ಕನಸನ್ನು ನನಸಾಗಿಸಿ ‘ಯಶಸ್ವಿ’ಯಾದ ಜೈಸ್ವಾಲ್ !

ಕನಸನ್ನು ನನಸಾಗಿಸಿ ‘ಯಶಸ್ವಿ’ಯಾದ ಜೈಸ್ವಾಲ್ !

ಕಳೆದ ವಾರವಷ್ಟೇ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಬೋರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೧೬೧ ರನ್ ಗಳಿಸಿ ಭಾರತದ ದಾಖಲೆಯ ಅಂತರದ ವಿಜಯಕ್ಕೆ ಕಾರಣರಾದ ಯಶಸ್ವಿ ಜೈಸ್ವಾಲ್ ಸಾಗಿ ಬಂದ ಹಾದಿ ಹೂವಿನದ್ದಲ್ಲ. ಹೂವಿಗಿಂತ ಅಧಿಕ ಮುಳ್ಳುಗಳೇ ತುಂಬಿದ್ದ ಈ ಹಾದಿಯಲ್ಲಿ ನಡೆದು ಬಂದು ತಾನು ಬಾಲ್ಯದಲ್ಲಿ ಕಂಡಿದ್ದ ಕನಸುಗಳನ್ನು ನನಸು ಮಾಡಿಕೊಂಡಿದ್ದಾರೆ. ಪ್ರಸ್ತುತ ಟೆಸ್ಟ್ ಬ್ಯಾಟ್ಸ್ ಮೆನ್ ರಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿರುವ ಜೈಸ್ವಾಲ್ ಗೆ ಮೊದಲ ಸ್ಥಾನ ದೂರವೇನಿಲ್ಲ. 

ಯಶಸ್ವಿ ಭೂಪೇಂದ್ರ ಕುಮಾರ್ ಜೈಸ್ವಾಲ್ ಹುಟ್ಟಿದ್ದು ಡಿಸೆಂಬರ್ ೨೮, ೨೦೦೧ರಲ್ಲಿ. ಉತ್ತರ ಪ್ರದೇಶದ ಭಡೋಹಿ ಎಂಬ ಪುಟ್ಟ ಊರಿನ ಸಣ್ಣ ಅಂಗಡಿ ಮಾಲೀಕನ ಆರು ಮಕ್ಕಳಲ್ಲಿ ನಾಲ್ಕನೆಯವರಾದ ಜೈಸ್ವಾಲ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚು. ಅವರ ಈ ಕ್ರಿಕೆಟ್ ಪ್ರೇಮವೇ ಅವರನ್ನು ೧೧ ನೇ ವಯಸ್ಸಿಗೇ ಮುಂಬೈಗೆ ಬರುವಂತೆ ಮಾಡಿತು. ಚಿಕ್ಕಪ್ಪನ ಜೊತೆಗೆ ಮುಂಬೈಗೆ ಹೊರಟು ನಿಂತಾಗ ಮನೆಯಲ್ಲಿ ಅಪ್ಪ-ಅಮ್ಮ ಬೇಡವೆಂದು ಹೇಳಲಿಲ್ಲ. ಏಕೆಂದರೆ ಮನೆಯಲ್ಲಿ ಬಡತನವಿತ್ತು. ಒಬ್ಬನಾದರೂ ದೂರವಿದ್ದರೆ ಅಷ್ಟಾದರೂ ಕಷ್ಟ ಕಡಿಮೆಯಾಗುತ್ತದೆಯಲ್ಲಾ ಎನ್ನುವ ಆಲೋಚನೆ ಅವರದ್ದು. ಮುಂಬೈಗೆ ಬಂದ ಜೈಸ್ವಾಲ್ ಹೊಟ್ಟೆ ಪಾಡಿಗಾಗಿ ಹಾಲಿನ ಡೈರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ರಾತ್ರಿ ಡೈರಿಯಲ್ಲೇ ವಾಸ. 

