ಕನಕಧಾರ ಲಕ್ಷ್ಮಿ ಮಂತ್ರ ಪಠಿಸುವ ವಿಧಾನ

ಕನಕಧಾರ ಲಕ್ಷ್ಮಿ ಮಂತ್ರ ಪಠಿಸುವ ವಿಧಾನ

ಪ್ರತೀ ಶುಕ್ರವಾರದಂದು ಕನಕಧಾರ ಲಕ್ಷ್ಮೀ ಮಂತ್ರವನ್ನು ಪಠಿಸುವ ಮೊದಲು ನಾವು ಕೈಗೊಳ್ಳಬೇಕಾದ ಕಾರ್ಯಗಳು:

* ಕನಕಧಾರ ಮಂತ್ರವನ್ನು ಪಠಿಸುವ ಮುನ್ನ ಸ್ನಾನ ಮಾಡಿ ಶುದ್ಧವಾದ ಹಾಗೂ ಸಡಿಲವಾದ ಬಟ್ಟೆಯನ್ನು ಧರಿಸಬೇಕು.

* ಮಂತ್ರವನ್ನು ಪಠಿಸಲು ನಿಮಗಿಷ್ಟವಾದ ಭಂಗಿಯಲ್ಲಿ ಕುಳಿತುಕೊಳ್ಳಿ.

*ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದವರು ಕುರ್ಚಿಯ ಮೇಲೆ ಅಥವಾ ಸೋಫಾದ ಮೇಲೆ ಕುಳಿತುಕೊಳ್ಳಬೇಕು.

* ಮಂತ್ರವನ್ನು ಪಠಿಸುವ ಮುನ್ನ ಪ್ರಾಣಾಯಾಮವನ್ನು ಮಾಡಬೇಕು.

* ಪ್ರಾಣಾಯಾಮ ಮಾಡಿದ ನಂತರ ಕಣ್ಣುಗಳನ್ನು ಮುಚ್ಚಿ ಧ್ಯಾನಾವಸ್ಥೆಯಲ್ಲಿ ಕನಕಧಾರ ಮಂತ್ರವನ್ನು ಪಠಿಸಿ.

*ಕನಕಧಾರ ಮಂತ್ರ:*

" ಓಂ ಐಂ ಹ್ರೀ ಶ್ರೀಂ ಕ್ಲೀಂ ಕನಕಧಾರಾಯೇ ಹ್ರೀಂ ಸ್ವಾಹಾ "

*ಕನಕಧಾರ ಮಂತ್ರವನ್ನು ನಿರಂತರವಾಗಿ 10 ನಿಮಿಷಗಳ ಕಾಲ ಪಠಿಸಬೇಕು. ದೀಪಾವಳಿಯಂದು ತಪ್ಪದೇ ಕನಕಧಾರ ಮಂತ್ರವನ್ನು ಪಠಿಸಿ.

*ರುದ್ರಾಕ್ಷ ಜಪಮಾಲೆಯೊಂದಿಗೆ ಕನಕಧಾರ ಮಂತ್ರವನ್ನು ಜಪಿಸಬಹುದು ಅಥವಾ ಹೂಮಾಲೆಯನ್ನು ಹಿಡಿದು ಕೂಡ ಮಂತ್ರವನ್ನು ಪಠಿಸಬಹುದು.

*ನಂಬಿಕೆಗಳ ಪ್ರಕಾರ, ಕನಕಧಾರ ಮಂತ್ರವು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ. ಮಂತ್ರವನ್ನು ಪಠಿಸಲು ಆರಂಭಿಸಿದ 41 ದಿನಗಳಲ್ಲೇ ಮಂತ್ರದ ಪ್ರಯೋಜನವನ್ನು ತಿಳಿದುಕೊಳ್ಳುವಿರಿ.

*ಕನಕಧಾರ ಮಂತ್ರದ ಪ್ರಯೋಜನ*

ಈ ಮಂತ್ರ ಪಠಿಸಿದರೆ ಸಂತಾನ ಭಾಗ್ಯ ಖಚಿತ..! ಆದರೆ ಈ ನಿಯಮಗಳನ್ನು ಪಾಲಿಸಿ

ಕನಕಧಾರ ಮಂತ್ರ ಪಠಿಸುವಾಗ ಈ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಿ:

*ಕನಕಧಾರ ಮಂತ್ರವು ಶಕ್ತಿಯುತ ಮಂತ್ರವಾಗಿದ್ದು, ಈ ಮಂತ್ರದ ಮೇಲೆ ಗೌರವವನ್ನಿಟ್ಟು ಪಠಿಸಬೇಕು.

*ಕನಕಧಾರ ಮಂತ್ರದ ಅಭ್ಯಾಸ ಮಾಡುವಾಗ ಯಶಸ್ಸನ್ನು ಪಡೆಯುತ್ತಿದ್ದಂತೆ ನಿಮ್ಮ ಸ್ವಭಾವವನ್ನೂ ಬದಲಾಯಿಸಿಕೊಳ್ಳಿ.

