ಕಥೆ - ಬಡತನ ಬೆಳೆಯಿತು ಸಿರಿತನ ಸೋತಿತು!

ಕಥೆ - ಬಡತನ ಬೆಳೆಯಿತು ಸಿರಿತನ ಸೋತಿತು!

ಒಂದು ಊರಲ್ಲಿ ಒಬ್ಬ ಶ್ರೀಮಂತ ಇದ್ದ. ಅವನಿಗೆ ಸಾಕಷ್ಟು ಆಸ್ತಿ, ಒಡವೆ ವಸ್ತ್ರ, ವೈಡೂರ್ಯಗಳಿದ್ದವು. ,ಅವನ ಹೊಲದಲ್ಲಿ ಅನೇಕ ಬಡವರು ದುಡಿದು ಬದುಕು ಸಾಗಿಸುತ್ತಿದ್ದರು. ಹಾಗೆ ಒಬ್ಬ ಕಡು ಬಡವ ಈ ಶ್ರೀಮಂತನ ಹೊಲದಲ್ಲಿ ಜೀತದಾಳಾಗಿ ದುಡಿದು ತನ್ನ ಜೀವನವೆಲ್ಲಾ ಸವೆಸಿದ್ದ. ಅಂತ ಕಡು ಬಡತನದಲ್ಲಿ ಇದ್ದರೂ ಮಗನನ್ನು ಹತ್ತನೇಯ ತರಗತಿ ವರೆಗೆ ಓದಿಸಿದ್ದನು. ಇನ್ನೇನು ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಾಗಿತ್ತು. ಆ ಸಮಯದಲ್ಲಿ ಮಗನ ಪರೀಕ್ಷೆಗೆ ಕಟ್ಟಲು ಹಣ ಬೇಕಾಗಿತ್ತು, ಆಗ ಶ್ರೀಮಂತನ ಬಳಿ ಬಂದು ನನ್ನ ಮಗನಿಗೆ, ಶಾಲೆಗೆ ಫೀಸ್ ಕಟ್ಟಲು ಹಣ ಬೇಕಾಗಿದೆ, ದಯಮಾಡಿ ಸ್ವಲ್ಪ ಹಣ ಕೊಡಿಯೆಂದು ಅಂಗಲಾಚಿ ಬೇಡಿಕೊಂಡನು‌.

ಅದಕ್ಕೆ ಶ್ರೀ ಮಂತ ವ್ಯಕ್ತಿ, ನೀವು ಕೂಲಿಯವರು ಕೂಲಿಯನ್ನು ಮಾತ್ರ ಮಾಡಬೇಕು, ಅದನ್ನು ಬಿಟ್ಟು ಓದುವುದು ಬರೆಯುವುದು ನೀವು ಮಾಡಬಾರದು, ನೀನು ನಮ್ಮ ಹೊಲದಲ್ಲಿ ಕೂಲಿ ಮಾಡುತ್ತಿ, ನಿನ್ನ ಮಗನು ಕೂಡ ಕೂಲಿ ಮಾಡಬೇಕು, ನೀವು ಸಾಯುವವರೆಗೂ ಕೂಲಿ ಆಳುಗಳಾಗಿಯೇ ಸಾಯಬೇಕು ಎಂದು, ಮನಸಿಗೆ ನೋವು ಆಗುವ ಹಾಗೆ ಪದೇ ಪದೇ ಕೂಲಿ ಕೂಲಿಯವನು ಎಂದು ಹೀಯಾಳಿಸಿ ಮಾತನಾಡುತ್ತಾನೆ.

