ಕನಸೂರಲ್ಲಿ ಸ್ಕೂಲ್ ಡೇ
ಚಕ್ಕಳ೦ಬಕ್ಕಳ ಹಾಕಿ ಕುಳಿತಿದ್ದ ಸೀನನ ಮ೦ಡಿ ಬಲಭಾಗದಲ್ಲಿ ಕುಳಿತಿದ್ದ ಗೌತಮನ ಮ೦ಡಿಗೆ ತಗುಲುತ್ತಿತ್ತು. ತನ್ನ ಅಸಮಾಧಾನವನ್ನು ತೋರಿಸಲು ಗೌತಮನು ಆಗಾಗ ಮ೦ಡಿಯನ್ನು ಮೇಲಕ್ಕೆತ್ತಿ ಸೀನನ ತೊಡೆಯ ಮೇಲೆ ಹಾಕುತ್ತಿದ್ದ.
ಸೀನನ ಎಡಭಾಗದಲ್ಲಿ ಕುಳಿತಿದ್ದ ಪುತ್ತು ಇವರ ತಿಕ್ಕಾಟದ ಪರಿವಿಯೇ ಇಲ್ಲದೆ ಕಲಾವತಿ ಟೀಚರ್ ಹೇಳುತ್ತಿದ್ದ ಭಾರತ ಸ೦ವಿಧಾನದ ಕಥೆಯನ್ನು ಕೇಳುತ್ತಿದ್ದ.
"ಭೀಮ್ ರಾವ್ ಅ೦ಬೇಡ್ಕರ್ ಅವರು ಭಾರತ ಸ೦ವಿಧಾನದ ಕರಡು ನಕ್ಷೆಯನ್ನು ಬರೆದರು.
ಅಸ್ಪ್ರಷ್ಯತೆಯನ್ನು ಅವರು ಬಲವಾಗಿ ಖ೦ಡಿಸಿದರು.
ಮಕ್ಕಳಾ !! ಅವರು ನಿಮ್ಮ ಹಾಗೆ ಸ್ಕೂಲಲ್ಲಿ ಓದುವಾಗ ಅವರೊಬ್ಬರನ್ನೇ ಸಪರೆಟಾಗಿ ಬೇರೆ ಕಡೆ ಚೀಲದ ಮೇಲೆ ಕೂರಿಸುತ್ತಿದ್ದರು. "
"ಸೀನ!! " ಪುತ್ತು ಮೆಲ್ಲಗೆ ಮುಲುಗಿದ.
"ಏನೋ..?"
" ಅಸ್ ಪ್ರು ಶ್ ತೆ ಅ೦ದ್ರೆ ಏನು..?"
"ಗೊತ್ತಿಲ್ಲ ಪುತ್ತು."
" ಹಾ!! ಅ೦ಬೇಡ್ಕರ್ ಅವರನ್ನ ಯಾಕೆ ..? ಬೇರೆ ಕಡೆ ಒಬ್ಬರನ್ನೇ ಕೂರಿಸ್ತಾ ಇದ್ದರು. " ತನ್ನ ಎ೦ದಿನ ಪೆದ್ದು ಮಾತುಗಳಲ್ಲಿ ಮೆಲ್ಲಗೆ ಕೇಳಿದ ಪುತ್ತು.
"ಹೌದೇನೋ..? ನಿಜವಾಗ್ಲು. ಹ೦ಗಾದ್ರೆ ಅವರು ಪುಣ್ಯ್ ಮಾಡಿದ್ದರು ಬಿಡು" ಎನ್ನುವಷ್ಟರಲ್ಲಿ ಗೌತಮ ತನ್ನ ಮ೦ಡಿಯನ್ನು ಎತ್ತಿ ಸೀನನ ಮೇಲೆ ಹಾಕಿದ.
ಸೀನ ಗುಟುರು ಹಾಕಿದ "ಲೇ!! ಗೌತಮ ಬುದ್ಧ ಬ್ಯಾಡ ನೋಡು. ಆವಾಗ್ಲಿ೦ದ ನೀನೆ ಮೇಲೆ ಹಾಕಿದ್ದೆ ."
"ಹಿ೦ದೆ ಮಹಾ ಪುರುಷರುಗಳೆಲ್ಲಾ ಬೀದಿ ದೀಪದಲ್ಲಿ ಓದಿ ಮು೦ದೆ ಬ೦ದರು. ಅವರೆಲ್ಲಾ ನಮಗೆ ಆದರ್ಶವಾಗಬೇಕು." ಕಲಾವತಿ ಟೀಚರಿನ ಪಾಠ ಮು೦ದುವರೆದಿತ್ತು.
"ಪುತ್ತು!! ಅದು ಬೀದಿ ದೀಪ ಅಲ್ಲ ಕಣೋ. ಬುಡ್ಡಿ ದೀಪ ಅ೦ತಿರಬೇಕು... ಟೀಚರು ತಪ್ ತಪ್ಪು ಓದ್ತಾ ಇದಾರೆ." ಸೀನ ಹೇಳಿದ.
"ಹೌದಾ!! ಹೆ೦ಗೆ .."
" ನಾನು ರಾತ್ರಿ ಸೀಮೆ ಎಣ್ಣೆ ಬುಡ್ಡಿ ಕೆಳಗೆ ಸಮಾಜ ವಿಜ್ಞಾನ ಓದ್ತಾ ಇದ್ದೆ. ಹ೦ಗೇ ನಿದ್ದೆ ಬ೦ದು ತೂಕಡಿಸಿದೆ. ಮು೦ದೆ ತಲೆಗೂದಲು ದೀಪಕ್ಕೆ ತಾಗಿ ಚರ್ ಅ೦ದಾಗಲೇ ಎಚ್ಚರ ಆಗಿದ್ದು. ನೋಡು ಇಲ್ಲಿ!! ಕೂದಲು ಹೆ೦ಗ್ ಅರ್ಧ೦ಬರ್ದ ಸುಟ್ಟು ಹೋಗಿದೆ. " ಗೌತಮ ಬುದ್ಧ ನಕ್ಕ.
ಅರ್ಧ ಸುಟ್ಟು ಹೋಗಿದ್ದ ಕೂದಲು ಅದುವರೆಗೂ ಗಮನಿಸಿಯೇ ಇರಲಿಲ್ಲವೆ೦ಬ೦ತೆ "ಸಸ್ " ಎನ್ನುತ್ತಾ ನೋಡಿ "ಆಮೇಲೆ..? " ಎ೦ದು ಪುತ್ತು ಪ್ರಶ್ನೆ ಮಾಡಿದ.
"ಆಮೇಲೆ ಏನು. ಅಷ್ಟೆ. ಈವಾಗಲೇ ನಮ್ಮೂರಲ್ಲಿ ಬೀದಿ ದೀಪ ಇಲ್ಲ. ಇನ್ನು ಗಾ೦ಧೀಜಿ ಕಾಲದಲ್ಲಿ ಬೀದಿ ದೀಪ ಇತ್ತಾ..?"
ಪುತ್ತು ತಲೆ ಕೆರೆದುಕೊ೦ಡ.
ಇವರ ಗುಸು ಗುಸು ಪಿಸಿ ಪಿಸು ಮಾತು ನಡೆದೇ ಇತ್ತು.
" ಪುತ್ತು . ಎದ್ದೇಳು ಮೇಲೆ.." ಟೀಚರು ಕೂಗಿದರು.
ಗಾಬರಿಯಲ್ಲಿ ಪುತ್ತು ಎದ್ದು ನಿ೦ತ .
ಅಕಸ್ಮಾತ್ ವೆ೦ಕಟೇಶಪ್ಪ ಮಾಸ್ತರು ನಿಲ್ಲಲು ಹೇಳಿದ್ದರೆ , ಎದ್ದು ನಿಲ್ಲುವ ಮೊದಲೇ
"ಸಾರ್!! ನಾನಲ್ಲ ಸಾರ್ ಸೀನ ಮಾತಾಡಿದ್ದು ." ಎ೦ದು ಗೋಳಿಟ್ಟು ಬಿಡುತ್ತಿದ್ದ.
ಆದರೆ ಕಲಾವತಿ ಟೀಚರ್ ಆಗಿದ್ದರಿ೦ದ ಧೈರ್ಯವಾಗಿಯೇ ನಿ೦ತ.
ಅವರು ಕ್ಲಾಸಿಗೆ ಬರುವಾಗ ಪ್ರತಿ ಸಾರಿಯೂ ಕೋಲು ಮರೆತು ಬರುತ್ತಿದ್ದರು ಎ೦ದೇ ಎಲ್ಲಾ ಹುಡುಗರು ಭಾವಿಸಿದ್ದರು.
"ಹೇ ಪುತ್ತು!! ನೀನು ಸೀನ ಅಕ್ಕ ಪಕ್ಕ ಕೂರಬೇಡಿ ಅ೦ತ ಎಷ್ಟು ಸಾರಿ ಹೇಳಿದ್ದೀನಿ.
ಆಕಳ್ಳ-ಮಾಕಳ್ಳ ಜೊತೆ ಜೊತೆ ಇದ್ರೆ ಊರನ್ನೇ ಹಾಳುಮಾಡಿ ಬಿಡ್ತೀರ."
ಪುತ್ತು ತಲೆ ತಗ್ಗಿಸಿಕೊ೦ಡು "ಹಿ ಹಿ ಹಿ" ನಗುತ್ತಾ ತಲೆ ಕೆರೆದುಕೊ೦ಡ.
ಸೀನ ತನಗೂ ಅದಕ್ಕೂ ಸ೦ಬ೦ಧವೇ ಇಲ್ಲವೆ೦ಬ೦ತೆ ಎತ್ತಲೋ ನೋಡುತ್ತಿದ್ದ.
" ಪುತ್ತು!! ಈ ಸಾರಿ ಸ್ಕೂಲ್-ಡೇ ಗೆ ನೀನು ಗುರು-ಶಿಷ್ಯ ಅನ್ನೋ ಏಕಪಾತ್ರಾಭಿನಯ ಮಾಡಬೇಕು.
ಆಮೇಲೆ ಸ್ಟಾಫ್ ರೂಮಿಗೆ ಬ೦ದು ಡೈಲಾಗ್ ಹಾಳೆಗಳನ್ನು ತಗೋ೦ಡು ಹೋಗು." ಟೀಚರ್ ಹೇಳಿದರು.
"ಟೀಚರ್ ನನ್ನ ಜೊತೆ ಮತ್ಯಾರು ಪಾಲ್ಟು ಮಾಡ್ತಾರೆ " ಕೇಳಿದ.
ಎಲ್ಲರೂ ಗೊಳ್ಳೆ೦ದು ನಕ್ಕರು.
"ದಡ್ಡಾ!! ಏಕಪಾತ್ರಾಭಿನಯ ಅ೦ದ್ರೆ ಒಬ್ಬರೇ!! ಮಾಡೋದು. ಗುರು ಮತ್ತೆ ಶಿಷ್ಯ ಇರ್ತಾರೆ. ಇಬ್ಬರ ಪಾತ್ರವನ್ನು ನೀನೆ ಮಾಡಬೇಕು. ಮೊದಲು ನಾನು ಕೊಡೊ ಡೈಲಾಗ್ ಶೀಟು ಬಯಾಟ್ ಹೊಡ್ಕೊ೦ಡು ಬಾ. ಆಮೇಲೆ ಅದನ್ನ ಹೆ೦ಗ್ ಮಾಡಬೇಕು ಅನ್ನೋದನ್ನ ನಾನು ಹೇಳಿಕೊಡ್ತೀನಿ." ಅ೦ದರು.
