ಕನಸೆಂಬ ಹುಚ್ಚು ಕುದುರೆಯನೇರಿ ಸವಾರಿ ಮಾಡುತ್ತಾ…!

ಕನಸೆಂಬ ಹುಚ್ಚು ಕುದುರೆಯನೇರಿ ಸವಾರಿ ಮಾಡುತ್ತಾ…!

ಒಂದು ವೇಳೆ ಏನಾದರು ಪವಾಡ ನಡೆದು ನಾನು ಕರ್ನಾಟಕದ ಮುಖ್ಯಮಂತ್ರಿಯಾದರೆ… 

ಒಂದೇ ವರ್ಷದಲ್ಲಿ ರಾಜ್ಯದ ರಸ್ತೆಗಳಲ್ಲಿ ಈಗ ಆಗುತ್ತಿರುವ ಅಪಘಾತಗಳಲ್ಲಿ ಶೇಕಡ 70% ರಷ್ಟು ತಡೆಯಬಲ್ಲೆ. ಎರಡೇ ವರ್ಷದಲ್ಲಿ ಈಗ ಹಣಕ್ಕಾಗಿ ನಡೆಯುತ್ತಿರುವ ಕೊಲೆ ದರೋಡೆ ಕಳ್ಳತನದಲ್ಲಿ ಶೇಕಡ 60% ರಷ್ಟು ನಿಯಂತ್ರಿಸಬಲ್ಲೆ. ಎರಡೇ ವರ್ಷದಲ್ಲಿ ಮಹಿಳೆಯರ ಮೇಲೆ ಈಗ ಆಗುತ್ತಿರುವ ನಿಜವಾದ ( ಕೆಲವೊಮ್ಮೆ ದ್ವೇಷದಿಂದ ಸುಳ್ಳು ಇರುತ್ತದೆ.) ಲೈಂಗಿಕ ದೌರ್ಜನ್ಯಗಳಲ್ಲಿ ಶೇಕಡ 50% ಇಲ್ಲವಾಗಿಸಬಲ್ಲೆ. ಮೂರು ವರ್ಷಗಳಲ್ಲಿ ರೈತರು - ಮಹಿಳೆಯರು - ಯುವ ಪ್ರೇಮಿಗಳು - ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣವನ್ನು ಶೇಕಡ ‌70% ರಷ್ಟು ನಿಗ್ರಹಿಸಬಲ್ಲೆ.( ಮಾನಸಿಕ ರೋಗಿಗಳನ್ನು ಹೊರತುಪಡಿಸಿ ) ಎರಡು ವರ್ಷದಲ್ಲಿ ಈಗಿನ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಶೇಕಡ 90% ರಷ್ಟು ಇಲ್ಲವಾಗಿಸಬಲ್ಲೆ. ನಾಲ್ಕೇ ವರ್ಷದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಇಂದಿಗಿಂತ ಶೇಕಡ 75% ರಷ್ಟು ಹೆಚ್ವಿಸಬಲ್ಲೆ. ಕೇವಲ ಅಂಕಗಳಲ್ಲಿ ಮಾತ್ರವಲ್ಲದೆ ಕಲೆ ಕ್ರೀಡೆ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳನ್ನು ಒಳಗೊಂಡ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ಏರಿಸಬಲ್ಲೆ. ಎರಡೇ ವರ್ಷಗಳಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಈಗಿನ ಆಹಾರ ವ್ಯರ್ಥವಾಗುವ ಅಂಶಗಳನ್ನು ವಾಸ್ತವ ನೆಲದಲ್ಲಿ ಗುರುತಿಸಿ ಶೇಕಡ 60% ತಡೆಯಬಲ್ಲೆ.