ಜೈಸ್ವಾಲ್ ಡೈರಿಯಲ್ಲಿ ಕೆಲಸ ಮಾಡುವುದಕ್ಕಿಂತ ಅಧಿಕ ಸಮಯವನ್ನು ಆಟದ ಮೈದಾನದಲ್ಲಿ ಕಳೆಯುತ್ತಿದ್ದಾನೆ ಎಂದು ಮನಗಂಡ ಆ ಡೈರಿ ಮಾಲೀಕ ಆತನಿಗೆ ಬೆಂಬಲ ನೀಡುವ ಬದಲಾಗಿ ಆತನನ್ನು ಕೆಲಸದಿಂದ ತೆಗೆದೇ ಬಿಟ್ಟರು. ಆದರೆ ಈ ನಡೆಯಿಂದ ಧೃತಿಗೆಡದ ಜೈಸ್ವಾಲ್ ನ ಕೈ ಹಿಡಿದದ್ದು ಮುಸ್ಲಿಂ ಯುನೈಟೆಡ್ ಕ್ಲಬ್. ಆಜಾದ್ ಮೈದಾನದಲ್ಲಿ ಕೆಲಸ ಮಾಡುವವರ ಜತೆ ಟೆಂಟ್ ನಲ್ಲೇ ವಾಸ ಮಾಡಲು ಅವರಿಗೆ ಅವಕಾಶ ನೀಡಲಾಯಿತು. ಅದಕ್ಕೆ ಈಗ ಯಶಸ್ಸಿನ ಶಿಖರಕ್ಕೆ ತಲುಪಿರುವ ಜೈಸ್ವಾಲ್ ಕೆಲವೊಮ್ಮೆ ಹೇಳುವುದು “ಪ್ರತಿ ದಿನವೂ ನಮಗೆ ಕ್ಯಾಂಡಲ್ ಲೈಟ್ ಡಿನ್ನರ್. ಯಾಕೆಂದರೆ ನಾವು ಇದ್ದ ಟೆಂಟ್ ನಲ್ಲಿ ವಿದ್ಯುತ್ ಸರಬರಾಜೇ ಇರಲಿಲ್ಲ” ಇದು ಅವರ ಬದುಕಿನ ಕಷ್ಟದ ಕಾಲವನ್ನು ಬಿಂಬಿಸುತ್ತದೆ. ಈ ಎಲ್ಲಾ ಕಹಿ ಸಂಗತಿಗಳನ್ನು ಮೆಟ್ಟಿ ನಿಂತ ಜೈಸ್ವಾಲ್ ನಿಜಕ್ಕೂ ತಮ್ಮ ಹೆಸರಿಗೆ ಸಾರ್ಥಕವಾಗುವಂತೆ ಬೆಳಗಿದರು. ಟೆಂಟ್ ನಲ್ಲೇ ಮೂರು ವರ್ಷ ಕಳೆದ ಜೈಸ್ವಾಲ್ ಹಲವಾರು ಬಾರಿ ಊಟ ಮಾಡದೇ ಮಲಗಿದ್ದೂ ಇದೆ. ಏಕೆಂದರೆ ಬಹಳಷ್ಟು ಸಲ ಟೆಂಟ್ ನಲ್ಲಿದ್ದ ಕಾರ್ಮಿಕರು ಜಗಳ ಮಾಡಿಕೊಂಡಾಗ ಊಟವೂ ಇರುತ್ತಿರಲಿಲ್ಲ. ರಾತ್ರಿ ಹೊತ್ತು ಬಹಿರ್ದೆಸೆಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಸಂಜೆಯಿಂದ ಬೆಳಿಗ್ಗೆ ತನಕ ಮೈದಾನದ ಶೌಚಾಲಯಕ್ಕೆ ಬೀಗ ಹಾಕಲಾಗುತ್ತಿತ್ತು. 

ತಮ್ಮ ಯಾವುದೇ ಕಷ್ಟಗಳನ್ನು ಮನೆಯವರಲ್ಲಿ ಹೇಳಿಕೊಳ್ಳದ ಜೈಸ್ವಾಲ್ ಅಮ್ಮನಲ್ಲಿ ಮಾತನಾಡುವಾಗ “ನಾನು ಈಗ ಯಾವಾಗಲೂ ಮೈದಾನದಲ್ಲೇ ಇರುವುದರಿಂದ ನನಗೆ ಕ್ರಿಕೆಟ್ ಕಲಿಯುವುದು ಬಹಳ ಸುಲಭವಾಗುತ್ತಿದೆ. ನಾನು ಬೆಳಿಗ್ಗೆ ಎದ್ದು ಕಣ್ಣು ಬಿಡುವಾಗ ನನ್ನ ಎದುರು ಕ್ರಿಕೆಟ್ ಪಂದ್ಯವೇ ನಡೆಯುತ್ತಿರುತ್ತದೆ. ಇದರಿಂದ ನನಗೆ ತುಂಬಾ ಉಪಯೋಗವಾಗುತ್ತಿದೆ ಅಮ್ಮ’ ಎಂದಿದ್ದರಂತೆ. ಹೀಗೆ ತಮ್ಮ ಜೀವನದ ಕಷ್ಟಗಳನ್ನು ತಾವೇ ನುಂಗಿಕೊಂಡ ಜೈಸ್ವಾಲ್ ಮನೆಯಿಂದ ಅಪ್ಪ ಕಳುಹಿಸುತ್ತಿದ್ದ ಅಲ್ಪ ಹಣ ಸಾಕಾಗದೇ ಇದ್ದಾಗ ಪಾನಿಪೂರಿ ಮಾರಿದ್ದೂ ಇದೆ. 

