ಕನಸುಗಾರನನ್ನು ಈ ದಿನ ನೆನೆಯೋಣ...
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಯಾರಾಗಿರಬಹುದು ಎಂದು ಯಾರ ಹತ್ತಿರವೂ ಕೇಳಿದರೆ ತಕ್ಷಣ ಹೇಳ್ತಾರೆ ನಮ್ಮ ರಾಷ್ಟ್ರಪತಿ ಆಗಿದ್ದವರೆಂದು. ಅವರೊಬ್ಬ ಮಹಾ ಕನಸುಗಾರ. ಮಕ್ಕಳೊಂದಿಗೆ ಕಲೆತು ಬೆರೆತು, ಅವರ ಮನಸ್ಸಿನ ಕುತೂಹಲಗಳನ್ನು ಸಮರ್ಪಕವಾಗಿ ತಣಿಸುವುದೆಂದರೆ ಬಹಳ ಇಷ್ಟ. ಯಾವಾಗಲೂ ಅವರು ಹೇಳುವ ಮಾತು ‘ಕನಸು ಕಾಣುವುದು ತಪ್ಪಲ್ಲ, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ನಿಮ್ಮ ವ್ಯವಹಾರ, ಕಲಿಯುವಿಕೆಯ ಓಘ, ಚಟುವಟಿಕೆಗಳು ಇರಬೇಕು
ಸುಮ್ಮನೆ ಕನಸು ಕಂಡರೆ ‘ಗೋರ್ಕಲ್ಲ ಮೇಲೆ ಮಳೆ ಬಿದ್ದಂತೆ’ ಆಗಬಹುದು. ಶ್ರೀಮಂತ ಮನೆತನದ ಹಿನ್ನೆಲೆಯಿದ್ದರೂ ಅವರ ಊರಿನಲ್ಲಿ ಬೀಸಿದ ಪ್ರಚಂಡ ಗಾಳಿ ಸಂಪತ್ತೆಲ್ಲವನ್ನೂ ನಾಶಮಾಡಿತಂತೆ. ಹಾಗಾಗಿ ಕಡು ಬಡ ಕುಟುಂಬ ಪರಿಸರ ಅವರದಾಯಿತು. ಅವರು ಬಾಲ್ಯದಲ್ಲಿ ಕಷ್ಟ ನೋವನ್ನು ಪಟ್ಟ ಕಾರಣ, ಬಡ ಮಕ್ಕಳ ಕಷ್ಟ ಗೊತ್ತಿತ್ತು. ಪತ್ರಿಕೆಗಳನ್ನು ಮನೆ ಮನೆಗೆ ಹಂಚಿ ನಂತರ ಶಾಲೆಗೆ ಹೋಗುತ್ತಿದ್ದರಂತೆ.
ತಮಿಳುನಾಡಿನ ರಾಮೇಶ್ವರದಲ್ಲಿ ಮೀನು ಹಿಡಿಯುವ ಕಾಯಕದ ದೋಣಿಗಳ ಮಾಲಿಕನಾದ ಜೈನುಲಾಬ್ದೀನ್ ಮತ್ತು ಆಶಿಯಮ್ಮ ದಂಪತಿಗಳ ಪುತ್ರನಾಗಿ ಅಕ್ಟೋಬರ ೧೫, ೧೯೩೧ರಂದು ಜನನ. ಆಗಸದಿ ವಿಮಾನ ಹಾರುವಾಗ ಕೆಳಗೆ ಒಂದಷ್ಟು ದೂರ ಮೇಲೆಯೇ ನೋಡಿಕೊಂಡು ಓಡುತ್ತಿದ್ದರಂತೆ. ಮರಳರಾಶಿಯ ಮೇಲೆ ಕುಳಿತು ಕನಸುಗಳ ಹೆಣೆದ ಬಾಲಕ. ಅಮ್ಮನ ಪ್ರೋತ್ಸಾಹ, ಕುರಾನಿನ ಕೆಲವು ಕಥೆಗಳು ಅವರನ್ನು ಸದೃಢಗೊಳಿಸಿ, ಜೀವನೋತ್ಸಾಹದತ್ತ ಸೆಳೆಯಿತು ಎಂದು ತಿಳಿದು ಬರುತ್ತದೆ. ತಾನು ದೊಡ್ಡ ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದರಂತೆ.
ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವರ ಸೋದರಿ ಜೊಹರಾ ಎಂಬುವರು ಬಂಗಾರ ಅಡವಿಟ್ಟು ಹಣ ನೀಡಿದ ಕಾರಣ ಓದಿ ತನ್ನ ಕನಸನ್ನು ನನಸು ಮಾಡುವತ್ತ ಹೆಜ್ಜೆಯೂರಲು ಆರಂಭಿಸಿದರಂತೆ. ಅಪ್ಪಟ ದೇಶಪ್ರೇಮಿ, ಶ್ರೇಷ್ಠ ವಿಜ್ಞಾನಿ ಶುದ್ಧ ಸಸ್ಯಾಹಾರಿಗಳಾಗಿದ್ದರು ಕಲಾಂ ಸರ್.
ತುಂಬಾ ಸರಳತೆಯ ವ್ಯಕ್ತಿ. ಹಾಗಾಗಿಯೇ ಎಲ್ಲೇ ಹೋದರೂ ಮಕ್ಕಳೊಂದಿಗೆ ಬೆರೆತು ಅವರ ಮನಸ್ಸಿನ ಪ್ರಶ್ನೆ ಗಳನ್ನು ಹೊರಗೆಳೆದು ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಬಣ್ಣಹಚ್ಚಿ ಹಾರಾಡಲು ಸಹಾಯ ಮಾಡುತ್ತಿದ್ದರು. ಮಕ್ಕಳಿಗೆ ನೀತಿ ಬೋಧನೆ ಮಾಡುತ್ತಿದ್ದರು. ಗಣಿತ, ಭೌತಶಾಸ್ತ್ರ ಅವರ ಇಷ್ಟದ ಪಠ್ಯವಿಷಯವಾಗಿತ್ತು.
ಮಕ್ಕಳಿಗೆ ಮೊದಲು ‘ತನ್ನನ್ನು ತಾನು ಅರಿಯಬೇಕೆಂಬ ಕಿವಿಮಾತು ಹೇಳುತ್ತಿದ್ದರಂತೆ’. ಬೇರೆಯವರಿಗೂ ಗೊತ್ತಿರಬಹುದು ಎಂದು ತಿಳಿಯುವುದು ಕೇವಲ ಬುದ್ಧಿವಂತಿಕೆ ಮಾತ್ರ ಎನ್ನುತ್ತಿದ್ದರಂತೆ. ಯಾರು ತನ್ನ ತಾ ತಿಳಿಯುವನೋ ಅವನೇ ನಿಜವಾದ ಪ್ರಜ್ಞಾವಂತನಾಗಲು ಸಾಧ್ಯ. ಸತ್ಯ ಎಂಬುದು ಅನ್ವೇಷಣೆಯಿಂದ ಬರುವುದು, ಸುಮ್ಮನೆ ಕೈಕಟ್ಟಿ ಕುಳಿತರೆ ಸಿಗದು, ಹುಡುಕಿ ಕಂಡುಹಿಡಿಯಬೇಕು ಇದು ಮಕ್ಕಳಲ್ಲಿ ಹೇಳುತ್ತಿದ್ದ ಮಾತುಗಳು.
ತಮ್ಮ ಬಾಲ್ಯದ ಪ್ರಾಯದಲ್ಲಿ ಕಲಿಕೆಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೇರೆಯವರಿಗೆ ಸಣ್ಣಪುಟ್ಟ ಸಹಾಯ ಕೆಲಸದಲ್ಲಿ ಮಾಡಿ ಅವರಿತ್ತ ಕಾಸನ್ನು ಒಗ್ಗೂಡಿಸಿ ತಾಯಿಯ ಕೈಯಲ್ಲಿ ತಂದು ಕೊಡುತ್ತಿದ್ದರಂತೆ. ಇದು ಗಟ್ಟಿಗತನ, ದೃಢನಿರ್ಧಾರ ಕಷ್ಟ ಸಹಿಷ್ಣುತೆ ಕಲಿಸಿತು ಅವರಿಗೆ. ನಿರಂತರ ಅಧ್ಯಯನ, ಸಂಶೋಧನೆ, ಏಕಾಗ್ರತೆ, ಮೇಧಾವಿತನ ಅವರ ಗೆಳೆಯರಾಗಿ ಜೊತೆಯಲ್ಲಿಯೇ ಇದ್ದುವಂತೆ.
