ಕಥೆ: ಪರಿಭ್ರಮಣ..(64)

ಕಥೆ: ಪರಿಭ್ರಮಣ..(64)

( ಪರಿಭ್ರಮಣ..63ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

'ಅದನ್ನು ಅರ್ಥೈಸಲು ತುಸು ಇನ್ನೂ ಆಳಕ್ಕಿಳಿಯಬೇಕಾಗುತ್ತದೆ ಕುನ್. ಶ್ರೀನಾಥ... ಅದು ಸೂಕ್ತವಾಗಿ ಅರ್ಥವಾಗಲಿಕ್ಕೆ, ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯರ ಆಲೋಚನಾ ಕ್ರಮಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ವ್ಯತ್ಯಾಸಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ವಿವರಿಸುತ್ತೇನೆ... ಸೃಜನಶೀಲತೆಯ ವಿಷಯಕ್ಕೆ ಬಂದರೆ ಪೂರ್ವಾತ್ಯರು ಮತ್ತು ಪಾಶ್ಚಿಮಾತ್ಯರ ಚಿಂತನಾ ಕ್ರಮ ಒಂದೆ ರೀತಿ ಇರುವುದಿಲ್ಲ... ಉದಾಹರಣೆಗೆ ಪಾಶ್ಚಿಮಾತ್ಯರ ಅಧ್ಯಯನದಲ್ಲಿ ಯಾವುದನ್ನೆ ಸಂಶೋಧಿಸ ಹೊರಟರು, ಅವರು ಹಿಡಿಯುವ ಹಾದಿ ಪಕ್ಕಾ ನಿಖರತೆಯ ಹಾದಿ. ಅಲ್ಲಿ ಹತ್ತು ಸಾಧ್ಯತೆಯ ದಾರಿಗಳಿದ್ದರೆ ಪ್ರತಿಯೊಂದನ್ನು ಒಂದೊಂದಾಗಿ ಪರಾಮರ್ಶಿಸಿ, ಸೂಕ್ತವಾಗಿಲ್ಲದ್ದನ್ನು ತ್ಯಜಿಸಿ ಅಂತಿಮ ತೀರ್ಮಾನಕ್ಕೆ ತಲುಪುತ್ತಾರೆ. ಅದರ ಮುಂದಿನ ಹೆಜ್ಜೆಯೂ ಅದೇ ರೀತಿಯಲ್ಲಿ ಸಾಗುತ್ತದೆ, ಅಂತಿಮ ಪರಿಹಾರ ದೊರಕುವತನಕ... ಹೀಗೆ ಎಲ್ಲಕ್ಕು ನಿಖರ, ಖಚಿತ ಸಾಕ್ಷ್ಯವಿರಬೇಕು ಎನ್ನುವುದು ಅಲ್ಲಿಯ ಮೂಲತತ್ವ. ಅದೇ ನಮ್ಮ ಪೂರ್ವಾತ್ಯ ಸಂಸ್ಕೃತಿಯಲ್ಲಿ ನೋಡು - ಸಾಕ್ಷ್ಯಾಧಾರಿತದಷ್ಟೆ ಪ್ರಬಲವಾಗಿ, ನಂಬಿಕೆಗಳನ್ನು, ಪವಾಡ ಸದೃಶ್ಯತೆಯನ್ನು ಸುಲಭವಾಗಿ ನಂಬುತ್ತೇವೆ. ಎಲ್ಲವನ್ನು ಬರಿಯ ನಿಖರ ಸಾಕ್ಷ್ಯದಲ್ಲಿಯೆ ಸಾಧಿಸಿ ತೋರಿಸಬೇಕಿಲ್ಲ. ನಮ್ಮ ಎಷ್ಟೊ ನಂಬಿಕೆಯ ತರ್ಕಗಳು ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ನಂಬಲರ್ಹ ತರ್ಕಗಳಾಗದೆ, ಮೂಢನಂಬಿಕೆಗಳಾಗಿ ತೋರಿಕೊಂಡರು ಅಚ್ಚರಿಯೇನಿಲ್ಲ..'

' ಆದರೆ ಮಾಸ್ಟರ... ಈಗಿನ ಆಧುನಿಕ ಜಗದಲ್ಲಿ ನಾವೂ ಕೂಡಾ ಸಾಕ್ಷಿ, ಆಧಾರಗಳಿಲ್ಲದೆ ಯಾವುದನ್ನು ಸುಲಭದಲ್ಲಿ ನಂಬುವುದಿಲ್ಲವಲ್ಲಾ..?' ಅವರು ಹೇಳಿದ್ದನ್ನು ಸುಲಭದಲ್ಲಿ ಒಪ್ಪದೆ ಪ್ರಶ್ನಿಸಿದ ಶ್ರೀನಾಥ...

' ಅದಕ್ಕೆ ಕಾರಣ, ಈಗ ಎಲ್ಲರೂ ಹೆಚ್ಚುಹೆಚ್ಚಾಗಿ ಅವರ ವಿಧಾನಗಳನ್ನೆ ಬಳಸುವುದರಿಂದಷ್ಟೆ ಹೊರತು, ಅವು ನೈಸರ್ಗಿಕವಾಗಿ ಇಲ್ಲಿ ಹುಟ್ಟಿಕೊಂಡವಲ್ಲ.. ಒಂದು ಉದಾಹರಣೆ ನೀಡಿದರೆ ಅದು ನಿನಗೆ ಗೊತ್ತಾಗುತ್ತದೆ .. ನಾನೀಗ 'ಹತ್ತಾರು ತಲೆಗಳು, ಹಲವಾರು ಕೈಗಳಿರುವ ರೂಪವೊಂದನ್ನು ಊಹಿಸಿಕೊ ' - ಅಂದ ತಕ್ಷಣ ನಿನ್ನ ಮನಸಿನಲ್ಲಿ ಮೂಡುವ ಚಿತ್ರ ಏನು?'

'ಮತ್ತಿನ್ನೇನು..? ಯಾವುದೊ ದೇವರ ಅಥವ ದಾನವರ ಚಿತ್ರಣ..'

'ಆದರೆ ಇದೇ ಪ್ರಶ್ನೆಯನ್ನು ಯಾರಾದರು ಪಾಶ್ಚಾತ್ಯ ಸಂಸ್ಕೃತಿಯ ವಕ್ತಾರರಿಗೆ ಕೇಳಿದರೆ ಸಿಗುವ ಉತ್ತರವೆ ಬೇರೆಯಲ್ಲವೆ ? ಅವರ ಕಣ್ಣಲ್ಲಿ ಹಲವು ಕೈ, ಹಲವು ತಲೆ ಎಂದರೆ ವಿರೂಪ ಅಥವಾ ಮೂಲಭೂತವಾಗಿ ಏನೊ ಏರುಪೇರಾದ ಚಿತ್ರಣ. ಆದರೆ ಅದೆ ವಿಚಿತ್ರ ರೂಪಾಕಾರ ನಮ್ಮ ಕಲ್ಪನೆಯಲ್ಲಿ ದೈವೀಕ ಪ್ರತಿರೂಪವಾಗಿಬಿಡುತ್ತದೆ; ನಮ್ಮ ಮನದಲ್ಲಿ ದೇವರ ಕಲ್ಪನೆ ಮೂಡಿಸುತ್ತದೆ. ಯಾಕೆಂದರೆ ದೇವರೆನ್ನುವ ಅಸ್ತಿತ್ವ ನಮ್ಮ ಮನದಾಳದ ಕಲ್ಪನೆಯಲ್ಲಿ ಭದ್ರವಾಗಿ ನೆಲೆಸಿಬಿಟ್ಟಿದೆ.. ನಮ್ಮ ದೇವರುಗಳು ಸದಾ ಯುವಕರು, ಅವರಿಗೆ ವಯಸಾಗುವುದಿಲ್ಲ, ತಾತನ ಕಾಲದಲ್ಲಿ ನೋಡಿದ ಅದೇ ದೇವರೆ ಈಗಲೂ ಹಾಗೆಯೆ ಇದ್ದಾನೆನ್ನುವುದನ್ನು ಕೂಡಾ ಪ್ರಶ್ನಿಸದೆ ಒಪ್ಪಿಕೊಂಡುಬಿಡುತ್ತೇವೆ, ಬಲವಾದ ಸಾಂಪ್ರದಾಯಿಕವಾದ ನಂಬಿಕೆಯ ನೆಲೆಗಟ್ಟಿನಲ್ಲಿ..'

' ದೇವರ ನಂಬಿಕೆಯ ವಿಷಯಕ್ಕೆ ಬಂದರೆ ಅದು ನಿಜವೆ ಆದರೂ, ಅದೇ ತರ್ಕವನ್ನು ಎಲ್ಲೆಡೆ ಬಳಸಲಾಗುವುದೆ ಮಾಸ್ಟರ..?'

'ಬಳಸುತ್ತೇವೆಂದು ನಾನೆಲ್ಲಿ ಹೇಳಿದೆ? ನಾನು ಹೇಳ ಹೊರಟಿದ್ದು ನಮ್ಮ ಆಳದಲ್ಲಿರುವ ಈ ರೀತಿಯ ನಂಬಿಕೆಯೆ ನಮ್ಮಲ್ಲಿರುವ ಸೃಜನಶೀಲತೆ, ಕ್ರಿಯಾಶೀಲತೆ, ಸೃಷ್ಟಿಶೀಲತೆಯ ಮೂಲಧಾತು ಎಂದಷ್ಟೆ... ಯಾಕೆಂದರೆ ಈ ರೀತಿಯ ತಲೆ, ಕೈ, ಕಾಲುಗಳ ಕಲ್ಪನೆ ನಮಗೆ ಅಸಹಜವೆಂದೆ ಕಾಣುವುದಿಲ್ಲ.. ಅದನ್ನು ಹಾಗೆ ಸ್ವೀಕರಿಸಿ ಅದರ ತಳಹದಿಯ ಮೇಲೆ ತರ್ಕ, ಸಂಶೋಧನೆಯ ಮುಂದಿನ ಹೆಜ್ಜೆಯಿಡುತ್ತೇವೆ.. ಆದರೆ ಅದನ್ನು ನಂಬದ ಮನ ಅದನ್ನು 'ತಾರ್ಕಿಕವಲ್ಲ' ಎಂದು ಮೊದಲ ಹೆಜ್ಜೆಯಲ್ಲೆ ತಿರಸ್ಕರಿಸಿಬಿಡುತ್ತದೆ ; ಮತ್ತು ತಾರ್ಕಿಕವಾಗಿ ಕಾಣುವ ಬೇರೆ ಉದ್ದನೆಯ ಬಳಸು ದಾರಿಯನ್ನು ಹುಡುಕಿಕೊಂಡು ಹೊರಡುತ್ತದೆ ಕೂಡಾ.. ಆದರೆ ನಮ್ಮ ಚಿಂತನಾ ವಿಧಾನದಲ್ಲಿ ಆ ತೊಡಕಿರದ ಕಾರಣ, ಯಾವ ಅಡ್ಡಿಯೂ ಇರದೆ ಮೂಲಸಮಸ್ಯೆಯತ್ತ ಸಾಗಿಸುತ್ತದೆ - ತಾರ್ಕಿಕ-ಅತಾರ್ಕಿಕವೆಂದು ಗೊಂದಲಿಸಿಕೊಳ್ಳದೆ, ತಾರ್ಕಿಕ-ಅತಾರ್ಕಿಕವೆಲ್ಲ ಬೆರೆತ ಹಾದಿಯಲ್ಲಿ..'

'ಆದರೆ ನಾನು ಕೇಳಿದ್ದು ಈ ಮಥನ ನನ್ನಂತಹ ಶಾಸ್ತ್ರೀಯ ಜ್ಞಾನವಿರದವನಿಗು ಹೇಗೆ ಸಾಧ್ಯವಾಯಿತು ಎಂದಲ್ಲವೆ..? ಇದು ಅದಕ್ಕೆ ಉತ್ತರವಾಗದಲ್ಲ..?' ಮತ್ತೆ ಉತ್ತರದ ಹಾದಿ ಸರಿಯಿದೆಯೆ ಇಲ್ಲವೆ ಎಂಬ ಅನುಮಾನದಲ್ಲಿ ಕೇಳಿದ ಶ್ರೀನಾಥ .

