ಕನಕದಾಸರು
ಆನೆಗೊಂದಿ ಸಂಸ್ಥಾನಕ್ಕೆ ಸೇರಿದ ಬಾಡಬಂಕಾಪುರ ಕಾಗಿನೆಲೆ ಪ್ರದೇಶ (ಸುತ್ತಲ ಎಪ್ಪತ್ತೆಂಟು ಗ್ರಾಮಗಳು)ಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದ ಬೀರಪ್ಪ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಅದರ ವಾಯುವ್ಯ ಗಡಿಯ ರಕ್ಷಣೆ ಮಾಡಿಕೊಂಡಿದ್ದ. ರಾಜನ ಧರ್ಮವೇ ಪ್ರಜೆಗಳ ಧರ್ಮವೆಂಬಂತೆ ತಾನೂ ವೈಷ್ಣವ ಧರ್ಮವನ್ನು ಆಚರಿಸುತ್ತಾ ತನ್ನ ಪತ್ನಿ ಬತ್ಯಮ್ಮನಿಗೆ ಜನಿಸಿದ ಮಗನಿಗೆ ತಿಮ್ಮಪ್ಪನೆಂದು ಹೆಸರಿಟ್ಟ.
ಬೀರಪ್ಪನ ನಂತರ ಅವನ ಮಗ ತಿಮ್ಮಪ್ಪ ದಣ್ಣಾಯಕನಾದ. ಸಿಕ್ಕಿದ ನಿಧಿಯನ್ನು ಜನೋಪಯೋಗಕ್ಕೆ ಬಳಸಿದ್ದರಿಂದ ಕನಕನಾಯಕ ಎನಿಸಿಕೊಂಡ. ಯುದ್ಧವೊಂದರಲ್ಲಿ ತೀವ್ರ ಗಾಯಗೊಂಡು ನರಳುವಾಗ್ಗೆ ವಿರಕ್ತ ಭಾವನೆ ಹುಟ್ಟಿ ಹರಿದಾಸನಾದ.
ಕೀರ್ತನಕಾರನೂ ಕಥನಕಾರನೂ ಆದ ಕನಕದಾಸನು ರಚಿಸಿದ ಕಾವ್ಯಗಳು ಐದು. ಅವು ಮೋಹನತರಂಗಿಣಿ, ನೃಸಿಂಹಸ್ತವ, ನಳಚರಿತ್ರೆ, ಹರಿಭಕ್ತಿಸಾರ ಮತ್ತು ರಾಮಧಾನ್ಯಚರಿತ್ರೆ. (ಇವುಗಳಲ್ಲಿ ನೃಸಿಂಹಸ್ತವ ಇಂದು ಉಪಲಬ್ಧವಿಲ್ಲ) ಈ ಕಾವ್ಯಗಳಲ್ಲದೇ ಅವರ ಸುಮಾರು ೪೦೦ ಕೀರ್ತನೆಗಳು ಭಗವನ್ನಾಮಸ್ತುತಿ ಮುಕ್ತಿಮಾರ್ಗಗಳನ್ನು ಬಣ್ಣಿಸುವುದಲ್ಲದೆ ಹಲವು ಸಂದರ್ಭಗಳಲ್ಲಿ ನಿಂದಕರಿಗೆ ಚಾಟಿ ಪೆಟ್ಟುಗಳಾಗಿಯೂ ಕಾಣಸಿಗುತ್ತವೆ.
ಮೋಹನತರಂಗಿಣಿ :
ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಸಾಂಗತ್ಯ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ.
ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿಯೂ ಆಗಿದ್ದ ಕನಕ ತನ್ನ ಅನುಭವವನ್ನೆಲ್ಲ ಬರಹರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ರೌದ್ರ ರಸವೇ ಹರಿದಿದೆ ಇಲ್ಲಿ.
ಮೋಹನತರಂಗಿಣಿಯಲ್ಲಿ ದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿದೆ.
ಸೋಮಸೂರಿಯ ವೀಥಿಯಿಕ್ಕೆಲದಲಿ
ಹೇಮನಿರ್ಮಿತ ಸೌಧದೋಳಿ
ರಾಮಣೀಯತೆವೆತ್ತ ಕಳಸದಂಗಡಿಯಿರ್ದು
ವಾ ಮಹಾ ದ್ವಾರಕಾಪುರದೆ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕುಡುವರು
ವಿಜಯನಗರ ಸಾಮ್ರಾಜ್ಯದ ವರ್ಣನೆಯನ್ನು ವಿದೇಶೀಯರು ಹೊಗಳಿರುವುದನ್ನು ನಾವು ಬಲ್ಲೆವು. ಕನಕದಾಸರ ಬಣ್ಣನೆಯೂ ಇಲ್ಲಿ ವಿಭಿನ್ನವಾಗೇನೂ ಇಲ್ಲ.
