ಕಥೆ: ಪರಿಭ್ರಮಣ..(51)
(ಪರಿಭ್ರಮಣ..50ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
'ಅದರೆ ಮಾಸ್ಟರ, ಆ ಸರ್ವೋಚ್ಛ ಸಮತೋಲನವನ್ನು ಪಡೆಯುವ ಬಗೆಯೆಂತು? ಬರಿ ದ್ವಂದ್ವಗಳೆ ಮೂಲ ವಸ್ತುವೆಂದ ಮೇಲೆ ಅದರಿಂದಲೆ ಸಮತೋಲನವನ್ನು ಹೊರಡಿಸುವುದು ಸಾಧ್ಯವೆ? ಆಸೆಯೆ ದುಃಖಕ್ಕೆ ಮೂಲ ಎನ್ನುವಾಗ ಸಹ ಆ ಆಸೆಯ ಸುಖ ಮತ್ತು ಅದನ್ನು ಅಧಿಗಮಿಸಲಾಗದ ದುಃಖ ಎರಡೂ ತಕ್ಕಡಿಯ ಎರಡು ಬದಿಯನ್ನು ಸರಿದೂಗಿಸಬೇಕು.. ಸಾಮಾನ್ಯ ಮಾನವರ ಎಟುಕಿಗೆ ಇದು ಅಷ್ಟು ಸುಲಭವಾಗಿ ನಿಲುಕುವುದೆ?' ಕೇಳಿದ ಶ್ರೀನಾಥ.
' ಇಲ್ಲಾ ಕುನ್. ಶ್ರೀನಾಥ...ಬಹುತೇಕ ಸಾಮಾನ್ಯರಾರೂ ಈ ಸಮತೋಲನವನ್ನು ಅಷ್ಟು ಸುಲಭದಲ್ಲಿ ಗಳಿಸಲಾಗದು. ಅದರಿಂದಲೆ ಸದಾ ಒಂದಲ್ಲ ಒಂದು ತೊಳಲಾಟದಲ್ಲಿ ನರಳುತ್ತಲೆ ಇರುವ ವಿಕೃತ ಪರಿಸ್ಥಿತಿಯುಂಟಾಗುತ್ತದೆ - ಆ ಅಸಮತೋಲನವೆ ಅಸಂತೃಪ್ತಿಯ ಮೂಲ ಸರಕಾಗುತ್ತ. ಆ ಚಕ್ರ ಕೊನೆಗೊಳ್ಳುವುದೆ ಇಲ್ಲ - ಏಕೆಂದರೆ ಬಹುತೇಕರು ಆ ಚಕ್ರದಿಂದ ಹೊರಬಂದ ಸಮತೋಲನ ಸ್ಥಿತಿಯ ವೇದಿಕೆಯನ್ನು ತಲುಪುವುದೆ ಇಲ್ಲ. ಅದೆ ನನ್ನಂತಹ ಭಿಕ್ಕುಗಳನ್ನು ನೋಡು - ನಾವು ಗಳಿಸಬೇಕಾದ ಸಮತೋಲನದಲ್ಲಿ ಒಂದು ಕಡೆ ಆಸೆಯೆಂಬ ಪ್ರವೃತ್ತಿ ಶೂನ್ಯ ತೂಕವಾಗಬೇಕು - ಶೂನ್ಯವೆಂದರೆ ಏನೂ ಬೇಡದ ಎಲ್ಲವೂ ಇರುವ ಪರಿಸ್ಥಿತಿ; ಮತ್ತೊಂದೆಡೆ ಆಸೆಯ ಪ್ರಲೋಭನೆಗಳನ್ನು ಧಿಕ್ಕರಿಸಿದ್ದರಿಂದುಂಟಾಗುವ ದುಃಖವನ್ನು ಶೂನ್ಯವನಾಗಿಸಬೇಕು - ಅದು ಕೂಡ ಏನೂ ಇರದಿದ್ದರೂ ಎಲ್ಲವೂ ಇರುವ ದುಃಖರಹಿತ ಸ್ಥಿತಿ. ಈ ಶೂನ್ಯ ಸಮತೋಲನದ ಸಂಪಾದನೆಯಲ್ಲೆ ಇಡಿ ಜೀವನ ಸವೆದು ಹೋಗುತ್ತದೆ ನಮ್ಮಂತಹವರಿಗೆ..ಎಷ್ಟೊ ಜನ ಭಿಕ್ಕುಗಳಾದರೂ ಅಲ್ಲಿಯತನಕ ತಲುಪುವರೆಂದು ಹೇಳಲಾಗದು - ಕೇವಲ ಕೆಲವರಿಗಷ್ಟೆ ಆ ಸೌಭಾಗ್ಯ. ಮಿಕ್ಕವರು ತಲುಪಿದ್ದಷ್ಟೆ ದೂರಕ್ಕೆ ತೃಪ್ತರಾಗಬೇಕು - ತಮ್ಮ ಪ್ರಾಪ್ತಿ, ಕರ್ಮಫಲ ಅಷ್ಟೆ ಎಂದುಕೊಂಡು. ಆದರೆ ಸಾಮಾನ್ಯರ ವಿಷಯಕ್ಕೆ ಬಂದರೆ ಅಲ್ಲಿ ಶೂನ್ಯ ಸಂಪಾದನೆ ಗುರಿಯಲ್ಲ. ಹೇಗಾದರೂ ಎರಡು ಕಡೆ ಸಮತೂಕವಾಗಿಸಿ ಸಮತೋಲಿಸುವ ಹುನ್ನಾರವಷ್ಟೆ ಅಲ್ಲಿ ಪ್ರಸ್ತುತ. ಅದರಲ್ಲಿ ಯಶಸ್ಸು ಸಿಕ್ಕಿದರೆ ನೆಮ್ಮದಿಯ ಭಾವ; ಅದರ ಏರುಪೇರಾದಾಗೆಲ್ಲ ಅಶಾಂತಿ, ದುಃಖ, ಅಸಹನೆ ಇತ್ಯಾದಿ..'
'ಅಂದರೆ ನಿರಂತರವಾಗಿ ಏರುಪೇರಾದಾಗೆಲ್ಲ ಎಚ್ಚೆತ್ತುಕೊಂಡು ಮತ್ತೆ ಸರಿದೂಗಿಸಿಕೊಂಡು ಸಾಗುತ್ತಿರಬೇಕೆ, ಕೊನೆಯೆ ಇಲ್ಲದಂತೆ? ಒಮ್ಮೆ ಸಮತೋಲನ ಸ್ಥಿತಿಯನ್ನು ತಲುಪಿದ ಮೇಲೆ ಸದಾ ಅದರ ಮಟ್ಟದಲ್ಲೆ ಉಳಿದುಬಿಡಲು ಆಗುವುದೆ ಇಲ್ಲವೆ ಈ ನಿತ್ಯ ಸ್ಥಿತ್ಯಂತರದಲ್ಲಿ?' ತುಸು ಖೇದದಲ್ಲೆ ಬಂದಿತ್ತು ಶ್ರೀನಾಥನ ದನಿ. ತಾನು ಏನೆ ಸಾಧಿಸಿದರೂ ಅದು ಕೇವಲ ತಾತ್ಕಾಲಿಕವಷ್ಟೆ ಎಂಬ ಭಾವ ಯಾಕೊ ಅವನನ್ನು ಮಾನಸಿಕವಾಗಿ ಕುಗ್ಗಿಸಿ ಅಸಂತುಷ್ಟನನ್ನಾಗಿಸಿತ್ತು. ಕೊನೆಯಿಲ್ಲದೆ ಉತ್ತರಕ್ಕಾಗಿ ಹುಡುಕುತ್ತಲಿರುವುದೆ ಬದುಕೆ?
' ಹೊರಗಿನ ಪೀಡಕಗಳ ವಿಧ್ವಂಸಕ ಪ್ರಭಾವವಿಲ್ಲದಾಗ ಆ ಸ್ಥಿತಿಯನ್ನು ತಲುಪಿ ಅದನ್ನೆ ನಿರಂತರವಾಗಿಸಿಕೊಂಡ ಅದೆಷ್ಟೋ ನಿದರ್ಶನಗಳ ದ್ವಂದ್ವ ನಮ್ಮ ಕಣ್ಣೆದುರಲ್ಲೆ ಇದೆ ಕುನ್. ಶ್ರೀನಾಥ... ಆದರೆ ನಾನು ಇದುವರೆವಿಗು ಕಂಡ ಆ ನಿದರ್ಶನಗಳೆಲ್ಲ ಆ ಮಹಾನ್ ವಿಜ್ಞಾನಿಯ ಕೈ ಚಳಕಕ್ಕೆ ಸಂಬಂಧಿಸಿದ್ದು.. ಮಾನವ ನಿರ್ಮಿತಿಯಲ್ಲಾಗಲಿ, ಆತ್ಮೋನ್ನತಿಯ ಹಾದಿಯ ಸಾಧನೆಯಲ್ಲಾಗಲಿ ನಾನದರ ನಿದರ್ಶನ, ಕುರುಹುಗಳನ್ನು ಇನ್ನೂ ಕಾಣಲಾಗಿಲ್ಲ...'
'ಕಣ್ಣೆದುರಿಗೆ ಇವೆಯೆ? ಇದ್ದರೆ ನಾನದನ್ನು ಕಾಣಲು, ಅರಿಯಲು ಸಾಧ್ಯವೆ - ಕನಿಷ್ಠ ಅದು ಹೇಗಿರುವುದೆಂಬ ಅನುಭೂತಿಯ ಪ್ರಜ್ಞೆಗಾದರೂ ದಕ್ಕೀತೇ ?'
