ಕದಂಬ ವೃಕ್ಷದ ಮನಸೂರೆಗೊಳ್ಳುವ ಪುಷ್ಪ

ಕದಂಬ ವೃಕ್ಷದ ಮನಸೂರೆಗೊಳ್ಳುವ ಪುಷ್ಪ

ಇದು ನಮ್ಮ ಮನೆಯ ಎದುರಿಗಿರುವ ಕದಂಬ ವೃಕ್ಷ;  6 ವರ್ಷಗಳ ಹಿಂದೆ ಹಾಕಿದ್ದು. ತಂದಾಗ ಕೇವಲ 2 ಅಡಿಯಿದ್ದ ಸಸಿ ಈಗ ಇಪ್ಪತ್ತು ಅಡಿಗೂ ಮೀರಿ ಬೆಳೆದು ನಿಂತಿದೆ ! ಕದಂಬ ವೃಕ್ಷ ಹಾಗೂ ಅದರಲ್ಲಿ ಬೆಳೆಯುವ ಚೆಂಡಿನಾಕೃತಿಯ ಮನಮೋಹಕ ಪುಷ್ಪದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲಿರುವೆ.

* ಪಶ್ಚಿಮ ಬಂಗಾಳ ಮೂಲದ ಈ ಮರ ವರ್ಷ ಪೂರ್ತಿ ಹಚ್ಚ ಹಸಿರಾಗಿ ನಳನಳಿಸುತ್ತಾ ಇದ್ದು ಮನಸ್ಸಿಗೆ ಮುದ ನೀಡುತ್ತದೆ; ಪರಿಸರಕ್ಕೆ ತಂಪು, ಆಕರ್ಷಕವಾದ ಬಂಗಾರದ ಉಂಡೆಯಂತೆ ಕಾಣುವ ಈ ಹೂವುಗಳಿಗೆ ಸಾವಿರಾರು ಜೇನು ನೊಣಗಳು ಮುತ್ತುತ್ತವೆ! ಒಂದು ವಿಶಿಷ್ಟ ಜಾತಿಯ ಪತಂಗವೊಂದು ಇದನ್ನು ಎಲ್ಲಿಂದಲೋ ಅರಸಿ ಕೊಂಡು ಬಂದು ಮಕರಂದವನ್ನು ಹೀರುತ್ತದೆ! ಅಷ್ಟೇ ಅಲ್ಲ, ಈ ಮರ ಹಕ್ಕಿಗಳಿಗೆ ಆಶ್ರಯ ತಾಣ. ಪ್ರಾಚೀನ ಕಾಲದವರು ಇದನ್ನು  ಆಯುರ್ವೇದ ಔಷದೋಪಾಚಾರದಲ್ಲಿ ಸಾಕಷ್ಟು ಬಳಸಿದ್ದಾರೆ.

* ಅನೇಕ ಅಧ್ಯಯನಗಳ ಪ್ರಕಾರ ಕದಂಬ ಮರದ ಎಲೆಗಳು, ತೊಗಟೆ, ಹಣ್ಣು ಮತ್ತು ಬೇರುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ನೋವು ನಿವಾರಕವಾಗಿ, ಯಕೃತ್ತಿನ ಆರೋಗ್ಯಕ್ಕಾಗಿ, ಬೊಜ್ಜು ನಿವಾರಕವಾಗಿ ಸಹಾಯ ಮಾಡುತ್ತದೆ. 

* ಮಾರ್ಚ್ ನಲ್ಲಿ ಮೊಗ್ಗು ಬಿಡಲು ಆರಂಭವಾಗಿ, ಮೇ - ಜೂನ್ ತಿಂಗಳಲ್ಲಿ ಹೂ ಅರಳುತ್ತದೆ. ಆಗ ದುಂಬಿಗಳು ಮತ್ತು ಜೇನು ಹುಳುಗಳು ಮಕರಂದ ಹೀರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ! ಡಿಸೆಂಬರ್ ವೇಳೆಗೆ ಹಣ್ಣಾಗುತ್ತವೆ. ತಿನ್ನಲು  ರುಚಿಯಾಗಿರುತ್ತವೆಂಬ ಮಾತಿದೆ ! 

* '‘ಕದಂಬ ವೃಕ್ಷವು' ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ವೃಕ್ಷ. ಬನವಾಸಿಯ ಕದಂಬರ (ಕ್ರಿ.ಶ.345 -525)  ಕಾಲದಲ್ಲಿ ಇದಕ್ಕೆ ಪವಿತ್ರ ವೃಕ್ಷವೆಂದೇ ಕರೆಯಲಾಗುತ್ತಿತ್ತು. 

