ಕದನ ವಿರಾಮವೆಂಬ ತಾತ್ಕಾಲಿಕ ಶಾಂತಿ

ಕದನ ವಿರಾಮವೆಂಬ ತಾತ್ಕಾಲಿಕ ಶಾಂತಿ

ಇಸ್ರೇಲ್ ಮತ್ತು ಹಮಾಸ್ ನಾಲ್ಕು ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಅಂತಾರಾಷ್ಟ್ರೀಯ ಮಧ್ಯವರ್ತಿಗಳು ಕೊನೆಗೂ ಸಫಲರಾಗಿದ್ದಾರೆ. ಈ ಕದನ ವಿರಾಮದ ಅವಧಿಯಲ್ಲಿ ಹಮಾಸ್ ತನ್ನ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಪೈಕಿ ೫೦ ಜನರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನಲ್ಲಿರುವ ೧೫೦ ಪ್ಯಾಲಿಸ್ತೀನಿಯರನ್ನು ಬಿಡುಗಡೆ ಮಾಡುವುದೆಂದು ಹೇಳಲಾಗಿದೆ. ಸಮರದ ಬೀಡಾಗಿರುವ ಇಸ್ರೇಲ್ ಮತ್ತು ಗಾಝಾದಲ್ಲಿ ಈ ಬೆಳವಣಿಗೆಯು ಸ್ವಲ್ಪ ಮಟ್ಟಿನ ಶಾಂತಿಯನ್ನು ಮೂಡಿಸಬಹುದೆಂಬುದು ನಿರೀಕ್ಷೆ. ಹಾಗೆಂದು ಈ ಕದನವಿರಾಮವು ಅಲ್ಲಿ ಶಾಶ್ವತ ಶಾಂತಿಗೆ ಕಾರಣವಾಗಲಾರದು ಎಂಬುದೂ ನಿಜವೇ. ಇದೇನಿದ್ದರೂ ತಾತ್ಕಾಲಿಕ ಶಾಂತಿಗೆ ಹಾದಿ ಕಲ್ಪಿಸಿತಷ್ಟೇ. ಪರಸ್ಪರರ ವಶದಲ್ಲಿರುವ ಜನರ ವಿನಿಮಯಕ್ಕಷ್ಟೇ ಈ ಕದನ ವಿರಾಮ ಅವಕಾಶ ಕಲ್ಪಿಸಬಲ್ಲದು. ಜತೆಗೇ ಗಾಝಾದಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಕೆಲವು ಮೂಲ ಸೌಕರ್ಯ ಒದಗಿಸಲು ನೆರವೀಯಬಲ್ಲದು. 

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷಕ್ಕೆ ಸುದೀರ್ಘ ಇತಿಹಾಸವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವೆರಡರ ಮಧ್ಯೆ ಶಾಂತಿ ನೆಲೆಸುವ, ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವ ಸಾಧ್ಯತೆಗಳು ತೆರೆದುಕೊಳ್ಳತೊಡಗಿದ್ದವು. ಆದರೆ ಕೆಲವು ದುಷ್ಟ ಶಕ್ತಿಗಳಿಗೆ ಇಂತಹ ಶಾಂತಿ ನೆಲೆಸುವುದು ಬೇಕಾಗಿಲ್ಲ. ಶಾಂತಿ ನೆಲೆಸಿದರೆ ತಮ್ಮ ಬೇಳೆ ಬೇಯಿಸಲಾಗುವುದಿಲ್ಲ ಎಂಬ ಬೇಗುದಿ ಅವರದು. ಆ ಕಾರಣದಿಂದಲೇ ಹಮಾಸ್ ಇತ್ತೀಚೆಗೆ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ್ದು. ಮಕ್ಕಳು, ಮಹಿಳೆಯರು ಸೇರಿದಂತೆ ಅಮಾಯಕ ಜನರನ್ನು ಕೊಂದದ್ದು ಹಾಗೂ ೨೦೦ಕ್ಕೂ ಅಧಿಕ ಮಂದಿಯನ್ನು ಅಪಹರಿಸಿದ್ದು. ಇದಕ್ಕೆ ಇಸ್ರೇಲ್ ಪ್ರತೀಕಾರ ಕೈಗೊಳ್ಳುವುದೆಂದು ಹಮಾಸ್ ಗೆ ಅರಿಯದ ವಿಷಯವೇನಲ್ಲ. ಅದಕ್ಕೆ ಬೇಕಾಗಿರುವುದೂ ಅದುವೆ. ಇಸ್ರೇಲ್ ವಿರುದ್ಧವಾಗಿ ಮುಸ್ಲಿಂ ಸಮುದಾಯ ರೊಚ್ಚಿಗೇಳುವಂತೆ ಮಾಡಿ ಜಾಗತಿಕವಾಗಿ ತನ್ನ ಕುರಿತಂತೆ ಬೆಂಬಲ ಹೆಚ್ಚಿಸಿಕೊಳ್ಳುವ ಹಮಾಸ್ ನ ಉದ್ಡೇಶವಾಗಿತ್ತು. ಅದರ ಉದ್ಡೇಶವೂ ಒಂದು ರೀತಿಯಲ್ಲಿ ಈಡೇರಿದಂತಿದೆ. ಹಮಾಸ್ ನ ಪೈಶಾಚಿಕ ಕೃತ್ಯಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ನ ಪ್ರತೀಕಾರದ ಕೃತ್ಯಗಳೇ ಈಗ ಹೆಚ್ಚು ಸುದ್ದಿಯಾಗತೊಡಗಿವೆ. ತಾನೇ ಖಳನಾದರೂ ಇಸ್ರೇಲನ್ನು ಖಳನಂತೆ ಬಿಂಬಿಸುವಲ್ಲಿ ಹಮಾಸ್ ತಕ್ಕಮಟ್ಟಿಗೆ ಸಫಲವಾಗಿದೆ.

ನಿಜವಾಗಿ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಜಾಗತಿಕ ಸಮುದಾಯ ಆದ್ಯತೆ ನೀಡಬೇಕು. ಭಾರತದ ನಿಲುವೂ ಇದೇ ಆಗಿದೆ. ಹಾಗಾಗಬೇಕಿದ್ದರೆ ಮೊದಲು ಅಲ್ಲಿನ ಜನರು ಹಮಾಸ್ ನಂಥಹ ಸಂಘಟನೆಯನ್ನು ದೂರವಿಡಬೇಕಾಗಿರುವುದೂ ಮುಖ್ಯವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೫-೧೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