ಕದನ ವಿರಾಮ; ಎಲ್ಲವೂ ಮುಗಿದಂತಲ್ಲ !

ಕದನ ವಿರಾಮ; ಎಲ್ಲವೂ ಮುಗಿದಂತಲ್ಲ !

ಪ್ರಪಂಚದಲ್ಲಿ ಭಾರತದ ಬೆಳವಣಿಗೆಯನ್ನು ಕಂಡು ಕರುಬುವ ರಾಷ್ಟ್ರಗಳು ಬಹಳಷ್ಟು, ಅದರಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶವಾದರೆ, ಇತ್ತ ಅಮೇರಿಕಾ ಮೇಲ್ನೋಟಕ್ಕೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದಂತೆ ಕಾಣಿಸಿಕೊಂಡರೂ ಭಾರತ ವಿಶ್ವಶಕ್ತಿಯಾಗಿ ಮೆರೆಯುವುದನ್ನು ನೋಡಿ ಸಹಿಸುವ ಮಾನಸಿಕತೆಯದ್ದಲ್ಲ.

ಇತ್ತೀಚಿನವರೆಗೂ ಭಾರತವನ್ನು ಅದೆಷ್ಟೇ ಕಾಡಿದರೂ ಪೆಟ್ಟು ತಿಂದು ಸುಮ್ಮನುಳಿಯುತ್ತದೆ ಎಂಬ ಭ್ರಮೆಯಲ್ಲಿ ಪಾಕಿಸ್ತಾನವಿತ್ತು. ಅದೇ ಭ್ರಮೆಯಲ್ಲಿ 2016ರಲ್ಲಿ ಪಠಾಣ್ ಕೋಟ್‌ನ ಏರ್ ಬೇಸ್ ಮೇಲೆ ದಾಳಿ ನಡೆಸಿ 7 ಜನ ಸೈನಿಕರ ಹತ್ಯೆ ನಡೆದಿತ್ತು. ಅದಾದ ನಂತರ 2016ರಲ್ಲಿ ಮತ್ತೊಮ್ಮೆ ಉರಿಯಲ್ಲಿ 19 ಜನ ಸೈನಿಕರ ಹತ್ಯೆ ನಡೆಸಿತು. ಆಗಲೇ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ನೆಲೆಯನ್ನು ಧ್ವಂಸಗೊಳಿಸಿ ತಕ್ಕ ಉತ್ತರ ನೀಡಿತ್ತು. 2019ರ ಪುಲ್ವಾಮ ದಾಳಿಗೆ ಉತ್ತರವಾಗಿ ಭಾರತ ಏರ್‌ ಸ್ಟ್ರೈಕ್ ನಡೆಸಿ ದಿಟ್ಟ ಉತ್ತರ ಕೊಟ್ಟಾಗ ಪಾಕಿಸ್ತಾನ ಪತರಗುಟ್ಟಿತ್ತು. ಆರ್ಟಿಕಲ್ 370ಯ ನಿಷೇಧದ ಮೂಲಕ ಭಾರತ ಈಗ ಮೊದಲಿನಂತಿಲ್ಲ ಎಂಬ ಸ್ಪಷ್ಟ ಉತ್ತರ ಪ್ರಪಂಚಕ್ಕೆ ನೀಡಲಾಗಿತ್ತು.

