ಕಥೆ: ಪರಿಭ್ರಮಣ..(50)
( ಪರಿಭ್ರಮಣ..49ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಅವನ ಮಾತಿಗೆ ತಕ್ಷಣ ಉತ್ತರಿಸದೆ ಬರಿಯ ಮುಗುಳ್ನಕ್ಕರು ಮಾಂಕ್ ಸಾಕೇತ್ .... ನಂತರ ತಮ್ಮಲ್ಲೆ ಹೇಳಿಕೊಳ್ಳುವವರಂತೆ, 'ಸರಿ..ಸರಿ..ಇಲ್ಲಿಂದಲೆ ಆರಂಭವಾಗಿ ಹೋಗಲಿ ಜ್ಞಾನೋದಯದ ಚೈತ್ರ ಯಾತ್ರೆ.. ಪರಿಭ್ರಮಣದಲ್ಲಿರುವ ಚಕ್ರಕ್ಕೆ ಯಾವುದು ಪ್ರಥಮ, ಯಾವುದು ಅಂತಿಮ? ಎಲ್ಲಾ ಬರಿಯ ಆರೋಹಣ ಅವರೋಹಣಗಳ ನಿರಂತರ ಆವರ್ತನ ತಾನೆ? ..' ಎನ್ನುತ್ತ ಮತ್ತವನ ಕಡೆ ತಿರುಗಿ ಅವನನ್ನೆ ಆಳವಾದ ಆದರೆ ಮೃದುಲ ದೃಷ್ಟಿಯಲ್ಲಿ ನೋಡುತ್ತ, ' ನಿಜ ಹೇಳಬೇಕೆಂದರೆ ಯಾರಲ್ಲೂ ಯಾವ ಅತೀತ ಶಕ್ತಿಗಳೂ ಇರುವುದಿಲ್ಲ.... ಅವರವರ ಸೀಮಿತ ಕ್ಷೇತ್ರದ ಪರಿಧಿಯೊಳಗೆ ಅವರದೆ ಆದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಸಮತೋಲಿತ ಮೊತ್ತವಷ್ಟೆ ಸಂಗ್ರಹಿತವಾಗಿರುತ್ತದೆ - ಯಾವುದೊ ಸಮಷ್ಟಿಯ ರೂಪದಲ್ಲಿ. ಅದರ ಕೆಲವು ಪ್ರತಿಫಲನಗಳು ಕೆಲವರ ಕಣ್ಣಿಗೆ ಶಕ್ತಿಯಾಗಿಯೊ, ಪವಾಡವಾಗಿಯೊ ಕಂಡರೆ ಮತ್ತೆ ಕೆಲವರಿಗೆ ಸಾಮಾನ್ಯವೆನಿಸಬಹುದು...' ಎಂದರು.
'ಮಾಸ್ಟರ, ಪ್ರತಿಯೊಂದು ಜೀವಿಯಲ್ಲೂ ಅದರಲ್ಲೂ ಮಾನವ ಜೀವಿಯ ವಿಷಯದಲ್ಲಿ ಈ ಶಕ್ತಿ ಸಾಮರ್ಥ್ಯಗಳು ಪ್ರತಿಯೊಬ್ಬರಲ್ಲೂ ಒಂದೆ ತರವಿರುವುದಿಲ್ಲ ಎಂದು ನಾನೂ ಒಪ್ಪುತ್ತೇನೆ...ಆದರೆ ನಾನೀಗ ಸಾಮಾನ್ಯ ಸ್ತರದ ವಿಷಯಗಳ ಮಾತನಾಡುತ್ತಿಲ್ಲ.. ಸಾಮಾನ್ಯರಲ್ಲಿರದ ಅತೀತ ಶಕ್ತಿಗಳ ವಿಷಯಕ್ಕೆ ಬಂದರೆ ಅದು ಸಹಜವಾಗಿ ಎಲ್ಲರಲ್ಲಿರುವ ಸ್ವತ್ತಲ್ಲ ಎಂಬುದನ್ನು ಒಪ್ಪಲೇಬೇಕಲ್ಲವೆ?' ಎಂದ ವಾದದ ಹುರುಪಿಗೆ ಸಿಕ್ಕಿ ಬಿದ್ದವನಂತೆ.
' ಅದೆಲ್ಲ ನೋಡುವವರ ತರ್ಕದ ಮೇಲೆ, ಗ್ರಹಿಕೆಯ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಕುನ್. ಶ್ರೀನಾಥ.. ಸಮಯ ಸಂಧರ್ಭಾನುಸಾರ ತಾರ್ಕಿಕವಾಗಿ ಆಲೋಚಿಸಿದಾಗ ಹೊಳೆಯುವ ಅದೆಷ್ಟೊ ವಿಷಯಗಳು, ಅದನ್ನೆಲ್ಲ ಪರಿಗಣಿಸದ ಅಗ್ರಾಹ್ಯ ಹಿನ್ನಲೆಯಿಂದ ನೋಡುವ ಸಾಮಾನ್ಯನ ಕಣ್ಣಿಗೆ ಅದ್ಭುತವಾಗಿ ಕಾಣಬಹುದು.. ಆದರೆ ಅದೆ ವಿಷಯವನ್ನು ಕಾಣುವ ಮನಶಾಸ್ತ್ರಜ್ಞನೊಬ್ಬ ಅದನ್ನು ವಿಶ್ಲೇಷಿಸಿ ನೋಡುವ ಪರಿಯೆ ಬೇರೆಯಾಗಿ ಅದರಲ್ಲೇನು ವಿಶೇಷ ಕಾಣದೆ ಇರಬಹುದು. ಸಾಮಾನ್ಯನು ನೋಡುವಾಗ ಪವಾಡವೆಂಬ ಗ್ರಹಿಕೆಯೆ ಚಾಲಕ ಶಕ್ತಿಯಾಗಿ ಎಲ್ಲವು ಪವಾಡದಂತೆ, ದೈವಿಕ ಶಕ್ತಿಯ ಪ್ರಭಾವದಂತೆ ಕಾಣಬಹುದು.. ತರಬೇತಾದ ಮನಸಿನ ವೈಜ್ಞಾನಿಕ ದೃಷ್ಟಿಕೋನದ ವ್ಯಕ್ತಿಯ ಗ್ರಹಿಕೆ ಅದನ್ನು ತಾರ್ಕಿಕವಾಗಿ ನೋಡುತ್ತ ಸುತ್ತಲ ಪರಿಸರದ ಆಗುಹೋಗುಗಳನ್ನೆಲ್ಲ ಮೇಳೈಸಿ ನಿರ್ಧಾರಕ್ಕೆ ಬರಲು ಯತ್ನಿಸುತ್ತದೆ.. ಮೊತ್ತದಲ್ಲಿ ಎರಡೂ ಕಡೆಗಳು ತಾವು ನಂಬಿದ ಗ್ರಹಿಕೆಯ ಕಡೆಗೆ ಹೆಚ್ಚೆಚ್ಚು ವಾಲುವುದರಿಂದ ಎರಡು ಬದಿಯಿಂದಲು ಕೆಲವು ಗ್ರಹಿಕೆಯ ಸೂಕ್ಷ್ಮಾಂಶಗಳು ನಿರ್ಲಕ್ಷಿತವಾಗುವುದು ಸಹಜ ಮತ್ತು ಅದೇ ಅವರವರ ನಂಬಿಕೆಯ ತಳಹದಿಯ ಪ್ರೇರಣಾಶಕ್ತಿ..'
'ಅಂದ ಮೇಲೆ ಎರಡೂ ಕಡೆಯ ಗ್ರಹಿಕೆಗಳಲ್ಲೂ ಸರಿಯಾದ ಅಂಶದ ಭಾಗವಿದ್ದಷ್ಟೆ ತಪ್ಪು ತಿಳುವಳಿಕೆಯ ಪರಿಮಾಣವೂ ಇದ್ದಂತಾಗುವುದಿಲ್ಲವೆ ? ಅದರರ್ಥ ಇಬ್ಬರ ಗ್ರಹಿಕೆಯೂ ಪೂರ್ತಿ ಸರಿಯಲ್ಲವೆಂದು, ಭಾಗಶಃ ಮಾತ್ರವೆ ಸರಿಯಿರಬಹುದೆಂದು ಹೇಳಿದಂತಲ್ಲವೆ? ಅಲ್ಲಿಗೆ ಇಬ್ಬರೂ ಸರಿ ಅಥವ ಇಬ್ಬರೂ ತಪ್ಪು ಅಥವ ಇಬ್ಬರೂ ಭಾಗಶಃ ಸರಿ/ ತಪ್ಪು ಎನ್ನುವ ವಿತಂಡವಾದಕ್ಕೆ ಸಿಕ್ಕಿಕೊಂಡಂತಾಗುವುದಿಲ್ಲವೆ? ' ವಾದದ ಸುರುಳಿಯನ್ನು ಜಾರಗೊಡದೆ ಮತ್ತೆ ಪ್ರಶ್ನಿಸಿದ್ದ ಶ್ರೀನಾಥ.
' ನಾನು ಹೇಳಿದ್ದು ಆ ಅರ್ಥದಲ್ಲಲ್ಲಾ ಕುನ್. ಶ್ರೀನಾಥ... ಪ್ರತಿಯೊಬ್ಬರ ತೀರ್ಮಾನಗಳು ಅವರವರ ಮನ ಪಕ್ವತೆಯ, ನಂಬಿದ ನಂಬಿಕೆಗಳ ಮತ್ತು ಸಾಂಧರ್ಭಿಕ ಸಾಕ್ಷ್ಯಾಧಾರಗಳ ಮೊತ್ತದ ನಿಲುಕಿನಲ್ಲಿ ನಿರ್ಧರಿಸಲ್ಪಡುತ್ತವೆ.. ಹೀಗಾಗಿ ಪ್ರತಿಯೊಬ್ಬರಿಗೂ ತಮ್ಮದೇ ನಂಬಿಕೆ ಪೂರ್ತಿ ಸರಿ ಎನ್ನುವ ಬಲವಾದ ಮತ್ತು ಖಚಿತವಾದ ಪೂರ್ವಾಗ್ರಹಪೀಡಿತ ಅಭಿಪ್ರಾಯವೂ ಇರುತ್ತದೆ. ಆದರೆ ಆ ಎರಡು ಕಡೆಗಳು ಸರಿಯಾಗಿ ಗ್ರಹಿಸದ ವಿಷಯವೆಂದರೆ, ತಮ್ಮೆರಡು ಅನಿಸಿಕೆಗಳೂ, ನಂಬಿಕೆಗಳು ಒಂದೆ ಸತ್ಯದ ಎರಡು ಮುಖಗಳೆಂದು.. ಅವೆರಡು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ ಎಂದು...!'
