ಕಥೆ: ಪರಿಭ್ರಮಣ..(58)

ಕಥೆ: ಪರಿಭ್ರಮಣ..(58)

( ಪರಿಭ್ರಮಣ..57ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

ಊಹನಾತೀತ ತಾತ್ವಿಕ ಲೋಕದಲ್ಲಿ ವಿಹರಿಸುತ್ತಿದ್ದ ಶ್ರೀನಾಥನಿಗೆ ಅಚ್ಚರಿಯಾಗುತ್ತಿತ್ತು - ತನಗೆ ಬರುತ್ತಿರುವ ಈ ವಿಚಾರಗಳ ಪುಂಖಾನುಪುಂಖ ಲಹರಿಯನ್ನು ಕಂಡು. ಮೊದಲಿಗೆ ಅವನಿಗೆ ಆ ವಿಷಯಗಳ ಕುರಿತಾದ ಸರಳ ಕಲ್ಪನೆಯ ವಿನಃ ಮತ್ತೇನೂ ಪಾಂಡಿತ್ಯವಾಗಲಿ, ಅರಿವಾಗಲಿ ಇರಲಿಲ್ಲ. ಕೆಲವು ಮೂಲ ಭೂತ ಸಿದ್ದಾಂತಗಳ ಅರಿವು, ಅಲ್ಲಿಲ್ಲಿ ಕೇಳಿದ, ಓದಿದ, ನೋಡಿದ್ದ ವಿಷಯಗಳ ಸ್ಮರಣೆಯಷ್ಟೆ ಅವನಿಗಿದ್ದ ಬಂಡವಾಳ. ಆದರೆ ಮಾಂಕ್ ಸಾಕೇತರು ಹೇಳಿದ್ದಂತೆ ಸರಿಯೊ, ತಪ್ಪೊ ಲೆಕ್ಕಿಸದೆ ತನಗೆ ಸರಿ ಕಂಡಂತೆ ವಿಶ್ಲೇಷಿಸುತ್ತ ಮುನ್ನಡೆದಿದ್ದನಷ್ಟೆ. ಅಲ್ಲದೆ ಅವರು ಕೊನೆಯಲ್ಲಿ ಹೇಳಿದ್ದ ' ಸರಿಯೊ ತಪ್ಪೊ ಎನ್ನುವುದಕ್ಕಿಂತ ಗೊಂದಲ, ಸಂಶಯ ನಿವಾರಣೆಯಾದ ಮನಸ್ಥಿತಿ ಮುಖ್ಯ -  ತಪ್ಪಾದ ತೀರ್ಮಾನದ ಆಧಾರದಲ್ಲೆ ಆಗಿದ್ದರೂ ಸರಿ..' ಎಂದಿದ್ದ ಮಾತು ಅಪಾರ ಧೈರ್ಯವನ್ನಿತ್ತಿತ್ತು. 'ತಾನೇನು ಯಾವುದೊ ರಿಸರ್ಚು ಮಾಡಿ, ಥೀಸೀಸ್ ಬರೆಯಲು ಹೊರಟಿಲ್ಲವಲ್ಲ, ಬರಿಯ ಅಂತರ್ಸ್ವಚ್ಚತೆಯ ಪ್ರಕ್ರಿಯೆಯ ಉದ್ದೇಶಕ್ಕೆ ಮಾತ್ರ ತಾನೆ' ಎಂದಂದುಕೊಂಡು ಹೊರಟ ಮೇಲೆ ಎಲ್ಲವೂ ನಿರಾಳವಾಗಿತ್ತು, ಕನಿಷ್ಠ ಚಿಂತನೆಯ ಮಟ್ಟಿಗೆ. ನಡುನಡುವೆ ಅರೆಬರೆಯಾದ ಅರೆ-ತಪ್ಪು, ಅರೆ-ಸರಿಯಾದ ಅನಿಸಿಕೆ, ತೀರ್ಮಾನಗಳು ನುಸುಳುತ್ತಿದ್ದರೂ, ಮುಂದುವರೆದ ತಾರ್ಕಿಕತೆಯಲ್ಲಿ ಆ ದೋಷಗಳ ಗೋಚರವಾಗಿ ಅದು ತಾನೆ ಸರಿಯಾಗುತ್ತಿದ್ದ ರೀತಿಯೂ ಅಚ್ಚರಿಯನ್ನು ಮೂಡಿಸುತ್ತಿತ್ತು. ಅದೆಲ್ಲಕ್ಕೂ ಮಿಗಿಲಾದ ಅಚ್ಚರಿಯೆಂದರೆ ಸಾಮಾನ್ಯನೊಬ್ಬ ಕೇವಲ ತಾರ್ಕಿಕವಾದ ಚಿಂತನೆಯಲ್ಲೆ ತನಗೆ ಗೊತ್ತಿರುವ ಚೂರುಪಾರು ವಿಷಯದ ಎಳೆ ಹಿಡಿದುಕೊಂಡೆ ಇಷ್ಟು ದೂರದ ಗಹನ ಚಿಂತನೆಯ ಮಟ್ಟಕ್ಕೆ ಸಾಗಬಹುದಲ್ಲ ಎಂಬುದು. ಅದು ನಿಖರವೊ, ಕರಾರುವಾಕ್ಕೊ ಎನ್ನುವುದು ಮತ್ತೇನೆಲ್ಲದರ ಮೇಲವಲಂಬಿತ ವಿಷಯವಾದರೂ ಆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೂ ಕೂಡ ಕನಿಷ್ಠ ಜ್ಞಾನ ತಿಳುವಳಿಕೆಯ ಅಗತ್ಯವಿರುತ್ತದೆಯೆಂದುಕೊಂಡಿದ್ದವನಿಗೆ ಈ ಸೈದ್ದಾಂತಿಕ ನೆಲೆಗಟ್ಟಿನ, ತಾತ್ವಿಕ ಚಿಂತನಾ ಧೋರಣೆ ಸಾಕಷ್ಟು ಅಚ್ಚರಿ ಹುಟ್ಟಿಸಿತ್ತು. ಅದರಿಂದುತ್ಪನ್ನವಾದ ಕುತೂಹಲವನ್ನು ಮತ್ತಷ್ಟು ಆಸ್ವಾದಿಸುತ್ತ ಕಾಲ-ಸಮಯದ ಸಂವಾದಿಯಾದ ಜ್ಞಾನ-ಅಜ್ಞಾನದ ನಡುವಿನ ಸಮತೋಲಿಸುವ ಕೊಂಡಿಯತ್ತ ಗಮನ ಹರಿಸಿದ ಶ್ರೀನಾಥ, ಅಲ್ಲೇನಿದೆಯೊ ನೋಡುವಾ ಎನ್ನುವಂತೆ. 

ಕತ್ತಲು ಅಜ್ಞಾನಕ್ಕೆ ಸಮ ಬೆಳಕು ಜ್ಞಾನಕ್ಕೆ ಸಮ ಎಂದು ಅವೆರಡನ್ನು ತಾಮಸ ಮತ್ತು ರಾಜಸ ಗುಣಗಳಿಗೆ ಹೋಲಿಸುವುದೇನೊ ಸುಲಭ. ಆದರೆ ಪ್ರಕಾಶ-ಅಂಧಕಾರವನ್ನು ಸಮತೋಲನದಲಿಟ್ಟ ಕಾಲದೂತ ಸಮಯದಂತೆ, ಜ್ಞಾನಾಜ್ಞಾನದ ಸಂಧಿ ವಿಗ್ರಹ ಬಿಡಿಸಿ ಅವೆರಡನ್ನು ತೂಗಿಸುತ್ತಿರುವ ಅದೃಶ್ಯ ಸಾತ್ವಿಕ ಬಂಧು ಯಾರೆಂದು ಕಂಡು ಹಿಡಿಯುವುದು ಅಷ್ಟು ಸರಳವಾಗಿರಲಿಲ್ಲ. ಆದರೆ ಕಾಲ ಮತ್ತು ಸಮಯದ ಕಲ್ಪನೆಗೊಂದು ಮೂರ್ತ ರೂಪು ಸಿಕ್ಕ ಮೇಲೆ ಅದೇ ಜಾಡನ್ನನುಸರಿಸಿ ಜ್ಞಾನಾಜ್ಞಾನಕ್ಕೂ ಕೊಂಡಿಯನ್ನು ಹುಡುಕಬಹುದೆಂಬ ಆತ್ಮವಿಶ್ವಾಸವುಂಟಾಗಿತ್ತು ಶ್ರೀನಾಥನಿಗೆ. ಕತ್ತಲ-ಬೆಳಕಿಗೆ ಹಗಲಿರುಳಿನ ಕೊಂಡಿಯಾಗಿ ಬಂದ ಕಾಲ-ಸಮಯದ ಸಮಾನಾರ್ಥಕವಾಗಿ ಇಲ್ಲಿಯೂ ಜಡಸ್ಥಿರ ಮತ್ತು ಚಲನಶಕ್ತಿಯ ರೀತಿಯದೆ ಜೋಡಿ ಅಸ್ತಿತ್ವವಿರಬಹುದೆ? ಅಥವಾ ಕೇವಲ ಒಂದೇ ರೂಪಿನ ಒಂಟಿ ಅಸ್ತಿತ್ವ ಮಾತ್ರವೆ? ಆದರೂ ಆ ಕೊಂಡಿ ಯಾವುದಿರಬಹುದೆಂದು ಹೊಳೆಯುತ್ತಿಲ್ಲವಲ್ಲ? ಬಹುಶಃ ಜ್ಞಾನ-ಅಜ್ಞಾನಕ್ಕೆ ಸಂಬಂಧಿಸಿದಂತೆ, ಅವುಗಳನ್ನುಂಟು ಮಾಡುವ ಅಂಶಗಳಾವುದೆಂದು ಪಟ್ಟಿ ಮಾಡಿದರೆ ಹುಡುಕುವ ಕೆಲಸ ಸುಲಭವಾಗಬಹುದು.. ಮೊದಲಿಗೆ ಇದು ಅರಿವು, ತಿಳುವಳಿಕೆಗೆ ಸಂಬಂಧಿಸಿದ ವಿಷಯ - ಅಂದರೆ ಮೆದುಳು ಅಥವಾ ಮಸ್ತಿಷ್ಕವನ್ನು ಈ ಕೊಂಡಿಯೆನ್ನಬಹುದೆ? ಇರಲಾರದು. ಯಾಕೆಂದರೆ ಜ್ಞಾನ-ಅಜ್ಞಾನಗಳು ಅಮೂರ್ತವಾದ ಅದೃಶ್ಯ ಪರಿಕಲ್ಪನೆಗಳು. ಅಂದ ಮೇಲೆ ಅದರ ಕೊಂಡಿಯೂ ಸಹ ಅದೇ ರೀತಿಯ ಅಮೂರ್ತವಾದದ್ದೆ ಇರಬೇಕು. ಮೆದುಳಿನಂತ ಭೌತಿಕಾಂಗ ಅದರ ಪ್ರಕಟರೂಪಿನ ಕಾರ್ಯಾಂಗವಾಗಿರಬಹುದೆ ಹೊರತು ಅಭೌತಿಕ ಕೊಂಡಿಯಾಗಲಾರದು. ಅಂದ ಮೇಲೆ ಮತ್ತೇನಿರಬಹುದು - 