ಅದನ್ನು ಕೇಳಿದ ಆ ಬಡ ವ್ಯಕ್ತಿ , ದಯವಿಟ್ಟು ನೀವು ಹಣ ಕೊಡದಿದ್ದರೂ ಚಿಂತೆಯಿಲ್ಲ ಪದೇ ಪದೇ ನೀವು ಕೂಲಿ,ಕೂಲಿಯವನು, ಕೂಲಿ ಮಾಡುತ್ತಲೇ ಸಾಯಬೇಕು ಅಂತೆಲ್ಲಾ ಮಾತನಾಡಬೇಡಿ ಎಂದು ಹೇಳುತ್ತಾನೆ. ಆಗ ಶ್ರೀಮಂತ ಏನು, ಕೂಲಿಯವನ ಬಾಯಲ್ಲಿ ದೊಡ್ಡ ದೊಡ್ಡ ಮಾತುಗಳು ಬರುತ್ತಾ ಇದ್ದಾವಲ್ಲ ಎಂದು ಗದರಿಸಿ ಹೇಳುತ್ತಾನೆ, ಅಲ್ಲಿಂದ ಹೊರಟು ಬರುತ್ತಿರುವಾಗ ಶಾಲೆಯ ಅಧ್ಯಾಪಕರು ಸಿಗುತ್ತಾರೆ. ಈತನ ಕಳಾಹೀನ ಮುಖವನ್ನು ನೋಡಿದ ಅವರು ವಿಷಯವನ್ನು ಕೇಳಿ ತಿಳಿದುಕೊಂಡು, ನಿನ್ನ ಮಗ ಬುದ್ಧಿವಂತ ವಿದ್ಯಾರ್ಥಿ. ಆತನ ಫೀಸ್ ನ ಹಣ ನಾನು ಕೊಡುತ್ತೇನೆ ಎಂದು ಆತನ ಮಗನ ಫೀಸ್ ಹಣ ಕಟ್ಟುತ್ತಾರೆ. ಹುಡುಗ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಾನೆ. ಮುಂದೆ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ, ಸರಕಾರದ ಸಹಾಯಧನವನ್ನು ಪಡೆದುಕೊಂಡು ಇಂಜಿನೀಯರಿಂಗ್ ಪ್ರವೇಶ ಗೈದು ಇಂಜಿನೀಯರಿಂಗ್ ಯಶಸ್ವಿಯಾಗಿ ಮುಗಿಸುತ್ತಾನೆ,

ಇಂಜಿನೀಯರಿಂಗ್ ಮುಗಿಸಿದ ಕೂಡಲೇ ಆತನಿಗೆ ಅಮೇರಿಕಾದಲ್ಲಿ ಕೆಲಸ ಸಿಗುತ್ತದೆ, ಅಲ್ಲಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿ, ಅಲ್ಲಿಂದ ತನ್ನ ತಂದೆಗೆ ಪ್ರತಿ ವರ್ಷ ಪ್ರತಿ ತಿಂಗಳು ಹಣವನ್ನು ಕಳಿಸುತ್ತಾ ಇದನ್ನು,ಹಣ ಕಳಿಸುವಾಗ ತನ್ನ ತಂದೆಗೆ ಒಂದು ಮಾತು ಹೇಳುತಿದ್ದ,ಅಪ್ಪ  ಹಣವನ್ನು ಸುಮ್ನೆ ಖರ್ಚು ಮಾಡಬೇಡ, ಅದನ್ನು ಕೂಡಿಸಿ ಇಡು, ಎಂದು ಹೇಳಿ ಸುಮ್ಮನೆ ಆಗಿಬಿಡುತ್ತಾನೆ.

ಆತ ಇಪ್ಪತ್ತು ವರ್ಷಗಳ ನಂತರ ವಿಚಾರ ಮಾಡಿ, ಅಪ್ಪ ಇಲ್ಲಿಯವರೆಗೆ ನಾನು ನಿನಗೆ ಕಳುಹಿಸಿ ಕೊಟ್ಟಿರುವ ಹಣದಲ್ಲಿ ಸ್ವಲ್ಪ ಹೊಲವನ್ನು ತೆಗೆದುಕೊಂಡು ಇಡು, ಇನ್ನೇನು ಕೆಲವೇ ದಿನಗಳಲ್ಲಿ ನಾನು ಅಮೇರಿಕಾದಿಂದ ಇಂಡಿಯಾ ದೇಶಕ್ಕೆ ಬರುತ್ತೇನೆ ಎಂದು ಹೇಳುತ್ತಾನೆ. ಮಗನ ಆಶೆಯಂತೆ ತಂದೆ, ಐವತ್ತು ಎಕರೆ ಭೂಮಿಯನ್ನು ತೆಗೆದುಕೊಂಡು, ಉಳುಮೆ ಮಾಡಿ ಅದರಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾನೆ. ಮಗ ಅಮೇರಿಕ ದೇಶದಿಂದ ಭಾರತಕ್ಕೆ ಬಂದು, ತಂದೆಗೆ ಹೇಳುತ್ತಾನೆ ಅಪ್ಪ ನಾವು ಕುಟುಂಬವಾ‌ಗಿ ಭಾರತ ದೇಶಕ್ಕೆ ಬಂದಿದ್ದೇವೆ, ನಮ್ಮನ್ನು ನಮ್ಮ ಹೊಲಕ್ಕೆ ಕರೆದು ಕೊಂಡು ಹೋಗು ನಮ್ಮ ಹೊಲವನ್ನು ನೋಡಿ ಖುಷಿ ಪಡುತ್ತೇವೆ ಎಂದು ಹೇಳುತ್ತಾನೆ.

