ಕಥೆ - ಸವಿ ನೆನಪುಗಳು ಬೇಕು

ಕಥೆ - ಸವಿ ನೆನಪುಗಳು ಬೇಕು

 

ಚಾಲುಕ್ಯ ವೈಭವದ ಬಾದಾಮಿ ಬೆಟ್ಟದ ಮಗ್ಗುಲನ್ನು ತೀಡಿಕೊಂಡು ಪಶ್ಚಿಮದ ಗಾಳಿ ರೊಂಯ್ಯನೆ ಬೀಸುತ್ತಿತ್ತು. ಅದರ ರಭಸಕ್ಕೆ ಅವಳ ಅಮೋಘ ಕೇಶರಾಶಿ ಮುಂಗಾರು ಹನಿ ಸುರಿಸಲು ಮಲೆನಾಡಿನತ್ತ ಹೊರಟ ಕರಿ ಮೇಘದಂತೆ ಚಿಲ್ಲನೆ ಚಿಮ್ಮುತ್ತಲಿದ್ದರೆ, ಪಿನ್ ಹಾಕಿದ್ದರೂ ಜರುಗುವ ಸೀರೆಯ ಸೆರಗು ಅದೀಗ ಬೆಳೆದಿದ್ದ ಮೊಲೆಗಳ ಗಾತ್ರವನ್ನು ರವಿಕೆಯೊಳಗಿಂದಲೇ ಪ್ರದರ್ಶಿಸುತ್ತಲಿತ್ತು. ಅದರ ಪರಿವೇ ಆಕೆಗಿರಲಿಲ್ಲ. ಅವಳ ಕೈಲೊಂದು ಪತ್ರಿಕೆಯಿದೆ. ಅದರಲ್ಲಿರುವ ಕಥೆಯೊಂದನ್ನು ಬರೆದವನು ಪಕ್ಕದಲ್ಲೇ ಕುಳಿತಿದ್ದಾನೆ. ವಿಶೇಷವೆಂದರೆ ಆ ಕಥೆಯೊಳಗಿನ ಎರಡು ಪ್ರೇಮಿಗಳು ಅವರೇ ಆಗಿದ್ದಾರೆ!

 

ಬಾದಾಮಿ ಬೆಟ್ಟದ ಮೇಲಿನ ಗುಹಾಂತರ ದೇವಾಲಯದ ಶಿಲ್ವಕಲೆ ಕಾಲದ ಹೊಡೆತಕ್ಕೆ ಸಿಕ್ಕು ಮಸುಕಾಗುತ್ತಿದೆ. ಅವುಗಳೆದುರಿನ ಕಲ್ಲು ಬೆಂಚಿನ ಮೇಲೆ ಥೇಟು ಶಿಲೆಯಂತೆಯೇ ಕುಳಿತಿದ್ದಾಳೆ ಸುಜಾತ. ಆಕೆಯ ಪಕ್ಕದಲ್ಲಿ  ಕುಳಿತ ಜಗದೀಶನ ದೃಷ್ಟಿ ಒಮ್ಮೆ ಅವಳ ಮುಗ್ಧ ಮೊಗದಲ್ಲಿ ಹುದುಗಿರುವ ತಲ್ಲಣವನ್ನು ಹುಡುಕುತ್ತದೆ. ಮತ್ತೊಮ್ಮೆ ಅಕೆಯ ಕೈಲಿರುವ ಪತ್ರಿಕೆಯನ್ನು ನೋಡುತ್ತಾನೆ. ಇನ್ನೊಮ್ಮೆ ಕಳ್ಳ ನೋಟದಲ್ಲಿ ಗಾಳಿಯ ನೆವಕ್ಕೆ ಗೋಚರಿಸುವ ಆಕೆಯ ಪುಟ್ಟ ಮೊಲೆಗಳ ಗಾತ್ರವನ್ನು ಸವಿಯುತ್ತಾದೆ. ಆದರೆ ಮುಂದೆ....?

 

ಅದುವೇ ತಲ್ಲಣ ಅವನನ್ನು ಕಾಡುತ್ತದೆ. ಯಾರು ಯಾರೋ ಪ್ರವಾಸಿಗರು, ವಿದೇಶೀಯರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತ ಚಲಿಸುತ್ತಿದ್ದಾರೆ. ಪ್ರೇಮಿಗಳೆದೆಯಲ್ಲಿಯೇ ಲಕ್ಷಾಂತರ ಮಾತುಗಳು ಸ್ಛುರಿಸುತ್ತಿದೆ. ಆದರೂ ಹೊರಗೆ ದಿವ್ಯ ಮೌನ.

 

ಜಗದೀಶನಿಗೆ ಒಂದೆಡೆಯ ಸಂಭ್ರಮ. ಕೊನೆಗೂ ತಾನು ದಿನಗಟ್ಟಲೇ ಕಾತರಿಸಿದ ಪ್ರೇಮ ದಕ್ಕಿಯೇ ಹೋಯಿತೇ? ಎಂಬ ಸಂದೇಹಾಸ್ಪದ ಸಂತಸ. ಅಂದು ಬಾದಾಮಿಯ ಬಸ್ ನಿಲ್ದಾಣದಲ್ಲಿ ಸಿಕ್ಕದ್ದ ಸುಜಾತ ಜಗ್ಗೂ... ನಿನ ತಾವ ಒಂದಿಷ್ಟು ಮಾತಾಡೋದದ, ಬಾ ಎಂದವಳೇ ಅವನ ಪ್ರತಿಕ್ರಿಯೆಗೂ ಕಾಯದೇ ಬಿರ ಬಿರನೆ ಹೊರಟೇ ಬಿಟ್ಟದ್ದಳು... ಬೆಟ್ಟದ ಕಡೆಗೆ.

 

ಜಗದೀಶನೂ ಅದನ್ನೆ ಕಾದಿದ್ದ. ಎಷ್ಟು ದಿನವೆಂದು ಸ್ನೇಹಿತೆಯೆಡೆಗುಂಟಾದ ಪ್ರೇಮವನ್ನು ಮನದಲ್ಲೇ ಮಂಥಿಸಿಕೊಂಡು ಚಿಂತಿಸುತ್ತಾ ಕೂರಲೂ ಸಾಧ್ಯ? ಅವನು ಬರೆವ ಅದೆಷ್ಟೋ ಕಥೆಗಳಲ್ಲಿ ಸುಜಾತಳನ್ನೇ ಪರೋಕ್ಷ ಪಾತ್ರವನ್ನಾಗಿಸಿ ಬರೆದರೂ ಯಾಕೋ ಅದವಳ ಗಮನಕ್ಕೆ ಬಂದಂತೆ ಕಂಡು ಬರಲಿಲ್ಲ. ಕೊನೆಗೊಂದು ದಿನ ಸಹನೆ ಮೀರಿ ನಾಯಕಿಯ ಹೆಸರು ಸುಜಾತ ಅಂತಲೂ, ನಾಯಕನ ಹೆಸರು ಜಗದೀಶ ಅಂತಲೂ ಒಂದು ಕಥೆಯನ್ನೂ ಬರೆದೇಬಿಟ್ಟ. ಆ ಕಥೆ ಪತ್ರಿಕೆಯಲ್ಲಿ ಪ್ರಕಟವಾಗಿಯೇ ಹೋಯ್ತು. ಅದುವೇ ಇಂದು ಆಕೆಯ ಕೈಲಿರುವುದು.

