ಕನಸಿನ ಕನ್ಯ

ಕನಸಿನ ಕನ್ಯ

ಬರಹ

ಕನಸಿನ ಕನ್ಯೆ

ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ
ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ
ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ
ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧||

ಸುಧೆಯ ಸವಿಸಿರುವೆ ಸುಂದರ ಸಮುದ್ರದಂತೆ
ಹ್ರುದಯ ಹೊಮ್ಮಿಸಿರುವೆ ಹೊಸ ಹುಮ್ಮಸ್ಸಿನಂತೆ
ಚಿತ್ತವ ಚೆಲ್ಲಿರುವೆ ಚಿತ್ತಾರದ ಚಿತ್ರದಂತೆ
ಹುತ್ತವ ಹುಟ್ಟಿಸಿರುವೆ ಹೊಂಗನಸಿನ ಹರುಷದಂತೆ ||೨||

ಕಣ್ಣಂಚಿನಲೆ ಕಂಡಿರುವೆ ಕರುಣೆಯನು ಕನಸಿನಂತೆ
ಕಾರಂಜಿಯಲೆ ಕುಣಿದಿರುವೆ ಕನಸಿನ ಕನ್ಯೆಯಂತೆ
ನಲುಮೆಯಲಿ ನಲಿದಿರುವೆ ನವಿಲಿನ ನಾಟ್ಯದಂತೆ
ಒಲುಮೆಯಲಿ ಒಲಿದಿರುವೆ ಒಡಲಾಳದ ಓಟದಂತೆ ||೩||

ಸುಪ್ತದಿ ಸರಿದಾಡಿರುವೆ ಸರ್ಪದ ಸರಸದಂತೆ
ಗುಪ್ತದಿ ಗಡಿದಾಟಿರುವೆ ಗರುಡನ ಗರ್ವದಂತೆ
ಸರ್ವತ್ರವೂ ಸಮಾಗಮಿಸಿರುವೆ ಸುಗಂಧದ ಸ್ವಾದದಂತೆ
ವಿಚಿತ್ರವೂ ವಿರಮಿತವಾಗಿದೆ ವೈರಾಗ್ಯದ ವಾದದಂತೆ ||೪||

ತಮಸಿನಲಿ ತಳುಹಿರುವೆ ತೊರೆದಿರುವೆ ತಂತ್ರದಂತೆ
ಕನಸಿನಲಿ ಕಂಡಿರುವೆ ಕಾಣೆಯಾಗಿರುವೆ ಕೆಂಡದ ಕೆಂಪಿನಂತೆ
ಮರೆವೆಂಬುದ ಮರೆಸಿರುವೆ ಮಾಯಗಾರನ ಮಂತ್ರದಂತೆ
ಹಸಿವೆಂಬುದ ಹೊರಗಿರಿಸಿರುವೆ ಹೊಸಿಲಾಚೆಯ ಹಣತೆಯಂತೆ ||೫||

ಚೆಲುವನ್ನು ಚೆಲ್ಲು ಚಂದಿರನ ಚಂದದಂತೆ
ಗೆಲುವನ್ನು ಗೆಲ್ಲು ಗಂಧರ್ವನ ಗಾನದಂತೆ
ಅರಿಸಿರುವೆ ಅರ್ಥವ ಅರಸಿನ ಆಕಾಶದ ಅರಮನೆಯಂತೆ
ಬಯಸಿರುವೆ ಭಾರದ ಬದುಕಿನ ಬಂಗಾರದ ಬೆಡಗಿಯಂತೆ ||೬||

-ಪ್ರವೀಣ್ ಮಾಯಾಕರ್