ಎಲ್ಲವೂ ನಮ್ಮ ನಿಯಂತ್ರಣದಲ್ಲಿದೆ ಎಂದುಕೊಳ್ಳುತ್ತಿರುವಾಗಲೆ 2025ರ ಎಪ್ರಿಲ್ 22ರಂದು ಕಾಶ್ಮೀರದ ಪೆಹಲಾಮ್‌ ನಲ್ಲಿ ದಾಳಿ ನಡೆಸಿ 26 ಜನ ನಾಗರಿಕರನ್ನು ಹತ್ಯೆಗೈಯಲಾಗಿತ್ತು. ಇದು ಇತ್ತೀಚಿನ ದಿನಗಳಲ್ಲಿನ ಉಗ್ರರ ಹೇಯ ಕೃತ್ಯಗಳಲ್ಲೊಂದು. ಹಿಂದಿನ ದಾಳಿಗಳಿಗೆ ಸಮರ್ಥವಾಗಿ ಉತ್ತರಿಸಿದ್ದ ಭಾರತ ಸರ್ಕಾರ ಹಾಗೂ ಸೇನೆಯ ಮೇಲೆ ಪ್ರಜೆಗಳ ನಿರೀಕ್ಷೆ ಈ ಬಾರಿ ಸ್ವಲ್ಪ ಹೆಚ್ಚಿನದ್ದೇ ಆಗಿತ್ತು. ದೊಡ್ಡ ಮಟ್ಟದ ಹೋರಾಟದ ನಿರೀಕ್ಷೆಯೊಂದಿತ್ತು. ಬಹುಶಃ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮುಕ್ತಿ ಕೊಡಲು ಇದಕ್ಕಿಂತ ಉತ್ತಮ ಅವಕಾಶ ಮತ್ತೆ ಸಿಗಲಾರದು ಎಂಬುದು ಬಹಳಷ್ಟು ಮಂದಿಯ ಅಭಿಪ್ರಾಯವಾಗಿತ್ತು.

ನಾಗರಿಕರ ಮೇಲಿನ ಉಗ್ರ ದಾಳಿಯ ವಿರುದ್ಧ ಭಾರತದ ಉತ್ತರ ಅತ್ಯಂತ ಸಮರ್ಥವಾಗಿತ್ತು. ಮೇ 7ನೇ ತಾರೀಕಿನಂದು ಪಾಕಿಸ್ತಾನದಲ್ಲಿದ್ದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ ಭಾರತ 9 ಉಗ್ರ ನೆಲೆಗಳನ್ನು ನೆಲಸಮ ಮಾಡುವಲ್ಲಿ ಯಶಸ್ವಿಯಾಯ್ತು, 150ಕ್ಕೂ ಹೆಚ್ಚಿನ ಉಗ್ರರು ತಮ್ಮ ಪ್ರಾಣ ಕಳೆದುಕೊಳ್ಳುವಂತಾಯ್ತು. ಪಾಕಿಸ್ತಾನ ಇನ್ನಿಲ್ಲದಂತೆ ಭಯಗೊಂಡಿತು. ಏನು ಮಾಡಲೆಂದು ತೋಚದೆ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಡೋನ್ ದಾಳಿ, ಮಿಸೈಲ್ ದಾಳಿಯನ್ನು ಆರಂಭಿಸಿತು. ಆದರೆ ಭಾರತೀಯ ಸೇನೆ ಅದೆಷ್ಟು ಸಮರ್ಥವಾಗಿದೆ ಎಂದರೆ ಈ ಎಲ್ಲ ದಾಳಿಗಳನ್ನೂ ಸಮರ್ಥವಾಗಿ ಎದುರಿಸಿತು. ಬದಲಿಗೆ ಪಾಕಿಸ್ಥಾನದ ಮೇಲೆ ಇನ್ನಷ್ಟು ದಾಳಿ ಮಾಡಿ ಅವರ ಪ್ರಮುಖ ವಾಯುನೆಲೆಗಳನ್ನು ಧ್ವಂಸ ಮಾಡಿತು. ಯುದ್ಧವಿನ್ನೂ ಆರಂಭವೇ ಆಗಿರಲಿಲ್ಲ, ಅಷ್ಟರಲ್ಲೇ ಪಾಕಿಸ್ಥಾನ ಭಾರತದೆದುರು ಮಂಡಿಯೂರುವಂತಾಯ್ತು. ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಪರವಾಗಿ ನಿಂತುಬಿಟ್ಟವು. ಭಾರತ ಪಾಕಿಸ್ತಾನದ ವಿರುದ್ಧದ ಯುದ್ಧವೆಂದು ಎಲ್ಲಿಯೂ ಹೇಳಲಿಲ್ಲ. ಬದಲಾಗಿ ಉಗ್ರವಾದದ ವಿರುದ್ಧದ ಹೋರಾಟ ಎಂದೇ ಹೇಳಿಕೆ ನೀಡಿತ್ತು. ಅದಕ್ಕೆ ಸರಿಯಾಗಿ ನಡೆದ ದಾಳಿಯೂ ಉಗ್ರ ಸ್ಥಾವರಗಳ ಮೇಲಾಗಿತ್ತು. ಭಾರತದ ಈ ಸಮರ್ಥ ನಡೆಯನ್ನು ಅಧಿಕೃತವಾಗಿ ಪ್ರಶ್ನಿಸುವ ಧೈರ್ಯ ಪ್ರಪಂಚದ ಯಾವ ರಾಷ್ಟ್ರಕ್ಕೂ ಇರಲಿಲ್ಲ. ಆದರೆ ಹಿಂದಿನಿಂದ ತನ್ನ ಕೆಲಸವನ್ನು ಚೀನಾ ಮಾಡತೊಡಗಿತ್ತು. ಪಾಕಿಸ್ತಾನಕ್ಕೆ ಪ್ರಚೋದನೆ ಕೊಡಲಾರಂಭಿಸಿತ್ತು. ಟರ್ಕಿಯೂ ಪಾಕಿಸ್ತಾನದ ಜೊತೆಯಾಯ್ತು.