' ಅಂದರೆ ಇದೊಂದು ರೀತಿಯ ಅಡ್ಡಗೋಡೆಯ ಮೇಲಿಟ್ಟ ದೀಪದಂತಹ ಸ್ಥಿತಿಯಾಗಲಿಲ್ಲವೆ? ಸರಿಯೂ ಅಲ್ಲ ತಪ್ಪೂ ಅಲ್ಲ ಎನ್ನುವ ರೀತಿಯೆ ಗೊಂದಲ ತುಂಬಿದ ದ್ವಂದ್ವದ ಕುರುಹಲ್ಲವೆ ?'
ಮತ್ತೆ ಅರೆಕ್ಷಣ ಕಣ್ಮುಚ್ಚಿ ಏನನ್ನೊ ಯೋಚಿಸುತ್ತ ಕುಳಿತಿದ್ದ ಮಾಂಕ್ ಸಾಕೇತ್, ಕೊನೆಗೆ ಕಣ್ಣು ತೆರೆದು, ' ನಾನು ನಿನಗೆ ಅರುಹಬೇಕಿದ್ದ ಹಲವಾರು ಮೂಲ ಸತ್ಯಗಳಲ್ಲಿ ಇದು ಮೊದಲ ಸತ್ಯವಾದ ಕಾರಣ ಇದರ ಪೂರ್ಣ ಗ್ರಹಿಕೆ, ತಿಳಿವು ನಿನಗುಂಟಾಗಿಸುವುದು ಬಲು ಮುಖ್ಯವಾದದ್ದು....ಈ ಪ್ರಥಮ ಸತ್ಯದ ಅರಿವಾದಾಗ ಈ ದ್ವಂದ್ವದ ಒಗಟು ತಂತಾನೆ ಪರಿಹಾರವಾಗುವುದು..' ಎಂದರು.
ಅವರು ಹೇಳುತಿದ್ದ ರೀತಿಯಲ್ಲೆ ಅದರಲ್ಲೇನೊ ಮಹತ್ವದ ಮೂಲಭೂತ ಅಂತಃಸತ್ವವೊಂದರ ಅರಿವುಂಟಾಗಿಸುವ ಮಾಹಿತಿಯಿರಬೇಕೆಂಬುದರ ಸುಳಿವು ಸಿಕ್ಕಿತಾದರೂ, ಇಲ್ಲಿಗೆ ಬಂದ ವಿಷಯಕ್ಕೆ ಸಂಬಂಧಿಸದೆಯೆ ಇದ್ದ, ತಾನು ಮಾತಿಗೆಂದಷ್ಟೆ ಆರಂಭಿಸಿದ್ದ ವಿಷಯವೊಂದರ ಕುರಿತು ಇಷ್ಟು ಆಳವಾಗಿ ಹೋಗುತ್ತಿರುವುದು ವೃಥಾ ಕಾಲಹರಣವಲ್ಲವೆ ಎಂದೂ ಅನಿಸಿತು. ಅದರ ಕುರಿತಾದ ಅನುಮಾನವನ್ನು ಕೇಳಿಯೆ ಪರಿಹರಿಸಿಕೊಳ್ಳೋಣವೆಂದು ಹೊರಡುವ ಮೊದಲೆ ಮಾತನಾಡಿದ ಮಾಂಕ್ ಸಾಕೇತ್, 'ಕಾಲಹರಣವಾಗದು ಕುನ್ ಶ್ರೀನಾಥ... ಈ ಆದಿ ಅಂತ್ಯವಿಲ್ಲದ ಸಿದ್ದಾಂತದ ಒಗಟು ಬಿಡಿಸ ಹೊರಟವರಿಗೆ ಎಲ್ಲಿಂದ ಆರಂಭಿಸಬೇಕು, ಎಲ್ಲಿ ಅಂತಿಮಗೊಳಿಸಬೇಕು ಎಂಬ ಅನುಮಾನ ಕಾಡುವುದು ಸಹಜ.. ಆದರೆ ನಿಜ ಹೇಳಬೇಕೆಂದರೆ ಎಲ್ಲೆ ಆರಂಭಿಸಿ ಎಲ್ಲೆ ಅಂತಿಮಗೊಳಿಸಿದರೂ ಅದರಲ್ಲಿ ವ್ಯತ್ಯಾಸವೇನು ಆಗುವುದಿಲ್ಲ.. ಇನ್ನು ವಿಸ್ತರಿಸಿ ಹೇಳಬೇಕೆಂದರೆ, ಆರಂಭದ ಹಂತ ಸತ್ಯದ ಪರಿಪೂರ್ಣ ಪ್ರಕ್ಷೇಪವಾಗಿರಬೇಕೆಂಬ, ಅದರ ಭದ್ರ ಬುನಾದಿಯ ಮೇಲಷ್ಟೆ ಅಂತಿಮ ಸತ್ಯ ಶೋಧನೆ ಸಾಧ್ಯವೆಂಬ ಕಡ್ಡಾಯ ನಿಯಮವೂ ಇರದು.. ಅರ್ಥಾತ್ - ಸರಿಯಲ್ಲದ ಅನಿಸಿಕೆಗಳಿಂದ ಆರಂಭಿಸಿ, ಸರಿಯಾದ ಅಂತಿಮ ತೀರ್ಮಾನಕ್ಕೆ ತಲುಪಬಹುದಾದರೆ ಅದರಲ್ಲಿ ತಪ್ಪೇನೂ ಇಲ್ಲ.. ಹೀಗಾಗಿ ಇದು ಸಂಬಂಧಿಸಿದ ವಿಷಯವೆ, ಅಲ್ಲವೆ ? ಎಂಬ ಗೊಂದಲ ಬೇಡ.. ಸಂಬಂಧ ಇರಲಿ ಬಿಡಲಿ ಇದರ ಆರಂಭದ ವಾದಾಶ್ವವನ್ನೇರಿ ಸಂಬಂಧಿಸಿದ ವಿಷಯದ ಒಗಟಿನ ಕೀಲಿ ಕೈಯನ್ನು ಶೋಧಿಸಬಹುದು ' ಎಂದು ನಕ್ಕರು. ಬಹುಶಃ ಅದು ತಾನು ಕೇಳುವ ಮೊದಲೆ ತಾವಾಗಿಯೆ ಉತ್ತರಿಸಿದ್ದ ಮತ್ತೊಂದು 'ಪವಾಡಾತ್ಮಕತೆ'ಯೆಂದರಿವಾಗಿ, ತಾವು ಅದರ ಕುರಿತೆ ಅದೇ ತಾನೆ ನಡೆಸಿದ ಸಂವಾದವನ್ನು ನೆನೆದು ನಗುತ್ತಿದ್ದರೇನೊ ಎಂದುಕೊಂಡ ಶ್ರೀನಾಥ, ' ನಾನು ಮತ್ತೆ ಅಮಾನುಷ ಶಕ್ತಿಯೆ ಅಲ್ಲವೆ ಎಂಬ ವಾದಕ್ಕಿಳಿಯುವುದಿಲ್ಲ ಮಾಸ್ಟರ.. ನೀವು ಇದೀಗ ನುಡಿದ ಆ ಮೂಲಭೂತ ಸತ್ಯ ಯಾವುದೆಂದು ಅರಿಯಲು ಮೊದಲು ಯತ್ನಿಸುತ್ತೇನೆ... ಬಹುಶಃ ಅದರಲ್ಲಿ ಇಂತಹ ಹಲವಾರು ತೊಡಕುಗಳಿಗೆ ಬೆಳಕು ಚೆಲ್ಲುವ ಮಾಂತ್ರಿಕ ಸೂತ್ರವಿದ್ದರೂ ಇರಬಹುದು..' ಎಂದು ತಾನೂ ನಕ್ಕ.
' ಸರಿ ಅದರ ಆರಂಭವೂ ಆಗಿಹೋಗಲಿ.. ಮೊದಲಿಗೆ ನೀನು ಮನನ ಮಾಡಿಕೊಳ್ಳಬೇಕಾದ ಮೂಲಭೂತ ಸತ್ಯ ಅಥವ ಮೂಲಭೂತ ಅಂಶವೆಂದರೆ ಈ ಸೃಷ್ಟಿಯ, ಈ ಜಗದ ಯಾವುದರದೆ ಅಸ್ತಿತ್ವವನ್ನು ಪರಿಗಣಿಸಿದರು - ಭೌತಿಕ, ಅಭೌತಿಕ, ಲೌಕಿಕ, ಪಾರಮಾರ್ಥಿಕ, ಜೈವಿಕ, ಅಜೈವಿಕ ಇತ್ಯಾದಿ, ಇತ್ಯಾದಿ - ಹೀಗೆ ಸೃಷ್ಟಿಯ ಯಾವುದೇ ಆಯಾಮವಾಗಿರಲಿ, ಅದು 'ತನ್ನಷ್ಟಕ್ಕೆ ತಾನೆ' ತನ್ನ ಪರಿಪೂರ್ಣ ಪರಿಶುದ್ಧ ರೂಪದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.. ಅದರ ಅಸ್ತಿತ್ವ ಉಳಿದು ಬೆಳೆಯಬೇಕಾದರೆ, ಸದಾ ಸಂಗತವಾಗಿ ಇರಬೇಕಾದರೆ ಅದರ ಸಂಪೂರ್ಣ ವಿರುದ್ಧವಾದ ಅಂಶವಿರುವ ಪ್ರತಿಯಸ್ತಿತ್ವ, ಅದಕ್ಕೆ ಸಮತೋಲಿತ ಜೋಡಿಯಾಗಿ ಇದ್ದರಷ್ಟೆ ಸಾಧ್ಯ ಎನ್ನುವುದು ಈ ಸೂತ್ರ ನಿಯಮದ ಸಾರ.. ಇದನ್ನೆ ಇನ್ನೊಂದು ರೀತಿಯಲ್ಲಿ ವಿಲೋಮವಾಗಿ ಹೇಳುವುದಾದರೆ, ಇಡಿ ಬ್ರಹ್ಮಾಂಡದಲ್ಲಿ ಯಾರೇ, ಯಾವುದೆ ಅಸ್ತಿತ್ವವನ್ನು ಸೃಜಿಸಲಿ - ಮಾನುಷ ನಿರ್ಮಿತವಾದರೂ ಸರಿ, ಅಮಾನುಷ ನಿರ್ಮಿತವಾದರೂ ಸರಿ - ಅದನ್ನು ಅದರ ನೇತಾತ್ಮಕ, ಋಣಾತ್ಮಕ ಜೋಡಿಯ ಅಸ್ತಿತ್ವವಿರದಂತೆ ಸೃಷ್ಟಿಸಲು ಸಾಧ್ಯವೆ ಇಲ್ಲ..ಒಂದನ್ನು ಸೃಜಿಸಿದರೆ, ಸೃಷ್ಟಿಸಿದರೆ ಮತ್ತೊಂದು ತಂತಾನೆ ಅದಕ್ಕಂಟಿಕೊಂಡಂತೆ ಸೃಜಿಸಿಕೊಂಡು ಸೃಷ್ಟಿಯಾಗಿಬಿಟ್ಟಿರುತ್ತದೆ... ಯಾವುದೆ ಸತ್ಪರಿಣಾಮಗಳ ಸುಸೃಷ್ಟಿ, ಅದರ ಪ್ರತಿ ದುಷ್ಪರಿಣಾಮವನ್ನುಂಟುಮಾಡುವ ಕುಸೃಷ್ಟಿಯಿಲ್ಲದೆ ಸೃಜಿಸಲು ಸಾಧ್ಯವಾಗದೆಂಬುದು ನಾನು ಹೇಳುತ್ತಿರುವುದರ ಸಾರ... ಆದರೆ ಆ ಸತ್ಪರಿಣಾಮ ಅಥವಾ ದುಷ್ಪರಿಣಾಮಗಳು ಸಕ್ರೀಯವಾಗಿ ತಮ್ಮ ಭೂಮಿಕೆ ನಿಭಾಯಿಸುತ್ತವೆಯೆ, ಇಲ್ಲವೆ ಎನ್ನುವುದು ಮತ್ತೊಂದು ಆಯಾಮಕ್ಕೆ ಸಂಬಂಧಪಟ್ಟ ವಿಷಯ. ಎರಡರ ಸೃಷ್ಟಿಯಂತು ಆಗುತ್ತದೆ ಎನ್ನುವುದು ಮೊದಲು ಅರಿತುಕೊಳ್ಳಬೇಕಾದ ವಿಷಯ...'