'ನೀನೆ ಏನು? ಪ್ರತಿಯೊಬ್ಬರು ಅದನ್ನು ಕಾಣಲು ಸಾಧ್ಯ... ನಿಜ ಹೇಳುವುದಾದರೆ ಸದಾ ಅದನ್ನು ಕಾಣುತ್ತಲೆ ಇರುತ್ತಾರೆ, ಸಾಕ್ಷಿಭೂತರಾಗಿ ಇರುತ್ತಾರೆ ಕೂಡಾ - ಆದರೆ ಅದರ ಅರಿವಿನ ಪರಿವೆ, ಗೊಡವೆಯಿಲ್ಲದೆ !'
'ಮಾಸ್ಟರ, ನೀವು ನುಡಿಯುತ್ತಿರುವಂತೆ ಅದು ಅಷ್ಟೊಂದು ಸರಳವಾಗಿ, ಅಷ್ಟೊಂದು ಸಹಜವಾಗಿದ್ದರು ನನಗೂ ಅದೇನೆಂದು ಊಹಿಸಿಕೊಳ್ಳಲಾಗುತ್ತಿಲ್ಲ.. ದಯವಿಟ್ಟು ಒಂದು ಉದಾಹರಣೆಯೊಂದಿಗೆ ವಿವರಿಸುತ್ತಿರಾ?' ಅದೇನಿರಬಹುದೆಂಬ ಗೊಂದಲದ ಕುತೂಹಲದಲ್ಲೆ ಸಿಕ್ಕಿ ತೊಳಲುತ್ತ ಕೇಳಿದ ಶ್ರೀನಾಥ.
' ಅದು ತುಂಬ ಸರಳ ದ್ವಂದ್ವದ ಉದಾಹರಣೆ ಕುನ್. ಶ್ರೀನಾಥ.. ಬಹುಶಃ ಅದಷ್ಟು ಸರಳ, ಸಾಮಾನ್ಯ ರೂಪದಲ್ಲಿ ಸಹಜವಾಗಿ ಅಸ್ತಿತ್ವದಲ್ಲಿರುವುದರಿಂದಲೆ ಅದರ ಇರುವಿಕೆ ಯಾರ ವಿಶೇಷ ಗಮನವನ್ನು ಸೆಳೆಯುವುದಿಲ್ಲವೇನೊ..? ಸರಿ, ನಮ್ಮ ಇಡೀ ಜೀವ ಜಗತ್ತಿನ ಬದುಕಿಗೆ, ಜೀವಿಗಳ ಅಸ್ತಿತ್ವದ ಕುರುಹಾದ ಉಸಿರಾಟಕ್ಕೆ ಮೂಲವಾಗಿರುವ ವಸ್ತು ಯಾವುದು ಹೇಳು?'
' ಮತ್ತಿನ್ನಾವುದು ಮಾಸ್ಟರ? ಎಲ್ಲರ ಜೀವದ ಪ್ರಾಣವಾಯುವಾದ ಆಮ್ಲಜನಕ ತಾನೆ?' ಸಾಕಷ್ಟು ನಿಖರತೆಗೆ ನಿಕಟವಾಗಿರುವ ಉತ್ತರವೆಂಬ ಆತ್ಮವಿಶ್ವಾಸದ ದನಿಯಲ್ಲಿ ಮಾರ್ನುಡಿದಿದ್ದ ಶ್ರೀನಾಥ.
' ನಿಜ.. ಅಂದರೆ ಎಲ್ಲಾ ಜೀವಿಗಳಲ್ಲೂ ಆಮ್ಲಜನಕವೆ ಜೀವವಾಯುವೆನ್ನುವುದನ್ನು ನೀನು ಒಪ್ಪುತ್ತಿಯ ತಾನೆ? ಪ್ರಾಣಿ ಸಂಕುಲ, ಗಿಡ, ಮರ, ಮಾನವರಾದಿಯಾಗಿ...?'
' ಹೌದು ಖಂಡಿತ ಒಪ್ಪುತ್ತೇನೆ... ಅದರಲ್ಲಿ ಸಂದೇಹವೇನಿದೆ ? ಕನಿಷ್ಠ ಅದು ಸೈದ್ದಾಂತಿಕವಾಗಿ, ವೈಜ್ಞಾನಿಕವಾಗಿ ಮತ್ತು ಸಾಮಾನ್ಯ ಮಾನವರ ಬದುಕಿನ ನಿಲುಕಿನಲ್ಲೂ ಸಾಮಾನ್ಯ ಜ್ಞಾನವಾಗಿ ಪಸರಿಸಿಕೊಂಡಿರುವ ಅಪ್ಪಟ ಸತ್ಯ...'
' ನಿಜ... ಆದರೆ ಅದೆ ವಾಯು ಮಂಡಲದಲ್ಲಿ ಅದಕ್ಕೆ ವಿರುದ್ಧಾರ್ಥಕ ದ್ವಂದ್ವ ರೂಪದ ಪ್ರತಿಸ್ಪರ್ಧಿಯಾಗಿ ಇರುವ ಮತ್ತೊಂದು ಅನಿಲ ಯಾವುದು?' ಮತ್ತೆ ಅವನನ್ನು ಕೆಣಕುವ ರೀತಿಯಲ್ಲಿ ಪ್ರಶ್ನಿಸಿದ್ದರು ಮಾಂಕ್ ಸಾಕೇತ್.
' ಆಮ್ಲಜನಕ ಉಸಿರಾಟಕ್ಕೆ ಅತ್ಯಾವಶ್ಯಕ... ಆದರೆ ಅದನ್ನು ಹೆಚ್ಚುಕಾಲ ಹಾಗಿರಲು ಬಿಡದೆ ಕೊಚ್ಚೆಯಂತೆ ಬೆರೆತು ಮಲಿನವಾಗಿಸುವುದು ಇಂಗಾಲ.. ಅದಕ್ಕೆ ಅದನ್ನು ಇಂಗಾಲದ ಡಯಾಕ್ಸೈಡ್ ರೂಪದಲ್ಲಿ ಹೊರಗೆ ಹಾಕುತ್ತೇವೆ ಬೇಡದ ತ್ಯಾಜ್ಯವಾಗಿ.... ಅರೆರೆ...ಒಂದು ನಿಮಿಷ ತಾಳಿ ಮಾಸ್ಟರ... ? ....ಮಾಸ್ಟರ.... ಆಮ್ಲಜನಕವೆಂಬ ಜೀವವಾಯುವಿನ ಸೃಷ್ಟಿಯಾದಾಗಲೆ ಅನಿವಾರ್ಯವಾಗಿ ಅದರ ವಿರುದ್ಧಗಾಮಿ ಇಂಗಾಲವೂ ಸೃಜಿಸಲ್ಪಟ್ಟಿತೆಂದು ಹೇಳುತ್ತಿದ್ದೀರಾ - ದ್ವಂದ್ವದ ಸಂವಾದಿಯಾಗಿ? ' ಅವರು ಮಂಡಿಸಿದ್ದ ಸಿದ್ದಾಂತದ ಎಳೆ ಹಿಡಿದು ಪಕ್ಕನೆ ಹೊಳೆದ ಆಲೋಚನೆಯನ್ನು ಪ್ರಶ್ನೆಯ ರೂಪಾಗಿಸಿ ಕೇಳಿದ್ದ ಶ್ರೀನಾಥ.
' ನಿಜ...ಅದನ್ನೆ ನಾನು ಹೇಳ ಹೊರಟಿದ್ದು... ಹೇಗೊ ಅವುಗಳ ಸೃಷ್ಟಿಯಾಗಿ, ಎರಡೂ ಅಂಶಗಳು ಪರಸ್ಪರ ದ್ವಂದ್ವದಲ್ಲಿ ಸಿಲುಕಿ ಘರ್ಷಣೆಗಿಳಿದಾಗ, ಅದರಲ್ಲೆ ಎರಡರ ವಿನಾಶವೂ ಆಗಿ ಹೋಗಬಹುದಿತ್ತು.. ಆದರೆ ಆ ಭಗವಂತನೆನ್ನುವ ಮಹಾವಿಜ್ಞಾನಿಯ ಕೈ ಚಳಕವೇನೊ ಎಂಬಂತೆ ಅವೆರಡು ಒಟ್ಟಿಗೆ ಇರಬಹುದಾದ ಸಮತೋಲಿತ ಸ್ಥಿತಿಯ ನಿರ್ಮಾಣವಾಗಿ ಹೋಯ್ತು.. ಮಾತ್ರವಲ್ಲ ಅದು ತಂತಾನೆ ಸ್ವನಿಯಂತ್ರಿತವಾಗಿ, ಅನಿಯಮಿತವಾಗಿ ಆ ಸ್ಥಿತಿಯಲ್ಲೆ ಇಟ್ಟುಕೊಳ್ಳಲು ಸಾಧ್ಯವಿರುವಂತಹ ಪ್ರಕ್ರಿಯೆಯೂ ಸಾಧ್ಯವಾಗಿಹೋಯ್ತು.. ಬಹುಶಃ ಅವುಗಳ ಸೃಷ್ಟಿಯನ್ನು ಮಾತ್ರ ಪರಿಗಣಿಸಿ ಹೇಳುವುದಾದರೆ ಅದನ್ನು ಯಾರಾದರೂ ಮಾಡಬಹುದಿತ್ತು - ದೇವರೆಂಬ ಕಲ್ಪನೆಯ ಮಹಾವಿಜ್ಞಾನಿಯೆ ಆಗಬೇಕಿರಲಿಲ್ಲ.. ಆದರೆ ಅದನ್ನು ನಿರಂತರ ಸಮತೋಲನದಲ್ಲಿಡುವ ನಿಸರ್ಗ ಸಹಜ ಪ್ರಕ್ರಿಯೆ ಮಾತ್ರ ಮಹಾನ್ ಅದ್ಬುತದ ಅದ್ಭುತ. ಅದನ್ನು ಸಾಧ್ಯವಾಗಿಸಿದ ಮಹಾನ್ ವಿಜ್ಞಾನಿಗೆ ದೇವರೆಂದಾದರೂ ಕರೆ, ಬೇರೇನಾದರು ಹೆಸರಿಟ್ಟಾದರೂ ಕರಿ - ಅದೊಂದು ಮಹಾನ್ ಶಕ್ತಿ ಸಂಕುಲ ಎನ್ನುವುದಂತೂ ನಿಜ...'