 

ಬೆಟ್ಟದ ಮೆಟ್ಟಿಲುಗಳನ್ನೇರಿ ಬಂದು ಸುಜಾತ ಆ ಕಲ್ಲು ಬೆಂಚಿನ ಮೇಲೆ ಕುಳಿತವಳು ಶೂನ್ಯದತ್ತ ದೃಷ್ಟಿ ಹಾಯಿಸಿದ್ದಳು. ಅಷ್ಟೇ ಮತ್ತೆ ಮಾತಿಲ, ಕತೆಯಿಲ. ಅವನಿಗೆ ಕೂರಲೂ ಹೇಳಲಿಲ್ಲ. ಹಾಗೆ ಹೇಳಲದು ಅವಳ ಮನೆಯೇನಲ್ಲವಲ್ಲ? ಹಾಗಂದುಕೊಂಡು ಅವಳಿಂದ ಕೊಂಚ ಜಾಗ ಬಿಟ್ಟು ಪಕ್ಕದಲ್ಲಿ ಕುಳಿತುಕೊಂಡನು ಜಗದೀಶ. ನಂತರ ಉಳಿದುದು ಬರೇ ಮೌನ.

 

ಈ ಸುಜಾತ ಇಷ್ಟು ದಿನವೂ ಮಹಾ ಸಮುದ್ರದಂತೆ ಕಂಡು ಬಂದಿದ್ದಳು. ಅಂತಹುದೊಂದು ಅಗಾಧ ಕಡಲಿನಲ್ಲಿ ತನ್ನ ಪ್ರೇಮದ ಪುಟ್ಟ ಹಾಯಿದೋಣಿಯನ್ನು ತೇಲಿಸಿದ್ದನು ಜಗದೀಶ. ಆದರೆ ಅಲ್ಲಿನ ಮಹಾ ಮಹಾ ಅಲೆಗಳ ಅಬ್ಬರಕ್ಕೆ ಸೋತು ಹೋಗಿದ್ದನವ. ಸುಜಾತಾಳೆಂಬ ಕಡಲು ಈ ನದಿಯನ್ನು ಸೇರಿಸಿಕೊಳ್ಳದೇ ಅವನ ಮನದಲ್ಲಿ ಆಕಾಂಕ್ಷೆಗಳ ನೆರೆಯೆದ್ದಿತ್ತು! ಅದೊಂದು ಭ್ರಮಾಲೊಕದ ಅನಂತ ಬ್ರಹ್ಮಾಂಡ. 

 

ಕೊನೆಗೊಮ್ಮೆ ಮೌನ ಮುರಿದು ಕೇಳಿದನಾತ.... ಸುಜೀ.... ಯಾಕೆ ಕರಕೊಂಡು ಬಂದಿ ಇಲ್ಲಿಗೆ?

 

ಆಗ ನೋಡಿದಳು ಸುಜಿ ಅವನೆಡೆಗೆ. ಅವನ ಕಣ್ಣಲ್ಲೇ ಕಣ್ಣಿಟ್ಟು ಘರ್ಷಿಸಿದಳು. ಅದೊಂದು ತೀಕ್ಷ್ಣ ನೋಟವನ್ನು ಸಹಿಸುವುದು ಅವನಿಂದಾಗಲಿಲ್ಲ. ತನ್ನ ದೃಷ್ಟಿಯನ್ನು ಬೇರೆಡೆಗೆ ಹೊರಳಿಸಿದನು. "ಜಗ್ಗೂ.... ಹಿಂಗ್ಯಾಕ ಕಥೀ ಬರ‍್ದೀ? 

 

ಹಾಗಂತ ಕೇಳಿದವಳ ಧ್ವನಿಯಲ್ಲಿ ಅಸಹನೆಯಿತ್ತೋ? ಕೋಪವಿತ್ತೋ? ಸಂದೇಹವಿತ್ತೋ? ಒಂದೂ ಅರ್ಥವಾಗಲಿಲ್ಲ ಅವನಿಗೆ. "ಸುಜೀ... ನಾನು ಕಥೆಗಾರ. ಹೆಂಗಾರಾ ಕಥಿ ಬರಿಯೋ ಸ್ವಾತಂತ್ರ್ಯ ನಂಗೈತಿ, ನಂಗೆ ತೋಚಿದಂಗೆ ಬರೀತೀನಿ. ಪತ್ರಿಕೆಯವು ಚಲೋ ಇದ್ರೆ ಹಾಕ್ತಾರ. ಇಲ್ಲಾಂದ್ರೆ ಕಸದ ಬುಟ್ಟಿಗೇಸೀತಾರ! ಈ ಕಥಿ ಚಲೋ ಇರೋದ್ರಿಂದ್ಲೇ ಪ್ರಕಟಿಸ್ಯಾರ. ಅದ್ರಾಗೆ ತಪ್ಪೇನೈತಿ? ಎಂದು ಸಮರ್ಥಿಸಿಕೊಂಡನು ಜಗದೀಶ.

 

ಅವಳು ತಲೆ ತಗ್ಗಿಸಿದಳು... "ನೀ ಕಥಿ ಬರಿಯೋದ್ರಾಗ ತಪ್ಪಿಲ್ಲ ಜಗ್ಗೂ... ಆದ್ರ... ನಮ್ಮಿಬ್ಬರದ್ದೇ ಹೆಸರು ಹಾಕಿ, ನಮ್ಮ ಕುಟುಂಬದ್ದೇ ಕಥಿ ಬರೀಬಾರ್ದಾಗಿತ್ತು ನೋಡು. ನಮ್ಮನೀಲೇಲ್ಲಾ ವಿಷಯ ಗೊತ್ತಾತು!

 

"ಏನು? ಏನು ಗೊತ್ತಾಗಿದ್ದು?

