ಕನಸುಗಳು ಖಾಸಗಿ

ಕನಸುಗಳು ಖಾಸಗಿ

ಪುಸ್ತಕದ ಲೇಖಕ/ಕವಿಯ ಹೆಸರು
ನರೇಂದ್ರ ಪೈ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ. 90.00, ಮುದ್ರಣ: 2020

“ಎಷ್ಟೋ ಜನ ತಮಗೆ ಗೊತ್ತಿರುವ ವಿಚಾರಕ್ಕೆ ಅಥವಾ ಕಣ್ಣಾರೆ ಕಂಡ ವಿಚಾರಕ್ಕೆ ಸಾಕ್ಷಿಯಾಗಲು ಒಪ್ಪುವುದಿಲ್ಲ. ಇನ್ನು ಕೆಲವರು ತಮಗೆ ಸಂಬಂಧವೇ ಇರದ ವಿಚಾರದಲ್ಲಿ ಸಾಕ್ಷಿಯಾಗಿ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸಾಕ್ಷಿ ಹೇಳುವುದೇ ವೃತ್ತಿಯೂ ಆಗಬಲ್ಲದು. ಸುನಂದಕ್ಕನ ಕೇಸಿಗೆ ಮನು ಸಾಕ್ಷಿಯಾದ ನಂತರ ಏನಾಯಿತು? ಒಂದು "ಸಾಕ್ಷಿ" ಕೇವಲ ಕೇಸನ್ನು ಅಷ್ಟೇ ಅಲ್ಲ, ಸಂಬಂಧಗಳನ್ನು, ನೆಮ್ಮದಿಯ ಬದುಕನ್ನು ತಿರುವು ಮುರುವು ಮಾಡಿ ಬಿಡಬಲ್ಲದು," ಎನ್ನುವುದು ನನ್ನ ಅನಿಸಿಕೆ. ಲೇಖಕ ನರೇಂದ್ರ ಪೈ ಅವರ "ಕನಸುಗಳು ಖಾಸಗಿ" ಪುಸ್ತಕವನ್ನು ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವಗಳು ಹೀಗಿವೆ....

“ಈ ಕಥಾ ಸಂಕಲನದ ಎಲ್ಲಾ ಕತೆಗಳು ಪತ್ರಿಕೆಗಳಲ್ಲಿ ಮುದ್ರಣಗೊಂಡು ಓದುಗರ ಮನಸ್ಸು ಗೆದ್ದಿರುವ ಕತೆಗಳು. ಇಲ್ಲಿ ನಮಗೆ ಓದಲು ಸಿಗುವುದು 9 ಕಥೆಗಳೇ ಆದರೂ ಲೇಖಕರು "ಕಥೆ ಹುಟ್ಟುವ ಪರಿ" ಎಂದು ತಮ್ಮ ಮಾತುಗಳಲ್ಲಿ ತಮ್ಮ ಅನುಭವದ ಹೂರಣವನ್ನು, ತಮ್ಮ ಕತೆಗಳು ರೂಪುಗೊಂಡ ಪರಿಯನ್ನೂ ಬಿಚ್ಚಿಡುತ್ತಾ ಸಾಗುತ್ತಾರೆ. ನನಗನ್ನಿಸಿದ್ದು ಇಲ್ಲಿನ ಕತೆಗಳು ಸಾದಾ-ಸೀದಾ ಕತೆಗಳಲ್ಲ. ಇವೆಲ್ಲವೂ ಪ್ರಯೋಗಾತ್ಮಕ ಕತೆಗಳಂತೆ ಕಾಣುತ್ತಾ ಒಂದೊಂದೂ ವಿಭಿನ್ನ ಶೈಲಿಯಲ್ಲಿ ಹೆಣೆಯಲ್ಪಟ್ಟಿವೆ. ಮತ್ತು ಕತೆಯಲ್ಲಿ ಹೇಳಿದಷ್ಟೇ ಅಥವಾ ಅದಕ್ಕಿಂತ ಕೊಂಚ ಕಡಿಮೆ ಹೇಳದೇ ಉಳಿದಿರುವುದೂ ಕಾಣುತ್ತದೆ. ಓದುಗರು ಗ್ರಹಿಸಿಕೊಂಡಂತೆಲ್ಲಾ ಕಥೆ ಬೆಳೆಯುತ್ತಾ ಹೋಗುತ್ತದೆ. ಸೂಕ್ಷ್ಮವಾಗಿಯೇ ಕತೆ ಕಟ್ಟುವ ಪರಿಯಲ್ಲಿ ಕತೆಯ ಹರಿವು ಕೂಡಾ ಸರಾಗವಾಗಿದೆ.

