುತ್ತವೆ. ಅಂದ ಹಾಗೆ ನೀನೀಗಲೆ ಅದೇನಿರಬಹುದೆಂದು ಊಹಿಸಲು ಕೂಡ ಹೋಗಬೇಡ.. ನಿಜ ಹೇಳುವುದಾದರೆ ಅದು ನನಗೂ ಗೊತ್ತಿಲ್ಲ.. ಗೊತ್ತಿದ್ದರೂ ಅದರಿಂದ ಈಗ ನಿನಗೆ ಯಾವ ಪ್ರಯೋಜನವೂ ಇಲ್ಲ.. ಅದು ಸರಿಸೂಕ್ತ ಸಮಯದಲ್ಲಿ ಘಟಿಸಿದಾಗ ಮಾತ್ರ ನನ್ನೀ ಮಾತಿನ ನಿಖರ ಅರ್ಥ ನಿನಗಾಗುತ್ತದೆ . ಯಾರೂ ಹೇಳದೆ ನಿನ್ನಲ್ಲೆ ಅದರ ಮಹತ್ವ ಸ್ಪುರಿಸಿ ಇದ್ದಕ್ಕಿದ್ದಂತೆ ಏನೊ ಜ್ಞಾನೋದಯವಾದ ಹಾಗೆ ಭಾಸವಾಗುತ್ತದೆ. ನೀನೇನೊ ಮಹತ್ತರವಾದ, ವಿಭಿನ್ನವಾದದ್ದೇನನ್ನೊ ಮಾಡಬೇಕೆಂಬ ಅಂತಃಪ್ರೇರಣೆಯ ಒತ್ತಡ ಮನಕ್ಕೆ ಪ್ರೇರಣೆಯ ರೂಪದಲ್ಲಿ ಅರಿವಾಗುತ್ತದೆ. ಅದು ಘಟಿಸಿದಾಗ ಅದನ್ನೆ ಎಳೆಯಾಗಿ ಹಿಡಿದುಕೊಂಡು ನೀನೇನು ಮಾಡಬೇಕೆಂದು ನಿನ್ನಲ್ಲೇ ಪ್ರಶ್ನಿಸಿಕೊಂಡಾಗ ನಿನಗೆ ಉತ್ತರ ಹೊಳೆಯುತ್ತದೆ.."
ಮಾಂಕ್ ಸುಚರಿತ್ ಹೇಳಿದಂತೆಯೆ ಈ ಆಕಸ್ಮಿಕ ಅವಘಡಗಳು ನಡೆಯುತ್ತಿವೆಯೆ? ಈಚಿಗಿನ ಕೆಲವು ಸಂಗತಿಗಳನ್ನು ಗಮನಿಸಿದರೆ ಅವರು ಹೇಳಿದ್ದ ಒಂದೆರಡು ಘಟನೆಗಳು ಇವೆ ಆಗಿರುವಂತೆ ಕಾಣುತ್ತಿದೆಯಲ್ಲ? ಮೊದಲಿಗೆ ಕುನ್. ಲಗ್ ಹೇಳಿದ ವಿಷಯ - ಅದು ಜೀವಮಾನದಲ್ಲೆ ದೊಡ್ಡ ಆಘಾತಕಾರಿಯಾದ ಹಾಗು ಆತಂಕಪೂರ್ಣ ಸಂಗತಿ. ಅದರಿಂದ ತಲೆ ಕೆಡವದಂತೆ ತಪ್ಪಿಸಿಕೊಂಡಂತಾಗಿದ್ದರೂ ಅದು ತಂದಿಟ್ಟಿರುವ ಕೀಳರಿಮೆಯ ಸಂದಿಗ್ದದಿಂದಂತು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ - ಕನಿಷ್ಠ ಥಾಯ್ಲ್ಯಾಂಡಿನಲ್ಲಿ ಇರುವ ತನಕವಾದರು. ಅಲ್ಲದೆ ಅದು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಹ ಸನ್ನಿವೇಶವೂ ಆಗಿರಬಹುದು. ಮತ್ತಾವುದೊ ತರದಲ್ಲಿ ಧುತ್ತನೆ ಬಂದು ವಕ್ಕರಿಸಿಕೊಂಡು ಕಾಲೆಳೆದರೂ ಅಚ್ಚರಿಯಿಲ್ಲ... ಆ ಸಂಗತಿ ಬಿಟ್ಟರೆ ಆ ರೀತಿಯೆ ಬಂದು ಗುದ್ದರಿಸಿದ ಮತ್ತೊಂದು ಸಂಗತಿ ಯಾವುದು? ಯಾವುದೂ ಇದ್ದಂತಿಲ್ಲವಲ್ಲ? ಅಂದರೆ ಅದೊಂದೆ ಸಂಗತಿಯೇ? ಅರೆರೆ! ಯಾಕಿಲ್ಲ? ತಾಳು, ತಾಳು... ಮಗುವಿನ ಆಸ್ಪತ್ರೆಯ ಪ್ರಕರಣವೂ ಹಾಗೆಯೆ ಏಕಾಏಕಿ ಬಂದೆರಗಿದ ಪ್ರಕರಣವೆ ಅಲ್ಲವೆ ? ಅದೂ ತಾನಿಲ್ಲದ ಹೊತ್ತಿನಲ್ಲೆ ಏನೆಲ್ಲಾ ರಾಮಾಯಣ, ದಾಂಧಲೆ ಮಾಡಿ ಈ ಬೆಳಗಿನವರೆಗೂ ವಿಷಯವೆ ಗೊತ್ತಿರದೆ ಒದ್ದಾಡುವಂತೆ ಮಾಡಿದ್ದು? ಎರಡು ತೀವ್ರತರ ವಿಷಯಗಳೆ, ತೀರಾ ಗಂಭೀರ ಸನ್ನಿವೇಶಗಳೇ. ಎರಡೂ ವಿಷಮ ಸ್ಥಿತಿಯಲ್ಲಿರುವ ಅನಾಹುತಗಳೆ ಆದರೂ, ಯಾವುದೊ ಶಕ್ತಿಯೊಂದು ಕೊನೆಯ ಅವಕಾಶ ಕೊಡುವಂತೆ ಅವೆರಡು ಅತೀವ ವಿಷಮ ಸ್ಥಿತಿಗಿಳಿಯದಂತೆ ರಕ್ಷಿಸುತ್ತಿದೆಯೆ? ಆ ಮಾಂಕ್ ಸುಚರಿತ್ ಹೇಳಿದ್ದ ವಿಶೇಷ ಸಂಘಟನೆಗಳು ಇವೆ ಆಗಿದ್ದು ಈ ರೀತಿ ಕುರುಹು ನೀಡುತ್ತಿವೆಯೆ? ಆ ಕುರುಹಿನ ದೆಸೆಯಿಂದಾಗಿಯೆ ಅಷ್ಟು ದಿನದಿಂದ ಎದುರಿಗಿದ್ದರೂ ಗಮನ ಸೆಳೆಯದ ಆ ವಿಸಿಟಿಂಗ ಕಾರ್ಡ್, ಇಂದು ತಟಕ್ಕನೆ ಗಮನ ಸೆಳೆಯುತ್ತಿದೆಯೆ? ಮಾಂಕ್ ಸುಚರಿತ್ ಹೇಳಿದ ಆ 'ತಾನಾಗೆ ಅರಿವಾಗುವ' ಸೂಚನೆ ಇದೆ ಏನು? ಅಥವಾ ಇದೆಲ್ಲ ಕಾಕತಾಳೀಯತೆಯನ್ನು ತನ್ನ ಮನಸ್ಸು ಅಡ್ಡಾದಿಡ್ಡಿಯಾಗಿ ಭ್ರಮಿಸಿ ಕಲ್ಪಿಸಿಕೊಳ್ಳುತ್ತಿದೆಯೆ?