ನಾಲ್ಕೇ ವರ್ಷಗಳಲ್ಲಿ ಕೃಷಿ ಮಾರುಕಟ್ಟೆಯನ್ನು ಕನಿಷ್ಠ ಈಗಿನ ಹಾಲು ಉತ್ಪಾದಕರ ಸಹಕಾರ ಸಂಘದಂತೆ ರೂಪಿಸಿ ಪ್ರತಿ ಬೆಳೆಗೂ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಮತ್ತು ಇಡೀ ರಾಜ್ಯದ ಎಲ್ಲಾ ಕೃಷಿ ಭೂ ವಲಯವನ್ನು ಒಂದೇ ಸೂರಿನಡಿ ತಂದು ಎಲ್ಲಾ ಉತ್ಪಾದನೆಯ ಮೇಲೆ ನಿಯಂತ್ರಣ ಸಾಧಿಸಿ ಬೇಡಿಕೆ ಮತ್ತು ಪೂರೈಕೆಯನ್ನು ಇಂದಿಗಿಂತ ಶೇಕಡ 70% ರಷ್ಟು ಉತ್ತಮ ವ್ಯವಸ್ಥೆ ರೂಪಿಸಬಲ್ಲೆ.

5 ವರ್ಷಗಳಲ್ಲಿ ರಾಜ್ಯದ ಪ್ರತಿ ಹೋಬಳಿಗಳಲ್ಲಿ ಕನಿಷ್ಠ 15-30 ಎಕರೆ ಅಥವಾ ಅದಕ್ಕಿಂತ ವಿಸ್ತಾರವಾದ ಪ್ರದೇಶದಲ್ಲಿ ಒಂದೊಂದು ಸ್ವಚ್ಛ ಮತ್ತು ವೈಜ್ಞಾನಿಕ ಕೆರೆ ನಿರ್ಮಿಸಬಲ್ಲೆ. 5 ವರ್ಷಗಳಲ್ಲಿ ಅರಣ್ಯ ಪ್ರದೇಶವನ್ನು ಒಟ್ಟು ವಿಸ್ತೀರ್ಣದ ಶೇಕಡ 55% ರಷ್ಟು ಹೆಚ್ಚಿಸಬಲ್ಲೆ, ಮತ್ತು ಅರಣ್ಯ ಉತ್ಪಾದನೆಯಿಂದಲೇ ಸಾವಿರಾರು ಕೋಟಿ ಲಾಭ ಬರುವಂತೆ ಮಾಡಬಲ್ಲೆ. 3 ವರ್ಷದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವೇತನ ಕ್ರಮವನ್ನು ಸಂಪೂರ್ಣ ಬದಲಾಯಿಸಿ ಶ್ರಮಕ್ಕೆ ತಕ್ಕ ವೇತನ ಎಂಬ ವೈಜ್ಞಾನಿಕ ಆಧಾರದ ಕ್ರಮ ಅನುಸರಿಸಿ ವಿಶ್ವದಲ್ಲೇ ಯಾರೂ ಊಹಿಸದ ಹೊಸ ಕ್ರಮ ಕೈಗೊಳ್ಳಬಲ್ಲೆ. ಎರಡೇ ವರ್ಷಗಳಲ್ಲಿ ಆಹಾರ ಕಲಬೆರಕೆಯನ್ನು ಅತಿ ಹೆಚ್ವಿನ ಪ್ರಾಮುಖ್ಯತೆ ನೀಡಿ ಶೇಕಡ 90% ರಷ್ಟು ನಿಯಂತ್ರಿಸಬಲ್ಲೆ.