' ನಿಮ್ಮ ವಿವರಣೆಯ ಸಾರ ನನಗರ್ಥವಾದರೂ ನಿಮ್ಮ ಮಾತುಗಳಲ್ಲಿ ಕೇಳುತ್ತಿದ್ದರೆ ಮೈಯೆಲ್ಲ 'ಜುಂ' ಎನ್ನುತ್ತಿದೆ.. ಆ ಅದ್ಭುತದ ವಿಶೇಷವನ್ನು ಸ್ವಲ್ಪ ವಿವರಿಸಿ ಹೇಳಿ ಮಾಸ್ಟರ..' ಅಂಜಲೀ ಬದ್ದನಾಗಿ, ಮೈಯೆಲ್ಲಾ ಕಿವಿಯಾದವನಂತೆ ಏಕಾಗ್ರ ಚಿತ್ತತೆಯಡಿ ತನ್ನನ್ನೆ ಪ್ರಕ್ಷೇಪಿಸಿಕೊಂಡವನಂತೆ ವಿನಮ್ರವಾಗಿ ವಿನಂತಿಸಿಕೊಂಡ ಶ್ರೀನಾಥ.
' ಇದರಲ್ಲಿ ವಿವರಿಸಲಿಕ್ಕೇನಿದೆ ಕುನ್. ಶ್ರೀನಾಥ? ಆ ಮಹಾನ್ ವಿಜ್ಞಾನಿಗೂ ಆಮ್ಲಜನಕದಂತಹ ಜೀವ ವಾಯುವಿನ ಹಿನ್ನಲೆಯಲ್ಲೆ ಸೃಷ್ಟಿಯಾಗುವ ಇಂಗಾಲದಂತಹ ವಿಷವಾಯುಗಳನ್ನು ಸೃಷ್ಟಿಯಾಗಿಸದಂತೆ ತಡೆಯಲು ಸಾಧ್ಯವಿರಲಿಲ್ಲ.. ಬಹುಶಃ ಅದು ನಿಸರ್ಗದ ಅವಿಚಲಿತ ನಿಯಮವೇನೊ ಎಂಬಂತೆ. ಈಗಿನ ವಿಜ್ಞಾನವೂ ಆ ಸತ್ಯವನ್ನರಿತುಕೊಂಡೆ ಶಕ್ತಿಯ ಮೂಲ ನಿಯಮವನ್ನು ರೂಪಿಸಿ ಕೊಂಡಿದ್ದಲ್ಲವೆ ? ಶಕ್ತಿಯನ್ನು ಸೃಷ್ಟಿಸಲು ಆಗದು ಸರ್ವನಾಶಗೊಳಿಸುವುದೂ ಅಸಾಧ್ಯ; ಏನಿದ್ದರೂ ಅದನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ 'ರೂಪಾಂತರಿಸಬಹುದಷ್ಟೆ'. ಆದರೆ ಆ ರೂಪಾಂತರದ ಸ್ಥಿತ್ಯಂತರ ಫಲಿತ ಮಾತ್ರ ವಿಧ್ವಂಸಕವೂ ಆಗಬಹುದು, ಸಚೇತಕವೂ ಆಗಬಹುದು - ಅದನ್ನು ಪ್ರಕೃತಿಯ ಮತ್ತು ಪರಿಸರದ ಯಾವ ಸಮತೋಲನ ನಿಯಮ ಪ್ರಭಾವ ಬೀರಿ ನಿಯಂತ್ರಿಸುತ್ತದೆ ಎನ್ನುವುದರ ಮೇಲೆ ಅವಲಂಬಿಸಿ. ನೆನಪಿರಲಿ ನಾನು ಹೇಳುತ್ತಿರುವುದು ಪ್ರಯೋಗ ಶಾಲೆಯಲ್ಲಿ ಅಮ್ಲಜನಕ ಸೃಜಿಸಿದರೆ ಇಂಗಾಲವೂ ಅಲ್ಲೆ ಜತೆಗೆ ಬಿಡುಗಡೆಯಾಗುತ್ತದೆ ಎನ್ನುವ ಅರ್ಥದಲ್ಲಲ್ಲ. ಒಟ್ಟಾರೆ ಪ್ರಾಣವಾಯುವಿನ ಸೃಷ್ಟಿಗೆ ಹೊರಟಾಗ ಅದರಷ್ಟೆ ಸಮಷ್ಟಿ ತೂಕದ ಪ್ರತಿ ಪ್ರಾಣವಾಯು ತತ್ವವೂ ಸೃಜಿತವಾಯಿತು ಎಂದಷ್ಟೆ... ಒಟ್ಟಾರೆ ವ್ಯವಸ್ಥೆಯೆಂಬ ಸಮಷ್ಟಿಯ ಒಟ್ಟು ಮೊತ್ತದಲ್ಲಿ ಎಲ್ಲೊ ಒಂದು ಕಡೆ ಆಮ್ಲಜನಕದ ಸೃಷ್ಟಿಯಾದರೆ ಅದನ್ನು ಸರಿತೂಗಿಸುವ ಹಾಗೆ ಅದೇ ವ್ಯವಸ್ಥೆಯ (ಸಿಸ್ಟಂ) ಮತ್ತೊಂದು ಅಂಗವಾಗಿ - ಸಮೀಪದಲ್ಲೊ, ದೂರದಲ್ಲಿ - ಅದರ ಪ್ರತಿವಾದಿ ಇಂಗಾಲದ ಸೃಷ್ಟಿಯಾಗಿ ಒಟ್ಟಾರೆ ಸಮತೋಲನ ಸ್ಥಿತಿಯನ್ನು ಕಾದಿರಿಸುತ್ತದೆ ಎಂದಷ್ಟೆ. ಮಹಾನ್ ವಿಜ್ಞಾನಿಯಾಗಿ ಜೀವಾನಿಲದ ನಿರ್ಮಿತಿಗಿಳಿದ ಅದರ ಸೃಷ್ಟಿಕರ್ತ, ಆ ಬೇಡದ ಇಂಗಾಲದ ಸೃಷ್ಟಿಯನ್ನು ತಡೆಯಲಾಗದಿದ್ದರೂ ಅದನ್ನು ನಿಯಂತ್ರಿಸುವ, ಆ ನಿಯಂತ್ರಣ ತಂತಾನೆ ಸಮತೋಲದಲ್ಲಿಟ್ಟುಕೊಳ್ಳುವ ನಿಸರ್ಗ ನಿಯಮವನ್ನು ರೂಪಿಸಿಬಿಟ್ಟ ಎನ್ನುವುದು ಮಾತ್ರ ನನ್ನ ಪಾಲಿಗೆ ಅದ್ಭುತದದ್ಭುತ ಪ್ರಕ್ರಿಯೆ..'
'ಅಂದರೆ..?' ಇನ್ನು ಪರಿಹಾರವಾಗದ ಗೊಂದಲದ ದನಿಯಲ್ಲಿ ಕೇಳಿದ ಶ್ರೀನಾಥ..
'ನಿಸರ್ಗದ ಪ್ರಕ್ರಿಯೆಯತ್ತ ಒಮ್ಮೆ ಕಣ್ತೆರೆದು ನೋಡು ಕುನ್. ಶ್ರೀನಾಥ.. ಎಲ್ಲವು ನಿಚ್ಚಳವಾಗುತ್ತದೆ.. ನೀನು ಒಳಗೆಳೆದುಕೊಂಡ ಆಮ್ಲಜನಕ ಜೀವಸೆಲೆಯಾಗಿ ಒಳಗೆ ಹೋದಾಗ ಅದು ತನ್ನ ಚೈತನ್ಯ ಬಿತ್ತುವ ಕಾರ್ಯ ಮುಗಿಸುತ್ತಿದ್ದಂತೆ ಏನಾಗುತ್ತದೆ? ಅಲ್ಲಿದ್ದ ಪರಿತ್ಯಾಜ್ಯವೆಲ್ಲ ಇಂಗಾಲದ ರೂಪದಲ್ಲಿ ವಿಷವಾಗುವ ಮೊದಲೆ, ಅದನ್ನು ಕಬಳಿಸಿ ಇಂಗಾಲದ ಡಯಾಕ್ಸೈಡ್ ರೂಪದಲ್ಲಿ ತಂದು ನಿಶ್ವಾಸದ ಮುಖೇನ ಆಚೆಗೆ ಒಗೆಯುವುದಿಲ್ಲವೆ?'
