ಕನಸ ಫಸಲು...

ಕನಸ ಫಸಲು...

ಕವನ

ಕನಸ ಉಳುಮೆಗೆ ಮನಸು ಹದ ಭೂಮಿ
ಬತ್ತದ ನೀರಾಸೆ, ವಿಕ್ಷಿಪ್ತ ಭಾವದ ಗೊಬ್ಬರ
ಮುಗಿಯದು ಉತ್ತಿ ಬಿತ್ತುವ ವ್ಯವಸಾಯ
ಸದಾ ಮೈ ತುಂಬಿ ಬರುವ ಫಸಲು

ಹೂ ಮೇಘ, ಹಸಿರೆಲೆ ಗಾಳಿ
ನಕ್ಷತ್ರ ನದಿ, ಕಣ್ಣ ನೇಗಿಲಲ್ಲಿ ಬಿತ್ತುತ್ತಿದೆ
ಮೌನಶ್ರಮ, ಸೂಕ್ಷ್ಮ ಕಸೂತಿ
ಮತ್ತದೆ ಸುಗ್ಗಿಗಾಗಿ ಕಾತರ

ಬಂದಿದೆ ಕನಸ ಪಸಲು ಕಟಾವಿಗೆ
ಹಂಚಲಾರೆನು, ನಾನೊಬ್ಬನೇ ಬೆವರರಿಸುವೆ
ಒಳಗೊಳಗೆ ಏನೋ ಸುಗ್ಗಿ, ಮನಸು ಹಿಗ್ಗಿ
ಮೊಗ್ಗಾಗುವುದು ಹೂ ಕನಸು ಮತ್ತೊಮ್ಮೆ

ದುಂಬಿಯ ಭಯವಿಲ್ಲ, ದೊಂಬಿಯ ದಾಳಿಯೂ ಇಲ್ಲ
ಮತ್ತದೇ ಹದದ ಹವಮಾನ, ಬಯಕೆ ಬಿತ್ತನೆ ಬೀಜ
ಮಾರಲಾರೆ, ಕೊಳ್ಳಲಾರೆ ಜೀವನೋತ್ಸಾಹದ ಫಸಲು
ಮಲ್ಲಿಗೆ ಬಾರದ, ಕಡು ಕಹಿಯ, ರಕ್ತದ, ಮಜ್ಜಿಗೆ ಹುಳಿ ರುಚಿಯ ಕನಸುಗಳು.