ಕದಳೀವನ ಕರ್ಪೂರ

ಕದಳೀವನ ಕರ್ಪೂರ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕ: ನ. ರವಿಕುಮಾರ
ಪ್ರಕಾಶಕರು
ಅಭಿನವ, ಬೆಂಗಳೂರು
ಪುಸ್ತಕದ ಬೆಲೆ
ರೂ.50

ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍ಮನ್‍ಗೆ ತಾಕೀತು ಮಾಡುವ ಒಬ್ಬ  ಗ್ರಾಮ ಪಂಚಾಯತಿ ಸದಸ್ಯನ ಉದಾಹರಣೆಯೊಂದಿಗೆ ಪುಸ್ತಕದ "ಮುನ್ನುಡಿ"ಯನ್ನು ಆರಂಭಿಸುತ್ತಾರೆ ಸಂಪಾದಕರು.

"ಹಳ್ಳಿಗಳಲ್ಲಿನ ರಾಜಕೀಯ ಮತ್ತು ಇಂದಿನ ಪರಿಸ್ಠಿತಿಗಳ ಬಗ್ಗೆ ಗೊತ್ತಿರುವ ಯಾರೂ ಆ ಕಡೆ ಸುಳಿಯದಂಥ ವಾತಾವರಣ ಸೃಷ್ಠಿಯಾಗಿ ಬಿಟ್ಟಿದೆ......... ಇಂದು ಬಹುಪಾಲು ಎಲ್ಲ ಊರುಗಳು ದ್ವೇಷ, ಅಸೂಯೆ, ಜಗಳಮಯವಾಗಿವೆ. ಹಿಂದೆ ವಿನೋಬಾರ ಶ್ರಮದಾನ ಚಳುವಳಿಯಲ್ಲಿ ಭಾಗವಹಿಸಿ ಕಟ್ಟಿದ ಶಾಲೆ, ಆಸ್ಪತ್ರೆ, ರಸ್ತೆಗಳು ದುರಸ್ತಿ ಕಾಣದೆ ನಿಂತಿವೆ. ಆಗ ಮನೆಗೊಂದಾಳಂತೆ ಸೇರಿ ಕೆಲಸ ಮಾಡುತ್ತಿದ್ದರು. ಅವುಗಳನ್ನು ಸರ್ಕಾರ ವಹಿಸಿಕೊಂಡ ಲಾಗಾಯ್ತು ದುರಸ್ತಿಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರವೇ ಎಲ್ಲವನ್ನು ಮಾಡಲೆಂಬ ಹಠ ಜನಗಳದ್ದು. ಸರ್ಕಾರದ ಯಾವ ಅಧಿಕಾರಿ, ಮಂತ್ರಿಗಳು ಈ ಕಡೆ ಸುಳಿಯರು. ಎಷ್ಟೇ ಪತ್ರ, ಮನವಿ ಬರೆದರೂ ಉತ್ತರವಿಲ್ಲ. ಬಹುಶಃ ಅವರೆಲ್ಲರೂ ಬರುವುದು ಮುಂದಿನ ಚುನಾವಣೆಯ ವೇಳೆಗೆ! ಹಳ್ಳಿಯ ಬಹುಪಾಲು ಅಭಿವೃದ್ಧಿ ಯೋಜನೆಗಳು ಸೋತಿವೆ. ಕಾರಣ ಅವು ಬೆಂಗಳೂರಿನ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ತಯಾರಾಗಿರುವಂಥವು. ಖಾಸಗಿ ಸಂಘ-ಸಂಸ್ಥೆಗಳು ಕೂಡಾ ಹಳ್ಳಿಯ ನಿಜವಾದ ಅವಶ್ಯಕತೆಗಳಿಗೆ ಸ್ಪಂದಿಸಲಾರದೆ ಹೋಗಿವೆ" ಎಂದು ವಾಸ್ತವವನ್ನು ಕಟ್ಟಿ ಕೊಡುತ್ತಾರೆ, ಸಂಪಾದಕರು. 26 ವರುಷಗಳ ಮುಂಚೆ ಅವರು ತಿಳಿಸಿದ "ವಾತಾವರಣ" ಇಂದಿಗೂ ಹಾಗೇ ಇದೆ.

ಪುಸ್ತಕದ ಮೊದಲ ಲೇಖನ, "ಬೀಜ ಮತ್ತು ಭೂಮಿ". ಇದನ್ನು ಬರೆದ ಡಾ. ವಂದನಾ ಶಿವ, "ದ ವಯೊಲೆನ್ಸ್ ಆಫ್ ಗ್ರೀನ್ ರೆವಲ್ಯೂಷನ್" ಪುಸ್ತಕದ ಮೂಲದ ಹಸುರುಕ್ರಾಂತಿಯ ಕ್ರೌರ್ಯವನ್ನು ಜಗತ್ತಿಗೆ ಬಹಿರಂಗ ಪಡಿಸಿದವರು. ಲೇಖನದ ಮುಕ್ತಾಯದಲ್ಲಿ ಅವರು ನೀಡುವ ಎಚ್ಚರಿಕೆ ಇಂದಿಗೂ ಪ್ರಸ್ತುತ: "ಉತ್ಪಾದಕರ ಕ್ರೌರ್ಯ, ಪ್ರಕೃತಿ ಹಾಗೂ ಮಹಿಳೆಯರನ್ನು ದೋಚುವ ಹಾಗೂ ಈ ಕಳ್ಳತನವನ್ನು ಸುಧಾರಣೆ ಮತ್ತು ಪ್ರಗತಿ ಎಂದು ಕರೆಯುವ ಯತ್ನವಾಗಿದೆ. ಗತಿಸಿದ ವಸಾಹತುವಿನ ಸಾಧನಗಳಾದ ಕ್ರೌರ್ಯ ಮತ್ತು ದರೋಡೆಗಳು ಸಂಪತ್ತಿನ ಗಳಿಕೆಯ ಮೂಲವಾಗಿವೆ; ಮಾತ್ರವಲ್ಲ, ಅವು ಜೀವನವನ್ನೇ ನಡುಗಿಸುವ ಹೊಸ ವಸಾಹತುಶಾಹಿಯ ಸಾಧನಗಳೂ ಹೌದು. ಪುನರ್‍ಸೃಷ್ಟಿಯ ಚಕ್ರ ಛಿದ್ರವಾಗಿದೆ, ಬಲವಂತವಾಗಿ ಅದನ್ನು ಆಧುನಿಕ ತಂತ್ರಜ್ನಾನವನ್ನು ಆಧರಿಸಿದ ಕಚ್ಚಾವಸ್ತು ಮತ್ತು ಸರಕನ್ನು ಒದಗಿಸುವ ಯಂತ್ರವನ್ನಾಗಿಸಲಾಗಿದೆ."