ಹಾಗೆಯೇ ತಂದೆ, ಮಗನನ್ನು ಹೊಲಕ್ಕೆ ಕರೆದು ಕೊಂಡು ಹೋಗುತ್ತಾನೆ, ಆ ಹೊಲಕ್ಕೆ ಹೋದ ಸಂದರ್ಭದಲ್ಲಿ ಕಣ್ಣೆತ್ತಿ ಎಲ್ಲಿಯವರೆಗೆ ನೋಡುತ್ತಾನೆ ಅಲ್ಲಿಯವರೆಗೆ ಹೊಲ ಇರುತ್ತದೆ, ಆವಾಗ ತನ್ನ ಅಪ್ಪನಿಗೆ ಅಪ್ಪ ನೀನು ಇದೇ ಹೊಲದಲ್ಲಿ ಕೂಲಿ ಮಾಡುತ್ತಿದ್ದೆ, ಈವಾಗ ನೀನು ಹೊಲದ ಮಾಲಿಕನಾಗಿ ನಿಂತಿರುವೆ, ಅದು ದೇವರ ಕೃಪೆ ಮತ್ತು ನಿನ್ನ ಸತತ ಶ್ರಮ ಹಾಗೂ ನಿನ್ನ ವಿಧೇಯತೆಯೇ ಕಾರಣ, ದೇವರು ನಮಗೆ ತುಂಬಾ ಆಶೀರ್ವಾದ ಮಾಡಿದ್ದಾನೆ ಎಂದು ಹೇಳುತ್ತಾನೆ.

ಹೇಳುತ್ತಾ ಮುಂದೆ ಕಣ್ಣು ಹಾಯಿಸಿ ಹೊಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ  ಒಬ್ಬ ಮಧ್ಯವಯಸ್ಕ ವ್ಯಕ್ತಿ ಕಳೆ ತೆಗೆಯುವನ್ನು ನೋಡುತ್ತಾನೆ, ಅಪ್ಪ ಈ ವ್ಯಕ್ತಿ ಯನ್ನು ನಾನು ಎಲ್ಲೋ ನೋಡಿದ್ದೇನೆ, ಯಾವಾಗ್ಲೋ ಮಾತಾನಾಡಿಸಿದ್ದೆನೆ ಅನಿಸುತ್ತದೆ, ಈ ವ್ಯಕ್ತಿ ಯಾರು, ಇಲ್ಲಿ ಏಕೆ ಕೆಲಸ ಮಾಡುತ್ತಿರುವ ಎಂದು ಕೇಳುತ್ತಾನೆ.

ಆಗ ತಂದೆ  ಹೇಳುತ್ತಾನೆ, ಈತ ನಮ್ಮ ಯಜಮಾನನ ಮಗ, ನಾವು  ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇವರ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು, ಹೌದು ಅಪ್ಪ ನೀನು ಹೊಲದಲ್ಲಿ ಕೆಲಸ ಮಾಡುತ್ತಿದ್ದಿ, ಆದರೆ ಆ ಯಜಮಾನನು ಏನು ಆದನು ಎಂದು ಮಗ ಕೇಳುವಾಗ. ನೋಡು ಮಗ ಅವರು ಇದ್ದಾಗ ಮಳೆ ಬೆಳೆ ಅಷ್ಟು ಚೆನ್ನಾಗಿ ಆಗಲಿಲ್ಲ, ಮೂರು ವರ್ಷಗಳ ಕಾಲ ಬರಗಾಲ ಬಿದ್ದಿತು, ದುಡಿದವರಿಗೆ ದುಡಿಯುತಿರುವವರಿಗೆ ಸಂಬಳ ಕೊಡಲಾಗದೆ ಹಾಗೂ ತಮ್ಮ ಉಳಿದ ಎಲ್ಲಾ ಬಿಜಿನೇಷ್ ನಲ್ಲಿ ಲಾಸ್ ಆಗಿ ದಿವಾಳಿ ಆದರು, ಕಡೆಗೆ ಅವರು ಸತ್ತಾಗ ಹೆಣ ಸುಡುವುದಕ್ಕೆ ಹಣ ಇಲ್ಲದ ಸಮಯದಲ್ಲಿ, ನಾನು ಹಣ ಕೊಟ್ಟೆ.

