ಕನಸು ತುಂಬಿದೆ ಮನಸು
ಕವನ
ನಸುಕು ಚೆಲುವಲಿ
ಲಸಿತ ಬೆಡಗಿದೆ
ಹಸಿರು ಕಂಗಳ ಸೆಳೆದಿದೆ
ಹೊಸತು ಬದುಕಿಗೆ
ಹೊಸೆದ ಕನಸಿಗೆ
ಮುಸುಕು ತೆರೆಸುತ ನಲಿಸಿದೆ
ತಂಪನೆರೆಯುತ
ಕಂಪು ಸೂಸುತ
ಸೊಂಪು ತುಂಬಿದೆ ಬುವಿಯಲಿ
ಇಂಪು ದನಿಯಲಿ
ರಂಪ ಮಾಡುತ
ಪೆಂಪು ತಂದಿದೆ ಹನಿಗಳು
ವಿಕಳವಿಲ್ಲದೆ
ನಿಖರ ಮನದಲಿ
ವಕುಲ ಮರದಡಿ ಚೆಲುವೆಯು
ಅಖಿಲ ವಲ್ಲಭ
ಸಕಲ ಗುಣದವ
ನಿಕಟವಾಗುವ ಕನಸಲಿ
ಸುರಿವ ಮಳೆಯಲಿ
ತರುಣಿ ನೆನೆಯುತ
ಮರದ ಬುಡದಲಿ ಕುಳಿತಿರೆ
ಹರೆಯ ಬಯಸಿದೆ
ಕರವ ಹಿಡಿಯಲು
ವರನ ನೆನಪಿಸಿ ಚಳಿಯಲಿ
-ಕಾ ವಿ ರಮೇಶ್ ಕುಮಾರ್ ಬೆಂಗಳೂರು