3 ವರ್ಷದಲ್ಲಿ ಭ್ರಷ್ಟಾಚಾರವನ್ನು ಶೇಕಡ 50% ರಷ್ಟು ಮತ್ತು 5 ವರ್ಷಗಳಲ್ಲಿ ಶೇಕಡ 75% ರಷ್ಟು ತೊಡೆದುಹಾಕಬಲ್ಲೆ. 4 ವರ್ಷಗಳಲ್ಲಿ ಈಗಿನ ನಿರುದ್ಯೋಗಿಗಳ ಸಂಖ್ಯೆಯನ್ನು 50% ರಷ್ಟು ಕಡಿಮೆ ಮಾಡಬಲ್ಲೆ ಮತ್ತು ಉಳಿದವರೂ ಕನಿಷ್ಠ ಸೋಮಾರಿಗಳಾಗದೆ ಏನಾದರೂ ಮಾಡುತ್ತಿರುವಂತೆ ಕ್ರಮ ಕೈಗೊಳ್ಳಬಲ್ಲೆ. 4 ವರ್ಷದಲ್ಲಿ ಜೈಲನ್ನು ಸಂಪೂರ್ಣ ವಿಭಾಗಿಸಿ ಹುಟ್ಟಾ ಕ್ರಿಮಿನಲ್ ಗಳು ಮತ್ತು ಸಾಮಾನ್ಯ ಅಪರಾಧಗಳ ವಿಭಾಗವಾಗಿ ಮಾಡಿ ಅಲ್ಲಿಂದಲೂ ಸುಧಾರಣೆ ಮತ್ತು ಆದಾಯ ಬರುವಂತೆ ಮಾಡಬಲ್ಲೆ. ಭ್ರಷ್ಟರಿಗೆ ಗೃಹ ಬಂಧನ ಅಥವಾ ಕಚೇರಿ ಬಂಧನದ ಶಿಕ್ಷೆ ನೀಡಿ ಹೆಚ್ಚು ಕೆಲಸ ಮಾಡುವ ಮತ್ತು ಕಡಿಮೆ ಸಂಬಳ ನೀಡುವ ಶಿಕ್ಷೆಯನ್ನು ನೀಡಲು ಪ್ರಯತ್ನಿಸುತ್ತೇನೆ. 5 ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ನಂಬರ್ 1 ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವಂತಾಗಲು ಆಹಾರದಿಂದ ಪದಕದವರೆಗೆ ಎಡೆಬಿಡದೆ ಕ್ರಮ ಕೈಗೊಳ್ಳಬಲ್ಲೆ.

5 ವರ್ಷಗಳಲ್ಲಿ ನಮ್ಮ ಜಾತಿ ಇದು ಎಂದು ಹೆಸರೇಳಲೂ ನಾಚಿಕೆ ಆಗುವಂತ ಸಾಮಾಜಿಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಜನರನ್ನು ಮಾನಸಿಕವಾಗಿ ಸಿದ್ದಗೊಳಿಸಬಲ್ಲೆ. 4 ವರ್ಷಗಳಲ್ಲಿ ಶಿಕ್ಷಣ ಆರೋಗ್ಯ ಸಂಪರ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ಇರುವಂತೆ ನೋಡಿಕೊಂಡು ಆ ಮುಖಾಂತರವೇ ಇತರ ಕ್ರಮಗಳು ಸುಗಮವಾಗುವಂತೆ ಮಾಡಬಲ್ಲೆ. 3 ವರ್ಷದಲ್ಲಿ  ಹೊಟ್ಟೆಪಾಡಿಗಾಗಿ ಮಾಡುವ ವೇಶ್ಯಾವಾಟಿಕೆಯನ್ನು ಶೇಕಡ 85% ರಷ್ಟು ತೊಡೆದುಹಾಕಬಲ್ಲೆ.

5 ವರ್ಷಗಳಲ್ಲಿ ಕುಡುಕರ ಸಂಖ್ಯೆಯನ್ನು ಈಗಿನ ಅಂಕಿಅಂಶಗಳಿಗಿಂತ  ಶೇಕಡಾ 60 ರಷ್ಟು ಕಡಿಮೆ ಮಾಡಬಲ್ಲೆ. 5 ವರ್ಷಗಳಲ್ಲಿ ಊಟ ಬಟ್ಟೆ ಮತ್ತು ಮಲಗುವ ವ್ಯವಸ್ಥೆಗಾಗಿ ಯಾರೂ ಪರದಾಡದಂತೆ ಶೇಕಡ 90% ರಷ್ಟು ಯಶಸ್ಸು ಕಾಣಬಲ್ಲೆ. 5 ವರ್ಷಗಳಲ್ಲಿ ರಾಜ್ಯ ವ್ಯಾಪ್ತಿಯ ಎಲ್ಲಾ ಜಾತಿ ಸಂಘಟನೆಗಳನ್ನು ನಿಷೇಧಿಸಿ ಅವುಗಳನ್ನೇ ಕ್ರೀಡಾ ಸಾಂಸ್ಕೃತಿಕ ಸಾಮಾಜಿಕ ಸೇವಾ ಸಂಸ್ಥೆಗಳಾಗಿ ಮಾರ್ಪಡಿಸಿ ಅವರಿಂದಲೇ ಅಭಿವೃದ್ಧಿಯ ಕೆಲಸ ಮಾಡಿಸಬಲ್ಲೆ. 3 ವರ್ಷಗಳಲ್ಲಿ ಈಗಿನ ಪೋಲಿಸ್ ವ್ಯವಸ್ಥೆಯನ್ನೇ ವಿಭಾಗಿಸಿ ಅಪರಾಧ ನಿಯಂತ್ರಣ ಮತ್ತು ಸಾಮಾಜಿಕ ಸುಧಾರಣೆಯ ಹೊಸ ರೂಪ ಕೊಡಬಲ್ಲೆ.