ಒಂದರೆಗಳಿಗೆ ಅವರು ಹೇಳುವುದೇನೂ ಅರ್ಥವಾಗದೆ ಅವಾಕ್ಕಾಗಿ ಬಾಯ್ತೆರೆದುಕೊಂಡೆ ಕೇಳುತ್ತಿದ್ದ ಶ್ರೀನಾಥ. ಅವರು ಮಾತ್ರ ನಿಲ್ಲಿಸದೆ ಮುಂದುವರೆದೆ ಇದ್ದರು..
' ಇದೊಂದು ರೀತಿ ವಸ್ತು - ಪ್ರತಿವಸ್ತು ಸಿದ್ದಾಂತದ ರೀತಿಯೆ ಎಂದಿಟ್ಟುಕೊ.. ನೀನು ಸೃಷ್ಟಿಸಿ ಅಸ್ತಿತ್ವಕ್ಕೆ ತರಲ್ಹೊರಟದ್ದರ ಪ್ರತಿ ಅಸ್ತಿತ್ವ ಹೇಗಾದರೂ ಏನಾದರೂ ಮಾಡಿ ಆ ಮೂಲ ಅಸ್ತಿತ್ವವನ್ನು ನಿರಸ್ತಿತ್ವವನ್ನಾಗಿಸಲು ಯತ್ನಿಸುತ್ತದೆ ತನ್ನ ವಿರುದ್ಧಾರ್ಥಕ ಶಕ್ತಿಯನ್ನು ಬೆರೆಸಿ ನಿಷ್ಕ್ರಿಯಗೊಳಿಸುವ ಮೂಲಕ - ಅಸ್ತಿತ್ವ ಧನಾತ್ಮಕವಿದ್ದರೆ ಅದರ ವಿನಾಶಕ್ಕೆ ಋಣಾತ್ಮಕವನ್ನು ಪ್ರೇರೇಪಿಸುತ್ತ.. ಈ ದ್ವಂದ್ವದ ಹೋರಾಟದಲ್ಲಿ ಎರಡೂ ಜಯಶಾಲಿಯಾಗುವುದು ಅಸಾಧ್ಯ .. ಏಕೆಂದರೆ ಎರಡೂ ಸಮಬಲದ ವಿರುದ್ಧಾರ್ಥಕ ಶಕ್ತಿಗಳಾಗಿರುವುದರಿಂದ.. ಈ ಸ್ಥಿತಿಯಲ್ಲಿ ಕೇವಲ ಎರಡು ಫಲಿತಗಳು ಮಾತ್ರ ಸಾಧ್ಯ; ಮೊದಲನೆಯದು ಇವೆರಡು ಪರಸ್ಪರ ಸಮಬಲದಲ್ಲಿ ಘರ್ಷಿಸಿ, ಪರಸ್ಪರರನ್ನೆ ಆಹುತಿಯಾಗಿಸಿ, ಆಪೋಶನ ತೆಗೆದುಕೊಂಡು ಎರಡೂ ಇಲ್ಲವಾಗುವುದು.. ಈ ಪ್ರಕ್ರಿಯೆಯಲ್ಲಿ - ಭೌತಿಕವಿರಲಿ, ಅಭೌತಿಕವಿರಲಿ -ವಸ್ತು ಅಸ್ತಿತ್ವದ ಸೃಷ್ಟಿಯಾಗುವುದೆ ಇಲ್ಲ ; ಆದದ್ದೂ ಕೂಡ ಆ ಪ್ರಕ್ರಿಯೆಯಲ್ಲಿ ಅಲ್ಲೆ ವಿನಾಶವಾಗಿ ಹೋಗುತ್ತವೆ... ಇನ್ನು ಎರಡನೆಯದೆಂದರೆ ಈ ಎರಡು ಶಕ್ತಿಗಳು ಘರ್ಷಿಸಿದರೂ, ಆ ಘರ್ಷಣೆಯ ಹೋರಾಟದಲ್ಲಿ ತಮ್ಮ ತಮ್ಮ ಭಾಗಶಃ ಅಂತಃಸತ್ವವನ್ನು ಕಳೆದುಕೊಂಡು ದುರ್ಬಲವಾಗಿಹೋಗುತ್ತವೆ. ಆ ದೌರ್ಬಲ್ಯದ ಕಾರಣದಿಂದಲೆ ತಮ್ಮ ಮಿಕ್ಕ ಅಸ್ತಿತ್ವಕ್ಕೆ ತಾವೂ ಹೋರಾಡುತ್ತಿರುವ ತಮ್ಮ ವಿರೋಧಿ ಪ್ರತಿಶಕ್ತಿಯ ಮೇಲೆ ಅವಲಂಬಿತವಾಗಬೇಕಾದ ಅನಿವಾರ್ಯ ಪರಿಸ್ಥಿತಿಯುಂಟಾಗಿಬಿಡುವುದು..! ಯಾವುದೊ ವಿಚಿತ್ರ ಸಂಘಟನೆಯಲ್ಲಿ ಅವೆರಡೂ ಹೊಂದಿಕೊಂಡು ಒಟ್ಟಾಗಿ ಇರಬಹುದಾದ ಒಂದು ಸಮತೋಲನ ಸ್ಥಿತಿಯನ್ನು ಅವಿಷ್ಕರಿಸಿಕೊಂಡು ಅದರಂತೆ ಇದ್ದುಬಿಡುವ ಪರ್ಯಾಯ 'ಅಸಿಂಧು' ಅಸ್ತಿತ್ವವಾಗುವುದು... ಇದು ಮೂಲದ ಪರಿಪೂರ್ಣ ಅಸ್ತಿತ್ವವಲ್ಲ - ಬದಲಿಗೆ ಎರಡರ ಮಿಶ್ರಣಗೊಂಡ ಅಪರಿಪೂರ್ಣ ಅಸ್ತಿತ್ವ. ಇದನ್ನೆ ನಾನು ಒಂದೆ ನಾಣ್ಯದ ಎರಡು ಮುಖ ಎಂದದ್ದು.. ಈ ಅಸ್ತಿತ್ವ ದ್ವಿಮುಖಿಯಾದ ಕಾರಣ, ಎರಡು ಮುಖಗಳು ಸಕ್ರೀಯವಾಗಿಯೆ ಪ್ರಕಟಗೊಳ್ಳಲು ಹವಣಿಸುತ್ತಿರುತ್ತವೆ, ತಂತಮ್ಮ ಅಸ್ತಿತ್ವವನ್ನು ಪ್ರಕ್ಷೇಪಿಸಲು ಮತ್ತು ತಮ್ಮದೆ ಪ್ರಾಬಲ್ಯವೆಂದು ನಿರೂಪಿಸಿಕೊಳ್ಳಲು... ಒಮ್ಮೆ ಇದರ ಕೈ ಮೇಲಾದರೆ ಮತ್ತೊಮ್ಮೆ ಅದರ ಕೈ.. ಆದರೆ ಒಂದು ವೇಳೆ ಇದನ್ನು ಸೃಜಿಸಹೊರಟ ವಿಜ್ಞಾನಿಗೆ ಈ ಘರ್ಷಣೆಯ ಅರಿವಿದ್ದು, ಅವನದನ್ನು ಸಾರಾಸಗಟಾಗಿ ನಿವಾರಿಸಹೊರಡುವ ಬದಲು ಅದನ್ನೆ ಬಳಸಿಕೊಂಡು ವಸ್ತು-ಅಸ್ತಿತ್ವದ ಮೂಲ ಸತ್ವವಾಗಿ ಮಾರ್ಪಡಿಸಿ ಬಳಸಿಕೊಂಡರೆ, ಆಗವನ ಸೃಷ್ಟಿ ಅಸ್ತಿತ್ವದಲ್ಲಿರುವ 'ಮಹಾನ್ ಸಮತೋಲಿತ' ಸೃಷ್ಟಿಯಾಗಿಬಿಡುತ್ತದೆ.. ಜತೆಯಲ್ಲೆ ಸಮತೋಲನದ ಅನುಪಾತವೆ ಆ ವಸ್ತುವಿನ ಗುಣ ಲಕ್ಷಣಗಳನ್ನು ನಿರ್ಧರಿಸುವ, ನಿಯಂತ್ರಿಸುವ ಮೂಲ ಪ್ರೇರಕವೂ ಆಗಿ ಬಿಡುತ್ತದೆ.. ಇದೊಂದು ರಾಸಾಯನಿಕ ಕ್ರಿಯೆಯಂತಹ ಪ್ರಕ್ರಿಯೆ.. ಆ ಭಗವಂತನೆಂಬ ಹೆಸರಿನ ಮಹಾ ವಿಜ್ಞಾನಿಯ ಸೃಷ್ಟಿಯ ಹಾಗೆ....'
