ಕನಸುಗಳೊಂದಿಗೆ ಗುದ್ದಾಡಿದ ಅಭಿಜ್ಞ
ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳವು ಶತಮಾನದಷ್ಟು ಪ್ರಾಚೀನ. ಅಡೂರಿನ ಕುರ್ನೂರು ಮನೆಯಲ್ಲಿ ಯಕ್ಷಗಾನದ ಸಾಮಗ್ರಿಗಳು ಹಿಂದೆ ತಯಾರಾಗುತ್ತಿದ್ದುವು. ತನ್ನ ಮೇಳಕ್ಕಲ್ಲದೆ ಕೊರಕ್ಕೋಡು, ಕಾವು ಇಚ್ಲಂಗೋಡು ಮೇಳಗಳಿಗೂ ಸಾಮಗ್ರಿಗಳು ಕುರ್ನೂರು ಮನೆಯಲ್ಲೇ ಸಿದ್ಧವಾಗುತ್ತಿದ್ದುವು. ಅಂದಿನ ಕೆಲವು ಮರದ ಸಾಮಗ್ರಿಗಳಿಗೆ ಮರುಜೀವ ಕೊಟ್ಟವರು ಕುರ್ನೂರು ಮನೆತನದವರಾದ ಅಡೂರು ಶ್ರೀಧರ ರಾವ್.
ಸಿಕ್ಕಿದ ಅಳಿದುಳಿದ ಕಿರೀಟಗಳು ಬಳಸುವಂತಿರಲಿಲ್ಲ. ಆ ಮಾದರಿಯ ಕಿರೀಟಗಳನ್ನು ಮರದಿಂದ ತಯಾರಿಸಿದರು. ಬಳಸಿ ನೋಡಿದರು. ಆಯ, ಆಕಾರಗಳು ಹಿಂದಿನ ಶೈಲಿಗೆ ಒಗ್ಗಿತು, ಬಗ್ಗಿತು. ಹೀಗೆ ಶುರುವಾದ ಕಾರ್ಯಾಗಾರವು ವಿವಿಧ ವೇಷಗಳ ಮುಖವರ್ಣಿಕೆಗಳನ್ನು ಸ್ವತಃ ತಯಾರಿಸುವಲ್ಲಿಯ ತನಕ ತಲುಪಿತು. ಆ ಕಾಲಘಟ್ಟದಲ್ಲಿ ಇವರಿಗೆ ಸಾಥ್ ಆದವರು ಹಾಸ್ಯಗಾರ್ ಪ್ಯಾರ್ ನಾವೂರು ಮತ್ತು ತನ್ನ ಸಹಾಯಕ ಮಾಂಗು. ಸಾವಿರಾರು ಮುಖವರ್ಣಿಕೆಗಳು ಮನೆಯ ಜಗಲಿಯಲ್ಲಿ ಸಿದ್ಧವಾಗಿ ಕಡಲಾಚೆಗೂ ಹಾರಿವೆ.
ಅವರ ಶ್ರಮಕ್ಕೆ ತಕ್ಕ ಫಲ ಸಿಗದೇ ಇದ್ದರೂ ಸರ್ವಜನ ಸ್ವೀಕೃತಿ ಪಡೆದಿದೆ. ಸ್ಮರಣಿಕೆ ರೂಪದಲ್ಲಿ ಮುಖವರ್ಣಿಗಳು ಸಿದ್ಧವಾಗಿ ಸಮಾರಂಭಗಳಲ್ಲಿ ಗಮನ ಸೆಳೆಯಿತು. ಪ್ರಶಂಸೆ ಪ್ರಾಪ್ತವಾಯಿತು. ಹೊಗಳಿಕೆಗಳ ಮಹಾಪೂರ. ಸಮಚಿತ್ತದ ಶ್ರೀಧರ ರಾವ್ ಒಮ್ಮೆ ಹೇಳಿದ್ದರು, “ಎಲ್ಲವೂ ಸರಿ, ಹೊಗಳಿಕೆ ಬೇಕು. ಅದು ಶೂಲ ಅಂತ ಗೊತ್ತಾದರೆ ಸಮಸ್ಯೆಯಿಲ್ಲ. ಮಾತಿನ ಪ್ರೋತ್ಸಾಹದೊಂದಿಗೆ ಆರ್ಥಿಕ ಬೆಂಬಲವೂ ಸಿಕ್ಕರೆ ಈ ಕಾರ್ಯಾಗಾರವನ್ನು ಎಷ್ಟು ಎತ್ತರಕ್ಕೆ ಒಯ್ಯುತ್ತೇನೆ, ನೋಡ್ತಾ ಇರಿ.” ಇದು ಅವರ ಕನಸು ಕೂಡಾ ಆಗಿತ್ತು.