ಮಕ್ಕಳು ದೇವರ ಕೊಡುಗೆ, ಖಾಲಿ ಕೊಡಗಳು, ಅದರೊಳಗೆ ಶುದ್ಧ ನೀರು ತುಂಬಿಸುವ ಕೆಲಸ ಶಿಕ್ಷಕರು, ಪೋಷಕರು, ಸಮಾಜ ಮಾಡಬೇಕೆಂದರು. ಬಾಹ್ಯಾಕಾಶದ ಬಗ್ಗೆ ಅದಮ್ಯ ಆಕಾಂಕ್ಷೆ ಹರಿಸಿ ಮೊದಲಿಗೆ ಅನುತ್ತೀರ್ಣ ಆದರೂ ನಂತರ ಸತತ ಸಾಧನೆಯಿಂದ ಮೇಲೆ ಬಂದವರು.
‘ದೇಶದ ಉನ್ನತಿ ಯುವಕರ ಆಲೋಚನೆಗಳಲ್ಲಡಗಿದೆ ಎಂದವರು. ಹಿರಿಯರು ಪ್ರೋತ್ಸಾಹಿಸುವ, ಬೆನ್ನು ತಟ್ಟುವ ಕೆಲಸ ಮಾಡಿದಾಗ ಮಕ್ಕಳಾಗಲಿ, ಯುವಕರಾಗಲಿ ಮೇಲೆ ಬಂದಾರು ಎಂದವರು. ಓರ್ವ ರಾಷ್ಟ್ರಪತಿ ಬರುವಾಗ ಹಿಂದೆ ಮುಂದೆ ಎಲ್ಲಾ ಜನರೇ. ಎಲ್ಲೆಂದರಲ್ಲಿ ಹೋಗುವ ಸ್ವಾತಂತ್ರ್ಯ ಸಹ ಇಲ್ಲ. ಆದರೆ ಇವರು ಮಕ್ಕಳ ಹತ್ತಿರ ಸೀದಾ ಹೋಗಿ ಬೆರೆಯುತ್ತಿದ್ದರು.
ಕೇವಲ ಕಾಗದದ ವಿಮಾನ ಮಾಡಿ, ರಾಕೆಟ್ ನ ಹಾಗೆ ಹಾರಿಸಿ, ರಾಮೇಶ್ವರದ ಮರಳಿನಲ್ಲಿ ಓಡುತ್ತಿದ್ದ ಒಬ್ಬ ಹುಡುಗ, ಭೌತಶಾಸ್ತ್ರ ಮತ್ತು ಅಂತರಿಕ್ಷ ಯಾನದ ಪದವಿ ಗಳಿಸಿ, ಭಾರತದ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಂತು, ಅತ್ಯುನ್ನತ ಹುದ್ದೆಯನ್ನು ಭಾರತ ಸರಕಾರದಲ್ಲಿ ಪಡೆದದ್ದು ಸಾಮಾನ್ಯದ ಮಾತಲ್ಲ.
ಮಗುವಿನ ಮನಸ್ಸನ್ನು ಅರಿತು ವ್ಯವಹರಿಸುವ ಚಾಣಾಕ್ಷ ತನವಿತ್ತು.ಅವರ ನುಡಿಗಳಲ್ಲಿ ಒಂದು ರೀತಿಯ ಹುರಿದುಂಬಿಸುವಿಕೆ. ‘ಸಣ್ಣ ಸಣ್ಣ ಯೋಜನೆ ಮೂಲಕ ದೊಡ್ಡ ಗುರಿ ಸಾಧಿಸಬೇಕೆಂದು’ ಹೇಳುತ್ತಿದ್ದರು. ಅವರ ಸ್ಫೂರ್ತಿ ತುಂಬುವ ನುಡಿಗಳೇ ಮಕ್ಕಳಿಗೆ ಇಷ್ಟವಾಯಿತು. ಮುಖ್ಯವಾಗಿ ‘ಅಚಲ ನಂಬಿಕೆ, ದೃಢನಿರ್ಧಾರ, ಸಾಧಿಸುವೆ ಎಂಬ ಮನೋಭಾವ, ಕಠಿಣ ಪರಿಶ್ರಮ ನಿಮ್ಮನ್ನು ಉತ್ತುಂಗಕ್ಕೆ ಒಯ್ಯಬಲ್ಲುದು ಎಂದವರು. ಕರಿಬಣ್ಣದ ಹಲಗೆಯ ಕಲಿಕೆಯಲ್ಲಿ ನಿಮ್ಮ ಭವಿಷ್ಯ ಅಡಗಿದೆ, ಅದನ್ನು ಪ್ರೀತಿಸಿ ಎಂದವರು’.