ಹೀಗೆಲ್ಲಾ ಯೋಚನಾ ಲಹರಿಯಲ್ಲಿ ಸಿಲುಕಿಕೊಂಡ ಶ್ರೀನಾಥನ ಮನಸ್ಸು ಏನೇನೊ ಗೊಂದಲಗಳ ಗೂಡಾಗಿ ಚಿತ್ರ ವಿಚಿತ್ರ ಲಹರಿಯಲ್ಲಿ ಪರಿಭ್ರಮಿಸತೊಡಗಿತ್ತು. ಕೈಯಲ್ಲಿದ್ದ ಕಾರ್ಡನ್ನೆ ತದೇಕ ಚಿತ್ತನಾಗಿ ನೋಡುತ್ತಿದ್ದರೂ ಗಮನವೆಲ್ಲ ಇನ್ನೆಲ್ಲೊ ಕೇಂದ್ರೀಕೃತವಾದ ಅನ್ಯಮನಸ್ಕ ಸ್ಥಿತಿಯಲ್ಲಿ ಪ್ರಾಯಶಃ ಮಾಂಕ್ ಸುಚರಿತ್ ಹೇಳಿದ್ದ ಪ್ರೇರಣಾ ಸಂಘಟನೆ ಇದೇ ಇರಬಹುದೆ ಎಂದು ಮತ್ತೆ ಮತ್ತೆ ತರತರದ ಲೆಕ್ಕ ಹಾಕುತ್ತ ತಾಳೆ ನೋಡುತ್ತಿತ್ತು. ಅದೆ ವಿಚಲಿತ ಮನಸ್ಥಿತಿಯಲ್ಲಿ ಯಾಂತ್ರಿಕವಾಗಿ ಕಾರ್ಡಿನ ಮೇಲೆ ಬರೆದಿದ್ದ, ಕಡೆಯಲ್ಲಿ ಪೋನ್ ನಂಬರಿನ ಜತೆಗಿದ್ದ ವಿಳಾಸದ ವಿವರವನ್ನು ಓದುತ್ತಿತ್ತು ಶ್ರೀನಾಥನ ಕಣ್ಣು.
ವಾಟ್ ಪಃ ನಾನಚತ್ (WPN)
ದಿ ಇಂಟರ್ನ್ಯಷನಲ್ ಫಾರೆಸ್ಟ್ ಮೊನಸ್ಟೆರಿ
ಬಾನ್ ಬುಂಗ್ ವಾಯಿ
ಅಂಪರ್ ವಾರಿನ್ ಚಂರಬ್
ಉಬೋನ್ ರಚ್ಚತಾನಿ ೩೪೩೧೦
Wat Pah Nanachat (WPN)
The international forest monastery
Wat Pah Nanachat
Bahn Bung Wai
Ampher Warin Chamrab
Ubon Rachathani 34310
(ಸೂಚನೆ: ಇದು ಥಾಯ್ಲ್ಯಾಂಡಿನಲ್ಲಿರುವ ಅಂತರರಾಷ್ಟ್ರಿಯ ಫಾರೆಸ್ಟ್ ಮೊನೆಸ್ಟರಿಯ ನಿಜವಾದ ವಿಳಾಸ... ಇಂಗ್ಲೀಷಿನಲ್ಲೆ ವಹಿವಾಟು ನಡೆಸುವ ಇದರಲ್ಲಿ 'ಮಾಂಕ್ ಹುಡ್' ಬಯಸುತ್ತಲೊ, ಕಿರು ಅವಧಿಯ ಅತಿಥಿಗಳಾಗಿಯೊ ಇರಲು ಬಯಸುವವರೊ, ಅಥವಾ ಜೀವನದೆಲ್ಲಾ ಸೌಖ್ಯವನ್ಹು ತೊರೆದು ' ಭಿಕ್ಕು (ಮಾಂಕು)' ಗಳಾಗಿ ಮಿಕ್ಕ ಜೀವನ ಕಳೆಯಲು ಬಯಸುವವರೊ ಬಂದು ಇರುತ್ತಾರೆ - ಲೇಖಕ)
ಅದರಲ್ಲಿ ಇದ್ದ ಪೋನ್ ನಂಬರ್ ಕಾರ್ಡಿನ ಮೇಲೆ ಪ್ರಿಂಟಾಗಿರಲಿಲ್ಲ - ಬದಲಿಗೆ ಕೈ ಬರಹದಲ್ಲಿ ಬರೆದಿತ್ತು. ಈ ರೀತಿಯ ಬೌದ್ಧ ಮೊನೆಸ್ಟರಿಗಳಲ್ಲಿ ಹೊರ ಜಗತ್ತಿನ ಸಂಪರ್ಕವನ್ನೇರ್ಪಡಿಸುವ ಪೋನ್, ಇಂಟರ್ನೆಟ್, ಇ- ಮೇಯ್ಲ್ ಗಳನ್ನು ಅಷ್ಟಾಗಿ ಬಳಸಲು ಇಷ್ಟಪಡುವುದಿಲ್ಲ. ಅದರಿಂದಾಗಿಯೆ ಪತ್ರ ಬರೆಯುವ ಸಂಪರ್ಕ ವಿಳಾಸ ಬಿಟ್ಟರೆ ಮತ್ತೇನು ಇರುವುದಿಲ್ಲ. ಅಲ್ಲಿಗೆ ಬರುವವರು ಕೂಡ ಪೋನು ಕಂಪ್ಯೂಟರು ಗ್ಯಾಡ್ಜೆಟ್ಟುಗಳಿಲ್ಲದ ಸಾಧಾರಣ ಜೀವನದ ಶೈಲಿಗೆ ಒಪ್ಪಿಕೊಂಡು ಬರಬೇಕಾದ ಕಾರಣ ಸಾಂಪ್ರದಾಯಿಕ ಥಾಯ್ ಶೈಲಿಯ, ನಿಜವಾದ ಕಾಡಿನ ಪರಿಸರದಲ್ಲಿ ಎಲ್ಲವನ್ನು ಪರಿತ್ಯಜಿಸಿ ಅಲ್ಲಿನ 'ಭಿಕ್ಕು (ಮಾಂಕು)' ಗಳ ರೀತಿಯಲ್ಲೆ ಜೀವಿಸಬೇಕು - ಅತಿಥಿಗಳಾಗಿ ಬಂದವರೂ ಅಷ್ಟೆ ಅಥವ 'ಮಾಂಕ್ ಹುಡ್' ಗಾಗಿ ಬಂದವರಾದರೂ ಅಷ್ಟೆ. ಅತಿಥಿಗಳ ದಿನಚರಿ ಸ್ವಲ್ಪ ಸಡಿಲವಾಗಿರುತ್ತದೆನ್ನುವುದನ್ನು ಬಿಟ್ಟರೆ ಮತ್ತೇನು ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಈಗಿನ ಸಂಪರ್ಕ ಕ್ರಾಂತಿಯ ದೆಸೆಯಿಂದ ವೆಬ್ ಸೈಟುಗಳು, ಮಿಂಚಂಚೆಗಳು ಬಳಕೆಯಲ್ಲಿದ್ದರೂ, ಈ ರೀತಿಯ ಜಾಗಗಳಲ್ಲಿ ಅದರ ಬಳಕೆಯನ್ನು ತೀರಾ ಮಿತಿಗೊಳಿಸುವುದು ಅಲ್ಲಿನ ಭಿಕ್ಕು ಸಮೂಹದ ಮತ್ತು ಅವರ ಗುರು ಭಿಕ್ಕುಗಳ ಆಶಯ. ಅಂದ ಮೇಲೆ ಈ ಕೈ ಬರಹದ ಪೋನ್ ಅವರ ನೇರ ಸಂಪರ್ಕವೊ ಅಥವಾ ಪರೋಕ್ಷದ್ದೋ ಗೊತ್ತಾಗಲಿಲ್ಲ. ಆದರೂ ಅದನ್ನು ನೋಡುತ್ತಿದ್ದಂತೆ ಯಾಕೆ ಒಂದು ಬಾರಿ ಪೋನು ಮಾಡಿ ನೋಡಬಾರದು? ಅನಿಸಿತು. ಅವರೇನು ನಿಜಕ್ಕೂ ಸೀರಿಯಸ್ಸಾಗಿ ಹೇಳಿದ್ದರೊ ಇಲ್ಲವೊ..ತಾನು ಸಂಪರ್ಕಿಸುವುದು ಸರಿಯೊ, ಅಲ್ಲವೊ ಎನ್ನುವ ಜಿಜ್ಞಾಸೆಯಲ್ಲಿ ಕೆಲ ಹೊತ್ತು ಮುಳುಗಿಹೋಗಿ ಚಿಂತನೆ ನಡೆಸಿತ್ತು ಶ್ರೀನಾಥನ ಮನ.
ಯಾಕೊ ಮಾಂಕ್ ಸುಚರಿತ್ ರನ್ನು ಒಂದು ಬಾರಿ ಸಂಪರ್ಕಿಸಿ ನೋಡಬೇಕೆಂಬ ಪ್ರಲೋಭನೆ ಬಲವಾಗುತ್ತ ಹೋಯ್ತು ಶ್ರೀನಾಥನಿಗೆ. ಏನಾಗಲಿ ಬಿಡಲಿ ಒಂದು ಬಾರಿ ಸಂಪರ್ಕಿಸುವುದರಿಂದ ಕಳೆದುಕೊಳ್ಳುವುದಾದರೂ ಏನು? ಆವರಾಡಿದ್ದ ಮಾತುಗಳನ್ನು ನೋಡಿದರೆ ಏನಾಗುವುದೆಂದು ಅವರಿಗೆ ಮೊದಲೆ ಗೊತ್ತಿದ್ದ ಹಾಗೆ, ಭವಿಷ್ಯ ನುಡಿಯುವವರಂತೆ ಹೇಳಿದ ಹಾಗಿತ್ತು. ಅವರ ನಿಖರ, ಆತ್ಮವಿಶ್ವಾಸದ ದನಿ ನುಡಿದಿದ್ದಕ್ಕೆ ಸರಿಯಾಗಿ ಎರಡು ಪ್ರಮುಖ ಸಂಗತಿಗಳು ಘಟಿಸಿವೆ.. ಇವೊಂದು ರೀತಿಯ ಎಚ್ಚರಿಕೆಯ ಗಂಟೆಯಿದ್ದ ಹಾಗಿರಬಹುದೇ? ಈಚಿನ ದಿನಗಳಲ್ಲಿ ತನ್ನ ಬದುಕಿನಲ್ಲಾಗುತ್ತಿರುವ ಏರಿಳಿತದ ಜಂಜಾಟ, ಜಂಜಡಕ್ಕೆಲ್ಲ ಏನೊ ತನ್ನರಿವನ್ನೆ ಮೀರಿಸಿದ ಕಾರಣವಿರಬಹುದೆ? ಈ ಭಿಕ್ಕುವಿನ ಸಂಸರ್ಗದಲ್ಲಿ ಅದಕ್ಕೊಂದು ಪರಿಹಾರ ಕಾಣಿಸಬಹುದೆ? ಎಂದೆಲ್ಲ ಮಥಿಸುತ್ತಿದ್ದ ಹೊತ್ತಿನಲ್ಲಿಯೆ, 'ಆದದ್ದಾಗಲಿ, ಒಂದು ಬಾರಿ ಸಂಪರ್ಕಿಸಿಬಿಡುವುದೆ ಸರಿ' ಎಂಬ ನಿರ್ಧಾರಕ್ಕೆ ಆಗಲೆ ಬಂದುಬಿಟ್ಟಿತ್ತು ಅವನ ಮನಸ್ಸು. ಆ ಮನಸತ್ವವಿನ್ನು ಪ್ರಬಲವಾಗಿರುವಾಗಲೆ, ಆ ಹೊತ್ತಿನ ಪ್ರೇರಣೆಯ ಬಿಸಿ ಕರಗಿ ಆರಿ ಹಗುರವಾಗಿ ಹೋಗುವ ಮೊದಲೆ ಕರೆ ಮಾಡಿ ನೋಡಿಬಿಡುವುದು ಒಳಿತೆನಿಸಿ, ಅದೆ ಗಳಿಗೆಯಲ್ಲೆ ಅದರಲ್ಲಿದ್ದ ನಂಬರಿಗೆ ಪೋನ್ ಮಾಡಿದ್ದ. ಅಚ್ಚರಿಯೆಂಬಂತೆ ಆ ಕರೆ 'ವಾಟ್ ಪಃ ನಾಂಚಟ್' ಮೊನೆಸ್ಟರಿಗೆ ಸೇರದ ಮತ್ತಾವುದೊ ತಾಣಕ್ಕೆ ಸೇರಿದ ನಂಬರಾಗಿತ್ತು. ಸುದೈವಕ್ಕೆ ನಂಬರನ್ನು ಎತ್ತಿಕೊಂಡವ ಇಂಗ್ಲೀಷ್ ಬಲ್ಲವನಾದ ಕಾರಣ ಸ್ವಲ್ಪ ಮಟ್ಟಿಗಿನ ಸಂಭಾಷಣೆ ಸಾಧ್ಯವಾಗಿತ್ತು..