"ಜೀವವನ್ನು ಉಳಿಸಬೇಕಾದರೆ ನಾವು ಯಾವುದು ನಿಜಕ್ಕೂ ಮೌಲ್ಯವುಳ್ಳದ್ದು ಎಂಬುದನ್ನು ಮತ್ತು ತಂತ್ರಜ್ನಾನವು ಎಷ್ಟು ನೈತಿಕವಾದದ್ದು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಜೀವಂತವಾಗಿ ಇರಿಸಿಕೊಳ್ಳಬೇಕು. ಈ ವಿವೇಕ ನಾಶವಾದರೆ ಬದುಕನ್ನು ಅದರ ವೈವಿಧ್ಯತೆ, ಸಹಜತೆ ಮತ್ತು ಪುನರ್‍ಸೃಷ್ಟಿಯ ಸಂಪೂರ್ಣತೆಯಲ್ಲಿ ಅನುಭವಿಸುವ ಆಯ್ಕೆಯ ಸ್ವಾತಂತ್ರ್ಯವನ್ನೇ ಕಳೆದುಕೊಂಡಂತಾಗಿ ನಮಗೆ ಉಳಿಯುವುದು ಬರಿಯ ದಾಸ್ಯವೊಂದೇ."

"ಅಭಿವೃದ್ಧಿಯ ಪರ್ಯಾಯ ಸಾಂಸ್ಕೃತಿಕ ವ್ಯಾಖ್ಯೆ" ಎಂಬ ಎರಡನೆಯ ಲೇಖನವನ್ನು ಬರೆದವರು ಫಾ. ಎಸ್. ಕಪ್ಪನ್. ಧಾರ್ಮಿಕ ನೆಲೆಯಲ್ಲಿ ನಿಂತು ಸಾಮಾಜಿಕ ವಿಷಮತೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಬಲ್ಲವರು. ಅವರು ಲೇಖನವನ್ನು ಆರಂಭಿಸುವ ಪರಿಯೇ ನಮ್ಮನ್ನು ಓದಿಗೆ ಸೆಳೆಯುತ್ತದೆ: "ವಿಶ್ವಸಂಸ್ಥೆಯ ಇತ್ತೀಚಿನ ಅಧ್ಯಯನದಲ್ಲಿ "ಮಾನವ ಅಭಿವೃದ್ಧಿ"ಗೆ ವಯಸ್ಕ ಸಾಕ್ಷರತೆ, ತಲಾವಾರು ಆದಾಯ ಮತ್ತು ಮಕ್ಕಳ ಆಯುಸ್ಸಿನ ಅಂದಾಜಿನ ಆಧಾರದಲ್ಲಿ ವ್ಯಾಖ್ಯೆ ನೀಡಲಾಗಿದೆ. ಅಭಿವೃದ್ಧಿಯ ಕುರಿತಾದ ಎಲ್ಲಾ ಸಮಕಾಲೀನ ಚರ್ಚೆಗಳಿಗೆ ಮಾದರಿಯಾಗಿ ಈ ವ್ಯಾಖ್ಯೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಪೂಜ್ಯವಾಗಿದೆ ಎಂದರೆ ಇದನ್ನು ಪ್ರಶ್ನಿಸಿದವರು ಹುಚ್ಚರೆಂದು ಪರಿಗಣಿಸಲ್ಪಡುವ ಅಪಾಯಕ್ಕೆ ಒಳಗಾಗುತ್ತಾರೆ."

"ಆದರೂ  ನಾನು ನಿಶ್ಚಿತವಾಗಿ ಅದನ್ನೇ ಮಾಡುತ್ತಿದ್ದೇನೆ. ಒಳ್ಳೆಯ ಮಾತಲ್ಲಿ ಹೇಳುವುದಾದರೆ ಅಭಿವೃದ್ಧಿಯನ್ನು ನೋಡುವ ಸದ್ಯದ ಮಾರ್ಗವು ಎಡಬಿಡಂಗಿಯಾಗಿದೆ; ಕೆಟ್ಟದಾಗಿ ಹೇಳುವುದಾದರೆ ನವವಸಾಹತು ಸಿದ್ಧಾಂತದ ಭಾಗವಾಗಿದೆ. ಉದಾಹರಣೆಗೆ, ಸರಾಸರಿ ತಲಾ ಉತ್ಪನ್ನವು ಜನರ ವಿಭಿನ್ನ ವರ್ಗಗಳಲ್ಲಿ ಸಂಪತ್ತಿನ ವಿತರಣೆಯ ಬಗ್ಗೆ ಏನನ್ನೂ ಹೇಳುವುದಿಲ್ಲ."