 

"ನೀ ನನ್ನ ಬೆನ್ನ ಬಿದ್ದೀ ಅಂತ!

 

".....ಏನಂದ್ರು?

 

"ಏನು ಅನ್ನೂದು? ಕೈ ಕಾಲು ಮುರುದು ಹಾಕೋಣು ಅಂತ ಮಾತಾಡ್ತಿದ್ರು... ನಮ್ ಚಿಕ್ಕಪ್ಪಂದಿರು!

 

ಈಗ ಭಯವಾಯ್ತು ಜಗದೀಶನಿಗೆ. ಏಕೆಂದರೆ ಆಕೆಯ ನಾಲ್ಕೈದು ಮಂದಿ ಚಿಕ್ಕಪ್ಪಂದಿರೆಂದರೆ ಥೇಟ್ ಯಮಧರ್ಮರಿದ್ದಂತೆಯೇ ಇದ್ದರು! "ಕೈ ಕಾಲು ಯಾರದ್ದು ಮುರೀತಾರಂತೆ ಸುಜಿ?

 

ಗೊಳ್ಳನೆ ನಕ್ಕಿದ್ದಳಾಕೆ. "ಪೆದ್ದಾ... ಇನ್ಯಾರದೋ? ನಿಂದೇ! 

 

ಮೆಟ್ಟಿಲಿನಲ್ಲಿ ಕೆಳಗಿನವರೆಗೂ ನೋಡಿದವನ. ಆಕೆಯ ಧೈತ್ಯ ಚಿಕ್ಕಪ್ಪಂದಿರೇನಾದರೂ ಬಂದು ಬಿಡುತ್ತಿದ್ದಾರಾ? ಎಂದು.

 

ಸುಜಿ ಹೇಳಿದಳು... ಆ ಥರಾ ನೇರಾ ನೇರಾ ನಂದೂ ನಿಂದು ಹೆಸರು ಹಾಕಿ, ಊರು ಕೇರಿನೆಲ್ಲಾ ಇದ್ದದ್ದು ಇದ್ಹಾಂಗೆ ಬರೀತಾರೇನು ಹುಚ್ಚ? ನಮ್ಮಮ್ಮ ಯಾವಾಗ್ಲು ಈ ಪತ್ರಿಕೇನ ಓದ್ತಿರ‍್ತಾರ!

 

ಈಗವನೊಳಗಿನ ಭಾನೆಗಳ ನೆರೆ ಉಕ್ಕಿತ್ತು. ಅದುವರೆಗಿನ ಭಾವ ಸಂಗಮದ ಮಹಾ ಸ್ಪೋಟವೊಂದು ಸಂಭವಿಸಿದಂತಾಯ್ತು. "ಮತ್ತ? ಏನ್ ಮಾಡ್ಬೇಕಂತ? ನಿಂಗೆ ಕೊಬ್ಬು ಜಾಸ್ತಿ ಐತಿ. ಬಾಳ ಚೆಂದ ಅದಿ ಅಂತ ಅಹಂಕಾರ! ಬಾಳ ಓದಿರೋ ಹಮ್ಮು. ನಿನ ಮ್ಯಾಗೆ ಪ್ರೀತಿ ಹುಟ್ಟೀತಂದರ ಅದಕ್ಕ ಯಾರು ಕಾರಣ? ನೀನೇ ಹೌದಲ್ಲೊ?  ನಾನು ರಸ್ತೇಲಿ ಅಡ್ಡಗಟ್ಟಿ ಮಾತಾಡ್ಸಿದ್ರೂ ಯಾಕ್ ನಗುನಗ್ತಾ ಮಾತಾಡ್ತಿದ್ದಿ? ಅವತ್ತಾ ನೀ ಬೈದು ಕಳ್ಸಿರುತಿದ್ರೆ ಇದೆಲ್ಲಾ ನಡೀತಿತ್ತೇನ? ನಾ ನಿನ್ನ ಹಿಂದೆ ಬಿದ್ದೇನಿ ಅಂತ ಗೊತ್ತಾದ ಮೇಲೇನೂ ಯಾಕ ಅದು ಸರೀನಾ ತಪ್ಪಾ ಅಂತ ಹೇಳ್ಲಿಲ್ಲ? ನಾನು ಛೇಡಿಸಿದಾಗಲೂ ಯಾಕ ನಗ್ತಾನೇ ಉತ್ತರ ಕೊಡ್ತಿದ್ದಿ?

 

...........

 

ಹೇಳು ಸುಜಿ... ಯಾವ ಯಾವುದೋ ನೆಪ ಇಟಕೊಂಡು ನೀನೇ ನಮ್ಮನೀ ತಂಕ ಬರ‍್ತಿದ್ದಿ? ಅವತ್ತೊಂದ್ ದಿನ ಹೊಸ ಡ್ರೆಸ್ ಹಾಕ್ಕೊಂಡು ಬಂದು ನಿನ್ನಣ್ಣಗ ತೋರಿಸೋ ನೆಪದಾಗ ನನ್ನೆದು ಬಂದ್ಯಲ್ಲ? ಅದ್ಯಾಕ ಸುಜೀ? ಅವನು ನಿನ್ನಣ್ಣ. ನಿಮ್ಮನೀಲೇ ಇರೋನು! ನಾನು ಬಂದಾಗಲೇ ತೋರಿಸ್ಬೇಕಿತ್ತಾ? ಇವನ್ನೆಲ್ಲಾ ಕೇಳಿದ್ರೆ... ಅದೆಲ್ಲಾ ಪ್ರೇಮ ಅಲ್ಲ ಜಗ್ಗೂ, ಸ್ನೇಹ ಅಂತ ಬೂಸಾ ಬಿಡ್ತೀಯ! ನಿನ್ನಂಥಾ ಹುಡ್ಗೀರದೆಲ್ಲಾ ಇದೇ ಗೋಳಾತು ತೆಗಿ. ಲವ್ ಮಾಡೂತಂಕ ಮಾಡೂದು. ಕಡೀಕೆ ಅದು ಸ್ನೇಹ ಅಂತ ಕೈ ಎತ್ತೂದು!

 

"..... ಮೌನವಾಗಿದ್ದಳು ಸುಜಿ.

 

"ಹೌದು, ನಾವು..... ಗಂಡು ಹುಡುಗರಂದ್ರೆ ಹಿಂಗೇ. ಹುಡುಗಿಯರ ಪ್ರೇಮಕ್ಕಾಗಿ ಅಲೀತೀವಿ. ಯಾವ ಹುಡುಗಿ ಸಿಕ್ಕರೂ ಅವ್ಳ ತಾವ ಪ್ರೇಮ ಯಾಚನೆ ಮಾಡ್ತೇವಿ. ಅದರೆ ನಿಮಾಗ್ಯಾಕ ಪ್ರೀತೀನೇ ಹುಟ್ಟವಲ್ದು? ಹೆಣ್ಣಿನ ಮನಸು ಮೃದು ಅಂತಾರ. ಆದರೆ ಯಾಕ ಇಷ್ಟೊಂದು ಕಠೋರವಾಗಿ ವರ್ತಿಸ್ತೀರಿ?"