' ಹೌದು..ಒಳಗೆ ಹೊಕ್ಕ ಆಮ್ಲಜನಕ ಒಳಗಿನ ಶುದ್ಧಿಗಾರದ ಕೆಲಸ ಮುಗಿಸಿ ಎಲ್ಲವನ್ನು ಹೀರಿ ಬಂದಾಗ ಮಲಿನ ರೂಪವಾಗಿ ಹೊರ ಬರುವುದು ನಿಜ...?'
' ಆದರೆ ಅದಷ್ಟೆ ಅಲ್ಲ ಈ ಪ್ರಕ್ರಿಯೆ..ಇದೊಂದು ಪ್ರಾಣವಿರುವ ಜೀವ ಸಂಕುಲಕ್ಕು ನಿಸರ್ಗಕ್ಕು ನಡುವೆ ನಡೆಯುವ ನಿರಂತರ ಪ್ರಕ್ರಿಯೆ.. ಒಂದು ರೀತಿ ಎರಡು ವಿಭಿನ್ನ ವಿಶ್ವಗಳು ಪರಸ್ಪರ ಕರಾರು ಮಾಡಿಕೊಂಡು ಹೊಂದಾಣಿಕೆಯಲ್ಲಿ ತೊಡಗಿಕೊಂಡಂತೆ.. ಅದನ್ನು ಅರಿಯುವ ಮೊದಲು ಜೀವದ ದೇಹದೊಳಗೆ ಹೊಕ್ಕು ನೋಡು... ಯಾವುದೆ ಕಾರಣಕ್ಕು ಒಳಗಿನ ವಿಷ ಅಲ್ಲಿಯೆ ಉಳಿಯುವಂತಿಲ್ಲ.. ಇದ್ದರೆ ಒಳಗೆಲ್ಲವನ್ನು ವಿಷವಾಗಿಸಿ ಆ ಜೀವವನ್ನೆ ಆಹುತಿಯಾಗಿಸಿಬಿಡುವ ಮಹಾನ್ ಪೀಡಕವಾಗಿ ಪರಿವರ್ತಿತವಾಗಿಬಿಡುತ್ತದೆ. ಅದನ್ನು ಖಚಿತವಾಗಿ ಹೊರದಬ್ಬುವುದು ಹೇಗೆ? ಅಲ್ಲಿ ನೋಡು ಬಳಕೆಗೆ ಬರುವ ಶಕ್ತಿಯ ಮಹತ್ವ! ಪ್ರತಿ ಒಂದು ಇಂಗಾಲದ ಅಣುವಿಗೆ ಎರಡೆರಡು ಆಮ್ಲಜನಕಗಳು ಇಬ್ಬರು ಸೈನಿಕರ ಹಾಗೆ ಗಂಟು ಹಾಕಿಕೊಳ್ಳುತ್ತವೆ - ಸಮಬಲವಿದ್ದು ಸೋಲುಣ್ಣುವ ಪರಿ ಬರದಿರಲೆಂದು. ಹೀಗಾಗಿ ಆ ಮಲಿನ ಇಂಗಾಲದ ಪ್ರತಿ ಅಣು ಎರಡು ಆಮ್ಲಜನಕದ ಅಣುವಿನೊಡನೆ ಬೆರೆತು ಇಂಗಾಲದ ಡಯಾಕ್ಸೈಡ್ ಆಗಿ ಹೊರ ಬೀಳುತ್ತದೆ ಇಬ್ಬರೊಡನೆ ಹೋರಾಡಿ ಜಯಿಸುವ ತ್ರಾಸವಿಲ್ಲದೆಯೆ...'
' ಹೌದಲ್ಲ? ಬಹುಶಃ ಆ ಎರಡರ ಸಮಬಲದ ಪರಿಣಾಮವೆ ಇರಬೇಕು, ಒಂದು ಇಂಗಾಲ ಒಂದು ಆಮ್ಲಜನಕದ ಅಣು ಸೇರಿದರೆ ಭಯಂಕರ ವಿಷದ 'ಇಂಗಾಲದ ಮಾನಾಕ್ಸೈಡ್' ಆಗುವುದು...ಮೈ..ಗಾಡ್..! ಎರಡು ಆಮ್ಲಜನಕಗಳ ಸೈನಿಕರು ಸೇರಿದ್ದಕ್ಕೆ ಬಚಾವ್... ಒಂದೆ ಇಂಗಾಲ ಒಂದೆ ಆಮ್ಲಜನಕ ಸೇರಿ ಉಂಟಾಗುವ ಇಂಗಾಲದ ಮಾನಾಕ್ಸೈಡ್ ದುಸ್ತಿತಿಯನ್ನು ತಪ್ಪಿಸಲು ಎರಡು ಆಮ್ಲಜನಕದ ಮೂಲಕ ಅದನ್ನು ಆಗಗೊಡಿಸದಿರುವುದು - ಎಂಥಾ ಅದ್ಭುತ ಕಲ್ಪನೆ!'
' ಅದಕ್ಕೆ ನಾನ್ ಮಹಾನ್ ವಿಜ್ಞಾನಿಯ ಚಮತ್ಕಾರ ಎಂದಿದ್ದು... ಅದಿರಲಿ ನನ್ನ ವಿವರಣೆಯಿನ್ನೂ ಮುಗಿದಿಲ್ಲ. ಒಂದು ವೇಳೆ ಈ ಪ್ರಕ್ರಿಯೆ ಇಷ್ಟಕ್ಕೆ ನಿಂತು ಹೋಗಿದ್ದರೆ ಅದೇನು ಅಷ್ಟು ಮಹಾನ್ ಅನಿಸುತ್ತಿರಲಿಲ್ಲ...'
'ಮತ್ತೆ?'
' ಒಂದು ವೇಳೆ ಆ ಮಲಿನ ಗಾಳಿಯೆ ಸುತ್ತಲಿನ ಪರಿಸರದಲ್ಲಿ ಸದಾ ತುಂಬಿಕೊಳ್ಳುತ್ತ ಹೋದರೆ ಅದೆ ಮತ್ತೊಂದು ವಿಷವಲಯವನ್ನು ಸೃಷ್ಟಿಸಿ ಬಿಡುವುದಿಲ್ಲವೆ? '
'ಹೌದೌದು....ಅದು ಮತ್ತೊಂದು ಹೊಸ ಸಮಸ್ಯೆಗೆ ಕಾರಣವಾದಂತಲ್ಲವೆ?' ಆತಂಕದಲ್ಲಿ ನುಡಿದ ಶ್ರೀನಾಥ.
' ಅಲ್ಲೆ ನೋಡು ಎರಡನೆ ಚಮತ್ಕಾರ ನಡೆದಿದ್ದು.. ಆ ಮಲಿನಾನಿಲ ವಾತಾವರಣದಲ್ಲಿ ಹಾಗೆ ಉಳಿದುಕೊಂಡುಬಿಟ್ಟಿದ್ದರೆ ತಾನೆ ಆ ತೊಡಕು? ಅದನ್ನು ಹೇಗಾದರೂ ನಿವಾರಿಸುವ ಉಪಾಯ ಹುಡುಕಬೇಕಿತ್ತು.. ಆಗ ಹೊಳೆದ ಆಲೋಚನೆಯೆ ಸಸ್ಯ ಸಂಕುಲದ ಸಾಂಗತ್ಯ.. ಅವುಗಳ ಆಹಾರ ತಯಾರಿಕೆಗೆ ಇಂಗಾಲದ ಡೈಯಾಕ್ಸೈಡ್ ಬೇಕು.. ಜೀವಿಗಳು ಹೊರಹಾಕಿದ ಇಂಗಾಲದ ಡೈಯಾಕ್ಸೈಡನ್ನು ಅವಕ್ಕೆ ಮೇವಾಗಿ ಹಾಕುವಂತಾಗಿಬಿಟ್ಟರೆ? ಅದನ್ನು ಬಳಸಿ ದ್ಯುತಿ ಸಂಶ್ಲೇಷಣ ಕ್ರಿಯೆ ನಡೆಸುವ ಸಸ್ಯಗಳು ಅದರ ಪರಿಣಾಮವಾಗಿ ತಮಗೆ ಬೇಡದ ತ್ಯಾಜ್ಯವಾಗಿ ಆಮ್ಲಜನಕವನ್ನು ಹೊರ ಹಾಕಬೇಕು.. ಹೀಗೆ ಎರಡರದು ಬೇರೆಯದೆ ಆದ ತಮ್ಮದೆ ವಿಶ್ವಗಳಾದರೂ, ಇವೆರಡನ್ನು ತಂದು ಸಮತೋಲನದ ಸಂಬಂಧದಲ್ಲಿ ಕಟ್ಟಿ ಇರಿಸಿಬಿಟ್ಟರೆ ಎರಡು ತಂತಾವೆ ನಿಭಾಯಿಸಿಕೊಂಡು ಇರಬಲ್ಲವು - ನಿರಂತರವಾಗಿ ಪರಸ್ಪರರಿಗೆ ನೆರವಾಗುತ್ತ , ಮೂರನೆಯವರಾಗಿ ಯಾರ ನೆರವೂ ಇಲ್ಲದೆಯೆ..!'
'ವಾಹ್..! ಮಾಸ್ಟರ.. ಅಂದ ಮೇಲೆ ಅಂತದ್ದೊಂದು ಸಸ್ಯ ಸಾಮ್ರಾಜ್ಯದ ವಿಶ್ವವನ್ನು ಸೃಜಿಸಿದ್ದೆ ಮಹಾನ್ ಪ್ರತಿ ಸೃಷ್ಟಿಯಲ್ಲವೆ..?'