"ಮಕ್ಕಳ ಆಯುಸ್ಸಿನ ಅಂದಾಜು ಕೂಡ ಅಭಿವೃದ್ಧಿಯ ಸೂಚ್ಯಂಕವಾಗಿ ಸಮಸ್ಯಾತ್ಮಕವಾಗುತ್ತದೆ. ಇಂದು ಇಂಡಿಯಾದಲ್ಲಿ ಶಿಶುಮರಣ ಪ್ರಮಾಣವು 1960ರಲ್ಲಿ ಇದ್ದದ್ದಕ್ಕಿಂತ ತುಂಬಾ ಕಡಿಮೆ ಇದೆ ಎನ್ನುವುದು ನಿಜ. ಆದರೆ ಹೆಚ್ಚಿದ ಹಾನಿಕಾರಕ ಔಷಧಿ, ಕಲುಷಿತ ಆಹಾರಗಳಿಂದಾಗಿ ಸಾವಿರಾರು ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಅಂಗವಿಕಲರಾಗಿ ಹುಟ್ಟಿರಬಹುದೇ ಎನ್ನುವ ಕರಾಳ ಪ್ರಶ್ನೆಯನ್ನು ನಿರ್ಲಕ್ಷಿಸುತ್ತೇವೆ. ..... ಸಾಕ್ಷರತೆಯೂ ನಂಬಲರ್ಹ ಸೂಚನೆಯಲ್ಲ. ಒಬ್ಬ ಅಕ್ಷರಸ್ಥ ಸುಸಂಸ್ಕೃತನಾಗಿರದೆ ಇರಬಹುದು ಹಾಗೇ ಅನಕ್ಷರಸ್ಥ ಸುಸಂಸ್ಕೃತ ಆಗಿರಲೂ ಬಹುದು."

ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಾ, ಫಾ. ಕಪ್ಪನ್ ನೀಡುವ ಒಳನೋಟಗಳನ್ನು ಗಮನಿಸಿ: "ಸಂಕ್ಷಿಪ್ತವಾಗಿ ಹೇಳುವುದಾದರೆ ಆರ್ಥಿಕ ಜೀವನದ ಪ್ರತಿ ವಿಷಯವೂ ನಮ್ಮ ಸಂಸ್ಕೃತಿಯ ಮುದ್ರೆಯನ್ನು ಹೊಂದಿರಬೇಕು. ಅನನ್ಯತೆಯ ಹಕ್ಕು ಮತ್ತು ಸಾಂಸ್ಕೃತಿಕ ವಿಶಿಷ್ಟತೆಯನ್ನು ಮೂಲಭೂತ ಮಾನವ ಹಕ್ಕಾಗಿ ದೃಢೀಕರಿಸಬೇಕು. ಹಾಗಾಗಿ ಕೈಗಾರೀಕೃತ ದೇಶಗಳು ಹಾಗೂ ಬಹುರಾಷ್ಟ್ರೀಯ ಕಾರ್ಪೋರೇಶನ್‍ಗಳು ಪ್ರತಿಪಾದಿಸುತ್ತಿರುವ ಏಕರೂಪಿ ಸಾಂಸ್ಕೃತಿಕ ನವವಸಾಹತುಶಾಹಿಯ ವಿರುದ್ಧ ಹೋರಾಡುವುದು ಐತಿಹಾಸಿಕ ಸವಾಲಾಗಿದೆ. ದುರದೃಷ್ಟಕ್ಕೆ ಪುನರ್  ವಸಾಹತುಶಾಹಿ ಶಕ್ತಿಯನ್ನು ಎದುರಿಸುವುದು ಹಿಂದಿನ ಸಾಂಪ್ರದಾಯಿಕ ವಸಾಹತನ್ನು ಎದುರಿಸಿದ್ದಕ್ಕಿಂತ ಕಷ್ಟಕರವಾಗಿದೆ. ಏಕೆಂದರೆ ನವವಸಾಹತುಶಾಹಿಯು ರಾಷ್ಟ್ರೀಯತೆಯನ್ನು ಕಳಕೊಂಡ ಮಧ್ಯಮವರ್ಗ ಹಾಗೂ ಆತ್ಮ ಕಳಕೊಂಡ ರಾಜಕೀಯ ಪುಢಾರಿಗಳಲ್ಲಿ ತನ್ನ ಪಾಳ್ಯವನ್ನು ಹೊಂದಿದೆ. ಇನ್ನೂ ಆತಂಕಕಾರಿಯೆಂದರೆ  ತನ್ನ ವಿರುದ್ಧದ ಹೋರಾಟಗಳನ್ನೇ ಬಗಲಿಗೆ ಹಾಕಿಕೊಳ್ಳಲು ನವವಸಾಹತುಶಾಹಿ ಶತಪ್ರಯತ್ನ ಮಾಡುತ್ತಿದೆ."