ಒಂದೆ ಓಘದಲ್ಲಿ ನಿರಂತರ ಚಿಲುಮೆಯಂತೆ ಧಾರಾಕಾರವಾಗಿ ಅವರ ಬಾಯಿಂದ ಹರಿದು ಬಂದ ವಾಗ್ಝರಿಯನ್ನೆ ಮಂತ್ರ ಮುಗ್ದನಂತೆ ಕೇಳಿಸಿಕೊಳ್ಳುತ್ತಿದ್ದ ಶ್ರೀನಾಥನಿಗೆ ಅವರು ಹೇಳಿದ್ದರಲ್ಲಿ ಅರ್ಧಕ್ಕರ್ಧ ಅರ್ಥವಾಗಿರಲೆ ಇಲ್ಲವಾದರೂ, ಅವರು ಮಾತು ಮುಗಿಸುವ ಮುನ್ನ ಹಾಗೆಂದು ಹೇಳುವುದಾದರೂ ಹೇಗೆಂಬ ಸಂಕೋಚದಿಂದ ಆದಷ್ಟು ಗಮನವಿಟ್ಟು ಅವರ ನುಡಿಗಳನ್ನು ಆಲಿಸಲು ಯತ್ನಿಸುತ್ತಿದ್ದ. ಅಸ್ಪಷ್ಟವಾಗಿ ಏನೊ ಸ್ಥೂಲ ರೂಪದ ಕಲ್ಪನೆ ಸಿಗುವ ಹಾಗೆ ಚಿತ್ರಣವೊಂದು ಮೂಡಿದ ಅನುಭೂತಿಯಾಗುತ್ತಿದ್ದರೂ, ಅದರ ಸ್ಪಷ್ಟ ಚಿತ್ರಣ ಸಿಗದೆ ಜೀರ್ಣವಾಗುವಂತ ಸರಳ ಸರಕಾಗಿರಲಿಲ್ಲವದು. ಆದರೂ, ಅವರೆ ನುಡಿದಂತೆ ಸರಳವೊ, ಕ್ಲಿಷ್ಟವೊ - ಎಲ್ಲಿಯಾದರೂ ಒಂದು ಕಡೆ ಆರಂಭಿಸಲೇಬೇಕಲ್ಲ ಎಂಬ ತತ್ವದೊಡನೆ ಹೊರಟರೆ, ಕ್ಲಿಷ್ಟವಾದದ್ದು ಮುನ್ನಡೆದಂತೆ ಸರಳವಾಗಬೇಕಲ್ಲ ಎಂದುಕೊಂಡೆ ಆಲಿಸುತ್ತಿದ್ದ ಶ್ರೀನಾಥ, ಅವರ ಧೀರ್ಘ ವಿವರಣೆ ಮುಗಿಯುತ್ತಿದ್ದಂತೆ ಮತ್ತೊಂದು ಸಂದೇಹಕ್ಕೂ ಸಿಲುಕಿಕೊಂಡ.. 'ಇದೇನಿದು ದೇವರೆನ್ನುವ ಮಹಾವಿಜ್ಞಾನಿ ಎನ್ನುತ್ತಾರಲ್ಲಾ? ಅಂದರೆ ದೇವರ ಅಸ್ತಿತ್ವದ ಮೇಲಿವರಿಗೆ ನಂಬಿಕೆಯಿಲ್ಲವೆಂದೆ?' ಎಂದುಕೊಂಡ. ಅವರ ಮಾತು ಮುಗಿಸಿ ನಿಲ್ಲಿಸುತ್ತಿದ್ದಂತೆ,
' ಮಾಸ್ಟರ, ಮೊದಲಿಗೆ ನೀವೇಳಿದ ಅಸ್ತಿತ್ವದ ತತ್ವ ತಲೆಯೊಳಗೆ ಅಷ್ಟು ಸುಲಭದಲ್ಲಿ ಇಳಿಯುವಂತೆ ಕಾಣುತ್ತಿಲ್ಲ..ಆದರೆ ಅದನ್ನು ಮತ್ತಷ್ಟು ವಿಷದಿಕರಿಸುವ ಮುನ್ನ, ನಿಮ್ಮ ಕೊನೆಯ ಮಾತು ಮತ್ತೊಂದು ಅನುಮಾನವನ್ನು ಹುಟ್ಟಿಸಿಬಿಟ್ಟಿತು...ಮೊದಲಿಗೆ ಆ ಸಂದೇಹವನ್ನು ನಿವಾರಿಸಿಕೊಂಡು ನಂತರ ಮೊದಲ ವಿಷಯಕ್ಕೆ ಹಿಂತಿರುಗುತ್ತೇನೆ.. ನೀವೀಗ ತಾನೆ ಹೇಳಿದಿರಿ 'ಭಗವಂತನೆಂಬ ಮಹಾವಿಜ್ಞಾನಿ..' - ಏನಿದರ ಅರ್ಥ? ಭಗವಂತನೆಂಬ ಅದ್ಭುತ ಶಕ್ತಿಯ ಅಸ್ತಿತ್ವವೆ ಇಲ್ಲವೆಂದೆ? ಅವನೊಬ್ಬ ಮಹಾನ್ ವಿಜ್ಞಾನಿಯೆಂಬ ಹೇಳಿಕೆ ಅವನೇನು ವಿಶೇಷಾದ್ಭುತ ಶಕ್ತಿಯಲ್ಲ, ಬದಲಿಗೆ ದೊಡ್ಡ ವಿಜ್ಞಾನಿಯಷ್ಟೆ ಎಂಬುದರ ಸಂಕ್ಷಿಪ್ತ ರೂಪವೊ ಅಥವಾ ಸುಮ್ಮನೆ ಹೇಳಿಕೆಯ ಸರಳತೆಗೆ ಅವನನ್ನೆ ಮಹಾನ್ ವಿಜ್ಞಾನಿ ಎಂದು ಉಪಮಾಲಂಕಾರಿಕವಾಗಿ ಕರೆದರೊ?' ಎಂದು ಕೇಳಿದ.
ಅದನ್ನು ಕೇಳಿದ ಅವರು ಮತ್ತೊಮ್ಮೆ ಅವನತ್ತ ಆಳವಾಗಿ ದಿಟ್ಟಿಸಿ ನೋಡುತ್ತ, ' ಇದರ ಉತ್ತರವೂ ಆ ಮೊದಲ ಉತ್ತರದಲ್ಲೆ ಅಡಕವಾಗಿದೆ, ನೋಡು.. ಅವನೆಷ್ಟು ಶಕ್ತಿ, ಸಾಮರ್ಥ್ಯವಿರುವ ಬಲಶಾಲಿಯೆಂದು ನಾವು ಅವನ ಅಸ್ತಿತ್ವವನ್ನು ನಂಬುತ್ತೇವೊ, ಅದರ ನಂಬಿಕೆಯ ಬುಡವನ್ನೆ ಪ್ರಶ್ನಿಸುವ ಅವನ ಅದೇ ಶಕ್ತಿಗೆ ವಿಲೋಮವಾಗಿರುವ ವಿರುದ್ಧ ಶಕ್ತಿಯ ಅಸ್ತಿತ್ವವನ್ನು ನಂಬಬೇಕಾಗುತ್ತದೆ.. ಮತ್ತೆ ಒಂದೆ ನಾಣ್ಯದ ಎರಡು ಮುಖಗಳಲ್ಲಿ ಒಂದೆಡೆ ದೈವಿ ಶಕ್ತಿಯ ವಿಜಯೋತ್ಸಾಹದೊಡನೆ ಮತ್ತೊಂದೆಡೆ ದೈತ್ಯ ಶಕ್ತಿಯ ಅಟ್ಟಹಾಸವೆ ವಿರಾಜಿಸುತ್ತದೆ...'
' ಅರೆರೆ? ಇದೊಂದು ದೇವರು ಇದ್ದಾನೊ, ಇಲ್ಲವೊ ಎಂಬ ಅಸ್ತಿತ್ವದ ಮೂಲ ಪ್ರಶ್ನೆಯೆ ಆಗಿಬಿಡುವುದಿಲ್ಲವೆ? ಒಟ್ಟಾರೆ ನಿಮ್ಮ ನಂಬಿಕೆಯ ಸಾರಾಂಶದಲ್ಲಿ ದೇವರು ಇದ್ದಾನೆಂದು ಹೇಳುತ್ತೀರೊ ಅಥವಾ ಇಲ್ಲವೆಂದೊ?'
' ಈ ಇದ್ದಾನೆ, ಇಲ್ಲಾ ಅನ್ನುವ ಎರಡು ಪರಸ್ಪರ ವಿರೋಧಾರ್ಥದ ಉತ್ತರಗಳೆ, ನಾನು ಮೇಲೆ ವಿವರಿಸಿದ ದ್ವಂದ್ವಕ್ಕೆ ಮತ್ತೊಂದು ಉದಾಹರಣೆಯಾಗುತ್ತದೆ... ಇದೆ ಎನ್ನುವುದು ಯಾವುದೆ ಅಸ್ತಿತ್ವದ ಒಂದು ಪ್ರಕಟ ರೂಪ. ಇಲ್ಲಾ ಎನ್ನುವುದು ಅದೇ ಅಸ್ತಿತ್ವದ ಮತ್ತೊಂದು ಅಪ್ರಕಟಿತ ರೂಪ.. ಒಂದನ್ನು ಬಿಟ್ಟು ಮತ್ತೊಂದು ಇರದ ಅದೇ ದ್ವಂದ್ವದ ಅಸ್ತಿತ್ವ. 'ಇದೆಯೆನ್ನುವುದು ನಿಜವಾದರೆ ಇಲ್ಲವೆನ್ನುವುದು ನಿಜ'... ಒಂದು ರೀತಿಯ ಇದ್ದೂ ಇಲ್ಲದ ಭಾವ ನೈಜ ರೂಪ ತಳೆದರೆ ಅದು ಹೇಗಿರಬಹುದೊ, ಅದೆ ದೇವರ ಅಸ್ತಿತ್ವದ ಸರಿಯಾದ ವ್ಯಾಖ್ಯೆಯೂ ಆಗಬಹುದು...'
'ಮಾಸ್ಟರ ಇದು ಪೂರ್ಣ ಗೊಂದಲಮಯವಾಗಿ ಹೋಯಿತಲ್ಲ? ಒಟ್ಟಾರೆ ಇದರಿಂದ ದೇವರಿದ್ದಾನೆ ಎನ್ನುವ ಆಸ್ತಿಕ ವಾದವೂ ಆಗಲಿಲ್ಲ, ಇಲ್ಲ ಎನ್ನುವ ನಾಸ್ತಿಕವಾದವೂ ಆಗಲಿಲ್ಲ... ಎರಡೂ ಅಲ್ಲದ ಎಡಬಿಡಂಗಿತನವೆ ಆ ದೇವರ ಅಸ್ತಿತ್ವವೆನ್ನುವುದು ಹಾಸ್ಯಾಸ್ಪದವಲ್ಲವೆ?'