'ಅಲ್ಲಿಗೆ ಬರುತ್ತಿದ್ದೇನಲ್ಲಾ ಕುನ್. ಶ್ರೀನಾಥ..? ನಾನು ಹೇಳ ಹೊರಟ ವಿಷಯವೇನೆಂದರೆ..ಇಡಿ ಜಗತ್ತು ಈ ರೀತಿಯ ತನ್ನದೆ ಆದ ತಾರ್ಕಿಕ ವಿಧಾನದಲ್ಲಿ, ಮುಚ್ಚಿದ ಸಾವಿರಾರು ಬಿರಡೆಗಳ ರಹಸ್ಯ ಶೋಧಿಸುವತ್ತ ಗಮನ ಹರಿಸುತ್ತಿದೆ  'ವ್ಯವಸ್ಥಿತ' ರೀತಿಯಲ್ಲಿ. ಆದರೆ ಮೂಲರಹಸ್ಯದತ್ತ ಒಂದೆರಡೆ ನೆಗೆತಕ್ಕೆ ಜಿಗಿಯುತ್ತಿರುವವರು ಕಡಿಮೆ.. ಯಾಕೆಂದರೆ ಅದಕ್ಕೆ ಬೇಕಾದ ಚಿಂತನಾ ವಿಧಾನ ನಮ್ಮ ಚಿಂತನೆಯಲ್ಲಿ ಆಗುವಂತೆ, ಅವರಿಗೆ ಸಹಜವಾಗಿ ಸಾಧ್ಯವಾಗುವುದಿಲ್ಲ.. ನಾವಾದರೊ ನಮ್ಮ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಜ್ಞಾನ ಜಂಟಿಯಾಗಿ ಬಳಸಿ ಆ ಮೂಲದ ಹುಡುಕಾಟದ ನೇರ ರಸ್ತೆಗೆ ಕೈ ಹಾಕಬಹುದು. ರೋಗ ನಿಧಾನಕ್ಕೆ ಮೂಲ ಕಾರಣದ ಚಿಕಿತ್ಸೆ ಹೇಗೆ ಪರಿಣಾಮಕಾರಿಯೊ, ಇದೂ ಸಹ ಹಾಗೆಯೆ.. ಅದಕ್ಕೆ ಬೇಕಾದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ 'ಮೂಲ ಜ್ಞಾನಬೀಜ' ನಮ್ಮ ಜೀನ್ಸುಗಳಲ್ಲೆ ಇದೆ.. ಅಂತಹ ಪರಂಪರಾನುಗತ ಸಂಪ್ರದಾಯದ ಹಿನ್ನಲೆಯ  ಬೀಜಾಕ್ಷರದೊಂದಿಗೆ ಬೆಳೆದು ಬಂದವರಿಗಲ್ಲದೆ ಬೇರಾರಿಗೆ ಇದು ಸುಲಭ ಸಾಧ್ಯ? ನಿನ್ನ ಮಥನದ ಹೊತ್ತಲ್ಲಿ ಮೇಲೆದ್ದು ಬಂದು ಬಹಿರಂಗವಾಗಿ ಪ್ರಕಟವಾಗಿದ್ದು ಅಲ್ಲಿಯವರೆಗೆ ನಿಷ್ಕ್ರಿಯವಾಗಿದ್ದ ಆ ಜ್ಞಾನದ ತುಣುಕುಗಳೆ... ಇಲ್ಲವಾದರೆ ಯಾವುದೆ ಶಾಸ್ತ್ರೀಯ ಅಧ್ಯಯನದ ಹಿನ್ನಲೆಯಿರದಿದ್ದ ನಿನ್ನಂತಹವನಿಗು, ಅಷ್ಟೊಂದು ಗಹನ ವಿಷಯಗಳು ಹೊಳೆದುದ್ದಾದರೂ ಹೇಗೆ ಹೇಳು, ಯಾವುದೇ ರೀತಿಯ ಸಹಕಾರವಿರದಿದ್ದರೂ ಸಹ...?'

'ಅರ್ಥಾತ್ ಆ ಜ್ಞಾನದ ಮಾಹಿತಿಯೆಲ್ಲ ನನ್ನೊಳಗೆಲ್ಲೊ ಸುಪ್ತವಾಗಿ, ನಿಷ್ಕ್ರಿಯವಾಗಿಟ್ಟ ಬೀಜಾಕ್ಷರದಂತೆ ಅಡಗಿ ಕೂತಿತ್ತೆಂದು, ನನ್ನ ಅಂತರ್ಮಥನ ಅದನ್ನು ಬಡಿದೆಬ್ಬಿಸಿ, ಪ್ರಚೋದಿಸಿ ಮೇಲೆಬ್ಬಿಸಿ ತಂದಿತೆಂದು ನಿಮ್ಮ ಮಾತಿನರ್ಥವೆ? ಅದೇ ತರ್ಕದಲ್ಲಿ ಎಲ್ಲರೂ ಉದ್ದುದ್ದದ- ವೈಜ್ಞಾನಿಕ-ತಾರ್ಕಿಕ-ಹಂತಹಂತದ, ನಿಧಾನ ಗತಿಯ ಕಠಿಣ ಬಳಸು ದಾರಿಯಲ್ಲಿ ನಡೆದಿರುವಾಗ ನಾವು ಕೇವಲ 'ಮನ ಮಥನ ಪ್ರಯೋಗ ಶಾಲೆ'ಯಲ್ಲಿ ಜಿಜ್ಞಾಸೆ ನಡೆಸಿ ಅಂತಿಮ ಮಾರ್ಗವೇನೆಂದು ತರ್ಕಿಸಿ, ನಿಷ್ಕರ್ಷಿಸಿ ಕೇವಲ ಅದು ತಥ್ಯವೊ, ಅಲ್ಲವೊ ಎಂದು ಪರಿಶೀಲಿಸಿ ಶೀಘ್ರಪಥದಲ್ಲಿ ಮುನ್ನಡೆದುಬಿಡಬಹುದು - ಆ ರೀತಿಯ ಚಿಂತನೆಗೆ ಬೇಕಾದ ಮೂಲಭೂತ ಸರಕು ನಮ್ಮಲ್ಲಾಗಲೆ ಸುಪ್ತವಾಗಿ, ಅಂತರ್ಗತವಾಗಿ ಹೋಗಿದೆ - ಅರಿವಾಗದ ಬೀಜಾಕ್ಷರ ರೂಪದಲ್ಲಿ ಎಂದು ಹೇಳುತ್ತಿದ್ದೀರಾ..?'

' ದೇಶ ವಿದೇಶಗಳಲೆಲ್ಲ ಹೋಗಿ ನಿನ್ನ ಜ್ಞಾನಶಕ್ತಿಯನ್ನು ಒರೆಗಿಟ್ಟು ಕಾರ್ಯ ನಡೆಸುವ ನಿನಗೀ ಅನುಮಾನವಿದ್ದರೂ, ಅದೇ ಅನುಮಾನ ಹೊರಗಿನ ಜಗಕಿದ್ದಂತೆ ಕಾಣುವುದಿಲ್ಲ ಕುನ್. ಶ್ರೀನಾಥ.. ಅದಕ್ಕೆಂದೆ ಪ್ರಪಂಚದಾದ್ಯಂತ ನಿನ್ನಂತೆ ಎಷ್ಟೊ ಜನರು ಹೋಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು... ಅದಿರಲಿ, ಸದ್ಯಕ್ಕೆ ಈ ಮಾತು ಬಿಡು. ನಿಮಿಷಗಳಲ್ಲಿ ಈ ಚರ್ಚೆಯನ್ನು ಮುಗಿಸುವಷ್ಟು ಸರಳ ಸರಕಲ್ಲವಿದು.. ಮತ್ತು ಈಗ ಅದಕ್ಕೆ ಸಮಯವೂ ಇಲ್ಲ.. ನೀನು ಹಿಂತಿರುಗಿ ಹೋದ ಮೇಲೆ ಬೇಕಿದ್ದರೆ ಮತ್ತೊಂದು ಮಥನಕ್ಕೆ ಇದೇ ವಸ್ತುವನ್ನಿಟ್ಟುಕೊಳ್ಳಬಹುದು, ನೀನು. ಈಗ ಮತ್ತೆ ಮೂಲ ವಿಷಯಕ್ಕೆ ಹಿಂತಿರುಗಿ, 'ಸಾರಾಂಶದ ಸಾರದ' ಚರ್ಚೆಯನ್ನು ಮುಂದುವರೆಸೋಣವೆ? ' ಎಂದರು ಮಾಂಕ್. ಸಾಕೇತ್ ಮುಗುಳ್ನಗುತ್ತ. 

'ಸರಿ, ಸರಿ ...ಇಲ್ಲದಿದ್ದರೆ ಈ ಸಾರದ ಹೊರಗಿನ ಚರ್ಚೆಯೆ ಸಾರವನ್ನು ಮೀರಿಸುವ ಮಟ್ಟಕ್ಕೆ ಬೆಳೆದುಬಿಟ್ಟರು ಅಚ್ಚರಿಯಿಲ್ಲವೇನೊ..? ಮತ್ತೆ ಮುಂದುವರೆಸೋಣ ಸಾರ ಸಂಗ್ರಹವನ್ನು..' ಎಂದ ಶ್ರೀನಾಥನೂ ನಗುತ್ತ.. ಮಾಂಕ್ ಸಾಕೇತರು ಮುಂದುವರೆಯುತ್ತ, 

' ನಿನ್ನ ಇಡೀ ಚಿಂತನಾ ಪ್ರಕ್ರಿಯೆಯಲ್ಲಿ ಬಹಳ ಮಹತ್ವದ ಘಟ್ಟವಿದು ಕುನ್. ಶ್ರೀನಾಥ - ಯಾವಾಗ ಒಳ-ಹೊರಗಿನ ಭೌತಿಕಾಭೌತಿಕ ಸಂವಹನ ಜ್ಞಾನಾಜ್ಞಾನದ ರೂಪದಲ್ಲಿ ಸಾಧ್ಯವೆನಿಸಿತೊ, ಅದು ಅದರ ಮುಂದಿನ ತಾರ್ಕಿಕ ಚಿಂತನೆಯನ್ನು ಪ್ರೇರೇಪಿಸಿ, ಅದೇ ಜ್ಞಾನಶಕ್ತಿಯ ಮಾಧ್ಯಮವನ್ನೆ ಬಳಸಿ 'ಸರಿ ಸೂಕ್ತ ಹೊಸ ಮಾಹಿತಿ'ಯನ್ನು ಹೊರಗಿಂದಲೆ ಕಳಿಸಿ, ಒಳಗನ್ನು ಹೊರಗಿಂದ ನಿರ್ಬಂಧಿಸಬಹುದಲ್ಲ ? ಎನ್ನುವ ಮುಂದಿನ ಜಿಜ್ಞಾಸೆಗೆ ತಳ್ಳುತ್ತ.. ಅದು ಅಲ್ಲಿಗೆ ನಿಲ್ಲದೆ ಹೀಗೆ ವರ್ಷಾನುಗಟ್ಟಲೆಯಿಂದ ಶೇಖರವಾಗಿರಬಹುದಾದ ಹಳೆಯ ಸ್ಮೃತಿ ತುಣುಕನ್ನು, ಅದರ ಪ್ರತಿರೂಪದ, ವಿರುದ್ಧಗಾಮಿ ಪರಿಣಾಮದ ಕ್ರಿಯೆಗಳ ಮೂಲಕ ನಿವಾರಿಸಿಕೊಂಡು, 'ಹಳೆಯ ಪಾಪದ ಹೊರೆ'ಯನ್ನು ನಿಷ್ಕ್ರಿಯಗೊಳಿಸಬಹುದಲ್ಲಾ ? ಎಂದು ಕಂಡುಕೊಂಡಿದ್ದು ಮುಂದಿನ ಹಂತ.. ಇದಾದ ಮೇಲೆ ಮಿಕ್ಕಿದ್ದೆಲ್ಲ, ಬರಿಯ ಗುರಿಯತ್ತ ನಡೆಸುವ ವಿವರಗಳಷ್ಟೆ ಹೊರತು ಸಾರರೂಪದಲ್ಲಿ ಮತ್ತೇನಿಲ್ಲ ಎನ್ನಬಹುದು.. ಒಟ್ಟಾರೆ, ತ್ರಿಶಕ್ತಿ-ತ್ರಿಗುಣಗಳಾಡುವ ಆಟಗಳೆಲ್ಲವನ್ನು, ಅದೇ ತ್ರಿಶಕ್ತಿಯ ಶುದ್ಧ ಗುಣಗಳಲ್ಲೊಂದಾದ ಜ್ಞಾನಶಕ್ತಿಯನ್ನು ಬಳಸಿ ನಿಭಾಯಿಸಬಹುದೆಂಬ ಸೂತ್ರವನ್ನು ಹುಡುಕಿದ್ದು ಬಹು ದೊಡ್ಡ ವಿಜಯವೆಂದೆ ಹೇಳಬೇಕು....!'