 

"ಜಗ್ಗೂ.... ನಾ ಏನು ಮಾಡ್ಬೇಕಾಗಿತ್ತು ಅಂತಿ?

 

ನನ್ನ ಮ್ಯಾಗೆ ಪ್ರೀತಿ ಐತೋ ಇಲ್ವೋ ಅಂತ ಹೇಳ್ಬೇಕಿತ್ತು

 

"ನಾ... ನಾ ಹೆಂಗೆ ಹೇಳ್ಲಿ ಜಗ್ಗೂ.... ಹೆಣ್ಣು ಹುಡುಗಿ ನಾ! ನೀ ಗಂಡ್ಸು ತಾನೇ? ನೀನೇ ಯಾಕ ಕೇಳ್ಲಿಲ್ಲ?

 

ಕಥೀಲೇ ಎಲ್ಲನೂ ಹೇಳಿದೀನಲ್ಲ!

 

ಇಷ್ಟ್ ದೊಡ್ಡ ಕಥಿನೇ ಬರ‍್ದೀದಿ... ಚಿಕ್ಕದೊಂದು ಪತ್ರ ಬರಿಯೋಕೆ ತೊಚಲಿಲ್ವೇನು ನಿಂಗೆ?

 

...........

 

"ಜಗ್ಗೂ... ನೀ ಅಂದಿದ್ದೆಲ್ಲಾ ಖರೇನಾ ಅದೆ ಬಿಡು. ನಾನಾಗ್ಲೀ, ನನ್ನಂಥಾ ಹುಡುಗೀರಾಗ್ಲಿ ನೀ ಅಂದ್ಹಂಗೇ ಮಡೂದೂ ಖರೆ. ಅದ್ರೆ... ಹುಡುಗರು ನಮ್ ಪರಿಸ್ಥಿತೀನ ಅರ್ಥಾನೇ ಮಾಡಿಕಳ್ಳಲ್ಲ ತೆಗಿ. ನಮ್ ಸಂಕಷ್ಟ ಏನೂಂತ ಅರ್ಥನೇ ಆಗುವಲ್ದು ನಿಮಿಗೆ. ಈ ಹುಡ್ಗೀರ್ ಅರ್ಥ ಆಗವಲ್ರು ಅಂತ ಪ್ರವರ ಶುರು ಮಾಡ್ತೀರ. ನಿಜ ಹೇಳ್ಲಾ ಜಗ್ಗೂ, ನನಗೂ ನಿನ ಮ್ಯಾಲೆ ಭಾಳ ಮನಸೈತೆ. ನಾನೂ ತುಂಬಾನೇ ಪ್ರೀತಿಸ್ತಿದ್ದೀನಿ. ಐ ಲವ್ ಯೂ ಜಗ್ಗೂ... ಆದ್ರೆ ಹೆಂಗ ಹೇಳ್ಕೊಳ್ಳಲಿ ನನ್ನ ಮನಸಿನಾಗಿನ ಮಾತ? ಒಂದು ಸರ್ತಿ ಮಾತು ಕೊಟ್ಟ ಮ್ಯಾಗೆ ಅದನ್ನು ಮತ್ತ ವಾಪಸ ಪಡೀಬಾರದು ನೋಡು. ಅದ್ಕೇ ಒಳಗೊಳಗಾ ವ್ಯಥಿ ಪಟ್ಕೋತ ಕುಂತೇನಿ. ನಂಗೆ ಮಾತ್ರ ನಿನ ಮ್ಯಾಲೆ ಪ್ರೀತೀನೇ ಇಲ್ಲಂತ ತಿಳ್ದೀಯೇನು? ಹುಚ್ಚ.

 

"ಮತ್ತ? ಯಾಕ ಈ ದೂರ ?"

 

"ಯಾಕಂದರಾ? ನಿನ್ನ ಸಂಗಡವೇ ಓಡಿ ಬಂದ್ ಬಿಡ್ಬೇಕಂತ ಅಂದುಕೊಂಡೀಯೇನು? ಅದು ಅಷ್ಟೊಂದು ಸುಲಭವಾಗಿ ಆಗುತ್ತಂತ ಭ್ರಮೇನಾ? ನಮ್ದೂ ಸಂಸ್ಕಾರ ಬ್ಯಾರೇನೇ ಐತಿ ಜಗೂ? ಅದನ್ನೆಲ್ಲಾ ಮೀರಿ ನಿನ್ನ ಕೈ ಹಿಡಿಯೋದಕ್ಕೆ ನಮ್ಮನೇಲಿ ಒಪ್ಪೋದೇ ಇಲ್ಲ. ನಾನೇನಾರ ಈ ವಿಷಯ ಎತ್ತಿದರ ಕಾಲ ಮುರದು ಕೈಲಿ ಕೊಡ್ತಾರ. ಹೋಗ್ಲಿ ನಿನ್ನ ಕೂಡ ಎಲ್ಯಾರಾ ಓಡಿಯೇ ಹೋಗೂಣು ಅಂದ್ರೆ ಅದೂ ನಡೆಯಂಗಿಲ್ಲ. ಯಾಕಂದರ ನಮ್ಮನಿಯವ್ರಿಗೂ ನಿಮ್ಮನಿಯವ್ರಿಗೂ ದ್ವೇಶ ಹೊಗೆಯಾಡ್ತಾ ಐತಿ. ಇಂಥಾ ಪರಿಸ್ಥಿತೀಲಿ ನಾವಿಬ್ಬರೂ ಏನಾರಾ ಓಡಿ ಹೋದ್ವಿ ಅಂದ್ರ ಊರಿಗೆ ಊರೇ ಕುರುಕ್ಷೇತ್ರ ಆಗುತ್ತೆ ಜಗ್ಗೂ. ಇದನ್ನೆಲ್ಲಾ ಯೋಚನೆ ಮಾಡೀಯೇನು? ನಮ್ಮಿಬ್ಬರ ಪ್ರೇತಿ - ಸಂತೋಷ - ಸುಖಕ್ಕಾಗಿ ಇಡೀ ಊರಿನ ನೆಮ್ದಿ ಹಾಳು ಮಾಡೋನೇನು?