ಪುಸ್ತಕದ ಶೀರ್ಷಿಕೆ "ಕನಸುಗಳು ಖಾಸಗಿ" ಎಂಬುದಾಗಿ. ಶೀರ್ಷಿಕೆಯಿಂದ ಗಮನ ಸೆಳೆದ ಎಷ್ಟೋ ಪುಸ್ತಕಗಳು ನಮಗರಿವಿಲ್ಲದಂತೆ ಅವುಗಳನ್ನು ಓದುವಂತೆ ಪ್ರೇರೇಪಿಸುತ್ತವೆ. ಈ ಕಥಾ ಸಂಕಲನದ ಮೊದಲ ಕತೆಯೇ ಇದು. ನಾವು ನಮಗೆ ಬಂದ ಪತ್ರಗಳನ್ನು ಅಥವಾ ನಮ್ಮ ಡೈರಿಯನ್ನು ಖಾಸಗಿಯಾಗಿಡುವಷ್ಟು ನಮಗೆ ಡಿಜಿಟಲ್ ಆಗಿ ಬಂದ ಮೆಸೇಜ್ ಅನ್ನೋ ಅಥವಾ ಮೇಲ್ ಅನ್ನೋ ಖಾಸಗಿಯಾಗಿ ಇಡುತ್ತೇವಾ..?? ಅಥವಾ ಎಷ್ಟೋ ವರ್ಷಗಳ ನಂತರ ಹಿಂದಿನದ್ದೇನನ್ನೋ ನೆನಪಿಸಿಕೊಳ್ಳುವಾಗ ಆ ಘಟನೆಯ ಮುಖ್ಯ ಪಾತ್ರಕ್ಕೆ ಸಂಬಂಧ ಪಟ್ಟವರು, ನಮಗೆ ಮುಖತಃ ಪರಿಚಯವಿಲ್ಲದಂತಹವರು ಅದನ್ನು ಕೇಳಿಸಿಕೊಂಡಾಗ ಹೇಗಿರುತ್ತದೆ ? ಖಾಸಗಿ ವಿಷಯವೊಂದು ಇನ್ನು ಖಾಸಗಿಯಾಗಿಲ್ಲದಂತಹಾ ಸಂಧರ್ಭ ಹೇಗಿರಬಹುದು ? ಓದಿ ನೋಡಿ.

ಉನ್ನಿಕೃಷ್ಣರ ಮನೆಗೆ ಹಾಲು ತರಲು ಹೋಗುವ ಹುಡುಗನೊಬ್ಬ ಹೇಳಿದಂತಹಾ ಕತೆ ಇದು. "ಕೆಂಪು ಹಾಲು" ಕಥನ ಕ್ರಮದಲ್ಲಿ ಯಾಕೋ ಕೃಷ್ಣ ಆಲನಹಳ್ಳಿಯವರ 'ಕಾಡು' ನೆನಪಾಯಿತು. ಕಥೆಯ ಹೋಲಿಕೆಯಲ್ಲಲ್ಲ. ಆದರೆ, ಕಥೆಯನ್ನು ನೋಡಿ ಹೇಳುವ ಕಣ್ಣುಗಳಲ್ಲಿ. ಜೊತೆಗೆ ಯಕ್ಷಗಾನದ ಕೆಲ ಪ್ರಸಂಗಗಳು ಕಥೆಯನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿಸಿವೆ.

"ರುಕ್ಕುಮಣಿ" ಎನ್ನುವ ರುಕ್ಮಿಣಿ ಹಾಗೂ ಅಪ್ಪಿಯಮ್ಮನ ಬದುಕು ಹೇಗೆಲ್ಲಾ ಬದಲಾಗುತ್ತದೆ ಎಂಬುದನ್ನು ಹೇಳಿದರೂ ಅಮ್ಮನಲ್ಲದ ಅಮ್ಮ ಹಾಗೂ ಮಗಳಲ್ಲದ ಮಗಳ ನಡುವಿನ ಬಾಂಧವ್ಯದ ಕಥೆ ಹೇಳುತ್ತದೆ. ಆದರೂ, ಅಮ್ಮನಾಗಿ ಮಗಳ ನಡತೆ ಸರಿಯೆನಿಸದಿದ್ದಾಗ ತಿದ್ದುವ ಅಮ್ಮನಾಗಿ, ಅವಳ ಭವಿಷ್ಯದ ಕುರಿತು ಚಿಂತಿಸುವ ಅಮ್ಮನಾಗಿ ಕಾಣುವ ಅಪ್ಪಿಯಮ್ಮನ ಸ್ವಾಭಿಮಾನ, ಮಮತೆ, ಕಾಳಜಿ ಎಲ್ಲವೂ ಕಾಣುತ್ತದೆ. ರುಕ್ಕುವಿನ ಸಮರ್ಥನೆ ಯಥಾವತ್ ಈ ಕಾಲದವರಂತೆಯೇ ಕಾಣುತ್ತದೆ. ತಾನು ಮಾಡಿದ್ದೇ ಸರಿ ಎನ್ನುವಂತಹಾ ನಡವಳಿಕೆ. ಆದರೆ, ಈ ಕತೆಯ ಹೀಗಾಗಬಾರದಿತ್ತು ಎನ್ನಿಸಿತು. ನೈಜವಾಗಿ ಮೂಡಿಬಂದಿರುವ ಕತೆ.

