ಕದಿರು - ಭತ್ತದ ನಾಟಿತಳಿಗಳ ದಾಖಲೆ

ಕದಿರು - ಭತ್ತದ ನಾಟಿತಳಿಗಳ ದಾಖಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ ಮಂಡಳಿ: ಡಾ॥ ಉಪೇಂದ್ರ ಶೆಣೈ, ಅರುಣ ಕುಮಾರ ವಿ.ಕೆ. ಮತ್ತು ಆನಂದ ಆ.ಶ್ರೀ.
ಪ್ರಕಾಶಕರು
ಕೃಷಿ ಪ್ರಯೋಗ ಪರಿವಾರ, ತೀರ್ಥಹಳ್ಳಿ, ಶಿವಮೊಗ್ಗ
ಪುಸ್ತಕದ ಬೆಲೆ
ರೂ.೨೦.೦೦, ಮುದ್ರಣ: ಜೂನ್ ೨೦೦೪

ಕೃಷಿ ಪ್ರಯೋಗ ಪರಿವಾರ ಸಂಸ್ಥೆಯವರು ಹೊರತರುತ್ತಿದ್ದ ನಮ್ಮೂರ ವೈವಿಧ್ಯ ಮಾಲಿಕೆಯ ಮೂರನೇ ಕಾಣಿಕೆಯಾಗಿದೆ ಕದಿರು. ಇವರು ಭತ್ತದ ನಾಟಿತಳಿಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಐವತ್ತಕ್ಕೂ ಮಿಕ್ಕಿದ ನಾಟಿತಳಿಗಳ ಹೆಸರು ಮತ್ತು ಅವುಗಳ ವಿಶ್ಲೇಷಣೆಗಳನ್ನು ಗಮನಿಸುವಾಗ ಅಚ್ಚರಿಯೆನಿಸುತ್ತದೆ. ಈ ರೀತಿಯ ದಾಖಲಾತಿಯನ್ನು ಮಾಡುವುದು ಒಂದು ಅಪರೂಪದ ವಿದ್ಯಮಾನವೇ ಸರಿ. ಈ ನಿಟ್ಟಿನಲ್ಲಿ ಕೃಷಿ ಪ್ರಯೋಗ ಪರಿವಾರದ ಕೆಲಸ ಸ್ತುತ್ಯಾರ್ಹ. 

ಸಿಹಿ ಕೆಂಪಕ್ಕಿಯ ಸಿದ್ಧಸಾಲೆ, ಪಾಯಸಕ್ಕೆ ಪರಿಮಳ ಕೊಡುವ ಪರಿಮಳ ಸಾಲೆ-ಜೀರಿಗೆ ಸಾಲೆ-ಗಂಧ ಸಾಲೆ, ತಾಯಿತಳಿ ಎನಿಸಿಕೊಂಡ ಕಳವೆ, ಬುತ್ತಿಊಟಕ್ಕೆ ಹೇಳಿಮಾಡಿಸಿದ ಸಣ್ಣವಾಳ್ಯ, ಚಕ್ಕುಲಿಗೆ ಸೂಕ್ತವೆನಿಸಿದ ಕರೇಕಾಲ್ ದಡಿಗ, ನೆರೆಗೂ ಸಡ್ಡುಹೊಡೆವ ನೆರಗುಳಿ... ಹೀಗೆ ಭತ್ತದ ಹತ್ತಾರು ಪಾರಂಪರಿಕ ತಳಿಗಳು ಸಾಗರ ತಾಲೂಕಿನ ಹೊಲಗದ್ದೆಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಕಾಲವಿತ್ತು. ಈಚಿನ ವರ್ಷಗಳಲ್ಲಿ ಇವು ಒಂದೊಂದಾಗಿ ಕಣ್ಮರೆಯಾಗುತ್ತ ಇಂದು ವಿನಾಶದ ಅಂಚಿನಲ್ಲಿದೆ. ಇವುಗಳನ್ನು ಉಳಿಸುವುದರ ಜೊತೆಗೆ ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಈ ದಾಖಲಾತಿ. ಇದು 'ಅಂತಾರಾಷ್ಟ್ರೀಯ ಭತ್ತದ ವರ್ಷ'ಕ್ಕೆ 'ಕೃಷಿ ಪ್ರಯೋಗ ಪರಿವಾರ' ಅರ್ಥಪೂರ್ಣ ಕೊಡುಗೆ.