ಕೃಷಿ, ಮನೆವಾರ್ತೆಗಳನ್ನು ಬದಿಗೊತ್ತಿ ಮುಖವರ್ಣಿಕೆಗಳ ತಯಾರಿ, ಮಾರುಕಟ್ಟೆ ಮತ್ತು ಅದಕ್ಕೆ ಬೇಕಾದ ಅರ್ಥಿಕ ವ್ಯವಸ್ಥೆಯನ್ನು ಮಾಡಲು ಕನ್ನಾಡಿನಾದ್ಯಂತ ಓಡಿದರು. ಪ್ರತಿಷ್ಠಿತರನ್ನು ಭೇಟಿಯಾದರು. ಇಲಾಖೆಗಳ ಮೆಟ್ಟಿಲು ಏರಿದರು. ಆಶಯವನ್ನು ಅರ್ಥಮಾಡಿಕೊಂಡವರಿಂದ ಹಿಡಿಯಷ್ಟು ಆರ್ಥಿಕ ಬೆಂಬಲ ಸಿಕ್ಕಿತು. ಆಗ ರಾಮನಗರ ಜಾನಪದ ಲೋಕದ ಮುಖ್ಯಸ್ಥರಾಗಿದ್ದ ಡಾ.ನಾಗೇಗೌಡರು ಸ್ವಲ್ಪ ಮಟ್ಟಿಗೆ ಹೆಗಲೆಣೆಯಾದರು. ತನ್ನ ಘಟಕವನ್ನು ಅಭಿವೃದ್ಧಿ ಪಡಿಸುವ ಆಶಯದಿಂದ ಸವೆಸಿದ ಚಪ್ಪಲಿಗಳು ಅಗಣಿತ!
ಮುಖವರ್ಣಿಕೆಗಳನ್ನು ಆರಂಭದಲ್ಲಿ ಉಚಿತವಾಗಿ ನೀಡಿದ್ದೇ ಹೆಚ್ಚು. ಒಂದಷ್ಟು ಜನರಿಗೆ ತಿಳಿಯಲಿ ಎಂಬ ಉದ್ದೇಶ. ಗೇಲಿ ಮಾಡುವವರ ಉಡಾಫೆಯನ್ನು ಲೆಕ್ಕಿಸದೆ ನಿರಂತರ ಕಾಲಿಗೆ ಚಕ್ರ ಕಟ್ಟಿ ಓಡಾಡಿದರು. ಈ ಮಧ್ಯೆ ಪ್ಯಾರ್ ನಾವೂರು ದಿವಂಗತರಾದರು. ರಾಯರ ಬೀಸು ಉತ್ಸಾಹ ನಿಧಾನವಾಯಿತು. ಯಕ್ಷಗಾನ ಕಲಾ ಕೇಂದ್ರದ ಮೂಲಕ ತನ್ನ ಮನೆಯನ್ನು ಕೇಂದ್ರವಾಗಿಸಿದರು. ವಿವಿಧ ಗ್ರಂಥಗಳನ್ನು ಕಲೆಹಾಕಿದರು. ಮನೆಯಂಗಳದಲ್ಲಿ ಯಕ್ಷಗಾನದ ಕಾರ್ಯಾಗಾರ ನಡೆಸಿದರು. ಮಾಹಿತಿಗಳನ್ನು ಕಲೆ ಹಾಕಿದರು. ‘ಯಕ್ಷಗಾನ ವರ್ಣ ವೈಭವ’ ಕೃತಿಯನ್ನು ಹೊರ ತಂದರು.