*ಕನಕಧಾರ ಮಂತ್ರವನ್ನು ಪಠಿಸಲು ಯಾವುದೇ ಗುರುಗಳ ಅಥವಾ ಯಾವುದೇ ಪಂಡಿತರ ಅಗತ್ಯವಿಲ್ಲ.

*ಕನಕಧಾರ ಮಂತ್ರದ ಅಭ್ಯಾಸವನ್ನು ನೀವು ದೀಪಾವಳಿ ಹಬ್ಬದ ದಿನದಿಂದ ಅಥವಾ ಯಾವುದೇ ಮಾಸದ ಶುಕ್ಲ ಪಕ್ಷದ ಗುರುವಾರದಿಂದ ಪ್ರಾರಂಭಿಸಬೇಕು.

*ನೀವು ಗೃಹಿಣಿಯಾಗಿದ್ದರೆ, ಉದ್ಯೋಗದಲ್ಲಿ, ಅಂಗಡಿ ಅಥವಾ ವ್ಯವಹಾರದಲ್ಲಿ ತೊಡಗಿದ್ದರೆ ಪೂರ್ವಕ್ಕೆ ಎದುರಾಗಿ ಕುಳಿತು ಕನಕಧಾರ ಮಂತ್ರವನ್ನು ಪಠಿಸಬೇಕು.

*ನೀವು ಫ್ಯಾಷನ್‌ ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಉದ್ಯೋಗವನ್ನು ಮಾಡುತ್ತಿದ್ದರೆ, ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ, ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಹೋಟೆಲ್‌ ಅಥವಾ ಇನ್ನಿತರ ಬೆಂಕಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡಿದ್ದರೆ ಪಶ್ಚಿಮ ದಿಕ್ಕಿಗೆ ಎದುರಾಗಿ ಕುಳಿತು ಕನಕಧಾರ ಮಂತ್ರವನ್ನು ಜಪಿಸಬೇಕು.

*ನೀವು ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿದ್ದರೆ, ವಿದ್ಯಾರ್ಥಿಗಳಾಗಿದ್ದರೆ ಅಥವಾ ಕೃಷಿಯಲ್ಲಿ ತೊಡಗಿದ್ದರೆ ಉತ್ತರಕ್ಕೆ ಉಖ ಮಾಡಿ ಕುಳಿತು ಕನಕಧಾರ ಮಂತ್ರವನ್ನು ಪಠಿಸಬೇಕು.

*ಒಂದು ವೇಳೆ ಕಮ್ಮಾರರು, ತೈಲ, ಸರ್ಕಾರಿ ವಲಯದಲ್ಲಿ, ಸಾಮಾಜಿಕ ಸೇವೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿದ್ದರೆ ನೀವು ದಕ್ಷಿಣ ದಿಕ್ಕಿನತ್ತ ಮುಖಮಾಡಿ ಕನಕಧಾರ ಮಂತ್ರವನ್ನು ಪಠಿಸಬೇಕು.

*18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅಥವಾ ಪುರುಷರು ಕನಕಧಾರ ಮಂತ್ರವನ್ನು ಪಠಿಸಬಹುದು.

*ಮಹಿಳೆಯರು ಮುಟ್ಟಿನ ಸಮಯ ಮುಗಿದ ನಂತರ ಕನಕಧಾರ ಮಂತ್ರವನ್ನು ಪಠಿಸಬಹುದು.

*ನೀವು ಯಾವುದೇ ಶುಭ ಕಾರ್ಯವನ್ನು ಅಥವಾ ಒಳ್ಳೆಯ ಕೆಲಸವನ್ನು ಆರಂಭಿಸುವಾಗ ಅಡೆತಡೆಗಳು ಬಾರದಿರಲೆಂದು ಕನಕಧಾರ ಮಂತ್ರವನ್ನು ಪಠಿಸಬೇಕು.

*ಕನಕಧಾರ ಮಂತ್ರವನ್ನು ಸೂರ್ಯಾಸ್ತದ ನಂತರ ಪಠಿಸುವುದು ಅತ್ಯಂತ ಹೆಚ್ಚು ಶಕ್ತಿಯುತ ಪರಿಣಾಮವನ್ನು ನೀಡುವುದು.

*ಕನಕಧಾರ ಮಂತ್ರದ ಅಭ್ಯಾಸ ಮುಗಿದ ಮೇಲೆ ಅಶ್ವನಿ ಮುದ್ರೆಯನ್ನು ಅನುಸರಿಸಬೇಕು. ಈ ಮುದ್ರೆಯು ನಿಮಗೆ ಬ್ರಹ್ಮಚರ್ಯವನ್ನು ಅನುಸರಿಸಲು ಸಹಕರಿಸುತ್ತದೆ.