ಜೈಸ್ವಾಲ್ ಕ್ರಿಕೆಟ್ ಜೀವನದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು ವಿಜಯ್ ಹಜಾರೆ ಟ್ರೋಫಿಯಲ್ಲಿ. ಈ ಕ್ರಿಕೆಟ್ ಟೂರ್ನಿಯಲ್ಲಿ ಅವರು ಮುಂಬೈ ಪರ ಆಟವಾಡಿ ಕೇವಲ ೧೫೪ ಎಸೆತಗಳಲ್ಲಿ ೨೦೩ ರನ್ ಗಳಿಸಿ ವಿಶ್ವ ದಾಖಲೆ ಬರೆದರು. ಈ ಪಂದ್ಯದ ಬಳಿಕ ಜೈಸ್ವಾಲ್ ಮತ್ತೆ ಹಿಂದೆ ತಿರುಗಿ ನೋಡುವ ಅವಕಾಶ ಬದುಕು ಅವರಿಗೆ ನೀಡಲಿಲ್ಲ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಯಿತು. ನಂತರ ಆಡಿದ ಎಲ್ಲಾ ಪಂದ್ಯಗಳಲ್ಲಿ ಉತ್ತಮ ರನ್ ಗಳಿಸುತ್ತಾ ಬಂದರು. ಬದುಕಿನಲ್ಲಿ ಏನೇ ಕಷ್ಟ ಬಂದರೂ ಕ್ರಿಕೆಟ್ ವಿಷಯದಲ್ಲಿ ಅವರಿಗಿದ್ದ ಉತ್ಕಟ ಪ್ರೇಮ ಮಾತ್ರ ಕಡಿಮೆಯಾಗಲಿಲ್ಲ. 

ಜೈಸ್ವಾಲ್ ಅವರ ಕ್ರೀಡಾ ಬೆಳವಣಿಗೆಯನ್ನು ಮೊದಲು ಗುರುತಿಸಿದ್ದು ಜ್ವಾಲಾ ಸಿಂಗ್ ಎಂಬ ಕೋಚ್. ಒಮ್ಮೆ ನೆಟ್ ನಲ್ಲಿ ಆಟವಾಡುವಾಗ ಅವರು ಜೈಸ್ವಾಲ್ ಅವರ ಆಟವನ್ನು ಗಮನಿಸಿದರಂತೆ. ಬೇರೆಲ್ಲಾ ಆಟಗಾರರು ಅಲ್ಲಿನ ಪಿಚ್ ನಲ್ಲಿ ಆಡುವಾಗ ಬಾಲ್ ಎದುರಿಸಲು ಪರದಾಡುತ್ತಿದ್ದರೆ ಜೈಸ್ವಾಲ್ ಮಾತ್ರ ಸರಾಗವಾಗಿ ಬ್ಯಾಟ್ ಬೀಸುತ್ತಿದ್ದರಂತೆ. ಈ ಹಿಂಜರಿಕೆ ಇಲ್ಲದ ಆಟವೇ ಅವರನ್ನು ಜ್ವಾಲಾ ಸಿಂಗ್ ಗಮನಿಸುವಂತೆ ಮಾಡಿತು. ಅವರ ಆಟದಿಂದ ಉತ್ತೇಜಿತರಾದ ಜ್ವಾಲಾ ಸಿಂಗ್ ಆ ದಿನದ ಆಟ ಮುಗಿದ ಕೂಡಲೇ ಜೈಸ್ವಾಲ್ ಅವರ ಬಳಿ ಮಾತನಾಡಿದರಂತೆ. ಜೈಸ್ವಾಲ್ ಅವರ ಕಷ್ಟಗಳನ್ನು ಕಂಡು ಮರುಗಿದ ಜ್ವಾಲಾ ಸಿಂಗ್ ಅವರಿಗೆ ಆಶ್ರಯ ನೀಡಿ ನಿರಂತರ ಕ್ರಿಕೆಟ್ ಆಡುವಂತೆ ಬೆಂಬಲ ನೀಡಿದರು. ಶಾಲಾ ಕ್ರಿಕೆಟ್ ನಲ್ಲೂ ತಮ್ಮ ಛಾಪು ಮೂಡಿಸಿದ ಜೈಸ್ವಾಲ್ ೫೨ ಶತಕಗಳನ್ನು ಬಾರಿದ್ದಲ್ಲದೇ, ೨೦೦ ವಿಕೆಟ್ ಗಳನ್ನೂ ಪಡೆದುಕೊಂಡಿದ್ದಾರೆ. ನಂತರದ ದಿನಗಳಲ್ಲಿ ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾದದ್ದು, ಅಲ್ಲಿಂದ ನಂತರ ಭಾರತ ತಂಡಕ್ಕೆ ಸೇರ್ಪಡೆಯಾದದ್ದು ಎಲ್ಲವೂ ಈಗ ಇತಿಹಾಸ.