'ಆದರೆ ಮಾಸ್ಟರ, ಈ ಪ್ರಕ್ರಿಯೆಯಲ್ಲೂ ನಾನು ಕೆಲವೊಂದು ಅಂಶಗಳನ್ನು ಬಿಟ್ಟುಬಿಟ್ಟಿರುವೆನೆಂದಿರಲ್ಲಾ? ಅದರ ಬಗೆಯೇನು ಹೇಳಲೆ ಇಲ್ಲಾ..?' ಮತ್ತೆ ಅದೇ ಬಗೆಹರಿಯದ ಕುತೂಹಲದಿಂದ ಕೇಳಿದ ಶ್ರೀನಾಥ..

'ಈಗದೇ ವಿಷಯಕ್ಕೆ ಬರುತ್ತಿದ್ದೇನೆ.. ನೀನೇನು ಆ ಮೂರನೆಯ ಆಯಾಮವನ್ನು ಪೂರ್ತಿಯಾಗಿ ಕಡೆಗಣಿಸಿ ಬಿಟ್ಟುಬಿಡದಿದ್ದರೂ, ಅದರ ಸಮಗ್ರ ರೂಪವನ್ನು ಮಾತ್ರ ಸ್ಪಷ್ಟವಾಗಿ ಗ್ರಹಿಸಲಿಲ್ಲ.. ನಿನ್ನ ಮಥನ-ಪಯಣದಲ್ಲಿ ಕಾಲ-ಸಮಯದ, ಬೆಳಕು-ಕತ್ತಲೆಯಂತಹ ತತ್ವ-ಸಿದ್ದಾಂತಗಳ ಜಿಜ್ಞಾಸೆಗಿಳಿದಾಗ ಈ ಅಂಶಗಳು ಪರಿಗಣನೆಗೆ ಬಂದವಾದರೂ ಸಹ, ನೀನು ಮಿಕ್ಕ ಅಂಶಗಳನ್ನು ತ್ರಿಗುಣ-ತ್ರಿಶಕ್ತಿಗಳ ಚೌಕಟ್ಟಿನಡಿ ಬಂಧಿಸಿದ ಹಾಗೆ, ಈ ಅಂಶಗಳನ್ನು ಯಾವ ತಾತ್ವಿಕ ಚೌಕಟ್ಟಿನಡಿ ಬಂಧಿಸಬೇಕೆಂದು  ಆಲೋಚಿಸಲಿಲ್ಲ..' ಎದುರಿಗಿದ್ದ ಬೃಹತ್ ಬುದ್ಧನ ಮೇಲೆ ಬಿದ್ದ ಬಿಸಿಲು ಪ್ರಕ್ಷೇಪಿಸಿದ್ದ ದೊಡ್ಡ ನೆರಳಿನ ಛಾಯೆಯನ್ನೆ ದಿಟ್ಟಿಸುತ್ತ ನುಡಿದಿದ್ದರು ಮಾಂಕ್ ಸಾಕೇತ್...

'ನೀವು ಹೇಳುವುದು ನೋಡಿದರೆ - ಅದರಲ್ಲೂ ತ್ರಿಶಕ್ತಿ-ತ್ರಿಗುಣಗಳ ಸ್ತರದಲ್ಲಿರುವ ಸಿದ್ಧಾಂತವೆನ್ನುವುದಾದರೆ, ಅದು ಬಲು ಮಹತ್ವದ್ದೇ ಇರಬೇಕೆಂದು ಅನಿಸುತ್ತಿದೆ... ಆದರೆ ಅದೇನಿರಬಹುದೆಂದು ಸುಳಿವು ಸಿಗುತ್ತಿಲ್ಲ ಮಾಸ್ಟರ..' ಗಹನಾಲೋಚನೆಯಲ್ಲಿ ತೊಡಗಿಕೊಂಡೆ ನುಡಿದಿದ್ದ ಶ್ರೀನಾಥ.

'ನೀನು ನಿನ್ನ ಚಿಂತನೆಯ ಸಮಯದಲ್ಲಿ ಬಳಸಿದ್ದ 'ದ್ವಂದ್ವ-ಸಿದ್ದಾಂತ', 'ಬಾಹ್ಯ ಜ್ಞಾನಶಕ್ತಿಮುಖೇನ ಅಂತರ್ಶಕ್ತಿ ಪ್ರೇರಣ ಸಿದ್ದಾಂತ' - ಇವೆರಡಕ್ಕು ನಡುವಿನ ಬಲು ಮುಖ್ಯವಾದ ಮೂಲ-ಕೊಂಡಿಯಂತಹ ಸಿದ್ದಾಂತವಿದು. ಇವೆರಡರ ಜತೆ ಬೆಸೆದುಕೊಂಡ ಮತ್ತೊಂದು ತ್ರಿಪುಟಿಯ ವ್ಯಾಖ್ಯೆ ನಿನ್ನ ಗಮನಕ್ಕೆ ಬರದೆ ಬಿಟ್ಟುಹೋಗಿದೆ.. ಅದಕ್ಕೊಂದು ಸಣ್ಣ ಸುಳಿವು ಕೊಡುತ್ತೇನೆ ನೋಡು.. ಅದರ ಆಧಾರದ ಮೇಲೆ ಮಿಕ್ಕಿದ್ದನ್ನು ನೀನೆ ಕಂಡುಕೊಳ್ಳಬಲ್ಲೆಯೆಂಬುದು ನನ್ನ ನಂಬಿಕೆ.. ನೀನು 'ದ್ವಂದ್ವ ಸಿದ್ದಾಂತ'ವನ್ನು ಪ್ರತಿಪಾದಿಸಿದಾಗ ಅದಕ್ಕೆ ಆಧಾರವಾಗಿದ್ದ ಮೂಲಭೂತ ಅಂಶ ಯಾವುದಾಗಿತ್ತು ಎಂದು ನೆನೆದರೆ ಸಾಕು, ಮಿಕ್ಕೆಲ್ಲಾ ತಾನೆ ತಾನಾಗಿ ಅನಾವರಣಗೊಳ್ಳುತ್ತದೆ....ಇದೊಂದನ್ನು ನೀನು ಕಂಡುಕೊಂಡೆಯಾದರೆ ನಾನು ಇನ್ನೇನನ್ನು ನಿನಗೆ ಹೇಳಬೇಕಾಗಿಲ್ಲ, ಎಲ್ಲವನ್ನು ಹೇಳಿದಂತೆ ಲೆಕ್ಕ..' ಅವನ ಮುಂದೆ ಮತ್ತೊಂದು ಪುಟ್ಟ ಪರೀಕ್ಷೆಯನಿಟ್ಟವರಂತೆ ಹೇಳಿದರು ಮಾಂಕ್. ಸಾಕೇತ್.

'ದ್ವಂದ್ವ ಸಿದ್ದಾಂತದ ಮೂಲಭೂತ ಅಂಶ' ಎನ್ನುತ್ತಿದ್ದಂತೆ ಶ್ರೀನಾಥನ ಮನಸು ಅದಾಗಲೆ ಆ ದಿಕ್ಕಿನತ್ತ ಯೋಚಿಸಲು ಆರಂಭಿಸಿಯಾಗಿತ್ತು. 'ಪ್ರತಿಯೊಂದರ ಅಸ್ತಿತ್ವವು ಪರಸ್ಪರ ವಿರೋಧಿ ಶಕ್ತಿಗಳ ಸಮತೋಲನವಿದ್ದರಷ್ಟೆ ಪ್ರಕಟ ರೂಪ ಪಡೆಯಲು ಸಾಧ್ಯ, ಇಲ್ಲವಾದರೆ ಪರಸ್ಪರ ಘರ್ಷಣೆಯಲ್ಲಿ ತೊಡಗಿ ನಶಿಸಿಹೋಗುತ್ತವೆ ಎಂದಲ್ಲವೆ ದ್ವಂದ್ವ ಸಿದ್ದಾಂತದ ಸರಳ ವಾದ ? ಇದರಲ್ಲಡಗಿರುವ ಮೂಲಭೂತ ಅಂಶ ಯಾವುದು..? ನಿರಸ್ತಿತ್ವದಿಂದ ವಸ್ತು-ವಿಷಯದ ಅಸ್ತಿತ್ವ ಅಥವಾ ಉಂಟಾಗುವಿಕೆಯೆ ಈ ವಾದದ ಮೂಲ ಸತ್ವವಲ್ಲವೆ ? ಉಂಟಾಗುವುದು ಎಂದರೆ ಹುಟ್ಟುವಿಕೆ ಎಂದು ತಾನೆ ಅರ್ಥ ? ಹುಟ್ಟು ಅಂದರೆ ಸೃಷ್ಟಿ ತಾನೆ? ಅರ್ಥಾತ್ ಪ್ರತಿಯೊಂದು 'ಸೃಷ್ಟಿ ಕ್ರಿಯೆ'ಯಲ್ಲೂ ದ್ವಂದ್ವ ಸಿದ್ದಾಂತದ ಬಳಕೆಯಾಗುತ್ತದೆ ಎಂದಾಯ್ತಲ್ಲವೆ? ಅಲ್ಲಿಗೆ ಬರಿಯ ಸೃಷ್ಟಿಗೆ ಮಾತ್ರ ಸಮತೋಲನದ ದ್ವಂದ್ವ ಅನ್ವಯವಾಗುವುದು ಎಂದು ಪರಿಗಣಿಸಬಹುದೆ ...? ಸೃಷ್ಟಿಯ ನಂತರ ಅದು ಹಿನ್ನಲೆಗೆ ಸರಿದು ಬಿಡುತ್ತಿರಬೇಕು; ಅರ್ಥಾತ್ ಸೃಷ್ಟಿಯ ನಂತರದ 'ಸ್ಥಿತಿ ಅಥವಾ ಪರಿಪಾಲನೆ'ಯ ಹಂತದಲ್ಲಿ 'ದ್ವಂದ್ವ ಸಿದ್ದಾಂತ' ನೇರವಾಗಿ ಅನ್ವಯಿಸುವುದಿಲ್ಲ, ಅದು ಸಕ್ರೀಯಕಿಂತ ನಿಷ್ಕ್ರಿಯ ಎನ್ನಬಹುದೆ ?.. ಅರೆರೆ - ಆ 'ಸ್ಥಿತಿ'ಯಲ್ಲೆ ಅಲ್ಲವೆ 'ಬಾಹ್ಯ ಜ್ಞಾನಶಕ್ತಿಯನ್ನು ಬಳಸಿ ಒಳಗಿನ ಅಂತರ್ಶಕ್ತಿ ಸ್ವರೂಪವನ್ನು ನಿಭಾಯಿಸಬಹುದೆಂದು' ಕಂಡುಕೊಂಡಿದ್ದು ? ಅಲ್ಲಿಗೆ 'ಸೃಷ್ಟಿ'ಯಲ್ಲಿ 'ದ್ವಂದ್ವ ಸಿದ್ದಾಂತ' ಪ್ರಭಾವ ಬೀರಿದರೆ, ಸ್ಥಿತಿಯಲ್ಲಿ 'ಜ್ಞಾನಾಜ್ಞಾನಶಕ್ತಿ ಪ್ರೇರಣೆ' ಪ್ರಭಾವ ಬೀರುವುದೆಂದಾಯ್ತಲ್ಲವೆ ? ಅಲ್ಲಿಗೆ ಸೃಷ್ಟಿ-ಸ್ಥಿತಿಗಳ ಮೂಲಭೂತ ಅಂಶ ತಿಳಿದಂತಾಯ್ತು;  ಅಂದರೆ ಆ ಬಿಟ್ಟುಹೋಗಿದ್ದ ಮೂರನೆ ಮೂಲಭೂತ ಅಂಶ ತಾರ್ಕಿಕವಾಗಿ, 'ಲಯ'ಕ್ಕೆ ಸಂಬಂಧಿಸಿದ್ದಿರಬೇಕಲ್ಲವೆ? ಅಂದರೆ ತ್ರಿಶಕ್ತಿ-ತ್ರಿಗುಣಗಳ ಜತೆಗೆ ಬೆಸೆದುಕೊಂಡ ಮತ್ತೊಂದು ಆ ತ್ರಿಪುಟಿಯೆ - 'ಸೃಷ್ಟಿ-ಸ್ಥಿತಿ-ಲಯ'ಗಳ 'ತ್ರಿಕಾರ್ಯ' ಎಂದಂತಾಯ್ತು..! ಆದರೆ ಆ ಲಯಕ್ಕೆ ಸಂಬಂಧಿಸಿದ ಸಿದ್ದಾಂತದ ಕಲ್ಪನೆ ಇನ್ನೂ ಕೈಗೆ ಸಿಗುತ್ತಿಲ್ಲವಲ್ಲ..?