‘ಸಂಜೀವನ' ಅವರು 'ಬತ್ತದಿರಲಿ ಭತ್ತದ ಸಾಗರ' ಎಂಬ ತಮ್ಮ ಮಾತಿನಲ್ಲಿ ಈ ದಾಖಲಾತಿಯ ಪ್ರಮುಖ ಆಶಯಗಳನ್ನು ವಿವರಿಸಿದ್ದಾರೆ-" * ಸಾಗರ ತಾಲೂಕಿನಲ್ಲಿ ಪ್ರಸ್ತುತ ಲಭ್ಯವಿರುವ ಪಾರಂಪರಿಕ ಭತ್ತದ ಬೀಜಗಳ ವ್ಯವಸ್ಥಿತ ದಾಖಲಾತಿ.

* ಭತ್ತದ ನಾಟಿತಳಿಗಳನ್ನು ಬೆಳೆಯುತ್ತಿರುವ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವುದು.

* ನಾಟಿತಳಿಗಳನ್ನು ಅಪೇಕ್ಷಿಸುವ ರೈತರಿಗೆ, ರೈತರಿಂದಲೇ ಬೀಜಗಳನ್ನು ಪೂರೈಸುವ ಯೋಜನೆ.

* ನಾಟಿತಳಿಗಳ ವೈವಿಧ್ಯವನ್ನು ಕೃಷಿ ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಧೃಢಪಡಿಸಿ ಸರಕಾರದ, ರೈತ ಸಮುದಾಯದ ಗಮನ ಸೆಳೆಯುವುದು.

* ಪ್ರೌಢ ಶಾಲಾ ಮಕ್ಕಳಿಗೆ ಅವರವರ ಊರಿನ ಭತ್ತದ ನಾಟಿತಳಿಗಳ ಬಗ್ಗೆ ತಿಳಿಯುವಂತೆ, ಕುತೂಹಲ ಮೂಡಿಸುವುದು."

ಈ ಪುಸ್ತಕದಲ್ಲಿ ಹೇಳಿದ ತಳಿಗಳ ಹೆಸರು ಓದುತ್ತಾ ಹೋದರೆ ನಿಮಗೆ ವಿಶಿಷ್ಟ ಅನುಭವವಾಗುತ್ತದೆ. ಕೆಲವು ಹೆಸರುಗಳನ್ನು ಓದುತ್ತಾ ಓದುತ್ತಾ ಮುಖದಲ್ಲಿ ಮಂದಹಾಸವೂ ಮೂಡಬಹುದು. ಅಕ್ಕಾಳು, ಅದ್ನೇನ್ ಕೇಳ್ತಿ, ಏಡಿಕುಣಿ, ಕರೇಕಂಟಕ, ಕರಿ ಇಸಡಿ, ಕುಂಕುಮ ಕೇಸರಿ, ಗೌರಿ, ಚಿಟಗ, ಚೊಳ್ಳ ಭತ್ತ, ಚಿಳಗ, ನ್ಯಾರೆಮಿಂಡ, ಜೇನುಗೂಡು, ನೆಟ್ಟಿಜಡ್ಡು, ನರೆಗುಳಿ ಜೆಡ್ಡು, ಪದ್ಮರೇಖಾ, ಬರ್ ರತ್ನಚೂಡಿ, ಬಂಗಾರ ಕಡ್ಡಿ, ಬಿಳಿ ಇಸಡಿ, ಬಿಳಿ ಹೆಗ್ಗೆ, ಬುಳ್ ಬುಳಿ, ಮದ್ರಾಸ್ ಸಣ್ಣ, ಸೋಮಸಾಲೆ, ಹೊನ್ನೇಕಟ್ಟು ಹೀಗೆ ಹೆಸರುಗಳ ಸರಪಳಿ ಮುಂದುವರೆಯುತ್ತೆ. ಬಹುಷಃ ಇದರಲ್ಲಿನ ಒಂದೆರಡು ಹೆಸರುಗಳನ್ನು ಹೊರತುಪಡಿಸಿದರೆ ಉಳಿದ ಹೆಸರುಗಳು ಈಗಿನವರಿಗೆ ಅಪರಿಚಿತವಾಗಿಯೇ ಇರಬಹುದು. ಆದರೆ ಒಂದೊಂದು ತಳಿಯ ಅಕ್ಕಿ ಒಂದೊಂದು ಬಗೆ ತಿಂಡಿಗೆ, ಪಾಯಸಕ್ಕೆ ಬಹು ಸೂಕ್ತವಾಗಿರುತ್ತಿತ್ತು. 