ದೇಶದ ಯಾವುದೇ ಭಾಗದಲ್ಲಿ ಪರಿಸರದ ನಾಶ ನಡೆದರೂ ಪ್ರತಿಭಟಿಸುವ ಕೇಂದ್ರ ಸರಕಾರದ ಮಾಜಿ ಮಂತ್ರಿ ಶ್ರೀಮತಿ ಮನೇಕಾ ಗಾಂಧಿ ಅವರು ಬೆಂಗಳೂರಿನಲ್ಲಿ ನೀಡಿದ ಭಾಷಣದ ಭಾವಾನುವಾದ ಮೂರನೆಯ ಲೇಖನ, "ಪರಸರ ಮತ್ತು ನೈತಿಕತೆ." ಲೇಖನದ ಆರಂಭದಲ್ಲೇ ಅವರು ಎತ್ತುವ ಪ್ರಶ್ನೆ: "ಅರಣ್ಯ ರಕ್ಷಣೆಗೆ ದಾರಿಗಳಿಲ್ಲವೆಂದು ಯಾರಾದರೂ ಹೇಳಬಹುದು. ಪ್ರಶ್ನೆಯೆಂದರೆ, ಯಾಕೆ ಹೀಗಾಯಿತು? ಅದಕ್ಕಿಂತ ಮುಖ್ಯವಾಗಿ, ಹೇಗೆ ಹೀಗೆ ಮಾಡಿಕೊಂಡೆವು? ಎಂಬುದು." ತಕ್ಷಣವೇ ಅವರು ನೀಡುವ ಎಚ್ಚರಿಕೆ - ಅರಣ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಅರಣ್ಯವನ್ನು ಕಾದುಕೊಳ್ಳುವ ಕೆಲಸ ಮಾಡದಿದ್ದರೆ ಬಹುಬೇಗನೇ ಪರಿಸರ ಮಾಲಿನ್ಯದ ಭಯಂಕರವನ್ನು ಎದುರಿಸುತ್ತೇವೆ.

ಪ್ರಗತಿಯ ಹೆಸರಿನಲ್ಲಿ ಪರಿಸರ ನಾಶ ಮಾಡುವಾಗ ನೈತಿಕತೆಯ ಮೌಲ್ಯವನ್ನು ತಿರುಚಿ, ಅದನ್ನು ಪರಿಸರ ನಾಶಕ್ಕಾಗಿ "ದಾಳ"ವಾಗಿ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ವಿವರಿಸುತ್ತಾ ಅವರು ಹೇಳುತ್ತಾರೆ, "ಯಾರಿಗೆ ಯಾರೂ ಜವಾಬ್ದಾರರಾಗದ, ಯಾರಿಗಾಗಿ ಯಾರೂ ಏನನ್ನೂ ಮಾಡದ ಪ್ರಸಕ್ತ ಸನ್ನಿವೇಶದಲ್ಲಿ, ಜೈವಿಕವರ್ಗ, ಪ್ರಾಕೃತಿಕ ವ್ಯವಸ್ಥೆ ಮತ್ತು ಪರಂಪರೆ ರಕ್ಷಣೆಯಂಥ ಮೌಲಿಕ ಕೆಲಸಗಳು ಗಂಭೀರವಾಗಿ ಪರಿಗಣಿಸಲ್ಪಡುವುದು ಅಪರೂಪಕ್ಕೆ ಮಾತ್ರ. ........ ಸಮಾಜದಲ್ಲಿ ವ್ಯಾಪಾರಿ ಮನೋಭಾವವೇ ಮುಖ್ಯವಾದಾಗ ಇದ್ದಬದ್ದ ಪ್ರಾಮುಖ್ಯತೆಯೆಲ್ಲ ಆರ್ಥಿಕತೆಯ ಕಡೆ ತಿರುಗಿ, ನೀತಿಶಾಸ್ತ್ರ ತ್ಯಾಜ್ಯವೆನಿಸುತ್ತದೆ. ಇದರ ಪರಿಣಾಮ - ನಮಗೆ ನಾವೇ ವಿಪತ್ತು ತಂದುಕೊಳ್ಳುವುದು....."

ಇಂದು ಆಗುತ್ತಿರುವುದು ಭೂಮಿಯ ನಾಶ; ಫಲವತ್ತತೆಯ ನಾಶ; ಆ ಮೂಲಕ ಬದುಕಿನ ನಾಶ ಎಂಬುದನ್ನು ಮನೇಕಾ ಗಾಂಧಿ, ನಮಗೆಲ್ಲ ಗೊತ್ತಿರುವ ಉದಾಹರಣೆಗಳ ಮೂಲಕವೇ ವಿವರಿಸುತ್ತಾರೆ. "ಬಡವರು ಬಡವರಾಗುತ್ತಲೇ ಹೋಗುವ, ಪ್ರಗತಿಗೆ ಬಲಿಯಾಗುವ ಸಂಗತಿಗಳು ನಮಗೆ ಅಪರಿಚಿತವಲ್ಲ. ತಮ್ಮ ಹಳ್ಳಿಯಲ್ಲೊಂದು ವಿದ್ಯುತ್ ದೀಪ ಉರಿಯಲೆಂಬ ಉದ್ದೇಶದಿಂದ 1960ರಲ್ಲಿ ಅಣೆಕಟ್ಟೆಗಾಗಿ ತಮ್ಮ ಜಮೀನನ್ನು ಬಲಿಗೊಟ್ಟ ಜನ ಇಂದಿಗೂ ಆ ವಿದ್ಯುತ್ ದೀಪಕ್ಕಾಗಿ ಕಾಯುತ್ತಿದ್ದಾರೆ! ತಮ್ಮ ಭೂಮಿ ಕಳಕೊಂಡದ್ದಷ್ಟೇ ಅವರಿಗೆ ದಕ್ಕಿದ ಲಾಭ!"