'ಅರಿವಿನ ದಾಹ'ವನ್ನು ಆ ಕೊಂಡಿಯೆನ್ನಬಹುದೆ...? ಜ್ಞಾನವನ್ನು ಹೆಚ್ಚಾಗಿಸಬೇಕೆಂದು ಬಯಸುವುದು, ಪ್ರಚೋದಿಸುವುದು ಅರಿವಿನ ದಾಹವೆನ್ನುವುದೇನೊ ನಿಜ... ಆ ದಾಹ ಹೆಚ್ಚಿದ್ದರೆ ಜ್ಞಾನಾರ್ಜನೆಯ ಆಸಕ್ತಿ ಹೆಚ್ಚಿ ಕಲಿಕೆಯತ್ತ ಗಮನ ಹೋಗುವುದೂ ನಿಜ... ಅಂತೆಯೆ ಆ ದಾಹವಿರದೆಡೆ ಅಜ್ಞಾನವು ಹೆಚ್ಚಾಗುವ ವಿಷಯವೂ ನಿಜವೆ... ಆದರೆ, ಅರಿವು ಬರುವುದು ಜ್ಞಾನ ಬಂದ ನಂತರವಲ್ಲವೆ ? ಅರಿವಿರುವಿಕೆ ಅಥವಾ ಅದಿಲ್ಲದಿರುವಿಕೆ ಎರಡು ಜ್ಞಾನ-ಅಜ್ಞಾನದ ಫಲಿತಗಳೆ ಹೊರತು ಮೂಲ ಸರಕುಗಳಲ್ಲ. ಅಂದ ಮೇಲೆ ಅರಿವು ಕೂಡ ಆ ಕೊಂಡಿಯಾಗಲಿಕ್ಕೆ ಸಾಧ್ಯವಿಲ್ಲ. ಆ ಅರಿವಿನ ದಾಹವೆನ್ನುವುದು ಕೂಡ ವಿವರಣೆಯ ಮಟ್ಟದಲ್ಲಿ ಹೊಂದಿಕೊಂಡರು ಬರಿಯ ದಾಹವೆನ್ನುವ ಅರ್ಥದಲ್ಲಿ ಪರಿಗಣಿತವಾಗಿಬಿಡುತ್ತದೆ. ಆಗ ಅದು ಯಾವ ದಾಹವಾದರೂ ಆಗಿಬಿಡಬಹುದು - ಭೌತಿಕ, ತಾತ್ವಿಕ, ಸೈದ್ದಾಂತಿಕ ಇತ್ಯಾದಿ. ಆ ಅಸ್ಪಷ್ಟತೆಯೆ ಅದರ ಪರಿಗಣನೆಯನ್ನು ನಿರ್ಬಂಧಿಸಿ ಬಿಡುತ್ತದೆ... ಹಾಗಾದರೆ ಇನ್ನಾವುದಿರಬಹುದು ಆ ಕೊಂಡಿ ? ಆತ್ಮದ ಕಲ್ಪನೆ ಜ್ಞಾನಾಜ್ಞಾನದ ನಡುವಿನ ಆ ಸೇತುವೆಯಾಗಬಹುದೆ ? ಮನಸಿನ ಅಪಾರ ಶಕ್ತಿಯ ಸಾಮರ್ಥ್ಯವೆ ಆ ಕೊಂಡಿಯಾಗಿ ಜ್ಞಾನಾಜ್ಞಾನಕ್ಕೆ ಬಂಧವಾಗುತ್ತದೆಯೆ ? ಬುದ್ಧಿ ಮನಸುಗಳ ಸಮತೋಲನದಲ್ಲಿ ಸ್ವಯಂಪ್ರಜ್ಞೆಯಾಗುದಿಸುವ ಚಿತ್ತದ ಕೈವಾಡವೇನಾದರೂ ಇಲ್ಲಿ ಅಡಗಿರುವುದೆ ? ಅಥವಾ ಜ್ಞಾನಾಜ್ಞಾನದ ಪರಿಮಾಣಕ್ಕೆ ಪರಿಮಿತಿಯನ್ನಾರೋಪಿಸುವ ಬುದ್ಧಿಯ ಪಾತ್ರವೇನಾದರು ಅಡಗಿಕೊಂಡಿದೆಯೆ? ಯಾಕೊ ಯಾವುದು ಹೊಂದಿಕೆಯಾಗುವಂತೆ ಕಾಣುತ್ತಿಲ್ಲವಲ್ಲಾ? ಎಲ್ಲವೂ ಜ್ಞಾನ ಅಜ್ಞಾನಕ್ಕೆ ಒಂದಲ್ಲ ಒಂದು ರೀತಿ ಸಂಬಂಧಿಸಿದವೆ ಆದರೂ ಯಾಕೊ ಅವೆರಡರ ಜತೆ ಸರಳ ರೇಖೆಯಲ್ಲಿ ನಿಲ್ಲುವ ಸಂಗಾತಿಯಂತೆ ಯಾವುದೂ ಜತೆಗೂಡುತ್ತಿಲ್ಲ. ಅರೆರೆ...? ಮನಸು, ಬುದ್ಧಿ, ಚಿತ್ತ ಇವೂ ಮೂರು ನಾಲ್ಕು ಅಂತಃಕರಣಗಳ ಭಾಗವಲ್ಲವೆ ? ಅಂತಃಕರಣದ ನಾಲ್ಕನೆಯದಾದ ಅಹಂಕಾರದ ಪಾತ್ರವಿಲ್ಲಿರಬಹುದೆ? ಮಸಲಾ, ಜ್ಞಾನ ಹೆಚ್ಚಾದರೂ ಅಥವಾ ಕಡಿಮೆಯಾದರೂ ಅದರಿಂದ ನಿಜಕ್ಕೂ ತೊಡಕಿನ ಅನುಭವವಾಗುವುದು ಯಾರಿಗೆ ? ' ಅಹಂಮಿಕೆ'ಗಲ್ಲವೆ ? ಜ್ಞಾನಾರ್ಜನೆಯಾದಾಗ ಅದರ ಸೊಕ್ಕಿನಿಂದಲೆ ಅಹಂಕಾರ ಹೆಚ್ಚುವುದಲ್ಲವೆ ? ಅಥವಾ ಜ್ಞಾನವಿರದ ಸ್ಥಿತಿಯೆ ಅಹಂಕಾರವನ್ನು ತಗ್ಗಿಸಿ, ಕೆಳಗಿಳಿಸುವ ಪ್ರೇರಕ ಶಕ್ತಿಯೂ ಹೌದಲ್ಲವೆ? ಈ 'ಅಹಂ'ನ ಪ್ರೇರಣೆಯೆ ಜ್ಞಾನಿಯನ್ನು ಅಜ್ಞಾನಿಯನ್ನಾಗಿಸಬಹುದು, ಅಜ್ಞಾನಿಯನ್ನು ಜ್ಞಾನಿಯಾಗಿಸಲು ಪ್ರೇರೇಪಿಸಬಹುದು.... ಇದೇನೊ ಹೊಂದಿಕೆಯಾಗುವಂತೆ ಕಂಡರೂ ಇದೂ ಕೂಡ 'ಫಲಿತ ಪರಿಣಾಮ'ವಾಗುವ ಗುಣವನ್ನು ಹೊಂದಿದೆಯಲ್ಲವೆ? ಬಹುಶಃ ಕಾಲಕ್ಕೆ ಜೋಡಿಯಾಗಿರುವ ಸಮಯದಂತೆ , ಅಹಂಗೂ ಯಾವುದಾದರೂ ಜೋಡಿಯಿದ್ದರೆ ಈ ಒಗಟು ಬಿಡಿಸಿಕೊಳ್ಳಬಹುದೆ ?  

ಆದರೆ ಈ ಅಹಂಕಾರವೆ ಜ್ಞಾನಾಜ್ಞಾನಕ್ಕೆ ಕೊಂಡಿಯಾಗುವುದಾದರೆ ಅಲ್ಲಿ ಆ ಅಹಂಕಾರಕೆ ಪ್ರೇರಣಾಶಕ್ತಿಯನ್ನೊದಗಿಸುತ್ತಿರುವ ಅಂಶ ಯಾವುದು? ಯಾವುದೊ ಕಾಲದ ರೀತಿಯೆ ಇರುವ, ಪ್ರಾಯಶಃ ಕಾಲದ ಗುಂಪಿನಲ್ಲೆ ಇರುವ ಅಂಶವಾಗಿರಬೇಕಲ್ಲವೆ ? ಅಂದ ಹಾಗೆ ಕಾಲವು ಮಿಶ್ರತತ್ವಗಳೆಂಬ ಏಳು ತತ್ವಗಳಲ್ಲಿ ಒಂದಲ್ಲವೆ ? ಒಟ್ಟಿರುವ ಮೂವ್ವತ್ತಾರು ತತ್ವಗಳು ಸೃಷ್ಟಿಯ ಪ್ರಮುಖ ಅಂಶಗಳೆಂದು ಹೇಳುತ್ತಾರಾಗಿ, ಅವನ್ನು ಸ್ವಲ್ಪ ಒಳಗಿಳಿದು ಅವಲೋಕಿಸಿದರೆ ಈ ಜ್ಞಾನಾಜ್ಞಾನದ ಕೊಂಡಿಯ ಸುಳಿವು ಸ್ಪಷ್ಟವಾದೀತೇನೊ ನೋಡಬೇಕು..ಮಸಲಾ, ಏನೀ ತತ್ವಗಳ ಹೂರಣ? ಅವೂ ಕೂಡ ಅಂತಿಮವಾಗಿ ಮೂಲಶಕ್ತಿಯಿಂದಾದ ತುಣುಕುಗಳೆ ಅಲ್ಲವೆ? ಕಾಲ-ನಿಯತಿ-ವಿದ್ಯಾ-ಕಲಾ-ರಾಗ-ಪುರುಷ(ಆತ್ಮ)-ಪ್ರಕೃತಿ(ಮಾಯೆ) ಈ ಮಿಶ್ರತತ್ವಗಳು ಒಂದು ಗುಂಪಿನಲ್ಲಿದ್ದು ಇವು ಏಳರಲ್ಲಿಯೆ ಒಂದಾದ ಪ್ರಕೃತಿ ಅಥವಾ ಮಾಯೆಯ ರೂಪದಲ್ಲಿ ತ್ರಿಗುಣಗಳಾದ ಸಾತ್ವಿಕ-ರಾಜಸ-ತಾಮಸ ಗುಣಗಳು ಸಮತೋಲನದಲ್ಲಿ ಹಂಚಿಹೋಗಿರುತ್ತವೆ ಎನ್ನುತ್ತದೆ ನಮ್ಮ ವೇದ-ಪುರಾಣಗಳ ಕಡತ. ಈ ಗುಂಪನ್ನು ಏಕೆ ಮಿಶ್ರ ತತ್ವವೆನ್ನುತ್ತಾರೊ ಗೊತ್ತಿಲ್ಲ.. ಬಹುಶಃ ಪ್ರಕೃತಿ ಮತ್ತು ಪುರುಷ ತತ್ವಗಳೆರಡು ಈ ಗುಂಪಿನಲ್ಲಿ ಇರುವ ಕಾರಣದಿಂದ ಇರಬಹುದೇನೊ..