ಯುದ್ಧ ಆರಂಭಕ್ಕೂ ಮುನ್ನ ಅಮೇರಿಕಾದ ಮಧ್ಯಸ್ಥಿಕೆ (!) ಯಲ್ಲಿ ಭಾರತ ಪಾಕಿಸ್ತಾನ ತಾತ್ಕಾಲಿಕವಾಗಿ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿದ್ದು ಕೊಂಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಬಹುಶಃ ಈ ವಿಚಾರದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಹಲವಷ್ಟಿದೆ. ಅಷ್ಟಕ್ಕೂ ನಮ್ಮ ಯುದ್ಧ ಯಾರ ವಿರುದ್ಧ? ಈಗಾಗಲೇ ಒಳಜಗಳಗಳಿಂದ ಸೋತು ಬಿದ್ದಿರುವ, ರಾಜಕೀಯ ಅತಂತ್ರ ಸ್ಥಿತಿಯಿಂದ ಪೆಟ್ಟು ತಿಂದಿರುವ, ಹೊತ್ತಿನ ಊಟಕ್ಕೂ ಭಿಕ್ಷೆ ಬೇಡುವ ಸ್ಥಿತಿಯಲ್ಲಿರುವ ಪಾಕಿಸ್ಥಾನದ ವಿರುದ್ಧ! ನಿಜವಾಗಿ ಎಲ್ಲವನ್ನೂ ಕಳೆದುಕೊಂಡಿರುವ ಪಾಕಿಸ್ತಾನಕ್ಕೆ ಇನ್ನು ಕಳೆದುಕೊಳ್ಳಲು ಏನೂ ಇಲ್ಲ. ಆದರೆ ಭಾರತಕ್ಕೆ ಯುದ್ಧದ ಹೇಗಿರಬಹುದು? ಪರಿಣಾಮ ಒಮ್ಮೆ ಯೋಚಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಿದಷ್ಟು ಸುಲಭವಾಗಿ ಯುದ್ಧ ನಡೆಯುವುದಿಲ್ಲ. ಅಷ್ಟಕ್ಕೂ ಪಾಕಿಸ್ಥಾನಕ್ಕೆ ಅದಾಗಲೆ ಮತ್ತೆ ಮೇಲೇಳಲಾಗದಷ್ಟು ಪೆಟ್ಟನ್ನು ಭಾರತ ನೀಡಿಬಿಟ್ಟಿದೆ. ಲಾಹೋರ್ ಏರ್ ಡಿಫೆನ್ಸ್ ಸಿಸ್ಟಂ ಅನ್ನು ಧ್ವಂಸ ಮಾಡಲಾಗಿದೆ. ಭಾರತದ ಪ್ರಬಲ ಕ್ಷಿಪಣಿ ಬ್ರಹೋಸ್‌ಗೆ ಪಾಕಿಸ್ತಾನ ನಿರುತ್ತರವಾಗಿ ಕುಳಿತಿದೆ. ರಫೀಕಿ, ಮುರೀದ್, ರಹಿಮ್ ಯಾರ್ಖಾನ್, ಸುಕೋರ್, ಚುನಿಯನ್‌ನಲ್ಲಿನ ಪಾಕಿಸ್ತಾನದ ಏರ್ ಫೋರ್ಸ್ ಬೇಸ್ ಗಳನ್ನು ಭಾರತ ಧ್ವಂಸ ಮಾಡಿದೆ. ಪ್ರಮುಖವಾಗಿ ನೂರ್ಕಾನ್ ಹಾಗೂ ರಾವಲ್ಲಿಂಡಿಗಳಲ್ಲಿನ ಏರ್ ಬೇಸ್‌ಗಳ ಮೇಲಿನ ಭಾರತದ ದಾಳಿ ಪಾಕ್‌ ಬೆನ್ನೆಲುಬು ಮುರಿದಂತೆ ಪೆಟ್ಟು ನೀಡಿದೆ.

ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ರಾಷ್ಟ್ರಗಳ ನಡುವಿನ ಯುದ್ಧದ ನೀತಿಯೂ ಬದಲಾಗಿದೆ. ಆಯುಧಗಳನ್ನು ಹಿಡಿದು ನೇರವಾಗಿ ರಣರಂಗಕ್ಕೆ ಧುಮುಕಿ ಕೈ ಕೈ ಮಿಲಾಯಿಸಿ ಯಾರು ಸಮರ್ಥರು, ಯಾರು ದುರ್ಬಲರು ಎಂದು ನಿರ್ಧರಿಸುವ ಕಾಲವಂತೂ ಖಂಡಿತಾ ಇದಲ್ಲ. ಕುಳಿತಲ್ಲಿಯೇ ಕೈಗೊಳ್ಳುವ ಕೆಲವೊಂದು ನಿರ್ಧಾರಗಳಿಂದಲೇ ದೇಶವೊಂದನ್ನು ಇನ್ನಿಲ್ಲದಂತೆ ಮಾಡಿಬಿಡುವ, ಯುದ್ಧ ಮಾಡದೆಯೇ ದೇಶವನ್ನು ಗೆದ್ದು ಬಿಡುವ ಸಂದರ್ಭದಲ್ಲಿ ನಾವೀಗ ಇದ್ದೇವೆ. ಭಾರತ ಸಿಂಧೂ ನದಿಯ ನೀರನ್ನು ಪಾಕ್‌ ಗೆ ಬಿಡುವುದಿಲ್ಲ ಎಂದು ನಿರ್ಧರಿಸಿದಾಗಲೆ ಪಾಕ್ ಅರ್ಧ ಸತ್ತು ಬಿದ್ದಿದೆ. ಪರಿಸ್ಥಿತಿ ಹೀಗಿರುವಾಗಲೂ ಪಾಕ್ ಭಾರತದ ಮೇಲೇರಿ ಬರುತ್ತಿದೆ ಎಂದರೆ ಅಲ್ಲಿ ಇನ್ನಾರದೋ ಕೈವಾಡ ಇದೆ ಎಂಬುದು ಎಂತಹವರಿಗೂ ಅರಿವಾಗುವ ಸತ್ಯ.