"ರಿಕವರಿ" ಎನ್ನುವುದು ಸುಲಭದ ಮಾತಲ್ಲವೇ ಅಲ್ಲ. ಅದು ಏನೇ ಆಗಿರಲಿ. ಅದರಲ್ಲೂ ಕೊಟ್ಟ ಹಣವನ್ನು ರಿಕವರಿ ಮಾಡಲು ಅದೆಷ್ಟು ಬವಣೆ ಪಡಬೇಕು. ಹಲವೊಮ್ಮೆ ಇದು ಸಾಲದ ಹಣಕ್ಕೆ ಅನ್ವಯವಾಗುತ್ತದೆ. ಆದರೆ, ಇಲ್ಲಿ ಇದು ದುಗ್ಗಪ್ಪನ ಸಂಕಟದ ಪ್ರತಿರೂಪ. ಅಡ್ವಾನ್ಸ್ ಹಿಂದಕ್ಕೆ ಪಡೆಯದೆ ಮನೆ ಖಾಲಿ ಮಾಡಿ ನಂತರ ಅದಕ್ಕಾಗಿ ಚಪ್ಪಲಿ ಸವೆಸುವ ದುಗ್ಗಪ್ಪನಿಗೆ ಸಲ್ಲಬೇಕಾಗಿದ್ದು ಸಿಕ್ಕಿತಾ..? ಹಣ ದಂಡಿಯಾಗಿರುವವರನ್ನು ಬಿಟ್ಟು ಉಳಿದವರು ತಮಗೆ ಬರಬೇಕಾದ ಹಣ ಬರುವ ಮೊದಲೇ ಇಂತಹದ್ದಕ್ಕೆ ಎಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿರುತ್ತಾರೆ. ಆ ಲೆಕ್ಕಾಚಾರ ತಿರುವು ಮುರುವಾದರೆ ? ಅದರಿಂದ "ರಿಕವರಿ"ಯಾಗುವುದು ಸುಲಭದ ಮಾತೇನು ?

ಎಷ್ಟೋ ಜನ ತಮಗೆ ಗೊತ್ತಿರುವ ವಿಚಾರಕ್ಕೆ ಅಥವಾ ಕಣ್ಣಾರೆ ಕಂಡ ವಿಚಾರಕ್ಕೆ ಸಾಕ್ಷಿಯಾಗಲು ಒಪ್ಪುವುದಿಲ್ಲ. ಇನ್ನು ಕೆಲವರು ತಮಗೆ ಸಂಬಂಧವೇ ಇರದ ವಿಚಾರದಲ್ಲಿ ಸಾಕ್ಷಿಯಾಗಿ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸಾಕ್ಷಿ ಹೇಳುವುದೇ ವೃತ್ತಿಯೂ ಆಗಬಲ್ಲದು. ಸುನಂದಕ್ಕನ ಕೇಸಿಗೆ ಮನು ಸಾಕ್ಷಿಯಾದ ನಂತರ ಏನಾಯಿತು ? ಒಂದು "ಸಾಕ್ಷಿ" ಕೇವಲ ಕೇಸನ್ನು ಅಷ್ಟೇ ಅಲ್ಲ, ಸಂಬಂಧಗಳನ್ನು, ನೆಮ್ಮದಿಯ ಬದುಕನ್ನು ತಿರುವು ಮುರುವು ಮಾಡಿ ಬಿಡಬಲ್ಲದು.

"ಕಥನ ಕುತೂಹಲ" ವಿಭಿನ್ನ ರೀತಿಯಲ್ಲಿ ಹೆಣೆದಿರುವ ಕಥೆ. ಸಾದಾ - ಸೀದಾ ಕತೆ ಓದಿದರೆ ಒಂದಕ್ಕೊಂದಕ್ಕೆ ಸುಲಭವಾಗಿ ಸಂಬಂಧ ಪಡಲಾರದ ಕಥೆಗೆ ಟಿಪ್ಪಣಿಗಳು ಜೀವ ತುಂಬುತ್ತವೆ. ಕಥೆ ಹೀಗೂ ಇರಬಹುದು ಮತ್ತು ಹೀಗಿರದಿದ್ದರೆ ಎನ್ನುವ ಕುತೂಹಲವನ್ನಂತೂ ಉಂಟು ಮಾಡುತ್ತವೆ. ವಿಭಿನ್ನ ಶೈಲಿಯ ಕಥೆಯನ್ನು ಓದಿ ನೋಡಿ.