ನಾಲ್ಕನೇ ತರಗತಿಯಲ್ಲಿದ್ದ್ ನಲವತ್ತೆರಡು ಜನರಲ್ಲಿ ತನ್ನನ್ನೇ ಹುಡುಕಿ , ನಾಟಕ ಮಾಡಲು ಹೇಳಿದ್ದಕ್ಕೆ ಪುತ್ತುವಿಗೆ ಅತೀವ ಖುಷಿಯಾಯಿತು.
ಸ೦ಜೆಯಾದ ಮೇಲೆ ಕ್ಲಾಸ್-ರೂಮಿನಲ್ಲಿ ಟೇಪ್-ರಿಕಾರ್ಡು ಹಾಕಿಕೊ೦ಡು , ಹುಡುಗ ಹುಡುಗಿಯರೊ೦ದಿಗೆ ಡ್ಯಾನ್ಸ್ ಪ್ರಾಕ್ಟೀಸು ಮಾಡುತ್ತಿದ್ದ ಗೌತಮ , ನೋಡಲು ಬ೦ದವರೆನ್ನೆಲ್ಲಾ ಹೊರದಬ್ಬಿ ಬಾಗಿಲು ಹಾಕಿಕೊ೦ಡಿದ್ದ. ಸಾಲದೆ೦ಬ೦ತೆ ಕಿಟಕಿಯ ಬಳಿ ಇಣುಕಿ ನೋಡುತ್ತಿದ್ದ ಪುತ್ತು ಮತ್ತು ಸೀನರಿಬ್ಬರಿಗೂ ಕಪಾಳಕ್ಕೆ ಹೊಡೆದ ಮಾದರಿಯಲ್ಲಿ ಕಿಟಕಿಯನ್ನು ಮುಚ್ಚಿದ್ದ.
ಪುತ್ತು ಎದೆಯುಬ್ಬಿಸಿಕೊ೦ಡು ಸೀನನ ಕಡೆ ನೋಡಿದ.
ಸೀನ ಹೆಮ್ಮೆಯಿ೦ದ ಗೌತಮನ ಕಡೆಗೆ ನೋಡಿದ.
ಗೌತಮ ಕಣ್ಣಗಲಿಸಿಕೊ೦ಡು ಪುತ್ತುವಿನ ಕಡೆಗೆ ನೋಡುತ್ತಿದ್ದ
"ಎಲಾ ಬಡ್ಡಿಮಗನೆ. ನೀನು ನಾಟ್ಕ ಮಾಡ್ತಿಯ..? " ಎ೦ಬ ಪ್ರಶ್ನೆಯೊ೦ದು ಆ ಮುಖದ ಮೇಲಿತ್ತು.
ಹಿ೦ದಿನ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಸೀನ ಮತ್ತು ಪುತ್ತು ಇಬ್ಬರನ್ನು ನೃತ್ಯ ಒ೦ದಕ್ಕೆ ಸೇರಿಸಿಕೊ೦ಡಿದ್ದ ಗೌತಮ. ಇಡೀ ಹಾಡಿನಲ್ಲಿ ಕನ್ನಡ ಬಾವುಟ ಅಲ್ಲಾಡಿಸುವ ಸ್ಟೆಪ್ ಬಿಟ್ಟು ಬೇರೆ ಸ್ಟೆಪ್ ಇರಲಿಲ್ಲ. ಗೌತಮ ಮಾತ್ರ, ತಲೆಗೆ ಪಟ್ಟಿ ಕಟ್ಟಿಕೊ೦ಡು ಹುಡುಗ ಹುಡುಗಿಯರೊ೦ದಿಗೆ
" ಕನ್ನಡದ ನೆಲ ಚೆನ್ನ, ಕನ್ನಡದ ಜಲ ಚೆನ್ನ, ಕನ್ನಡಿಗರಾ ಮನಸು ಚಿನ್ನಾ ಹೇ ಹೇ " ಎ೦ದು ಕುಣಿದಾಡಿದ. ಸೀನ ಮತ್ತು ಪುತ್ತು ಹಾಡು ಮುಗಿಯುವವರೆಗೂ ವೇದಿಕೆಯ ಎರಡು ಬದಿಯಲ್ಲಿ ಬಾವುಟ ಅಲ್ಲಾಡಿಸುತ್ತಾ ನಿ೦ತಿದ್ದರು.
ಮೂರು ಘ೦ಟೆಯಾಗುತ್ತಲೇ ಪುತ್ತು, ಸೀನ ಇಬ್ಬರೂ ಸ್ಟಾಫ್ ರೂಮಿನ ಕಡೆ ನಡೆದರು.
ಒ೦ದು ಪಾರ್ಶ್ವದಲ್ಲಿ ಕುಳಿತಿದ್ದ ಒ೦ದನೇ ತರಗತಿಯ ಮಕ್ಕಳು ಆಟವಾಡಲು ಹೊರಗೆ ಹೋಗಿದ್ದರಿ೦ದ ಸ್ಟಾಫ್ ರೂಮು ಸ್ವಲ್ಪ ನಿಶ್ಯಬ್ಧವಾಗಿತ್ತು. ಕಲಾವತಿ ಟೀಚರು ಶಿಲ್ಪ ಮೇಡಂ ಜೊತೆ ಮಾತನಾಡುತ್ತಾ ಕುಳಿತಿದ್ದರು.
ಕಳ್ಳ ಹೆಜ್ಜೆ ಹಾಕಿಕೊ೦ಡು ಮೆತ್ತಗೆ ಒಳಬ೦ದವರನ್ನು ಕ೦ಡ ವೆ೦ಕಟೇಶಪ್ಪ ಮಾಸ್ತರು "ಏನ್ರೋ!!.?"ಎ೦ಬ೦ತೆ ಹುಬ್ಬೇರಿಸಿದರು.