ಕನಕಧಾರ ಮಂತ್ರವು ಅತ್ಯಂತ ಶಕ್ತಿಯುತ ಮಂತ್ರವಾಗಿದ್ದು, ಇದರ ಪ್ರಾಮುಖ್ಯತೆಯನ್ನು ತಿಳಿದವರು ಅತಿ ವಿರಳ. ಈ ಮಂತ್ರವನ್ನು ಋಣ ಮುಕ್ತಿಗಾಗಿ ಪಠಿಸುತ್ತಾರೆ. ಅಂದರೆ ಸಾಲದ ಭಾದೆಯಿಂದ ಮುಕ್ತಗೊಳ್ಳಲು ಹೆಚ್ಚಾಗಿ ಈ ಮಂತ್ರವನ್ನು ಪಠಿಸುತ್ತಾರೆ.

ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ - ಕನಕಧಾರಾ ಸ್ತೋತ್ರದ ವಿವರಣೆ ಭಾವರ್ಥ ಕೂಡ ಇದೆ ಸ್ಪಷ್ಟವಾಗಿ ಹೇಳಲು ಕಷ್ಟವಾದರೆ ಕನ್ನಡದ ಅರ್ಥ ಓದಿ ಮಹಾಲಕ್ಷ್ಮಿ ಕೃಪೆ ನಿಮದಾಗಲಿ

ಅಂಗಂ ಹರೇ ಪುಲಕಭೂಷಣಮಾಶ್ರಯಂತೀ 

ಭೃಂಗಾಗನೇವ ಮುಕುಲಾಭರಣಂ ತಮಾಲಮ್ |

ಅಂಗೀಕೃತಾಖಿಲವಿಭೂತಿರಪಾಂಗಲೀಲಾ 

ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾ || 1 ||

ತಮಾಲವೆಂಬ ಮರದ ಆಭರಣಪ್ರಾಯವಾದ ಮೊಗ್ಗನ್ನು ಆಶ್ರಯಿಸಿರುವ ಹೆಣ್ಣುದುಂಬಿಯಂತೆ – ಶ್ರೀ ಮಹಾವಿಷ್ಣುವಿನ ರೋಮಾಂಚಗೊಂಡ ಶರೀರವನ್ನು ಅವಲಂಬಿಸಿರುವ, ಮಂಗಳದೇವತೆಯಾದ ( ಮಹಾಲಕ್ಷ್ಮಿಯ ), ಸಮಸ್ತ ಐಶ್ವರ್ಯಗಳನ್ನೂ ಅಡಗಿಸಿಕೊಂಡಿರುವ ಕುಡಿಗಣ್ಣಿನ ನೋಟಗಳೆಂಬ ಲೀಲೆಯು ನನಗೆ ಮಂಗಳವನ್ನೀಯಲಿ.

ಮುಗ್ಧಾಮುಹುರ್ವಿದಧತೀ ವದನೇ ಮುರಾರೇ |

ಪ್ರೇಮತ್ರಪಾಪ್ರಣೀಹಿತಾನಿ ಗತಾಗತಾನಿ |

ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ

ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾಃ || 2 ||

ಶ್ರೀ ಮಹಾವಿಷ್ಣುವಿನ ಮುಖದ ಕಡೆಗೆ ಪ್ರೇಮಪೂರ್ವಕವಾದ ನಾಚಿಕೆಯಿಂದ ನೋಟವನ್ನು ಬೀರುತ್ತಾ ಹಾಗೂ ಹಿಂದೆಗೆಯುತ್ತಾ ಮುಗ್ದವಾದ ರೀತಿಯಿಂದ ಚಲಿಸುತ್ತಿರುವ ಎರಡು ದೊಡ್ಡನೈದಿಲೆಗಳಂತೆ ಇರುವ – ಹಾಗೂ ಹೂಮಾಲೆಯನ್ನು ನೋಡುತ್ತಿರುವ ದುಂಬಿಯಂತೆ ಇರುವ ಸಾಗರಕನ್ನಿಕೆಯಾದ ಲಕ್ಷ್ಮಿಯ ಕಟಾಕ್ಷಗಳು ನನಗೆ ಐಶ್ವರ್ಯವನ್ನುಂಟು ಮಾಡಲಿ

ಅಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ –

ಆನಂದಕಂದಮನಿಮೇಷಮನಂಗತಂತ್ರಮ್ |

ಅಕೇಕರಸ್ಥಿತಕನೀನಿಕಪಕ್ಷ್ಮನೇತ್ರಮ್

ಭೂತ್ಯೈಭವೇನ್ಮಮ ಭುಜಂಗಶಯಾಂಗನಾಯಾಃ || 3 ||

ಸ್ವಲ್ಪವೇ ಮುಚ್ಚಿದ ಕಣ್ಣುಳ್ಳ ಹಾಗೂ ಆನಂದಭರಿತನೂ ರೆಪ್ಪೆಯಾಡಿಸದವನೂ ಮನ್ಮಥಾವಿಷ್ಟನೂ ಆದ ಮುಕುಂದ – ವಿಷ್ಣುನನ್ನು ಅರಿತವಳಾದ ನಾಗಶಯನನ ಮಡದಿಯಾದ ಲಕ್ಷ್ಮಿಯ ಕುಡಿಗಣ್ಣಿನ ನೋಟವನ್ನು ಅವಲಂಬಿಸಿರುವ ರೆಪ್ಪೆಗಳುಳ್ಳ ನೇತ್ರವು ನನ್ನ ಐಶ್ವರ್ಯ ಸಂವೃದ್ಧಿಗೆ ಕಾರಣವಾಗಲಿ.

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ

ಹಾರಾವಲೀ ಚ ಹರಿನೀಲಮಣೀ ವಿಭಾತಿ |

ಕಾಮಪ್ರದಾ ಭವತೋಪಿ ಕಟಾಕ್ಷಮಾಲಾ

ಕಲ್ಯಾಣಮಾವಹತು ಮೇ ಕಮಲಲಯಾಯಾಃ || 4 ||

ಮಧುಸೂದನನಾದ ವಿಷ್ಣುವಿನ ತೋಳುಗಳ ನಡುವೆ ಹಾಯ್ದ ಕೌಸ್ತುಭ ರತ್ನವನ್ನು ಆಶ್ರಯಿಸಿರುವ ಹಸಿರುಮಿಶ್ರವಾದ ಎರಡು ನೀಲಮಣಿಗಳುಳ್ಳ ಯಾವ ಹಾರವು ಹೋಳೆಯುತ್ತಿದೆಯೋ, ಮತ್ತು ಭಗವಂತನ ಹಾಗೂ ಕಮಲವಾಸಿನಿಯಾದ ದೇವಿಯ ಕುಡಿಗಣ್ಣುಗಳ ನೋಟಗಳ ಸಾಲು ( ಭಕ್ತರಿಗೆ ) ಇಷ್ಟಾರ್ಥಪ್ರದವಾಗಿ ಶೋಭಿಸುತ್ತಿರುವುದೋ – ಅದು ಸಹ ನನಗೆ ಕಲ್ಯಾಣವನ್ನುಂಟು ಮಾಡಲಿ.

ಕಾಲಾಂಬುದಾಲಿಲಲಿತೋರಸಿ ಕೈಟಭಾರೇ-

ರ್ಧಾರಾಧರಸ್ಫುರತಿ ಯಾ ತಟಿದಂಗನೇವ |

ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿ

ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ || 5 ||

ಕೈಟಭಶತೃವಾದ ( ವಿಷ್ಣುವಿನ ) ಕಾಲಮೇಘದಂತೆ ಕಾಂತಿಯುಳ್ಳ ಸುಂದರವಾದ ಎದೆಯಲ್ಲಿ ಮಿಂಚಿನಬಳ್ಳಿಯಂತೆ ಹೊಳೆಯುತ್ತಿರುವ ಖಡ್ಗವಿದೆಯೋ, ಅದರೋಡನೆಯೇ ಎದೆಯಲ್ಲಿ ನೆಲೆಸಿರುವ ಸಮಸ್ತ ಜಗತ್ತಿಗೂ ತಾಯಿಯಾದ ಮಹಾಶ್ರೇಷ್ಠವಾದ ಭಾರ್ಗವಪುತ್ರಿಯ ದಿವ್ಯರೂಪವು ನನಗೆ ಮಂಗಳವನ್ನುಂಟು ಮಾಡಲಿ.

ಪ್ರಾಪ್ತಂ ಪದಂ ಪ್ತಥಮತಃ ಖಲು ಯತ್ಪ್ರಭಾವಾತ್

ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |

ಮಯ್ಯಾಪತೇತ್ತದಿಹ ಮಂದರಮೀಕ್ಷಣಾರ್ಥಂ

ಮಂದಾಲಸಾಕ್ಷಿ ಮಕರಾಕರಕನ್ಯಕಾಯಾಃ || 6 ||

ಯಾವ ದೇವಿಯ ಅನುಗ್ರಹ ದೃಷ್ಟಿಯಿಂದ ಮಧುಸೂದನನಲ್ಲಿ ಸ್ಥಾನವು ಮೊದಲ ಬಾರಿಗೆ ಮಂಗಳಕರವಾಗಿ ಮನ್ಮಥನಿಗೆ ದೊರಕಿತೋ ( ಆ ದೇವಿಯ ), ಸಮುದ್ರರಾಜನ ಕನ್ಯೆಯಾದ ಲಕ್ಷ್ಮಿಯ ಕಟಾಕ್ಷವು ಅಲ್ಪವಾಗಿಯಾದರೂ ಮೆಲ್ಲ ಮೆಲ್ಲನೆ ನನ್ನ ಮೇಲೆ ಹರಿಯುವಂತಾಗಲಿ.