"ಪರಿಸರಕ್ಕೆ , ನೈಸರ್ಗಿಕ ನೀತಿಗೆ ವಿರುದ್ಧವಾಗಿರುವ ನಮ್ಮ ನಡೆಯೇ ಜೈವಿಕ ಬಿಕ್ಕಟ್ಟಿನ ಮೂಲ. ಸಿಗರೇಟು ಸೇವನೆಯಿಂದ ವ್ಯಕ್ತಿಯೊಬ್ಬನಿಗೆ ಸಿಗುವ ಸುಖ (?) ಏನೇ ಇರಲಿ, ಅದು ಆತನ ಎದೆಯನ್ನೇ ಸುಡುತ್ತದಲ್ಲವೇ? ಅಷ್ಟೇ ಅಲ್ಲದೆ ಅದು ಆತನ ಸುತ್ತಲಿನವರ ಆರೋಗ್ಯದ ಮೇಲೂ ದುಷ್ಫರಿಣಾಮ ಬೀರುತ್ತದೆ. ನಮ್ಮ ಪರಿಸರವನ್ನೇ ಮರೆತು ನಾವು ಬದುಕುವುದಾದರೆ, ನಮ್ಮ ಪ್ರಜ್ನೆಗೆ ಏನು ಅರ್ಥವಿದೆ? ಪರಿಸರದ ಆರೋಗ್ಯವನ್ನೇ , ಅದರ ಕ್ರಮವನ್ನೇ ದಿವಾಳಿ ತೆಗೆಯುವಲ್ಲಿ ನಮ್ಮ ಬದುಕಿನ ಅಗತ್ಯವಾದರೂ ಎಂಥದು?..... " ಈ ಲೇಖನ ಅಂತಿಮವಾಗಿ ನೀಡುವ ಸಂದೇಶ: ಭೂಮಿಯ ಬಗೆಗಿನ ಕಾಳಜಿ ಮತ್ತು ಭವಿಷ್ಯವನ್ನು ಕುರಿತ ಕಾಳಜಿ - ಇವೆರಡು ಮಾತ್ರ ಮಾನವ ಜನಾಂಗವನ್ನು ಈ ಭೂಮಿಯಲ್ಲಿ ಉಳಿಸಬಲ್ಲವು.

"ಪರಿಸರ, ಆರ್ಥಿಕತೆ ಮತ್ತು ಜೀವನಕ್ರಮ" ಎಂಬ ಐದನೇ ಲೇಖನದಲ್ಲಿ, "ಉತ್ಥಾನ" ಪತ್ರಿಕೆಯ ಸಂಪಾದಕ ಎಸ್, ಆರ್, ರಾಮಸ್ವಾಮಿಯವರು, ಸಂಪನ್ಮೂಲಗಳ ವಿತರಣೆಯ ಅಸಮತೋಲನವನ್ನು ತೋರಿಸಿ ಕೊಡಲು ನೀಡುವ ಉದಾಹರಣೆ: "ಮಾರುಕಟ್ಟೆಯಲ್ಲಿ ಟನ್ನಿಗೆ 3,000 ರೂಪಾಯಿ ಬೆಲೆಯಿದ್ದಾಗ ಸರಕಾರ ಬಿದಿರನ್ನು ಉದ್ಯಮಕ್ಕೆ ಟನ್ನಿಗೆ ಒಂದೂವರೆ ರೂಪಾಯಿ ದರದಲ್ಲಿ ವರ್ಷಗಳುದ್ದಕ್ಕೂ  ಮಾರಿದೆ. ದೀರ್ಘ ರಾಜಕೀಯ ಒತ್ತಡಕ್ಕೆ ಮಣಿದು ಈಗ್ಗೆ ಅಲ್ಪಕಾಲದ ಹಿಂದೆ ಈ ದರವನ್ನು ಟನ್ನಿಗೆ 600 ರೂಪಾಯಿಗೆ ಏರಿಸಲಾಯಿತು. ಈಗ ಮಾರುಕಟ್ಟೆ ದರ ಟನ್ನಿಗೆ 12,000 ರೂಪಾಯಿ ಇದೆ. ಚಾಪೆ-ಬುಟ್ಟಿ-ಮೊರದ ಹೆಣಿಗೆ ಮುಂತಾದವಕ್ಕೆ ಬೇಕಾದ ಬಿದಿರನ್ನು ಬಡ ಮೇದರು ಮಾರುಕಟ್ಟೆ ದರದಲ್ಲಿಯೇ ಕೊಳ್ಳಬೇಕಾಗಿದೆ."

"ನೈಜ ಅಗತ್ಯಗಳ ಸ್ಥಾನವನ್ನು ಲಾಲಸೆ ಆಕ್ರಮಿಸಿಕೊಂಡದ್ದೇ ಇಂದಿನ ವಿಕೃತಿಗಳ ಮೂಲ. ಅದು ಎಷ್ಟು ದೂರ ಮುಂದುವರಿದಿದೆ ಎಂದರೆ ಈಗ ನಾಗರಿಕತೆಗೇ, ಮನುಷ್ಯನ ಅಸ್ತಿತ್ವಕ್ಕೇ ಸವಾಲಾಗಿದೆ" ಎಂದು ತಿಳಿಸುವ ರಾಮಸ್ವಾಮಿಯವರು ನಮ್ಮೆದುರು ಇರುವ ಜೀವನಕ್ರಮಗಳ ಆಯ್ಕೆಯನ್ನು ಸ್ಪಷ್ಟ ಪಡಿಸುತ್ತಾರೆ: "ಇಂದಿನ ಮುಖ್ಯ ಸಂಘರ್ಷವಿರುವುದು ಎರಡು ಭಿನ್ನ ಜೀವನದೃಷ್ಟಿಗಳ ನಡುವೆ: ಒಂದು ದೃಷ್ಟಿ "ಪ್ರಕೃತಿಯೊಡನೆ ಸಾಮರಸ್ಯದಿಂದ ಬಾಳುವುದರಲ್ಲಿಯೇ ನಮ್ಮ ಹಿತವಿದೆ." ಎಂಬುದು; ಇನ್ನೊಂದು ದೃಷ್ಟಿ "ಪ್ರಕೃತಿಯ ಮೇಲೆ ಹೆಚ್ಚು ಪ್ರಭುತ್ವ ಸ್ಥಾಪಿಸುತ್ತ ಹೋಗೋಣ" ಎಂಬುದು.

"ಪರಿಸರಸ್ನೇಹಿ ಜೀವನಶೈಲಿ" ಎಂಬ ಆರನೆಯ ಲೇಖನ ಸಹಜ ಕೃಷಿಯಲ್ಲಿ ಪ್ರಯೋಗ ಪ್ರಾತ್ಯಕ್ಷಿಕೆ ನಡೆಸಿರುವ ಡಾ. ಎ. ಎನ್. ನಾಗರಾಜ್ ಅವರದು. ಪ್ರಾರಂಭದಲ್ಲೇ ನಮ್ಮ ನಗರಗಳ ವಾಯುಮಾಲಿನ್ಯದ ಪರಿಸ್ಥಿತಿಯನ್ನು ತಿಳಿಸುತ್ತಾರೆ: "ಇತ್ತೀಚೆಗೆ (1996ರಲ್ಲಿ) ನಡೆದ ಒಂದು ಸಂಶೋಧನೆಯ ವರದಿ ಪ್ರಕಾರ ಪ್ರತಿನಿತ್ಯ 20 ಸಿಗರೇಟುಗಳನ್ನು ಸೇದುವವರು ಸೇವಿಸುವಷ್ಟು ವಿಷಪೂರಿತ ಪದಾರ್ಥಗಳು ದೆಹಲಿಯ ಮಲಿನವಾದ ಗಾಳಿಯನ್ನು ಸೇವಿಸುವ ಜನರಿಗೂ ದೊರಕುತ್ತದೆ. ಇದೇ ಪರಿಸ್ಥಿತಿ ಬೆಂಗಳೂರು, ಕಲ್ಕತ್ತ, ಬೊಂಬಾಯಿ ಮುಂತಾದ ದೊಡ್ಡ ನಗರಗಳಲ್ಲಿ ಮಾತ್ರವಲ್ಲ, ಅನೇಕ ಸಣ್ಣ ಊರುಗಳಲ್ಲಿಯೂ ಇದೆ." ಪರಿಸರಮಾಲಿನ್ಯವನ್ನು ಕಡಿಮೆ ಮಾಡುವುದಕ್ಕೆ ನಾವೆಲ್ಲ ವೈಯುಕ್ತಿಕವಾಗಿ, ಖಾಸಗಿ ಸಂಘ-ಸಂಸ್ಥೆಗಳ ಮೂಲಕ ಕೈಗೊಳ್ಳಬಹುದಾದ ಕ್ರಮಗಳ ವಿವರ ಈ ಲೇಖನದ ವಿಶೇಷ.

ಕ್ಲಾಡ್ ಆಲ್ವಾರೇಸ್ ಬರೆದಿರುವ ದೀರ್ಘ ಲೇಖನ, "ನಮ್ಮ ಕೆಲ ಪರಿಸರ ಸಮಸ್ಯೆಗಳ ವಂಶವಾಹಿ ನೆಲೆಗಳು." ಭೋಪಾಲದ ಯೂನಿಯನ್ ಕಾರ್‍ಬೈಡ್ ಅನಿಲ ಸೋರಿಕೆ ದುರಂತ, ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಜಪಾನಿನ ಮೇಲಣ ಅಣುಬಾಂಬ್ ದಾಳಿ ಇತ್ಯಾದಿ ಪ್ರಕರಣಗಳ ಮೂಲಕ ಈ ಭೂಮಿಯಲ್ಲಿ ಮಾನವ ಮಾಡುತ್ತಿರುವ ಅನಾಹುತಗಳನ್ನು ಇದರಲ್ಲಿ ವಿವರಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಭೂಮಿಯ ಜೀವವೈವಿಧ್ಯಕ್ಕೆ ಅಂದರೆ ವಂಶವಾಹಿ ವೈವಿಧ್ಯಕ್ಕೆ ಆಗುತ್ತಿರುವ ಧಕ್ಕೆಯನ್ನು ತಿಳಿಸುತ್ತಾ ಹೀಗೆಂದು ಪ್ರತಿಪಾದಿಸಿದ್ದಾರೆ: "ಭಾರತೀಯ ವಂಶವಾಹಿಯನ್ನು ಉಪೇಕ್ಷಿಸುವ ಬೃಹತ್ ಪ್ರಯೋಗ ಪ್ರಾರಂಭವಾದದ್ದು (ಹೈನುಗಾರಿಕೆಯಲ್ಲಿ) ........ ಶೇಕಡಾ 50ರಷ್ಟು ಹೊರಗಿನಿಂದ ತಂದ ವಿದೇಶೀ ರಾಸುಗಳ ವಂಶವಾಹಿ ಮೂಲ ಜೀವಾಣುವನ್ನು ಭಾರತೀಯ ಹಸುಗಳ ಮೇಲೆ ಪ್ರಯೋಗಿಸಿದಾಗಲೇ ದೇಶೀಯ ವಂಶವಾಹಿಗಳನ್ನು ನಿರ್ಮೂಲಗೊಳಿಸಿದಂತೆ ಆಯಿತು. ಇದು ಭಾರತೀಯ ನಾಗರಿಕತೆಯ ಹೆಜ್ಜೆಗುರುತುಗಳನ್ನು ಅಳಿಸಿ ಹಾಕುವ ಪ್ರಯತ್ನ."