ಈ ವರ್ಷದ ಪ್ರಾರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ದ್ವಿಶತಕ ಹೊಡೆದು ಒಟ್ಟಾರೆ ೬೦೦ ಕ್ಕೂ ಅಧಿಕ ರನ್ ಪೇರಿಸಿದ್ದು ಇವರ ಬ್ಯಾಟಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಸ್ವಾಭಾವಿಕವಾಗಿ ಹೊಡೆಬಡಿಯ ಎಡಗೈ ದಾಂಡಿಗರಾಗಿರುವ ಜೈಸ್ವಾಲ್ ಆಸ್ಟ್ರೇಲಿಯಾದ ಎದುರು ನಡೆದ ಮೊದಲ ಟೆಸ್ಟ್ (ನ.೨೦ ರಿಂದ ೨೪) ನ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯ ಸಂಪಾದನೆ ಮಾಡಿದರೂ ಎರಡನೇ ಇನ್ನಿಂಗ್ಸ್ ನಲ್ಲಿ ನೈಜ ಟೆಸ್ಟ್ ಆಟವಾಡಿ (ನಿಧಾನಗತಿಯಲ್ಲಿ) ಭಾರತವನ್ನು ಜಯಿಸುವಂತೆ ಮಾಡಿದರು. ೨೯೭ ಎಸೆತಗಳನ್ನು ತಾಳ್ಮೆಯಿಂದ ಎದುರಿಸಿ ೧೬೧ ರನ್ ಗಳಿಸಿ (೧೫ ಬೌಂಡರಿ, ೩ ಸಿಕ್ಸರ್) ಕೆ ಎಲ್ ರಾಹುಲ್ ಜೊತೆ ಮೊದಲ ವಿಕೆಟ್ ಗೆ ದಾಖಲೆಯ ೨೦೧ ರನ್ ಗಳಿಸಿದ್ದು ಸಾಧಾರಣ ಸಂಗತಿಯಲ್ಲ. ಇನ್ನೂ ೨೨ ವರ್ಷ ವಯಸ್ಸಿನ ಇವರ ಮುಂದೆ ಭವ್ಯ ಭವಿಷ್ಯದ ಹಾದಿ ಇದೆ. ಉತ್ತಮ ದಾಂಡಿಗ, ಜೊತೆಗೆ ಚೆನ್ನಾಗಿ ಬೌಲಿಂಗ್ ಸಹಾ ಮಾಡುವ ಛಾತಿ ಜೈಸ್ವಾಲ್ ಅವರಿಗಿದೆ. ಬಲಗೈ ಲೆಗ್ ಬ್ರೆಕ್ ಬೌಲಿಂಗ್ ಮಾಡ ಬಲ್ಲ ಇವರ ಈ ಕೌಶಲ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. 

“ಯಾವ ಕನಸು ನಿಮ್ಮನ್ನು ನಿದ್ರೆ ಮಾಡದಂತೆ ಮಾಡುವುದೇ ಅದೇ ನಿಜವಾದ ಕನಸು” ಎನ್ನುವ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಮಾತುಗಳನ್ನು ಯಶಸ್ವಿ ಜೈಸ್ವಾಲ್ ಸತ್ಯ ಮಾಡಿಯೇ ಬಿಟ್ಟರು. ಕನಸು ಕಂಡರು, ಆ ಕನಸನ್ನು ನನಸು ಮಾಡಲು ಊಟ ನಿದ್ದೆಯನ್ನೇ ಬದಿಗಿಟ್ಟರು. ಅದರ ಪರಿಣಾಮ ಯಶಸ್ಸು ಈಗ ಅವರ ಪಾದ ಚುಂಬಿಸುತ್ತಿದೆ. ಆದರೆ ಯಶಸ್ವಿ ಜೈಸ್ವಾಲ್ ಮಾತ್ರ ಬದಲಾಗಿಲ್ಲ. ಅದೇ ಹಳೆಯ ಸರಳ, ಹೃದಯ ಶ್ರೀಮಂತಿಕೆಯ ಹುಡುಗನಾಗಿಯೇ ಉಳಿದಿದ್ದಾರೆ. ಜೈಸ್ವಾಲ್ ಇನ್ನಷ್ಟು ಸಮಯ ಭಾರತ ದೇಶಕ್ಕಾಗಿ ಆಡಲಿ. ಯಶಸ್ಸು ಅವರದ್ದಾಗಲಿ ಎನ್ನುವುದೇ ಶುಭ ಹಾರೈಕೆ.

ಚಿತ್ರ ಕೃಪೆ: ಅಂತರ್ಜಾಲ ತಾಣ