ವಿಶ್ವಾಮರೇಂದ್ರಪದವಿಭ್ರಮದಾನದಕ್ಷ 

ಮಾನಂದಹೇತುರಧಿಕಂ ಮಧವಿದ್ವಿಷೋಪಿ |

ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧ

 ಮಿಂದೀವರೋದರಸಹೋದರಮಿಂದಿರಾಯಾಃ || 7 ||

ಸಮಸ್ತದೇವತಾಶ್ರೇಷ್ಠರ ಪದವಿಗಳೆಂಬ ಸೌಭಾಗ್ಯವನ್ನು ಕೊಡುವದರಲ್ಲಿ ಸಮರ್ಥವಾದ, ಮತ್ತು ಮಧುಸೂದನನಿಗೂ ಹೆಚ್ಚಿನ ಆನಂದಕಾರಣವಾದ, ಕಮಲದ ಗರ್ಭದಂತೆ ಮೃದುವಾದ ಇಂದಿರಾದೇವಿಯ ಕಣ್ಣಿನ ನೋಟದ ಅರ್ಧ ಭಾಗದಲ್ಲಿ ಒಂದಿಷ್ಟಾದರೂ ನನ್ನಲ್ಲಿ ನೆಲೆಗೊಳ್ಳಲಿ.

ಇಷ್ಟಾವಿಶಿಷ್ಟಮತಯೋಪಿನರಾಯಯಾ ದ್ರಾಗ್ 

ದೃಷ್ಟಾಸ್ತ್ರಿವಿಷ್ಟಪದಂ ಸುಲಭಂ ಲಭಂತೇ |

ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರೀಷ್ಟಾಂ ಪುಷ್ಟಿಂ 

ಕೃಪೀಷ್ಟಮಮ ಪುಷ್ಕರವಿಷ್ಟರಾಯಾಃ || 8 ||

ವಿಶೇಷವಾದ ಪಾಂಡಿತ್ಯವುಳ್ಳ (ದೇವಿಗೆ) ಪ್ರಿಯರಾದ ಮನಷ್ಯರಾರೂ ಒಮ್ಮೆ ದೇವಿಯ ದೃಷ್ಟಿಗೆ ಪಾತ್ರರಾದದ್ದೇ ಆದರೆ ಸುಲಭವಾಗಿ ಸ್ವರ್ಗಪದವಿಯನ್ನು ಹೊಂದುವರು. ಅರಳಿದ ಕಮಲದ ಒಳಭಾಗದಂತೆ ಕಾಂತಿಯುಳ್ಳ, ಕಮಲಾಸನೆಯಾದ ದೇವಿಯ ಅಂಥ ದೃಷ್ಟಿಯ ನನಗೆ ಪುಷ್ಟಿಯನ್ನುಂಟುಮಾಡಲಿ.

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾ ಮಸ್ಮಿನ್ನ 

ಕಿಂಚನ ವಿಹಂಗಶಿಶೌ ವಿಷಣ್ಣೇ |

ದುಷ್ಕರ್ಮಘರ್ಮಮಪನೀಯ ಚಿರಾಯ 

ದೂರಾನ್ನಾರಾಯಣಪ್ರಣಯಿನೀನಯನಾಂಬುವಾಹಃ || 9 ||

ನಾರಾಯಣನ ಪ್ರಿಯೆಯಾದ ದೇವಿಯ ಕಟಾಕ್ಷಪ್ರವಾಹವು ಕೆಟ್ಟ ಕರ್ಮಗಳೆಂಬ ಬಿಸಿಲನ್ನು ನಿತ್ಯವಾಗಿ ದೂರವಾಗಿ ತೊಡೆದುಹಾಕಿ ವಿಷಾದದಿಂದ ಕೂಡಿರುವ ದರಿದ್ರವೆಂಬ ಪಕ್ಷಿಯ ಮರಿಯಾದ (ನನ್ನಲ್ಲಿ ) ದಯೆಯಿಟ್ಟು ಕೃಪೆಯಿಂದ ಗಾಳಿಯಿಂದ ಪ್ರೇರಿಸಲ್ಪಟ್ಟ ಐಶ್ವರ್ಯವೆಂಬ ಮಳೆಯ ಧಾರೆಯುನ್ನುಂಟುಮಾಡಲಿ.