"ನರ್ಮದೆಯ ಗೋಳು" ಎಂಬ ಮುಂದಿನ ಲೇಖನದ ಮುಕ್ತಾಯದಲ್ಲಿ ಮೇಧಾ ಪಾಟ್ಕರ್ ಪ್ರತಿಪಾದಿಸಿರುವ ಕಾರ್ಯಸೂಚಿ ನಮ್ಮನ್ನೆಲ್ಲ ಎಚ್ಚರಿಸ ಬೇಕು; "ಅಭಿವೃದ್ಧಿ ಯೋಜನೆಗಳಿಂದ ಬಾಧಿತರಾದ ಜನರಷ್ಟೇ ಅಲ್ಲ, ಮನುಷ್ಯ ಮನುಷ್ಯನನ್ನು ತುಳಿಯುತ್ತಿರುವ ಹಾದಿಯೇ ತಪ್ಪೆಂದು ಭಾವಿಸುವ ಎಲ್ಲರೂ ಹಾಗೂ ಒಮ್ಮೆ ದೇಶವನ್ನು ಅಡವಿಟ್ಟರೆ ನಂತರ ಅದನ್ನು ಬಿಡಿಸಿಕೊಳ್ಳ್ಜುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಅರಿತವರೂ ಒಂದು ಸಮಾನಾಂತರ ಪಕ್ಷೇತರ ಶಕ್ತಿಯನ್ನು ಸಂಘಟಿಸಬೇಕಾಗಿದೆ."

"ಪಶು-ಪಕ್ಷಿಗಳಲ್ಲಿ ಪರಿಸರ ಪ್ರಜ್ನೆ" ಎಂಬ ಲೇಖನ ಕೃಷ್ಣಾನಂದ ಕಾಮತರದು. ಇದರಲ್ಲಿ ಅವರು ಎತ್ತುವ ಒಂದು ಪ್ರಶ್ನೆ: "ಕಷ್ಟಪಟ್ಟು ಗಿಡ-ಗಂಟಿಗಳಲ್ಲಿ ಗೂಡು ಕಟ್ಟಿ, ನಾಲ್ಕು ಮೊಟ್ಟೆಗಳನ್ನು ಇಡುವ ಪುಟ್ಟ ಸೂರಕ್ಕಿ  ಕಾವು ಕೊಡುವಾಗ, ಮರಿ ಬೆಳೆಯುವಾಗ, ಬೀಸುಗಾಳಿಯಿಂದ, ಕಾಗೆ-ಹಾವುಗಳಂತಹ ವೈರಿಗಳಿಂದ ಒಂದೆರಡು ಮರಿಗಳು ಮೃತಪಟ್ಟರೂ, ಮತ್ತೆ ತಿರುಗಿ ಮರಿ ಮಾಡುವುದರತ್ತ ಮನಸ್ಸು ಹಾಕುವುದಿಲ್ಲ. ಸಂತಾನದ ಸರ್ವ ನಾಶವಾದಾಗ ಮಾತ್ರ ತಿರುಗಿ ಗೂಡು ಕಟ್ಟಿ, ಮತ್ತೊಮ್ಮೆ ನಾಲ್ಕು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಸಂತತಿ ನಿಯಂತ್ರಣಕ್ಕಾಗಿ ಸಕಲ ಸಾಧನಗಳು ಲಭ್ಯವಿದ್ದರೂ ಜನಸಂಖ್ಯೆ ಏರಿಸುತ್ತಲೇ ಇರುವ ಮಾನವನು ಈ ಪುಟ್ಟ ಹಕ್ಕಿಯಿಂದಾದರೂ ಕುಟುಂಬ ಯೋಜನೆ ಪಾಠ ಕಲಿಯಬಾರದೇ?"

ಮುಂದಿನ ಲೇಖನದಲ್ಲಿ "ಪರ್ಯಾಯ ಶಕ್ತಿಮೂಲಗಳ"ನ್ನು ತಿಳಿಸಿದ್ದಾರೆ, ಮುಂಬೈಯ ಸರ್ವೋದಯ ಮಂಡಲದ ಕಾರ್ಯಕರ್ತ ಅಶೋಕ್ ಕುಮಾರ್. ಅನಂತರದ ಲೇಖನದಲ್ಲಿ "ಕೊಳೆಗೇರಿಯ ಸುಧಾರಣೆಯ ಸಾಧ್ಯತೆಗಳ"ನ್ನು ಮಂಡಿಸಿದ್ದಾರೆ, ಖ್ಯಾತ ವಾಸ್ತುಪರಿಣತ ಲಾರಿ ಬೇಕರ್. ತದನಂತರದ ದೀರ್ಘ ಲೇಖನ, "ಪರಿಸರ ನಾಶ, ಮಹಿಳೆ ಮತ್ತು ಆರೋಗ್ಯ." ಇದರಲ್ಲಿ ಡಾ. ಮೀರಾ ಶಿವ ಅವರು ಕುಟುಂಬ ನಿಯಂತ್ರಣ ಕಾರ್ಯಕ್ರಮದ ರಾಜಕೀಯವನ್ನು ಬಿಡಿಸಿ ಹೇಳಿದ್ದಾರೆ.

"ಉಪಭೋಗಿ ಸಂಸ್ಕೃತಿ ಮತ್ತು ಪರಿಸರ" ಎಂಬ ಲೇಖನದಲ್ಲಿ ಮಾಧವ ಐತಾಳ್ "ನಮಗೆಷ್ಟು ಬೇಕು?" ಎಂಬ ಯಕ್ಷ ಪ್ರಶ್ನೆಯನ್ನೆತ್ತಿ, ಗ್ರಾಹಕತೆಯ ಉತ್ತೇಜನ ಏಕೆ, ಹೇಗೆ ಮತ್ತು ಯಾರಿಂದ ಎಂಬುದನ್ನು  ವಿವರಿಸಿ, ನೀಡುವ ಸಂದೇಶ: ಪರಿಸರ ಮತ್ತು ಹಸಿವಿನ ಸಮಸ್ಯೆಗೆ ಉತ್ತರ ನಮ್ಮಲ್ಲಿದೆ. ಗ್ರಾಹಕ ಎನ್ನಿಸಿಕೊಳ್ಳುವುದಕ್ಕಿಂತ ರಕ್ಷಕ ಎನ್ನಿಸಿಕೊಳ್ಳುವುದು ಹೆಚ್ಚು ಮಾನವೀಯ, ಗೌರವಾರ್ಹ.