ತನ್ನ ಕಾರ್ಯಾಗಾರವು ವೃತ್ತಿ ರಂಗದ ಛಾಯೆಯಾಗಿರ ಬಾರದು - ಅವರ ನಿಲುವು. ಯಾವ್ಯಾವ ವೇಷಕ್ಕೆ ಯಾವ ರೀತಿಯ ಬಣ್ಣ, ವೇಷಭೂಷಣ ಇರಬೇಕೆನ್ನು ಖಚಿತತೆ ಅವರಲ್ಲಿತ್ತು. ಅದಕ್ಕಾಗಿ ಬಹುತೇಕ ಎಲ್ಲಾ ಮೇಳಗಳನ್ನು, ಕಲಾವಿದರನ್ನು ಸಂದರ್ಶನ ಮಾಡಿದ್ದಾರೆ. ಯಜಮಾನರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಳೆಯ ವಿಚಾರಗಳನ್ನು ಕಲೆ ಹಾಕಿದ್ದಾರೆ. “ಎಲ್ಲರಿಗೂ ಪಾರಂಪರಿಕ ಬಣ್ಣಗಳು, ರೀತಿಗಳು ಗೊತ್ತು. ಮಾತನಾಡುವಾಗ ಸ್ವಾರಸ್ಯವಾಗಿ ಹೇಳುತ್ತಾರೆ. ಆದರೆ ಅದನ್ನು ಅಳವಡಿಸಿಲು ಯಾಕೆ ಹಿಂಜರಿಕೆ ಅಂತ ಗೊತ್ತಾಗುತ್ತಿಲ್ಲ,” ಎಂದೊಮ್ಮೆ ಹೇಳಿದ್ದರು.
“ಏನಾದರೇನು? ಕಲಾವಿದರಿಗೆ ಇದ್ಯಾವುದೂ ಬೇಡ. ಮೇಳದ ಯಜಮಾನರನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ. ರಾಜಕೀಯದ ಕಮಟು ವಾಸನೆಯಿಂದಾಗಿ ಇಲಾಖೆಗಳತ್ತ ನೋಡುವ ಹಾಗಿಲ್ಲ. ಮತ್ತೆ ಯಾರಿಗಿದು?.” ಇಂತಹ ನಿರಾಶೆಯ ಮಾತುಗಳನ್ನು ಆಗಾಗ್ಗೆ ಹೇಳುತ್ತಿದ್ದರು. ಯಕ್ಷಗಾನದ ಅಧ್ಯಯನ ಕೇಂದ್ರದ ಕುರಿತ ದೊಡ್ಡ ಕನಸು ಶ್ರೀಧರ ರಾಯರಲ್ಲಿತ್ತು. ಅದನ್ನು ಮಾಡುತ್ತೇನೆಂಬ ಛಲವೂ ಇತ್ತು. ಆರೋಗ್ಯ ಕೈಕೊಡುತ್ತಾ ಬಂದಾಗ ಆಸಕ್ತಿಗಳು ಮುದುಡಿದುವು.
ಶ್ರೀಧರ ರಾಯರು ಇಂಜಿನಿಯರಿಂಗ್ ಪದವೀಧರ. ಮುಂಬಯಿಯಲ್ಲಿ ಕೈತುಂಬಾ ಕಾಂಚಾಣ ಬರುವ ಕೆಲಸಕ್ಕೆ ವಿದಾಯ ಹೇಳಿ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡರು. ಮುಂಬಯಿಯಲ್ಲಿದ್ದಾಗ ನಾಟಕ ರಂಗದಲ್ಲಿ ದುಡಿತ. ಯಕ್ಷಗಾನೀಯ ವಾತಾವರಣ ಮನೆಯಲ್ಲಿ ಮತ್ತು ಊರಲ್ಲಿ ಸಮೃದ್ಧವಾಗಿದ್ದಾಗ ಸಹಜವಾಗಿಯೇ ಯಕ್ಷಗಾನದತ್ತ ಒಲವು ವಾಲಿತು. ನಾಟಕ ರಂಗದ ಜಾಣ್ಮೆಗಳನ್ನು ಯಕ್ಷಗಾನದ ರಂಗಕ್ಕೆ ಅಳವಡಿಸುವ ಪ್ರಯೋಗ. ತಾಳಮದ್ದಳೆಯಲ್ಲಿ ಭಾಗಿ. ಪೆರಾಜೆ ಮೇಳದಲ್ಲಿ ತಿರುಗಾಟ. ಆಟ-ಕೂಟಗಳ ಸಂಘಟನೆ. ಒಂದೆರಡು ಪ್ರದರ್ಶನಗಳ ವೀಡಿಯೋ ದಾಖಲೆ ಮಾಡಿದ್ದರು ಕೂಡಾ. ಸುಮಾರು 1994-96ರ ಕಾಲಘಟ್ಟದಲ್ಲದು ದೊಡ್ಡ ಸುದ್ದಿ.