ಗೀರ್ದೇವತೇತಿ ಗರುಡಧ್ವಜಸುಂದರೀತಿ 

ಶಾಕಂಭರೀತಿ ಶಶಿಶೇಖರವಲ್ಲಭೇತಿ |

ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ 

ತಸ್ಮೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ || 10 ||

ವಾಗ್ಧೇವಿಯೆಂದೂ ಗರುಡಧ್ವಜನಾದ ವಿಷ್ಣುವಿನ ಪ್ರಿಯಳೆಂದೂ ಶಾಖಂಬರಿಯೆಂದೂ ಚಂದ್ರಶೇಖರನಾದ ಶಿವನ ಪತ್ನಿಯೆಂದೂ ಆಯಾ ಕಾಲಕ್ಕೆ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ ಲೀಲೆಗಳಲ್ಲಿ ತೋರಿಕೊಂಡಿರುವವಳಾದ, ಮೂರು ಲೋಕಕ್ಕೂ ಗುರುವಾದ ಶ್ರೀ ಮನ್ನಾರಾಯಣನ ಮಡದಿಯಾದ ಅಕೆಗೆ ವಂದನೆಗಳು.

ಶ್ರುತ್ಯೈಸಮೋಸ್ತು ಶುಭಕರ್ಮಫಲಪ್ರಸೂತ್ಯೈ 

ರತ್ಯೈ ನಮೋಸ್ತು ರಮಣೀಯಗುಣಾಶ್ರಯಾಯೈ |

ಶಕ್ತ್ಯೈ ನಮೋಸ್ತು ಶತಪತ್ರನಿಕೇತನಾಯೈ 

ಪುಷ್ಪೈ ನಮೋಸ್ತು ಪುರುಷೋತ್ತಮವಲ್ಲಭಾಯೈ || 11 ||

ಶುಭಕರ್ಮಗಳ ಫಲವನ್ನು ಉಂಟುಮಾಡುವ ಶ್ರುತಿರೂಪಳಾದ ದೇವಿಗೆ ನಮಸ್ಕಾರವು. ರಮಣೀಯವಾದ ಗುಣಗಳಿಗೆ ಆಶ್ರಯಳಾದ ರತತಿಗೆ ನಮಸ್ಕಾರಗಳು. ಕಮಲನಿವಾಸಿನಿಯಾದ ಶಕ್ತಿರೂಪಳಾದ ಲಕ್ಷ್ಮಿಗೆ ನಮಸ್ಕಾರಗಳು. ಪುರುಷೋತ್ತಮನ ಪತ್ನಿಯಾದ ಪುಷ್ಪಿದೇವಿಗೆ ನಮಸ್ಕಾರಗಳು.

ನಮೋಸ್ತು ನಾಲಿಕನಿಭಾನನಾಯೈ 

ನಮೋಸ್ತು ದಿಗ್ಧೋದಧಿಜನ್ಮಭೂಮ್ಯೈ |

ನಮೋಸ್ತು ಸೋಮಾಮೃತಸೋದರಾಯೈ 

ನಮೋಸ್ತು ನಾರಾಯಣವಲ್ಲಭಾಯೈ || 12 ||

ಕಮಲದಂತೆ ಸುಂದರವಾದ ಮುಖವುಳ್ಳ ದೇವಿಗೆ ನಮಸ್ಕಾರ. ಕ್ಷೀರಸಮುದ್ರವನ್ನು ಜನ್ಮಸ್ಥಾನವಾಗಿ ಹೊಂದಿರುವವಳಿಗೆ ನಮಸ್ಕಾರ. ಸಮುದ್ರಮಂಥನ ಕಾಲದಲ್ಲಿಯೇ ( ಲಕ್ಷ್ಮಿಯೊಡನೆ ) ಹುಟ್ಟಿದ ಚಂದ್ರ ಹಾಗೂ ಅಮೃತಗಳಿಗೆ ಸೋದರಿಯಾದವಳಿಗೆ ನಮಸ್ಕಾರ ನಾರಾಯಣನ ವಲ್ಲಭೆಗೆ ವಂದನೆಗಳು.

ನಮೋಸ್ತು ಹೇಮಾಂಭುಜಪೀಠಕಾಯೈ 

ನಮೋಸ್ತು ಭೂಮಂಡಲನಾಯಿಕಾಯೈ |

ನಮೋಸ್ತು ದೇವಾದಿದಯಾಪರಾಯೈ 

ನಮೋಸ್ತು ಶಾರ್ಙ್ಗೌಯುಧವಲ್ಲಭಾಯೈ || 13 ||

ಸುವರ್ಣಕಮಲಪೀಠವಾಸಿನಿಯಾದ, ಭೂಮಂಡಲಕ್ಕೆಲ್ಲ ಒಡೆಯಳಾದ, ದೇವಾದಿ ಸಮಸ್ತ ಜೀವಿಗಳಲ್ಲಿಯೂ ದಯೆಯುಳ್ಳ ಮತ್ತು ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿರುವ ವಿಷ್ಣುವಿನ ಪತ್ನಿಯಾದ ದೇವಿಗೆ ನಮಸ್ಕಾರಗಳು.