' ಅದನ್ನು ಮಹಾನ್ ವಿಜ್ಞಾನಿಯಾಗಿ ಅವನೇ ಸೃಜಿಸಿದನೊ ಅಥವಾ ಅದು ಮೊದಲೆ ಇತ್ತಾಗಿ ಅದನ್ನು ಅನುಕೂಲಕರವಾಗಿ ಪರಿವರ್ತಿಸಿಕೊಂಡನೊ ಅದು ಬೇರೆ ವಿಷಯ. ಆದರೆ ಒಟ್ಟಾರೆ, ಅವೆರಡು ಸಾಮ್ರಾಜ್ಯಗಳ ಋಣಾತ್ಮಕಗಳು ಪರಸ್ಪರರಿಗೆ ಧನಾತ್ಮಕವಾಗಿ ಪೂರಕವಾಗುವುದೆಂದು ಅರಿತು, ಅವನ್ನು ಒಟ್ಟಾಗಿ ಬರುವಂತೆ ವಿನ್ಯಾಸಗೊಳಿಸಿದ್ದು ಅತ್ಯಪೂರ್ವ ಸಾಧನೆ... ಇನ್ನು ಆ ವಿಶ್ವಗಳನ್ನು ಈ ರೀತಿಯೆ ದ್ವಂದ್ವ - ಪ್ರತಿದ್ವಂದ್ವಗಳ ಹೊಂದಾಣಿಕೆಗಾಗಿಯೆ ಆಲೋಚಿಸಿ, ಮೂಲದಿಂದಲೆ ವಿನ್ಯಾಸಿಸಿ ಸೃಷ್ಟಿಸಿದ್ದರೆ ಅದು ಇನ್ನೂ ಉನ್ನತ ಮಟ್ಟದ ನಂಬಲಾಗದ, ಆದರೆ ಸರಳವಾದ ಮಹಾನ್ ತಾಂತ್ರಿಕತೆ.. ಅದನ್ನು ಆಗಮಾಡಿಸಿದ ಯಾವ ಶಕ್ತಿಯೆ ಆಗಲಿ, ಯಾರೆ ಆಗಲಿ - ಅದನ್ನು ದೇವರೆಂದು ಕರೆದರೆ ಅದರಲ್ಲಿ ಯಾವ ತಪ್ಪೂ ಇಲ್ಲ ; ದೇವರಲ್ಲದ ಯಾವುದೊ ಶಕ್ತಿಯೆಂದು ಹೆಸರಿಟ್ಟರೂ ತಪ್ಪಿಲ್ಲ...'
'ಇದು ಮತ್ತದೆ ಜಿಜ್ಞಾಸೆಗೆ ಎಳೆದುಕೊಂಡು ಬರುತ್ತಿದೆಯಲ್ಲ? ಈ ತರ್ಕದ ಅಂತಿಮ ದೇವರಿದ್ದಾನೆಂದು ಹೇಳಿದಂತೆಯೊ? ದೇವರಿಲ್ಲವೆಂದು ಹೇಳಿದಂತೆಯೊ?'
' ಎರಡೂ ಅಲ್ಲ. ಎರಡರ ಅಸ್ತಿತ್ವದ ಇರುವಿಕೆಯ ದ್ವಂದ್ವವೆ ದೇವರು ಎನ್ನುವ ಮತ್ತೊಂದು ಅಮೂರ್ತ ಕಲ್ಪನೆ. ದೇವರ ಇರುವಿಕೆಯ ಅಸ್ತಿತ್ವವನ್ನು ಸಾಧಿಸಬೇಕೆನ್ನುವ ಅಥವ ಅದರ ನಿರಸ್ತಿತ್ವವನ್ನು ಸಾಧಿಸಿ ತೋರಿಸ ಹೊರಟ ಎರಡು ದ್ವಂದ್ವಗಳು ಸತ್ಯ ಶೋಧನೆಗಾಗಿ ಹಿಡಿದ ದಾರಿ ಬೇರೆಯದೆ ಆದರೂ ಒಂದು ಪರಮಾಂತಿಮ ಬಿಂದುವಿನಲ್ಲಿ, ಅವೆರಡು ದ್ವಂದ್ವಗಳು ಬಂದು ಒಂದು ಸಮತೋಲನದ ಪರಿಧಿಯಲ್ಲಿ ಕಲೆತು ಸಂಧಿಸಿದಾಗಷ್ಟೆ ಅವೆರಡರ ಸಮಷ್ಟಿ, ಏಕತ್ವದ ಅರಿವಾಗುವುದು.. ಮಿಕ್ಕ ವಾದ-ವಿವಾದ ಏನೆ ಇದ್ದರು ಅವೆಲ್ಲ ಬರಿ ತುದಿ ತಲುಪದೆ ನಡುವಿನ ಅಸ್ಪಷ್ಟ ದಾರವನ್ನು ಅಲುಗಾಡಿಸಿ ಎಬ್ಬಿಸಿದ ಕಿಡಿಗಳಷ್ಟೆ...'
' ಅಂದರೆ ಈ ಇದ್ದಾನೆ, ಇಲ್ಲಾ, ನಾಸ್ತಿಕತ್ವ, ಆಸ್ತಿಕತ್ವ ವಾದಕ್ಕೆಲ್ಲ ಕೊನೆಯೆ ಇಲ್ಲವೆ?' ತನ್ನಲ್ಲೆ ಎಂಬಂತೆ ಹೇಳಿಕೊಂಡ ಶ್ರೀನಾಥ..ಈ 'ಹೌದು' ಮತ್ತು ' ಇಲ್ಲಾ' ಉತ್ತರದಿಂದ ವಾದ ವಿವಾದಗಳು ಅಮುಕ್ತವಾಗಿಯೆ ಉಳಿದು ಮತ್ತೊಂದು ಭಿನ್ನ ವಾದಕ್ಕೆ ಕಾರಣವಾದೀತೆಂಬ ಗಾಬರಿ ಅವನ ದನಿಯಲ್ಲಿ ಎದ್ದು ಕಾಣುತ್ತಿತ್ತು.
'ವಾದ ಕೊನೆಯಾಗಬೇಕೆಂದರೆ ಎರಡು ದ್ವಂದ್ವಗಳು ಆ ಪರಮಾಂತಿಕ ಬಿಂದುವನ್ನು ಮುಟ್ಟಬೇಕು... ಅಲ್ಲಿಯ ತನಕ ಇದು ಮುಗಿಯದ ವಾಗ್ಯುದ್ಧ ; ಸತ್ಯದ ಪ್ರಕ್ಷೇಪ ಅಲ್ಲಿ ಮಾತ್ರ ಸಾಧ್ಯ. ಇವರೆಲ್ಲರ ಹುನ್ನಾರಗಳು ಅವರನ್ನು ಅಲ್ಲಿಗೆ ಒಯ್ಯುವ ತನಕ ಕಾಯದೆ ವಿಧಿಯಿಲ್ಲ. ಆದರೆ ಅದು ಸಾಧ್ಯವಾಗುವುದು ಈ ಯುಗದಲ್ಲೊ, ಮತ್ತೊಂದು ಯುಗದಲ್ಲೊ? - ಆ ನಿಯಾಮಕನಿಗೆ ಗೊತ್ತು..' ಎಂದು ನಕ್ಕರು ಮಾಂಕ್ ಸಾಕೇತ್.
ಮತ್ತೆ ಅವರು ಬಳಸಿದ 'ನಿಯಾಮಕ' ಪದದ ವಿಶ್ಲೇಷಣೆ ತರಬಹುದಾದ ಮತ್ತಷ್ಟು ದ್ವಂದ್ವದ ನೆಲೆಗಟ್ಟನ್ನು ನೆನೆದು ಶ್ರೀನಾಥನ ತುಟಿಯಲ್ಲೂ ಮುಗುಳ್ನಗೆಯೊಂದು ಅರಳಿತು... ಅದನ್ನು ಆಲೋಚಿಸುತ್ತಲೆ, ' ಉಸಿರಾಡುವ ಗಾಳಿಯ ಸಹಜ ಸಾಂಗತ್ಯವೂ ಇಷ್ಟೊಂದು ವೈಜ್ಞಾನಿಕ, ಪಾರಮಾರ್ಥಿಕ ನೆಲೆಗಟ್ಟಿನ ಸಂಕಲಿತ ಮಿಶ್ರಣವೆಂದು ನಂಬಲೆ ಆಗದಷ್ಟು ಸರಳವಾಗಿ ಮಿಳಿತವಾಗಿಬಿಟ್ಟಿವೆ ಪ್ರಕೃತಿಯಲ್ಲಿ.. ಅದನ್ನೆಲ್ಲ ನೋಡಿದರೆ ಆ ಮಹಾನ್ ಶಕ್ತಿಯ ಅಸ್ತಿತ್ವದ ಕುರಿತು ಮತ್ತು ಅದರ ಬುದ್ಧಿಮತ್ತೆಯ ಅಗಾಧ ಚಾಣಾಕ್ಷತೆಯ ಕುರಿತು ಯಾವ ಅನುಮಾನವೂ ಇರಬಾರದು.. ದೇವರೆಂದರೂ ಸರಿ, ನಿಸರ್ಗ ಶಕ್ತಿಯೆಂದರೂ ಸರಿ...' ಎಂದುಕೊಂಡ ಮನದಲ್ಲೆ.