' ಕುನ್. ಶ್ರೀನಾಥ...ನಾನು ಹೇಳಿದ್ದನ್ನು ಮನನ ಮಾಡಿಕೊಂಡು ತುಸು ಆಳವಾಗಿ ಆಲೋಚಿಸಿ ನೋಡು..ಉದಾಹರಣೆಗೆ ದೇವರೆಂಬ ಸತ್ವಪೂರ್ಣ ಗುಣವನ್ನು ಪರಿಶುದ್ಧ ಸತ್ಯ, ಜ್ಞಾನವೆಂಬ ತಕ್ಕಡಿಯಲಿಟ್ಟು ಅದನ್ಯಾರೊ ಸೃಜಿಸಿದರೆಂದುಕೊಳ್ಳೋಣ...ಆ ಸೃಜಿಸುವ ಯತ್ನವೆ ಅದಕ್ಕೆ ವಿರುದ್ಧಕವಾದ ಆದರೆ ಅಷ್ಟೆ ಶಕ್ತಿಯುತವಾದ ಪ್ರತಿದೇವರ ಅಸ್ತಿತ್ವವನ್ನು ಉಂಟುಮಾಡುತ್ತದೆ. ಬೇಕಿದ್ದರೆ ಅದನ್ನು ದೈತ್ಯಶಕ್ತಿಯೆಂದು ಕರೆದುಕೊ..'
' ಆದರೆ ಇವೆರಡು ಸಮಾನ ಶಕ್ತಿಗಳು ತಿಕ್ಕಾಟಕ್ಕಿಳಿದು ಪರಸ್ಪರ ವಿನಾಶಕ್ಕೆಳೆದು ಅಸ್ತಿತ್ವವೆ ಇಲ್ಲದಂತಾಗಿಬಿಡಬೇಕಲ್ಲವೆ? ಅರ್ಥಾತ್ ದೇವರೆನ್ನುವ ಅಸ್ತಿತ್ವವೆ ಇಲ್ಲದಂತಾಗಿಬಿಡಬೇಕಲ್ಲವೆ, ದೈತ್ಯದ ಜತೆಜತೆಯಲ್ಲೆ? '
' ನಿನ್ನ ಮಾತು ನಿಜ..ಇವೆರಡು ಶಕ್ತಿ-ಪ್ರತಿಶಕ್ತಿಗಳು ಪರಸ್ಪರರ ಸಂಹಾರದಲ್ಲಿ ಕರಗಿಹೋಗಬೇಕು, ಅಥವಾ ಇಬ್ಬರೂ ಅಸ್ತಿತ್ವದಲ್ಲಿ ಇರಬಹುದಾದಂತಹ ಸಮತೋಲನ ಸ್ಥಿತಿಯೊಂದನ್ನು ಅವಿಷ್ಕರಿಸಿಕೊಂಡು ಇಬ್ಬರೂ ಸಹಬಾಳ್ವೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು... ನಿಮ್ಮ ಹಳೆಯ ಪುರಾಣಗಳಲ್ಲಿ ನೋಡಿದರೆ ಈ ದೇವ ದಾನವ ತಿಕ್ಕಾಟ, ಹೋರಾಟ ಪದೆ ಪದೆ ಎದ್ದು ಕಾಣುವುದಿಲ್ಲವೆ? ಅಷ್ಟೇಕೆ ಸುರಾಸುರರು ಹುಟ್ಟಿದ್ದು ಒಬ್ಬನೆ ತಂದೆ ಕಶ್ಯಪನಲ್ಲಲ್ಲವೆ? ದಿತಿ, ಅದಿತಿ, ವಿನತೆ, ಕದ್ರು ಎಲ್ಲರಿಗು ಗರ್ಭದಾನವಿತ್ತ ಋಷಿಮುನಿ ಅವನೊಬ್ಬನೆ ಆದರೂ ಬರಿಯ ಪರಿಶುದ್ಧ ಕಲ್ಯಾಣ ಗುಣಗಳ ತಳಿಯನ್ನು ಮಾತ್ರ ಸೃಷ್ಟಿಸಲು ಅವನಿಗೂ ಆಗಲಿಲ್ಲ, ನೋಡು! ಬರಿ ಆ ಗುಣಾವಗುಣಗಳನ್ನು ಬೇರೆ ಬೇರೆ ಪತ್ನಿಯರಿಗೆ ಹಂಚಲಷ್ಟೆ ಅವನಿಂದಾದುದು..ಅಷ್ಟೇಕೆ ಹುಟ್ಟುವ ಪ್ರತಿಯೊಬ್ಬ ಜೀವಿಯಲ್ಲೂ ಈ ಎರಡು ಶಕ್ತಿಗಳ ಸಂಯೋಜಿತ ಸಂಯೋಗ ಕಂಡು ಬರುತ್ತದೆ - ಸುಗುಣ ಮತ್ತು ದುರ್ಗುಣಗಳ ಸಮತೋಲಿತ ರೂಪದಲ್ಲಿ.. ಹೀಗಾಗಿ ಇರುವಿಕೆ, ಇಲ್ಲದಿರುವಿಕೆಯ ಕುರಿತು ಅನುಮಾನವೆ ಇರಬಾರದು ... ಬದಲಿಗೆ ಆ 'ಇದೆ ಮತ್ತು ಇಲ್ಲಾ ಅನುವ ತತ್ವ ಯಾವ ಪ್ರಮಾಣದಲ್ಲಿ, ಅನುಪಾತದಲ್ಲಿ ಸಮತೋಲಿಸಿಕೊಂಡು ಅಸ್ತಿತ್ವದಲ್ಲಿದೆ' ಎನ್ನುವುದು ಮಾತ್ರ ಚರ್ಚಿಸಬಹುದಾದ ವಿಷಯ...'
''ಮಾಸ್ಟರ, ನೀವು ಹೇಳುತ್ತಿರುವ ಈ ಸಿದ್ದಾಂತವನ್ನು ಎಷ್ಟು ಜನ ಒಪ್ಪುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ.. ಆದರೆ ತರ್ಕ ಮಾತ್ರ ವಿಭಿನ್ನವಾಗಿದೆ...ಮೊದಲ ಬಾರಿಗೆ ನಾನೂ ಈ ರೀತಿಯ ಒಂದು ವಿವರಣೆಯನ್ನು ಕೇಳುತ್ತಿದ್ದೇನೆ - ಪ್ರಾಯಶಃ ಆಸ್ತಿಕ ಮತ್ತು ನಾಸ್ತಿಕ - ಇಬ್ಬರಿಗೂ ಒಟ್ಟಾಗಿಯೆ ಉತ್ತರಿಸುವ ವಿವರಣೆ. ಅವರಿಬ್ಬರು ಅದನ್ನು ಒಪ್ಪುತ್ತಾರೊ ಬಿಡುತ್ತಾರೊ ಅದು ಬೇರೆ ವಿಷಯ... ಆದರೆ ಒಂದಂತೂ ಸತ್ಯ, ಈ ತತ್ವ ಸರಣಿ ಕೇಳುತ್ತಿದ್ದರೆ 'ನಿರೀಶ್ವರತ್ವ' ಎಂಬ ಪದಕ್ಕೆ ಹೊಸ ಹೊಸ ಅರ್ಥಗಳೆ ಹೊಳೆಯುತ್ತಿವೆ... ನಿರೀಶ್ವರದಲ್ಲೆ ಇರುವ ಈಶ್ವರ, ಆಸ್ತಿಕ ಮತ್ತು ನಾಸ್ತಿಕತೆಯ ಇದ್ದೂ ಇಲ್ಲದ ಸಂಕಲಿತ ರೂಪವೇನೊ ಅನಿಸುತ್ತಿದೆ....'
' ಕುನ್. ಶ್ರೀನಾಥ, ಇದು ಯಾರನ್ನು ಒಪ್ಪಿಸುವ ಅಥವ ವಿರೋಧಿಸುವ ವಾದ ಲಹರಿಯಲ್ಲ.. ಬದಲಿಗೆ ಅಸ್ತಿತ್ವದ ಅಸ್ತಿತ್ವವನ್ನು ಅರಿಯುವ ಪರಿ. ಹಾಗೆ ನೋಡಿದರೆ ಆ ಆಸ್ತಿಕತೆ ಮತ್ತು ನಾಸ್ತಿಕತೆಯೆಂಬುದು ಕೂಡ ಇದೆ ದ್ವಂದ್ವದ ಒಂದೆ ನಾಣ್ಯದ ಎರಡು ಮುಖಗಳು...'
' ಹಾಂ...?! ಅಂದರೆ ಆಸ್ತಿಕತೆಯೊ, ನಾಸ್ತಿಕತೆಯೊ - ಯಾವುದೊ ಒಂದು ಮೊದಲು ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಅದರ ನೇತಾತ್ಮಕ ರೂಪದಲ್ಲಿ ಮತ್ತೊಂದನ್ನು ಮೊದಲನೆಯದೆ ಸೃಷ್ಟಿಸಿತೆಂದು ನಿಮ್ಮ ಮಾತಿನ ಅರ್ಥವೆ? ಒಂದು ಮತ್ತೊಂದಕ್ಕೆ ವಿರುದ್ದವಾದ ಸಿದ್ದಾಂತವನ್ನು ಹೊಂದಿರುವುದೆ ನಿಜವಾದರೂ, ಒಂದು ಮತ್ತೊಂದರ ಅಸ್ತಿತ್ವಕ್ಕೆ ಕಾರಣವಾಗಿದ್ದರು, ಒಂದು ಮತ್ತೊಂದನ್ನು ಸೃಷ್ಟಿಸಿತು ಎನ್ನುವುದು ಸ್ವಲ್ಪ ತೀರಾ ಅತಿಯಾದಂತೆನಿಸಲಿಲ್ಲವೆ...?'