ನಮೋಸ್ತು ದೇವ್ಯೈ ಭೃಗುನಂದನಾಯೈ 

ನಮೋಸ್ತು ವಿಷ್ಣೋರುರಸಿ ಸ್ಥಿತಾಯೈ |

ನಮೋಸ್ತು ಲಕ್ಷ್ಮೈ ಕಮಲಾಲಯಾಯೈ 

ನಮೋಸ್ತು ದಾಮೋದರವಲ್ಲಭಾಯೈ || 14 ||

ಭೃಗುಪುತ್ರಿಯಾದ ದೇವಿಗೆ, ವಿಷ್ಣವಿನ ಹೃದಯವಾಸಿನಿಯಾದವಳಿಗೆ, ಕಮಲವಾಸಿನಿಯಾದ ಲಕ್ಷ್ಮಿಗೆ, ದಾಮೋದರನ ಪತ್ನಿಯಾದ ಮಹಾದೇವಿಗೆ ವಂದನೆಗಳು.

ನಮೋಸ್ತು ಕಾಂತ್ಯೈ ಕಮಲೇಕ್ಷಣಾಯೈ 

ನಮೋಸ್ತು ಭೂತ್ಯೈ ಭವನಪ್ರಸೂತ್ಯೈ |

ನಮೋಸ್ತು ದೇವಾದಿಭಿರರ್ಚಿತಾಯೈ 

ನಮೋಸ್ತು ನಂದಾತ್ಮಜವಲ್ಲಭಾಯೈ || 15 ||

ಕಮಲದಂತೆ ಕಂಗಳುಳ್ಳ ಪ್ರಕಾಶಮಾನಳಾದವಳಿಗೂ, ಜಗತ್ತನ್ನು ಹಡೆದಿರುವ ಮಹಿಮಾವಂತಳಿಗೂ ದೇವತೆಗಳೇ ಮೊದಲಾದವರಿಂದ ಪೂಜಿಸಲ್ಪಟ್ಟವಳಿಗೂ ನಂದಗೋಪನ ಮಜಗಳಾದ ದುರ್ಗೆಗೆ ಪ್ರಿಯಳಾಗಿಯೂ ಇರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.

ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ 

ಸಾಮ್ರಾಜ್ಯದಾನವಿಭವಾನಿ ಸರೋರುಹಾಣಿ |

ತ್ವದ್ವಂದನಾನಿ ದುರಿತಾಹರಣೋದ್ಯತಾನಿ 

ಮೂಮೇವ ಮಾತರನಿಶಂ ಕಲಯಂತು ಮಾನ್ಯೇ || 16 ||

ಸಂಪತ್ತುಗಳನ್ನು ನೀಡುವ, ಎಲ್ಲಾ ಇಂದ್ರಿಯಗಳಿಗೂ ಆನಂದವ ನ್ನುಂಟುಮಾಡುವ, ಸಾಮ್ರಾಜ್ಯ ಪದವಿಯನ್ನು ದಯಪಾಲಿಸುವ ನಿನ್ನ ಪಾದಕಮಲಗಳನ್ನು ನಮಸ್ಕರಿಸುವಿಕೆಯು ಸಕಲ ಪಾಪಗಳನ್ನೂ ಕಳೆಯುವುದರಲ್ಲಿ ಮುಂದಾಗಿರುವವು. ಮಾನನೀಯಳೆ, ಆ ವಂದನೆಗಳು ಯಾವಾಗಲೂ ನನಗೆ ಸಂಭವಿಸುತ್ತಿರಲಿ.

ಯತ್ಕಟಾಕ್ಷಸಮುಪಾಸನಾವಿಧಿಃ 

ಸೇವಕಸ್ಯ ಸಕಲಾರ್ಥಸಂಪದಃ |

ಸಂತನೋತಿ ವಚನಾಂಗಮಾನಸೈಸ್ತ್ವಾಂ 

ಮುರಾರಿಹೃದಯೇಶ್ವರೀಂ ಭಜೇ || 17 ||

ಯಾವ ದೇವಿಯ ಕುಡಿಗಣ್ಣಿನ ನೋಟದ ಚಿಂತನೆಯು ಸೇವಕನಾದ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನೂ ಕೊಡುವುದೋ ಅಂಥ, ಮರಾರಿಯಾದ ನಾರಾಯಣನ ಹೃದಯೇಶ್ವರಿಯಾದ ನಿನ್ನನ್ನು ಕಾಯೇನ-ಮನಸಾ-ವಾಚಾ ( ತ್ರಿಕರಣಗಳಿಂದಲೂ) ಭಜಿಸುವೆನು.