 

ಅದಕ್ಕೆಲ್ಲಾ ಅವನಲ್ಲಿ ಉತ್ತರ ಇರಲಿಲ್ಲ. ಅವಳ ಪ್ರಶ್ನೆಗಳಿಗೆ ಉತ್ತರಗಳನ್ನು ತಡಕಾಡುತ್ತಾ ಹೋದಂತೆಲ್ಲಾ ಆಕೆ ಕಡಲಾಗುತ್ತಾ ಹೋದಳು. ಆತನ ಹೃದಯದ ಭಾನೆಗಳು ಮಾತ್ರ ಕಡಲು ಸೇರಿಸದ ನದಿಯಂತೆ ನೆರೆಯುಕ್ಕಿ ಬೋರ್ಗರೆಯ ತೊಡಗಿತು. "ಸುಜೀ... ಹಂಗಾರ... ನಮ್ಮ ಪ್ರೀತಿ...? ಎನ್ನುವಾಗ ಜಗದೀಶನ ಧ್ವನಿ ಗದ್ಗದಿತವಾಗಿತ್ತು.

 

"ಯಾಕ ಸಾಧ್ಯ ಇಲ್ಲ? ಖಂಡಿತಾ ಸಾಧ್ಯ ಐತಿ. ಅದು ಹೆಂಗಂದ್ರ ಹೃದಯಗಳ ಮದುವಿ ! ಭಾವನೆಗಳ ಮಿಲನ... ಮನಸ್ಸುಗಳ ಮೈಥುನ.  ಎಲ್ಲಾ ಪ್ರೇಮಿಗಳೂ ಅದನ್ನೇ ಮಾಡಿಕೊಳ್ತಾರ. ನಾವೂ ಹಂಗೇ ಮಾಡೋಣು.

 

..........

 

ಜಗ್ಗು, ನಾ ಸಾಯೂ ತಂಕಾನೂ ನಿನ್ನ ಬಿಂಬ ನನ್ನೊಳಗೆ ಇದ್ದೇ ಇರತೈತಿ. ನನ್ನ ಹೃದಯದೊಳಗ ಒಂದು ಮೂಲಿ ನಿನಗಂತಾ ಮೀಸಲಾಗಿರತೈತಿ ಜಗ್ಗು. ನಿನ್ನ ಮನಸ್ಸಿನ್ಯಾಗೂ ನಾನೇ ಇರತೇನೇಳು. ದೇಹ ಸಂಬಂಧ ರಾತ್ರಿ ಬೆಳಗಾಗುದರಾಗ ಮುಗಿದೇ ಹೋಗಿರತೈತಿ. ಆದರೆ ಮನಸಿನ ಸಂಬಂಧ ದೇಹ ಅಳಿದ್ರೂ ಮುಗಿಯೋದೇ ಇಲ್ಲ.

 

ಅವಳು ಹೇಳುತ್ತಾ ಹೋದಂತೆ ಜಗದೀಶನ ಕಂಗಳು ನೀರಾಗಿದ್ದವು. ಸುಜಾತಳನ್ನು ತಾನು ಎಷ್ಟೊಂದು ಪ್ರೀತಿಸಿದ್ದೆನು? ಎಷ್ಟೊಂದು ಆರಾಧಿಸಿದ್ದೆನು? ಇಂಥ ಆರಾಧನಮಯ ಧಕ್ಕಿತಾ? ಅಥವಾ ಕೈ ತಪ್ಪಿ ಹೋಯ್ತಾ? ಅವನಿಗೆ ತಿಳಿಯದಂತಹ ಅನುಭವ. ಅವನ ಕಂಗಳ ಹನಿಗಳೆರಡು ಅರಿವಿಲ್ಲದೆಯೇ ಕೆನ್ನೆಯ ಮೇಲಿಳಿದವು.

 

"ಏ.... ಯಾಕ? ಯಾಕ ಜಗ್ಗೂ ಕಣ್ಣೀರು? ನೀ ಎಷ್ಟೆಲ್ಲಾ ಕಥಿ  ಬರ‍್ದೀಯಲ್ಲೋ? ಮನುಷ್ಯನ ಪ್ರೀತಿ, ದ್ವೇಷ, ಮೋಸ, ವಂಚನೆಗಳನ್ನೆಲ್ಲಾ ಎಳ್ಳು ಹಿಂಡಿ ಎಣ್ಣೆ ತೆಗೆದಾಂಗೆ ಬರೀತಿಯಲ್ಲೋ. ಈಗ ನೀನೇ ಹಿಂಗ ಅಳಾಕ ಕುಂತ್ರೆ ಹೆಂಗಂತೀನಿ? ಹೆಣ್ಣೆಂಬೊ ನಾನೇ ಎಷ್ಟು ದೈರ್ಯವಾಗಿದ್ದೇನಿ ನೋಡು. ಅಳಬಾರ‍್ದಾ ಮತ್ತ!

 

ಅವನಾಡಲು ಯಾವ ಮಾತುಗಳೂ ಇರಲೇ ಇಲ್ಲ.

 

ಸುಜಾತ ಸರಿದು ಈಗ ಅವನ ಹೊದ್ದಿಗೇ ಬಂದು ಮೈ ತಾಗಿಸಿ ಕುಳಿತುಕೊಂಡಳು. ಈಗಲೂ ಆಕೆಯ ಹಾರುವ ಸೆರಗಿನೊಳಗಿಂದ ಸ್ತನಗಳ ಮುಗ್ಧ ಭಾಗ ಗೋಚರಿಸುತ್ತಲಿತ್ತು. ಆದರೆ ಮೊದಲಿನ ಕುತೂಹಲವಿಲ್ಲ. ಇನ್ನಿವಳು ತನ್ನವಳಲ್ಲ ಎಂಬ ಭಾವ. 

 

"ಸುಜೀ.... ನಾವು.... ದೂರಾಗಲೇ ಬೇಕಾ ಸುಜೀ...?

 

"ಬೇರಾಗುದರಲ್ಲೇ ಸಾನಿಧ್ಯ ಕಂಡು, ಸಾಂಗತ್ಯದಲ್ಲೇ ಪ್ರೇಮದ ಸಾಕ್ಷಾತ್ಕಾರವಾದ ಮೇಲೆ ದೂರ ಹತ್ತಿರಗಳ ಆಸ್ಥಿತ್ವ ಎಲ್ಲಿಯದು ಜಗ್ಗು? ಶಾಶ್ವತವಲ್ಲದ ದೇಹ ಮಾತ್ರವೇ ದೂರಾಗಬಲ್ಲುದೇ ವಿನಃ ಮನಸ್ಸಲ್ಲವಲ್ಲ? ನಿನ್ನೊಳಗೆ ನಾ.... ನನ್ನೊಳಗ ನೀ ಗೂಡು ಕಟ್ಟಿದ ಮ್ಯಾಲೆ ಒಬ್ಬರೊಳಗೊಬ್ಬರು ಇದ್ದೇ ಇರತೇವಿ!