' ಹಾಗೆ ಆಲೋಚಿಸುವ ಬದಲಿಗೆ ಹೀಗೆ ಚಿಂತಿಸಿ ನೋಡು.. ಉದಾಹರಣೆಗೆ ಆಸ್ತಿಕತೆಯೆ ಮೊದಲು ಉದ್ಭವಿಸಿತೆಂದು ಭಾವಿಸೋಣ...ಈ ಸಿದ್ದಾಂತದನುಸಾರ ಅದರ ಪ್ರತಿಶಕ್ತಿಯಾಗಿ ಈ ನಾಸ್ತಿಕತೆಯ ಪ್ರತಿವಾದ ಹುಟ್ಟಿಕೊಂಡಿರಲೆಬೇಕಲ್ಲವೆ? ಅದನ್ನೆ ನಾವು ನಾಸ್ತಿಕತೆಯೆನ್ನುತ್ತಿದ್ದೇವಾದರೂ, ಇವೆರಡು ಹುಟ್ಟಿದ ಒಂದೆ ಗಳಿಗೆಯಲ್ಲಿ ಪರಸ್ಪರ ಹೊಡೆದಾಡಿಕೊಂಡು ಎರಡೂ ವಿನಾಶವಾಗುವ ಬದಲು, ಎರಡರ ಅಸ್ತಿತ್ವವೂ ಇರುವಂತೆ ಒಟ್ಟಿಗೆ ಭರವಸೆಯಾಗಬಲ್ಲ ಸಮತೋಲನದ ಸ್ಥಿತಿಯನ್ನು ಕಂಡುಕೊಂಡು ಅದರ ಪರಿಧಿಯೊಳಗೆ ಎರಡರ ಅಸ್ತಿತ್ವವನ್ನು ಕಾದುಕೊಂಡೆ ಮುನ್ನಡೆದಿವೆ.. ಒಂದು ವೇಳೆ ಯಾವುದೆ ಕಾರಣಕ್ಕೆ ಒಂದು ಬಲಹೀನವಾಗಿ ದುರ್ಬಲವಾಗಿ ಹೋದರೆ, ಮತ್ತೊಂದೂ ಕೂಡ ನಶಿಸಿಹೋಗುತ್ತದೆ, ಇಲ್ಲವೆ ವಿಪರೀತ ದೈತ್ಯಾಟ್ಟಹಾಸಕ್ಕಿಳಿದು ಹತೋಟಿಯಿರದ ದಾನವ ಶಕ್ತಿಯಂತೆ ಎಲ್ಲವನ್ನು ಹೊಸಕತೊಡಗುತ್ತದೆ. ಹೀಗಾಗಿ ಬರಿಯ ಅಸ್ತಿಕತೆಯಿದ್ದರೂ ವಿನಾಶ, ನಾಸ್ತಿಕತೆಯಿದ್ದರೂ ವಿನಾಶವೆ. ಎರಡೂ ಇದ್ದೂ ಇಲ್ಲದ - ಅಂದರೆ ಪರಸ್ಪರ ಗೌರವಿಸುವಷ್ಟು ಸಮತೋಲನ ಸ್ಥಿತಿಯನ್ನು ಉಳಿಸಿಕೊಂಡ ಪರಿಸ್ಥಿತಿಯಿದ್ದರೆ ಮಾತ್ರ ಎರಡು ಬದುಕುಳಿಯುವುದು... ಮತ್ತೆ ಒಂದಿಲ್ಲದಿರೆ ಇನ್ನೊಂದಿರಲಾಗದ ಜೋಡಿ' ಎಂದು ಮುಗುಳ್ನಕ್ಕರು.
'ವಾಹ್! ಈ ವಾದದ ಎಳೆಯ್ಹಿಡಿದು ಹೊರಟರೆ ಹೆಚ್ಚುಕಡಿಮೆ ಎಲ್ಲಕ್ಕೂ ಇದೆ ಉತ್ತರವಿರುವಂತೆ ಭಾಸವಾಗುತ್ತಿದೆ.. ಅಸ್ತಿತ್ವ ಇರುವ, ಇಲ್ಲದಿರುವ ಎರಡರ ನಡುವಿನ ತಾಕಲಾಟವೆ ಬದುಕಿನೆಲ್ಲವನ್ನು ವಿವರಿಸಬಲ್ಲ ಒಂದು ಮಾಂತ್ರಿಕ ಗುಂಡಿನ ಮದ್ದಾದ ಹಾಗೆ.. ಜೀವನದ ಪ್ರತಿಯೊಂದು ಪರದೆಯೂ ಅದೆ ಎಳೆಯ್ಹಿಡಿದೆ ನೇಯ್ದ ಬಟ್ಟೆಯಂತೆ ಕಾಣುತ್ತಿದೆ.. ಸುಖದ ನೇತಾತ್ಮಕತೆ ದುಃಖವಿದ್ದ ಹಾಗೆ ಅವೆರಡು ಒಟ್ಟಿಗೆ ಹುಟ್ಟಿದ ಅವಳಿಗಳೆ ಇರಬೇಕು. ಆ ಯಮಳ ಯುಗ್ಮಗಳ ಪರಸ್ಪರ ತಿಕ್ಕಾಟವೆ ಜೀವನದ ಹಿಗ್ಗು ಕುಗ್ಗುಗಳಿಗೆಲ್ಲ ಅಡಿಪಾಯ ಹಾಕುವ ಶಿಲಾನ್ಯಾಸದ ಕಲ್ಲು... ಅವೆರಡು ಸಮತೋಲನ ಸ್ಥಿತಿ ಕಂಡುಕೊಂಡ ದೆಸೆಯಿಂದ ಮಾತ್ರವೆ ಅವೆರಡರ ಅನುಭವವಾಗುವುದು ಸಾಧ್ಯವಾಯಿತೇನೊ..? ಅದರಿಂದಲೆ ಒಂದರ ದೆಸೆಯಿಂದ ಇನ್ನೊಂದರ ಮೌಲ್ಯ ಗೊತ್ತಾಗುವುದು ಅನಿಸುತ್ತಿದೆ... ಒಟ್ಟಾರೆ ಸಾರಾಸಗಟಾಗಿ ಈ ಜಗದ ಅಸ್ತಿತ್ವದಲ್ಲಿರುವುದೆಲ್ಲ ಈ ರೀತಿಯ ಯಮಳ ಯುಗ್ಮಗಳೆಂದು ಹೇಳಿಬಿಡಬಹುದಲ್ಲವೆ?' ತಾನು ಕೇಳಬೇಕೆಂದುಕೊಂಡಿದ್ದ ಮೊದಲ ಪ್ರಶ್ನೆಯ ಉತ್ತರವೂ ಒಂದು ರೀತಿ ಎರಡನೆಯದರ ಉತ್ತರದಲ್ಲೆ ಅಂತರ್ಗತವಾಗಿ ಬರುತ್ತಿರುವುದನ್ನು ಕಂಡುಕೊಂಡ ವಿಸ್ಮಯದಲ್ಲಿ ಕೇಳಿದ ಶ್ರೀನಾಥ.
ಅದನ್ನು ಅರಿತವರಂತೆ ಅವನನ್ನು ಅದೇ ಬಿರುಸಿನಲ್ಲಿ ಇನ್ನೊಂದು ಸ್ತರ ಮೇಲೆ ಹತ್ತಿಸುವ ಆಲೋಚನೆಯಲ್ಲಿ ಮಾಂಕ್ ಸಾಕೇತ್ ನುಡಿದರು - ' ಸಾರಾಸಗಟಾಗಿ ಎಲ್ಲವೂ ಎಂದು ಹೇಳಲಾಗದು.. ಹಾಗೆ ಹೇಳಿದರೆ ಈ ತತ್ವದ ಮೂಲಭೂತ ವಿವರಣೆಗೆ ವಿರೋಧಾಭಾಸವನ್ನು ಆರೋಪಿಸಿದಂತಾಗುತ್ತದೆ...'
' ನನಗರ್ಥವಾಗಲಿಲ್ಲ...?'
' ಅಂದರೆ ಈ ತತ್ವದ ಮೂಲ ಸಾರವೆ ಪ್ರತಿಯೊಂದರ ಅಸ್ತಿತ್ವದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ದ್ವಂದ್ವ ಅಂತರ್ಗತವಾಗಿದೆ ಎಂದಲ್ಲವೆ? ಒಂದು ವೇಳೆ ಸಾರಾಸಗಟಾಗಿ ಎಲ್ಲವೂ ಒಂದೆ ನಿಯಮಕ್ಕೆ ಬದ್ಧವಾಗಿವೆಯೆಂದುಬಿಟ್ಟರೆ ಅಲ್ಲಿ ದ್ವಂದ್ವವಿಲ್ಲವೆಂಬ ಅರ್ಥ ಬರುವುದಲ್ಲವೆ? ಹಾಗಾದರೆ ನಿಯಮದ ಮೂಲಕ್ಕೆ ಧಕ್ಕೆ ಬಂದಾಂತಾಗುವುದಿಲ್ಲವೆ?'
'ನಿಜ ನಿಜ..ಅರೆ, ನನಗಿದು ಹೊಳೆಯಲೆ ಇಲ್ಲ..! ಆದರೂ ಒಂದು ಸೂಕ್ತ ಉದಾಹರಣೆಯಿಲ್ಲದೆ ಅದನ್ನು ಊಹಿಸಿಕೊಳ್ಳಲು, ಪರಿಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ..'
'ಅದೇನು ಅಷ್ಟು ಕ್ಲಿಷ್ಟಕರವಾದದ್ದಲ್ಲ ಬಿಡು.. ಹೇಗೆ ಈ ಜಗದಲ್ಲಿ ಇರುವಂತದ್ದು, ಮತ್ತು ಇಲ್ಲದಂತದ್ದು ಎಂಬ ಕಲ್ಪನೆ ಸಾಧ್ಯವಾಯಿತೊ, ಹಾಗೆಯೆ ನಿಲುಕಿಗೆ ಎಟುಕುವಂತದ್ದು ಮತ್ತು ಎಟುಕಲಾಗದ್ದು ಅನ್ನುವ ಕಲ್ಪನೆಯೂ ಸಾಧುವೆ. ಸುಖ, ದುಃಖ ಎನ್ನುವುದು ನಿಲುಕಿಗೆಟಕುವಂತದ್ದಕ್ಕೆ ಸಾಕ್ಷಿಯಾದರೆ, ಆತ್ಮ, ಪರಮಾತ್ಮದ ಕಲ್ಪನೆ ನಿಲುಕಿಗೆಟುಕದ ಅಸ್ತಿತ್ವಕ್ಕೆ ಉದಾಹರಣೆಯಾಗಬಹುದು. ಈ ಸುಖ ದುಃಖದ ಸಮತೋಲನ ಸ್ಥಿತಿ ಅದರಿಂದುಂಟಾಗುವ ಭೌತಿಕ ಹಾಗು ಲೌಕಿಕ ಅನುಭವಗಳಿಂದ ನಮಗೆ ಅನುಭವ ಗಮ್ಯವಾದರೆ, ಆತ್ಮ ಪರಮಾತ್ಮಗಳ ಸಮತೋಲನದ ಅನುಭವ ನಿಲುಕಿಗೆ ಸಿಗುವುದು ಅದರ ಅಭೌತಿಕ ಮತ್ತು ಅಲೌಕಿಕ ಗ್ರಹಿಕೆಯ ನೆಲೆಗಟ್ಟಿನಿಂದ.. ಅದನ್ನೆ ಇನ್ನಷ್ಟು ವಿಸ್ತರಿಸಿದರೆ ಆತ್ಮದಂತಹ ಪವಿತ್ರ ಶುದ್ಧಿಯ ವಸ್ತು ತನುವೊಳಗಿದ್ದೂ, ಲೌಕಿಕ ಮಾಯೆಯ ಸೆಳೆತಕ್ಕೆ ಸಿಕ್ಕಿ ಏನೆಲ್ಲ ಅಡ್ಡಕಸುಬಿ ವ್ಯವಹಾರವನ್ನು ಮಾಡುವ ದೇಹವನ್ನು ನೋಡುತ್ತಲೆ ಇದ್ದರೂ ಖಡಾಖಂಡಿತವಾಗಿ ಯಾಕೆ ತಡೆಯುವುದಿಲ್ಲ? ಎನ್ನುವುದು ನಿಲುಕಿಗೆ ಸಿಗದ, ಅಳತೆಗೆ ಸಿಗದ ವಿಚಾರ... ಹೀಗೆ ಈ 'ದ್ವಂದ್ವವೆ' ಮೂಲಭೂತ ಅಸ್ತಿತ್ವದ ಮೂಲಧಾತು ಎನ್ನಬಹುದು...!'