' ಮಾಸ್ಟರ.. ಆ ಮೂರನೆ ತ್ರಿಪುಟಿ ಯಾವುದೆಂದು ಗೊತ್ತಾಯಿತು..ಸೃಷ್ಟಿ-ಸ್ಥಿತಿ-ಲಯ ಕಾರಕ 'ತ್ರಿಕಾರ್ಯ'ವೆ ಅದಲ್ಲವೆ ? ಒಟ್ಟಾರೆ 'ತ್ರಿಶಕ್ತಿ-ತ್ರಿಗುಣ-ತ್ರಿಕಾರ್ಯ'ಗಳ ಬಂಧ ಎಲ್ಲವನ್ನು ನಿಯಂತ್ರಿಸುವ ನಿಯಾಮಕವೆಂದು ಕಾಣುತ್ತದೆ.. ಆದರೆ ಸೃಷ್ಟಿಗೆ 'ದ್ವಂದ್ವ ಸಿದ್ದಾಂತ' ಮತ್ತು ಸ್ಥಿತಿಗೆ 'ಬಾಹ್ಯ ಜ್ಞಾನಾಜ್ಞಾನಶಕ್ತಿ ಪ್ರೇರಣೆ' ಬೆನ್ನೆಲುಬಾಗಿರುವಂತೆ ಮೂರನೆಯ 'ಲಯ'ದ ಹಿನ್ನಲೆಯೇನೆಂದು ತಿಳಿಯುತ್ತಿಲ್ಲ..'

' ಅದು ನಿನಗೆ ತಿಳಿದಿದೆಯಾದರೂ ಗ್ರಹಿಕೆಗೆ ಸಿಗುತ್ತಿಲ್ಲವಷ್ಟೆ... ಲಯವೆಂದರೆ ನಶಿಸುವುದೆಂದು ಅರ್ಥವಲ್ಲವೆ? ಇರುವ ಜೀವಕೋಶಗಳು ನಶಿಸಿ, ಹೊಸದು ಹುಟ್ಟುವ ನಿರಂತರ ಕ್ರಿಯೆಯಲ್ಲಿ, ಒಂದು ಕಾಲ ಘಟ್ಟದಲ್ಲಿ ಹೊಸತರ ಸೃಷ್ಟಿ ನಿಲ್ಲುತ್ತ ಹೋಗಿ, ನಿರಂತರ ನಾಶವೆ ಸಂಭವಿಸುತ್ತ ಅಂತಿಮವಾಗಿ ಜೀವಿಯ ಲಯವಾಗುವುದಲ್ಲವೆ...? ಅಂದರೆ ತ್ರಿಶಕ್ತಿ-ತ್ರಿಗುಣಗಳನ್ನು ಸೃಷ್ಟಿಸಿ, ಸ್ಥಿತಿಯಲ್ಲಿಟ್ಟಂತೆ ಲಯವಾಗಿಸುವ ನಿಯಮವೂ, ಪ್ರಕ್ರಿಯೆಯೂ ಜಾರಿಯಲ್ಲಿರಲೇಬೇಕಲ್ಲವೆ..?'

'ನೀವು ಹೇಳುವ ರೀತಿ ನೋಡಿದರೆ 'ಸೃಷ್ಟಿ-ಸ್ಥಿತಿ-ಲಯ' ಮೂರು ಒಂದೆ ಎನ್ನುವ ಹಾಗೆ ಅನಿಸುತ್ತಿದೆ.. - ಎಲ್ಲವು ಸೃಷ್ಟಿಯೆ ಆದರು ಬರಿಯ ಅದರ ನಿವ್ವಳ ವೇಗದಿಂದಷ್ಟೆ ಅದನ್ನು 'ಸೃಷ್ಟಿ-ಸ್ಥಿತಿ-ಲಯ'ಗಳಾಗಿ ವರ್ಗೀಕರಿಸುವಂತೆ..? ಇದೊಂದು ರೀತಿಯಲ್ಲಿ ಏಕೈಕ ಶಕ್ತಿ ಮೂಲ ತ್ರಿಶಕ್ತಿಗೆ ಮೂಲವಾಗಿರುವಂತೆ, ಏಕ ಗುಣಮೂಲ ತ್ರಿಗುಣಗಳಿಗೆ ಮೂಲವಾಗಿರುವಂತೆ, ಏಕ ಮೂಲ ಸೃಷ್ಟಿಯ ತತ್ವವೆ ಮಿಕ್ಕೆರಡು ಸ್ಥಿತಿ-ಲಯಗಳ ವ್ಯಾಖ್ಯೆಯೂ ಆಗಿ 'ತ್ರಿಕಾರ್ಯ'ದ ರೂಪ ಪಡೆದಿದೆಯೆನ್ನುತ್ತಿರಾ..?' 

'ಹೌದು...ಸೃಷ್ಟಿ-ಸ್ಥಿತಿ-ಲಯಗಳೆನ್ನುವುದು ಒಂದೆ ಮೂಲರೂಪದ ಕ್ರಿಯೆಯೊಂದರ, ವೇಗಾಧಾರಿತ ವಿವಿಧ ರೂಪಾಂತರಗಳು..'

'ನಿಜ... ಲಯವೆಂದರೆ ಕಾಲಕ್ಕೆ ಸಂಬಂಧಿಸಿದ್ದು..!  ಕಾಲವೆಂಬ ಶಕ್ತಿಯ ಅವಧಿ ಮುಗಿದಾಗ ತಾನೆ, ಎಲ್ಲವು ಲಯವಾಗಿ ಹೋಗುವುದು? ಅಂದರೆ ಲಯದ ಬೆನ್ನಾಗಿ ನಿಂತಿರುವ ಸಿದ್ದಾಂತ 'ಕಾಲ' ವಲ್ಲವೆ?..' ಏನೊ ಹೊಸ ಸತ್ಯವನ್ನು ಕಂಡುಕೊಂಡ ಉದ್ವೇಗದಲ್ಲಿ ಜೋರಾಗಿ ನುಡಿದ ಶ್ರೀನಾಥ.. 

'ಕಾಲ ಪ್ರಮುಖ ಅಂಶವಾದರೂ ಅದೊಂದೆ ಪ್ರಭಾವ ಬೀರುವ ಅಂಶವಾಗಿರುವುದಿಲ್ಲ.. ಒಮ್ಮೆ ಪ್ರಥಮ ಸೃಷ್ಟಿಯಾದ ಮೇಲೆ, ಸ್ಥಿತಿಯಿಂದ-ಲಯಕ್ಕೆ ರೂಪಾಂತರವಾಗುವತನಕ ನಡೆಯುವ ಎಲ್ಲಾ ಚಟುವಟಿಕೆಗಳ ಮೇಲುಸ್ತುವಾರಿಗೆ ಬರಿಯ ಕಾಲದ ಚಕ್ರ ಮಾತ್ರ ಸಾಲದೇನೊ? ಕಾಲ-ನಿಯತಿ-ವಿದ್ಯಾ-ಕಲಾ-ರಾಗ-ಪುರುಷ-ಪ್ರಕೃತಿಯ ಎಲ್ಲಾ ಅಂಶಗಳು ಅಡಕವಾಗಿದೆಯೆಂದು ಅನಿಸುವುದಿಲ್ಲವೆ..?' ಅವನತ್ತ ಚಿಕಿತ್ಸಕ ದೃಷ್ಟಿ ಬೀರುತ್ತ ಪ್ರಶ್ನಿಸಿದರು ಮಾಂಕ್ ಸಾಕೇತ್. 

' ಅರ್ಥಾತ್ ಕಾಲ-ನಿಯತಾದಿ ಸಪ್ತ - ಶಕ್ತಿತತ್ವದ ರೂಪಗಳು ಸೃಷ್ಟಿ-ಸ್ಥಿತಿಯ ಹಿನ್ನಲೆಯಲ್ಲಿದ್ದುಕೊಂಡೆ ಲಯದಲ್ಲಿ ಮಾತ್ರ ಬಲು ಪ್ರಮುಖ ಪಾತ್ರ ವಹಿಸುವುದೆಂದಾಯ್ತಲ್ಲವೆ..? ' ನಿಧಾನವಾಗಿ ಪದಗಳನ್ನು ಜೋಡಿಸುತ್ತ ನುಡಿದ ಶ್ರೀನಾಥ..

' ನಿಜ...ಈ ಏಳು ತತ್ವಗಳೆ 'ವ್ಯಯಕಾರಕ'ಗಳೆನ್ನಬಹುದು..ಇವು ಸೃಷ್ಟಿಯ ಆರಂಭದಲಿದ್ದ ಶಕ್ತಿಯನ್ನು ಸತತವಾಗಿ ಬಳಸುತ್ತ, 'ವ್ಯಯದಿಂದ ಲಯದತ್ತ' ನಡೆಸುತ್ತವೆ - ನಿಧಾನವಾಗಿ... ಅಂತಿಮ ಹಂತದಲ್ಲಿ ಅದರ ವೇಗ ಹೆಚ್ಚುತ್ತದಷ್ಟೆ... ಇದನ್ನೆಲ್ಲಾ ಕ್ರೋಢೀಕರಿಸಿ ಹೇಳುವುದಾದರೆ ತ್ರಿಕಾರ್ಯವೆನ್ನುವುದು ತ್ರಿಶಕ್ತಿ ಮತ್ತು ತ್ರಿಗುಣಗಳೆರಡನ್ನು ನಿಯಂತ್ರಣ ರೇಖೆಯಲ್ಲಿಡುವ ನಡುವಣ ಬಂಧಸೂತ್ರ... ಶಕ್ತಿಯ ಮೂಲರೂಪವು ತ್ರಿಶಕ್ತಿಯಾಗಿ ರೂಪಾಂತರವಾಗಲು ಸೃಷ್ಟಿಯ ಅಂಶವಿರಬೇಕಲ್ಲವೆ ? ಅಂತೆಯೆ ತ್ರಿಶಕ್ತಿಯಿಂದ ತ್ರಿಗುಣಗಳ ಉತ್ಪತ್ತಿಗೂ ಸೃಷ್ಟಿಯ ಅಂಶ ಬೇಕಲ್ಲವೆ? ಅದೇ ತರ್ಕವೆ ಸ್ಥಿತಿ, ಲಯಕ್ಕೂ ಅನ್ವಯಿಸಬೇಕಲ್ಲವೆ? ಅದೇ ತ್ರಿಕಾರ್ಯ 'ಶಕ್ತಿರೂಪದ' ಹೊಣೆಗಾರಿಕೆ... ಅದರ ಚೌಕಟ್ಟಿನಲ್ಲಿ ತ್ರಿಶಕ್ತಿ-ತ್ರಿಗುಣಗಳ ಚೌಕಾಬಾರ. ಈ ಮೂರು ತ್ರಿಪುಟಿಗಳ ತ್ರಿಭುಜವೆ ಒಟ್ಟಾರೆಯ ಸಮಗ್ರ ಚಿತ್ರಣ..' 