' ಅಂತಹ ಉದಾಹರಣೆಗಳು ಒಂದೆರಡಲ್ಲ ಕುನ್. ಶ್ರೀನಾಥ.. ಪ್ರಕೃತಿ ಮತ್ತು ಪುರುಷನೆಂಬ ಎರಡು ದ್ವಂದ್ವಗಳನ್ನು ಸೃಜಿಸಿ, ಸೃಷ್ಟಿಸಿ ಜೋಡಿಸಿದ ಕಲ್ಪನೆಯೇನು ಸಾಧಾರಣವಾದದ್ದೆ? ಪರಸ್ಪರ ಸಂವಾದಿ ಸಂವೇದನೆಯನ್ನು ಬೇರೆ ಬೇರೆ ಪಾತ್ರೆಯ ಆವರಣದಲ್ಲಿ ಹಾಕಿಟ್ಟು, ಅವರವರ ಸಮತೋಲನಕ್ಕೆ ಹೊಂದುವಂತಹ ಹೊಂದಾಣಿಕೆ ಮಾಡಿಕೊಳ್ಳಲು ಸ್ವೇಚ್ಛೆ ನೀಡಿ ಮೈದಾನದಲ್ಲಿ ಬಿಟ್ಟು ಬಿಟ್ಟ... ಆ 'ಸರಿಯಾದ ಸಮತೋಲನ' ಹುಡುಕಿಕೊಂಡ ಗಂಡು ಹೆಣ್ಣು ವಿಶ್ವದಾನಂದಕ್ಕೆ ಭಾಗಿಯೂ, ಭಾಧ್ಯಸ್ಥರೂ ಆಗುತ್ತಾರೆ. ಅದರಲ್ಲಿ 'ತಾಳ ತಪ್ಪಿದವರು' ನಿರಂತರ ಹುಡುಕಾಟ, ನರಳಿಕೆಯಲ್ಲಿ ಸಿಲುಕಿದ ದೈತ್ಯ ಸಂವಾದಿಗಳಾಗುತ್ತಾರೆ... ಆದರೆ ಜಡ ಪುರುಷನ ಸೃಷ್ಟಿಯಲ್ಲಿ ಅನಿವಾರ್ಯವಾಗಿ ಚೇತನ ಪ್ರಕೃತಿಯೆಂಬ ದ್ವಂದ್ವದ ಸೃಷ್ಟಿಯಾದಾಗ, ಆ ಪುರುಷ - ಪ್ರಕೃತಿ ಜಗದಲ್ಲೆ ಅವುಗಳ ಸಮತೋಲನದ ಸಮತಲವನ್ನು ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ರೂಪಿಸಿ, ಅದನ್ನು ನಿರ್ಧರಿಸಲು ಬೇಕಾದ ಬುದ್ದಿಮತ್ತೆಯ ಜತೆ ಇಟ್ಟು ಭೂಮಿಗೆ ಬಿಟ್ಟ ಚಾತುರ್ಯವೇನು ಕಡಿಮೆ ಸ್ತರದ್ದೆ? ಇನ್ನೂ ಆ ಪ್ರಕ್ರಿಯೆ ಸಮತೋಲನದ ನಿಯಮಕ್ಕೆ ಅಪಚಾರವಾಗದಂತೆ ನಡೆಸುವುದಷ್ಟೆ ಪ್ರಕೃತಿ ಪುರುಷರ ಕೆಲಸ...ಕೆಲವು ಯಶಸ್ವಿಯಾಗಿ ನಡೆದರೆ ಮತ್ತೆ ಕೆಲವು ಸೋಲುಣ್ಣುವ ಹಾದಿ ಹಿಡಿದರೂ ಸಹಾ ಅದಕ್ಕೆ ಕಾರಣ ಪ್ರಕೃತಿ ಪುರುಷಗಳ ಅವಸರದ, ಹೊಂದದ ಹೊಂದಾಣಿಕೆಯ ತಪ್ಪು ತೀರ್ಮಾನವೆ ಹೊರತು ನಿಯತಿಯ ತಪ್ಪೆಣಿಕೆಯಲ್ಲ...'
' ಆ ಪ್ರಕೃತಿ ಪುರುಷದ ಕಲ್ಪನೆಯೆ ಅಗಾಧ ಮಹಾನ್ ತಾಂತ್ರಿಕತೆಯಲ್ಲವೆ ಮಾಸ್ಟರ..? ಅವು ತಮ್ಮ ಸಂತತಿ ಮುಂದುವರೆಸುವ ಸೃಷ್ಟಿ ಕ್ರಿಯೆಗಿಳಿದಾಗಲೂ ಅದೆಂತಹ ಅದ್ಭುತ ಪ್ರಕ್ರಿಯೆ?! ಆನಂದಾನುಭೂತಿಯ ಉದ್ವೇಗಾದ್ಭುತದಲ್ಲಿ ಜಾರಿದ ವೀರ್ಯ ಕಣವೊಂದು ಅಂಡಾಣುವನ್ನು ಸೇರಿ ಎರಡು ದ್ವಂದ್ವಗಳು ಒಂದಾದಂತೆ ಬೆರೆತು ಮತ್ತೊಂದು ಸೃಷ್ಟಿಯ ಬೀಜವಾಗುವ ಕಥೆ... ಕಣ್ಣಿಗೆ ಕಾಣಿಸದವುಗಳ ಮೇಲೆ ಇಡಿ ಬೀಜ ಸೂತ್ರವನ್ನು ಬರೆದಿಟ್ಟುದುದು ಮಾತ್ರವಲ್ಲ, ಅದನ್ನು ಎರಡಾಗಿಸಿ ವಿಭಾಗಿಸಿ ಪ್ರಕೃತಿ ಪುರುಷನಲ್ಲಿ ಹಂಚಿದ ಪರಿ, ಅವೆರಡು ಕಲೆತಾಗಷ್ಟೆ ಕೀಲಿ ತೆರೆದ ಖೋಲಿಯಂತೆ ಅನಾವರಣಗೊಳ್ಳುತ್ತ ನಡೆವ ಜೀವಾಂಕುರ ಪರಿ, ಅದೆಲ್ಲವೂ ಯಾವುದರ ಹಂಗೂ ಇರದೆ ನೈಸರ್ಗಿಕವಾಗಿ ತಂತಾನೆ ಸ್ವನಿಯಂತ್ರಿಸಿಕೊಳ್ಳುತ್ತ ನಡೆವ ವಿಸ್ಮಯಾ...ಎಲ್ಲವೂ ಅದ್ಭುತ ಕುಸುರಿಯೆ!'
'ಹೌದು ನಿಯಾಮಕನೆಂಬ ಮಹಾ ವಿಜ್ಞಾನಿಯ ಎಲ್ಲ ಅದ್ಭುತಗಳದು ಒಂದು ತೂಕವಾದರೆ ಸೃಷ್ಟಿಕ್ರಿಯೆಯ ಒಗಟೆ ಮತ್ತೊಂದು ತೂಕ ಎನ್ನುವುದರಲ್ಲಿ ಸಂದೇಹವೆ ಇಲ್ಲ..ಅಷ್ಟೆ ಏಕೆ ? ಈ ಬ್ರಹ್ಮಾಂಡ ಸೃಷ್ಟಿಯಂತ ಅಕುಚನ-ಸಂಕುಚನ ಪ್ರೇರಿತ ಬೃಹತ್ ಸ್ಪೋಟಕ್ಕಿಂತಲು ನಿದರ್ಶನ ಬೇಕೆ? ಅದೃಶ್ಯ ಕಣರೂಪಿ ಕತ್ತಲ ಕೂಪದ ಶಕ್ತಿಯನ್ನು, ಬೆಳಕಿನ ಕಾಂತಿಪುಂಜರೂಪಿ ದ್ರವ್ಯರಾಶಿಯ ಬ್ರಹ್ಮಾಂಡವನ್ನಾಗಿ ಪರಿವರ್ತಿಸಿದ ನಿಖರ ಲೆಕ್ಕಾಚಾರವನ್ನು ನಾವೀಗ ಐನಸ್ಟೇನಿನಂತಹ ವಿಜ್ಞಾನಿಗಳ ಶಕ್ತಿ ಮತ್ತು ದ್ರವ್ಯರಾಶಿಗಳ ಪರಿವರ್ತನಾ ಸೂತ್ರಕ್ಕನುಸಾರ ಅರ್ಥ ಮಾಡಿಕೊಳ್ಳಲು ಯತ್ನಿಸಬಹುದಾದರೂ, ಅದನ್ನು ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಮಾತ್ರವಲ್ಲದೆ ನೈಜ ವಾಸ್ತವದಲ್ಲೂ ಸಾಕಾರವಾಗಿಸಿದ ಚಮತ್ಕಾರ ಯಾರದೆ ನಿರ್ದೇಶನವಿಲ್ಲದೆ ತಂತಾನೆ ನಡೆಯಿತೆಂದು ನಂಬಲು ಹೇಗೆ ಸಾಧ್ಯ? ಅದಕ್ಕೆ ನಾನು ಅಲ್ಲೊಂದು ಮಹಾನ್ ವಿಜ್ಞಾನಿಯ ಕೈವಾಡವನ್ನು ಕಾಣುವುದು...ಅದಿರಲಿ ಆ ಚರ್ಚೆಗೆ ಕುಳಿತರೆ ಅದು ಮತ್ತೊಂದು ಬೃಹತ್ಕಾಂಡವಾದೀತು.. ನಾನೀ ಚರ್ಚೆಗಿಳಿದ ಉದ್ದೇಶ ಅದಲ್ಲ.. ಇಷ್ಟೆಲ್ಲಾ ವಾದದ ಸರಣಿಯ ಆಳಗಲದ ಒಳಹೊಕ್ಕು ಜೀರ್ಣಿಸಿಕೊಂಡ ಮೇಲೆ ಸಾರಾಂಶದಲ್ಲಿ ನೀನರಿತುಕೊಂಡದ್ದು ಏನೆಂದು ಹೇಳುವೆಯಾ?'
