ಕದ್ರಿ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ
ಮಂಗಳೂರಿನ ವಾರ್ಷಿಕ “ಹಬ್ಬ”ಗಳಲ್ಲೊಂದು ಜನವರಿ ತಿಂಗಳ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಕದ್ರಿ ಉದ್ಯಾನದಲ್ಲಿ ಏರ್ಪಡಿಸಲಾಗುವ “ಫಲಪುಷ್ಪ ಪ್ರದರ್ಶನ.”
೨೦೨೦ರ ಫಲಪುಷ್ಪ ಪ್ರದರ್ಶನ ಮೂರು ದಿನ (ಜನವರಿ ೨೪ರಿಂದ ೨೬ರ ವರೆಗೆ) ಜರಗಿತು. ಪ್ರತಿ ವರುಷದಂತೆ ಈ ವರುಷವೂ ಹೂಗಳಿಂದ ರಚಿಸಿದ ವಿಶೇಷ ಕಲಾಕೃತಿಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು. ಕೇಸರಿ ಸೇವಂತಿಗೆ ಹೂಗಳಿಂದ ಸ್ವಾಮಿ ವಿವೇಕಾನಂದರ ಮೂರ್ತಿ, ಬಿಳಿ ಸೇವಂತಿಗೆ ಹೂಗಳಿಂದ ಹಾರುವ ಪಾರಿವಾಳದ ಕಲಾಕೃತಿ ಮತ್ತು ಕೆಂಪು ಗುಲಾಬಿಗಳಿಂದ ಐಸ್ಕ್ರೀಮ್ ಕೋನ್ ರಚಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳೊಂದಿಗೆ ಸೆಲ್ಫೀ ತೆಗೆಯುವುದೆಂದರೆ ಹಲವರಿಗೆ ಖುಷಿಯೋ ಖುಷಿ.
ಕದ್ರಿ ಉದ್ಯಾನದಲ್ಲಿ ಆಕಾಶವಾಣಿಯ ಕಡೆಗಿರುವ ಪ್ರದೇಶದಲ್ಲಿ ಸುಮಾರು ೪೦ ಮಳಿಗೆಗಳಲ್ಲಿ ಹೂಹಣ್ಣುತರಕಾರಿ ಬೀಜಗಳು; ಕೃಷಿ ಸಾಧನಸಲಕರಣೆಗಳು; ಕುಂಡಗಳು, ಮಣ್ಣಿನ ಮಡಕೆ, ಹೂಜಿ, ಪಾತ್ರೆ ಇತ್ಯಾದಿ ಜನೋಪಯೋಗಿ ವಸ್ತುಗಳು; ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಜಾಮ್, ಜ್ಯೂಸ್ ಮುಂತಾದ ಮೌಲ್ಯವರ್ಧಿತ ವಸ್ತುಗಳು; ಚಿಪ್ಸ್, ಚಕ್ಕುಲಿ, ತುಕಡಿ, ಉಂಡೆ ಇತ್ಯಾದಿ ತಿಂಡಿತಿನಿಸುಗಳು; ಉಡುಪುಗಳು, ಪುಸ್ತಕಗಳು – ಇಂತಹ ಹತ್ತುಹಲವು ವಸ್ತುಗಳು ಬಿರುಸಿನಿಂದ ಮಾರಾಟವಾದವು. ಸರಕಾರದ ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳೂ ಅಲ್ಲಿದ್ದವು.