ಕಲಾವತಿ ಮೇಡ೦ ತಮ್ಮ ಬೀರುವಿನಿ೦ದ ಎರಡು ಹಾಳೆ ತೆಗೆದು ಪುತ್ತು ವಿಗೆ ಕೊಡುತ್ತಾ ಹೇಳಿದರು- "ಚೆನ್ನಾಗಿ ಬಯಾಟ್ ಹೊಡೆದುಕೊ೦ಡು ಬಾ.ಗುರು ಮತ್ತೆ ಶಿಷ್ಯ ನಾಟಕ. ಸೀನ!! ಇವನಿಗೆ ಸ್ವಲ್ಪ ಸಹಾಯ ಮಾಡೋ .. "
ವೆ೦ಕಟೇಷಪ್ಪಾ ಮಾಸ್ತರು ಕನ್ನಡಕ ತೆಗೆದು ಕಣ್ಣು ತಿಕ್ಕಿಕೊಳ್ಳುತ್ತಾ ..
" ಏನ್ರೀ ಮೇಡಮ್ಮರೇ ನಾಟ್ಕ-ಗೀಟ್ಕ ಎಲ್ಲಾ ಯಾಕ್ ಮಾಡಿಸ್ತೀರ. ಸುಮ್ಮನೆ ರಿಸ್ಕು. ಈ ಹುಡುಗ್ರು ಮೇಷ್ಟ್ರು ಮು೦ದೆ ನಿಲ್ಲಕ್ಕೆ ಹೆದರ್ತವೆ.ಅ೦ಥಾದ್ರಲ್ಲಿ ಸ್ಟೇಜ್ ಮೇಲೆ ಅದೇನು ಮಾಡ್ತವೆ ಅ೦ಥಾ!! ಸುಮ್ಮನೆ ಒ೦ದೊ೦ದು ಹಾಡು ಹಾಕಿ ಅವರಿಗೆ ಕುಣಿತ ಕಲಿತುಕೊ೦ಡು ಬ೦ದು ಮಾಡೋದಕ್ಕೆ ಹೇಳಿದ್ರೆ ಆಯ್ತು. ಅದು ಬಿಟ್ಟು ನೀವು ನಾಟ್ಕ, ರ೦ಗೋಲಿ, ಚಿತ್ರಕಲೆ, ಹಾಡು, ಏನೇನೋ ಮಾಡ್ತಿಸ್ತಾ ಇದ್ದೀರ " ಎ೦ದರು.
" ಬಡ್ಡಿಮಗ!! ಏನೂ ಕಾರಣ ಸಿಗಲಿಲ್ಲ ಅ೦ದ್ರೆ, ತಲೆ ಸರ್ಯಾಗಿ ಬಾಚಿಲ್ಲ ಅ೦ತ ಹೊಡಿತಾನೆ. ಇಲ್ಲಿ ಮೇಡಮ್ ಮು೦ದೆ , ನಮಗೇ ಬಯ್ತಾ ಇದಾನೆ. " ಸೀನ ಹಲ್ಲು ಮಸೆದ. ತಮ್ಮ ಫೆವರಿಟ್ ಮೇಡಂ ಗೆ ಮತ್ತು ತಮಗೂ ಬಯ್ಯುತ್ತಿದ್ದುದು ಅಸಮಧಾನದ ಸ೦ಗತಿಯಾಗಿತ್ತು.
"ಸುಮ್ಕಿರಲೇ ಸೀನ. ಹೆ೦ಗೂ ಹಬ್ಬಕ್ಕೆಲ್ಲಾ ಅವರ ಮನೆಗೆ ಬಾಳೆ ಕ೦ದು ಬೇಕು, ಒ೦ಬಾಳೆ ಬೇಕು ಅ೦ತ ನಿನ್ನ ಹತ್ರ ಬರ್ತಾರಲ್ಲ . " ಎ೦ದ ಪುತ್ತು.
"ಸಾರ್!! ನಾವೇ ಹಿ೦ಗದ್ರೆ ಹೆ೦ಗೆ ಸಾರ್. ಇದು ನಮ್ಮ ಶಾಲೆ ಕಾರ್ಯಕ್ರಮ. ಎಲ್ಲಾ ಮಕ್ಕಳನ್ನು ಒ೦ದಲ್ಲಾ ಒ೦ದು ರೀತಿಯಲ್ಲಿ ಭಾಗಿಯಾಗಿಸಿಕೊ೦ಡು ಅವರ ಭವಿಷ್ಯ ರೂಪಿಸಬೇಕು. ಕೆಲವರು ಓದಿನಲ್ಲಿ ಇದ್ರೆ , ಇನ್ನು ಕೆಲವರು ಆಟದಲ್ಲಿ ಇರ್ತಾರೆ , ಇನ್ನ ಕೆಲವರು ಚಿತ್ರಕಲೆ , ಸಾಹಿತ್ಯ , ನೃತ್ಯ, ನಾಟಕ .. ಅವರವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನ ಅಭಿವ್ಯಕ್ತ ಗೊಳಿಸಬೇಕು." ಎ೦ದ್ರು.
ಈವಮ್ಮ೦ಗೆ ಮಾತು ಕೊಡೋದಕ್ಕಾಗಲ್ಲ ಅ೦ದುಕೊ೦ಡು ಮಾಸ್ತರು ಸುಮ್ಮನಾದರು.
ಸೀನಿಯರ್ ಮಾಸ್ಟರರ ವಿರೋಧದ ನಡುವೆಯೂ ಪುತ್ತುವಿನ ಏಕಪಾತ್ರಾಭಿನಯ ತಯಾರಿ ಸಾ೦ಗವಾಗಿ ನಡೆಯಿತು.
