ಕನಸುಗಳಿಗೆ ಗೋರಿಕಟ್ಟುವ ವೇಗ

ಕನಸುಗಳಿಗೆ ಗೋರಿಕಟ್ಟುವ ವೇಗ

ಹೃದಯ ಹಿಂಡಿದ ಎರಡು ಘಟನೆಗಳು. ಮನಸ್ಸು ತೀರಾ ಭಾರವಾಗಿದೆ. ಒಂದು ನನ್ನ ಮನೆಯ ಪಕ್ಕದಲ್ಲೇ ನಡೆದಿದ್ದರೆ ಮತ್ತೊಂದು ಮಂಗಳೂರಿನಲ್ಲಿ ನಡೆದಿದೆ. ದೂರದ ಪಾರೆಂಕಿಯ ಬಾಲಕ ರಂಝೀನ್. ಶಾಲೆಗೆ ದಸರಾ ರಜೆ. ಸಂಬಂಧಿಕರ ಮನೆ ಲಾಯಿಲ. ನಾಲ್ಕು ದಿನ ಹೀಗೆ ಸುಮ್ಮನೆ ಅಮ್ಮನೊಂದಿಗೆ ಬಂದಿದ್ದ. ಅಮ್ಮನಿಗಾದರೂ ಇದ್ದದ್ದು ಆತನೊಬ್ಬನೇ ಮಗ. ಅದೂ ಸುಮಾರು ವರ್ಷದ ನಂತರ ದೊರೆತ ಅನುಗ್ರಹ.

ಮುಗ್ಧ ಬಾಲಕನಿಗೆ ಐಸ್ ಕ್ರೀಂ ತಿನ್ನುವಾಸೆ. ಅದಕ್ಕಾಗಿ ಸಮೀಪದ ಅಂಗಡಿಗೆ ಓಡೋಡಿ ಬಂದಿದ್ದ. ಐಸ್ ಕ್ರೀಂ ಪಡೆದು ಖುಷಿಯಿಂದ ರಸ್ತೆಯ ಮೇಲೆ ಹೆಜ್ಜೆಯಿಟ್ಟ. ಅರ್ಧ ರಸ್ತೆಯಲ್ಲಿ ಸಾಲಾಗಿ ವಾಹನಗಳು ಬ್ಲಾಕ್ ಆಗಿ ನಿಂತಿತ್ತು. ಅವುಗಳ ಮಧ್ಯೆ ನುಸುಳಿ ಇನ್ನುಳಿದ ಅರ್ಧ ರಸ್ತೆ ದಾಟಬೇಕಿತ್ತು. ಆತನಿಗೆ ಹಿಂದೆ ಮುಂದೆ ಯೋಚನೆಯಿಲ್ಲ. ಯೋಚಿಸುವ ವಯಸ್ಸೂ ಅದಲ್ಲ!. ಚಂಗನೆ ಮೂರು ಹೆಜ್ಜೆ ಇಟ್ಟಿದ್ದರೆ ರಸ್ತೆ ದಾಟಿ ನಿಮಿಷದೊಳಗೆ ಮನೆ ಸೇರುತ್ತಿದ್ದ. ಅಮ್ಮನ ಮಡಿಲಿಗೊರಗಿ ಐಸ್ ಕ್ರೀಂ ತಿನ್ನುತ್ತಿದ್ದ..!!! ಆದರೆ ನಡೆದದ್ದೇ ಬೇರೆ. ಅರ್ಧ ರಸ್ತೆಯಲ್ಲಿದ್ದ ವಾಹನ ದಾಟಿ ಉಳಿದರ್ಧ ದಾಟುತ್ತಿದ್ದಂತೆ, ವೇಗವಾಗಿ ಬಂದ ಪಿಕ್ ಅಪ್ ಬಾಲಕನ ಮೇಲೆಯೇ ಹಾದು ಹೋಯಿತು. ಅಕ್ಕ ಪಕ್ಕದಲ್ಲಿದ್ದ ಹತ್ತಾರು ಜನ ಶಬ್ಧ ಬಂದಲ್ಲಿ ಓಡಿದರೆ, ಆ ಹುಡುಗ ರಕ್ತದ ಮಡುವಿನಲ್ಲಿ ಹೆಣವಾಗಿ ಹೋಗಿದ್ದ. ಐಸ್ ಕ್ರೀಂ ರಸ್ತೆಯ ಮೇಲೆ ಅದೆಲ್ಲೋ ಬಿದ್ದಿತ್ತು. ಇದೊಂದು ಅರಗಿಸಿಕೊಳ್ಳಲಾಗದ ಘಟನೆ.