 

ಮತ್ತೊಂದು ಮೌನದ ಚಂಡಮಾರುತ ಅವರನ್ನಾವರಿಸಿತು. ಪ್ರವಾಸಿಗರ್ಯಾರೂ ಅಲ್ಲಿರಲಿಲ್ಲ. ಜಗದೀಶನ ಕೆನ್ನೆಯ ಮೇಲಿನ ಕಣ್ಣೀರ 

 

ಹನಿಗಳು ಸಂಜೆಯ ಬಿಸಿಲ ಕಿರಣಗಳಿಗೆ ಮಿನುಗುತ್ತಿದ್ದವು. ತನ್ನ ನಯವಾದ ಬೆರಳಿಂದ ಅವನ್ನು ಒರೆಸಿದ ಸುಜಾತ "ಬಾಳ ಮನಸ್ಸಿಗೆ ಚಿಂತೆ ಹಚ್ಕೋಬ್ಯಾಡ? ಸಾಯೂ ಮಟ ನಾ ನಿನ್ನೇ ನೆನಿಸಿಕೋತ ಇರೆನಿ! ನೀನೂ ಮರೀಬಾರದಾ ಮತ್ತ! ಎಂದಳು.

 

ಸರಿಯೆಂಬಂತೆ ತಲೆಯಾಡಿಸಿದನವ.

 

"ಒಳ್ಳೆಯ ಹುಡುಗ ಎಂದವಳು ಬಾಗಿ ಅವನ ಕೆನ್ನೆಗೊಂದು ಮುತ್ತನ್ನಿತ್ತು ಈಗ ದುಃಖ ಎಲ್ಲಾ ಹೊಂಟೇ ಹೋಗಿರಬೇಕಲ್ಲ? ಎಂದು ಕಿರು ನಕ್ಕಳು.

 

ಅವನ ತುಟಿಯಲ್ಲೂ ಕಿರು ನಗು. ನಂತರ ಇಬ್ಬರೂ ಮೆಟ್ಟಲಿಳಿಯ ತೊಡಗಿದರು. ಸುಜಾತ ಆತನ ಕೈ ಹಿಡಿದುಕೊಂಡು... "ಜಗ್ಗೂ... ನನ್ನನ್ನ ಮರೀಬಾರದು ಜಗ್ಗು... ಎಂದು ವಿನಮ್ರಳಾಗಿ ವಿನಂತಿಸಿದಳು.

 

"ಇಲ್ಲ ಸುಜೀ... ಹ್ಯಾಂಗ ಮರೆಯಲಿ ನಿನ್ನ?

 

"ಮತ್ತ.. ಇದನ್ನೂ ಕಥಿ ಗಿಥಿ ಬರ‍್ದೀಯ ಜೋಕೆ.... ನೇರವಾಗಿ ಅಲ್ಲಾಂದ್ರೂ ಪರೋಕ್ಷವಾಗಿಯೂ ನೀ ಬರೀಬಾರ‍್ದು. ಹಂಗೇನಾದ್ರು ಬರ‍್ದಿ ಅಂತಾಂದ್ರೆ ಮತ್ತೆಂದರಾ ಸಿಕ್ಕರೆ ನಾ ಮಾತೆ ಆಡಿಸಂಗಿಲ್ಲ ನೋಡು!

 

".....ಇಲ್ಲ ಬಿಡು...  ಬರಿಯೂದಿಲ್ಲ!

 

"ಇನ್ನೊಂದ್ ವಿಷ್ಯ ಗೊತ್ತಾ? ನಿನ್ನ ಕಥಿ ದೆಸೆಯಿಂದ ನಂಗೆ ಮದ್ವಿ ಲಗೂನೆ ಆಗಾಕ ಹತ್ತೈತಿ! ನನ್ನ ಮದ್ವಿ ಬೇಗ ಮಾಡ್ತಾರಂತ. ಆಗ್ಲೇ ಹುಡುಗನ್ನೂ ನೋಡ್ಯಾರಂತ!

 

...............

 

ನಂಗೊಂದು ಮಾತು ಕೊಡು ಜಗ್ಗೂ.

 

"....ಏನು?

 

"ಈ ವರ್ಷನೇ ನೀನೂ ಮದ್ವಿ ಆಗ್ಬೇಕು!

 

ಗಾಬರಿಯಾದನು ಜಗದೀಶ. "ಅದೂ.... ಅದೂ...

 

"ನನ್ಮೇಲಾಣೆ. ಆಗ್ತಿ ಇಲ್ಲೋ?

 

"ಹ್ಞುಂ

 

"ನನಗೆ ಗಂಡು ಮಗುವಾದ್ರೆ ನಿನ್ ಹೆಸರೇ ಇಡ್ತೀನಿ. ಹಂಗೇ ನಿನಗೆ ಹೆಣ್ಣು ಮಗುವಾದ್ರೆ ನನ್ ಹೆಸರೇ ಇಡ್ಬೇಕು. ಹಂಗಾದರೂ ನಮಿಗೆ ಪ್ರಿಯರಾದವರ ಹೆಸರನ್ನು ಸಾಯೂ ತಂಕಾನೂ ಕರೀತಿರಬಹುದು.

 

" ....ಹ್ಞುಂ

 

ಸಂತಸಗೊಂಡಳಾಕೆ. ಅಲ್ಲಿಗೆ ಬೆಟ್ಟದ ಮೆಟ್ಟಿಲುಗಳೆಲ್ಲಾ ಖಾಲಿಯಾಗಿದ್ದವು. ಅವನ ಮನಸ್ಸು ಹಾಗೂ ಸೂರ್ಯನ ಬಿಸಿಲೂ ಸಹ !