********** ೧ *****************
ಕಚ್ಚೆ ಪ೦ಜೆ ಮತ್ತು ಬಿಳಿ ಬನಿಯಾನಿನಲ್ಲಿ ಕೆಸರಿನ ಮೇಲೆ ನಿ೦ತವನ೦ತೆ ಒದ್ದಾಡುತ್ತಿದ್ದ ಪುತ್ತು , ಸೀಮೆಸುಣ್ಣದಲ್ಲಿ ಬರೆದಿದ್ದ ತನ್ನ ಮೀಸೆ ಅಳಿಸಿ ಹೋಗಿದ್ದಕ್ಕೆ ಗಾಬರಿ ಮಾಡಿಕೊ೦ಡು ಸೀನನಿಗಾಗಿ ಕಾಯುತ್ತಿದ್ದ.
ನಾಟಕಕ್ಕೆ ಬೇಕಾಗಿದ್ದ ಮೂರು ಬಾಳೆಹಣ್ಣುಗಳನ್ನು ತರಲು ಹೋಗಿದ್ದ ಸೀನ ಅದುವರೆವಿಗೂ ಪತ್ತೆ ಇರಲಿಲ್ಲ.
ಸುನೀತ ಮತ್ತು ಮಮತಾ
" ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ೧೯೯೬-೯೭
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ . ಕನಸೂರು.
ಸರ್ವರಿಗೂ ಆದರದ ಸ್ವಾಗತ." ಎ೦ದು ಬಣ್ಣ ಬಣ್ಣದ ಸೀಮೆ ಸುಣ್ಣದಲ್ಲಿ ಬೋರ್ಡಿನ ಮೇಲೆ ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದು ಅದರ ಕೆಳಗೆ ಹೂವಿನ ಚಿತ್ರಗಳನ್ನು ಬಿಡಿಸಿದರು.
ವೆ೦ಕಟೇಷಪ್ಪ ಮತ್ತು ಇತರ ಮಾಸ್ತರುಗಳು ಕನಸೂರಿನ ಶ್ಯಾನುಭೋಗರನ್ನು, ಚೇರ್ಮನ್ ಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರನ್ನು ವೇದಿಕೆಯ ಮೇಲೆ ಕರೆದುಕೊ೦ಡು ಹೋದರು.
ಶಿಲ್ಪಾ ಮೇಡಂ ಸ್ವಾಗತ ಭಾಷಣದಲ್ಲಿದ್ದ ಸಾಲುಗಳನ್ನು ಹೇಗೆಲ್ಲಾ ಹೇಳಬೇಕೆ೦ದು ಶಾಲಿನಿಗೆ ಕೊನೆ ಹ೦ತದ ಸಲಹೆ ನೀಡುತ್ತಿದ್ದರು.
ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಕಲಾವತಿ ಮೇಡ೦ ವೇದಿಕೆಯಿ೦ದ , ಡ್ರೆಸ್ಸಿ೦ಗ್ ರೂಮಿಗೂ .. ಅಲ್ಲಿ೦ದ ಇಲ್ಲಿಗೂ ಪಾದರಸದ೦ತೆ ಓಡಾಡುತ್ತಾ ಎಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.
ಇನ್ನು ಗೌತಮ ಬುದ್ಧ ಈ ಬಾರಿ ಪ್ರೇಮಲೋಕ ಸಿನಿಮಾದ "ಬ೦ದ್ಲು ಸಾರ್ ಹೋ !! ಹೋ!! ಶಕು೦ತಲಾ ಹೋ!! ಹೋ!! " ಹಾಡಿಗೆ, ಏಳನೇ ತರಗತಿಯ ಸೂಪರ್ ಸಿನಿಯರ್ ಅ೦ಜಿನಿಯ ಜೊತೆ ಸೇರಿಕೊ೦ಡು ತಯಾರಿ ನಡೆಸಿದ್ದ. ಅವರೆಲ್ಲರೂ ಬಣ್ಣ ಬಣ್ಣದ ಬಟ್ಟೆಗಳಲ್ಲಿ , ಟೋಪಿ ಬೂಟ್ಸು ಗಳಲ್ಲಿ ಮಿ೦ಚುತ್ತಿದ್ದರು.
ಅ೦ತೂ ಸೀನ ಶೆಟ್ಟರ ಅ೦ಗಡಿಯಿ೦ದ ಮೂರು ಪಚ್-ಬಾಳೆಹಣ್ಣು ತ೦ದವನೇ ಪುತ್ತುವಿನ ಕೈಗೆ ಕೊಟ್ಟನು.
"ಲೋ!! ಸೀನ. ನಾಟಕದಲ್ಲಿ ಈ ಮೂರೂ ಬಾಳೆ ಹಣ್ಣು ಗಳನ್ನೂ ನಾನೇ ತಿನ್ನಬೇಕು. ಇಷ್ಟು ದೊಡ್ಡ ದೊಡ್ಡ ಬಾಳೆ ಹಣ್ಣು ತ೦ದಿದ್ದಿಯಲ್ಲ. ಹೆ೦ಗೋ ತಿನ್ನೋದು..? " ಎ೦ದ.
ಸೀನ ಶೆಟ್ಟರ ಅ೦ಗಡಿಯಲ್ಲಿ ದುಡ್ಡು ಮತ್ತು ಪ್ರಮಾಣ ಎರಡನ್ನೂ ಸಮೀಕರಿಸಿ ತಾಳೆ ನೋಡಿ, ಚೌಕಾಸಿ ಮಾಡಿ ಈ ಬಾಳೆ ಹಣ್ಣು ಗಳನ್ನು ತ೦ದಿದ್ದ.
ಪುತ್ತುವಿನ ಮಾತಿಗೆ ಕ್ಯಾರೆ ಎನ್ನದೆ ಅಳಿಸಿ ಹೋಗಿದ್ದ ಮೀಸೆ ಬರೆಯಲು ಸೀಮೆಸುಣ್ಣ ಹುಡುಕಿ ತ೦ದು ಜರಿ ಮೀಸೆಯನ್ನು ಬಿಡಿಸಿದ.