'ಹೌದು, ಹಾಗೆ ನೋಡುತ್ತ ಹೊರಟರೆ ದ್ವಂದ್ವಗಳೆ ಎಲ್ಲೆಡೆಯೂ ಎಲ್ಲವನ್ನು ನಿರೂಪಿಸುವ ಆಧಾರ ಸ್ತಂಭಗಳಂತೆ ಕಾಣುತ್ತದೆ.. ದ್ವಂದ್ವಗಳಿರದಿದ್ದರೆ ಅಸ್ತಿತ್ವವೆ ಇಲ್ಲ ಎನ್ನುವಂತೆ... ಪರಮಾಣುವಿನ ಶಕ್ತಿಯಲ್ಲೂ ಅದೇ ದ್ವಂದ್ವ - ಸಿಡಿತ ವಿನಾಶವೂ ಆಗಬಹುದು, ಶಕ್ತಿಯ ಉತ್ಪಾದಕವೂ ಆಗಬಹುದು.. ವಿದಳನವಾಗಲಿ, ಸಂಯೋಜನೆಯಾಗಲಿ ಬಿಡುಗಡೆಯಾಗುವ ಶಕ್ತಿ ಯಾವ ರೀತಿಯಲ್ಲಾದರೂ ಬಳಸಲ್ಪಡುವ ದ್ವಂದ್ವಕ್ಕೆ ಸಿಲುಕಬಹುದು.. ವಿನಾಶದ ಸಿಡಿತಕ್ಕೆ ಒಳಗಾಗಿಸದ, ಸೂಕ್ತ ಬಳಕೆಯ ನಿರ್ದೇಶನಕ್ಕೊಳಪಟ್ಟ ಸಮತೋಲನವಿರುವವರೆಗೆ ಎರಡರ ಅಸ್ತಿತ್ವ ಸಹ್ಯ; ಅದನ್ನು ಮೀರಿದರಷ್ಟೆ ವಿನಾಶಕ್ಕೆ ಭಾಷ್ಯ... ಓಹ್! ಹಾಗೆ ನೋಡುತ್ತಾ ಹೋದರೆ ಅದೆಷ್ಟು ದ್ವಂದ್ವದ ಉದಾಹರಣೆಗಳು ಕಣ್ಮುಂದೆ ಸುಳಿದಾಡುತ್ತಿವೆ ಇದ್ದಕ್ಕಿದ್ದಂತೆ? ಕಪ್ಪುಬಿಲಕ್ಕೆ ಸಂವಾದಿಯಾಗಿ ಬಿಳಿಯ ಬಿಲವಿರುವಂತೆ (ಬ್ಲಾಕ್ ಹೋಲ್ ಮತ್ತು ವೈಟ್ ಹೋಲ್), ವಸ್ತುವಿಗೆ ಪ್ರತಿವಸ್ತು (ಮ್ಯಾಟರ ಮತ್ತು ಯಾಂಟಿ ಮ್ಯಾಟರ), ಅಷ್ಟೇಕೆ - ನಾವು ದಿನನಿತ್ಯ ಕಾಣುವ ಕತ್ತಲು, ಬೆಳಕಿನ ದ್ವಂದ್ವ, ಪಾಪ-ಪುಣ್ಯ, ಸ್ವರ್ಗ-ನರಕದ ಕಲ್ಪನೆ, ಆಧ್ಯಾತ್ಮ- ಪ್ರೇತಾತ್ಮ, ಸುರ-ಅಸುರ, ಪಾಂಡವತ್ವ-ಕೌರವತ್ವ, ಮಿಂಚು - ಗುಡುಗು, ಗಾಳಿ - ಮಳೆ ......ಹೀಗೆ ಎಲ್ಲದರ ಅಸ್ತಿತ್ವದತ್ತ ದಿಟ್ಞಿಸಿ ನೋಡಿದರೆ ಪ್ರತಿಯೊಂದರಲ್ಲೂ ಆ ದ್ವಂದ್ವದ ಹೋರಾಟ ಎದ್ದು ಕಾಣುತ್ತದೆ - ಆ ದ್ವಂದ್ವವಿರದಿದ್ದರೆ ಈ ಅಸ್ತಿತ್ವವೆ ಇರಲಿಕ್ಕೆ ಸಾಧ್ಯವಿರಲಿಲ್ಲವೇನೊ? ಎನ್ನುವಂತೆ...' ಎಲ್ಲೆಲ್ಲಿ ಆ ದ್ವಂದ್ವಗಳು ಕಾಣುವುದಿಲ್ಲವೊ ಅಲ್ಲೆಲ್ಲಾ ಅಸ್ತಿತ್ವಗಳು ಮೂಡುವ ಮೊದಲೆ ಅಳಿಸಿ ಹೋಗಿರಬೇಕು - ಪರಸ್ಪರ ಘರ್ಷಣೆಯಲ್ಲಿ ; ಅಥವಾ ಆ ದ್ವಂದ್ವದ ಸಮತೋಲನವನ್ನು ಗುರುತಿಸಲಾಗದ ಅಸಹಾಯಕತೆಗೆ ಅಸ್ಪಷ್ಟ ಕಲ್ಪನೆಯಾಗಿ ಉಳಿದು ಹೋಗಿರಬೇಕು ನಿಲುಕಿಗೆ ಅಥವಾ ವಿವರಣೆಗೆ ಸಿಗದಂತೆ... ಅದೇನೆ ಇರಲಿ, ಅಸ್ತಿತ್ವದ ಇರುವಿಕೆ, ಇಲ್ಲದಿರುವಿಕೆಯನ್ನು ಈ ದ್ವಂದ್ವದ ಕನ್ನಡಿಯ ಮೂಲಕ ನೋಡಿ ಅನುಭಾವಿಸುವುದು ನನಗಂತೂ ತೀರಾ ಹೊಸತಿನ ಅನುಭವ....' ಯಾವುದೊ ಕನಸಿನ ಲೋಕದಲ್ಲಿರುವವನಂತೆ ತನ್ನದೆ ಆದ ತಲ್ಲೀನತೆಯಲ್ಲಿ, ತನದೆ ಸ್ವಗತದ ಲಹರಿಯಲ್ಲಿರುವಂತೆ ಮಾತಾಡಿಕೊಳ್ಳುತ್ತಿದ್ದ ಶ್ರೀನಾಥಾ, ಆ ಹೊತ್ತಲ್ಲಿ ಪಕ್ಕದಲ್ಲಿರುವ ಮಾಂಕ್ ಸಾಕೇತರನ್ನು ಮರೆತವನಂತೆ.. ಅವರಿಗೊ ಅವನು ಯಾವುದೋ ಹಾದಿ ಹಿಡಿದಂತೆ ಹೊರಟರೂ, ಗ್ರಹಿಸಬೇಕಾದ್ದನ್ನು ಗ್ರಹಿಸುತ್ತ ನಡೆಯುತ್ತಿರುವುದು ಮುನ್ನಡೆಯ ಹೆಜ್ಜೆಯೆ ಸರಿ ಅನಿಸಿತ್ತು.. ಅದರಲ್ಲಿ ತಪ್ಪು ಹೆಜ್ಜೆ ಕಂಡಾಗಷ್ಟೆ ಅವರು ಮತ್ತಷ್ಟು ಸಕ್ರೀಯರಾಗಿ ಸರಿಪಡಿಸಬೇಕು...ಆದರೀಗ ಶ್ರೀನಾಥ ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯುತ್ತಿರುವುದರಿಂದ ಅದನ್ನು ಮುಂದಿನ ಸ್ತರಕ್ಕೇರಿಸುತ್ತಾ ಹೋಗಬೇಕು..ಅವನು ತಾನಾಗೆ ಮುನ್ನಡೆಯಬಲ್ಲ ಹಂತ ತಲುಪುವ ಹಾಗೆ..
' ಈಗ ನಿನ್ನ ದ್ವಂದ್ವದ ಸಮತೋಲನ ಸ್ಥಿತಿಯನ್ನು ನೀನೆ ಕಂಡುಕೊಳ್ಳುವುದು ಮುಂದಿನ ಗುರಿ. ಯಾವಾಗ ನಿನಗದರ ಸಮೀಕರಣತ್ವದ ಅರಿವಾಗುವುದೊ ಆಗ ನಿನ್ನನ್ನೆ ನೀನು ಅರಿಯುವಲ್ಲಿ ಮೊದಲ ಹೆಜ್ಜೆ ಇಟ್ಟ ಹಾಗೆ.. ಆದರೆ ಅದಕ್ಕೆ ಮೊದಲು, ದ್ವಂದ್ವಗಳಿದ್ದೂ ಅದನ್ನು ಸಮರ್ಥವಾಗಿ ಸಮತೋಲಿತ ಸಮೀಕರಣದ ರೂಪವಾಗಿ ಪರಿವರ್ತಿಸಿ ನಿಭಾಯಿಸೊ ಬಗೆಯನ್ನು ಅರಿಯಬೇಕು...' ಎಂದರು.