ಅಡೂರಿನ ಇವರ ಮನೆಯಲ್ಲಿ ಉಂಡ ಕಲಾವಿದರು ಅಸಂಖ್ಯ. ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರು ಅಡೂರಿಗೆ ಬಂದರೆ ಇವರಲ್ಲೇ ವಾರಗಟ್ಟಲೆ ಇರುತ್ತಿದ್ದರು. ಶ್ರೀಧರ ರಾಯರ ಯೋಚನೆಗಳಿಗೆ ಅಂತಿಮ ಸ್ಪರ್ಶವನ್ನು ನಾಯ್ಕರೇ ಮಾಡುತ್ತಿದ್ದರು. ಇವರಿಬ್ಬರ ಜ್ಞಾನಗಳು ಮಿಳಿತವಾಗಿ ಅದು ರಂಗದಲ್ಲಿ ಸಾಕ್ಷಾತ್ಕಾರವಾಗುತ್ತಿದ್ದುವು. ಥೇಟ್ ಕೋಣನಂತೆಯೇ ಕಾಣುವ ಮಹಿಷನ ಮುಖವಾಡ ತಯಾರಿಸಿದ್ದರು. ಅದನ್ನು ಸ್ವತಃ ಧರಿಸಿ ಪಾತ್ರ ಮಾಡುತ್ತಿದ್ದರು. ನರಕಾಸುರ, ಮಾಗಧ, ವಾಲಿ, ಹರಿಶ್ಚಂದ್ರ, ಬಲಿ... ಹೀಗೆ ಎಲ್ಲಾ ಸ್ವರೂಪದ ಪಾತ್ರಗಳಲ್ಲೂ ಖ್ಯಾತಿ.
ವೈಯಕ್ತಿಕ ಬದುಕಿನ ಸಿಂಹಪಾಲನ್ನು ಯಕ್ಷಗಾನ ಸಂಬಂಧಿ ಕೆಲಸಗಳಿಗಾಗಿಯೇ ವಿನಿಯೋಗಿಸಿದ ಅಡೂರು ಶ್ರೀಧರ ರಾಯರಿಗೆ ಅದೊಂದು ಹೊಟ್ಟೆಪಾಡಿನ ವಿಷಯವಾಗಿರಲಿಲ್ಲ. ತನ್ನೆಲ್ಲಾ ಆಸಕ್ತಿಗಳಿಗೆ ಸದಾ ಸ್ಪಂದಿಸುತ್ತಿದ್ದ, ಅವರ ಯೋಜನೆಗಳೊಳಗೆ ಪೂರ್ಣ ಲೀನವಾಗಿಯೂ, ಲೀನವಾಗದಂತೆಯೂ ಇದ್ದ ಮಡದಿ ಶಾಂಭವಿ ಅವರ ತ್ಯಾಗ ಗುರುತರ.
ಅಡೂರು ಶ್ರೀಧರ ರಾಯರು ಜೂನ್ 22ರಂದು ವಿಧಿವಶರಾದರು. ಕನಸಿನ ಎಲ್ಲಾ ಮೆಟ್ಟಿಲುಗಳನ್ನು ಏರಲಾಗದಿದ್ದರೂ ಏರಿದಷ್ಟು ಮೆಟ್ಟಿಲು ಸದೃಢವಾಗಿರುವುದು ಅವರಿಗೆ ಸಮಾಧಾನದ ವಿಷಯವಾಗಿತ್ತು. ರಾಶಿ ರಾಶಿ ಸಂಮಾನ, ಪುರಸ್ಕಾರ ಮತ್ತು ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕøತರು. ಅಗಲಿದ ಆತ್ಮಕ್ಕೆ ಅಕ್ಷರ ನಮನ.