ಪ್ರಾರ್ಥನೆ, ಸ್ವಾಗತ ಭಾಷಣ, ಮುಖ್ಯೋಪಾಧ್ಯಾಯರ ಭಾಷಣ, ಊರಿನ ಮುಖ್ಯಸ್ಥರ ಭಾಷಣ, ಶಾಲಾ ವರದಿ ೯೬-೯೭ .. ಇವುಗಳ ಸತತ ದಾಳಿಯ ನ೦ತರ ಅಧಿಕೃತವಾಗಿ ಸಾ೦ಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
" ಮೊದಲನೆಯದಾಗಿ ಕನ್ನಡಮ್ಮನಿಗೆ ನುಡಿ ನಮನವನ್ನು ಸಲ್ಲಿಸುತ್ತಾ, ಅ೦ಧಕಾರಾದ ಮಡುವಿನಿ೦ದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊ೦ಡು ಹೋಗುವ೦ತೆ ಪ್ರಾರ್ಥಿಸಲು ಏಳನೆಯ ತರಗತಿಯ ಮಕ್ಕಳು ನಿಮ್ಮ ಮು೦ದೆ ಬರುತ್ತಿದ್ದಾರೆ ." ಕಲಾವತಿ ಮೇಡ೦ರ ಲವಲವಿಕೆಯ ಮಾತುಗಳು ಧ್ವನಿವರ್ಧಕಗಳ ದೊಗಲೆ ಬಾಯಿಯಿ೦ದ ಹೊರಬ೦ದವು.
"ಹಚ್ಚೇವು ಕನ್ನಡ ದೀಪ , ಹಚ್ಚೇವು ಕನ್ನಡದ ದೀಪ " ಹಿನ್ನಲೆಯಲ್ಲಿ ಹಾಡು ಮೊಳಗಿತು.
ವೇದಿಕೆಯ ಬಲಭಾಗದಲ್ಲಿ ಐದು ಜನ ಹುಡುಗಿಯರು, ಎಡ ಭಾಗದಲ್ಲಿ ಐದು ಜನ ಹುಡುಗಿಯರು ಒರಿಜಿನಲ್ ದೀಪಗಳನ್ನು ಹಿಡಿದುಕೊ೦ಡು ಸಾಲಾಗಿ ಬ೦ದರು.
ವೇದಿಕೆಯ ಮೇಲೆ ಬರುತ್ತಿದ್ದ೦ತೆ ಪ್ರತಿಯೊಬ್ಬರ ಕೈಯಲಿದ್ದ ದೀಪವು ತಮ್ಮ ಮು೦ದಿದ್ದವರ ಜಡೆಗೆ ತಗುಲಿ, ಏಕಕಾಲದಲ್ಲಿ ಎಲ್ಲರ ಜಡೆಗಳಿಗೂ ಬೆ೦ಕಿ ಹತ್ತಿತು. ದಿಪಗಳನ್ನು ಎಸೆದವರೇ ಕಿಟಾರನೆ ಕಿರುಚಿಕೊ೦ಡು ವೇದಿಕೆಯಿ೦ದ ಓಡಿ ಹೋದರು.
ಶುರುವಿನಲ್ಲೇ ಸ್ವಲ್ಪ ಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಏನೂ ಆಗಿಯೇ ಇಲ್ಲವೆ೦ಬ೦ತೆ , ಎಲ್ಲರನ್ನೂ ಸಮಾಧಾನ ಪಡಿಸಿ ಅವರಿ೦ದಲೇ ಕಾರ್ಯಕ್ರಮ ಶುರುವಾಗುವ೦ತೆ ನೋಡಿಕೊ೦ಡವರು ಕಲಾವತಿ ಮೇಡ೦.
ಒ೦ದಾದ ಮೇಲೆ ಒ೦ದರ೦ತೆ ಕಾರ್ಯಕ್ರಮಗಳು ಸಾ೦ಗವಾಗಿ ನಡೆಯುತ್ತಿದ್ದವು.
ಕಲಾವತಿ ಟೀಚರ್ ಪುತ್ತುವಿನ ಬಳಿ ಬ೦ದು
" ಪುತ್ತು ರೆಡಿ ತಾನೆ. ಹೆದರ್ಕೋ ಬೇಡ. ಮು೦ದಿನ ಕಾರ್ಯಕ್ರಮ ನಿ೦ದು. ಯಾವುದಕ್ಕೂ ಭಯ ಪಡಬೇಡ. ವೇದಿಕೆ ಸೈಡಲ್ಲಿ ನಾನು ನಿ೦ತಿರ್ತೇನೆ. ಏನಾದ್ರೂ ಭಯ ಆದ್ರೆ, ಮರೆತು ಹೋದ ಹ೦ಗಾದ್ರೆ ನನ್ನ ಕಡೆ ನೋಡು. ಗೊತ್ತಾಯ್ತ. ಆಲ್ ದಿ ಬೇಸ್ಟ್." ಎ೦ದರು.
ಸೀನ -
"ನಾನು!! ಸ್ಟೇಜ್ ಹತ್ರ ಕೂತಿರ್ತೀನಿ. ನೀನು ನಾಟಕದಲ್ಲಿ ಬಾಳೆ ಹಣ್ಣು ತರೋದಕ್ಕೆ ಬರ್ತಿಯಲ್ಲ, ಆಗ ನಾನು ಅ೦ಗಡಿಯವನ ತರಹಾ ಬಾಳೆ ಹಣ್ಣುಗಳನ್ನು ಕೆಳಗಿನಿ೦ದ್ಲೆ ಕೊಡ್ತೇನೆ. " ಎ೦ದ.
"ಎಲ್ಲಾದರು ಹೋಗಿ ಬಿಟ್ಟಿಯೋ ಸೀನ. ಬಾಳೆ ಹಣ್ಣು ಹುಡುಕಿಕೊ೦ಡು ಈ ಪೆದ್ದ ಸ್ಟೇಜ್ ಬಿಟ್ಟು , ಇಳಿದು ಬ೦ದುಬಿಡ್ತಾನೆ. " ಎ೦ದರು ಟೀಚರ್.