ಮೊದಲನೇ ಘಟನೆಯ ಶಾಕ್ ನಿಂದ ಇನ್ನೂ ಹೊರಬಂದಿಲ್ಲ. ಅದಾಗಲೇ ಮಾಧ್ಯಮದಲ್ಲಿ ಮತ್ತೊಂದು ಘಟನೆಯ ವೀಡಿಯೋ ನೋಡಿ ಸ್ಥಬ್ಧನಾದೆ. ಮಂಗಳೂರಿನ ಕುದ್ರೋಳಿ ದಸರಾ ಬಹಳನೇ ಪ್ರಸಿದ್ಧ. ಅದನ್ನು ನೋಡಲೆಂದು ಬಂದು ಐವರು ಯುವತಿಯರು ಒಟ್ಟಾಗಿ ನಡೆಯುತ್ತಿದ್ದಾರೆ. ರೂಪಶ್ರೀ, ಸ್ವಾತಿ, ಹಿತನ್ವಿ, ಕಾರ್ತಿಕಾ ಹಾಗೂ ಯತಿಕಾ ಇವರೇ ಆ ಯುವತಿಯರು. ಹದಿ ಹರೆಯದ ಇವರೈವರು ಲೇಡಿಹಿಲ್ ನ ಫುಟಪಾತ್ ನಲ್ಲಿ ಒಟ್ಟಾಗಿ ಹೆಜ್ಜೆಯಿಡುತ್ತಿದ್ದಾರೆ. 

ಮುಂದಿನ ಕ್ಷಣ ಏನು? ಎಂಬುವುದು ಯಾರಿಗೂ ತಿಳಿಯದು. ಆತನೊಬ್ಬ ಡ್ರೈವರ್. ಅವನಿಗೇನಾಗಿತ್ತೋ?... ಅರಿಯದು. ಕುಡಿದಿದ್ದನೋ? ಇಲ್ಲಾ ಮಾದಕ ದ್ರವ್ಯದ ದಾಸನೋ? ಅಥವಾ ಮತಿಗೆಟ್ಟವನೋ? ತಿಳಿಯದು. ಏಕಾ ಏಕಿ ಫುಟ್ ಪಾತ್ ಮೇಲೆ ಕಾರನ್ನು ಹತ್ತಿಸಿಯೇ ಬಿಟ್ಟ. ಬದುಕಿನಲ್ಲಿ ನೂರಾರು ಆಸೆಗಳನ್ನು ಹೊತ್ತು ಕೊಂಡು ಹೆಜ್ಜೆ ಹಾಕುತ್ತಿದ್ದ ಆ ಐವರನ್ನು ಚೆಂಡಾಡಿ, ಮತ್ತೆ ರಸ್ತೆಗಿಳಿದು ಅದೆಲ್ಲಿಗೋ ಹೋಗಿಯೇ ಬಿಟ್ಟ. (ಚಿತ್ರ ನೋಡಿ)

ಅವನೇನೋ ಹೋದ. ಇಲ್ಲಿ ರೂಪಶ್ರೀ ಫುಟ್ ಪಾತ್ ನಲ್ಲೇ ಒದ್ದಾಡಿ ಪ್ರಾಣ ಬಿಟ್ಟಾಯಿತು. ಉಳಿದವರು ಗಾಯಗೊಂಡು ಚೇತರಿಸುತ್ತಿದ್ದರೂ, ಗುದ್ದಿದ ಇಂಪ್ಯಾಕ್ಟ್ ಮತ್ತೆ ಮತ್ತೆ ಮರುಕಳಿಸದಿರದು. ಆ ಮುಗ್ಧ ಹುಡುಗಿಯರ ಸ್ಥಿತಿ ನೋಡಿದವರ ಹೃದಯ ತಲ್ಲಣಿಸದಿರಲು ಸಾಧ್ಯವೇ ಇಲ್ಲ. ಮರೆಯಾದ ಜೀವಗಳನ್ನು ಒಡಲಲ್ಲಿ ಹೊತ್ತ ಹೆತ್ತಬೆಯನ್ನು ಸಂತೈಸುವವರಾರು?. ಸಾವು- ನೋವು ಎಲ್ಲಿದ್ದರೂ ನಮ್ಮ ಹಿಂದೆಯೇ ಹಿಂಬಾಲಿಸುತ್ತಿರುತ್ತದೆ ಎಂಬುವುದು ನೂರಕ್ಕೆ ನೂರು ಸತ್ಯ.

ಹೋದ ಜೀವಗಳು ಹೋದವು. ನರಳಿದ ಜೀವಗಳು ನರಳಿದವು. ಕಳೆದು ಹೋದದ್ದನ್ನು ಪಡೆಯಲು ಅಸಾಧ್ಯ. ಮುಂದೆಯಾದರೂ ಚಾಲನೆ ಮಾಡುವವರ ಕಣ್ಣ ಮುಂದೆ ಈ ದೃಶ್ಯಗಳು ಮೂಡುತ್ತಿರಲಿ. ಅಮೂಲ್ಯವಾದ ನಮ್ಮಂತೆ ಇರುವ ಜೀವಗಳ ಬದುಕುವ ಹಕ್ಕನ್ನು ಕಿತ್ತುಕೊಳ್ಳದಿರೋಣ. ಅವರ ಸುಂದರ ಕನಸುಗಳಿಗೆ ಗೋರಿ ಕಟ್ಟದಿರೋಣ.

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