' ಹಲೋ...ಇಸ್ ಇಟ್ ವಾಟ್ ಪಃ ನಾಂಚಟ್ ಇಂಟರ್ನ್ಯಾಶನಲ್ ಫಾರೆಸ್ಟ್ ಮೊನೆಸ್ಟರಿ?'
' ನೋ ಸಾರ್ ದಿಸ್ ಇಸ್ ನಾಟ್ ... ಮೇ ಐ ನೋ ವೂಂ ಯು ಆರ್ ಲುಕಿಂಗ್ ಫಾರ್..?'
' ಒಹ್! ಇದು ಮೊನೆಸ್ಟರಿಯಲ್ಲವೆ ? ಮತ್ತೆ ಮಾಂಕ್ ಸುಚರಿತ್ ಯಾಕೆ ಈ ಪೋನ್ ನಂಬರು ಕೊಟ್ಟರು - ಸಂಪರ್ಕಿಸಲಿಕ್ಕೆ? '
'ಮಾಂಕ್ ಸುಚರಿತ್...? ಓಹ್! ಮಾಂಕ್ ಸುಚರಿತ್ ಸಾಕೇತ್! ಅಂದ ಹಾಗೆ ಮೊದಲನೆಯದಾಗಿ ಮೊನೆಸ್ಟರಿಯಲ್ಲಿ ಪೋನ್ ಬಳಸುವುದನ್ನು ಇಷ್ಟಪಡುವುದಿಲ್ಲ. ಆದ ಕಾರಣ ಅಲ್ಲಿ ಪೋನ್ ಇಲ್ಲ.. ಅದರಿಂದಾಗಿಯೆ ಇಲ್ಲಿನ ನಮ್ಮ ಪೋನ್ ಬಳಸುತ್ತಾರೆ ತೀರಾ ಬೇಕೆನಿಸಿದಾಗ..'
' ಅದು ಸರಿ.. ಆದರೆ ನಾನೀಗ ಮಾಂಕ್ ಸುಚರಿತ್ ಹತ್ತಿರ ಮಾತನಾಡಬೇಕಲ್ಲ? ಅವರು ಇಲ್ಲೆ ಸಿಕ್ಕುತ್ತಾರ? ' ಕೇಳಿದ್ದ ಶ್ರೀನಾಥ ಅರೆ ಉತ್ಸಾಹದ ದನಿಯಲ್ಲಿ.
'ಮಾಂಕ್ ಸಾಕೇತ್ ಪ್ರತಿದಿನ ಐದು ಗಂಟೆಗೆ ಬರುತ್ತಾರೆ - ಪ್ರತಿದಿನದ ಪ್ರವಚನ ಮತ್ತು ಸರಳ ಧ್ಯಾನದ ಕಲಿಸುವಿಕೆಯ ಗುರುವಾಗಿ...ಆದರೆ ತಮ್ಮ ಕೆಲಸ ಮುಗಿಯುತ್ತಿದ್ದಂತೆ ಹೊರಟುಬಿಡುತ್ತಾರೆ ಬಂದ ಹಾದಿಯಲ್ಲೇ, ಅದೆ ಕಾಲ್ನಡಿಗೆಯಲ್ಲೇ.. ಆ ಹೊತ್ತಿನಲ್ಲಿ ಬೇಕಾದರೆ ಸಿಗಬಹುದು...'
' ಹಾಗಾದರೆ ಇವತ್ತು ಅವರು ಬರುತ್ತಿದ್ದ ಹಾಗೆ ಕುನ್. ಶ್ರೀನಾಥ ಅನ್ನುವವರು ಪೋನ್ ಮಾಡಿದ್ದರೆಂದು ಹೇಳುತ್ತಿರಾ? ನಾನು ಮತ್ತೆ ಆರು ಗಂಟೆಯ ಹೊತ್ತಿಗೆ ಇದೆ ನಂಬರಿಗೆ ಪೋನ್ ಮಾಡುತ್ತೇನೆ...'
'ಅವರು ಬರುತ್ತಿದ್ದ ಹಾಗೆಯೆ ಖಂಡಿತ ಹೇಳುತ್ತೇನೆ...ನಿಮ್ಮ ಇ ಮೇಯಿಲ ಐಡಿ ಕೊಟ್ಟಿರಿ.. ಅವರಿಗೆ ನಿಮ್ಮ ಕರೆಯನ್ನು ಸ್ವೀಕರಿಸಬೇಕೆಂದಿದ್ದರೆ ಯಾವ ವೇಳೆಗೆ ಸಂಪರ್ಕಿಸಬಹುದೆಂದು ಸುದ್ದಿ ಕಳಿಸುತ್ತಾರೆ...'
ಸರಿಯೆಂದು ಅವರಿಗೆ ಇ-ಮೆಯಿಲ್ ಐಡಿ ನೀಡಿ ಪೋನಿಟ್ಟ ಶ್ರೀನಾಥ. ಆದರು ಅವರಿಂದ ಸುದ್ದಿ ಬರಬಹುದೆಂದು ಅವನಿಗನಿಸಿರಲಿಲ್ಲ... ಏನೊ ಸೌಹಾರ್ದಕ್ಕೆ ಕಾರ್ಡು ನೀಡಿದ್ದರೇನೊ..? ಸರಿ ಇನ್ನು ಕೆಲವೆ ಗಂಟೆ ತಾನೇ - ಕಾದಿರಲೇನು ಅಡ್ಡಿಯಾಗದೆನಿಸಿ ಮಿಕ್ಕ ಮಿಂಚಂಚೆಗಳತ್ತ ಗಮನ ಹರಿಸಿದ್ದ ಶ್ರೀನಾಥ.
ಆದರೆ ಅವನ ಅನಿಸಿಕೆಗೆ ವ್ಯತಿರಿಕ್ತವಾಗಿ, ಕೆಲ ನಿಮಿಷ ಮೊದಲೆ ಮಿಂಚಂಚೆ ಬಂದು ಕುಳಿತಿತ್ತು ಮಾಂಕ್ ಸುಚರಿತ್ ಕಡೆಯಿಂದ - ಆರು ಗಂಟೆಯ ನಂತರ ಪೋನ್ ಮಾಡಲು ಸಂದೇಶ ನೀಡುತ್ತ...!