ಅಲ್ಲಿನ ತರಕಾರಿ ತೋಟದಲ್ಲಿ ಬೆಳೆಸಿದ ಹೀರೆಕಾಯಿ, ಬೆಂಡೆಕಾಯಿ, ಬದನೆ, ಎಲೆಕೋಸು, ಹೂಕೋಸು, ಟೊಮೆಟೊ ಇತ್ಯಾದಿ ತರಕಾರಿಗಳು ಆಸಕ್ತರಿಗೆ ತರಕಾರಿ ಕೃಷಿಗೆ ಪ್ರೇರಣೆ ಒದಗಿಸುವಂತಿದ್ದವು. ಇದಕ್ಕೆ ಪೂರಕವಾಗಿ, ತೋಟಗಾರಿಕಾ ಇಲಾಖೆಯ ತರಕಾರಿ ಸಸಿ ಮಾರಾಟ ಮಳಿಗೆಯಲ್ಲಿ ೩೦,೦೦೦ ತರಕಾರಿ ಸಸಿಗಳ ದಾಖಲೆ ಮಾರಾಟ! ಕದ್ರಿ ಉದ್ಯಾನದ ಫಲಪುಷ್ಪ ಪ್ರದರ್ಶನಕ್ಕಾಗಿ ಬೆಳ್ತಂಗಡಿಯ ಮದ್ದಡ್ಕ ಕೃಷಿಕ್ಷೇತ್ರದಲ್ಲಿ ಬೆಳೆಸಿದ ಈ ಸಸಿಗಳನ್ನು ತಲಾ ಒಂದು ರೂಪಾಯಿ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು. ಮುಳ್ಳುಸೌತೆ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ಎಲೆಕೋಸು, ಟೊಮೆಟೊ ಮುಂತಾದ ತರಕಾರಿ ಸಸಿಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಹಲವಾರು ನರ್ಸರಿಯವರಿಂದ ಹೂ ಹಾಗೂ ಹಣ್ಣಿನ ಬೀಜಗಳು ಹಾಗೂ ಕುಂಡ ಗಿಡಗಳ ಮಾರಾಟ. ಹಲವರು ಅವನ್ನು ಖರೀದಿಸಿ ಎರಡೂ ಕೈಗಳಲ್ಲಿ ಆ ಗಿಡಗಳನ್ನು ಹಿಡಿದುಕೊಂಡು ಖುಷಿಯಿಂದ ಹೊರಸಾಗುವ ದೃಶ್ಯ ಚೇತೋಹಾರಿಯಾಗಿತ್ತು.
ತರಕಾರಿಗಳಿಂದ ರಚಿಸಿದ ಕಲಾಕೃತಿಗಳು ಈ ಫಲಪುಷ್ಪ ಪ್ರದರ್ಶನದ ಮತ್ತೊಂದು ಆಕರ್ಷಣೆ. ಕಲ್ಲಂಗಡಿಯಿಂದ ರಚಿಸಿದ ಹೂ, ಬದನೆ, ಕ್ಯಾರೆಟ್, ಅಶೋಕ ಮರದೆಲೆ ಹಾಗೂ ಕಪ್ಪುದ್ರಾಕ್ಷಿಯಿಂದ ರಚಿಸಿದ ನವಿಲು, ಕೆಂಪು ಬದನೆಯಿಂದ ರೂಪಿಸಿದ ಆನಕೊಂಡ ಹಾವು ಮತ್ತು ಗಿಡುಗ – ಇವು ಗಮನ ಸೆಳೆದವು.
ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಹಿರಿಯರಿಗೆ ರೂ.೨೦ ಮತ್ತು ಮಕ್ಕಳಿಗೆ ರೂ.೧೦. ಒಮ್ಮೆ ಒಳಹೊಕ್ಕರೆ ಪ್ರದರ್ಶನದ ಮಳಿಗೆಗಳ ನಡುವಿನ ಜಾಗದಲ್ಲಿ ಅಲ್ಲಲ್ಲಿ ರಚಿಸಲಾಗಿದ್ದ ಹೂಗಿಡಗಳ ಮನಮೋಹಕ ವಿನ್ಯಾಸಗಳಿಂದಾಗಿ ಸಾವಿರಾರು ಜನರಿಗೆ ಫೋಟೋ ಕ್ಲಿಕ್ಕಿಸುವ ಹಾಗೂ ವಿಡಿಯೋ ಚಿತ್ರಿಸುವ ಭರ್ಜರಿ ಅವಕಾಶ. ವಾರಾಂತ್ಯದ ಜನಸಂದಣಿಯೇ ಕದ್ರಿ ಉದ್ಯಾನದ ಫಲಪುಷ್ಪ ಪ್ರದರ್ಶನದ ಜನಪ್ರಿಯತೆಯ ಪುರಾವೆ.