' ಮಾಸ್ಟರ.. ಅದೆಷ್ಟು ಸರಿಯಾಗಿ ಗ್ರಹಿಸಿರುವೆನೊ ಅರಿಯೆ.. ಆದರೆ ನಿಚ್ಛಳವಾಗಿ ಅರಿತುಕೊಂಡ ಒಂದು ಮೂಲಭೂತ ಕೌತುಕವೆಂದರೆ ದ್ವಂದ್ವದ ಕುರಿತದ್ದು. ಭೌತಿಕಾಭೌತಿಕ, ಲೌಕಿಕಾಲೌಕಿಕ ಅಸ್ತಿತ್ವಗಳೆಲ್ಲವೂ ತನ್ನ ಪ್ರತಿವಾದಿ ದ್ವಂದ್ವದ ಜತೆಯಲ್ಲೆ ಮತ್ತು ಅದೆ ಕಾರಣದಿಂದಲೆ ಹುಟ್ಟಿಕೊಂಡಿದ್ದು ಎಂಬ ಅನಿವಾರ್ಯದ ಸತ್ಯ.... ಯಾವುದರ ಸೃಷ್ಟಿಯೆ ಆಗಲಿ, ಇರುವಿಕೆಯ ಅಸ್ತಿತ್ವವೆ ಆಗಲಿ ತನ್ನೊಡನೆ ತನ್ನ ವಿರುದ್ಧಾರ್ಥಕ ಪ್ರತಿದ್ವಂದ್ವಿಯನ್ನು ಜತೆಯಾಗಿಸಿಯೆ ತರುತ್ತದೆಂಬ ನಿಸರ್ಗ ನಿಯಮ.... ಅವೆರಡು ಪ್ರತಿವಾದಿ ದ್ವಂದ್ವಗಳ ಸಮತೋಲನದಲ್ಲಿರುವ ಸ್ಥಿತಿಯಲಷ್ಟೆ ಎರಡರ ಅಸ್ತಿತ್ವವೂ ನಿರಾತಂಕವಾಗಿ ಇರಲು ಸಾಧ್ಯ, ಇಲ್ಲವಾದರೆ ಪರಸ್ಪರರ ಘರ್ಷಣೆಯೆ ಎರಡನ್ನು ನಿರಸ್ತಿತ್ವಕ್ಕೆಳೆಯುತ್ತದೆನ್ನುವ ಸೂತ್ರ...'
' ಭೇಷ್.. ಸಾರವನ್ನು ಸರಿಯಾಗಿಯೆ ಗ್ರಹಿಸಿದ್ದೀಯಾ... ಇನ್ನು ನನಗೆ ಹೊರಡುವ ಹೊತ್ತಾಯಿತು.. ಮತ್ತೆ ನಾಳೆ ಬೆಳಗಿನ ಹೊತ್ತಲ್ಲೆ ಭೇಟಿಯಾಗುವ...'
' ಮಾಸ್ಟರ... ಗ್ರಹಿಕೆಯೇನೊ ಸರಿ.. ಆದರೆ ಅದನ್ನು ಏನು ಮಾಡಬೇಕು, ಹೇಗೆ ಬಳಸಬೇಕು, ಹೇಗೆ ಅನ್ವಯಿಸಿಕೊಳ್ಳಬೇಕೆನ್ನುವ ಗೊಂದಲ ಇನ್ನೂ ಇದೆ...'
ಅವನ ಮಾತಿಗೆ ನಸು ನಕ್ಕ ಮಾಂಕ್ ಸಾಕೇತ್, ' ಪರವಾಗಿಲ್ಲ ಬುದ್ದಿವಂತನಿದ್ದಿ. ನಾನು ಈ ಪ್ರಶ್ನೆ ಕೇಳುವೆಯೊ ಇಲ್ಲವೊ ಎಂದು ಆಲೋಚಿಸುತ್ತಿದ್ದೆ.... ನಿನಗೀಗ ಈ 'ದ್ವಂದ್ವ ಸಂಬಂಧೀ ಸೂತ್ರ' ಅರ್ಥವಾಗಿದೆಯಲ್ಲ? ನಾಳಿನವರೆಗಿನ ಧ್ಯಾನದ ಹೊತ್ತಲ್ಲಿ ಇದೆ ಸೂತ್ರವನ್ನು ಇಲ್ಲಿಯತನಕದ ಜೀವನದಲ್ಲಿ ಇದುವರೆವಿಗೂ ಸಂಘಟಿಸಿದ ಪ್ರಮುಖ ಘಟನಾವಳಿಗಳಿಗೆಲ್ಲ ಅನ್ವಯಿಸುತ್ತಾ ಬಾ - ಯಾವ ದ್ವಂದ್ವ / ಪ್ರತಿದ್ವಂದ್ವ ಅದಕ್ಕೆ ಕಾರಣವಾಯ್ತೆಂದು ಸಂಶೋಧಿಸುತ್ತ.. ಆ ಶೋಧನೆಯ ಹೊತ್ತಲ್ಲೆ ನಿನ್ನಲ್ಲೆ ಪ್ರಶ್ನಿಸಿಕೊ - 'ಯಾವ ಸಮತೋಲನೆ ತಪ್ಪಿದ ಕಾರಣಕ್ಕೆ ಆ ವ್ಯತ್ಯಯ / ದೋಷವುಂಟಾಯಿತು? ಯಾವ ಪ್ರತಿಕ್ರಿಯೆಯಿಂದ ಆ ಸಮತೋಲನವನ್ನು ನಿವಾರಿಸಬಹುದಿತ್ತು? ದೋಷ ಘಟಿಸಿದ ಮೇಲಾದರೂ ಮತ್ತೆ ಸಮತೋಲನದತ್ತ ಸೆಳೆಯಬಹುದಾದ ಪರಿಹಾರ ರೂಪಗಳೇನಾದರೂ ಕಾಣುತ್ತವೆಯೆ ?' ಎಂದು. ಯಾವುದನ್ನು ಬಲವಂತದಿಂದ ಪರಿಷ್ಕರಿಸಿ ವಿಶ್ಲೇಷಿಸಲು ಹೋಗಬೇಡ; ನಿರಾಳ ಮನದಿಂದ ಆ ಹೊತ್ತಿನಲ್ಲಿ ಮನಃಪಟಲದಲ್ಲಿ ಮೂಡಿದ್ದನ್ನು ಸಂಗತ, ಅಸಂಗತವೆಂಬ ಬೇಧವೆಣಿಸದೆ ಪರಿಶೀಲಿಸುತ್ತ ಪರಾಮರ್ಶಿಸುತ್ತಾ ಹೋಗು... ತೊಡಕಾಗಿಸಿ, ಗೊಂದಲಕ್ಕೆಳೆದರೆ ಅದನ್ನು ಹಾಗೇ ಅಲ್ಲೇ ಬಿಟ್ಟು ಮುಂದಿನದನ್ನು ಹುಡುಕು...' ಎಂದವರೆ 'ಅಮಿತಾಭ' ಎಂದು ಮೇಲೆದ್ದರು ಇನ್ನು ಅಂದಿನ ಚರ್ಚೆ ಮುಗಿಯಿತು ಎಂಬಂತೆ.