ಅಂತೆಯೆ ಶಕ್ತಿತತ್ವಗಳೆಂಬ ಹೆಸರೂ ಕೇಳಿದ ಹಾಗೆ ನೆನಪು - ಬಹುಶಃ ಸೃಷ್ಟಿಯ ನಡೆಸುವಿಕೆಯಲ್ಲಿ ಶಕ್ತಿರೂಪಿಣಿ ಪ್ರಕೃತಿಯದೆ ಪ್ರಮುಖ ಪಾತ್ರವಾದ್ದರಿಂದ ಇರಬಹುದೇನೊ? ಅಂದರೆ ಎಲ್ಲೆಲ್ಲಿ ಮಾಯಾತತ್ವ ಪಸರಿಸಿಕೊಂಡಿರುವುದೊ, ಅಲ್ಲೆಲ್ಲ ಈ ತ್ರಿಗುಣಗಳ ಶಕ್ತಿರೂಪವು ಯಾವುದೊ ರೂಪದಲ್ಲಿ ನೆಲೆಯಾಗಿರಬೇಕು. ಎಲ್ಲೆಲ್ಲಿ ಈ ಮೂರು ಗುಣಗಳ ಅಂಶ ಕಂಡುಬರುವುದೊ ಅಲ್ಲೆಲ್ಲಾ ಮಾಯಾತತ್ವ  ಇದ್ದು ಪ್ರಭಾವ ಬೀರುತ್ತಲೆ ಇರಬೇಕು. ಈ ತತ್ವಗಳ ಹಾದಿಯಲ್ಲೆ ನಡೆದರೆ ಈ ಏಳು ಮಿಶ್ರತತ್ವಗಳ ಜತೆಗೆ ಐದು ಶಿವ ತತ್ವಗಳೆಂಬ ಶುದ್ಧ ತತ್ವಗಳ ಪ್ರಸ್ತಾಪವೂ ಬರುತ್ತದೆ - ಶುದ್ಧವಿದ್ಯಾ, ಈಶ್ವರ, ಸದಾಶಿವ, ವಿಮರ್ಶ(ಶಕ್ತಿ) ಮತ್ತು ಪ್ರಕಾಶ(ಶಿವ). ಬಹುಶಃ ಇಲ್ಲಿ 'ಶುದ್ಧ' ಎನ್ನುವುದು 'ಮೂಲದ ಜಡಶಕ್ತಿ (ಪೊಟೆಂಶಿಯಲ್ ಎನರ್ಜಿ)' ಎನ್ನುವ ಭಾವದಲ್ಲಿ ನೋಡಬೇಕೇನೊ ? ಅಂದರೆ ಈ ಮೂಲಶಕ್ತಿಯ ಮೂಲಕವೆ ಮಿಕ್ಕೆಲ್ಲ ಶಕ್ತಿಗಳ (ಮಿಶ್ರತತ್ವಗಳೂ ಸೇರಿದಂತೆ), ಉದ್ಭವವಾಗಿರಬೇಕೆಂದು ಊಹಿಸಬಹುದೇನೊ... ಇಡಿ ಚರಾಚರ ಸೃಷ್ಟಿಯೆ ಮೂಲಭೂತವಾಗಿ ಪಂಚಾಮಹಾಭೂತಗಳಾದ ಆಕಾಶ-ವಾಯು-ಅಗ್ನಿ-ನೀರು-ಭೂಮಿ ಗಳಿಂದ ಮಾಡಲ್ಪಟ್ಟಿದೆಯೆಂದು ಹೇಳುತ್ತಾರೆ. ನಮ್ಮ ಪಂಚ ಜ್ಞಾನೆಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಐದು ತನ್ಮಾತ್ರಗಳು (ಶಬ್ದ-ರೂಪ-ರಸ-ಗಂಧ-ಸ್ಪರ್ಷ)ಮತ್ತೈದು ಕರ್ಮೇಂದ್ರಿಯ ಪ್ರೇರಕಗಳು (ಹಿಡಿತ-ಚಲನೆ-ಮಾತು-ಸೃಷ್ಟಿ(ಸಂತಾನೋತ್ಪತ್ತಿ)-ವಿಸರ್ಜನೆ) - ಇವೆಲ್ಲವೂ ಆ ಮೂಲಶಕ್ತಿಯಾದ ಪಂಚಮಹಾಭೂತಗಳಿಂದಲೆ ಆದುದೆನ್ನುತ್ತಾರೆ. ಅಂದರೆ ಈ ಐದು ಶಿವತತ್ವಗಳು ಆ ಐದು ಪಂಚಮಹಾಭೂತಗಳನ್ನು ಸಾಂಕೇತಿಕವಾಗಿ ಸೂಚಿಸುತ್ತಿರಬಹುದೆ ? ಹಾಗೆಂದೆ ಇಟ್ಟುಕೊಂಡರೆ ಅವುಗಳನ್ನೆ ಶುದ್ದರೂಪದಲ್ಲಿರುವ, ಮೂಲಸೃಷ್ಟಿಯ ಮೂಲ ಸರಕುಗಳು ಎಂದು ಭಾವಿಸಬಹುದಲ್ಲವೆ ? ಅವುಗಳ ಮೊದಲ ಹಂತದ ರೂಪಾಂತರ ಈ ಕಾಲ, ನಿಯತಿಯಾದಿ ಏಳು ಮಿಶ್ರತತ್ವಗಳ ರೂಪವಾಗಿರಬೇಕು. ಅಲ್ಲಿಯೂ ಮೊದಲ ರೂಪಾಂತರದಲ್ಲಿ ತ್ರಿಗುಣ ಸಮತೋಲಿತ ಪ್ರಕೃತಿಯ (ಮಾಯೆಯ) ಉಧ್ಬವವಾಗಿ ಅದರಿಂದ ಮಿಕ್ಕವುಗಳ ಉದ್ಭವವಾಗಿರಬೇಕು. ಅಂದರೆ ಮೂಲದಲ್ಲಿದ್ದ ಶುದ್ಧಶಕ್ತಿ, ಮಾಯೆಯಲ್ಲಿರುವ ತ್ರಿಗುಣಗಳಲ್ಲಿ ಬೆರೆತು ಮಿಕ್ಕ ಆರು ಮಿಶ್ರಶಕ್ತಿ ತತ್ವಗಳಾಗಿ ಹೊರಹೊಮ್ಮಿರಬೇಕು. ಅದರ ಮೂಲಕವೆ ಅಂತಃಕರಣ, ಇಂದ್ರೀಯಾದಿ ಮಿಕ್ಕ ಇಪ್ಪತ್ನಾಲ್ಕು ಶಕ್ತಿ ತತ್ವಗಳು ಉತ್ಪನ್ನವಾಗಿರಬೇಕು. 

ಹೀಗೆ ತೀರಾ ಎಲ್ಲಾ ತತ್ವದಾಳಕ್ಕೆ ಹೋಗುವ ಬದಲು, ಸದ್ಯಕ್ಕೆ ಕಾಲದ ಜತೆಗೆ ಇರುವ ಮಿಶ್ರತತ್ವಗಳನ್ನು ಅವಲೋಕಿಸಿದರೆ ಜ್ಞಾನಾಜ್ಞಾನದ ಕೊಂಡಿಯ ಸುಳಿವು ದೊರಕುತ್ತದೆಯೊ ನೋಡುವ.. ಏಕೆಂದರೆ ಈ ಜ್ಞಾನ-ಅಜ್ಞಾನದ ವಿಷಯದಲ್ಲೂ ಈ ಏಳರಲ್ಲಿ ಒಂದರ ಪ್ರಭಾವವೆ ತನ್ನ ಚಳಕವನ್ನು ತೋರಿಸಿರಬಹುದಲ್ಲವೆ ? ಅದು ಕಾಲವಂತು ಅಲ್ಲ.. ನಿಯತಿಯೂ ಸಹ ನಿಯಮಾನುಸಾರದ ನಡುವಳಿಕೆಯ ಪ್ರೇರಕವಾದ್ದರಿಂದ ಅದು ನೇರ ಪಾತ್ರ ವಹಿಸಲು ಸಾಧ್ಯವಿಲ್ಲ. ಕಾಲ ನಿಯತಿ ಎರಡು ಜ್ಞಾನದ ವಿಷಯದಲ್ಲಿ ಪರೋಕ್ಷ ಪಾತ್ರ ವಹಿಸಬಹುದೆ ಹೊರತು ನೇರ ಕೊಂಡಿಯಾಗಲಿಕ್ಕೆ ಸಾಧ್ಯವಿರುವಂತೆ ಕಾಣುತ್ತಿಲ್ಲ. ಅದೆ ರೀತಿ ಕಲಾ ಎನ್ನುವುದು ಜ್ಞಾನದ, ಪ್ರತಿಭೆಯ  ಒಂದು ಪ್ರಕಟರೂಪವಾಗಬಹುದಷ್ಟೆ; ರಾಗ ಕಾಮನೆಗೆ ಸಂಬಂಧಿಸಿದ ವಿಷಯ.. ಪುರುಷ, ಪ್ರಕೃತಿಗಳು ಅದೆ ತರ್ಕದಲ್ಲಿ ಜ್ಞಾನದ ನೇರ ಕೊಂಡಿಯಾಗಲಾರವು. ಅಲ್ಲಿಗೆ ಉಳಿದದ್ದು - ವಿದ್ಯೆ.! ಅರೆರೆ ಜ್ಞಾನ ಹೆಚ್ಚುವುದು ಅಥವಾ ಕಡಿಮೆಯಾಗುವುದು ವಿದ್ಯೆಯ ಮುಖೇನವೆ ಅಲ್ಲವೆ ? ವಿದ್ಯಾ ತಾನೆ ಜ್ಞಾನಾರ್ಜನೆಯ ಮಾರ್ಗ? ಜ್ಞಾನದ ಮಟ್ಟದಲ್ಲಿ ಏರಿಕೆಯಾಗಬೇಕಾದರೆ ಯಾವುದಾದರೊಂದು ಮಾರ್ಗದ ಮೂಲಕ ಅದರ ಪ್ರಾಪ್ತಿಯಾಗಬೇಕು. ವಿದ್ಯಾ ತಾನೆ ಅದಕ್ಕೆ ರಾಜ ಮಾರ್ಗ? ವಿದ್ಯಾ ಮುಖೇನ ಕಲಿತಿದ್ದೆಲ್ಲ ಜ್ಞಾನವಾಗಿಬಿಡುವುದೆ ಅನ್ನುವುದು ಬೇರೆಯದೆ ವಿಷಯ. ನಿಜವಾಗಿ ಹೇಳುವುದಾದರೆ ಜ್ಞಾನಕ್ಕೆ ಹಾಕಿಟ್ಟ ಮಾಯೆಯ ಮುಸುಕೆ ಅಜ್ಞಾನ ಎನ್ನುತ್ತಾರೆ. ಅಂದರೆ ವಿದ್ಯಾ ಆ ಮುಸುಕಿನ ಪರದೆಯನ್ನು ತೆಗೆಸುವ ಪರಿಕರವಷ್ಟೆ. ವಿದ್ಯಾ ಸರಿಸಿದ ಮುಸುಕಿನಿಂದ ಜ್ಞಾನದ ಅನಾವರಣವಾದರೂ ಅಂತಃಕರಣಗಳ ಜತೆ ಸೇರಿಕೊಂಡ ಜ್ಞಾನದ ವರ್ತನೆ, ಸ್ವಭಾವ ಯಾವ ರೀತಿಯಲ್ಲಿ ಇರುವುದೆಂದು ಹೇಳಲಾಗದು. ಉದಾಹರಣೆಗೆ ಅಹಂಕಾರ - ಮಾಯೆಯ ಮುಸುಕಿನಡಿ ಸಿಕ್ಕ ಜ್ಞಾನ ವಿದ್ಯೆಯಿಂದ ಅನಾವರಣವಾದರೂ, ಅದೆ ಮಾಯೆಯ ಬಲೆಗೆ ಸಿಕ್ಕಿದ ಅಹಂಕಾರದ ಕಾರಣದಿಂದ ಹೇಗೆ ಬೇಕಾದರೂ ಪ್ರವರ್ತಿಸಬಹುದು...