ಇಂತಹದ್ದೊಂದು ಪರಿಸ್ಥಿತಿಗೆ ಚೀನಾ ಕಾಯುತ್ತಲೇ ಇತ್ತು. ಪಾಕಿಸ್ತಾನ ಅಮೇರಿಕಾದ ಮೊರೆ ಹೋಗಿದ್ದು ಕದನ ವಿರಾಮಕ್ಕೆ ಒಪ್ಪಿದ್ದು ಚೀನಾಕ್ಕೆ ಸಮ್ಮತವಲ್ಲದ ವಿಚಾರ. ಬಹುಶಃ ಕದನ ವಿರಾಮದ ನಂತರವೂ ಪಾಕ್ ಒಪ್ಪಂದವನ್ನು ಮೀರುವಲ್ಲಿ ಚೀನಾದ ಪಾತ್ರ ಇದೆ ಎಂಬ ಸಂಶಯವೂ ಇದೆ. ಬಹುಶಃ ಚೀನಾದೊಂದಿಗಿನ ಭಾರತದ ಮಾತುಕತೆಯ ಬಳಿಕ ಪಾಕ್ ಮತ್ತೆ ತಣ್ಣಗಾಗಿದೆ. ಪಾಕ್ ಅತ್ತ ಅಮೇರಿಕಾದ ಮಾತಿಗೆ ಬೆಲೆ ಕೊಡಲಾಗದೆ, ಇತ್ತ ಚೀನಾದ ಬೂಟು ನೆಕ್ಕದೆ ಅನ್ಯ ವಿಧಿ ಇಲ್ಲದೆ ಒಳಗಿನ ರಾಜಕೀಯ ಅತಂತ್ರ ಪರಿಸ್ಥಿತಿಯನ್ನು ಎದುರಿಸಲಾಗದೆ, ಬಲೂಚಿಗಳ ಪೆಟ್ಟನ್ನು ಸಹಿಸಲಾಗದೆ ವಿಲವಿಲ ಒದ್ದಾಡುತ್ತಿದೆ. ಇಂತಹ ಪಾಕ್‌ನೊಂದಿಗಿನ ಕಲಹ ಮುಂದುವರೆಸುವುದರಿಂದ ಲಾಭ ಭಾರತಕ್ಕಿಂತ ಚೀನಾಕ್ಕೆ ಹೆಚ್ಚೆಂಬ ಸತ್ಯ ನಾವರಿಯಲೇಬೇಕು.

ಇತ್ತೀಚೆಗಷ್ಟೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಪರಿಸ್ಥಿತಿಯನ್ನು ಗಮನಿಸಿರಬಹುದು. ಇಡಿಯ ಜಗತ್ತು ಒತ್ತಡ ಹೇರಿದ್ದರೂ ಯುದ್ಧ - ನಿಲ್ಲಿಸುವ ದಿಸೆಯಲ್ಲಿ ಎರಡೂ ರಾಷ್ಟ್ರಗಳು ಯೋಚಿಸಲಿಲ್ಲ. ಪರಿಣಾಮ ಎರಡೂ ರಾಷ್ಟ್ರದ ಮೇಲಾಯಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ರಷ್ಯಾ ಅತ್ಯಂತ ಪ್ರಬಲ ರಾಷ್ಟ್ರವಾಗಿದ್ದರೂ ಅಲ್ಲಿಯೂ ಬಹಳಷ್ಟು ಸಾವು - ನೋವುಗಳಾದವು. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ವ್ಯತ್ಯಯವಾಯ್ತು. - ಹಲವಾರು ನಿರ್ಬಂಧಗಳಿಗೆ ಒಳಗಾಗಬೇಕಾಯ್ತು. ಈ ಎಲ್ಲ ಪರಿಣಾಮಗಳು - ಯಾವುದೇ ಒಂದು ರಾಷ್ಟ್ರದ ಏಳಿಗೆಗೆ ಒಳಿತಾದುದಲ್ಲ. ಬಹುಶಃ ಭಾರತದ ಈಗಿನ ನಡೆ ಅತ್ಯಂತ ಪ್ರಬುದ್ಧವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಈ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಜಗತ್ತು ಭಾರತದ - ಮೇಲೆ ಹೂಡಿಕೆ ಮಾಡಲು ಯಾವ ಭಯವೂ ಇಲ್ಲದೆ ಮುಂದೆ ಬರುತ್ತಿರುವ ಕಾಲಘಟ್ಟವಿದು. 2026ರಿಂದ ಅಮೇರಿಕಾದಲ್ಲಿ ಮಾರಾಟವಾಗುವ ಎಲ್ಲ `ಐಫೋನ್‌ಗಳು ಭಾರತದಲ್ಲಿ ಉತ್ಪಾದನೆಯಾಗಲಿವೆ ಎಂಬ ಸುದ್ದಿ ಚೀನಾದ ಉತ್ಪಾದನಾ ಕ್ಷೇತ್ರದ ಏಕಾಧಿಪತ್ಯಕ್ಕೆ ಕೊಟ್ಟ ದೊಡ್ಡ ಚಾಟಿಯೇಟು. ಈ ನೆಲೆಯಲ್ಲಿ ಭಾರತ ಅಷ್ಟು ಸುರಕ್ಷಿತವಲ್ಲ ಎಂದು ತೋರಿಸುವ ಆಸೆ ಚೀನಾಕ್ಕೂ ಇತ್ತು. ಅದಕ್ಕೆಂದೆ ತನ್ನ ಜೀತದಾಳಿನಂತಿರುವ ಪಾಕಿಸ್ತಾನವನ್ನು ಅದು ಉಪಯೋಗಿಸಿಕೊಂಡಿರಲೂಬಹುದು. ಆದರೆ ಯಾರ ಕುತಂತ್ರಕ್ಕೂ ಬಲಿಯಾಗಿ ಬಳಲುವ ಭಾರತ ಇದಲ್ಲ ಎಂಬ ಸ್ಪಷ್ಟ ಉತ್ತರ ಜಗತ್ತಿಗೆ ನೀಡಲಾಗಿದೆ.