ಹಾಗಾಗಿ ಆ ಶ್ರೀಮಂತನ ಮಕ್ಕಳು ನಮ್ಮ ಹೊಲದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಎಂದಾಗ ಮಗನ ಮನಸಿಗೆ ತುಂಬಾ ನೋವಾಯಿತು, ಆಗ ಆತನು ಶ್ರೀಮಂತನ ಮಗನ ನೋಡಿ, ನೋಡಿ ನೀವು ಒಂದು ಕಾಲದಲ್ಲಿ ಈ ಹೊಲಕ್ಕೆ ಯಜಮಾನರು, ಆದರೆ ಈಗ ನೀವು ಕೂಲಿ ಕೆಲಸ ಮಾಡುತ್ತಿರುವುದನ್ನು ನೋಡಿ ನನಗೆ ತುಂಬಾ ನೋವಾಯಿತು, ಎಂದು ಮಗ ಹೇಳುತ್ತಾನೆ. ನೀವು ಒಂದು ಕೆಲಸ ಮಾಡಿ, ನಮ್ಮ ಹೊಲದಲ್ಲಿ 5 ಎಕರೆ ಭೂಮಿಯನ್ನು ತೆಗೆದುಕೊಂಡು ಉಳುಮೆ ಮಾಡಿ, ಅದರಲ್ಲಿ ಬಂದ ಲಾಭವನ್ನು ನೀವೇ ತೆಗೆದುಕೊಂಡು, ನೀವು ಬೆಳೆದು ಉಜ್ವಲವಾದ ನಂತರ ನಮಗೆ ಆ ಐದು ಎಕರೆ ಜಮೀನು ಹಿಂದಿರುಗಿಸಿ ಎಂದು ನಿಂತ ಜಾಗದಲ್ಲೇ ಹೇಳಿ ಕೊಟ್ಟನು‌.

ಸುಮಾರು ವರ್ಷಗಳವರೆಗೆ ಆ ಶ್ರೀಮಂತನ ಮಗ ದುಡಿದು, ಎಲ್ಲಾ ಸಿರಿ ಸಂಪತ್ತು ಗಳಿಸಿ, ಹೊಲವನ್ನು ಹಿಂದಕ್ಕೆ ಕೊಟ್ಟು, ಶ್ರೀಮಂತ ಮನೆತನದ ಮೂಲ ನಮ್ಮದಾಗಿದ್ದರೂ ನಿಮ್ಮಷ್ಟು ಔದಾರ್ಯ ಗುಣ ನಮ್ಮ ಅಪ್ಪನವರು ಹೊಂದಿರಲಿಲ್ಲ, ಹಾಗೆ ನಿಮ್ಮಲ್ಲಿರುವ ವಿದ್ಯೆ ವಿನಯ ನಮ್ಮಲ್ಲಿ ಇರದ ಕಾರಣ ನಾವು ನಾಶ ಆಗಬೇಕಾಗಿತು, ಆದರೆ ನಿಮ್ಮಲ್ಲಿರುವ ವಿದ್ಯೆ ವಿನಯ ಹಾಗೂ ಶ್ರದ್ಧೆ, ಭಕ್ತಿ ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಿಸಿತು. ನಿಮ್ಮ ಔದಾರ್ಯ ಗುಣಕ್ಕೆ ತುಂಬಾ ತುಂಬಾ ಧನ್ಯವಾದಗಳು ಎಂದು ಹೇಳಿ ನಮಸ್ಕರಿಸಿ ತಮ್ಮ ಮನೆಗೆ ಮರಳುತ್ತಾನೆ.

-ಎಚ್.ವ್ಹಿ.ಈಟಿ, ಶಿಕ್ಷಕರು, ಸಾ.ನರೇಗಲ್ಲ.

ಚಿತ್ರ ಕೃಪೆ: ಇಂಟರ್ನೆಟ್ ತಾಣ