ಯಾವತ್ತೂ ವಿಶ್ರಾಂತಿ ಬಯಸದ ಧೀಮಂತರು. ಅವರ ಒಂದೊಂದು ನುಡಿಮುತ್ತುಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು.ಅಷ್ಟೂ ಸಾರವಡಗಿದೆ ಅದರಲ್ಲಿ. ಪ್ರಶಸ್ತಿಯನರಸಿ ಹೋಗುವ ಜಾಯಮಾನ ಅವರದಲ್ಲ. ಪ್ರಶಸ್ತಿಗಳೇ ಅವರನ್ನರಸಿ ಬಂತು ಎಂದರೂ ತಪ್ಪಾಗಲಾರದು. ಭಾರತರತ್ನ ಪಡೆದ ಹೆಗ್ಗಳಿಕೆಯೊಂದಿಗೆ ಪದ್ಮವಿಭೂಷಣ, ಪದ್ಮಭೂಷಣ, ಮಿಸೈಲ್ ಮ್ಯಾನ್ ಆಫ್ ಇಂಡಿಯಾ, ವೀರ ಸಾವರ್ಕರ್ ಅಭಿನಂದನೆ, ಇಂದಿರಾಗಾಂಧಿ ರಾಷ್ಟ್ರೀಯ ಪುರಸ್ಕಾರ, ರಾಮಾನುಜನ್ ಪ್ರಶಸ್ತಿ, ಅತ್ಯುತ್ತಮ ನಾಗರಿಕ ಪ್ರಶಸ್ತಿ, ಸುಮಾರು ೪೦ ಸಂಸ್ಥೆಗಳಿಂದ ಗೌರವ ಡಾಕ್ಟರೇಟ್ ಪಡೆದ ಧೀಮಂತ ನಾಯಕರಿವರು.
ಅವರ ಹತ್ತಿರ ೪-೫ ಸೂಟು-ಬೂಟುಗಳು, ೨೫೦೦ ಪುಸ್ತಕಗಳು ಮಾತ್ರ ಇದ್ದುವಂತೆ ನಿವೃತ್ತರಾಗುವಾಗ. ಯಾರಿಂದಲೂ ಉಡುಗೊರೆ ಪಡೆಯುತ್ತಿರಲಿಲ್ಲವಂತೆ. ತಂತ್ರಜ್ಞಾನ ವಲಯದಲ್ಲಿ, ಕೃಷಿಕ್ಷೇತ್ರದಲ್ಲಿ ,ಪರಮಾಣು ಶಕ್ತಿಯಲ್ಲಿ ತಾಂತ್ರಿಕ ದಾರ್ಶನಿಕರಾಗಿ ದುಡಿದವರು. ಅವರು ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದ ಕಾರಣವೇ ಉತ್ತುಂಗಕ್ಕೇರಿದರು. ಸುಮಾರು ನಾಲ್ಕು ದಶಕಗಳ ಕಾಲ ವೈಜ್ಞಾನಿಕ, ವೈಮಾನಿಕ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಶಕ್ತಿಮೀರಿ ಹೊರಹೊಮ್ಮಿಸಿ ದುಡಿದ, ಸೇವೆ ಮಾಡಿದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜನುಮ ದಿನವಿಂದು. ಅವರು ಅಳಿದರೂ ಅವರ ಮಾತುಗಳು ಜೀವಂತ. ಭಾರತರತ್ನ ಅಲಂಕರಿಸಿದ ಮಹಾನುಭಾವರು ಮಕ್ಕಳ ವ್ಯಕ್ತಿತ್ವ ರೂಪಿಸಿದ ಧೀಮಂತರು ನಮ್ಮ ದೇಶದ ಹೆಮ್ಮೆ, ಈ ಸಂದರ್ಭದಲ್ಲೊಂದು ನುಡಿನಮನ.
(ಮಾಹಿತಿ ಸಂಗ್ರಹ)-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