ಆದರೆ ಅದೆ ನಾಲ್ಕು ಅಂತಃಕರಣಗಳಲ್ಲೊಂದಾದ ಬುದ್ಧಿಯನ್ನು ಪರಿಗಣಿಸಿದರೆ ಅದು ವಿದ್ಯೆಯೊಂದಿಗೆ ಹೊಂದಿಕೊಂಡ ಜೋಡಿಯಂತೆ ಕಾಣುವುದಿಲ್ಲವೆ ? ನಾವು ಹೇಳುವಾಗಲೂ ಕೂಡ 'ವಿದ್ಯಾಬುದ್ದಿ' ಎಂದು ಸೇರಿಸಿಯೆ ಹೇಳುವುದಲ್ಲವೆ? ಜ್ಞಾನದ ಅನ್ವೇಷಣೆಗೆ ಹೊರಟಾಗ ಅದನ್ನಿಟ್ಟಿರುವ ಪೆಟಾರಿಯಾಗಿ ವಿದ್ಯೆ ದೊರಕುವುದೆ ಹೊರತು ಅದನ್ನು ತೆರೆದ ಮಾತ್ರಕ್ಕೆ ಅದೆಲ್ಲವು ಸರಿಯಾದ ರೂಪದಲ್ಲಿ ಜೀರ್ಣವಾಗಿ ಅಂತರ್ಗತವಾಗಿ ಹೋಗುವುದು ಎಂದು ಹೇಳಲಾಗುವುದಿಲ್ಲ. ಕಾಲದಂತೆ ವಿದ್ಯಾ ಕೂಡ ಅಸ್ತಿತ್ವದಲ್ಲಿರುವ ಸ್ಥಾಯಿ ಶಕ್ತಿ. ಅದನ್ನು ತೆರೆಯುವ, ಗಳಿಸುವ ಸೂಕ್ತ ಕೀಲಿಕೈ ಬುದ್ಧಿಯಲ್ಲವೆ? ಹೇಗೆ ಕಾಲದ ಶಕ್ತಿಯನ್ನು ಸಮಯದ ಚಲನಶಕ್ತಿಯಾಗಿಸಿ (ಅರ್ಥಾತ್ ಕ್ರಿಯಾಶಕ್ತಿಯಾಗಿಸಿ) ಬಳಸಬಹುದೊ, ಅದೇ ರೀತಿ ವಿದ್ಯಾವನ್ನು ಕ್ರಿಯಾಶಕ್ತಿಯಾಗಿಸುವ ಅಸ್ತಿತ್ವ 'ಬುದ್ಧಿ'ಯಾಗಿರಬೇಕಲ್ಲವೆ ? ಬುದ್ಧಿತತ್ವದ ದೆಸೆಯಿಂದ ವಿದ್ಯಾತತ್ವದ ಶಕ್ತಿ ಸೂಕ್ತ ಜ್ಞಾನವಾದರೂ ಆಗಬಹುದು, ಬುದ್ಧಿ ಸರಿಯಾಗಿ ಬಳಸಿಕೊಳ್ಳದಿದ್ದರೆ ಅಜ್ಞಾನವೂ ಆಗಬಹುದು. ಜ್ಞಾನವೆನ್ನುವ ಥಿಯರಿಯನ್ನು ಪ್ರಾಕ್ಟಿಕಲ್ ಸ್ತರದಲ್ಲಿ ನಿಭಾಯಿಸುವ ಸಾಮರ್ಥ್ಯ ಬುದ್ದಿಯದಿರಬೇಕು. ಜ್ಞಾನವಿದ್ದರೆ ಬುದ್ದಿಯ ತೀರ್ಮಾನ ಹೆಚ್ಚು ನಿಖರವಿರುವ ಸಾಧ್ಯತೆಯಿರುತ್ತದೆ; ಅಂತೆಯೆ ಜ್ಞಾನವಿರದಿದ್ದೆಡೆ ಬುದ್ಧಿಶಕ್ತಿಯ ಮಟ್ಟವೂ ಸೀಮಿತಗೊಂಡುಬಿಡುತ್ತದೆ, ತನ್ನಳತೆಯ ಮಟ್ಟಕ್ಕೆ ಮಾತ್ರ ವಿಸ್ತರಿಸಿಕೊಳ್ಳುತ್ತ. ಇನ್ನು ಕೆಲವೊಮ್ಮೆ ಜ್ಞಾನವಿದ್ದರು, ಅದು ಬುದ್ದಿಶಕ್ತಿಯಲ್ಲಿ ಸೂಕ್ತವಾಗಿ ಬಳಕೆಯಾಗುವುದೊ ಬಿಡುವುದೊ ಎನ್ನುವುದು ಮತ್ತಿತರ ಅಂತಃಕರಣದ ಅಂಶಗಳ ಮೇಲೂ ಅವಲಂಬಿಸಿರಬಹುದು - ಮನಸಿನ ಪ್ರಭಾವ, ಚಿತ್ತಾಲೋಚನೆಯ ಪರಿ, ಅಹಂಕಾರದ ಪ್ರಕ್ಷೇಪ ಇತ್ಯಾದಿ. ಅದೇನಿದ್ದರೂ ಅವೆಲ್ಲ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ವಿಸ್ತರಿಸುವ ಅಥವ ಸೀಮಿತಗೊಳಿಸುವ ಕಾರ್ಯಕ್ಕೆ ಪೂರಕವಾಗುತ್ತವೆಯಾಗಿ ಜ್ಞಾನ-ಅಜ್ಞಾನದ ಕೊಂಡಿಯಾಗಿ ನಿಂತಿರುವುದು, ಸಮತೋಲಿಸುತ್ತಿರುವುದು ಬುದ್ಧಿತತ್ವವೆ ಎಂದು ಹೇಳಬೇಕು, ಅದರ ಬೆನ್ನೆಲುಬಾಗಿರುವ ವಿದ್ಯಾತತ್ವದ ಶಕ್ತಿ ಪೋಷಣೆಯಡಿಯಲ್ಲಿ. ಅಲ್ಲಿಗೆ ಜ್ಞಾನ-ಅಜ್ಞಾನವನ್ನು ಸಮತೋಲನದಲ್ಲಿಟ್ಟಿರುವ ಆ ಅದೃಶ್ಯ ಕೊಂಡಿಯ ಸುಳಿವೂ ಸಿಕ್ಕಂತಾಯ್ತು! ಹೀಗೆ ಆಲೋಚನೆಯನ್ನು ವಿಸ್ತರಿಸಿ ನೋಡುತ್ತಿದ್ದರೆ ಬಹುಶಃ ಈ ಮುವತ್ತಾರು ತತ್ವಗಳು ಸೃಷ್ಟಿ ರಹಸ್ಯದ ಜಾತಕಾಂಶಗಳಾಗಿ , ಕಣರೂಪಿ ಬೀಜಾಕ್ಷರಗಳಾಗಿ ನಮ್ಮ ಜೀವಕೋಶಗಳಲ್ಲಿ ಸೇರಿಕೊಂಡಿರುವ ಬಗೆಯನ್ನು ಸಾಂಕೇತಿಕವಾಗಿ ಹೇಳಿದ ಹಾಗೆ ಕಾಣಿಸುವುದಲ್ಲ? ನಾವೀಗ ವೈಜ್ಞಾನಿಕವಾಗಿ ಹೇಳುವ ಕ್ರೋಮೊಸೋಮುಗಳು, ಅದರಲ್ಲಿರುವ ಡೀ.ಎನ್.ಏ ಜಾತಕ ಪೆಟ್ಟಿಗೆ, ಅದರೊಳಗೆ ಹುಲುಸಾಗಿರುವ ಸಹಸ್ರಾರು ವಂಶವಾಹಿ 'ಜೀನ್ಸ್' ಕಣಗಳು ಇವೆಲ್ಲದರ ಮೂಲ ಸ್ವರೂಪದ ಗುಟ್ಟನ್ನೆ ಈ ತತ್ವಗಳ ರೂಪಾಗಿ ಹೇಳಿದ್ದರೆ ನಮ್ಮ ಪೂರ್ವಿಕರು ? ಇಡೀ ಜೀವಕೋಶ ಒಂದು ಕಾರ್ಖಾನೆಯಾಗಿ ವರ್ತಿಸುತ್ತದೆಯೆನ್ನುತ್ತದೆ ವಿಜ್ಞಾನ. ಆ ಕೋಶಗಳ ಮೊತ್ತವೆ ಜೀವಿಗಳ ಅಸ್ತಿತ್ವವಲ್ಲವೆ? ಆ ಕಾರ್ಖಾನೆಗಳು ಸ್ವಯಂ ತಮ್ಮನ್ನು ತಾವೆ ನಿಭಾಯಿಸಿಕೊಳ್ಳುವ ಪರಿಗೆ ಮೂಲ ಸರಕಾಗಿ ಈ ತತ್ವವೆಂಬ ಹೆಸರಿನಿಂದ ಕರೆಯಲ್ಪಡುವ ಅಂಶಗಳೆಲ್ಲ ಸಂಯೋಜಿತ ರೂಪದಲ್ಲಿ, ಮೂರ್ತಾಮೂರ್ತ ಸ್ವರೂಪದಲ್ಲಿ, ಭೌತಿಕಾಭೌತಿಕ, ಲೌಕಿಕಾಲೌಕಿಕ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿವೆಯೆ ? ಈ ವಿಷಯ ತನ್ನ ಪಾಮರ, ಅಪಕ್ವ ಜಿಜ್ಞಾಸೆಗಿಂತ ರಿಸರ್ಚಿಗೆ ಒಂದು ಸೊಗಸಾದ ವಿಷಯವೆಂದು ಕಾಣುತ್ತದೆ...!