ಸಡಿಲವಾಗುತ್ತಿದ್ದ ಆಸಕ್ತಿಯನ್ನು ಮತ್ತೆ ಕೆರಳಿಸಿ ಮನದಾವರಣದಿಂದ ಜಾರಿಹೋಗುತ್ತಿದ್ದ ಆ ಹವಣಿಕೆಯನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು ಆ ಮಿಂಚಂಚೆ. ಅದರಲ್ಲೂ ಹೆಚ್ಚಿನ ವಿವರಗಳೇನೂ ಇರಲಿಲ್ಲ - ಸಂಪರ್ಕಿಸುವ ಸಮಯದ ಇಂಗಿತವನ್ನು ತೋರಿಸಿದ್ದುದನ್ನು ಬಿಟ್ಟರೆ. ಆದರೆ ಆರಂಭದಲ್ಲಿ ಮಾತ್ರ, 'ಕುನ್. ಶ್ರೀನಾಥ, ಆ ದಿನ ಸೂಚ್ಯವಾಗಿ ನಾನಿತ್ತ ಇಂಗಿತವನ್ನು ಸರಿಯಾಗಿ ವಿಶ್ಲೇಷಿಸಿ ತನ್ಮೂಲಕ ನನ್ನನ್ನು ಸಂಪರ್ಕಿಸಲೆತ್ನಿಸಿದ್ದಕ್ಕೆ ಅಭಿನಂಧನೆಗಳು...' ಮತ್ತು ಮುಂದಿನ ಸಾಲಲ್ಲೆ, 'ಆರು ಗಂಟೆಯ ನಂತರ ಕರೆ ಮಾಡಿ - ಈ ದಿನದ ನನ್ನ ಪ್ರವಚನ ಮುಗಿದ ಮೇಲೆ. ವಿವರವಾಗಿ ಮಾತನಾಡೋಣ' ಎಂದು ಮುಕ್ತಾಯವಾಗಿತ್ತು. ಕೆಳಗೆ ಸುಚರಿತ್ ಸಾಕೇತ್ ಎಂದು ಹೆಸರಿದ್ದುದನ್ನು ನೋಡಿ ಆಗಲೆ ಮಾತನಾಡಿದ ವ್ಯಕ್ತಿ ಯಾಕೆ ಮಾಂಕ್ ಸಾಕೇತ್ ಎಂಬ ಹೆಸರನ್ನು ಬಳಸುತ್ತಿದ್ದನೆಂದು ಅರಿವಾಗಿತ್ತು - ಬಹುಶಃ ಇವರಿಗೆಲ್ಲ ಪರಿಚಿತ ಹೆಸರು ಮಾಂಕ್ ಸಾಕೇತೆ ಇರಬಹುದೇನೊ...ಆದರೆ ಹೆಚ್ಚಿನ ವಿವರದ ಅಗತ್ಯವಿಲ್ಲದೆ ಅವನ ಹೆಸರಿಂದಲೆ ಅಂದಿನ ವಿವರವನ್ನು ಕರಾರುವಾಕ್ಕಾಗಿ ನೆನಪಿಟ್ಟುಕೊಂಡು ಮಾರುತ್ತರ ಬರೆದ ಅವರ ನೆನಪಿನ ಶಕ್ತಿ ಅಗಾಧವಿರಬೇಕೆಂದೆನಿಸಿತ್ತು.
ಈ ನಡುವಲ್ಲೆ ನಿಧಾನವಾಗಿ ಒಬ್ಬೊಬ್ಬರಾಗಿ ಆಫೀಸಿಗೆ ಬರಲು ಆರಂಭಿಸಿದ್ದರೂ ಮುಕ್ಕಾಲು ಪಾಲು ಇನ್ನು ಖಾಲಿ ಖಾಲಿಯೆ ಇತ್ತು. ಹೊರಗಿನ ಮೋಡದಿಂದಾವರಿಸಿದ ವಾತಾವರಣ ಇನ್ನು ಹಾಗೆಯೇ ಇದ್ದುದು ಮಾತ್ರವಲ್ಲದೆ ತುಂತುರು ಮಳೆ ನಿಲ್ಲದೆ ಸುರಿದೆ ಇತ್ತು. ಸದ್ಯಕ್ಕೆ ಹಿಂದಿನ ದಿನದ ರೌದ್ರಾವತಾರವಿರದ ಕಾರಣ ಮತ್ತಷ್ಟು ಅಸ್ತವ್ಯಸ್ತವಾಗುವ ಸಾಧ್ಯತೆ ಇರದಿದ್ದರೂ, ಈಗಾಗಲೆ ಉಂಟಾಗಿದ್ದ ಪರಿಸ್ಥಿತಿಯ ಅಡಚಣೆಗಳೆ ಹತೋಟಿಗೆ ಬರಲು ಒಂದೆರಡು ದಿನಗಳಂತೂ ಹಿಡಿಯುತ್ತಿತ್ತು. ಪ್ರಾಜೆಕ್ಟಿನ ಗುಂಪಿನಲ್ಲೂ ಯಾರು ಬಂದಂತೆ ಕಾಣಲಿಲ್ಲ ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಬಾಗಿಲಿನ ಹತ್ತಿರ ಸೌರಭನ ಮುಖ ಕಂಡಿತ್ತು. ಹೇಗೊ ಹೆಣಗಾಡಿಕೊಂಡೆ ಆಫೀಸಿಗೆ ತಲುಪಿರಬೇಕು - ಬಹುಶಃ ನೇರ ಟ್ರೈನಿನ ಸಹಾಯದಿಂದ ಬಂದಿರಬಹುದು ಕುನ್. ರತನ ಮಾಡಿದ ಹಾಗೆ. ಬಂದವನೆ ಅವನು ಮೊದಲು ವಿಚಾರಿಸಿಕೊಂಡಿದ್ದು ಶ್ರೀನಾಥನ ಆರೋಗ್ಯ ಹೇಗಿತ್ತೆಂದು. ಹಿಂದಿನ ದಿನ ಆ ಕಾರಣದಿಂದಲೆ ಸಿಯಾಮ್ ಥಿಯೇಟರಿಗೆ ಬರಲಿಲ್ಲವೆಂದು ಗೊತ್ತಾಗಿದ್ದ ಕಾರಣ ಅದನ್ನೆ ನೇರವಾಗಿ ವಿಚಾರಿಸಿಕೊಂಡಿದ್ದ. ಸದ್ಯ ಕಾಳಜಿಯಿಂದ ವಿಚಾರಿಸಿಕೊಳ್ಳುವವರೊಬ್ಬರು ಇಲ್ಲೂ ಇರುವರಲ್ಲ ಎಂದುಕೊಳ್ಳುತ್ತಲೆ ಅವನ ಜತೆ ಮಾತಿಗಿಳಿದ ಶ್ರೀನಾಥ. ಹೆಚ್ಚು ಕಡಿಮೆ ಪ್ರವಾಸದ ಮಧುರ ಅನುಭೂತಿಯನ್ನು ಮೆಲುಕು ಹಾಕುತ್ತಿದ್ದ ಸೌರಭನ ಮಾತಿನಿಂದ ಒಂದಂತೂ ಎದ್ದು ಕಾಣುತ್ತಿತ್ತು - ಎಲ್ಲರೂ ಅದನ್ನು ಖುಷಿಯಾಗಿ ಅನುಭವಿಸಿ ಮೆಚ್ಚಿಕೊಂಡಿದ್ದಾರೆಂದು; ಬಹುಶಃ ತನ್ನೊಬ್ಬನನ್ನು ಹೊರತುಪಡಿಸಿ. ಅದೆ ಹೊತ್ತಿನಲ್ಲಿ ತಾಳ ಹಾಕುತ್ತಿದ್ದ ಹೊಟ್ಟೆಗೆ ಏನು ಮಾಡುವುದೆಂದುಕೊಳ್ಳುತ್ತಿರುವಾಗಲೆ ಟ್ರೈನ್ ಸ್ಟೇಷನ್ನಿನ್ನ ಹತ್ತಿರದ ಅಂಗಡಿಯಿಂದ ತಂದಿದ್ದ ಸ್ಯಾಂಡ್ವಿಚ್ಚುಗಳನ್ನು ಹೊರತೆಗೆದಿದ್ದ ಸೌರಭ. ಮಳೆಯ ಪ್ರವಾಹದ ಪ್ರತಾಪ ಕಂಡೆ ತಿನ್ನಲು ಜತೆಗೇನಾದರೂ ಒಯ್ಯುವುದು ವಾಸಿಯೆನಿಸಿ ಹತ್ತಿರದಲ್ಲಿ ಸಿಕ್ಕದ್ದನ್ನೆ ಕಟ್ಟಿಸಿಕೊಂಡು ಬಂದಿದ್ದ. ಅದರ ದೆಸೆಯಿಂದ ಸದ್ಯದ ಹಸಿವಿನ ಪಾಡು ನಿವಾರಣೆಯಾಗಿ ಇಬ್ಬರು ಹಾಗೆ ಮಾತನಾಡಿಕೊಂಡೆ ಪ್ಯಾಂಟ್ರಿಯ ಮೂಲೆಗೆ ಹೋಗಿ ರೆಡಿಮೇಡ್ ಪೊಟ್ಟಣಗಳಲಿದ್ದ ಪುಡಿಯನ್ನು ಬಿಸಿ ನೀರಿಗೆ ಸುರಿದು ಧಿಡೀರ್ ಕಾಫಿಯನ್ನು ತಯಾರಿಸಿ ಕುಡಿಯತೊಡಗಿದರು. ಅದನ್ನು ಗುಟುಕರಿಸುತ್ತಲೆ ಸೌರಭನಿದ್ದುಕೊಂಡು,
'ಶ್ರೀನಾಥ ಸಾರ್..ಪ್ರಾಜೆಕ್ಟೆಲ್ಲ ಮುಗಿಯುತ್ತಾ ಬಂತು..ಇನ್ನೇನು ಪ್ಯಾಕ್ ಮಾಡಿ ಹೊರಡುವ ಸಮಯವೂ ಹತ್ತಿರವಾಗುತ್ತಿದೆ..ನನದೂ, ವರ್ಷದ ಕೊನೆಗೆ ಬಳಸಬೇಕಾದ ಒಂದೆರಡು ರಿಪೋರ್ಟುಗಳನ್ನು ಮುಗಿಸಿಬಿಟ್ಟರೆ ಎಲ್ಲಾ ಆದ ಹಾಗೆ ಲೆಕ್ಕ...'
' ಹೌದು ಸೌರಭ್.. ಆಲ್ ಗ್ರೇಟ್ ಥಿಂಗ್ಸ್ ಮಸ್ಟ್ ಕಂ ಟು ಎನ್ ಎಂಡ್ ಅನ್ನುವ ಹಾಗೆ ನಮ್ಮ ಈ ಪ್ರಾಜೆಕ್ಟಿನ ಕಥೆಯೂ ಸಹ. ಐ ಹೋಪ್ ಇಟ್ ವಾಸ್ ಎ ಗುಡ್ ಎಕ್ಸ್ಪೀರಿಯನ್ಸ್ ಫಾರ್ ಯು..ಅಂಡ್ ಯೂ ರಿಯಲಿ ಪ್ಲೇಯ್ಡ್ ಎ ಗ್ರೇಟ್ ರೋಲ್ ಇನ್ ದ ಸಕ್ಸಸ್ಸ್ ಆಫ್ ದಿಸ್ ಪ್ರಾಜೆಕ್ಟ್ ...ಇಮ್ಮೆನ್ಸ್ ಆಫ್ ಥ್ಯಾಂಕ್ಸ್ ಫಾರ್ ದಟ್...' ನಿಜವಾದ ಕಳಕಳಿಯ ದನಿಯಲ್ಲಿ ಉತ್ತರಿಸಿದ್ದ ಶ್ರೀನಾಥ.
' ನಾಟ್ ಅಟ್ ಆಲ್ ಸಾರ್.. ಐ ಲರ್ಂಟ್ ಎ ಲಾಟ್ ಇನ್ ದಿಸ್ ಪ್ರಾಜೆಕ್ಟ್.. ಇಲ್ಲಿ ಕಲಿತಿದ್ದು ಸದಾ ನನ್ನ ಜತೆಗಿರಲಿದೆ ಇನ್ನು ಮುಂದೆಯೂ ಸಹ.. ಇಟ್ ವಾಸ್ ಎ ಐ ಓಪನರ್ ಫಾರ್ ಮೀ' ಎಂದಿದ್ದ ಅಷ್ಟೆ ಕಳಕಳಿ ಮತ್ತು ಪ್ರಾಮಾಣಿಕತೆಯ ದನಿಯಲ್ಲಿ.
' ಮುಂದಿನ ಪ್ರಾಜೆಕ್ಟ್ ಅಸೈನ್ಮೆಂಟ್ ಬಗ್ಗೆ ಏನಾದರೂ ಗೊತ್ತಾಯಿತೆ?' ವಿಚಾರಿಸಿದ ಶ್ರೀನಾಥ.
ಈ ಪ್ರಾಜೆಕ್ಟುಗಳ ಹಣೆಬರಹವೇ ಹೀಗೆ - ಎಲ್ಲಾ ಒಂದು ತಂಡವಾಗಿ ಕೆಲಸ ಮಾಡುತ್ತ ಹೊಂದಿಕೊಂಡು ತೀರಾ ಹತ್ತಿರದವರಂತೆ ಅನುಭೂತಿಯನ್ನನುಭವಿಸುತ್ತ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಪ್ರಾಜೆಕ್ಟ್ ಮುಗಿವ ಹೊತ್ತಿನಲ್ಲಿಯಂತು ಎಲ್ಲರ ನಡುವಿನ ತಂಡ ಬಾಂಧವ್ಯ ಅತ್ಯುನ್ನತ ಮಟ್ಟದಲ್ಲಿರುತ್ತದೆ. ವಿಪರ್ಯಾಸವೆಂದರೆ ಆ ಹೊತ್ತಿಗೆ ಸರಿಯಾಗಿ ಪ್ರಾಜೆಕ್ಟು ಮುಗಿದು ಹೋಗುತ್ತಿರುವ ಅದೆ ಕಾರಣದಿಂದಾಗಿ ಇಡಿ ತಂಡವನ್ನು ವಿಸರ್ಜಿಸಬೇಕಾದ ಸಮಯ ಬಂದು ಬಿಟ್ಟಿರುತ್ತದೆ. ಎಷ್ಟೊ ಭಾವನಾತ್ಮಕ ಸದಸ್ಯರುಗಳಿಗೆ ಇದೊಂದು ದೊಡ್ಡ ಆಘಾತದಂತೆಯೆ ಭಾಸವಾಗಿ, ಪ್ರಾಜೆಕ್ಟು ಬಿಟ್ಟು ಹೋಗಬೇಕಾದ 'ಶಾಖ್'ನಿಂದಾಗಿ ಅಳಲಾರಂಭಿಸುವವರನ್ನು ಕಂಡಿದ್ದ ಶ್ರೀನಾಥ. ಮೊದಮೊದಲು ಪ್ರಾಜೆಕ್ಟಿಗೆ ಬರಲು ಅಳುಕುತ್ತ, ಅಂಜುತ್ತ, ಹಿಂಜರಿದವರೂ ಪ್ರಾಯಶಃ ಅವರುಗಳೆ ಎನ್ನುವುದು ಬೇರೆ ವಿಷಯ. ಆದರೆ ಇದೆ ಪ್ರಾಜೆಕ್ಟ್ ಜೀವನದ ಪರಮ ಸತ್ಯ - ಚೆನ್ನಾಗಿ ನಡೆದಿರಲಿ ಅಥವಾ ಕೆಟ್ಟದಾಗಿ ನಡೆದಿರಲಿ ಒಂದಲ್ಲ ಒಂದು ದಿನ ಮುಕ್ತಿ ಘೋಷಿಸಿ ಮುಕ್ತಾಯ ಗೀತೆ ಹಾಡಬೇಕು. ನಿಜ ಹೇಳಬೇಕೆಂದರೆ ಚೆನ್ನಾಗಿ ನಡೆಯದ ಪ್ರಾಜೆಕ್ಟುಗಳೆ, ಅದೆ ಕಾರಣದಿಂದಾಗಿ ವಿಸ್ತರಿಸಿಕೊಂಡು ಹೆಚ್ಚಿನ ಸಮಯ, ಹಣ, ಯತ್ನಗಳ ಪೋಲಾಗಿಸುವುದಾದರೂ - ತಂಡ ಹೆಚ್ಚಿನ ಕಾಲ ಜತೆಯಾಗಿರಲು ಸಹಕರಿಸುತ್ತವೆ; ಆದರೆ ಆ ಫಲಿತದ ದೆಸೆಯಿಂದಲೆ ಏನೊ - ತಂಡದ ಸದಸ್ಯರು 'ಸದ್ಯ , ಪ್ರಾಜೆಕ್ಟ್ ಮುಗಿದರೆ ಸಾಕಪ್ಪ..' ಎಂದು ಕಾಯುತ್ತಿರುತ್ತಾರೆ. ಎಲ್ಲಾ ಯಶಸ್ವಿಯಾಗಿ ಚೆನ್ನಾಗಿ ನಡೆದೆ ಮುಕ್ತಾಯವಾದರೂ - ಕನ್ಸಲ್ಟೆಂಟುಗಳ ಚಿಂತೆಯೆಂದರೆ , 'ಮುಂದಿನ ಪ್ರಾಜೆಕ್ಟ್ ಯಾವುದು ಮತ್ತು ಎಲ್ಲಿ?' ಎಂದು. ಆ ಹಿನ್ನಲೆಯಲ್ಲೆ ಮುಂದಿನ ಪ್ರಾಜೆಕ್ಟ್ ಅಸೈನ್ಮೆಂಟ್ ಕುರಿತಾದ ಪ್ರಶ್ನೆ ಕೇಳಿದ್ದುದು ಶ್ರೀನಾಥ.
'ನೆಕ್ಸ್ಟ್ ಪ್ರಾಜೆಕ್ಟಿನ ಬಗ್ಗೆ ಇನ್ನು ಏನು ಗೊತ್ತಾಗಿಲ್ಲ ಶ್ರೀನಾಥ್ ಸರ್.. ನಿಮಗೆ ಗೊತ್ತಿದೆಯಲ್ಲ? ಅಲ್ಲಿ ಹೋಗುವತನಕ ಪರಿಸ್ಥಿತಿ ಏನೆಂದು ಗೊತ್ತಾಗುವುದಿಲ್ಲ. ಅಲ್ಲಿ ಹೋದ ಮೇಲೂ ಸರಿಯಾದ ಪ್ರಾಜೆಕ್ಟ್ ಸಿಗಲು ಒದ್ದಾಡಬೇಕು.. ಒದ್ದಾಟವೇನು ಬಂತು? ಸಿಕ್ಕಿದ್ದು ಆಯ್ದುಕೊಳ್ಳಬೇಕು ಇಲ್ಲವಾದರೆ ಅದನ್ನು ಬೇರೆಯವರು ಆಯ್ದುಕೊಂಡುಬಿಡುತ್ತಾರೆ.. ಇನ್ನು ದೊಡ್ಡ ಪ್ರಾಜೆಕ್ಟುಗಳ ಕಥೆ ಮಾತನಾಡುವಂತೆಯೆ ಇಲ್ಲ.. ರಿಸೋರ್ಸ್ ಮ್ಯಾನೇಜರುಗಳ ಜತೆ ಲಾಬಿಯಲ್ಲಿ ಆಗಲೆ ಇನ್ಯಾರದೋ ಕೈ ಸೇರಿ ಹೋಗಿರುತ್ತದಲ್ಲ? ಅದಕ್ಕೆ ಈಗದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಇಲ್ಲಿನ ಕೆಲಸ ಮುಗಿಸಿ ಹೊರಡುತ್ತೇನೆ..ಮಿಕ್ಕಿದ್ದೆಲ್ಲ ಅಲ್ಲಿ ಹೋದ ಮೇಲೆ ನೋಡಿಕೊಂಡರಾಯಿತು...'