ಅವರು ಹೇಳುತ್ತಿರುವ ರೀತಿಯನ್ನು ಸ್ಥೂಲವಾಗಿ ಸರಳೀಕರಿಸಿದರೆ ಒಂದು ವಿಧದಲ್ಲಿ ತ್ರಿಗುಣಗಳ ಇರುವಿಕೆಯ ಸಾರವನ್ನು ಬಿಡಿಸಿಟ್ಟಂತೆ ಭಾಸವಾಗಿತ್ತು. ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಪ್ರತಿಯೊಂದು ಅಸ್ತಿತ್ವದಲ್ಲೂ ಯಾವುದೊ ಅನುಪಾತದಲ್ಲಿ ಮೇಳೈಸಿಕೊಂಡಿರುವಂತೆ. ಗುಣಾವಗುಣಗಳ ಪರ್ಯಾಲೋಚನೆಗಿಳಿದಾಗ ಶುದ್ಧ ಸಾತ್ವಿಕ ಗುಣ ಘರ್ಷಣೆಗಿಳಿಯುವ ಮನಸತ್ವದ್ದಲ್ಲ. ಅಂದ ಮೇಲೆ ಅದೊಂದು ಮೌನ ಪ್ರೇಕ್ಷಕನಂತೆ ಇರುವ ನಿರ್ಲಿಪ್ತ 'ನ್ಯೂಟ್ರಾನ್' ತರಹದ ಲಕ್ಷಣವನ್ನು ಹೊದ್ದುಕೊಂಡು ಕೂತಿರಬೇಕು. ಆದರೆ ಮಿಕ್ಕೆರಡರ ಬಗ್ಗೆ ಹಾಗೆ ಹೇಳುವಂತಿಲ್ಲ... ಸ್ವಭಾವತಃ ರಾಜಸ ಶಕ್ತಿ, ಬಲದ ತೇಜದೊಂದಿಗೆ ಹಿಂದೆ ಮುಂದೆ ನೋಡದೆ ಮುನ್ನುಗ್ಗುವ ಸ್ವಭಾವದ್ದು - ಪರಮಾಣು ಕಣದಲ್ಲಿನ 'ಎಲೆಕ್ಟ್ರಾನಿನ' ಹಾಗೆ. ಯುದ್ಧಕ್ಕಿಳಿಯಲು ಸದಾ ತುಡಿಯುವ ಅದರ ವ್ಯಕ್ತಿತ್ವ ಘರ್ಷಣೆಗಿಳಿಯಲು ಸೂಕ್ತವಾದ ಮನಸ್ಥಿತಿ. ಅಷ್ಟೆ ಅಧಿಕಾರಯುತ ಅಹಂಕಾರದ ಸ್ತರದಲ್ಲಿ ಪಾರದರ್ಶಕವೂ ಹೌದು ತನ್ನ ಇಂಗಿತ, ಆಸೆಗಳ ಅಭಿವ್ಯಕ್ತಿಯಲ್ಲಿ. ಆದರೆ ತಾಮಸ ಹಾಗಲ್ಲ.. ಎಲ್ಲವು ಮುಸುಕಿನ, ಕಳ್ಳತನದ ವ್ಯಾಪಾರ, ಗುಟ್ಟಿನಲಿ ಒಳಗೆ ಹಿನ್ನಲೆಯಲಿ ಕೂತ ' ಪ್ರೋಟಾನಿನ' ಹಾಗೆ. ಕದ್ದುಮುಚ್ಚಿ ಅವಿತೆ ಅಡ್ಡವಾಗಿ ಅಜ್ಞಾನದ ಮುಸುಕುಟ್ಟುಕೊಂಡು ಅಡ್ಡಾದಿಡ್ಡಿ ಓಲಾಡುತ್ತ ಸದಾ ದಾರಿ ತಪ್ಪಿಸುವ ಶಕುನಿಯ ಹುನ್ನಾರದ್ದು. ವೀರತ್ವದಿಂದ ನೇರ ಘರ್ಷಣೆಗಿಳಿಯದಿದ್ದರೂ ಮತ್ತಾವುದೊ ಗುಪ್ತ, ನಿಗೂಢ ವಿಧಾನದಿಂದ ಯುದ್ಧಭೂಮಿಯಲ್ಲಿ ಘರ್ಷಣೆಗೆ ಇಂಬುಕೊಡುತ್ತ ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುತ್ತದೆ - ಹಾಗೆ ಸೂಕ್ತ ಸಮಯ, ಸಂಧರ್ಭ ಸಿಕ್ಕಲ್ಲಿ ತನ್ನ ಅಧಿಕಾರ ಸ್ಥಾಪಿಸಿಕೊಂಡು ವಿಜಯದ ಬಾವುಟ ಹಾರಿಸಲು ಹವಣಿಸುತ್ತ.. ಈ ಎರಡರ ಘರ್ಷಣೆಯನ್ನು ಏಕಾಕಿಯಾಗಿ ತಡೆಯಲಾಗದ ನಿಸ್ಸಹಾಯಕ ಸಾತ್ವಿಕತೆ ಎರಡರ ಘರ್ಷಣೆಯನ್ನು ಸುಮ್ಮನೆ ನೋಡುತ್ತಿರಬೇಕಷ್ಟೆ ಹೊರತು ಮತ್ತೇನೂ ಮಾಡಲಾಗದು. ಆದರೆ ಯಾವಾಗ ಘರ್ಷಣೆ ಆರಂಭವಾಗಿ ಎರಡರ ಬಲವೂ ನಿಧಾನವಾಗಿ, ಕ್ರಮೇಣವಾಗಿ ಕುಂದಲು ಆರಂಭವಾಗುತ್ತದೆಯೊ ಆಗ ನಿಧಾನವಾಗಿ ಸಾತ್ವಿಕ ಗುಣ ತನ್ನ ಜಾಲವನ್ನು ಬೀಸಲು ಆರಂಭಿಸುತ್ತದೆ... ಪರಸ್ಪರ ಬಡಿದಾಡಿಕೊಂಡು ಅಸು ನೀಗುವ ಜೀವನ್ಮರಣ ಹೋರಾಟಕ್ಕಿಳಿದ ಎರಡು ಶಕ್ತಿಗಳ ಕುಂದಿದ ಬಲವನ್ನೆ ಬಂಡವಾಳವಾಗಿಸಿಕೊಂಡು, ಯಾವಾಗ ಅವೆರಡರ ಸಂಘಟಿತ ಅಥವಾ ವೈಯಕ್ತಿಕ ಬಲ ತನ್ನನ್ನು ದಮನಿಸುವ ಮಟ್ಟಕ್ಕಿಲ್ಲವೆಂದು ಖಚಿತವಾಗುತ್ತದೆಯೊ ಆಗ ರಣರಂಗವನ್ನು ಪ್ರವೇಶಿಸುತ್ತದೆ - ಎರಡರ ನಡುವಿನ ವಿಕರ್ಷಣ ಶಕ್ತಿಯಾಗಿ. ಇನ್ನು ಅವು ಪರಸ್ಪರ ಹೋರಾಡಬೇಕಾದರೆ ಮೊದಲು ತಮಗಿಂತ ಬಲವಾದ ಸಾತ್ವಿಕವನ್ನು ಗೆದ್ದು ನಂತರ ಶತ್ರು ಪಾಳಯಕ್ಕೆ ಜಿಗಿಯಬೇಕು.. ಆದರೆ ಕುಂದಿದ ಶಕ್ತಿಯಲ್ಲಿ ಅದು ಸಾಧ್ಯವಾಗದೆ ಸಾತ್ವಿಕದ ಸಂಧಿಯ ಬಿಳಿ ಬಾವುಟವನ್ನು ಒಪ್ಪಿಕೊಂಡು ಆಗುದ್ಭವಿಸಿದ ಸಮತೋಲಿತ ಸ್ಥಿತಿಯಲ್ಲಿ ಸಮಯ ಕಾಯುತ್ತ ಸಂಯಮದಿಂದಿರುವ ಅನಿವಾರ್ಯ ಉದ್ಭವಿಸಿಬಿಡುತ್ತದೆ. ಒಂದು ವೇಳೆ ಸಾತ್ವಿಕ ಗುಣ ಈ ಸಂಧಿ ಕಾರ್ಯದಲ್ಲಿ ಯಶಸ್ವಿಯಾದರೆ, ಒಳ್ಳೆಯದೊ - ಕೆಟ್ಟದ್ದೊ ಒಂದು ಸಮತೋಲಿತ ಸ್ಥಿತಿಯಂತು ಹುಟ್ಟಿಕೊಳ್ಳುತ್ತದೆ. ಅದೇ ಸಾತ್ವಿಕದ ಬದಲು ಮಿಕ್ಕೆರಡರ ಕೈ ಮೇಲಾದರೆ ಆ ಘರ್ಷಣೆ ಮರಣಾಂತಿಕವಾಗಿ ಎಲ್ಲ ಮೂರು ಗುಣಗಳೊಡನೆ ಆ ವಸ್ತುವಿನ ಅಸ್ತಿತ್ವವೂ ನಾಶವಾಗಿಹೋಗುತ್ತದೆ. ಮಾಂಕ್ ಸಾಕೇತರು ಇನ್ನೊಂದು ವಿಧದಲ್ಲಿ ವಿವರಿಸುತ್ತಿರುವ ಭೌತಿಕಾಭೌತಿಕ ಅಸ್ತಿತ್ವದ ಉಪಸ್ಥಿತಿ ಈ ತ್ರಿಗುಣಗಳ ಅಸ್ತಿತ್ವದ ಪ್ರಕ್ರಿಯೆಯನ್ನು ಮತ್ತೊಂದು ರೀತಿಯಲ್ಲಿ ನಿರೂಪಿಸುವ ವಿಧಾನವಿರಬಹುದೆ ?
(ಇನ್ನೂ ಇದೆ)
____________
Comments
ಉ: ಕಥೆ: ಪರಿಭ್ರಮಣ..(50)
ಕಠಿಣ, ಕ್ಲಿಷ್ಟ ವಿಷಯದ ಕುರಿತ ತರ್ಕ, ವಿತರ್ಕಗಳು ಕುತೂಹಲಕಾರಿಯಾಗಿದೆ. ಮುಂದುವರೆಸಿ.
In reply to ಉ: ಕಥೆ: ಪರಿಭ್ರಮಣ..(50) by kavinagaraj
ಉ: ಕಥೆ: ಪರಿಭ್ರಮಣ..(50)
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು.
ನನ್ನ ತಿಳುವಿನಳವಿಗೆಟುಕುವಷ್ಟು ಮಟ್ಟಿಗೆ 'ತಾರ್ಕಿಕ'ವಾಗಿ, 'ವೈಜ್ಞಾನಿಕ'ವಾಗಿ ಮಂಡಿಸಲು ಯತ್ನಿಸುತಿದ್ದೇನೆ. ಅಂತಿಮ ರೂಪ ಹೇಗೆ ಬರುವುದೊ - ಸುಸಂಬದ್ಧ ತರ್ಕವಾಗುವುದೊ ಇಲ್ಲ ಅಸಂಬದ್ಧ ಪ್ರಲಾಪವಾಗುವುದೊ - ಎಂದು ಕಾದು ನೋಡೋಣ :-)