ಒಟ್ಟಾರೆ ಸಾರಾಂಶದಲ್ಲಿ ಮತ್ತದೆ ತೀರ್ಮಾನದತ್ತ ಬೆರಳು ಮಾಡಿ ತೋರಿಸುತ್ತಿವೆ ಇವೆಲ್ಲಾ ಜಿಜ್ಞಾಸೆಗಳು - ಬೃಹನ್ಮೂಲದಲ್ಲಿರುವ ಯಾವುದೊ ಮಹಾನ್ ಶಕ್ತಿ ತೇಜವೆ ತನ್ನ ಸ್ಪೋಟಿಸಿದ ಮಿಕ್ಕೆಲ್ಲ ಚೂರುಗಳಲ್ಲಿ ಹಂಚಿ ಹೋಗಿವೆಯೆಂದು. ಅದನ್ನೆ ಇನ್ನಷ್ಟು ವಿಷದೀಕರಿಸಿ ಹೇಳುವುದಾದರೆ ಆ ಮಹಾನ್ ಶಕ್ತಿಯೂ ಕೂಡ ಮೊತ್ತದಲ್ಲಿ ಸ್ಥಾಯಿಶಕ್ತಿ ಮತ್ತು ಚಲನಶಕ್ತಿಯ ಒಟ್ಟುಗೂಡಿಸಿದ ಶಕ್ತಿಪುಂಜವಾಗಿರಬೇಕು. ಮೊದಲಿಗೆ ಚಲನೆಯಿಲ್ಲದ ಕಾರಣ ಎಲ್ಲವೂ ಸ್ಥಿರ ಜಡರೂಪದಲ್ಲಿದ್ದಾಗ ಒಂದು ಶಕ್ತಿ ಗೋಳವಾಗಿ (ದೃಶ್ಯವಾಗಿಯೊ, ಅದೃಶ್ಯವಾಗಿಯೊ) ಅಸ್ತಿತ್ವದಲ್ಲಿದ್ದಿರಬೇಕು - ಅಂಧಕಾರವೊ, ಮಹಾನ್ ಕಾಲವೊ ಅಥವಾ ಇನ್ನಾವುದೊ ನಾವರಿಯದ ರೂಪದಲ್ಲಿ. ಆಗ ಚಲನೆಯಿಲ್ಲದ ಕಾರಣ ಶಕ್ತಿಯ ಪ್ರದರ್ಶವಾಗುವುದಿಲ್ಲ - ಎಲ್ಲವೂ ಬರಿಯ ದ್ರವ್ಯರಾಶಿಯ ರೂಪದಲ್ಲಷ್ಟೆ ಅಸ್ತಿತ್ವದಲ್ಲಿರಬೇಕು. ಐನ್ ಸ್ಟೈನನ ಶಕ್ತಿ ಮತ್ತು ದ್ರವ್ಯರಾಶಿಯ ನಿಯಮವೂ ಹೇಳುವಂತೆ - ಒಂದು ವಸ್ತುವಿನಲ್ಲಡಗಿದ ಶಕ್ತಿಯ ಮೊತ್ತ, ವಸ್ತುವಿನ ದ್ರವ್ಯರಾಶಿ ಮತ್ತದರ ವೇಗೋತ್ಕರ್ಷದ ವರ್ಗಕ್ಕೆ ಸಮವೆನ್ನುವ ನಿಯಮ.... ವಸ್ತು ಜಡಸ್ಥಿತಿಯಲ್ಲಿದ್ದಾಗ ಚಲನೆಯಿರುವುದಿಲ್ಲವಾಗಿ, ವೇಗವು ಶೂನ್ಯವಾಗಿರುವುದರಿಂದ ಯಾವುದೆ ಚಲನಶಕ್ತಿ (ಕೈನೆಟಿಕ್ ಎನರ್ಜಿ) ಪ್ರಕಟವಾಗುವುದಿಲ್ಲ. ಆದರೆ ಇರುವ ಶಕ್ತಿಯೆಲ್ಲವೂ ಜಡ, ಸ್ಥಾಯಿಶಕ್ತಿಯ (ಪೊಟೆನ್ಶಿಯಲ್ ಎನರ್ಜಿ) ರೂಪದಲ್ಲಿ ವಸ್ತುವಿನಲ್ಲಿ ಅಡಗಿಕೊಂಡಿರುತ್ತದೆ. ಯಾವುದೆ ಕಾರಣದಿಂದ ಚಲನೆ ಆರಂಭವಾದರೆ ಈ ಅಡಗಿ ಕೂತ ಶಕ್ತಿಯ ಭಾಗಾಂಶ ಆ ಚಲನೆಯ ಅಭಿವ್ಯಕ್ತಿಯಾಗಿ ರೂಪಂತರಗೊಂಡು ಚಲನೆಗೆ ಚಾಲನೆ ನೀಡುತ್ತದೆ. ಆದರೆ ಆ ಚಲನಕಾರಕ ಶಕ್ತಿ ವಸ್ತುವಿನೊಳಗಡಗಿರುವ ಜಡತ್ವ (ಇನರ್ಶಿಯಾ) ವನ್ನು ಅಧಿಗಮಿಸಿದಾಗಲಷ್ಟೆ ಚಲನೆ ಆರಂಭವಾಗುವುದು. ಉದಾಹರಣೆಗೆ, ನೆಲದ ಮೇಲಿಟ್ಟ ಗೋಲಿ ಚಲಿಸಲಾರಂಭವಾಗುವುದು ಬೆರಳಿನ ನೂಕುಶಕ್ತಿ ಅದರ ಜಡತ್ವವನ್ನು ಅಧಿಗಮಿಸಿದಾಗ. ಚಲನೆಯಿಲ್ಲದೆ ಕೂತ ವಸ್ತುವೊಂದರ ಶಕ್ತಿಯೆಲ್ಲ ಅದರ ತೂಕ ಅರ್ಥಾತ್ ದ್ರವ್ಯರಾಶಿಯ ರೂಪದಲ್ಲಿರುವಾಗ, ಆ ವಸ್ತು ಚಲನೆಗೊಳಗಾಗುವತನಕ ಆ ಶಕ್ತಿಯ ಪ್ರದರ್ಶನವಾಗುವುದಿಲ್ಲ. ಅದೇ ರೀತಿಯಲ್ಲಿ ದ್ರವ್ಯರಾಶಿ ಅಥವಾ ತೂಕದ ಬದಲು ಗ್ರಾಹ್ಯಾತೀತವಾದ ಕಪ್ಪುಬಿಲದಂತಹ ಅತೀವ ಗುರುತ್ವದ ವಿಷಯದಲ್ಲೂ ಇದು ನಿಜವೆನ್ನಬಹುದು - ವಸ್ತುವಿನ ಶಕ್ತಿಯೆಲ್ಲ ಕಪ್ಪುಬಿಲದ ಒಳಸೆಳೆದುಕೊಳ್ಳುವ ಗುರುತ್ವದ ರೂಪದಲ್ಲಿ ಸಾಂದ್ರೀಕೃತವಾಗಿದೆಯೆಂದು ವಾದಿಸುತ್ತ. ಅಂದರೆ ಇಡೀ ವಿಶ್ವಚಿತ್ತದ ಅಸ್ತಿತ್ವ ಮೊದಲಿಗೆ ಜಡಶಕ್ತಿಯ ರೂಪದಲ್ಲಿದ್ದು, ಬೃಹತ್ ಸ್ಪೋಟದಲ್ಲಿ ಅದರ ಭಾಗಾಂಶ ಸ್ಪೋಟಕ, ಚಲನಶಕ್ತಿಯಾಗಿ ಮಾರ್ಪಾಟಾಗಿ ಬ್ರಹ್ಮಾಂಡಸೃಷ್ಟಿಗೆ ಕಾರಣವಾಯ್ತು ಎನ್ನಬಹುದಾಗಿ, ಆಗ ಸಿಡಿದ ಚೂರುಗಳಲೆಲ್ಲ ಆ ಶಕ್ತಿಯ ತುಣುಕುಗಳೆ ಸೇರಿಕೊಂಡವೆಂದೂ ನಿಷ್ಪತ್ತಿಸಬಹುದು. ಅಲ್ಲಿಯೂ ಆ ಬೃಹತ್ ಸ್ಪೋಟವಾಗಲಿಕ್ಕೆ ಅಧಿಗಮಿಸಬೇಕಾದ 'ಗೋಲಿ ನೂಕುವಿಕೆಯ' ಜಡತ್ವವನ್ನು, ನೂಕಿ ಒದಗಿಸಿದ ಮತ್ತೊಂದು 'ಬೆರಳಿನ ನೂಕು-ಶಕ್ತಿ' ಯಾವುದು ಎನ್ನುವುದು ಮತ್ತೊಂದು ನಿಗೂಢ. ಅದು ಭಗವಂತವೆಂಬ ಮಹಾನ್ ಶಕ್ತಿಯೊ, ಮತ್ತೊಂದು ರಾಸಾಯನಿಕ ಸ್ವಗತವೊ, ಮತ್ತೊಂದು ಬ್ರಹ್ಮಾಂಡದ ನೂಕುಶಕ್ತಿಯೊ - ಎಂಬ ಜಿಜ್ಞಾಸೆಯನ್ನು ಬದಿಗಿಟ್ಟು ಮೊದಲು ಈ ಹಂಚಿಹೋದ ಶಕ್ತಿಯ ಕಥೆ ಏನಾಯಿತೆಂದು ನೋಡುವುದೊಳಿತು ...

ಹೀಗೆ ಹಂಚಿ ಹೋದ ಬ್ರಹ್ಮಾಂಡದ ಪ್ರತಿ ತುಣುಕೂ - ಅದು ಗ್ರಹವೊ, ತಾರೆಯೊ, ಜೀವಿಯೊ, ನಿರ್ಜೀವಿಯೊ, ತನ್ನಲ್ಲಿ ತುಸುಜಡ ಶಕ್ತಿಯನ್ನು ಮತ್ತಷ್ಟು ಚಲನಶಕ್ತಿಯನ್ನು ಭಾಗಂಶವಾಗಿ ಹೊಂದಿರಲೇಬೇಕು. ಹಿಂದೆ ಕಾಲದ ವಿವರಣೆಯಲ್ಲಿ ನೋಡಿದಂತೆ ಇವೆಲ್ಲಾ ಶಕ್ತಿಯೂ ಪ್ರತಿ ವಸ್ತುವಿನಲ್ಲೂ ಅದರದೆ ಆದ ಕಾಲದ ಗಡಿಯಾರದಂತೆ ಪ್ರಸ್ತುತವಾಗಿರಬೇಕು - ಆ ಗಡಿಯಾರದ ಜಡಶಕ್ತಿ ವಸ್ತುವಿನ ದ್ರವ್ಯರಾಶಿಯ ರೂಪದಲ್ಲಿ ಮತ್ತು ಅದರ ಚಲನಶಕ್ತಿ ಪ್ರಕಾಶ ಅಥವ ಬೆಳಕಿನ ರೂಪದಲ್ಲಿ. ಪ್ರತಿ ವಸ್ತುವಿನ ತುಣುಕಿನ ತುಣುಕಿನ ತುಣುಕೊಂದನ್ನು ಕತ್ತರಿಸಿ ನೋಡಿದರೂ ಅಲ್ಲಿ ಇದೇ ಸೂತ್ರ (ಫಾರ್ಮುಲಾ) ಅಳವಡಿತಗೊಂಡಿರಬೇಕು - ತುಸು ಜಡಾಂಧಕಾರ-ಶಕ್ತಿ ಮತ್ತು ಮಿಕ್ಕ ತುಸು ಚಲನ ಪ್ರಕಾಶಶಕ್ತಿ, ತನ್ನದೆ ಆದ ಸಮತೋಲಿತ ರೂಪದಲ್ಲಿ. ಮತ್ತು ತನಗೆ ಬೇಕಾದಾಗ ತನ್ನ ಜಡಶಕ್ತಿಯನ್ನು ಚಲನಶಕ್ತಿಯಾಗಿ ಬದಲಾಗಿಸಿಕೊಳ್ಳುವ, ರೂಪಾಂತರಿಸಿಕೊಳ್ಳುವ ಶಕ್ತಿಯೂ ಸಿದ್ದಿಸಿರಬೇಕು - ತನ್ನ ಜಡತ್ವವನ್ನು ಅಧಿಗಮಿಸಿಕೊಂಡಾಗೆಲ್ಲ. ಇದನ್ನೆ ತ್ರಿಶಕ್ತಿಯ ಭಾಷೆಯಲ್ಲಿ ಹೇಳುವುದಾದರೆ, ಜಡಸ್ಥಿತಿಯಲ್ಲಿರುವ ಜ್ಞಾನಶಕ್ತಿ ತಾನೆ ತಾನಾಗಿ ಕ್ರಿಯಾಶಕ್ತಿಯಾಗಿ ಬದಲಾಗದು. ಅದನ್ನುಂಟು ಮಾಡಲು ಅದರ ಜಡತ್ವ (ಇನರ್ಶಿಯ)ವನ್ನು ನೀಗಿಸುವ ಮತ್ತೊಂದು ಶಕ್ತಿಯ ಅಗತ್ಯವಿರುತ್ತದೆ. ಆ ಜಡತ್ವ ನೀಗಿಸುವ ಶಕ್ತಿಯನ್ನೆ ಇಚ್ಛಾಶಕ್ತಿಯೆನ್ನಬಹುದು. ಅದರಿಂದ ದೂಕಲ್ಪಟ್ಟ ಜಡ ಜ್ಞಾನಶಕ್ತಿ, ಕ್ರಿಯಾಶಕ್ತಿಯಾಗಿ ಪರಿವರ್ತಿತವಾಗುವ ಉತ್ಸಾಹ ತೋರುತ್ತದೆ. ಈ ಕ್ರಿಯಾಶಕ್ತಿಯ ವ್ಯತ್ಯಾಸವೇನಿದ್ದರೂ ಅವು ಯಾವ ಪ್ರಮುಖ ಪ್ರಕಟಿತ ರೂಪದಲ್ಲಿವೆ ಎನ್ನುವುದು ಮಾತ್ರವೆ; ಉದಾಹರಣೆಗೆ ಸೂರ್ಯನಂತಹ ತಾರೆಯಲ್ಲಿ ಚಲನಶೀಲ ಬೆಳಕಿನ ಶಕ್ತಿ ಪ್ರಮುಖ ಪಾತ್ರ ವಹಿಸಿ ಅದರ ಗುಣಧರ್ಮವನ್ನು ನಿರ್ವಹಿಸುತ್ತಿದ್ದರೆ, ಗ್ರಹಗಳಲ್ಲಿ ಅಂಧಕಾರದ ಜಡಶಕ್ತಿಯೆ ಪ್ರಮುಖವಾಗಿ ಅದರ ಕಾಯಗಳನ್ನು ನಿರ್ದೇಶಿಸುತ್ತಿದೆ. ಗ್ರಹದಲ್ಲಿರುವ ಅಲ್ಪಸ್ವಲ್ಪ ಚಲನಶಕ್ತಿಯೂ, ಬೆಳಕಿನ ಬದಲು ತನ್ನ ಕಾಯದ ಭೌತಿಕ ಚಲನೆಗೆ ಮೀಸಲಾಗಿಬಿಟ್ಟಿದೆ. ತನ್ನದೆ ಕಕ್ಷೆಯಲ್ಲಿ ತಾನಿರಬೇಕಾದ ಹೋರಾಟದಲ್ಲಿ ಅದರ ಪ್ರಕಾಶಶಕ್ತಿಗಿಂತ, ಗುರುತ್ವಬಲ ನೀಡಿ ಸಹಕರಿಸುವ ಜಡಶಕ್ತಿಯ ಅಗತ್ಯವೆ ಮೇಲುಗೈ ಸಾಧಿಸಿಬಿಟ್ಟಿದೆ. ಅಂದರೆ ಈ ಸೃಷ್ಟಿಯ ಅಸ್ತಿತ್ವದಲ್ಲಿರುವ ಹುಲು ಮಾನವ ಜೀವಿಗಳಾದ ನಾವುಗಳೂ ಅದೇ ಶಕ್ತಿಯ ತುಣುಕುಗಳಾದ ಕಾರಣ ನಮ್ಮಲ್ಲೂ ಆ ಜಡ ಮತ್ತು ಚಲನಶೀಲ ಶಕ್ತಿ ವಿಭಿನ್ನ ಅನುಪಾತದಲ್ಲಿ ಪ್ರಸ್ತುತಗೊಂಡು ಬಿಟ್ಟಿರಬೇಕಲ್ಲವೆ ? ನಮ್ಮಲ್ಲೆ ವಿಭಿನ್ನ ವ್ಯಕ್ತಿತ್ವವಿರುವ ವ್ಯಕ್ತಿಗಳೆಂದರೆ ಅವರಲ್ಲಿ ಈ ಜಡ ಮತ್ತು ಚಲನಶಕ್ತಿಯ ಅನುಪಾತ ಹಾಗೂ ಅವೆರಡನ್ನು ಸಮತೋಲಿಸಿದ ಸಮೀಕರಣ ವಿಭಿನ್ನವೆಂದು ಅರ್ಥವಾಗುವುದಲ್ಲ ? ಅಂದರೆ ಮೂಲದಲ್ಲಿದ್ದ ಕಾಲದ ಶಕ್ತಿತೇಜ ಜಡ ಅಂಧಕಾರದ ಶಕ್ತಿಯಾಗಿ ತಾಮಸ ರೂಪ ತಾಳಿರುವೆಡೆ, ಅಜ್ಞಾನದ ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆಂದು ಹೇಳಬಹುದು. ಅದೇ ಶಕ್ತಿತೇಜದ ಪ್ರಕಾಶರೂಪ ಬೆಳಕಿನ ಶಕ್ತಿಯಾಗಿ, ಜ್ಞಾನವಾಗಿ ಅಸ್ತಿತ್ವಕ್ಕೆ ಬಂತೆಂದು ಹೇಳಬಹುದು. ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಯಿಸಬಹುದಾದ ವೈಜ್ಞಾನಿಕ ಸಿದ್ದಾಂತದನುಸಾರವೆ ಪ್ರಕಾಶದ ಚಲನಶಕ್ತಿ, ಜ್ಞಾನಶಕ್ತಿಯಾಗಿ ರೂಪಂತರಿಸಿಕೊಂಡು ಪ್ರಕಟವಾಗಿರಬಹುದು.  ಹಾಗೆಯೆ ಕತ್ತಲ ಜಡಶಕ್ತಿ ಅಜ್ಞಾನವಾಗಿ ಪ್ರಕಟವಾಗಿರಬಹುದು...

ಈ ಶಕ್ತಿ ಹೇಗೆ ರೂಪಾಂತರಿಸಿತೆಂದು, ಯಾವ ಪ್ರಕ್ರಿಯೆ ಬೆಳಕಿನ ಶಕ್ತಿಯನ್ನು ಜ್ಞಾನಶಕ್ತಿಯಾಗಿ ಪರಿವರ್ತಿಸಿತೆಂದು ಕೇಳಿದರೆ - ಅದು ಮಾನವನ ಅರಿವಿನ, ನಿಲುಕಿಗಿನ್ನೂ ಸಿಗದ ವಿಚಾರ. ಆ ಪ್ರೊಸೆಸ್ಸಿನ ರಹಸ್ಯ, ಸೂತ್ರ ಗೊತ್ತಾದರೆ ಬಹುಶಃ ಮಂತ್ರ ಶಕ್ತಿಯಿಂದ ಬದಲಾಯಿಸುವಂತೆ ವ್ಯಕ್ತಿಯೊಬ್ಬನ ದುರ್ಬಲ ಶಕ್ತಿಯನ್ನು ಪ್ರಬಲ ಶಕ್ತಿಯನ್ನಾಗಿ ಬದಲಿಸಿಬಿಡಬಹುದೇನೊ... ಯಾರಿಗೆ ಗೊತ್ತು ? ಹಿಂದೆಲ್ಲ ದೇವತೆಗಳು ಬಂದು ವರ ಕೊಡುತ್ತಿದ್ದರೆಂದರೆ ಪ್ರಾಯಶಃ ಅವರಿಗೆ ಗೊತ್ತಿದ್ದ ಈ ರೀತಿಯ ಪ್ರಕ್ರಿಯೆಯನ್ನು ಬಳಸಿಯೆ ವ್ಯಕ್ತಿಯಲ್ಲಡಗಿದ್ದ ಸ್ತಾಯಿಶಕ್ತಿಯನ್ನೆ ಚಲನಶಕ್ತಿಯಾಗಿ ಬದಲಿಸಿ (ಅದರ ಸಮಾನಾರ್ಥಕದಲ್ಲಿ ಹೇಳುವುದಾದರೆ ಅಂಧಕಾರ ರೂಪದ ಅಜ್ಞಾನವನ್ನೆ, ಪ್ರಕಾಶ ರೂಪಿ ಜ್ಞಾನವನ್ನಾಗಿ ಪರಿವರ್ತಿಸಿ) ರೂಪಾಂತರಿಸಿ ಮೊದಲು ದುರ್ಬಲವೆನಿಸಿದ್ದ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದರೊ ಏನೊ - ಬೂಸ್ಟರ ಇಂಜೆಕ್ಷನ್ ಕೊಡುವ ಹಾಗೆ ? ನಮಗದರ ವೈಜ್ಞಾನಿಕ ಹಿನ್ನಲೆ ತಿಳಿಯದೆ ಅಡುಗೋಲಜ್ಜಿ ಕಥೆಯೆಂದೊ, ಪೌರಾಣಿಕ ರಮಣೀಯತೆಯೆಂದೊ ತಳ್ಳಿ ಹಾಕಿಬಿಡುತ್ತೇವೆ. ಅಶ್ವಿನಿ ದೇವತೆಗಳು ಚೌವ್ವನನನ್ನು ಯುವಕನನ್ನಾಗಿಸಿದರೆಂದೊ, ಯಯಾತಿಗೆ ಮಗ ತನ್ನ ಯೌವ್ವನವನ್ನು ದಾನ ಮಾಡಿದನೆಂದೊ ಕೇಳಿದರೆ 'ಅದೆಲ್ಲ ಸಾಧ್ಯವೆ? ಆಗು ಹೋಗುವ ಮಾತೆ ?' ಎಂದು ನಕ್ಕು ಬಿಡುತ್ತೇವೆ. ಇತ್ತೀಚೆಗೆ ತಾನೆ 'ಜರ್ನಲ್ ನೇಚರ ಮೆಡಿಸಿನ್' ನಲ್ಲಿ ಪ್ರಕಟಗೊಂಡ ಸಂಶೋಧನೆಯೊಂದು ಇಲಿಗಳ ಮೇಲೆ ನಡೆದ ಒಂದು ಕುತೂಹಲಕಾರಿ ಪ್ರಯೋಗದ ಪರಿಣಾಮಗಳ ಫಲಿತಾಂಶವನ್ನು ಪ್ರಕಟಿಸಿತು. ಈ ಸಂಶೋಧನೆಯ ಪ್ರಯೋಗದಲ್ಲಿ ವಿಜ್ಞಾನಿಗಳು ಒಂದು ವಯಸಾದ ಮತ್ತು ಇನ್ನೊಂದು ತಾರುಣ್ಯದ ಇಲಿಗಳ ಜೋಡಿಗಳನ್ನು ಪ್ರಯೋಗಕ್ಕೆ ಆರಿಸಿಕೊಂಡಿದ್ದರು. ಪ್ರಯೋಗದ ಉದ್ದೇಶವೆಂದರೆ - ಎರಡರ ರಕ್ತವನ್ನು ಪರಸ್ಪರ ಬದಲಾಯಿಸಿದರೆ ವಯಸಿನ ಮತ್ತದರ ಸಂಬಂಧಿ ನಡುವಳಿಕೆಯಲ್ಲಿ ಏನಾದರೂ ಬದಲಾವಣೆ ಕಾಣಿಸುವುದೆ ಎಂದು ನೋಡುವುದಾಗಿತ್ತು. ಅದಕ್ಕೆ ಪೂರಕವಾಗಿ ಎರಡರ ರಕ್ತಗಳು ಪರಸ್ಪರ ವಿನಿಮಯವಾಗುವಂತೆ ಅವೆರಡರ ಚರ್ಮಗಳನ್ನು ಸೇರಿಸಿ ಹೊಲಿಗೆ ಹಾಕಿದ್ದರು (ಇದಕ್ಕೆ ವಿಜ್ಞಾನಿಗಳ ಭಾಷೆಯಲ್ಲಿ 'ಪ್ಯಾರಬಯೋಸಿಸ್' ಎಂದು ಕರೆಯುತ್ತಾರೆ). ಎರಡರ ಸಂಪರ್ಕವಾಗುತ್ತಿದ್ದಂತೆ ರಕ್ತವೂ ಪರಸ್ಪರ ವಿನಿಮಯವಾಗಿ ಪ್ರಾಯದ ಇಲಿಯಿಂದ ಮುದಿಯಿಲಿಗೆ ಮತ್ತು ಮುದಿಯಿಂದ ತರುಣ ಇಲಿಗೆ ರಕ್ತ ಹರಿದು ಸೇರಿಕೊಂಡಿತು. ಅಚ್ಚರಿಯೆಂಬಂತೆ ಈ ವಿನಿಮಯವಾದ ಮೇಲೆ, ಮುದಿ ಇಲಿಗೆ ಹಾಕಿದ್ದ ಹೊಲಿಗೆಯ ಗಾಯ ಬೇಗನೆ ಮಾಯತೊಡಗಿತಲ್ಲದೆ ಅದರೊಳಗೆ ಯುವಪ್ರಾಯದ ಇಲಿಯಲ್ಲಾಗುವಷ್ಟೆ ಪ್ರಮಾಣದಲ್ಲಿ ಹೊಸ ಜೀವಕೋಶಗಳು ಹುಟ್ಟಿಕೊಳ್ಳತೊಡಗಿದವು. ಅದೆ ಯುವಕ ಇಲಿಯ ಕೇಸಿನಲ್ಲಿ ಅದರ ತದ್ವಿರುದ್ಧ! ಅದರ ಗಾಯ ಬೇಗನೆ ಮಾಯುವುದಿರಲಿ, ಅದರ ಹೊಸ ಕೋಶದ ಸೃಷ್ಟಿಯ ವೇಗ ಮುದಿಯಿಲಿಯ ಹಾಗೆ ಕುಂಠಿತವಾಗಿ ಹೋಯ್ತು...! ಅಲ್ಲಿಗೆ, ವಿಜ್ಞಾನಿಗಳು ಎರಡರ ರಕ್ತದಲ್ಲಿರುವ ಯಾವುದೊ ಒಂದು ಅಂಶವೆ ವಿನಿಮಯದಲ್ಲಿ ಬದಲಾವಣೆಯಾಗಿ ಈ ಪ್ರಕ್ರಿಯೆಯುಂಟು ಮಾಡಿರಬೇಕೆಂದು ಸರಿಯಾಗಿಯೆ ಊಹಿಸಿದರು. ಆ ಹೊತ್ತಿನಲ್ಲೆ ಮತ್ತೊಂದು ವಿಷಯವೂ ಬೆಳಕಿಗೆ ಬಂತು; ಈ ಹೊಸ ಜೀವಕೋಶಗಳ ಉತ್ಪಾದನೆಯನ್ನು ನಿಭಾಯಿಸುವ ಕೋಶಗಳಿಗೆ 'ಸ್ಟೆಮ್ ಸೆಲ್ಸ್' ಎನ್ನುತ್ತಾರೆ. ಅವು ಎಲ್ಲಿಯತನಕ ಸಕ್ರೀಯವಾಗಿರುತ್ತದೊ ಅಲ್ಲಿಯವರೆಗೆ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತ, ಸತ್ತ ಹಳೆಯ ಕೋಶಗಳ ಜಾಗ ತುಂಬಿಸುತ್ತಿರುತ್ತದೆ. ವಯಸಿನ ಕೋಶಗಳಲ್ಲಿ ಈ ಉತ್ಪತ್ತಿಯ ವೇಗ ಹೆಚ್ಚಿರುವ ಕಾರಣ ತಾರುಣ್ಯ ನಳನಳಿಸಿದರೆ, ವಯಸಾದ ಪ್ರಾಣಿಗಳಲ್ಲಿ ಈ ಉತ್ಪತ್ತಿ ಕುಂಠಿತವಾಗುವ ಕಾರಣದಿಂದಲೆ ಹೊಸ ಕೋಶಗಳು ಉತ್ಪತ್ತಿಯಾಗದೆ ಮುದಿತನದತ್ತ ನಡೆಸುವುದು. ಈ ಸಂಶೋಧನೆ ನಡೆಸುವಾಗ ವಿಜ್ಞಾನಿಗಳ ಗಮನಕ್ಕೆ ಬಂದ ವಿಷಯವೇನೆಂದರೆ ವಯಸಾಗಿದ್ದ ಇಲಿಯಲ್ಲು ಕೂಡ, ಎರಡರ ರಕ್ತ ವಿನಿಮಯವಾಗುವ ಮೊದಲೆ ಬೇಕಾದಷ್ಟು 'ಸ್ಟೆಮ್ ಸೆಲ್ಲು' ಗಳು ತುಂಬಿಕೊಂಡಿದ್ದವು... ಆದರೆ ಯಾರೋ ಅದರ ಸ್ವಿಚ್ಚನ್ನು ಆರಿಸಿಬಿಟ್ಟ ಹಾಗೆ ಅವೆಲ್ಲ ನಿಷ್ಕ್ರಿಯವಾಗಿಬಿಟ್ಟು, ಆ ಕಾರಣದಿಂದಲೆ ಹೊಸ ಕೋಶಗಳನ್ನು ಉತ್ಪಾದಿಸದೆ ಮುದಿಯಾಗುತ್ತ ನಡೆದಿದ್ದವು... ! ರಕ್ತ ವಿನಿಮಯದ ನಂತರ ಯಾರೊ ಜಾಡಿಸಿ ಒದ್ದಂತೆ ಆ ' ಸ್ಟೆಮ್ ಸೆಲ್ಲು' ಗಳು ಮತ್ತೆ ಚುರುಕಾಗಿ ನಿದ್ದೆಯಿಂದೆದ್ದು ಹೊಸಕೋಶ ತಯಾರಿಸುತ್ತ, ಮುದಿ ಇಲಿಯಲ್ಲು ಯೌವ್ವನದ ರೀತಿಯಲ್ಲಿ ಕೋಶ ಉತ್ಪಾದಿಸತೊಡಗಿದವು! ಅದೇ ಮುದಿ ರಕ್ತ ಪಡೆದ ಪ್ರಾಯದ ಇಲಿಗಳಲ್ಲಿ ಕೋಶದ ಸೃಷ್ಟಿ ಕುಂಠಿತವಾಗಿ, ಅದು ಮುದಿ ಇಲಿಯ ಕೋಶ ಸೃಷ್ಟಿಯ ವೇಗಕ್ಕೆ ತಿರುಗಿಕೊಂಡುಬಿಟ್ಟಿದ್ದವು..!!

ಈ ಸ್ಟೆಮ್ ಸೆಲ್ಲುಗಳು ಪ್ರಾಯದಲ್ಲಿ ಬಿರುಸಿನಿಂದ ಕಾರ್ಯ ಚಟುವಟಿಕೆ ನಡೆಸುತ್ತಿದ್ದರೆ ವಯಸಾಗುತ್ತಿದ್ದಂತೆ ನಿಧಾನವಾಗಿಬಿಡುತ್ತಿದ್ದುದು ಅಲ್ಲಿನವರೆಗಿನ ಸಂಶೋಧನೆಯಿಂದ ತಿಳಿದು ಬಂದ ವಿಷಯವಾಗಿತ್ತು. ಈಗ ವಯಸ್ಸಾದ ಜೀವಿಯ ಕೋಶದಲ್ಲೂ ಸ್ಟೆಮ್ ಸೆಲ್ ಸತ್ತಿರುವುದಿಲ್ಲ, ಬದಲಿಗೆ 'ಜಡನಿದ್ರೆ'ಯಲ್ಲಿರುವುದೆಂದು ಗೊತ್ತಾಗುತ್ತಿದ್ದಂತೆ, ಅವೆರಡು ಇಲಿಗಳ ರಕ್ತದಲ್ಲಿರುವ ಯಾವುದೊ ಅಂಶವೊಂದು ಈ 'ಸ್ಟೆಮ್ ಸೆಲ್ಲು' ಗಳನ್ನು ಒದ್ದು ಮೇಲೆಬ್ಬಿಸುವ ಅಥವ ನಿದಿರೆಗಿಳಿಸುವ ಕಾಯಕದಲ್ಲಿ ನಿರತವಾಗಿರಬೇಕೆಂದು ವಿಜ್ಞಾನಿಗಳುಗೆ ಮನವರಿಕೆಯಾಗಿಹೋಯ್ತು. ಸರಿ ಯಾರಾ ಕಳ್ಳ? ಎಂದು ಹುಡುಕಾಟ ಆರಂಭಿಸಿದರೆ ಆಗ ಸಿಕ್ಕಿಬಿದ್ದ ಆ ಚೋರ ಪ್ರೋಟೀನಿಗಿಟ್ಟ ಹೆಸರು - 'ಜಿ.ಡಿ.ಎಫ್ 11'.  ಆ ಪ್ರೋಟಿನನ್ನೆ ಬೇರೆಯಾಗಿಸಿ ಮುದಿಯಾಗಿದ್ದ ಬೇರೆ ಇಲಿಗಳಿಗೆ, ಹೃದಯ, ಮೆದುಳು, ಜಠರ ಇತ್ಯಾದಿ ಬೇರೆ ಭಾಗಗಳಿಗೆ ತೂರಿಸಿ ನೋಡಿದರೂ ಅದೆ ಪರಿಣಾಮ - ಪ್ರಾಯದ ಇಲಿಯ ವೇಗದಲ್ಲಿ ಕೋಶದ ಉತ್ಪಾದನೆ ಮತ್ತು ಸ್ವಭಾವ ಸಹ ಪ್ರಾಯದ ಇಲಿಯಂತೆ... ಈಗ ಅದೆ ಸಂಶೋಧನೆಯನ್ನು ಮುಂದುವರೆಸಿ ಅದರಿಂದ ಕೆಲವು ಕಾಯಿಲೆಗಳ ಪರಿಹಾರದ ದಾರಿ ಹುಡುಕಬಹುದೆ ಎಂಬ ಜಿಜ್ಞಾಸೆಯಲ್ಲಿದ್ದಾರೆ ವಿಜ್ಞಾನಿಗಳು. ಯಾರಿಗೆ ಗೊತ್ತು ? ಒಂದಷ್ಟು ವರ್ಷಗಳ ನಂತರ ಇದೆ ಪರಿಣಾಮವನ್ನು ಮನುಷ್ಯರಲ್ಲಿ ಸಾಧಿಸಿ ಮುದಿಯಾದವರನ್ನು ತರುಣರಂತೆ ಕಾಣುವ ಹಾಗೆ ಮಾಡಬಹುದು, ತರುಣರು ಮುದಿಯೆ ಆಗದ ಹಾಗೆ (ಅಥವಾ ಮುದಿತನ ನಿಧಾನವಾಗುವ ಹಾಗೆ) ಮಾನವ ಸ್ಟೆಮ್ ಸೆಲ್ಲುಗಳನ್ನು ಪ್ರಚೋದಿಸಬಹುದು...! ಆದರೇಕೊ ನಮ್ಮ ಪುರಾಣ ಕಥೆಗಳಲ್ಲಿ ಅಶ್ವಿನಿ ದೇವತೆಗಳೆಂಬ ಇಬ್ಬರು ವಿಜ್ಞಾನಿ - ವೈದ್ಯರು ಚೌವ್ವನ ಋಷಿಯನ್ನು ಯುವಕನನ್ನಾಗಿಸಿದರೆಂದರೆ ನಾವು ನಂಬುವುದಿಲ್ಲ - ಯಾಕೆಂದರೆ ಅವರು ಅದಾವ ಜಿಡಿಎಫ್ ಪ್ರೋಟೀನ್ ಬಳಸಿದರೆಂಬ ಗುಟ್ಟು ಬಿಟ್ಟುಕೊಡುವುದಿಲ್ಲವಲ್ಲ? ಅದೇ ರೀತಿ ಯಾಯಾತಿ, ಮಗ ಪುರೂರವನಿಂದ ಯೌವ್ವನ ಪಡೆದು ಪ್ರಾಯದವನಾದನೆಂದರೆ ನಮಗೆ ಅಡುಗೊಲಜ್ಜಿಯ ಕಥೆ. ಮತ್ತೆ ಅದೆ ಯೌವ್ವನ ಹಿಂತಿರುಗಿಸಿ ಮತ್ತೆ ತನ್ನ ಮುದಿತನ ವಾಪಸ್ಸು ಪಡೆದನೆಂದರೂ ಊಹೆಯ ರೋಚಕ ಕಥೆಯಷ್ಟೆ ಹೊರತು ನೈಜವಾಗಲಾರದು. ಯಾಕೆಂದರೆ ಅಲ್ಲಿ ಅವರು ಪ್ಯಾರಬಯೋಸಿಸ್ ನಂತಹ ಯಾವ ಕ್ರಿಯೆ ನಡೆಸಿ ವಯಸನ್ನು ವರ್ಗಾಯಿಸಿದರೆಂದು ವಿವರ ನೀಡುವುದಿಲ್ಲವಲ್ಲ? ಅದಕ್ಕೆ ಅವೆಲ್ಲ ಕಥೆ ಕೇಳಿದಾಗ ನಮಗೆ 'ಇದೆಲ್ಲ ನಿಜವೆ?' ಅನಿಸಿ ನಗು ಬರುತ್ತದೆ. ಆದರೆ ಆ ನಮ್ಮ ಅಜ್ಞಾನದ ಮೌಢ್ಯತೆಯ ಮೂಟೆಯನ್ನು ಕಂಡ ಆ ದೇವತೆಗಳಂತಹ ವಿಜ್ಞಾನಿಗಳೂ ನಗುತ್ತಿರಬೇಕು - ನಮ್ಮನ್ನು ನೋಡಿ!  ಹಾಗೆ ನೋಡುವುದಾದರೆ ಅಜ್ಞಾನವೆಂದರೇನು ? ಜ್ಞಾನವಿಲ್ಲದವನು ಎಂದಲ್ಲ. ಇರುವ ಜ್ಞಾನದ ಸ್ಥಾಯಿಶಕ್ತಿಯನ್ನು ಮಾಯೆಯೆಂಬ ಅಹಂಮಿಕೆಯ ಮೂಟೆಯೊಳಗೆ ಕಟ್ಟಿಟುಬಿಟ್ಟು ಅಜ್ಞಾನದ ಹೆಸರಿಟ್ಟು ಕೂತಿದೆಯೆಂದಷ್ಟೆ ಅರ್ಥ. ಆ ಮೂಟೆ ಬಿಚ್ಚಿದರೆ ಜ್ಞಾನದನಾವರಣ - ಬಿಚ್ಚಿದಷ್ಟೂ ಹುಲುಸಾದ ಬೆಳೆ. ಬಿಚ್ಚದೆ ಇಟ್ಟಷ್ಟೂ ಅಜ್ಞಾನ ಹೆಚ್ಚುವ ಮೌಢ್ಯ, ಅದನ್ನು ಕಾಯುವ ಅಹಂಕೋಟೆಯ ಮಾಯಾಶಕ್ತಿ. ಆ ಅಜ್ಞಾನವನ್ನು ಸುತ್ತಿಕೊಂಡ ಮಾಯೆ, ಅಹಂಮಿಕೆಯ ಕೋಟೆಯೆ ವೈಜ್ಞಾನಿಕ ಮನೋಭಾವದ ನಮ್ಮೆಷ್ಟೊ ವಿದ್ಯಾವಂತರನ್ನು ಅರಿಯಲಾಗದ ಮತ್ತೊಂದು ಸ್ತರದ ಸಾಧ್ಯತೆಯನ್ನು ಅಲ್ಲಗಳೆಯುವಂತೆ ಪ್ರೇರೇಪಿಸುವುದು. 