 

* * *

 

ಅದರ ನಂತರದ್ದೆಲ್ಲಾ ಗಾಳಿಗೆ ಸಿಕ್ಕ ಕಾದಂಬರಿಯ ಪುಟಗಳಿಂತೆ ತಿರುಗಿ ಹೋದವು. ಜಗದೀಶ ಅವಳ ಮದುವೆಯ ಮುನ್ನವೇ ಕೆಲಸ ಹಿಡಿದು ಬೆಂಗಳೂರು ಸೇರಿದ. ಕಥೆ ಬರೆಯುವುದು ಕಡಿಮೆಯಾಗಿ ಡೈರಿಯ ಪುಟಗಳು ತುಂಬತೊಡಗಿದವು. ಸುಜಾತಳ ಮದುವೆಯಾಯ್ತೆಂದು ಸುದ್ದಿ ಬಂತು. ಮದುವೆಯ ಕರೆಯೋಲೆ ಕೊಡಲು ಇವನನ್ನು ತುಂಬಾ ಹುಡುಕಿದಳೆಂಬ ವರ್ತಮಾನವೂ ಸಿಕ್ಕಿತು. ಇವನಿಗೂ ಮನೆಯಲ್ಲಿ ಚೆಂದದೊಂದು ಹುಡುಗಿ ನೋಡಿದರು. ಸುಜಾತಳಿಗೆ ಮಾತು ನೀಡಿದ್ದರಿಂದ ಮದುವೆಯಾಗಲೇ ಬೇಕಾಯ್ತು. ವರ್ಷವೊಂದು ಉರುಳಿದಾಗ ಹೆಣ್ಣು ಮಗುವಿನ ತಂದೆಯೂ ಆದನು.

 

 * * *

 

ನಾಲ್ಕಾರು ವರ್ಷಗಳು ಗರಿಸಿಯೇ ಹೋದವು.

 

ಜಗದೀಶನೊಮ್ಮೆ ಹೆಂಡತಿ ಮಗಳೊಂದಿಗೆ ಬಾದಾಮಿಗೆ ಹೋದ ಸಮಯಕ್ಕೇ ಸುಜಾತ ಸಹ ತವರಿಗೆ ಬಂದಿದ್ದಳು. ಇವನೂ ಬಂದಿರುವ ವಿಷಯವನ್ನು ಕೇಳಿ ಸಂಭ್ರಮಿಸಿ ಹೋಗಿದ್ದಳು. ಅದು ಹೇಗೋ ಇವನ ಮೊಬೈಲ್ ಸಂಖ್ಯೆ ಸಂಪಾದಿಸಿ ಬಾದಾಮಿ ಬೆಟ್ಟಕ್ಕೆ ಸಂಜೆ ನಾಲ್ಕಕ್ಕೆ ತಪ್ಪದೇ ಬರುವಂತೆ ಸಂದೇಶ ಕಳಿಸಿದಳು. ಜಗದೀಶ ತನ್ನ ಮೂರು ವರ್ಷದ ಮಗಳನ್ನು ಕರೆದುಕೊಂಡು ಹೋದನು.

 

ಮತ್ತದೇ ಕಲ್ಲು ಬೆಂಚಿನ ಮೇಲೆ ಕುಳಿತು ಪುಟ್ಟ ಹುಡುಗಿಯ ತೊದಲು ಪ್ರಶ್ನೆಗಳಿಗೆ ಉತ್ತರಿಸುತ್ತಲಿರಲು ಕೆಳಗಿನ ಮೆಟ್ಟಿಲಲ್ಲಿ ಕಂಡು ಬಂದಳು ಸುಜಾತ. ಕಂಕುಳಲ್ಲಿ ಮೂರು ವರ್ಷದ ಗಂಡು ಮಗು! ಮನೆಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಬಂದಿದ್ದಳು. ಆಕೆ ಹತ್ತಿರ ಬಂದು ಮುಗುಳ್ನಕ್ಕಾಗ ಅದೇನೋ ರೋಮಾಂಚನ. ಹಳೆಯದೆಲ್ಲಾ ಮರುಕಳಿಸಿದಂತೆ ಅನುಭವ.

 

ಬಂದು ಇವನ ಪಕ್ಕದಲ್ಲೇ ಕುಳಿತುಕೊಂಡಳು ಸುಜಾತ. ಅಂದಿನ ತಂಗಾಳಿ ಮತ್ತೆ ಇವರನ್ನು ನೆನಪಿಸಿಕೊಂಡಂತೆ ಜೋರಾಗಿ ಬೀಸತೊಡಗಿತು. "ಜಗ್ಗೂ... ಆರಾಮಾ?" ಕೇಳಿದಳು ಸುಜಿ. 

 

ಆಕೆಯ ಧನಿಯಾಗಲೀ ಸೌಂದರ್ಯವಾಗಲಿ ಕಿಂಚಿತ್ತು ಮುಕ್ಕಾಗಿರಲಿಲ್ಲ. ಬೀಸುವ ಗಾಳಿಗೆ ಹಿಂದಿನಂತೆಯೇ ಆಕೆಯ ಸೆರಗು ಹಾರುತ್ತಲಿತ್ತು. ತನ್ನ ಸಲ್ಲಾಪ್ಪಕ್ಕೆ ವೀಣೆಯಾಗಬೇಕಾಗಿದ್ದ ಅವಳೆದೆಯ ಸುಂದರಾಂಗಗಳು ಇನ್ಯಾರದೋ ಚುಂಬನದ ಹೆಜ್ಜೆಗೆ ಹಾದಿಯಾಗಿ, ಪ್ರಣಯದ ಪರಿಣಾಮದ ಹಸುಳೆಗೆ ಹಾಲೂಡಿಸಿ ಮೊದಲಿಗಿಂತಲೂ ಬಲಿತಿದ್ದವು. ಆದರೆ ಅಲ್ಲೀಗ ಕಂಡುದು ಹಳೆಯ ಪ್ರೇಮಿಯಲ್ಲ ದೇವತೆಯಾಗಿ ಕಂಡ ಪರಸ್ತ್ರೀ!.

 

ಯಾಕ ಜಗ್ಗು.... ನನ ಮೇಲಿನ ಕೋಪ ಇನ್ನೂ ಹೋಗಿಲ್ಲೇನು?

 

"ಇಲ್ವಲ್ಲ... ನೀ ಚೆನ್ನಾಗಿದ್ದೀಯಾ?

 

"ಅದೇನಿ... ಬೆಂಗಳೂರು ಭಾಷೇನೇ ಕಲ್ತು ಬಿಟ್ಟೀಯಲ್ಲೋ?

 

"ಹುಂ, ಐದು ವರ್ಷ ಆಯ್ತಲ್ಲ ಅಲ್ಲಿ ಹೋಗಿ.