ಮುಂದಿನ ಲೇಖನದಲ್ಲಿ ಸಹಜ ಕೃಷಿ ಪರಿಣತ ಎ. ಪಿ. ಚಂದ್ರಶೇಖರ "ಪರ್ಯಾಯ ಕೃಷಿ ನೀತಿ" ಮಂಡಿಸಿದ್ದಾರೆ. ಅನಂತರದ ಲೇಖನ "ಪರಿಸರ ರಕ್ಷಣೆ ಸ್ವಾಭಿಮಾನದ ರಕ್ಷಣೆ" - ಇದರಲ್ಲಿ ಪರಿಸರ ಸಂಘಟನೆಯಲ್ಲಿ ಕ್ರಿಯಾಶೀಲರಾಗಿರುವ ವಿಷ್ಣು ಕಾಮತ್, "ಮನುಷ್ಯನ ಉದ್ಯೋಗ, ಪರಿಸರ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ, ಒಂದಕ್ಕೊಂದು ಪೂರಕವಾಗಬೇಕಿದೆ" ಎಂದು ಪ್ರತಿಪಾದಿಸಿದ್ದಾರೆ.

ಪುಸ್ತಕದ ಕೊನೆಯ ಲೇಖನ, "ಪರಿಸರ ಸಂರಕ್ಷಣೆ - ರಾಜಕೀಯ ಬದ್ಧತೆ". ಕನ್ನಡದಲ್ಲಿ ಪರಿಸರ ಜಾಗೃತಿಯ ಹಲವಾರು ಪುಸ್ತಕಗಳನ್ನು ಬರೆದಿರುವ ನಾಗೇಶ ಹೆಗಡೆಯವರು ಇದರ ಲೇಖಕರು. ಆಗ್ರಾದ ತಾಜಮಹಲಿನ ರಕ್ಷಣೆಗಾಗಿ ಸುತ್ತಮುತ್ತಲಿನ 300 ಉದ್ಯಮ ಘಟಕಗಳನ್ನು ಮುಚ್ಚಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಚಾರಿತ್ರಿಕ ತೀರ್ಪಿನ ಪರಿಣಾಮಗಳನ್ನು ವಿವರಿಸುವ ಮೂಲಕ ಈ ಲೇಖನದ ಆರಂಭ. ಇದರ ಮುಕ್ತಾಯ: "ಸಮೀಪವರ್ತಿಗಳ ಸದ್ಯದ ಲಾಭಗಳನ್ನಷ್ಟೇ ನೋಡುವ ರಾಜಕಾರಣಿಗಳು ಈಗ ಎಲ್ಲೆಲ್ಲೂ ಕಾಣಸಿಗುತ್ತಾರೆ. ಪರಿಸರ ಸಮಸ್ಯೆಯನ್ನು ಲಘುವಾಗಿ ಪರಿಗಣಿಸುವ ಇವರಿಗೆ ಬೇರು ಮಟ್ಟದಲ್ಲಿ ಭುಗಿಲೇಳಲಿರುವ ಅತೃಪ್ತಿ ಅಸಮಾಧಾನಗಳ ಬಿಸಿ ಕೂಡ ತಟ್ಟುತ್ತಿಲ್ಲ. ಖಾಸಗೀಕರಣದ ಪೈಪೋಟಿ ಹೆಚ್ಚುತ್ತಿರುವ ಈ ದಿನಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಕೈಗಾರಿಕೋದ್ಯಮಿಗಳ ಧನ ಬಲಕ್ಕೂ ಕೃಷಿ ಕರ್ಮಿಗಳ ಜನಬಲಕ್ಕೂ ಘರ್ಷಣೆ ತೀವ್ರವಾಗುವ ಸನ್ನಿವೇಶಗಳು ಪದೇಪದೇ ಎದುರಾಗಲಿವೆ. ಪಾಶ್ಚಾತ್ಯ ಮಾದರಿಯ ಅಭಿವೃದ್ಧಿ ಸೂತ್ರಗಳನ್ನು ಬದಿಗಿರಿಸಿ, ನಿಸರ್ಗ ಸಂಪನ್ಮೂಲಗಳ ಸರ್ವಾಂಗೀಣ ಸಂವರ್ಧನೆಗೆ ಆದ್ಯತೆ ಕೊಡಬಲ್ಲ ರಾಜಕೀಯ ದೂರದರ್ಶಿತ್ವ ನಮಗಿಂದು ಬೇಕಾಗಿದೆ. ಮುಂದಿನ ಪೀಳಿಗೆಗಳನ್ನೂ ಗಮನದಲ್ಲಿಟ್ಟುಕೊಂಡು ಸಾಧಿಸಬಲ್ಲ ಕಾರ್ಯಕ್ರಮಗಳನ್ನು ಯೋಜಿಸುವ ಬದ್ಧ ಮುತ್ಸದ್ದಿಗಳು ನಮಗಿಂದು ಬೇಕಾಗಿದ್ದಾರೆ." ಇದಂತೂ ಈಗಿನ ಪರಿಸ್ಥಿತಿಯಲ್ಲಿ ಬರೆದಂತಿದೆ.