ಭಾರತದ ನೀತಿಯಲ್ಲಿ ಸ್ಪಷ್ಟತೆಯಿದೆ. ಕದನ ವಿರಾಮ ಎಂದಾಕ್ಷಣ ಎಲ್ಲವೂ ಮುಗಿಯಿತು ಎಂಬರ್ಥವೂ ಅಲ್ಲ ಅಥವಾ ನಾವು ತಲೆ ಬಾಗಿದ್ದೇವೆ ಎಂದೂ ಅಲ್ಲ. ಬಹುಶಃ ಮುಂದಿನ ಯಾವುದೇ ಉಗ್ರ ದಾಳಿಯನ್ನು ಯುದ್ಧವೆಂದೆ ಪರಿಗಣಿಸಲಾಗುವುದು ಎಂಬ ಭಾರತದ ನಿರ್ಧಾರಕ್ಕೆ ಪಾಕ್ ಜೊತೆಗೆ ಅಮೇರಿಕಾ ಒಪ್ಪಿದ್ದು, ಸಿಂಧೂ ನದಿ ನೀರಿನ ಒಪ್ಪಂದಕ್ಕೆ ತಿಲಾಂಜಲಿ ಇಟ್ಟಿದ್ದು ಇಂತಹ ಹಲವು ನಿರ್ಧಾರಗಳು ಭಾರತಕ್ಕೆ ಆನೆಬಲ ತಂದುಕೊಟ್ಟಿದೆ. ಅಷ್ಟಕ್ಕೂ ಕದನ ವಿರಾಮದ ಉಲ್ಲಂಘನೆ ನಡೆದಲ್ಲಿ ಅದಕ್ಕೆ ಪ್ರತಿಯಾಗಿ ಮಾಡಬೇಕಾದ ಯಾವ ಕೆಲಸದಿಂದಲೂ ಭಾರತ ಹಿಂದೇಟು ಹಾಕುವುದಿಲ್ಲ ಎಂಬುದು ಸ್ಪಷ್ಟವಿರುವಾಗ ಸೋತು ಕಾಲಿಗೆ ಬಿದ್ದವರನ್ನು ಕ್ಷಮಿಸುವ ಈ ಮಣ್ಣಿನ ಗುಣ ಈಗಲೂ ಇದೆ. ಭಾರತ ಎಂದಿಗೂ ಶಾಂತಿಪ್ರಿಯ ರಾಷ್ಟ್ರ ಎಂದು ಸಾರಲು ಈ ಕದನ ವಿರಾಮಕ್ಕಿಂತ ದೊಡ್ಡ ಸಾಕ್ಷಿ ಬೇರೇನು ಬೇಕು?

-ಶಶಿಧರ್ ತಲ್ಲೂರಂಗಡಿ

(ಕೃಪೆ: ಹೊಸ ದಿಗಂತ ದೈನಿಕ)