ಇಲ್ಲಿಯೆ ನಿಜವಾದ ಜ್ಞಾನ - ಅಜ್ಞಾನದ ತಿಕ್ಕಾಟ ಆರಂಭವಾಗುವುದಲ್ಲವೆ ಎನಿಸಿತು ಶ್ರೀನಾಥನಿಗೆ. ಯಾವುದು ಜ್ಞಾನವೊ ಅದೆ ಅಜ್ಞಾನವೂ ಆಗಿಬಿಡುವ ವಿಚಿತ್ರ ವೈಪರಿತ್ಯದ ವಿಪರ್ಯಾಸವು ಅಲ್ಲಿ ಗೋಚವಾಗತೊಡಗಿತು. ವೈಜ್ಞಾನಿಕವಾಗಿ ನಮಗೆ ತಿಳಿದಂತೆ 'ಅರ್ಬುದ' ರೋಗ (ಕ್ಯಾನ್ಸರು ಕಾಯಿಲೆ)ವೆಂದರೆ ಯಾವುದೊ ಅಂಗಾಂಗಕ್ಕೆ ಸಂಬಂಧಪಟ್ಟ ಕೋಶಗಳು ಹತೋಟಿ ಮೀರಿ, ನಿಯಂತ್ರಣ ಕಡಿವಾಣವಿಲ್ಲದೆಯೆ ಅಗತ್ಯಕ್ಕೂ ಮೀರಿ ಉತ್ಪನ್ನವಾಗತೊಡಗುವಿಕೆ. ಇಲ್ಲಿ ಅವನ್ನು ನಿಯಂತ್ರಿಸುವ ವಿಧಾನ ಗೊತ್ತಿರದ ಕಾರಣ ಅದು ದೊಡ್ಡ ಕಾಯಿಲೆಯಾಗಿಬಿಡುತ್ತದೆ. ಅದೆ ಹಳೆಯ ಪುರಾಣವನ್ನೊ, ದಂತಕಥೆಯನ್ನೊ ತೆಗೆದುಕೊಂಡು ಅಲ್ಲಾವುದೊ ಬ್ರಹ್ಮ ರಾಕ್ಷಸನಿಗೊ ಅಥವಾ ಮತ್ತಾವುದೊ ಪಾತ್ರಕ್ಕೊ ಕೈ ಕತ್ತರಿಸಿದರೆ ಮತ್ತೆ ಬೆಳೆಯುತ್ತಿತ್ತು, ತಲೆ ಕಡಿದರೆ ಮತ್ತೆ ಚಿಗುರುತ್ತಿತ್ತು ಎಂದಾಗ ನಂಬಲೆ ಆಗದೆ ತಲೆಯಾಡಿಸುತ್ತೇವೆ ಅಲ್ಲವೆ? ಆದರೆ ನಿಜವಾಗಿ ಮೂಲದಲ್ಲಿ ನೋಡಿದರೆ ಕ್ಯಾನ್ಸರಿನಲ್ಲಿರುವ ಆ ಅನಿಯಂತ್ರಿತ ಬೆಳೆಯುವಿಕೆಯನ್ನೆ ಹತೋಟಿಗೊಳಪಡಿಸಿ, ನಮಗೆ ಬೇಕಾದ ವೇಗದಲ್ಲಿ, ಬೇಕಾದ ಕಡೆ ಬೆಳೆಯುವಂತೆ ಮಾಡಲು ಸಾಧ್ಯವಾಗುವುದಾದರೆ ಅವೆರಡರ ಮೂಲ ತತ್ವ ಒಂದೆ ಎಂಬಂತೆ ಭಾಸವಾಗುವುದು. ನಮಗಿನ್ನು ಆ ನಿಯಂತ್ರಣ, ಆ ವೇಗ ಸಿದ್ದಿಸಿಲ್ಲ...ಆ ಜ್ಞಾನ ಸಿದ್ದಿಸಿದಾಗ, ಆ ವಿದ್ಯೆ ಬುದ್ಧಿಯಾಗಿ ಪ್ರಕಟವಾಗಿ ಸಿದ್ದಿಯಾಗಿ ಕೈವಶವಾದಾಗ ಬಹುಶಃ ನಾವುಗಳು ಕತ್ತರಿಸಿದ ಅಂಗಗಳ ರಿಪೇರಿಗೆ ಅದೆ ರೀತಿಯ 'ಮೆಡಿಕಲ್ ತಾಂತ್ರಿಕತೆ' ಬಳಸುತ್ತೇವೊ ಏನೊ? ಅದು ಸಿದ್ಧಿಸುವವರೆಗೆ ಅದನ್ನು ನಮ್ಮ ಅಜ್ಞಾನದ ಪರಿಧಿಯಾಗಿ ಅಥವಾ ಜ್ಞಾನಕ್ಕಿರುವ ಮಿತಿಯಾಗಿ ಪರಿಗಣಿಸಬೇಕೆ ಹೊರತು ಆ ಸಾಧ್ಯತೆಯೆ ಮೂರ್ಖತನವೆಂದು ಅಲ್ಲಗಳೆಯಲು ಹೋಗಬಾರದು. ಹಿಂದೆ ನಿಸ್ಸಂಶಯವಾಗಿ ಅಸಾಧ್ಯವೆಂದು ಕಂಡಿದ್ದ ಎಷ್ಟೊ ವಿಷಯಗಳು ಈಗ ದೈನಂದಿನ ಮಾಮೂಲಿಗಳಾಗಿಹೋದ ಎಷ್ಟು ಕಥೆಗಳಿಲ್ಲ? ಅದಿರಲಿ, ಮತ್ತೆ ವ್ಯಕ್ತಿತ್ವದ ರೂಪಿಸುವಿಕೆಯ ವಿಷಯಕ್ಕೆ ಬಂದರೆ, ಈ ಜ್ಞಾನ ಅಜ್ಞಾನವನ್ನು ಸಮತೋಲನದಲಿಟ್ಟ 'ವಿದ್ಯಾ-ಬುದ್ದಿಯ' ಸಮತೋಲಕ ಶಕ್ತಿ ಪ್ರತಿಯೊಬ್ಬರಲ್ಲೂ ಅವರ ವ್ಯಕ್ತಿತ್ವವನ್ನು ರೂಪಿಸುತ್ತಿದೆ ಮತ್ತು ಅವುಗಳ ಬದಲಾವಣೆಗನುಸಾರ ವ್ಯಕ್ತಿತ್ವವನ್ನು ಬದಲಿಸುತ್ತಿದೆ ಎಂದು ತೀರ್ಮಾನಿಸಿದಂತಾಯ್ತು. ಅಲ್ಲಿಗೆ ಒಬ್ಬನನ್ನು ಒಳ್ಳೆಯ ಅಥವಾ ಕೆಟ್ಟವನನ್ನಾಗಿ ರೂಪಿಸುವುದು ಈ ಶಕ್ತಿ ಹೇಗೆ ಸಮತೋಲನದ ತೂಗಳತೆಯಲ್ಲಿ ಹಂಚಿತವಾಗಿದೆ ಮತ್ತು ಹೇಗೆ ಮಿಕ್ಕಲವಾರು ತತ್ವಗಳಿಗಧಿಪತಿಯಾದ (ಇಪ್ಪತ್ತನಾಲ್ಕು) ಮಾಯೆಯ ಹಿಡಿತದಲ್ಲಿ ಸಿಕ್ಕಿ ನಿಯಂತ್ರಿಸಲ್ಪಟ್ಟಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆಯೆನ್ನಬಹುದು. ಕೆಲವರಲ್ಲಿ ಗುಣ, ಸ್ವಭಾವ ಮೊದಲಿಗಿಂತ ಬೇರೆಯಾಗಿ, ಬದಲಾಯಿತೆಂದರೆ ಅವರ ಬುದ್ದಿಯ ಬುತ್ತಿ ಬಿಚ್ಚಿ ಒಂದಷ್ಟು ಜ್ಞಾನಶಕ್ತಿಯನ್ನು ಅನಾವರಣಗೊಳಿಸಿಕೊಂಡಿದ್ದಾರೆಂದು ಅರ್ಥ - ಕೆಟ್ಟತನದ ರೌಡಿಯೊಬ್ಬ ಒಳ್ಳೆಯತನದ ಸರಿಹಾದಿ ತುಳಿಯಹೊರಟಾಗ ಆಗುವಂತೆ. ಆದರೆ ಮಾಯೆಯ ಕಟ್ಟಿನಲ್ಲಿಟ್ಟ ಅಜ್ಞಾನದ ಬುತ್ತಿ, ತನ್ನ ಜಡತ್ವವನ್ನು ಅಧಿಗಮಿಸಿ ಜ್ಞಾನಶಕ್ತಿಯನ್ನು ಅನಾವರಣ ಮಾಡಿಕೊಳ್ಳುವಂತೆ ಮಾಡುವ ಬಗೆ ಹೇಗೆ? ಅದಾವ ಬಾಹ್ಯಶಕ್ತಿಯ ಬಳಕೆ ಅದನ್ನು ಸಾಧ್ಯವಾಗಿಸಬಲ್ಲದು ? ಅದರದೆ ಮತ್ತೊಂದು ಆಯಾಮವಾಗಿ - ಅದುವರೆವಿಗೂ ಮಾಡಿರಬಹುದಾದ ತಾಮಸಿಕ , ದುಷ್ಟತನದ ಕಾರ್ಯಗಳ ಪರಿಣಾಮವನ್ನೆಲ್ಲ ತಿರುವು ಮುರುವಾಗಿಸಬಲ್ಲ ಶಕ್ತಿ ಮತ್ತು ಪ್ರಕ್ರಿಯೆ ಯಾವುದು ? ಅದು ಗೊತ್ತಾದರೆ ತನ್ನ ಸಮಸ್ಯೆ ಬಗೆಹರಿದಂತಲ್ಲವೆ ?

(ಇನ್ನೂ ಇದೆ)
__________