ಸರಸಿಜನಯನೇ ಸರೋಜಹಸ್ತೇ 

ಧವಲತಮಾಂಶುಕಗಂಧಮಾಲ್ಯಶೋಭೇ |

ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿ

ಭುವನಭೂತಿಕರಿ ಪ್ರಸೀದ ಮಹ್ಯಮ್ || 18 ||

ಕಮಲದಂತೆ ಕಣ್ಣುಳ್ಳವಳೆ, ಕೈಯಲ್ಲಿ ಕಮಲವನ್ನು ಹಿಡಿದಿರುವವಳೆ, ಅತ್ಯಂತ ಶುಭ್ರವಾದ ವಸ್ತ್ರ, ಗಂಧ, ಹೂಮಾಲೆಗಳಿಂದ ಶೋಭಿಸುತ್ತಿರುವವಳೆ, ಪೂಜ್ಯಳೆ, ಶ್ರೀಹರಿಯ ಪ್ರಿಯಳೆ, ಮನೋಜ್ಞಳೆ, ಮೂರು ಲೋಕಗಳ ಐಶ್ವರ್ಯಗಳ ಐಶ್ವರ್ಯವನ್ನು ಕೊಡುವವಳೆ, ನನಗೆ ಪ್ರಸನ್ನಳಾಗು.

ದಿಗ್ ಹಸ್ತಿಭಿಃ ಕನಕಕುಂಭಮುಖಾವಸೃಷ್ಟ-

ಸ್ವರ್ವಾಹಿನೀವಿಮಲಚಾರುಜಲಾಪ್ಲುತಾಂಗೀಮ |

ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-

ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ || 19 ||

ದಿಗ್ಗಜಗಳ ( ಸೊಂಡಿಲುಗಳಲ್ಲಿರುವ) ಚಿನ್ನದ ಕಲಶಗಳ ಬಾಯಿಂದ ಸುರಿಯಲ್ಪಟ್ಟ ಆಕಾಶಗಂಗೆಯ ದಿವ್ಯಜಲದಿಂದ ತೋಯಿಸಲ್ಪಟ್ಟ ಶರೀರವುಳ್ಳವಳೂ, ಜಗತ್ತಿಗೇ ತಾಯಿಯೂ, ಸಮಸ್ತ ಲೋಕಗಳ ಒಡೆಯನಾದ ( ವಿಷ್ಣುವಿನ ) ಪತ್ನಿಯೂ, ಅಮೃತಸಮುದ್ರರಜನ ಮಗಳೂ ಆದ ದೇವಿಯನ್ನು ನಾನು ಪ್ರಾತಃಕಾಲದಲ್ಲಿ ವಂದಿಸುವೆನು.

ಕಮಲೇ ಕಮಲಾಕ್ಷವಲ್ಲಭೇ ತ್ವಂ 

ಕರುಣಾಪೂರತರಂಗಿತೈರಪಾಂಗೈಃ |

ಅವಲೋಕಯ ಮಾಮಕಿಂಚನಾನಾಂ 

ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ || 20 ||

ಎಲೌ ಕಮಲಾದೇವಿಯ, ಕಮಲನಯನನಾದ ವಿಷ್ಣುವಿನ ಪ್ರಿಯಳೆ, ನೀನು ಕರುಣೆಯಿಂದ ತುಂಬಿದ ಚಂಚಲವಾದ ಕುಡಿನೋಡಗಳಿಂದ ನನ್ನನ್ನು ನೋಡುವವಳಾಗು. ದರಿದ್ರದಲ್ಲಿ ಮೊದಲಿಗನೂ ದಯೆತೋರಬೇಕಾದವರ ಗುಂಪಿನಲ್ಲಿ ಅರ್ಹನೂ ಕಪಟವಿಲ್ಲದವನೂ ನಾನಾಗಿರುವೆನಷ್ಟೆ?

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ 

ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ |

ಗುಣಾಧಿಕಾ ಗುರುತರಭಾಗ್ಯಭಾಜಿನೋ 

ಭವಂತಿ ತೇ ಭುವಿ ಬುಧಭಾವಿತಾಶಯಾಃ || 21 ||

ಯಾರು ಈ ದಿವ್ಯ ಸ್ತುತಿಗಳಿಂದ ವೇದಮಯಳೂ, ಮೂರು ಲೋಕಗಳ ತಾಯಿಯೂ ಆದ ರಮಾದೇವಿಯನ್ನು ಸ್ತೋತ್ರ ಮಾಡುವರೋ ಅವರು ಈ ಭೂಲೋಕದಲ್ಲಿ ಗುಣಸಂಪನ್ನರೂ ಅತ್ಯಧಿಕವಾದ ಐಶ್ವರ್ಯಯುಕ್ತರೂ, ವಿದ್ವಾಂಸರಿಂದ ಗೌರವಿಸಲ್ಪಡುವವರೂ ಆಗಿ ಸುಖಿಸುವರು.

*|| ಇತಿ ಶ್ರೀ ಜಗದ್ಗುರು *ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ ಸಂಪೂರ್ಣಂ ||*

 

(ಸಾಮಾಜಿಕ ಜಾಲತಾಣದಿಂದ ಸಂಗ್ರಹಿತ) ಚಿತ್ರ ಕೃಪೆ: ಇಂಟರ್ನೆಟ್

 

Comments