ಅವರು ಹೇಳಿದ್ದನ್ನು ಮಥಿಸಿ ಜೀರ್ಣಿಸಿಕೊಳ್ಳಲೆತ್ನಿಸುತ್ತ ಮತ್ತೆ ಆಳದ ಚಿಂತನೆಗಿಳಿಯಲ್ಹವಣಿಸಿತ್ತು ಶ್ರೀನಾಥನ ಮನ... 'ಅಲ್ಲಿಗೆ 'ವ್ಯಯದಿಂದ ಲಯ' ಎನ್ನುವುದನ್ನು 'ದ್ವಂದ್ವ ಸಿದ್ದಾಂತ (ಸೃಷ್ಟಿ ಸಂಬಂಧಿ)', 'ಜ್ಞಾನಾಜ್ಞಾನಶಕ್ತಿ ಪ್ರೇರಣೆ (ಸ್ಥಿತಿ ಸಂಬಂಧಿ)' ಗಳ ಜತೆಗೆ ಮೂರನೆಯದಾಗಿ (ಲಯ ಸಂಬಂಧಿ) ಸೇರಿಸಿಕೊಳ್ಳಬಹುದು ಎಂದಾಯ್ತು... ಮೂಲಶಕ್ತಿಯ, ತ್ರಿಕೋನದ ಸಾಮ್ರಾಜ್ಯಕ್ಕೊಂದು ಪರಿಪೂರ್ಣ ಚಿತ್ರಣವೂ ಸಿಕ್ಕಂತಾಯ್ತು. ಈ ಲಯದ ಸ್ಥಿತಿಯೆ ಜೀವಿಯ ಅಂತ್ಯವಾದ ಕಾರಣ, ಪ್ರಕೃತಿಯ ಪರಿಭಾಷೆಯಲ್ಲಿ ಅದು ಶಕ್ತಿಯ ಅಂತ್ಯವೆಂದೆ ಭಾವಿಸಬಹುದೇನೊ..? ಇಲ್ಲಾ ... ಶಕ್ತಿಯ ಮೂಲಭೂತ ತತ್ವದನುಸಾರ ಅದು ನಿಜವಾಗಿಯು ಅಂತ್ಯವಲ್ಲ, ಬರಿಯ ರೂಪಾಂತರವಷ್ಟೆ. ಜೀವಿಯ ದೃಷ್ಟಿಗಷ್ಟೆ ಅದರ ಅಂತ್ಯದಂತೆ ಕಾಣಿಸಬಹುದಾದರು, ಅಲ್ಲಿಯೂ ಸಮತೋಲನದಲ್ಲಿದ್ದ ಶಕ್ತಿಯು ಅಸಮತೋಲನದತ್ತ ಸಾಗುತ್ತಿದ್ದಂತೆ ನಿಧಾನವಾಗಿ ಲಯದ ಆರಂಭ ಎಂದೆ ವಿಶ್ಲೇಷಿಸಬಹುದೇನೊ..? ಅರ್ಥಾತ್ ಶಕ್ತಿಯ ಅಸ್ತಿತ್ವ ವ್ಯಯವಾಗುತ್ತ ಕ್ಷಯವಾದಂತೆಲ್ಲ, ಅದು ಸಮತೋಲನವನ್ನು ಕುಗ್ಗಿಸುತ್ತ ಹೋಗಬೇಕು..ಈ ಕ್ರಿಯೆಯಲ್ಲಿ ಕೊನೆಗೆ ಬರಿಯ ತಾಮಸವೊ, ರಾಜಸವೊ, ಸಾತ್ವಿಕವೊ - ಯಾವುದಾದರೊಂದು ಮಾತ್ರವೆ ಮಿಕ್ಕುಳಿದು, ಸಮತೋಲನದ ಧ್ವಂಸವಾಗಿ, ಅದೆ ಜೀವಿಯ ಅಸ್ತಿತ್ವ ನಾಶಕ್ಕೆ ಕಾರಣವಾಗುತ್ತಿರಬೇಕೇನೊ..? ಬಹುಶಃ ನಮ್ಮ ಪುನರ್ಜನ್ಮ, ಸ್ವರ್ಗ-ನರಕ, ಮುಕ್ತಿ-ಮೋಕ್ಷದ ಕಲ್ಪನೆಗಳೆಲ್ಲ ಈ ಮಿಕ್ಕುಳಿದ ಶಕ್ತಿ ಯಾವ ರೂಪದ್ದೆನ್ನುವುದರ ಮೇಲೆಯೆ ಅವಲಂಬಿಸಿದೆಯೆ..? ಆ ಮಿಕ್ಕುಳಿದ ಅಂತಿಮ ರಾಳ ಬರಿಯ ತಾಮಸ-ಪ್ರಮುಖವೆ ಆಗಿದ್ದರೆ ಅಂತಿಮ ಹಂತದ ಅಂತ್ಯ ಕೂಡ ದಾರುಣವಿರುತ್ತದೇನೊ - ತಾಮಸತ್ವದ ದಾರುಣ ರಾಸಾಯನಿಕ ಪ್ರಕ್ರಿಯೆಯಿಂದಾಗಿ.. ಯಾತನೆಯೆ ಮೂರ್ತ ಮಾತಾದ ಅದನ್ನೆ ನರಕವೆನ್ನುತ್ತಾರೆಂದು ಕಾಣುತ್ತದೆ. ಇನ್ನು ಬರಿಯ ರಾಜಸ ಮಾತ್ರ ಮಿಕ್ಕುಳಿದ ಕಥೆ ರಾಜಾಂತ್ಯ ಕಾಣುತ್ತದೆಯಾದರು, ಸಾತ್ವಿಕದ ಜತೆಯಿರದೆ ಅದು ಸ್ವರ್ಗದ ಹಾದಿ ಹಿಡಿಯುವುದು ಕಷ್ಟ... ಬಹುಶಃ ಅದಕ್ಕೆಂದೆ ಅದು ಪುನರ್ಜನ್ಮದ ಹಾದಿ ಹಿಡಿದು ತನ್ನ ಹುಡುಕಾಟವನ್ನು ಮುಂದುವರೆಸುತ್ತದೇನೊ - ಹೊಸ ದೇಹದಲ್ಲಿ ? ಇನ್ನು ಸಾತ್ವಿಕ ಮಾತ್ರ ಮಿಕ್ಕುಳಿದಿದ್ದರೆ ಅತ್ಯಂತ ಪ್ರಶಾಂತ ಲಯವಾಗುತ್ತದೆನ್ನಬಹುದಲ್ಲವೆ ? ಈ ಸಾತ್ವಿಕದ ನೈತಿಕ ಶಕ್ತಿಯ ಬಲದಿಂದ ಲೌಕಿಕ ಗುರುತ್ವವನ್ನಧಿಗಮಿಸಿ ಮೇಲೆರುವ ಸಾಮರ್ಥ್ಯ ಗಳಿಸುವುದರಿಂದ, ಅದು ಇಲ್ಲಿಯ ಆಕರ್ಷಣೆಯನ್ನು ಮೀರಿ ಸ್ವರ್ಗವೆನ್ನುವ ಅಸ್ತಿತ್ವದತ್ತ ನಡೆಯುವುದೇನೊ...? ಅದರ ಶೇಖರಿಸಿಕೊಂಡ ಬಲ ಮುಗಿವ ತನಕ ಸ್ವರ್ಗಲೋಕ - ಮುಗಿದ ಮೇಲೆ ಕೊನೆಯಲ್ಲಿ ಮಿಕ್ಕ ಅಲ್ಪಶಕ್ತಿಯನ್ನು ಬಳಸಿಕೊಂಡು ಮತ್ತೆ ಲೌಕಿಕಕ್ಕೆ ಪಯಣ... ಅದೇ ಸಾತ್ವಿಕದ ಪರಮಾಂತಿಮ ಶಕ್ತಿಯ ಸ್ಥಿತಿ ಮುಟ್ಟಿದ್ದರೆ, ತನ್ನ ಅಗಾಧ ಶಕ್ತಿಯಿಂದಲೆ, ಮತ್ತೆ ಲೌಕಿಕಕ್ಕೆ ಹಿಂದಿರುಗುವ ಅಗತ್ಯವಿರದೆ, ಅದನ್ನು ಶಾಶ್ವತವಾಗಿ ಅಲ್ಲೆ ಸ್ವರ್ಗದಲ್ಲೆ ನೆಲೆಸಿಬಿಡುವ 'ಮುಕ್ತಿ' ಯೆನ್ನಬಹುದೇನೊ..? ಅಲ್ಲಿಗೆ ತ್ರಿಶಕ್ತಿಗಳ ಇದಾವುದರೊಂದರ ಬಗೆಯ ಅಂತಿಮವಾದರು, ದ್ವಂದ್ವ ಸಿದ್ದಾಂತ ಅಧಿಗಮಿಸಲ್ಪಡುವುದರಿಂದ ಅಸ್ತಿತ್ವ ಮುಂದುವರಿಕೆ ಸಾಧ್ಯವಾಗುವುದಿಲ್ಲ. ಅಂತೆಯೆ ಪುನರ್ಜನ್ಮಕ್ಕೆ ಕಾರಣವಾಗುವುದು ದ್ವಂದ್ವದ ಸ್ಥಿತಿ ಯಾವುದಾದರೊಂದು ತರದಲ್ಲಿ ಮುಂದುವರೆದಾಗ ಮಾತ್ರ ಎನ್ನಬಹುದೆ ? ಪಾಪ-ಪುಣ್ಯಗಳ ರಾಸಾಯನಿಕ ಸತ್ವ ಅಥವಾ ಬೀಜಾಕ್ಷರಗಳು, ಅಂತಿಮವಾಗುಳಿದ ಶಕ್ತಿಗೆ ಸೇರಿಕೊಂಡ 'ಮೊತ್ತಶಕ್ತಿ'ಯಾಗಿ 'ಆತ್ಮ' ಶಕ್ತಿಯ ವಾಹನದ ಮುಖೇನ ಬೇರೆ ದೇಹಕ್ಕೆ ಸೇರಿಕೊಂಡುಬಿಡುತ್ತವೆ - ಎಂದ ಹಾಗೆ ? 