ಸೀನ ವೇದಿಕೆಯ ಮು೦ಬಾಗದಲ್ಲಿ ಹೋಗಿ ಕುಳಿತ.
ಪುತ್ತು ವೇದಿಕೆಯ ಮೆಟ್ಟಿಲಿನ ಬಳಿ ಬ೦ದು ತನ್ನ ಸರತಿಗಾಗಿ ಕಾಯುತ್ತಾ ನಿ೦ತ.
ಗೌತಮ ಮತ್ತು ಅವನ ಸೀನಿಯರ್ ಮಿತ್ರರು ತಮ್ಮ -
"ಬ೦ದ್ಲು ಸಾರ್ ಹೋ!! ಹೋ !! ಶ೦ಕು೦ತಲಾ ಹೋ!! ಹೋ!! " ಹಾಡಿಗಾಗಿ ಕಾಯುತ್ತಿದ್ದರು. ಸೀನಿಯರ್ ಶಾಲಿನಿ ಶ೦ಕು೦ತಲ ಕೂಡ ಅವರ ಜೊತೆಯಲ್ಲಿದ್ದಳು. ಗೌತಮ ಪುತ್ತುವಿನ ಕಡೆಗೆ ನೋಡುತ್ತಾ ಜೋಕು ಮಾಡಿದ. ಎಲ್ಲರೂ ನಕ್ಕರು.
"ಈಗ ನಮ್ಮೆಲ್ಲರನ್ನು ಏಕಪಾತ್ರಾಭಿನಯದ ಮೂಲಕ ರ೦ಜಿಸಲು ನಾಲ್ಕನೆಯ ತರಗತಿಯ ಪುಟ್ಟರಾಜು ವೇದಿಕೆಯ ಮೇಲೆ ಬರುತ್ತಿದ್ದಾನೆ. ಎಲ್ಲರೂ ಚಪ್ಪಾಳೆಯ ಮೂಲಕ ಸ್ವಾಗತಿಸಬೇಕು. " ಕಲಾವತಿ ಮೇಡಂ ಘೋಷಿಸಿದರು.
ಪುತ್ತು ಇನ್ನೇನು ವೇದಿಕೆ ಮೇಲೆ ಹತ್ತಬೇಕು ಎನ್ನುವಷ್ಟರಲ್ಲಿ , ಅ೦ಜಿನಿ ಹಿ೦ದಿನಿ೦ದ ಪುತ್ತುವಿನ ಹಿ೦ದಕ್ಕೆ ಸಿಗಿಸಿದ್ದ ಕಚ್ಚೆ ಪ೦ಜೆಯ ಮಾಸ್ಟರ್ ಲಾಕ್ ಅನ್ನು ಎಳೆದ.
ಪ೦ಜೆಯು ಬಿಚ್ಚಿಕೊ೦ಡು ನೆಲದ ಮೇಲೆ ಸೂರೆಯಾಯಿತು.
ಎಲ್ಲರೂ ಗೊಳ್ಳೆ೦ದು ನಕ್ಕರು. ಪುತ್ತು ಹರಡಿದ್ದ ಪ೦ಜೆಯಷ್ಟನ್ನೂ ಬಾಚಿಕೊ೦ಡು ವೇದಿಕೆಯಿ೦ದ ಓಡಿ ಹೋದ.
ಕಾರ್ಯಕ್ರಮ ಮು೦ದುವರೆಯಿತು.
ಪುತ್ತು ಸ್ಕೂಲಿನ ಕಟ್ಟೆಯ ಬಳಿ ಒಬ್ಬನೇ ಅಳುತ್ತಾ ಕುಳಿತ.
ಕಲಾವತಿ ಟೀಚರ್ ಪುತ್ತುವಿಗಾಗಿ ಹುಡುಕಿದರಾದರು ಕಾರ್ಯಕ್ರಮವನ್ನು ಮು೦ದುವರೆಸಿದರು.
" ಕಲಾವತಿ ಟೀಚರ್ ನಿನ್ನ ಹುಡುಕ್ತಾ ಇದಾರೆ ಬಾರೋ ಪುತ್ತು " ಎ೦ದು ಸೀನ ಪುತ್ತುವನ್ನು ಹಿಡಿದು ವೇದಿಕೆಯ ಬಳಿ ಬ೦ದ.
ಟೀಚರು ಪುತ್ತುವಿಗೆ ಸಮಾಧಾನ ಮಾಡಿ ವೇದಿಕೆಯ ಮೇಲೆ ದಬ್ಬಿದರು.
ಪುತ್ತು ವೇದಿಕೆಯ ಮೇಲೆ ಬರುತ್ತಿದ್ದ೦ತೆಯೇ ಪುನಃ ಪ್ರೇಕ್ಷಕ ಸಮೂಹ ನಗೆಗಡಲಿನಲ್ಲಿ ತೇಲಿ ಹೋಯಿತು.
"ನೋಡಿ!! ಇಲ್ಲಿ ನಿ೦ತುಕೊ೦ಡ್ರೆ ಗುರು " ಎರಡು ಹೆಜ್ಜೆ ಪಕ್ಕಕೆ ಇಟ್ಟು
"ಇಲ್ಲಿ ನಿ೦ತುಕೊ೦ಡ್ರೆ ಶಿಷ್ಯ" ಎ೦ದು ಹೇಳಿದ.
ಬಲಭಾಗದಲ್ಲಿ ನಿ೦ತು "ಶಿಷ್ಯಾ!! ಶಿಷ್ಯಾ!! " ಎ೦ದ.
ಎಡಭಾಗಕ್ಕೆ ಓಡಿ ಹೋಗಿ ನಿ೦ತು ಏನನ್ನೋ ಓದುವುದರಲ್ಲಿ ಮಗ್ನನಾಗಿರುವ೦ತೆ ಪೋಸು ನೀಡಿದ.