"ಭೇಟಿ" ಎಂಬುದು ಸಣ್ಣ ಕತೆ. ಭೇಟಿ ಮಾಡಲೇ ಬೇಕು ಎಂದು ಹೋದವ ಹೋದದ್ದು ಎಲ್ಲಿಗೆ ? ಏಕೆ ? ಅವನು ಅಂದುಕೊಂಡವರ ಭೇಟಿಯಾದರೂ ಆದಂತಿಲ್ಲದ.. ಅಕಸ್ಮಾತ್ ಆ ಭೇಟಿ ನಡೆದೇ ಹೋಗಿದ್ದರೆ ? ಆದರೂ, ಅವನು ವಾಪಾಸ್ ಬಂದ ನಂತರ ಎಲ್ಲವೂ ಮೊದಲಿನಂತಿಲ್ಲದ್ದು ಏಕೆ ? ಅತಿ ಕಡಿಮೆ ಪದಗಳಲ್ಲಿ ಕಟ್ಟಿಕೊಟ್ಟ ಶಕ್ತ ಕತೆ ಇದು. ಇಲ್ಲಿ ಹೇಳದೇ ಉಳಿದು ತೋರಿದ್ದೇ ಹೆಚ್ಚು.

ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವವರಿಗೆ ಉಳಿದವರಿಗೆ ಗೊತ್ತಿಲ್ಲದ್ದು ಏನೋ ಗೊತ್ತಿರುವಂತೆ ಅನ್ನಿಸುತ್ತಿದ್ದರೂ ವಾಸ್ತವ ಕಟ್ಟಿಕೊಡುವ ಚಿತ್ರಣವೂ ವಿಭಿನ್ನವಾಗಿಯೇ ಇರುತ್ತದೆ. ಶೇಷಗಿರಿಯ ಪ್ಲಾಟ್ ಹತ್ತಿರದಲ್ಲಿಯೇ ನಡೆದಿದ್ದ ಕೊಲೆಯೊಂದರ ಹಿಂದಿನ ಹಾಗೂ ಶೇಷಗಿರಿಗೆ ಹಿಂಸೆ ಎನ್ನಿಸುತ್ತಿದ್ದ ಸಂಗತಿಗಳು ಏನೂ ಅಲ್ಲದ್ದು ಎನ್ನಿಸಿದರೂ ಒಂದಕ್ಕೊಂದು ಸಂಬಂಧ ಇರಬಹುದೇ ಎನ್ನಿಸುವಂತೆ ಮಾಡುವ ಕಥೆ "ಹಿಂಸಾರೂಪೇಣ!".

ಮನೆಯ ತಾಪತ್ರಯ, ದಿನಚರಿಯ ಜೊತೆಗೆ ನೋಟು ಅಮಾನ್ಯವಾದ ಸಂದರ್ಭದಲ್ಲಿ.. ನೋಟು ಬದಲಾವಣೆ ಮಾಡಬೇಕಾದ ಪರಿಸ್ಥಿತಿಯಲ್ಲಿ ಅಜ್ಜಮ್ಮನ ಬದಲಾದ ಮನಸ್ಥಿತಿ ಹಾಗೂ ಶೇಷಗಿರಿಯ ಬದುಕಿನ ಕಥೆ "ಇದಕ್ಕೆಲ್ಲ ಅರ್ಥ ಎನ್ನುವುದಿಲ್ಲ.."

ಈ ಕಥಾಸಂಕಲನದ 9 ಕಥೆಗಳು ನಮಗೆ ದಕ್ಕಿದ ಅಥವಾ ದಕ್ಕದಿದ್ದ.. ನಮ್ಮ ಸುತ್ತಮುತ್ತಲಿನ ಕತೆಗಳು. ಪ್ರಯೋಗಾತ್ಮಕ ಕತೆಗಳು ಎನ್ನಿಸಿದರೂ ಕೈಗೆಟುಕದ ಕತೆಗಳಲ್ಲ. ಕೊಂಚ ಕೈ ಚಾಚಿದರೆ ದಕ್ಕಿಸಿಕೊಳ್ಳುವ ಕಥೆಗಳು ಮೂರ್ನಾಲ್ಕು ಇದ್ದರೂ ಉಳಿದವುಗಳು ಸರಾಗ ಕತೆಗಳು. ಕತೆ ಓದಿದ ನಂತರ ಮತ್ತೊಮ್ಮೆ ಕಥೆ ಹುಟ್ಟುವ ಪರಿ ಎನ್ನುವ ಲೇಖಕರ ಮಾತುಗಳನ್ನು ಓದಿದರೆ ಪರಿಣಾಮಕಾರಿ.

-ವಿಭಾ ವಿಶ್ವನಾಥ್