ಹಾಗಾದರೆ ಈ ರೀತಿಯ ಜೀವಾಜೀವ, ಚರಾಚರ ಶಕ್ತಿಗಳ ಮೊತ್ತವೆ ಬ್ರಹ್ಮಾಂಡವಾದ ಕಾರಣ, ಎಲ್ಲಿಯ ತನಕ ಈ ತ್ರಿಗುಣಗಳೆಲ್ಲದರ ನಿವ್ವಳ ಶಕ್ತಿ ಸಮತೋಲನದಲ್ಲಿರುವುದೊ, ಅಲ್ಲಿಯವರೆಗು ಬ್ರಹ್ಮಾಂಡವೂ ಅಸ್ತಿತ್ವದಲ್ಲಿರುವುದೆನ್ನಬಹುದೆ? ಒಂದು ರೀತಿಯಲ್ಲಿ ಹೇಳಿದರೆ ನಮ್ಮ ಯುಗಗಳ ಕಲ್ಪನೆಯಲ್ಲಿ ಸತ್ಯಯುಗವೆಂದಾಗ ಸಾತ್ವಿಕದ ಪರಮೋನ್ನತ ಸ್ಥಿತಿಯಿದ್ದು, ಕಲಿಯುಗದಲ್ಲಿ ತಾಮಸದ ಪರಮೋನ್ನತ ಸ್ಥಿತಿಯಾಗಿ ಆ ಕಾರಣದಿಂದಲೆ ನಾವು ನೋಡುವ ಯುಗಬೇಧ ಸ್ವಭಾವಗಳು ಹುಟ್ಟಿಕೊಂಡಿರಬಹುದೆ? ತೇತ್ರಾಯುಗದಲ್ಲಿ ತಾಮಸ ಒಂದು ಕಾಲಿಟ್ಟು ತನ್ನ ಪ್ರತಾಪ ಆರಂಭಿಸಿದ್ದರೆ, ದ್ವಾಪರದಲ್ಲಿ ಎರಡು ಕಾಲಿನ ಬಲದಲ್ಲಿ ಪ್ರಸರಿಸಿಕೊಂಡ ಕಾರಣ ಅದು ತನ್ನ  ಹಿಂದಿನ ಯುಗಕ್ಕಿಂತ ಹೆಚ್ಚು ಶಕ್ತಿಯುತವಾಗಿತ್ತೇನೊ ? ಕಲಿಯುಗದಲ್ಲಿ ಮಾತೆ ಆಡುವಂತಿಲ್ಲ - ಸಾತ್ವಿಕವೆ ಕಾಲು ಭಾಗ ಅಥವ ಅದಕ್ಕಿಂತ ಕಡಿಮೆಯದಾಗಿ ಹೋಗಿದೆ.. ಬಹುಶಃ ನಾಲ್ಕು ಯುಗದ ಧರ್ಮದ ನಾಲ್ಕುಕಾಲಿನ ವಿವರಣೆಗೆ ಇದು ಸೂಕ್ತವಾಗಿ ಹೊಂದುವ ವ್ಯಾಖ್ಯೆಯೆನ್ನಬಹುದೇನೊ? ಇದನ್ನೆ ಮತ್ತೊಂದು ರೀತಿ ಸಮೀಕರಿಸಿದರೆ - ಯಾವಾಗ ನಿವ್ವಳ ಸಮತೋಲನ ಮಾಯವಾಗಿ, ನಿವ್ವಳ ಮೊತ್ತದಲ್ಲಿ ತಾಮಸ ಶಕ್ತಿಯೆ ಪ್ರಬಲವಾಗಿ ಉಳಿದುಕೊಳ್ಳುವುದೊ, ಆಗ ಉಂಟಾಗುವ ನಾಶವನ್ನೆ 'ಪ್ರಳಯ' ಎನ್ನಬಹುದೆ? ಹಾಗಾದಾಗ ಅದು ತಾನೆ ತನ್ನಲೆ ಕುಸಿಯುವ ತಾಮಸ ಶಕ್ತಿಯಾಗಿ, ತಿರೋದಾನದ ಪ್ರಸಕ್ತಿ ಉಂಟಾಗಿಸುವುದೇನೊ? ಅದು ಹೊಸತಿನ ಮರುಸೃಷ್ಟಿಗೆ ನಾಂದಿಯಾಗುವ ಅನುಗ್ರಹವಾಗುವುದು - ಪ್ರಳಯದ ದೊಡ್ಡ ರಾಸಾಯನಿಕ ಕ್ರಿಯೆಯಲ್ಲಿ ಮತ್ತೆ ಹೊಸ ಶಕ್ತಿ ಸಮೀಕರಣವು ಸಮತೋಲನವಾಗಿ ಮೂಡಿದಾಗ.. ಆಗ ಮೂಡುವ ಹೊಸ ರಾಸಾಯನಿಕ ಕ್ರಿಯೆಯೆ 'ಬೃಹತ್ ಸ್ಪೋಟ'ವಿರಬಹುದೇನೊ? ಅಥವಾ ಯಾರಿಗೆ ಗೊತ್ತು - ಸಮುದ್ರ ಮಥನವೆನ್ನುವ ಯಾವುದೋ ಬ್ರಹ್ಮಾಂಡದ ಯಾರದೋ ಮಹಾನ್ ವಿಜ್ಞಾನಿಗಳ ಪ್ರಯೋಗ, ನಮ್ಮ ಬ್ರಹ್ಮಾಂಡದ ಪಾಲಿನ 'ಬೃಹತ್ ಸ್ಪೋಟವೂ' ಆಗಿರಬಹುದಲ್ಲ? ಹಾಗೆಂದರೆ ಅದನ್ನು ಸರಿಯೆಂದು ಸಾಧಿಸಿ ತೋರುವವರಾದರೂ ಯಾರು? ಅಲ್ಲಗಳೆದು ಸುಳ್ಳೆಂದು ನಿರೂಪಿಸುವವರಾದರು ಯಾರು? ಕಥೆಯೊ, ನಿಜವೊ - ರಮ್ಯ ಕಲ್ಪನೆಯ ರೂಪದಲ್ಲಂತೂ ಧಾರಾಳವಾಗಿ ಸ್ವೀಕರಿಸಬಹುದೇನೊ?!

'ಸಾಕು..ಸಾಕು..ಕುನ್.ಶ್ರೀನಾಥ, ಕಲ್ಪನೆಯ ಲಹರಿಯನ್ನು ಹರಿಸುತ್ತ, ವಿಹರಿಸಿಕೊಂಡು ಹೋದರೆ ಅದಕ್ಕೆ ಕೊನೆ ಮೊದಲಿರುವುದಿಲ್ಲ... ಸದ್ಯಕ್ಕೆ ಆ ಆಳಕ್ಕಿಳಿಯುವ ಅಗತ್ಯ ಕಾಣುತ್ತಿಲ್ಲ..' ಎಂದರು ಮಾಂಕ್ ಸಾಕೇತ್.. 

ಅವರ ಆ ಮಾತಿಗೆ ತಟ್ಟನೆ ವಾಸ್ತವ ಲೋಕಕ್ಕೆ ಬಂದ ಶ್ರೀನಾಥ ತಾನೂ ಮುಗುಳ್ನಗುತ್ತ, ' ನಿಜ ಮಾಸ್ಟರ, ಈ ಅವಲೋಕನ ಅನಾವಶ್ಯಕ.. ತರ್ಕದ ಕುದುರೆಯೇರಿ, ಕೊನೆಗಾಣದ ಕೊನೆಯತ್ತ, ಲಂಗು-ಲಗಾಮಿಲ್ಲದಂತೆ ನಡೆದಿದ್ದೆ, ಅದಿರಲಿ. ಈಗ ಹೆಚ್ಚು ಕಡಿಮೆ, ನನ್ನೆಲ್ಲ ಸಂಶಯ, ಗೊಂದಲಗಳು ಪೂರ್ಣವಾಗಿ ಪರಿಹಾರವಾಗಿವೆ ಎನ್ನಬಹುದೇನೊ? ನನಗೀ ಮಾರ್ಗ ತೋರಿಸಿ ಮಾರ್ಗದರ್ಶನವಿತ್ತು, ಈ ಹಾದಿಗೆ ನಡೆಯಲು ಪ್ರೇರೇಪಿಸಿದ ನಿಮಗೆ ಯಾವ ರೀತಿ ಕೃತಜ್ಞತೆ ಹೇಳಬೇಕೊ ತಿಳಿಯುತ್ತಿಲ್ಲ.' ನಿಜಕ್ಕೂ ಹೃದಯ ತುಂಬಿ ಬಂದ ಭಾವನೆಯೊಳಗೆ ನಿಜಾಯತಿಯಲ್ಲಿ ನುಡಿದ ಶ್ರೀನಾಥ.

'ಇದರಲ್ಲಿ ನಿನ್ನ ಉನ್ನತಿಯಷ್ಟೆ ನನ್ನ ಸ್ವಾರ್ಥವೂ ಆಡಗಿದೆ ಕುನ್.ಶ್ರೀನಾಥ..ನೀನು ಕಂಡುಕೊಂಡ ಯಶ ಮತ್ತು ಏಳಿಗೆಯಲ್ಲಿ ನನಗೂ ಕೊಂಚಪಾಲು ಸಿಗುತ್ತದೆ.. ಅಂತೆಯೆ ನೀನು ಸೋತಿದ್ದರೆ ಅದರ ಪಾಲು ಸಹ.. ಅದನ್ನು ಬಿಡು. ಇಲ್ಲಿಗೆ ನೀನು ಬಂದ ಕಾರ್ಯ ಪರಿಪೂರ್ಣವಾಗಿಸಿಕೊಂಡಿರುವೆ , ನೀನಿನ್ನು ಹಿಂತಿರುಗಿ ಹೋಗಬಹುದೆಂದು ಧಾರಾಳವಾಗಿ ಹೇಳಬಹುದು.. ಆದರೊಂದು ಕೊನೆಯ ಮಾತು ನೆನಪಿರಲಿ.. ಇಲ್ಲಿಂದ ವಾಪಸ್ಸು ಹೋದ ಮೇಲೂ ನಿಜವಾದ ಹೊಸ ಪರೀಕ್ಷೆಗಳು ಎದುರಾಗುವ ಸಾಧ್ಯತೆ ಇರುತ್ತದೆ... ಆಗೆಲ್ಲ ನೀನು ಕಲಿತ ಪಾಠ ಮರೆಯದೆ ಬಳಸಿಕೊ.. ಎಲ್ಲಿಯವರೆಗೆ ನೀನು ಮೂಲ ಸಿದ್ದಾಂತವನ್ನು ಮರೆಯದೆ ಬಳಸುತ್ತಿಯೊ, ಅಲ್ಲಿಯವರೆಗೆ ನೀನು ಚಿಂತಿಸುವ ಅಗತ್ಯವಿರುವುದಿಲ್ಲ...'

'ಅರ್ಥವಾಯಿತು ಮಾಸ್ಟರ.. ನಿಮ್ಮ ಮಾತನ್ನು ಗಮನದಲ್ಲಿಟ್ಟುಕೊಂಡು, ಅದರಂತೆ ಶಿರಸಾವಹಿಸಿ ನಡೆಯಲು ಮನಃಪೂರ್ವಕವಾಗಿ , ನಿರಂತರವಾಗಿ ಪ್ರಯತ್ನಿಸುತ್ತೇನೆ.. ಆ ನಿಟ್ಟಿನಲ್ಲಿ  ನಿಮ್ಮ ಹರಕೆ, ಆಶೀರ್ವಾದ ಸದಾ ನನ್ನ ಮೇಲಿರಲಿ..' ಎಂದವನೆ ಅವರ ಮುಂದಿನ ನೆಲದ ಮೇಲೆ ಮಂಡಿಯೂರಿ ಕುಳಿತು, ತಲೆಬಾಗಿಸಿ ಎರಡೂ ಕೈ ಜೋಡಿಸಿದ -ಹೃತ್ಪೂರ್ವಕವಾಗಿ ನಮಿಸುವ ಭಂಗಿಯಲ್ಲಿ..

ಬಾಗಿಸಿದ್ದ ತಲೆಯನ್ನೆ ಅರೆಗಳಿಗೆ ದಿಟ್ಟಿಸಿ ನೋಡಿದ ಮಾಂಕ್. ಸಾಕೇತರು, ' ಕುನ್. ಶ್ರೀನಾಥ.. ಇದು ನಮ್ಮ ಕಡೆಯ ಭೇಟಿ...ಇನ್ನು ನೀನು ಯಾವಾಗ ಬೇಕಾದರೂ ಇಲ್ಲಿಂದ ಹೊರಡಬಹುದು.. ನೀನು ಹೊರಟ ಹೊತ್ತಿನಲ್ಲಿ ನಾನು ಇರುವೇನೊ, ಇಲ್ಲವೊ ಹೇಳಲಾಗದು.. ಅದಕ್ಕೀ ಕಡೆಯ ಮಾತು; ಬಹಳ ಕಷ್ಟದಿಂದ ಕಂಡುಕೊಂಡ ಸತ್ಯ ಮತ್ತು ಅನುಭವಗಳನ್ನು ಅಷ್ಟೆ ಸುಲಭದಲ್ಲಿ ಕಳೆದುಕೊಂಡೂ ಬಿಡಬಹುದು, ಸರಿಯಾದ ಎಚ್ಚರದಿಂದಿರದಿದ್ದರೆ. ಹಾಗಾಗಲು ಬಿಡದಂತೆ ನೋಡಿಕೊಳ್ಳುವ ಹೊಣೆ ನಿನ್ನ ಮೇಲಿರುತ್ತದೆ. ಅದನ್ನೆಂದು ಮರೆಯದೆ ಮುನ್ನಡೆ.. ನಿನಗೆಲ್ಲ ಶುಭವಾಗಲಿ..ಅಮಿತಾಭ..!' ಎಂದವರೆ ತಮ್ಮ ಹಸ್ತದಿಂದ ಅವನ ಮಸ್ತಕವನ್ನು ಮತ್ತು ತಲೆಯನ್ನು ಸ್ಪರ್ಷಿಸಿದರು ಆಶೀರ್ವದಿಸುವ ಹಾಗೆ.