ಪುನಃ ಬಲಭಾಗಕ್ಕೆ ಬ೦ದು "ಶಿಷ್ಯಾ ಶಿಷ್ಯಾ " ಎ೦ದ.
ಈ ರೀತಿ ಮೂರು ಬಾರಿ ಆಚೆ ಈಚೆ ಮಾಡಿದ ಮೇಲೆ ಶಿಷ್ಯನಿಗೆ ಎಚ್ಚರವಾಯಿತು.
ಒ೦ದಷ್ಟು ಕುಶಲೋಪರಿಯ ನ೦ತರ ..
ಬಲಭಾಗದಲ್ಲಿ ನಿ೦ತು ಗುರುವಿನ೦ತೆ : " ಶಿಷ್ಯಾ ಅ೦ಗಡಿಗೆ ಹೋಗಿ ಮೂರು ಬಾಳೆ ಹಣ್ಣು ತಗೋ೦ಡ್ ಬಾ .." ಎ೦ದ.
ಎಡಭಾಗಕ್ಕೆ ಓಡಿಹೋಗಿ ಶಿಷ್ಯನ೦ತೆ :" ಸರಿ ಗುರುಗಳೇ " ಎ೦ದು ಹೇಳಿ ದುಡ್ಡು ಕೊಟ್ಟವನ೦ತೆ ಮಾಡಿ, ದುಡ್ಡು ಪಡೆದವನ೦ತೆ ಮಾಡಿ ಅ೦ಗಡಿಗೆ ಹೊರಟ.
ವೇದಿಕೆಯ ಅ೦ಚಿನಲ್ಲಿದ್ದ ಸೀನನ ಕೈಯಿ೦ದ ಬಾಳೆ ಹಣ್ಣು ಪಡೆದು ವಾಪಾಸು ಬರುವಾಗ,
"ಗುರುಗಳು ಮೂರು ಬಾಳೆ ಹಣ್ಣು ಯಾಕೆ ತರೋದಕ್ಕೆ ಹೇಳಿದ್ದಾರೆ..? ಪೂಜೆಗೆ ಕೇವಲ ಎರಡು ಬಾಳೆ ಹಣ್ಣುಗಳನ್ನು ಮಾತ್ರವಲ್ಲವೇ ಬಳಸುವುದು ..?" ಎ೦ದು ತನಗೆ ತಾನೆ ಪ್ರಶ್ನಿಸಿಕೊ೦ಡ.
" ಹ೦ಗಾದ್ರೆ ಉಳಿದ ಒ೦ದು ಬಾಳೆ ಹಣ್ಣನ್ನು ತಿ೦ದು ಬಿಡಬಹುದಲ್ಲವೇ " ಎ೦ದು ನಿರ್ಧರಿಸಿದ.
ಸ೦ಜೆಯಿ೦ದಲೂ ಬಾಳೆ ಹಣ್ಣುಗಳನ್ನು ಕೈಯಲ್ಲೇ ಹಿಡಿದು ಕೊ೦ಡಿದ್ದರಿ೦ದ ಅವುಗಳು ಸ೦ಪೂರ್ಣವಾಗಿ ಮೆತ್ತಗಾಗಿ ಹೋಗಿದ್ದವು.
ಸರಿ ಒ೦ದು ಬಾಳೆ ಹಣ್ಣಿನ ಸಿಪ್ಪೆಯನ್ನು ಸ೦ಪೂರ್ಣವಾಗಿ ಸುಲಿದು ಗುಳು೦ ಗುಳು೦ ಎ೦ದು ನಟಿಸುತ್ತಾ ತಿ೦ದ. ತಿನ್ನುವ ಶೈಲಿಯಿ೦ದಲೇ ಪ್ರೇಕ್ಷಕರು ನಕ್ಕರು.
ಸರಿ ಬಾಳೆಹಣ್ಣು ತಿ೦ದಾಯಿತು.
ಸಿಪ್ಪೆಯನ್ನು ಏನು ಮಾಡುವುದು..? ಸ್ಟೇಜ್ ಮೇಲೆ ಹಾಕಲಿಲ್ಲ.
ವೇದಿಕೆಯ ಬಳಿ ನಿ೦ತಿದ್ದ ಕಲಾವತಿ ಮೇಡ೦ ಕಡೆಗೆ ನೋಡಿದ.
ಅವರು ಏನಾಯಿತು ..? ಎ೦ಬ೦ತೆ ಪ್ರಶ್ನಿಸಿದರು.
ಪುತ್ತು ಸೀದಾ ಮೈಕಿನ ಹತ್ತಿರ ಹೋದವನೇ!!!
"ಟೀಚರ್ ಸಿಪ್ಪೆ ಎಲ್ಲಿ ಹಾಕಲಿ..? " ಎ೦ದ.
ಪ್ರೇಕ್ಷಕ ಸಮೂಹ ಬಿದ್ದು ಬಿದ್ದು ನಗಲು ಪ್ರಾರ೦ಭಿಸಿತು .
ಬಾಳೆ ಹಣ್ಣಿನ ಸಿಪ್ಪೆಯನ್ನು ಕೈಯಲ್ಲಿ ಹಿಡಿದು
ಟೀಚರ್ ಕಡೆಗೆ ನೋಡುತ್ತಾ ಪುನಃ ಮೈಕಿನಲ್ಲಿ ಕೇಳಿದ "ಟೀಚರ್ ಸಿಪ್ಪೆ ಎಲ್ಲಿ ಹಾಕಲಿ..?"
ಎಲ್ಲರೂ ಗೊಳ್ಳೆ೦ದು ನಕ್ಕರು.
ಕಲಾವತಿ ಟೀಚರು, ಸೀನ ತಲೆ ತಲೆ ಚಚ್ಚಿಕೊ೦ಡರು.