 

ಆಕೆ ಜಗದೀಶನ ಮಗಳನ್ನು ಎತ್ತಿ ತೊಡೆಯ ಮೇಲೆ ಕೂರಿಸಿಕೊಂಡು ಜಗ್ಗು ಜಗ್ಗು... ಎಷ್ಟು ಚೆಂದಾದ ಹುಡುಗೀನ ಕೊಟ್ಟೀಯಲ್ಲೊ ನಿನ್ನ ಹೆಂಡ್ತೀಗೆ. ನನಗೆ ಹೆಣ್ಮಕ್ಕಳಂದರ ಪ್ರಾಣ. ನನ ಗಂಡ ಎರಡಕ್ಕ ಎರಡೂ ಗಂಡೇ ಕೊಟ್ಟಾನ! ನಾನ್ ನಿನ್ನೇ ಮದುವಿ ಆಗಿದ್ರೆ ಚಲೋ ಇತ್ತು ನೋಡು! ಎಂದು ಹೇಳಿ ಅವಳಷ್ಟಕ್ಕೆ ಅವಳೇ ನಕ್ಕಳು.

 

ಅವಳ ನಿರ್ಭಯ ಮಾತಿಗೆ ಬೆರಗಾದನವ. ಅವಳೊಂದಿಷ್ಟು ಸಿಹಿ ಪದಾರ್ಥ ತಂದಿದ್ದಳು. ಅದನ್ನು ನೀಡುತ್ತಾ "ನಿನಗ ಬದುಕಿನಾಗಂತೂ ಸಿಹಿ ನೀಡಲಿಲ್ಲ... ಈಗಾರ ಹಿಡಿ ಎಂದಳು. ನಂತರ ಅವನ ಮಗಳಲ್ಲಿ "ಪುಟ್ಟೀ ನಿನ್ನ ಹೆಸರೇನ? ಎಂದು ಕೇಳಿದಳು.

 

ತೊದಲು ನುಡಿಯಲ್ಲಿ "ಸುಜಾತ! ಎಂದಿತು ಮಗು.

 

ಸುಜಾತಳ ಮೊಗವರಳಿತು. ಸಂತೃಪ್ತಿಯಲ್ಲಿ ಜಗ್ಗನನ್ನೊಮ್ಮೆ ನೋಡಿದಳು. ಕಿರು ನಕ್ಕನು ಜಗದೀಶ.

 

ಅವನು ಆಕೆಯ ಮಗುವನ್ನು ಎತ್ತಿಕೊಂಡು "ನಿನ್ನ ಹೆಸತೇನು ಮರಿ? ಎಂದು ಕೇಳಿದನು.

 

"ವಿನಯ್ ಎಂದಿರು ಮಗು.

 

ಮೊದಲು ಆಘಾತವುಂಟಾಯ್ತು ಜಗದೀಶನಿಗೆ. ಅಂದು ತಾನೇ ಹೇಳಿದ ಮಾತನ್ನು ಮರೆತಳೇ ಸುಜಿ? ಅಥವಾ ತನ್ನನ್ನೇ ಮರೆತಳೇ? 

 

"ಅವರಪ್ಪನಿಗೆ ಅದೇ ಇಷ್ಟ ಆತು ಜಗ್ಗು. ನಂಗೂ ಇಷ್ಟ ಆತು. ಅದನ್ನೇ ಇಟ್ವಿ! ಎಂದಳು ಸುಜಿ.

 

"ನಿನ್ನ ತಮ್ಮನ ಹೆಸರೇನು ಮರಿ? ವಿನಯ್‌ನನ್ನು ಕೇಳಿದನು ಜಗ್ಗು.

 

"ನನ್ನ.... ತಮ್ಮನ..... ಹೆಸರು.... ಹೃತಿಕ್!

 

ಈಗ ಮಾತ್ರ ಜಗದೀಶನಿಗೆ ನಿಜವಾಗಿಯೂ ಅಘಾತವಾಯ್ತು. ಅಂದರೆ.... ಈಕೆ... ಸುಮ್ಮನೇ ಹೇಳಿದ್ದು ಅಂದು... ಪ್ರೀತಿಯ ನಾಟಕವಾಡಿದ್ದಾಳೆ. ದೂರಾಗುವ ನೆಪಕ್ಕೊಂದು ಸಾಂತ್ವನದ ಸೋಗು ಹಾಕಿದವಳು! ಬಾಯಲ್ಲಿದ್ದ ಸಿಹಿ ಕಹಿಯಾಗತೊಡಗಿತು. ಪೆಚ್ಚಾಗಿ ಕುಳಿತನವ

 

ಅದನ್ನಾಕೆ ಗಮನಿಸದೆ ಇರಲಿಲ್ಲ. "ಜಗ್ಗು... ಯಾಕ? ....ಯಾಕ? ... ಒಂದ್ ರೀತಿ ಆದಿ?

 

"ಏನಿಲ್ಲ ತಲೆ ತಗ್ಗಿಸಿದನವ.

 

"ಓ... ನನ್ನ ಮಕ್ಕಳಿಗೆ ನಿನ್ನ ಹೆಸರ್ಯಾಕಿಡಲಿಲ್ಲ ಅಂತಾನಾ? ಏನ್ ಮಾಡಲಿ ಜಗ್ಗು. ನಿನ್ನಷ್ಟು ನಾ ಭಾಗ್ಯಶಾಲಿ ಅಲ್ಲ ನೋಡು. ನಿನ್ನ ಹೆಸರನ್ನೇ ನನ ಮಗಂಗೆ ಇಟಗೊಂಡು ಕ್ಷಣ ಕ್ಷಣಕ್ಕೂ ಜಗ್ಗು ಜಗ್ಗು ಅಂದ್ಕೋತ ಇರಬೇಕಂತ ನಾನೆಷ್ಟು ಆಸೆ ಹೊತ್ತಿದ್ನಿ ಗೊತ್ತಾ? ಆದರ... ನಂಗೆ ಸಿಕ್ಕ ಗಂಡನ ಹೆಸರೇ ನಿಂದು! ಜಗದೀಶ್ ಅಂತ. ಅಪ್ಪನ ಹೆಸರನ್ನೇ ಮಗನಿಗೂ ಹ್ಯಾಂಗಿಡಲಿ ಜಗ್ಗು?

 

ಅವಕ್ಕಾಗಿ ಅವಳನ್ನೇ ನೋಡುತ್ತಿದ್ದುಬಿಟ್ಟನವ.

 

"ಯಾಕ ಜಗ್ಗು... ಐದು ವರ್ಷದಿಂದ್ಲೂ ಒಂದಾರ ಕಥಿ ಬಂದೇ ಇಲ್ಲ ನಿಂದು? ನಮ್ದೇ ಒಂದು ಕಥಿ ಬರೀಯಲ್ಲ?! ಎಂದಳಾಕೆ.

 

 

ಮನೆಗೆ ಮರಳಿದವನೇ ಐದು ವರ್ಷದ ನಂತರ ಅವನೊಂದು ಕಥೆ ಬರೆಯಲು ತೊಡಗಿದ.