ಅವರಲ್ಲಿಂದ ಹೊರಟಾಗ ಆಗಲೆ ನಡು ಮಧ್ಯಾಹ್ನವಾಗಿದ್ದರೂ ಸುತ್ತಲಿನ ಪ್ರಶಾಂತ ವಾತಾವರಣ ಮತ್ತು ದಟ್ಟವಾಗಿ ಬೆಳೆದಿದ್ದ ಕಾಡಿನ ಪರಿಸರದಿಂದಾಗಿ ಬಿಸಿಲಿನ ಬೇಗೆಯ ಬದಲಿಗೆ ತಂಪಿನ ವಾತಾವರಣ ಹರಡಿಕೊಂಡಿತ್ತು. ಆ ಹೊತ್ತಿನಲ್ಲಿ ಬೀಸುವ ಗಾಳಿಯೂ ಬೆವರಿನ ಅದೃಶ್ಯ ಕಣದ ರೂಪದಲ್ಲಿ, ಅಂಟಿಯೂ ಅಂಟದಂತಿದ್ದ ಹಣೆಯ ಮೇಲ್ಭಾಗ ಮತ್ತು ಸುತ್ತ ಮುತ್ತಲೆಲ್ಲ ನೇವರಿಸಿಕೊಂಡು, ತೋಯಿಸಿ ಹೋದಾಗ ಉಂಟಾದ ಹಿತಕರವಾದ ಭಾವನೆಗೆ ಮನಗೊಡುತ್ತಲೆ ತಾನು ಮನನ ಮಾಡಿಕೊಂಡಿದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತ ಧ್ಯಾನಾಸಕ್ತನಂತೆ ಕಣ್ಮುಚ್ಚಿ ಕೂತ. ಹಾಗೆ ಕೂತವನ ಕಣ್ಣಿನ ರೆಪ್ಪೆಯ ಹಿನ್ನಲೆಯಲ್ಲಿ ಅವನ ಬ್ಯಾಂಕಾಕಿನ ಪ್ರಾಜೆಕ್ಟ್, ಬಂದಾಗಿನಿಂದ ಇಲ್ಲಿಯವರೆಗು ಆದ ಅನುಭವಗಳು, ಕುನ್. ಸು ಒಡನಾಟ, ಪ್ರಾಜೆಕ್ಟಿನ ಯಶಸ್ಸು, ಶ್ರೀನಿವಾಸ ಪ್ರಭುವಿನ ಜತೆಗಿನ ತಿಕ್ಕಾಟ, ಕುನ್. ಲಗ್, ಕುನ್. ಸೋವಿ, ಮಾಂಕ್ ಸಾಕೇತರ ಒಡನಾಟ, ಮಗುವಿನ ಆರೋಗ್ಯ - ಅವೆಲ್ಲದರ ಜತೆಜತೆಗೆ ಇದ್ದಕ್ಕಿದ್ದಂತೆ ತಾನು ಹುಟ್ಟಿ ಬೆಳೆದ ಬಾಲ್ಯ, ಊರು, ಓದು, ಕಾಲೇಜಿನ ತಾಣ, ಕೆಲಸಕ್ಕೆ ಸೇರಿದ ಸಂಧರ್ಭ ಹೀಗೆ ಎಲ್ಲವೂ ಮನಃ ಪಟಲದಲ್ಲಿ ಒಂದೊಂದಾಗಿ ಕಲೆಸಿಕೊಂಡು ಬಂದ ರೂಪದಲ್ಲಿ ಮೂಡತೊಡಗಿದವು ಯಾವುದೆ ನಿರ್ಧಾರಿತ ಕ್ರಮವಾಗಲಿ, ಓರಣವಾಗಲಿ ಇರದಂತೆ. ಯಾವುದನ್ನು ಪಕ್ಕಕ್ಕೆ ತಳ್ಳದೆ ಬಂದದ್ದನ್ನು ಬಂದ ಹಾಗೆಯೆ ಸ್ವೀಕರಿಸುತ್ತ 'ದ್ವಂದ್ವ ಸಂಬಂಧಿ ಸೂತ್ರ'ವನ್ನು ಅನ್ವಯಿಸಲಾಗುವುದೆ ಎಂದು ನೋಡತೊಡಗಿದ ಶ್ರೀನಾಥ - ಅಂತರಂಗದಲ್ಲೆ ಅಂತರ್ಮುಖಿಯಾಗಿ, ತನ್ನರಿವು ಅರಿಸಿದ ರೀತಿಯಲ್ಲಿ.
(ಇನ್ನೂ ಇದೆ)
__________
Comments
ಉ: ಕಥೆ: ಪರಿಭ್ರಮಣ..(51)
ನಾಗೇಶರೆ
ಅದ್ಭುತವಾದ ದ್ವಂದ್ವದ ಪರಿಭಾಷೆ.
೫೦, ೫೧ ಬಾಗಗಳ ಬಗ್ಗೆ ಪ್ರತಿಕ್ರಿಯಿಸಲು ಸ್ವಲ್ಪ ಸಮಯ ಬೇಕು :-)
In reply to ಉ: ಕಥೆ: ಪರಿಭ್ರಮಣ..(51) by partha1059
ಉ: ಕಥೆ: ಪರಿಭ್ರಮಣ..(51)
ಪಾರ್ಥಾ ಸಾರ್ ನಮಸ್ಕಾರ ಮತ್ತು ಧನ್ಯವಾದಗಳು. ಏನೊ ನನ್ನ ಮನಸಿಗೆ ಸೂಕ್ತವೆನಿಸಿದ ಸಿದ್ಧಾಂತದ ಛಾಯೆಯನ್ನೆ ತುಸು ವಿಸ್ತರಿಸಿ ದ್ವಂದ್ವ ಸಿದ್ದಾಂತದ ಅಸ್ತಿಪಂಜರದ ಜತೆ ಹೆಣೆದು ಪ್ರಸ್ತುತ ಪಡಿಸುತ್ತಿದ್ದೇನೆ - ತಾರ್ಕಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಆಧುನಿಕ ನೆಲೆಗಟ್ಟುಗಳೆಲ್ಲದರ ಸಮಷ್ಟೀಕರಿಸಿದ ವೇದಿಕೆಯ ಆಧಾರದ ಮೇಲೆ. ಈ ದ್ವಂದ್ವದ ಸಿದ್ದಾಂತವನ್ನೇನೊ ಪ್ರಸ್ತಾವಿಸಿದ್ದಾಯಿತಾದರು, ಬಳಕೆಯಲ್ಲಿ ಅದರ ನೈಜ ಅಳವಡಿಕೆಯ ಲಾಘವ ಇನ್ನೂ ಪ್ರಸ್ತಾಪಗೊಂಡಿಲ್ಲ. ಮುಂದಿನ ಒಂದು ಅಥವ ಎರಡು ಕಂತುಗಳಲ್ಲಿ ಆ ಹೂರಣವೂ ಹೊರಬೀಳಲಿದೆ. ಆಗ ಎಲ್ಲವೂ ಒಟ್ಟಾಗಿ ಸೇರಿದ ಸಮಷ್ಟಿಯ ಚಿತ್ರಣ ಶ್ರೀನಾಥನ ತೊಡಕುಗಳಿಗೆಲ್ಲ ಉತ್ತರ ನೀಡುವ ಸಂಜೀವಿನಿಯಾದೀತೆ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕೀತು. ಇದುವರೆಗು ಇವೆರಡು ಕಂತುಗಳಲ್ಲೂ ಸಹ ಬರೆದುದೆಲ್ಲ ಒಟ್ಟಾಗಿ ಒಂದು ಕಡೆ ಕೂತು ಹೊಸೆದದ್ದಲ್ಲ. ಸಮಯ ಸಿಕ್ಕಾಗ ಅಲ್ಲಿಲ್ಲಿ ಅಷ್ಟಿಷ್ಟು ಸೇರಿಸಿ ಬೆಸೆದಿದ್ದು. ಹೀಗಾಗಿ ನಡುನಡುವೆ ಸೂಕ್ಷ್ಮವಾದ 'ಡಿಸ್ಕನೆಕ್ಟ್', 'ಸಂವೇದನಾಶೀಲತೆಯ ಕೊರತೆ', ನಿರಂತರತೆಯನ್ನು ಧುತ್ತನೆ ಕತ್ತರಿಸಿದಂತಹ ಅನಿವಾರ್ಯತೆ ಇರಬಹುದೇನೊ ಎಂಬ ಅಳುಕು ಇದೆ. ಆದರೂ ಒಟ್ಟಾರೆ ಓಘಕ್ಕೆ ಅಪಚಾರವಾಗದಂತೆ ಲಯವನ್ನುಳಿಸಿಕೊಂಡಿದೆಯೆಂಬ ವಿಶ್ವಾಸವೂ ಇದೆ. ಹೀಗಾಗಿ ದಯವಿಟ್ಟು ನಿಧಾನವಾಗಿ ಓದಿ ತಮ್ಮ ಅನಿಸಿಕೆಯನ್ನು ನೀಡಿ - ಈ ಭಾಗಗಳ ವಸ್ತು ಕ್ಲಿಷ್ಟತೆ ಹೆಚ್ಚಿನ ಸ್ತರದ್ದಾದ್ದರಿಂದ ಹೆಚ್ಚು ಪರಿಶೀಲಿತವಾದಷ್ಟು ನೂನ್ಯತೆಗಳನ್ನು ತಿದ್ದುವ ಹೆಚ್ಚು ಅವಕಾಶ ದೊರಕಿದಂತಾಗುತ್ತದೆ :)
ಉ: ಕಥೆ: ಪರಿಭ್ರಮಣ..(51)
ಓದಿದೆ.
ಜಗಕೆ ಕಾರಣ ಒಂದು ಆಧಾರ ಒಂದು
ಒಂದನೊಂದನು ಕಂಡು ಬೆರಗಾಯಿತೊಂದು |
ಚಂದಕಿಂತ ಚಂದ ಒಂದಕೊಂದರ ನಂಟು
ಆಧಾರಕಾಧಾರನವನೆ ಮೂಢ ||
-ಕ.ವೆಂ.ನಾ.
In reply to ಉ: ಕಥೆ: ಪರಿಭ್ರಮಣ..(51) by kavinagaraj
ಉ: ಕಥೆ: ಪರಿಭ್ರಮಣ..(51)
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಆಳಕ್ಕೆ ಹೊಕ್ಕಂತೆಲ್ಲ ಅಚ್ಚರಿಗಳೆ ಹೊಮ್ಮುವ ವಿಸ್ಮಯ ಜಗದಲ್ಲಿ ಆಧಾರ ಹುಡುಕುವುದು ಕೂಡ ನಿರಾಧಾರದಲ್ಲೆ ಅನಿಸುತ್ತಿದೆ.
ಎಲ್ಲವು ತನ್ನೊಳಗೆ
ತನ್ನೊಳಗೆಲ್ಲದರ ಹೊರಗೆ
ಒಳಗ್ಹೊರಗನರಿಯುವ ಸೋಗು
ಮುಗಿವ ಮೊದಲೆ ಬಿಟ್ಟೆಲ್ಲಾ ಹೋಗು ||