5 ವರ್ಷಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಇಡೀ ಜನ ಸಮುದಾಯ ಅಚ್ಚರಿ ಪಡುವಂತೆ ತೀವ್ರ ಸುಧಾರಣೆ ತರಬಲ್ಲೆ. 3 ವರ್ಷಗಳಲ್ಲಿ ಕಂಟ್ರಾಕ್ಟರ್ ಎಂಬ ವೃತ್ತಿಯನ್ನು ಕನಿಷ್ಠ ಈಗಿನ ಪರಿಸ್ಥಿತಿಗಿಂತ ಶೇಕಡಾ 60 ರಷ್ಟು ದಕ್ಷ ಮತ್ತು ಪ್ರಾಮಾಣಿಕರಾಗುವಂತೆ ಮಾಡಬಲ್ಲೆ. 5 ವರ್ಷಗಳಲ್ಲಿ ಚುನಾವಣಾ ವಿಧಾನದಲ್ಲಿ ಜನರು ಜಾತಿ ಹಣಕ್ಕಿಂತ ಅಭ್ಯರ್ಥಿಗಳ ಹೃದಯವಂತಿಕೆ ಮೇಲೆ ಮುಕ್ತವಾಗಿ ಮತ ನೀಡುವ ಮಾನಸಿಕ ಸ್ಥಿತಿ ನಿರ್ಮಿಸಲು ಪ್ರಯತ್ನಿಸುತ್ತೇನೆ.

ಒಟ್ಟಿನಲ್ಲಿ 5 ವರ್ಷಗಳಲ್ಲಿ  ಈಗಿನ ಜೀವನ ಮಟ್ಟಕ್ಕಿಂತ ಉತ್ತಮ ರೀತಿಯ ಬದುಕಿನ ನೆಮ್ಮದಿ ರೂಪಿಸಬಲ್ಲೆ.  ಹಣಕ್ಕಿಂತ ಸಾಧನೆಗೆ ಹೆಚ್ಚಾಗಿ ಮಹತ್ವ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಬಲ್ಲೆ. ದಿನದ 24 ಗಂಟೆಗಳಲ್ಲಿ 8 ಗಂಟೆಗಳ ವಿಶ್ರಾಂತ ಸಮಯ ಹೊರತುಪಡಿಸಿದರೆ ಉಳಿದ 16 ಗಂಟೆ ಸರ್ಕಾರಿ ಟಿವಿ ಮುಖಾಂತರ ಎಲ್ಲಾ ಸಾರ್ವಜನಿಕ ಕೆಲಸಗಳನ್ನೂ Live ಆಗಿ ಕಾರ್ಯ ನಿರ್ವಹಿಸುತ್ತೇನೆ. ವೈಯಕ್ತಿಕ ಬದುಕಿನ ಶುಧ್ಧತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ. ಇನ್ನೂ ಇನ್ನೂ ಇನ್ನೂ ಹಲವಾರು ಕನಸುಗಳ ತೊಳಲಾಟದಲ್ಲಿ ನನಸು ಮಾಡುವ ಧ್ಯೇಯದೊಂದಿಗೆ… ಕನಸುಗಳನ್ನು ನಿಮ್ಮೆಲ್ಲರ ಮನಸ್ಸುಗಳಲ್ಲಿ ಬಿತ್ತುತ್ತಾ...ಕನಸೆಂಬ ಹುಚ್ಚು ಕುದುರೆಯನ್ನೇರಿ ಸವಾರಿ ಮಾಡುತ್ತಾ.....

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