ನಳಚರಿತ್ರೆ;
ನಳಚರಿತ್ರೆ ಹಾಗೂ ರಾಮಧಾನ್ಯಚರಿತ್ರೆಗಳು ಭಾಮಿನೀಷಟ್ಪದಿಯಲ್ಲಿದ್ದು ಸಾಂಪ್ರದಾಯಿಕ ವಸ್ತುವನ್ನು ನಿತ್ಯನೂತನ ಶೈಲಿಯಲ್ಲಿ ನಿರೂಪಿಸುವ ಅದ್ಭುತ ಕಲ್ಪನಾಮೋಡಿಗೆ ಕೈಗನ್ನಡಿಯಾಗಿವೆ.
ಮಹಾಭಾರತದಂತಹ ರಾಷ್ಟ್ರಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳದಮಯಂತಿಯರ ಕಥೆ. ೧೩ನೇ ಶತಮಾನದ ನಳಚಂಪುವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ.
ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರಮೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರನೂತನ.
ಕಷ್ಟಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ್ಗೆ ದಮಯಂತಿಯನ್ನು ಕುರಿತು ನಳ:
ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨)
ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ.
ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಫ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು, ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.
ರಾಮಧಾನ್ಯಚರಿತ್ರೆ
ರಾಮಧಾನ್ಯಚರಿತ್ರೆಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂದು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೆ ಕೊರತೆಯಿಲ್ಲ.
· ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?
· ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
· ಎಲವೋ ನೀನೆಲ್ಲಿಹೆಯೋ ನಿನ್ನಯ ಬಳಗವದು...
ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪವಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು ಎಂದರೆ ತಪ್ಪಾಗಲಾರದು.
ಹರಿಭಕ್ತಿಸಾರ
ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯೆನ್ನಬಹುದು.
ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.
ಕೀರ್ತನೆಗಳು
ಕನಕದಾಸರ ಭಕ್ತಿಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಯನಾಗಿ ಅವರು ಕಂಡಿದ್ದಾರೆ. ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು “ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡರಿಪು ಗಂಡ ಉದ್ಧಂಡ ನರಸಿಂಹನ” ಎಂದು ಸಂತೋಷಪಟ್ಟಿದ್ದಾರೆ. “ಎಲ್ಲಿ ನೋಡಿದರಲ್ಲಿ ರಾಮ” ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ “ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು” ಎಂಬ ಧನ್ಯತಾಭಾವ.
ಮೊದಲೊಮ್ಮೆ “ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ” ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ “ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ” ಎಂದುಕೊಳ್ಳುತ್ತಾರೆ.
ಜೈನ ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟುಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.
ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವ ನಮ್ಮಜ್ಜ ನರಕುರಿ ಹಿಂಡುಗಳ
ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸ ಸಂಪರ್ಕದ ನಂತರ
ಕುಲಕುಲಕುಲವೆಂದು ಹೊಡೆದಾಡದಿರಿ
ಎಂದು ಜಂಕಿಸಿ ಕೇಳುವ ಹಾಗಾದರು.
ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು.
ಉಚ್ಛಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಇನ್ನು ಪುರಂದರ, ಕನಕ, ಜಗನ್ನಾಥ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತಜ್ಞಾನದ ಅನಿವಾರ್ಯತೆ ಇವರಿಗಿಲ್ಲ. ಜಾತಿಗೀತಿಗಳ ಕಟ್ಟುಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು.
ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.
ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . . .
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ . . .
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . . .
ಐತಿಹ್ಯಗಳು
ಕನಕದಾಸರ ಕುರಿತಂತೆ ಕೆಲ ಐತಿಹ್ಯಗಳೂ ಪ್ರಚಲಿತವಾಗಿವೆ. ಅವುಗಳಲ್ಲಿ ಮುಖ್ಯವಾದವು:
೧. ಉಡುಪಿಯ ಕೃಷ್ಣಮಠದಲ್ಲಿನ ಕನಕನ ಕಿಂಡಿ.
೨. ತಿರುಪತಿಯ ತೇರನೆಳೆಯುವಲ್ಲಿ ಕನಕದಾಸರ ಪವಾಡ.
೩. ವ್ಯಾಸಸಮುದ್ರವೆಂಬ ಕೆರೆಯ ತೂಬಿನ ಬಂಡೆ ಸರಿಸಿದ ಘಟನೆ.
ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ. ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತಶಕ ೧೨೩೮ (ಶಕವರ್ಷ ೧೧೬೦ ಹೇವಿಲಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖಮಾಡಿ ಪ್ರತಿಷ್ಠಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.
ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು ಒಂದೇ ಮನಸ್ಸಿನವರು. ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ದಾರ್ಷ್ಟ್ಯವೂ ಕನಕರಿಗಿರಲಿಲ್ಲ. ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ಧೂಳಿದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತು ಹೊರತು ಸಿನಿಮೀಯವಾಗಿ ಅಲ್ಲ. ಕನಕದಾಸರು ಪುಣ್ಯಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ತಾದ ಸಾಕ್ಷಿಯಾಗಿ ನಿಲ್ಲುವುದರಿಂದ ಕಿಂಡಿಯ ಸಹಾಯ ಅವರಿಗೆ ಬೇಕಾಗಿಯೂ ಇಲ್ಲ.
ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೆ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದ ಪ್ರಜ್ವಲ ತಾರೆಯಾಗಿದ್ದಾರೆ.