ಪುಸ್ತಕದಲ್ಲಿ ಪ್ರತೀ ತಳಿಯ ಅವಧಿ, ಎತ್ತರ, ಬಣ್ಣ, ಗಾತ್ರ, ಕೀಟ-ರೋಗ, ಬಿತ್ತನೆ ಸಮಯ, ಬಳಕೆ, ಇಳುವರಿ, ಇತರ ವಿಶೇಷತೆ, ಭತ್ತ ಬೆಳೆಯುವ ರೈತನ ವಿಳಾಸ ಇಲ್ಲವನ್ನೂ ಬಹಳ ಚೆಂದಾಗಿ ದಾಖಲಿಸಿದ್ದಾರೆ. ಈ ಉತ್ತಮ ಕೆಲಸಕ್ಕೆ ಬಹಳಷ್ಟು ಶಾಲೆಯ ವಿದ್ಯಾರ್ಥಿಗಳು ಸಹಕರಿಸಿದ್ದಾರೆ. ಇದರ ಜೊತೆಗೆ ಭಾರತ ಆಹಾರ ನಿಗಮವು ೧೯೬೫ರಲ್ಲಿ ಪಟ್ಟಿ ಮಾಡಿದ ಕರ್ನಾಟಕದ ಹಲವಾರು ಭತ್ತದ ತಳಿಗಳ ಹೆಸರನ್ನೂ ನೀಡಿದ್ದಾರೆ. ಅತೀ ಸಣ್ಣ ತಳಿಗಳು, ಸಣ್ಣ ತಳಿಗಳು, ದಪ್ಪ ಭತ್ತದ ತಳಿಗಳು, ಮಧ್ಯಮ ಭತ್ತದ ತಳಿಗಳು ಹೀಗೆ ಸಾಕಷ್ಟು ಅಕ್ಕಿಯ ಹೆಸರುಗಳನ್ನು ನೀಡಿದ್ದಾರೆ. 

ಅಳಿವು-ಉಳಿವು ಎಂಬ ಲೇಖನದಲ್ಲಿ ಒಂದೊಮ್ಮೆ ನಿಜಕ್ಕೂ ಭತ್ತದ ಸಾಗರವಾಗಿದ್ದ ಮಲೆನಾಡು ಬತ್ತುತ್ತಾ ಹೋಗುತ್ತಿರುವುದು ದುರಂತ ಎಂದಿದ್ದಾರೆ. ಭತ್ತದ ನಾಟಿತಳಿಗಳನ್ನು ಬೆಳೆಸಲು ಸೂಕ್ತ ಕಾರಣಗಳನ್ನು ನೀಡುತ್ತಾ, ಬೆಳೆಸದೇ ಇರಲೂ ಏನು ಕಾರಣ ಎಂಬ ವಿವರಗಳನ್ನು ಬರೆದಿದ್ದಾರೆ. ಭತ್ತದ ತೆನೆಯಿಂದ ತೋರಣ ಮಾಡಿಕೊಡುವವರ ವಿವರಗಳೂ ಈ ಪುಸ್ತಕದಲ್ಲಿವೆ. ೪೦ ಪುಟಗಳ ಬಹಳ ಪುಟ್ಟ ಪುಸ್ತಕದ ಮಾಹಿತಿಗಳು ಪುಟ್ಟದ್ದಲ್ಲ. ಬಹಳ ಸೊಗಸಾದ, ಮಾಹಿತಿಪೂರ್ಣ ದಾಖಲಾತಿ ಎಂದರೆ ತಪ್ಪಿಲ್ಲ.