* ಪಾರ್ವತಿಯನ್ನ  ‘ಕದಂಬ ವನವಾಸಿನಿ’ ಎಂದು ಕರೆಯುವುದುಂಟು. ಪಾರ್ವತಿಗೆ ಇದರ ಹೂವೆಂದರೆ ಪಂಚಪ್ರಾಣ! ಇದರ ನೆರಳಲ್ಲೇ ಹೂವಿನ ಮಕರಂದವನ್ನು ಅನುಭವಿಸುತ್ತಾ ಶಿವ - ಪಾರ್ವತಿಯರು ಕುಳಿತಿರುತ್ತಿದ್ದರಂತೆ. ಕೃಷ್ಣನು  ಗೋಪಿಕೆಯರ ವಸ್ತ್ರಗಳನ್ನು ಅಪಹರಿಸಿ ಕದಂಬ ವೃಕ್ಷದ ರೆಂಬೆ ಕೊಂಬೆಗಳ ಮೇಲೆ ಹರಡಿದ್ದನೆಂಬ ನಂಬುಗೆಯಿದೆ. ಈ ಮರದ ನೆರಳಲ್ಲಿ ಕೃಷ್ಣನು ಕೊಳಲನ್ನು ಆನಂದಮಯವಾಗಿ ನುಡಿಸುತ್ತಿದ್ದನಂತೆ!

* ಕದಂಬ ಮರವು ಸುಮಾರು 45 ಅಡಿಗಳವರೆಗೂ ಬೆಳೆಯಬಲ್ಲದು. ದೊಡ್ಧ ದೊಡ್ಡ ಹಚ್ಚ ಹಸಿರಿನ ಹಸಿರು ಎಲೆಗಳು. ಬ್ಯಾಡ್ಮಿಂಟನ್ ಚೆಂಡನ್ನು ಹೋಲುವ ಬಂಗಾರಬಣ್ಣದ ಹೂವುಗಳು. ವಾಸ್ತವದಲ್ಲಿ ಇದೊಂದು ಪುಷ್ಪಮಂಜರಿ. ಹೂವುಗಳು ಪೂರ್ಣ ಅರಳಿದಾಗ ಮತ್ತನ್ನು ತರುವಂತಹ ನವಿರಾದ ಸುವಾಸನೆಯನ್ನು ಸೂಸುತ್ತವೆ. ಹೂವಿನಿಂದ ವಿಶೇಷವಾದ ಸುರೆ (ಪಾನೀಯ)ಯನ್ನು ತಯಾರಿಸಬಹುದಂತೆ!    

* ನೂರಾರು ವರ್ಷಗಳ ಕಾಲ ಬದುಕಿ ಉಳಿಯಬಲ್ಲ ಈ ಅದ್ಬುತ ಮರ ಅಗಲವಾದ ಎಲೆಗಳನ್ನು ಹೊಂದಿರುವುದರಿಂದ ಪರಿಸರವನ್ನ ತಂಪಾಗಿಡಬಲ್ಲದು. ಊರಿಗೆ ನೂರರಷ್ಟು ಕದಂಬ ವೃಕ್ಷಗಳಿದ್ದರೆ ಅಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲವೆಂಬ ಮಾತು ವಾಡಿಕೆಯಲ್ಲಿದೆ. 

* ಇಷ್ಟೆಲ್ಲಾ, ಉಪಯೋಗಕಾರಿಯಾಗಿರುವ ಈ ಮರವನ್ನು ನಮ್ಮ ಜಮೀನಿನ ಬದುವಿನಲ್ಲೇಕೆ  ಬೆಳೆಸಬಾರದು? ಕೇವಲ ನಮಗೆ ಲಾಭ ತರುವ ಮರಗಳಿದ್ದರಷ್ಟೇ ಸಾಕೆ ? ಭೂತಾಯಿಗೆ ಒಂದಿಷ್ಟು ತಂಪೆರೆಸುವ ಮತ್ತು ಪುಕ್ಕಟೆ ಪ್ರಾಣವಾಯು ಕೊಡುವ ಇಂತಹ ಮರಗಳ ಸಂಖ್ಯೆ ಹೆಚ್ಚ ಬೇಕಲ್ಲವೇ? ಪರಿಸರವನ್ನು ರಕ್ಷಿಸಬಲ್ಲ ಈ ರೀತಿಯ ಕಲ್ಪವೃಕ್ಷಗಳನ್ನು ಬೆಳೆಸುವುದರ ಬಗ್ಗೆ ನಾವು ಗಮನ ಕೊಡುವುದು ಅತಿ ಅನಿವಾರ್ಯ ಮತ್ತು ಅಗತ್ಯತೆ ಎಂಬುದು ನನ್ನ ಬಲವಾದ ನಂಬಿಕೆ. 

-ಡಾ ಬಿ ಎಂ ನಾಗಭೂಷಣ, ಭೀಮಸಮುದ್ರ

MSRIT - ಬೆಂಗಳೂರು