'ಖಂಡಿತವಾಗಿ ಹಾಗೆಯೆ ಮಾಡುತ್ತೇನೆ ಮಾಸ್ಟರ... ನಿಮ್ಮ ಪ್ರಯತ್ನ ವ್ಯರ್ಥವಾಗಲು ಬಿಡುವುದಿಲ್ಲ..' ಎಂದು ಮತ್ತೆ ಮಂಡಿಯೂರಿ ಕುಳಿತಿದ್ದ ಭಂಗಿಯಲ್ಲೆ ಮತ್ತಷ್ಟು ಬಾಗಿ ತಲೆ ಮತ್ತು ಹಣೆಯನ್ನು ನೆಲಕ್ಕೆ ಮುಟ್ಟಿಸಿದ, ಪೊಡಮಟ್ಟುವ ತರದಲ್ಲಿ. ಅವನು ಮತ್ತೆ ತಲೆಯೆತ್ತಿ ಕಣ್ಣು ತೆರೆದಾಗ ಎದುರಿನಲ್ಲಿ ಮಾಂಕ್ ಸಾಕೇತ್ ಇರಲಿಲ್ಲ - ಅದಾಗಲೆ ಅಲ್ಲಿಂದ ಹೊರಟುಹೋಗಿದ್ದರು. ತಟ್ಟನೆ ತಲೆಯೆತ್ತಿ ನೋಡಿದಾಗ ಆ ಹಾದಿಯ ತುದಿಯಲ್ಲಿ ಅವರ ಮರೆಯಾಗುತ್ತಿದ್ದ ಬೆನ್ನಿನ ಆಕೃತಿ ಕಣ್ಣಿಗೆ ಬಿದ್ದಿತ್ತು. 'ಎಂತಹ ಮಹಾನುಭಾವ..!' ಎಂದುಕೊಳ್ಳುತ್ತ ಮತ್ತೊಮ್ಮೆ ಅವರು ಹೋದ ದಿಕ್ಕಿನತ್ತ ಕೈ ಮುಗಿದು ಕೊನೆಯ ಬಾರಿಗೆಂಬಂತೆ ತನ್ನ 'ಕುಟಿ'ಯತ್ತ ಹೆಜ್ಜೆ ಹಾಕಿದ್ದ ಶ್ರೀನಾಥ, ತನ್ನ ವಾಪಸಾತಿಯ ಕ್ಷಿಪ್ರ ಸಿದ್ದತೆ ನಡೆಸಲು.. ಸಿದ್ದವಾಗಲಿಕ್ಕೆ ಅಲ್ಲಿ ಹೆಚ್ಚೇನು ಇರಲಿಲ್ಲ - ಹತ್ತೆ ನಿಮಿಷದಲ್ಲಿ ತಂದಿದ್ದ ಸಾಮಾಗ್ರಿಗಳನ್ನು ಬ್ಯಾಗಿಗೆ ತುಂಬಬಹುದಿತ್ತು. ಅಲ್ಲಿ ನಿಜಕ್ಕು ತಿಳಿಯಬೇಕಿದ್ದುದು ವಾಪಸ್ಸು ಹೋಗುವ ಬಸ್ಸಿನ ವಿವರ ಮತ್ತು ಕರಾರುವಾಕ್ಕಾದ ವೇಳಾಪಟ್ಟಿಯಷ್ಟೆ..

ಬಸ್ಸಿನಲ್ಲಿ ಕುಳಿತು ತಣ್ಣನೆಯ ಏಸಿ ಗಾಳಿಗೆ ಮುಖವನ್ನೊಡ್ಡುತ್ತ ಒಂದು ವಾರದಲ್ಲಿ ನಡೆದುಹೋದ ಘಟನೆಗಳನ್ನೆಲ್ಲ ಒಂದೊಂದಾಗಿ ಮೆಲುಕು ಹಾಕುತ್ತಿದ್ದ ಶ್ರೀನಾಥನಿಗೆ ಅದೊಂದು ವಾರದ ಅನುಭವದಂತೆ ತೋರದೆ, ತಿಂಗಳು ವರ್ಷಾನುಗಟ್ಟಲೆಯ ಸಮಷ್ಟಿತ ಅನುಭೂತಿಯೇನೊ ಅನಿಸಿಬಿಟ್ಟಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಯಾವುದೊ ದೈವೀಕವಾದ, ಅಲೌಕಿಕ  ಭಾವನೆಯೊಂದು ತನುಮನವನ್ನೆಲ್ಲ ಆವರಿಸಿಕೊಂಡಂತಾಗಿ, ಯಾವುದೊ ಹೇಳಲಾಗದ ಅಪೂರ್ವ ರೀತಿಯ ಪ್ರಶಾಂತ ಮನಸ್ಥಿತಿ ಮೈದುಂಬಿಕೊಂಡುಬಿಟ್ಟಂತಾಗಿತ್ತು. ಅದುಂಟು ಮಾಡಿದ್ದ ಅದ್ಭುತ ಉನ್ಮೇಷ ಸ್ಥಿತಿಯಲ್ಲಿ ಮುಂದೇನು ಮಾಡಬೇಕೆಂಬುದರ ರೂಪುರೇಷೆಗಳೆಲ್ಲ ಸ್ಪಷ್ಟವಾಗಿ ಮನಪಟಲದಲ್ಲಿ ಮೂಡಿ, ಅದನ್ನು ಕಾರ್ಯಗತಗೊಳಿಸುವ ಮುಂದಿನ ಹೆಜ್ಜೆಗಳನ್ನು ಕುರಿತು ಆಲೋಚಿಸುತ್ತಿತ್ತು. ಅದರಲ್ಲಿ ಮೊಟ್ಟ ಮೊದಲನೆಯದಾಗಿ ಕಣ್ಮುಂದೆ ನಿಂತಿದ್ದ ಕಾರ್ಯವೆಂದರೆ - ಕುನ್. ಲಗ್ ಜತೆಗೆ ಭೇಟಿ; ಮೊದಲು ಅವರನ್ನು ಸಂಧಿಸಿ, ಕುನ್. ಸು ವಿಷಯದ ಕುರಿತು ಕ್ಷಿಪ್ರವಾಗಿ ಚರ್ಚಿಸಿ, ಅವಳ ಕುರಿತಾಗಿ ಆಲೋಚಿಸಿದ್ದ ಪರಿಹಾರವನ್ನು ಕಾರ್ಯರೂಪಕ್ಕಿಳಿಸಬೇಕು..  ಸದ್ಯಕ್ಕೆ ಅದೇ ಮೊದಲ ಆದ್ಯತೆಯ ವಿಷಯ...ಅದೇ ಹೊತ್ತಲ್ಲೆ ಕುನ್. ಸೋವಿಯ ಪ್ರಮೋಶನ್ ಕುರಿತಾದ ಶಿಫಾರಸನ್ನು ಮುಗಿಸಿಕೊಂಡುಬಿಡಬೇಕು.... ನಂತರದ ಪ್ರಶ್ನೆ ಲತಳ ಜತೆಗೆ ಚರ್ಚಿಸಬೇಕಾದ ವಿಷಯ. ಅದನ್ನು ನಿಭಾಯಿಸುವುದೇನು ಸುಲಭ ಸಾಧ್ಯವಲ್ಲವಾದರು, ಅದನ್ನು ಮಾಡದೇ ವಿಧಿಯಿಲ್ಲ. ಅವೆರಡು ಮುಗಿದರೆ ದೊಡ್ಡದೆರಡು ಹೊರೆಗಳನ್ನು ಇಳಿಸಿಕೊಂಡಂತೆ. ಪ್ರಾಜೆಕ್ಟಿನ ಅಧಿಕೃತ ಮುಕ್ತಾಯ ಘೋಷಿಸಿ, ಮುಂದಿನ ನಿಭಾಯಿಸುವಿಕೆಯ ಹೊಣೆಗಾರಿಕೆಯನ್ನು ಅಧಿಕೃತವಾಗಿ ಶ್ರೀನಿವಾಸ ಪ್ರಭುವಿಗೊಪ್ಪಿಸಿಬಿಟ್ಟರೆ ಮುಗಿಯಿತು - ತಾನಿಲ್ಲಿಂದ ಹೊರಡುವ ಗಳಿಗೆಗೆ ಮುಹೂರ್ತವಿಟ್ಟ ಹಾಗೆ ಲೆಕ್ಕ... ಮತ್ತಿನ್ನೆಲ್ಲ ಕೆಲಸಗಳು ಸಣ್ಣಪುಟ್ಟ ಗಾತ್ರದವು. ಇನ್ನು ಮುಂದಕ್ಕೆ ಕಾದಿರುವ ಪ್ರಾಜೆಕ್ಟು ಯಾವ ದೇಶದಲ್ಲೊ, ಯಾವ ಮೂಲೆಯಲ್ಲೊ ಎನ್ನುವ ಪ್ರಶ್ನೆ ಇನ್ನು ಎತ್ತಿಲ್ಲದ ಕಾರಣ ಅದನ್ನು ಊರಿಗೆ ವಾಪಸಾಗುವ ತನಕ ಕಾದಿರಿಸಬೇಕು... ಊರಿಗೆ ಹೋಗುವ ಮುನ್ನ ಇಲ್ಲಿನ ಇಡೀ ತಂಡಕ್ಕೊಂದು ಪುಟ್ಟ ವೈಯಕ್ತಿಕ ಔತಣ ಕೂಟ ಏರ್ಪಡಿಸಿಬಿಡಬೇಕು - ಧನ್ಯವಾದದ ರೂಪದಲ್ಲಿ... ಆದರೆ ಅವೆಲ್ಲಕ್ಕು ಮುನ್ನ ಮೊದಲು ಈ ಹೊರೆಯಿಳಿಸಿಕೊಳ್ಳುವ ಕೆಲಸಕ್ಕೆ ಮೊದಲ ಆದ್ಯತೆ ... ಏನೆಲ್ಲ ಆಗಿಹೋಯಿತು ಈ ಪ್ರಾಜೆಕ್ಟಿನ ದೆಸೆಯಿಂದ...? ಇಡೀ ಜೀವನಚಕ್ರದ ದಿಕ್ಕು, ದೆಸೆಗಳೆ ಏರುಪೇರಾಗಿ ಹೋದವಲ್ಲಾ? ಹೀಗೆಲ್ಲಾ ಆಗುವುದೆಂದು ತಾನು ಕನಸಿನಲ್ಲಾದರೂ ಊಹಿಸಲು ಸಾಧ್ಯವಿತ್ತೆ - ? ಅದೂ ಎಷ್ಟು ಕ್ಷಿಪ್ರ ಸಮಯದಲ್ಲಿ, ಕ್ಷಿಪ್ರ ಗತಿಯಲ್ಲಿ ಇದೆಲ್ಲಾ ನಡೆದುಹೋಯಿತು? ನೋಡುನೋಡುತ್ತಿದ್ದಂತೆ ತಾನು ತನ್ನರಿವಿಲ್ಲದೆ ಮನಸೆನ್ನುವ ಚಾರಣದ ರಥವನ್ನೇರಿ ಹೊರಟ ಪಯಣ, ತನ್ನನ್ನು ತಾನಿರುವ ಸ್ತರದಿಂದ 'ಅವರೋಹಣ'ಕ್ಕೆ ದೂಡಿ, ತಾಮಸಿಕತೆಯ ಬಲೆ ಬೀಸಿ 'ಆಕ್ರಮಣ'ದ ಮನಸ್ಥಿತಿಗೆಳೆದೊಯ್ದು, 'ಅಧಃಪತನ'ದ ಪಾತಾಳಲೋಕದಲ್ಲಿಳಿಸಿ ಅಡ್ಡಾಡಿಸಿ, ಕೊನೆಗೆ ಅದೆಲ್ಲಾ ಪಾಪದ ಕೂಪಗಳಿಂದ ಮೇಲೆತ್ತುವ 'ಆರೋಹಣ'ದತ್ತ ಛಡಿಯೇಟು ಕೊಡುತ್ತಲೆ ನಡೆಸುತ್ತ ಬದುಕಿನ ಹೂರಣದ ಪಾಠ ಕಲಿಸಿದ್ದೇನು ಸಾಮಾನ್ಯ ಸಂಗತಿಯೆ? ಈ ಕಡಿವಾಣವಿರದ ಮನಸೆನ್ನುವ ಚಾರಣವನ್ನೆ ಬದುಕಿನ ಸತ್ವಾಸತ್ವಗಳ ಹೂರಣವಾಗಿಸಿ ತನ್ನ ಬಾಳಿನೂಟದೆಲೆಗೆ ಬಡಿಸುತ್ತ, ಕೊನೆಗೂ ತನ್ನನ್ನು ಜಾರಬಿಡದೆ ಆರೋಹಣದ ಹಾದಿಗೆ ನಡೆಸಿಬಿಟ್ಟಿತಲ್ಲಾ ? ಇದನ್ನೇನು ವಿಧಿಯೆನ್ನಬೇಕೊ, ನಿಯತಿಯ ಜಗನ್ನಾಟಕ ನಿಯಮವೆನ್ನಬೇಕೊ, ಮಾನವನ ಅಂಕೆಗೆ ಸಿಲುಕದೆ ತನ್ನ ಜಾಲವನ್ನು ಬೀಸಿ ಮೋಡಿ ಹಾಕುವ ಮಾಯೆಯೆನ್ನಬೇಕೊ? 'ಏಕಾಂಗಿತನ ಮುತ್ತಲು, ಮನಸೆ ಬೆತ್ತಲು' ಎನ್ನುವಂತೆ ತಾನಿದ್ದ ಏಕಾಕಿತನವನ್ನೆ ದಾಳವಾಗಿ ಬಳಸಿಕೊಂಡು ಆ ಗಳಿಗೆಯ ದುರ್ಬಲ ಮನಸನ್ನು ಅವರೋಹಣಕ್ಕಿಳಿಸುತ್ತ, ಪ್ರಕಟರೂಪದಲ್ಲಿ ಪ್ರಸ್ತುತವಾಗುವ ಪ್ರೇರಣೆ ನೀಡಿ ಅನೈತಿಕ ಆಕ್ರಮಣಕ್ಕು ಅಂಜದ ಮನಸ್ಥಿತಿಯನ್ನು ಸೃಜಿಸಿ, 'ಒಬ್ಬಂಟಿ' ಯಾಗಿರುವ ನೆಪದಲ್ಲಿ ನೈತಿಕ ಅಧಃಪತನಕ್ಕೂ ಪ್ರಲೋಭಿಸಿ, ದಾರಿ ತೋರಿಸಿ ತನ್ನನ್ನು ಪೂರ್ತಿಯಾಗಿ ಕೆಡವಿ ಶರಣಾರ್ಥಿಯಾಗುವಂತೆ ಮಾಡಿಬಿಟ್ಟಿತಲ್ಲಾ? 