ಅವನನಿಸಿಕೆಗೆ ಸಹಮತವೆನ್ನುವಂತೆ ತಲೆಯಾಡಿಸುತ್ತ, ' ಅದೇನೊ ನಿಜವೆ.. ಈಗಲೆ ಚಿಂತಿಸಿದರೂ ಆಗುವ ಫಲಿತವೇನು ಬದಲಾಗುವುದಿಲ್ಲ..ಬದಲಿಗೆ ಇಲ್ಲಿ ಮಿಕ್ಕಿರುವ ಕೆಲವೆ ದಿನಗಳನ್ನು ಚೆನ್ನಾಗಿ ಎಂಜಾಯ್ ಮಾಡಿಕೊಂಡು ರಿಲಾಕ್ಸ್ ಮಾಡಿ ರೀಚಾರ್ಜ್ ಮಾಡಿಕೊಳ್ಳಲು ಬಳಸುವುದು ಬೆಟರ್..'
'ಶ್ರೀನಾಥ ಜಿ, ನೀವು ರಿಲಾಕ್ಸ್ ಅಂದ ಕೂಡಲೆ ನೆನಪಾಯ್ತು.. ಮುಂದಿನ ವಾರದ ಕೊನೆಯಲ್ಲಿ ಮೂರುದಿನ ಸಾಲಾಗಿ ಪಬ್ಲಿಕ್ ಹಾಲಿಡೆ ಇದೆ... ನನ್ನದು ಎರಡು ದಿನ ಲೀವ್ ಮಾತ್ರ ಬಾಕಿಯಿದೆ.. ಇವೆರಡು ಸೇರಿಸಿ ಒಂದು ವಾರ ಒಂದು ದೊಡ್ಡ ಟ್ರಿಪ್ಪ್ ಹಾಕಿಕೊಂಡು ಬರುತ್ತೇನೆ - ಲಾವೋಸ್, ಕಂಬೋಡಿಯಾ ಸೇರಿದಂತೆ.. ಅದರಲ್ಲೂ ಅಂಗ್ ಕೋರ್ ವಾಟ್ ನೋಡಬೇಕೆಂದು ತುಂಬಾ ದಿನಗಳಿಂದ ಆಸೆಯಿದೆ..'
'ನಾನು ಮರೆತೆಬಿಟ್ಟಿದ್ದೆ ದಟ್ ಇಸ್ ಎ ಗುಡ್ ಐಡಿಯಾ.. ಮತ್ತೆ ಈ ಕಡೆಗೆಲ್ಲ ಬರಲು ಆಗುವುದೋ ಇಲ್ಲವೊ..ಯಾರಿಗೆ ಗೊತ್ತು? ಒಬ್ಬನೆ ಹೋಗುತ್ತಿಯಾ ಅಥವಾ ಜತೆಗ್ಯಾರಾದರೂ ಇದ್ದಾರ ?'
' ಕೆಲವು ಕೀ ಯೂಸರುಗಳು ಆಗಲೆ ಪ್ಲಾನ್ ಮಾಡಿಕೊಂಡಿದ್ದಾರೆ.. ಅವರ ಜತೆಗೆ ಹೋಗಿ ಬರುವ ಅಂತ..'
ಸೌರಭನ ಕೆಲವು ಸಾಮರ್ಥ್ಯಗಳಲ್ಲಿ ಪಬ್ಲಿಕ್ ರಿಲೇಷನ್ನು ಒಂದು - ಅದರಿಂದಾಗಿಯೆ ಎಲ್ಲರ ಜತೆ ಸುಲಭವಾಗಿ ಹೊಂದಿಕೊಳ್ಳುತ್ತಾನೆ ಎಂದುಕೊಂಡ ಶ್ರೀನಾಥ ಮನಸಿನಲ್ಲೆ.
' ಓಕೆ ಹ್ಯಾವ್ ಎ ಗುಡ್ ಟ್ರಿಪ್.. ಬಂದ ಮೇಲೆ ಪೋಟೊ ತೋರಿಸು..' ಎಂದವನೇ ತನ ಸೀಟಿನತ್ರ ನಡೆದಿದ್ದ ಶ್ರೀನಾಥ. ಮನದಲ್ಲಿ ಮಾತ್ರ 'ಆ ವಾರದುದ್ದದ ರಜೆಯಲ್ಲಿ ತಾನೂ ಏನಾದರೂ ಮಾಡಬಹುದೆ?' ಎಂದು ಆಲೋಚಿಸುತ್ತಿತ್ತು ಮನಸ್ಸು. ಸೀಟಿಗೆ ಬಂದು ಕೂತರೂ ಮಾಡಲು ಬೇರೇನು ಕೆಲಸ ಹೆಚ್ಚಿರದಿದ್ದ ಕಾರಣ ಅಪೂರ್ಣವಾಗಿದ್ದ ಡಾಕ್ಯುಮೆಂಟುಗಳನ್ನು ಪೂರ್ಣಗೊಳಿಸುತ್ತ ಕುಳಿತ ಶ್ರೀನಾಥ...
ಆ ಲೋಕದಲ್ಲೇ ಮುಳುಗಿದ್ದವನಿಗೆ ಎಚ್ಚರವಾಗಿದ್ದು ಕಂಪ್ಯೂಟರಿನ ಪ್ಲಾನರಿನಿಂದ ಚಂಗನೆ ನೆಗೆದೆದ್ದು ಬಂದ ನೆನಪಿನ ಪಟ್ಟಿ ಆರು ಗಂಟೆಗೆ ಐದೇ ನಿಮಿಷ ಉಳಿದಿದೆಯೆಂಬುದನ್ನು ನೆನಪಿಸಿದಾಗಲೆ. ಇನ್ನು ಮಾಂಕ್ ಸುಚರಿತ್ ಸಾಕೇತರಿಗೆ ಕರೆ ನೀಡುವ ಸಮಯವಾಯ್ತೆಂದು ಮಿಕ್ಕೆಲ್ಲವನ್ನು ಸೇವ್ ಮಾಡಿ ಕಡತ ಮುಚ್ಚಿಟ್ಟು, ಆರು ಗಂಟೆ ದಾಟಿ ಐದು ನಿಮಿಷಗಳಾಗುತ್ತಲೆ ಮತ್ತದೆ ನಂಬರಿಗೆ ಕರೆ ಮಾಡತೊಡಗಿದ. ಕರೆಯ ಸಂಪರ್ಕವಾಗುತ್ತಿದ್ದಂತೆ ಅತ್ತಲಿಂದ ತೇಲಿ ಬಂದಿತ್ತು ಮಾಂಕ್ ಸಾಕೇತರ ಕಂಚಿನ ದನಿ -
'ಅಮಿತಾಭ...' ಎಂದು..
(ಇನ್ನೂ ಇದೆ)
_________________