ಯಾವ ಜನ್ಮದ ಸುಕೃತ ಫಲವೊ - ಎಲ್ಲಿಂದಲೊ ಮೂಡಿದ ಆಶಾಕಿರಣವೊಂದು, ಬೆಳಕಿನ ಜ್ಯೋತಿಯಾಗಿ, ದಾರಿದೀಪವಾಗಿ ಕೂಪದಿಂದ ಕೂಪಕ್ಕೆ ಜಾರುತ್ತಿದ್ದ ತನ್ನನ್ನು ಚೂರುಚೂರೆ ಹಿಡಿದೆತ್ತುತ್ತ ಈ ಆರೋಹಣದ ಪಥ ಹಿಡಿಸದಿದ್ದರೆ, ಆ ಪ್ರಚೋದನೆಯ ಪ್ರಲೋಭನೆಯಲ್ಲಿಯೆ ಪರಿಭ್ರಮಿಸುತ್ತ ಹೊರಗೆ ಬರಲಾಗದ ಸುಳಿಯಲ್ಲಿ ಸಿಕ್ಕು ಇನ್ನು ಅದೆಷ್ಟು ಕಾಲ ನರಳಬೇಕಾಗುತ್ತಿತ್ತೋ, ಏನೊ? ಅದೇನೇ ಆದರು, ಈ ಪರಿಭ್ರಮಣದಲ್ಲಿ ಸಿಕ್ಕಿದ ತಾನು ಗಣಿಯಾಳದಲ್ಲಿ ಸಿಕ್ಕ ಅಶುದ್ಧ ಅದಿರಿನ ಸ್ಥಿತಿಯಿಂದ, ಪರಿಶುದ್ಧವಾದ ಲೋಹವಾಗುವ ಹಾಗೆ ರೂಪಾಂತರವಾಗಲೂ ಕಾರಣವಾಯ್ತು... ಈ ಪರಿಭ್ರಮಣ ಚಕ್ರದಲ್ಲಿ ಸಿಲುಕಿ ಅವರೋಹಣ - ಆಕ್ರಮಣ - ಅಧಃಪತನ - ಆರೋಹಣಗಳ ಕೈಗೆ ಸಿಕ್ಕಿ ಅನುಕ್ರಮಣದಲ್ಲಿ ಗಿರಕಿ ಹೊಡೆದು ಈ ಅಂತಿಮ ಸ್ಥಿತಿಗೆ ತಲುಪಿರದಿದ್ದರೆ, ತನ್ನ ಮನಸು ಈ ಪರಿಪಕ್ವತೆಯ ಸ್ಥಿತಿಯನ್ನು ತಲುಪುತ್ತಿತ್ತೆ - ಎನ್ನುವುದು ಅನುಮಾನವೆ... ಹೀಗಾಗಿ, ಅಂತಿಮದಲ್ಲಿ ಈ ಸುಳಿಗೆ ಸಿಲುಕಿ, ಪಾರಾಗಿ ಹೊರಬಂದ ಅವಕಾಶಕ್ಕೆ ತಾನು ಕೃತಜ್ಞನಾಗಿರಬೇಕೇನೊ..? ಅಂದ ಹಾಗೆ ಕೃತಜ್ಞನಾಗಿರಬೇಕಾದ್ದಾದರು ಯಾರಿಗೆ ? ಈ ಪ್ರಾಜೆಕ್ಟು ಒದಗಿಸಿದ ಅವಕಾಶಕ್ಕೊ ? ಪ್ರಾಜೆಕ್ಟಿನಲ್ಲಿ ಇಕ್ಕಟ್ಟಿನಲ್ಲಿ ಸಿಕ್ಕಿಸಿ ನರಳಾಡಿಸಿ, ಗೋಲು ಹುಯ್ದುಕೊಂಡ ಶ್ರೀನಿವಾಸ ಪ್ರಭುವಿನ ಕುತಂತ್ರಕ್ಕೊ ? ದ್ವಂದ್ವಗಳೆ ಬದುಕಾದ ಬ್ಯಾಂಕಾಕಿನ ಸುತ್ತಲ ಪರಿಸರಕ್ಕೊ? ಅನಿರೀಕ್ಷಿತ ಆಕಸ್ಮಿಕವಾದರು ಈ ಪರಿವರ್ತನೆಯ ಮೂಲಕಾರಣವಾಗಿ ಹೋದ ಕುನ್. ಸು ಎಂಬ ಹೆಣ್ಣು ಮಾಯೆಗೊ? ಆಯಾಚಿತವಾಗಿ ಮಾಂಕ್ ಸಾಕೇತರ ಭೇಟಿಗೆ ಕಾರಣವಾದ ಕುನ್. ಸೋವಿಯ ಸ್ನೇಹಕ್ಕೊ? ಅದೆಲ್ಲವನ್ನು ಮೀರಿ ಆ ದುರಂತ ಪರಿಸ್ಥಿತಿಯನ್ನು ಹೇಳದೆಯೂ ಗುರುತಿಸಿ, ಪರೋಕ್ಷ ಸುಳಿವ ನೀಡುತ್ತಲೆ ಕಂದಕದಿಂದ ಮೇಲೆದ್ದು ಬರಲು ಕೈಯಾಸರೆ ನೀಡಿದ ಮಾಂಕ್. ಸಾಕೇತರ ಔದಾರ್ಯಕ್ಕೊ? ಅಥವ ಇದೆಲ್ಲವುಗಳನ್ನು ಹಾಗು ಮತ್ತಿತರ ಇಂತಹವುಗಳನ್ನೆಲ್ಲ ಒಟ್ಟಾಗಿ ಜೋಡಿಸಿ ಲೆಕ್ಕಾಚಾರದಲ್ಲಿ ನಡೆಸಿದ ವಿಧಿಯಾಟಕ್ಕೊ? ಬಹುಶಃ ಸಗಟಿನಲ್ಲಿ ಒಟ್ಟಾಗಿ ಎಲ್ಲದಕ್ಕೂ ಎಂದೆ ಕಾಣುತ್ತದೆ... ಅದಾವುದರಿಂದಲಾದರು ಆಗಿರಲಿ - ಕೊನೆಗೂ ಆರೋಹಣಕ್ಕೇರಿಸಿತಲ್ಲ ಎನ್ನುವುದೆ ಸಖೇದಾಶ್ಚರ್ಯ; ಬಹುಶಃ ಅದರಲ್ಲಿ ಅಚ್ಚರಿ ಪಡಲೇನೂ ಇಲ್ಲವೆಂದೆ ಕಾಣುತ್ತದೆ. ಪ್ರತಿಯೊಬ್ಬರನ್ನು ಅವರದೇ ಆದ ಪರಿಭ್ರಮಣಚಕ್ರದಲ್ಲಿ ಸಿಕ್ಕಿಸುವ ಬದುಕು, ಎಲ್ಲರನ್ನು ಅವರವರ ಅವರೋಹಣ-ಆಕ್ರಮನ-ಅಧಃಪತನ-ಆರೋಹಣಗಳ ಅಥವಾ ಅಂತದೆ ಹಂತಗಳ ಮುಖೇನ ಸಾಗುವ ಅವಕಾಶ ಕೊಟ್ಟೆ ತೀರುತ್ತದೆಂದು ಕಾಣುತ್ತದೆ. ಕೆಲವು ಭಾಗ್ಯಶಾಲಿಗಳು ಅದನ್ನು ಸುಲಭದಲ್ಲಿ ಗುರುತಿಸಿ ಬೇಗನೆ ಒಳಹೊಕ್ಕು, ಸಾಗಿ ಸಾಧ್ಯವಾದಷ್ಟು ಶೀಘ್ರವಾಗಿ ಆರೋಹಣದ ಬಾಗಿಲಿನ ಮೂಲಕ ಹೊರಬಂದು ಬಿಡುತ್ತಾರೆ.. ಮತ್ತೆ ಕೆಲವರು ಪಡಬಾರದ ಪಾಡು ಪಟ್ಟರು ಕೊನೆಗೆ ಹೇಗೊ ಹೊರಗೆ ತಲುಪಿಕೊಳ್ಳುತ್ತಾರೆ. ಆದರೆ ನಿಜವಾದ ದೌರ್ಭಾಗ್ಯ, ವಿಷಾದವೆಂದರೆ ಕಡೆಯ ಆರೋಹನದ ಹಂತ ತಲುಪದೆ ಮಿಕ್ಕ ಮೂರರಲ್ಲೆ ಸಿಕ್ಕಿ, ಅದನ್ನು ಮುಗಿಸುವುದರಲ್ಲೆ ಜೀವನ್ಮುಕ್ತರಾಗಿ ಹೋಗುವವರದು.. ಹೀಗೊಂದು ಮುಕ್ತಿಯ ಹಂತ ಸಾಧ್ಯವಿರಬಹುದೆಂಬ ಸುಳಿವು ಸಿಗುವ ಮೊದಲೆ ಇಹ ಲೋಕದ ವ್ಯಾಪಾರ ಮುಗಿಸುವವರ ಪಾಡು ತನ್ನದಾಗಲಿಲ್ಲವಲ್ಲಾ - ಅದೇ ಸಮಾಧಾನದ ಸಂಗತಿ. ತನ್ನ ಹಾಗೆ 'ವಾಟ್ ಪಃ ನಾನಾಚಟ್ ' ರೀತಿಯ ವನ್ಯಾಶ್ರಮಧಾಮದ ವಾಸದ ಅವಕಾಶಕ್ಕೆ ಒಳಗಾಗಿ, ಈ ಅಭೂತಪೂರ್ವ ಅನುಭವ ಪಡೆದು ಹೊರಬರುವ ಅವಕಾಶ ಎಷ್ಟು ಜನರಿಗೆ ಸಿಕ್ಕೀತೂ? ಅದರಲ್ಲಿ ತಾನೀ ದೇಶದವನೆ ಅಲ್ಲದ, ಈ ಬೌದ್ಧ ಧರ್ಮದ ಸತ್ವಾತತ್ವಗಳ ಇನಿತೂ ಅರಿವಿಲ್ಲದ ಸಂಪೂರ್ಣ ಅಪರಿಚಿತ ವ್ಯಕ್ತಿಯಾಗಿದ್ದರೂ ಸಹ..! 

(ಇನ್ನೂ ಇದೆ) 
__________